ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಾರ್ಸಿ ಕಲೆ
ಪಾರ್ಸಿ ಕಲೆ - ಪಶ್ಚಿಮ ಏಷ್ಯಾದಲ್ಲಿ 6ನೆಯ ಶತಮಾನದ ಮಧ್ಯಭಾಗದಲ್ಲಿ ಅಸೀರಿಯ ಕಾಲ್ಡೀಯ ಸಾಮ್ರಾಜ್ಯಗಳು ಪತನವಾದ ಅನಂತರ ಈಗಿನ ಇರಾನಿನ ಪರ್ವತ ಪ್ರದೇಶದಲ್ಲಿ ಪಾರಸಿ ಸಾಮ್ರಾಜ್ಯದ ಉದಯವಾಯಿತು. ಕ್ರಿ. ಪೂ. 331 ರಲ್ಲಿ ಅಲೆಕ್ಸಾಂಡರ್ ಮಹಾಶಯನ ದಾಳಿಯಿಂದ ಹಾಳಾಗುವವರೆಗೂ ಅದು ಏಷ್ಯದ ಅತ್ಯಂತ ಪ್ರಭಾವಶಾಲಿ ಸಾಮ್ರಾಜ್ಯವಾಗಿತ್ತು. ಆಗ ಅಭಿವೃದ್ಧಿ ಹೊಂದಿದ ಪಾರ್ಸಿ ಕಲೆಯ ಇತಿಹಾಸದ ಕೆಲವು ಕುರುಹುಗಳು ಮಾತ್ರ ಉಳಿದುಬಂದಿವೆ.
ವಾಸ್ತುಶಿಲ್ಪ; ಈ ಕ್ಷೇತ್ರದಲ್ಲಿ ಬಹಳ ಮುಖ್ಯವಾದ ಕಟ್ಟಡ ಪರ್ಸೆಪಲಿಸ್ ಅರಮನೆ. ಅಕೆಮನಿಡ್ ವಂಶದ ದರ್ಯಾವುಷ ಮತ್ತು ಕ್ಷಯರ್ಷರ (ಕ್ರಿ.ಪೂ.533-465) ಕಾಲದಲ್ಲಿ ನಿರ್ಮಿತವಾದ ಅರಮನೆ ವಿಶಾಲ ಜಗತಿಯ ಮೇಲಿನ ಮಂಟಪ ಮತ್ತು ಅನೇಕ ಕೋಣೆಗಳನ್ನೊಳಗೊಂಡಿದೆ. ಇಕ್ಕೆಲಗಳಲ್ಲೂ ಮಾನವ ಶಿರಗಳುಳ್ಳ ಬೃಹತ್ ನಂದಿಗಳ ವಿಗ್ರಹಗಳಿರುವ ಪ್ರಾಫಿಲಾನ್ ಪ್ರವೇಶ ಜಗತಿಗೊಯ್ಯುತ್ತದೆ. ಜಗತಿಯ ಇಕ್ಕೆಲಗಳಲ್ಲೂ ಸೋಪಾನ ಪಂಕ್ತಿಗಳಿವೆ. ಆ ಪ್ರದೇಶದಲ್ಲಿ ಶಿಲೆಗಳು ವಿಪುಲವಾಗಿರುವುದರಿಂದ ಕಟ್ಟಡದ ಜಗತಿ, ಸೋಪಾನ ಶ್ರೇಣಿ, ಹೆಬ್ಬಾಗಿಲು ಮತ್ತು ಸಭಾ ಮಂಟಪದ ಕಂಬಗಳನ್ನು ಉತ್ತಮ ರೀತಿಯ ಕಲ್ಲಿನಿಂದ ನಿರ್ಮಿಸಲಾಗಿದೆ. ಆದರೆ ಗೋಡೆಗಳಿಗೆ ಸುಟ್ಟ ಇಟ್ಟಿಗೆಗಳನ್ನೂ ಚಾವಣಿ ಮತ್ತು ಸಣ್ಣ ಕಂಬಗಳಿಗೆ ಮರವನ್ನೂ ಬಳಸಲಾಗಿದೆ. ಇಲ್ಲಿಯ ಕಂಬಗಳು ವಿಶಿಷ್ಟವಾದುವು. ಅಪಾದಾನ ಸಭಾಮಂಟಪದಲ್ಲಿ 40 ಅಡಿಗಳೆತ್ತರದ ಕೃಶವಾದ ಮತ್ತು ಅರೆಗೊಳವಿಯಾಕಾರದ ಗಾಡಿಗಳುಳ್ಳ ಸುಂದರವಾದ 36 ಕಂಬಗಳು ಚಾವಣಿಗೆ ಆಧಾರಗಳಾಗಿವೆ. ಕಂಬಗಳ ಬೋದಿಗೆಯಲ್ಲಿ ಪರಸ್ಪರ ಬೆನ್ನಿಗಂಟಿದಂತೆ ನಾಲ್ಕು ದಿಕ್ಕುಗಳಿಗು ಮುಖ ಮಾಡಿ ನಂದಿ, ಸಿಂಹ ಅಥವಾ ಹದ್ದುಗಳ ಮುಖಭಾಗಗಳನ್ನು ಜೋಡಿಸಲಾಗಿದೆ. ಆ ಪ್ರಾಣಿಗಳ ತಲೆಯ ಮಧ್ಯಭಾಗದಲ್ಲಿ ಕೂಡಿಸಿದ ಮರದ ದೂಲಗಳಿಗೆ ಪ್ರಾಯಶಃ ವಿವಿಧ ಬಣ್ಣ ಮತ್ತು ಚಿನ್ನದ ತಗಡಿನ ಅಲಂಕಾರವಿದ್ದಿರಬಹುದು; ಅಂತೆಯೇ ಗೋಡೆಗಳಿಗೂ ವಿವಿಧ ಬಣ್ಣದ ಅಥವಾ ಗಾಜಿನ ಲೇಪದ ಅಲಂಕಾರವಿದ್ದಿರಬಹುದು. ಅರಸ ತನ್ನ ಪರಿಚಾರಕ ವರ್ಗ, ಅಂಗರಕ್ಷಕದಳ, ಸಭಾಸದರು ಮತ್ತು ಸಾಮಂತ ರಾಜ್ಯದ ಪ್ರತಿನಿಧಿಗಳಿಂದ ಸುತ್ತುವರೆದವನಾಗಿ, ರಾಜ ಗಾಂಭೀರ್ಯ ಘನತೆಗಳಿಂದ ಪ್ರವೇಶಿಸಿದಾಗ ಸಭಾಮಂಟಪದ ಭವ್ಯತೆ ಅದ್ಭುತವಾಗಿದ್ದಿರಬಹುದು. ಈ ಅಲಂಕರಣ ಕಾರ್ಯದ ಬಹು ಅಂಶಗಳು ತತ್ಪೂರ್ವದ ಸಸೀರಿಯನದ-ಬ್ಯಾಬಿಲೋನಿಯನ್ ಕಲೆಯಿಂದ ಪ್ರಭಾವಿತವಾದಂತೆ ಕಂಡುಬಂದರೂ ಪಾರಸಿಕರು ಅವನ್ನು ತಮ್ಮ ವಾತಾವರಣದ ಆವಶ್ಯಕತೆಗಳಿಗೆ ಅಳವಡಿಸಿಕೊಂಡು ತಮ್ಮದಾಗಿಸಿಕೊಂಡು ಅವಕ್ಕೆ ಸ್ವತಂತ್ರ ವ್ಯಕ್ತಿತ್ವವನ್ನು ಕೊಟ್ಟಿದ್ದಾರೆ.
