ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಾರ್ಕ್, ರಾಬರ್ಟ್ ಎಜ್ರಾ
ಪಾರ್ಕ್, ರಾಬರ್ಟ್ ಎಜ್ರಾ (1864-1944). ವರ್ಣಮಯ ವ್ಯಕ್ರಿತ್ವದ ಪ್ರಭಾವಶಾಲಿ ಸಮಾಜಶಾಸ್ತ್ರಜ್ಞ. ಅಮೆರಿಕ ಸಂಯುಕ್ತ ಸಂಸ್ಥಾನದ ಪೆನ್ಸಿಲ್‍ವೆನಿಯ ರಾಜ್ಯದ ಯಶಸ್ವಿ ವ್ಯಾಪಾರಿಯೊಬ್ಬನ ಮಗನಾಗಿ ಹುಟ್ಟಿದರೂ ಸ್ವತಂತ್ರವಾಗಿ ಬಾಳಿದ. ಪತ್ರಿಕೆಯ ವರದಿಗಾರನೂ, ಹೋರಾಟಗಾರನೊಬ್ಬನ ಕಾರ್ಯದರ್ಶಿಯೂ ಶಿಕ್ಷಕನೂ ಸಂಶೋಧಕನೂ ಆಗಿ ದುಡಿದ. ಸಮಾಜ ಸುಧಾರಣೆಯಲ್ಲಿ ನಂಬಿಕೆ ಇರಿಸಿದ್ದನಾದರೂ ಕನಸುಗಾರನಾಗಿರಲಿಲ್ಲ. ಸಮಾಜಶಾಸ್ತ್ರ ಬೇರೆ, ಸಮಾಜ ಸುಧಾರಣೆ ಬೇರೆ; ಆದರೆ ಸುಧಾರಕನಿಗೆ ಶಾಸ್ತ್ರದ ಯುಕ್ತ ಜ್ಞಾನ ಬೇಕೆಂದು ಸಾರಿದ. ತನ್ನ ಐವತ್ತನೇಯ ವಯಸ್ಸಿನಲ್ಲಿ ಗೌರವ ಪ್ರಾಧ್ಯಾಪಕನಾಗಿ ಚಿಕಾಗೊ ವಿಶ್ವವಿದ್ಯಾಲಯ ಸೇರಿ ಅಲ್ಲಿಯೇ ಪೂರ್ಣಾವಧಿಯ ಶಿಕ್ಷಕನಾಗಿ ಚಿಕಾಗೊ ಪಂಥವನ್ನು ಕಟ್ಟಿದ. ಹಲವಾರು ಮೇಧಾವಿ ಸಮಾಜಶಾಸ್ತ್ರಜ್ಞರನ್ನು ತರಬೇತುಗೊಳಿಸಿದ. ಪಾರ್ಕ್ ಬರೆದದ್ದು ಕಡಿಮೆ.
ಪಾರ್ಕನನ್ನು ಪೌರ ಸಮಾಜಶಾಸ್ತ್ರದ (ಅರ್ಬನ್ ಸೋಷಿಯಾಲಜಿ) ಜನಕನೆಂದು ಮನ್ನಿಸಲಾಗುತ್ತದೆ. ನಗರೀಕರಣ ನಾಗರಿಕತೆಯ ವಿಕಾಸ ಹಾಗೂ ಸಾಮಾಜಿಕ ಪರಿವರ್ತನೆಗೆ ಬುನಾದಿ ಎಂಬುದನ್ನು ಗ್ರಹಿಸದ ಆತ ನಗರ ಜೀವನ ಮತ್ತು ಅದರ ಸಮಸ್ಯೆಗಳ ಕಡೆಗೆ ಗಮನಹರಿಸಿದ. ಪತ್ರಿಕಾ ವರದಿಗಾರನಾಗಿ ಅವನಿಗೆ ವಿವಿಧ ಮುಖಗಳ - ಅದರಲ್ಲೂ ಅಪರಾಧಿ ಜಗತ್ತಿನ ಪರಿಚಯವಾಗಿತ್ತು. ನಿರಂತರ ವಿಶ್ವಪರ್ಯಟನೆ ಹಾಗೂ ಸತತವಾದ ಸಂಶೋಧನೆಗಳಿಂದ ಈ ಜ್ಞಾನ ಮತ್ತಷ್ಟು ಪಕ್ವವಾಯಿತು. ಮಾನವ ಸಮುದಾಯಗಳಲ್ಲಿಯ ಸ್ವಾಭಾವಿಕ ವಲಯಗಳನ್ನು ಗುರುತಿಸುವುದು ಸಾಧ್ಯವಾಯಿತು. ಹಾಗೆಯೇ ಪ್ರಾಣಿ ಪರಿಸರದಲ್ಲಿರುವಂತೆ ಸಮುದಾಯಗಳಲ್ಲಿಯೂ ಸ್ಪರ್ಧೆ, ಪ್ರಾಬಲ್ಯ, ಅನುಕ್ರಮಣಗಳನ್ನು ತೋರಿಸುವಂತಾಯಿತು. ದಿ ಸಿಟಿ ಎಂಬ ಗ್ರಂಥವೂ ಇವನ ಅನೇಕ ಲೇಖನಗಳೂ ಈ ದಿಸೆಯಲ್ಲಿಟ್ಟ ಪ್ರಥಮ ದಿಟ್ಟ ಹೆಜ್ಜೆಗಳು.
ಪಾರ್ಕನ ಪ್ರಕಾರ ಸಮಾಜಶಾಸ್ತ್ರ ಮುಖ್ಯವಾಗಿ ಸಾಮಾಜಿಕ ಪ್ರಕ್ರಿಯೆಗಳ ಅಧ್ಯಯನ. ಅವುಗಳಲ್ಲಿ, ಸ್ಪರ್ಧೆ, ಸಂಘರ್ಷ, ಸಂಯೋಜನೆ, ಸ್ವಾಂಗೀಕರಣ - ಇವು ಮಹತ್ವದವು. ಸಾಮಾಜಿಕ ನಿಯಂತ್ರಣ ಸಮಾಜದ ಕೇಂದ್ರ ಸಮಸ್ಯೆ. ಹಾಗೆ ನೋಡಿದರೆ ಸಮಾಜವೆಂಬುದು ಒಂದು ನಿಯಂತ್ರಣ ವ್ಯವಸ್ಥೆಯಲ್ಲದೇ ಬೇರೇನೂ ಆಲ್ಲ. ಮಾರ್ಜಿನಲ್ ಮ್ಯಾನ್ (ಅಂಚಿನ ಮನುಷ್ಯ) ಎಂಬುದು ಅವನು ಬಳಕೆಗೆ ತಂದ ಇನ್ನೊಂದು ಪರಿಪಕ್ವನೆ. ಆಂಥ ಜನ ಎಲ್ಲಿಯೂ ಸಲ್ಲದವರು, ಹೆಚ್ಚಾಗಿ ವಲಸೆ ಬಂದವರು, ಮಿಶ್ರ ಜನಾಂಗಕ್ಕೆ ಸೇರಿದವರು. ಸಾಂಸ್ಕøತಿಕ ದ್ವಂದ್ವಕ್ಕೆ ಒಳಗಾದವರು ಮೂಲ ಜನಾಂಗದಿಂದಲೂ ಹೊಸಬರಿಂದಲೂ ತಿರಸ್ಕøತರಾಗುತ್ತಾರೆ ಅಥವಾ ಉಪೇಕ್ಷೆಗೆ ಒಳಗಾಗುತ್ತಾರೆ. ನಗರದಲ್ಲಿ ಆಂಥವರ ಸಂಖ್ಯೆ ಹೆಚ್ಚು. ಜನಾಂಗೀಯ ಸಂಬಂಧಗಳು, ಸಾಮಾಜಿಕ ಅಂತರ, ವ್ಯಕ್ತಿತ್ವದ ಬೆಳವಣಿಗೆ ಇತ್ಯಾದಿ. ಅನೇಕ ವಿಷಯಗಳ ಬಗ್ಗೆ ಶಾಸ್ತ್ರೀಯ ಅಧ್ಯಯನಕ್ಕೆ ನಾಂದಿಹಾಕಿ ಆ ಶಾಸ್ತ್ರವನ್ನು ಈತ ತತ್ವಶಾಸ್ತ್ರದ ಸೆರೆಯಿಂದ ಬಿಡಿಸಿದ. (ಎಚ್.ಎ.ಎನ್.)