ಅನಂತರದ ಸಸೇನಿಯನ್ ಯುಗದಲ್ಲಿ ಪರ್ಷಿಯದ ವಾಸ್ತುಶಿಲ್ಪ ಹೊರಗಿನ ಪ್ರಭಾವಗಳನ್ನು ತನ್ನದಾಗಿಸಿಕೊಳ್ಳುವ ಸಾಮಥ್ರ್ಯವನ್ನು ಮತ್ತು ತನ್ನದೇ ಆದ ಅಂತಃಶಕ್ತಿಯನ್ನು ಪ್ರದರ್ಶಿಸುತ್ತದೆ. ಆ ಕಾಲದಲ್ಲಿ ಸಹ ಅರಮನೆ ವಾಸ್ತುಶಿಲ್ಪದ ಪ್ರಮುಖ ಪ್ರತಿನಿಧಿಯಾಗಿದೆ. ಕ್ಟೆಸಿಫಾನ್ ನಗರದ ಕ್ರಿ. ಶ. 6 ನೆಯ ಶತಮಾನದ ಅರಮನೆಯ ಭವ್ಯತೆ ಅದರ ಗೋಡೆಗಳ ಮೇಲಿದ್ದ ಸುಟ್ಟ ಮಣ್ಣಿನ ಫಲಕಗಳ ಅಲಂಕರಣ, ಮತ್ತು 6 ನೆಯ ಶತಮಾನದಲ್ಲಿ ಇಸ್ಲಾಮೀಯರು ಅದನ್ನು ಪಾಳುಗೆಡವಿದಾಗ ಅಲ್ಲಿತ್ತೆಂದು ಹೇಳಲಾದ ರತ್ನಗಂಬಳಿಗಳು ಮತ್ತು ಪೀಠೋಪಕರಣಗಳು- ಇವನ್ನು ಸ್ಮರಿಸಿದಾಗ ಆ ಅರಮನೆಯ ದಿವ್ಯ ವೈಭವ ಕಣ್ಣಿಗೆ ಕಟ್ಟುತ್ತದೆ. ಸಿಂಹಾಸನವಿರುವ ಕೋಣೆಯ ಚಾವಣಿಯ ತೂಗುಗುಮ್ಮಟದ ಔನತ್ಯ ಮಾನವನ ಭವ್ಯ ಕಲ್ಪನೆಗೆ ಸಾಕ್ಷಿಯಾಗಿದೆ. ಆ ಸಭಾಂಗಣದ ಮುಂಭಾಗದ ಅಡ್ಡಗೋಡೆಯನ್ನು ಅರಗಂಭ ಮತ್ತು ಕಮಾನು ವಿನ್ಯಾಸಗಳಿಂದ ಅಲಂಕರಿಸಲಾಗಿದೆ. ಅದರ ಅಂತಸ್ತುಗಳ ಜೋಡಣೆ ತುಂಬಾ ಆಕರ್ಷಣೀಯ.
ಮುಸ್ಲಿಮರ ಆಕ್ರಮಣದ ತರುವಾಯ (641). ಇಡೀ ಏಷ್ಯ ಖಂಡದಲ್ಲಿ ರೂಢಿಗೆ ಬಂದ ಇಸ್ಲಾಮಿ ವಾಸ್ತುಶಿಲ್ಪ ಶೈಲಿ ಇಲ್ಲಿಯೂ ಬಲಗೊಂಡಿತು. ಆದರೂ ಸಸೇನಿಯನ್ ಯುಗದ ಪ್ರಭಾವಗಳು ಉಳಿದು ಬಂದುವು. ಕಟ್ಟಡದ ಚಾವಣಿಗಳಲ್ಲಿ ಅರ್ಧ ಉರುಳೆಯಾಕಾರದ ಒಳಮಾಳಿಗೆಗಳು ಹೆಚ್ಚಾಗಿ ಬಳಕೆಯಲ್ಲಿದ್ದುವು. ಅನೇಕ ಮಸೀದಿಗಳ ಇಬ್ಬದಿಗಳಲ್ಲಿ ಅಥವಾ ನಾಲ್ಕು ಮೂಲೆಗಳಲ್ಲಿ ಕಿರುಗಂಬಗಳು (ಮಿನರೆಟ್ಟುಗಳು) ಇರುತ್ತಿದ್ದವು. ಎರಡು ಹಂತದ ಗುಮ್ಮಟಗಳು ಆ ಕಟ್ಟಡಗಳ ಮತ್ತೊಂದು ವಿಶಿಷ್ಟ ಲಕ್ಷಣ; ಹೊರಗುಮ್ಮಟವನ್ನು ಎತ್ತರವಾದ ಅಂಡದ ಮೇಲೆ ನಿಲ್ಲಿಸಲಾಗಿದೆ. ಆ ಕಟ್ಟಡಗಳ ಕಮಾನು ಚಾವಣಿ ಮತ್ತು ಗುಮ್ಮಟಗಳ ವಿನ್ಯಾಸ ಮತ್ತು ನಿರ್ಮಾಣ ತಂತ್ರಗಳು ಶಿಲ್ಪಿಗಳ ಸಾಹಸಿ ಚಮತ್ಕಾರದ ಉತ್ತಮ ನಿದರ್ಶನಗಳಾಗಿವೆ. ಆ ಶೈಲಿಯ ಅತ್ಯುತ್ತಮ ಕಟ್ಟಡಗಳು 16-17 ನೆಯ ಶತಮಾನಗಳಿಗೆ ಸೇರಿದುವು. 8ನೆಯ ಶತಮಾನದಲ್ಲಿ ಸೂಕ್ಷ್ಮವೆನ್ನಲಾದ ಮರದ ಕಟ್ಟಡಗಳು ರೂಢಿಗೆ ಬಂದುವು; ಅವುಗಳ ನವುರಾದ ಕಂಬಗಳು ತೊಡರಿಕೊಂಡಂತಿರುವ ಸೂರುಗಳು, ಅವುಗಳ ಮೇಲಿನ ಅದ್ಭುತ ಕೆತ್ತನೆ, ಚಿತ್ರಕೊರೆತ, ಕಟ್ಟಡಗಳ ಸುತ್ತಲಿದ್ದ ರಮ್ಯ ಉದ್ಯಾನವನಗಳು - ಇವೆಲ್ಲವೂ ಪಾರಸಿ ಜೀವನದ ಗಮನಾರ್ಹ ಅಂಶಗಳಾಗಿದ್ದುವು. (ನೋಡಿ- ಇಸ್ಲಾಮೀ-ವಾಸ್ತುಶಿಲ್ಪ,-ಕಲೆ)
ಮೂರ್ತಿಶಿಲ್ಪ: ಪರ್ಸೆಪಲಿಸ್ ಅರಮನೆಯಲ್ಲಿ ಹಲವಾರು ಭವ್ಯ ಉಬ್ಬುಶಿಲ್ಪ ಫಲಕಗಳಿದ್ದುವು. ಸೋಪಾನಗಳ ಪಕ್ಕದ ಗೋಡೆಗಳ ಮೇಲೆ ರಾಜ ಭಟರ, ಅಂಗರಕ್ಷದಳದ ಮತ್ತು ಸಾಮಂತರಾಜ್ಯಗಳಿಂದ ಕಪ್ಪಕಾಣಿಕೆಗಳನ್ನು ಹೊತ್ತು ತರುತ್ತಿದ್ದವರ ಶಿಲ್ಪಗಳನ್ನು ಕಡೆಯಲಾಗಿತ್ತು. ಮಾನವ ಶಿಲ್ಪಗಳನ್ನು ಸಮಾಂತರದಲ್ಲಿ ಕಡೆದು ಅವುಗಳ ನಡುವೆ ಕೆಲವು ಗಿಡಗಳ ಅಥವಾ ಕಪ್ಪಕಾಣಿಕೆಗಳನ್ನು ಹೊತ್ತು ತರುತ್ತಿದ್ದ ಶಿಲ್ಪಗಳನ್ನು ಜೋಡಿಸಲಾಗಿತ್ತು. ಶಿಲ್ಪಗಳ ಕೆತ್ತನೆ, ಜೋಡಣೆ, ವಿವರಗಳ ನಿರೂಪಣೆ, ತಾಂತ್ರಿಕ ನೈಪುಣ್ಯದ ಸಾಕ್ಷಿಗಳಾಗಿವೆ. ಇಡೀ ಕಟ್ಟಡಕ್ಕೆ ಬೆಳಕು ನೆರಳಿನ ಪರಿಣಾಮವನ್ನೊದಗಿಸುತ್ತಿದ್ದ ಫಲಕಗಳು ಅರಮನೆಯ ಔನ್ನತ್ಯವನ್ನು ತೋರಿಸುವ ಅಳತೆಗೋಲುಗಳಂತಿವೆ;
ಸಸೇನಿಯನ್ ಯುಗದ ಶಿಲಾಮೂರ್ತಿಗಳ ಉತ್ತಮ ನಿದರ್ಶನಗಳನ್ನು ಪರ್ಸೆಪಲಿಸ್ ಬಳಿಯಿರುವ ನಕ್ಷ್-ಇ-ರುಸ್ತವರ್‍ನಲ್ಲಿರುವ ಆರ್ದಷೀರ್ I ಮತ್ತು ಷಾಪೂರ್1 ದೊರೆಗಳ ಬೃಹದಾಕೃತಿಯ ಶಿಲ್ಪಗಳಲ್ಲಿ ಮತ್ತು ಕೆರ್ಮನ್‍ಷಾ ಬಳಿಯ ಒಂದು ಗ್ರಾಮದಲ್ಲಿರುವ ಖುಸ್ರು II ವಿನ ಅದ್ಭುತಶಿಲ್ಪದಲ್ಲಿ ಗುರ್ತಿಸಬಹುದು. ಖುಸ್ರುವಿವ ಮೂರ್ತಿ ಯುದ್ಧಕವಚವನ್ನು ಧರಿಸಿದೆ; ಇಸ್ಲಾಮಿಯರು ಅದನ್ನು ಬಹುಮಟ್ಟಿಗೆ ವಿಕೃತಗೊಳಿಸಿದ್ದರೂ ಈಗಲೂ ಅದರ ಭಾವಪೂರ್ಣ ಸೌಂದರ್ಯ ಗಮನಾರ್ಹವಾಗಿದೆ. ಅದರ ಅಂತಃಶಕ್ತಿ ಮತ್ತು ಭವ್ಯತೆ ಸ್ಮರಣೀಯವಾಗಿದೆ. ಅದರಲ್ಲಿ ಅಕೇಮನಿಡ್ ಶಿಲ್ಪಗಳ ಛಾಯೆ ಕಾಣುತ್ತದೆ. ಇಸ್ಲಾಮೀ ಯುಗದಲ್ಲಿ ಮತೀಯ ನಿರ್ಬಂಧದ ದೆಸೆಯಿಂದ ಮೂರ್ತಿಶಿಲ್ಪಕ್ಕೆ ಪ್ರೋತ್ಸಾಹವಿಲ್ಲವಾಯಿತು.
ಲೋಹಶಿಲ್ಪಕಲೆಯಲ್ಲಿ ಆಕೆ ಮಿನಿಯನ್ನರು ನಿಷ್ಣಾತರಾಗಿದ್ದರು. ಆ ಕಾಲದ ಒಂದು ಚಿನ್ನದ ತೋಳಬಂದಿಯ ಮೇಲೆ ರೆಕ್ಕೆಗಳುಳ್ಳ ಎರಡು ವಿಕೃತ ಪ್ರಾಣಿಗಳನ್ನು ರೂಪಿಸಲಾಗಿದೆ. ಅವುಗಳ ದೇಹದ ತಳಭಾಗ ಮತ್ತು ಹಿಂಗಾಲುಗಳನ್ನು ತೋಳಬಂದಿಯ ಮೇಲೆ ಉಬ್ಬುಚಿತ್ರರೂಪದಲ್ಲಿ ತೋರಿಸಲಾಗಿದೆ. ದುಂಡುಶಿಲ್ಪ ರೂಪದಲ್ಲಿ ರೆಕ್ಕೆ, ಎದೆಭಾಗ ಮತ್ತು ಕತ್ತುಗಳನ್ನು ತೋಳಬಂದಿಯ ಮೇಲ್ಭಾಗದಲ್ಲಿ ರೂಪಿಸಲಾಗಿದೆ; ಕೋಡುಗಳುಳ್ಳ ಸರ್ಪಗಳ ತಲೆಗಳು ಪರಸ್ಪರಾಭಿಮುಖವಾಗಿವೆ. ದೇಹದ ಮೇಲೆ ಸಣ್ಣಸಣ್ಣ ತಗ್ಗುಗಳನ್ನು ಕೊರೆಯಲಾಗಿದ್ದು ಅವುಗಳಲ್ಲಿ ಬಹುಶಃ ಬಣ್ಣದ ಶಿಲೆಯ ತುಂಡುಗಳನ್ನು ಹುದುಗಿಸಿಡಲಾಗಿತ್ತು. ಪ್ರಾಣಿಗಳ ದೇಹಗಳು ಬಹಳ ಸಾಂಕೇತಿಕವಾಗಿದ್ದರೂ ಅವುಗಳ ವೀರ್ಯವತ್ತಾದ ನಿರೂಪಣೆ ಮನತಟ್ಟುವಂತಿದೆ. ಲೋಹಕಲೆಯಲ್ಲೂ ಪಾರಸಿಕರ ಮೇಲೆ ತತ್ಪೂರ್ವ ಸಂಪ್ರದಾಯಗಳ ಛಾಯೆ ಬಿದಿರುವುದರಲ್ಲಿ ಸಂದೇಹವಿಲ್ಲವಾದರೂ ಅವರ ವೈಶಿಷ್ಟ್ಯ ಎದ್ದುಕಾಣುವಂತಿದೆ. ಬೂರಿಸ್ತಾನದಲ್ಲಿ ದೊರೆತಿರುವ ಕ್ರಿ.ಪೂ. ಸು. 7.ನೆಯ ಶತಮಾನದ ಈಗ ಬಾಸ್ಟನ್ ವಸ್ತುಸಂಗ್ರಹಾಲಯದಲ್ಲಿರುವ ಕಂಚಿನ ದಂಡದ ಮೇಲುಹಿಡಿಕೆಯಲ್ಲಿ ಕೆತ್ತಿರುವ ಕಾಲ್ಪನಿಕ ಪ್ರಾಣಿಗಳ ಸಾದೃಶ್ಯವನ್ನು ಇಲ್ಲಿ ಕಾಣಬಹುದು.
ಸಸೇನಿಯನ್ ಯುಗದಲ್ಲಿ ಬೆಳ್ಳಿಯ ಕೆತ್ತನೆಯಲ್ಲಿ ಮೇಲೆ ಹೇಳಿದ ಭಾವಪೂರ್ಣ ಅಂತಃಸತ್ಯವನ್ನು ಪ್ರದರ್ಶಿಸುವಂಥ ಹಲವಾರು ಕೃತಿಗಳನ್ನು ಕಾಣಬಹುದು. ಆ ಕಾಲದ ಒಂದು ಬೆಳ್ಳಿಯ ತಟ್ಟೆಯ ಮೆಲೆ ಖುಸ್ರು I ಬೇಟೆಯಾಡುತ್ತಿರುವ ದೃಶ್ಯವನ್ನು ಕೆತ್ತಲಾಗಿದೆ. ಸುಮಾರು ಎಂಟೂವರೆ ಅಂಗುಲ ವ್ಯಾಸವುಳ್ಳ ಆ ತಟ್ಟೆಯಲ್ಲಿ ಆರು ಚಿತ್ರಗಳನ್ನು ವೃತ್ತಾಕಾರದ ಪರಿಮಿತಿಗೆ ಹೊಂದುವಂತೆ ಕೆತ್ತಲಾಗಿದೆ. ನಾಗಾಲೋಟದಲ್ಲಿ ಓಡುತ್ತಿರುವ ರಾಜಾಶ್ವ. ಬಿಲ್ಲು ಹೂಡಿ ಬಾಣ ಪ್ರಯೋಗ ಮಾಡುತ್ತಿರುವ ದೊರೆ, ಹತವಾಗಿ ಉರುಳಿದ ಇಲ್ಲವೇ ಓಡುತ್ತಿರುವ ಮೃಗಗಳು - ಇವುಗಳ ಚಿತ್ರಣ ಬಹಳ ಕೌಶಲಪೂರ್ಣವಾಗಿಯೂ ಜೀವಂತವಾಗಿಯೂ ಇವೆ. ಅವುಗಳೆಲ್ಲದರ ಸಮಗ್ರ ಜೋಡಣೆ ನಿಜಕ್ಕೂ ಅದ್ಭುತ.
ಇಸ್ಲಾಮೀ ಯುಗದ ಲೋಹಕಲೆ ಬಹಳ ಸೂಕ್ಷ್ಮವೂ ಸೌಂದರ್ಯಪೂರ್ಣವೂ ಆಗಿದೆ. ತಾಮ್ರ ಮತ್ತು ಕಂಚಿನ ವಸ್ತುಗಳ ಮೇಲೆ ಚಿನ್ನ, ಬೆಳ್ಳಿಯ ತುಂಡುಗಳನ್ನು ಹುದುಗಿಸಿ ನಿರ್ಮಿಸಿದ ವಿನ್ಯಾಸಗಳು ಅವರ ಕಲಾಜಾಣ್ಮೆ ಮತ್ತು ಸೌಂದರ್ಯಪ್ರಿಯತೆಯನ್ನು ತೋರಿಸುತ್ತವೆ. ತಮ್ಮ ಆಯುಧ ಮತ್ತು ಕವಚಗಳ ಮೇಲೆ ಇಂಥ ಚಿತ್ರಕೊರೆತಗಳನ್ನು ಹುದುಗಿಸಿ ಅಲಂಕರಿಸುವ ಕಲೆ ಮಧ್ಯಯುಗದಲ್ಲಿ 18.ನೆಯ ಶತಮಾನದವರೆಗೂ ಕಂಡುಬರುತ್ತದೆ.
ನೇಯ್ಗೆಯಲ್ಲಿ ಚಿತ್ರಕಲೆ: ಬಟ್ಟೆಗಳ ಮೇಲಿನ ಚಿತ್ರಕಲೆಯಲ್ಲೂ ಪಾರಸಿಗಳದ್ದು ಸಿದ್ಧಹಸ್ತ. ಚೀನಾದಿಂದ ಬರಮಾಡಿಕೊಂಡ ರೇಷ್ಮೆನೇಯ್ಗೆ ಕಲೆಯನ್ನು ಅವರು ತಮ್ಮ ದೇಶದಲ್ಲಿ ಅದ್ಭುತವಾಗಿ ಬೆಳೆಸಿಕೊಂಡರು. ತಮ್ಮ ರಾಜ ಹಾಗೂ ಶ್ರೀಮಂತ ವರ್ಗದ ಬಳಕೆಗೂ ಬಿಸಾಂಟಿಯಮ್ ಸಾಮ್ರಾಜ್ಯ ಮತ್ತು ಪಶ್ಚಿಮ ಯೂರೋಪಿನ ದೇಶಗಳಿಗೆ ರಫ್ತಿಗಾಗಿಯೂ ವಿಶ್ವವಿಖ್ಯಾತವಾದ ರತ್ನಗಂಬಳಿಗಳನ್ನೂ ರೇಷ್ಮೆಯ ವಸ್ತ್ರಗಳನ್ನು ಅವರು ತಯಾರಿಸುತ್ತಿದ್ದರು. ಅವುಗಳ ಮೇಲೆ ಸಣ್ಣ ಪದಕಗಳಿಂದ ಕೂಡಿಸಲಾದ ದೊಡ್ಡ ಪದಕಗಳನ್ನು ಹೆಣೆಯುತ್ತಿದ್ದರು. ದೀರ್ಘ ವೃತ್ತಾಕಾರದ ಪದಕಗಳಲ್ಲಿ ಬೇಟೆಯ ದೃಶ್ಯಗಳು ಸಾಮಾನ್ಯವಾಗಿರುತ್ತಿದ್ದವು. ಇಂಥ ಒಂದು ಪದಕದ ಮೇಲಿನ ದೃಶ್ಯದಲ್ಲಿ ಎದುರುಬದುರಾಗಿ ಹಾರುತ್ತಿರುವ ಕುದುರೆಗಳ ಮೇಲೆ ಕುಳಿತ ಇಬ್ಬರು ರಾಜರು, ಅವರಿಬ್ಬರ ನಡುವೆ ಇರುವ ರಾಜದಂಡದ ಇಕ್ಕೆಲಗಳಲ್ಲಿರುವ ಕವಲುಗಳ ಮೇಲೆ ಚಿತ್ರಿಸಲಾದ ಹಾರುತ್ತಿರುವ ಪಕ್ಷಿಗಳು, ರಾಜರು ಎಡಗೈಯಲ್ಲಿ ತಾವು ಬೇಟೆಯಲ್ಲಿ ಕೊಂದ ಸಿಂಹದ ಮರಿಗಳು, ಕುದುರೆಗಳ ಕೆಳಭಾಗದಲ್ಲಿರುವ ಕಾಡು ಪ್ರಾಣಿಗಳು - ಇವೆಲ್ಲ ಅಮೋಘವಾಗಿವೆ. ಪದಕದ ಸುತ್ತಂಚಿನಲ್ಲಿರುವ ಸಣ್ಣ ಲತಾವರ್ತುಲಗಳಲ್ಲೂ ಪ್ರಾಣಿಗಳನ್ನು ಚಿತ್ರಿಸಲಾಗಿದೆ. ಅವುಗಳ ಚಿತ್ರಣ ಸೂಕ್ಷ್ಮವಾಗಿಯೂ ಸತ್ವಪೂರ್ಣವಾಗಿಯೂ ಇದೆ. ಒಟ್ಟಿನಲ್ಲಿ ಇಡೀ ದೃಶ್ಯ ಬಹಳ ರಮ್ಯ ಅಲಂಕಾರದ ಭಾವವನ್ನುಂಟುಮಾಡುತ್ತದೆ. ಇಸ್ಲಾಮೀ ಯುಗದಲ್ಲಿ ಸಹ ಬಟ್ಟೆಗಳ ಮೇಲಿನ ಚಿತ್ರಕಲೆ ಮುಂದುವರೆಯಿತು. ಸಿಂಹ, ಹದ್ದು ಮತ್ತು ಹಲ ಬಗೆಯ ಕಾಲ್ಪನಿಕ ಪ್ರಾಣಿಗಳನ್ನು ಜ್ಯಾಮಿತಿಕ ವಿನ್ಯಾಸಗಳ ನಡುವೆ ಚಿತ್ರಿಸುವ ನೇಯ್ಗೆ ಕಲೆ ಅನೂಚಾನವಾಗಿ ಬೆಳೆದುಬಂತು. ಕಾಲಕ್ರಮದಲ್ಲಿ ತುರ್ಕಿದೇಶಕ್ಕೆ ಈ ಕಲೆ ಹರಡಿದರೂ ಅಲ್ಲಿ ಅದು ಹೆಚ್ಚು ಹೆಚ್ಚಾಗಿ ಅಸಹಜವಾಗುತ್ತಾ ಹೋಯಿತು.
ಮಧ್ಯಯುಗೀನ ಮಡಿಕೆಕುಡಿಕೆಗಳ ಮೇಲೆ ಕಂಡುಬರುವ ಚಿತ್ರಕಲೆ ಪರ್ಷಿಯಾದಲ್ಲಿ 13.ನೆಯ ಶತಮಾನದ ಅನಂತರ ಬಹಳ ಜನಪ್ರಿಯವಾಯಿತು. ಒರಟಾದ ಮೇಲ್ಮೈಯನ್ನು ಗಾಜಿನಂತೆ ನಯಗೊಳಿಸಿ ವಿವಿಧ ಬಣ್ಣಗಳನ್ನು ಲೇಪಿಸಿ ಆದರ ಮೇಲೆ ಹೂಬಳ್ಳಿಗಳನ್ನು ಬಹಳ ಆಕರ್ಷಕವಾಗಿ ಚಿತ್ರಿಸುತ್ತಿದ್ದರು.
ವರ್ಣಚಿತ್ರಕಲೆ ಮತ್ತು ಅಲಂಕಾರಿಕ ಲಿಪಿ: ಈ ಕ್ಷೇತ್ರದ ಇಸ್ಲಾಮೀ ಯುಗದಿಂದೀಚೆಗೆ ಪಾರ್ಸಿ ಕೊಡುಗೆ ಪ್ರಾರಂಭವಾಯಿತು; ಈ ಕಲೆಯ ಪ್ರಮುಖ ಮಾಧ್ಯಮ ಪುಸ್ತಕಗಳ ಹಸ್ತಪ್ರತಿಗಳು. 7ನೆಯ ಶತಮಾನದ ಉತ್ತರಾರ್ಧದ ಇರಾಕಿನ ಬಾಸ್ರಾ ಮತ್ತು ಕುಫಾ ನಗರಗಳಲ್ಲಿ, ಹದಗೊಳಿಸಿದ ಹಾಳೆಗಳ ಮೇಲೆ, ಪವಿತ್ರ ಕುರಾನಿನ ಪ್ರತಿಗಳನ್ನು ಮಾಡಲಾಗುತ್ತಿತ್ತು. ಈ ಲಿಪಿಯನ್ನು ಕುಫಿ ಲಿಪಿಯೆಂದು ಕರೆಯಲಾಗಿದೆ. 800ರ ಸುಮಾರಿಗೆ ಬಾಸ್ರಾದಲ್ಲಿದ್ದ ಪಾರ್ಸಿ ಮೂಲದ ಖೋಷ್ಣಮ್ ಇಂಥ ಅಲಂಕಾರಿಕ ಹಸ್ತಪ್ರತಿಗಳನ್ನು ತಯಾರಿಸುತ್ತಿದ್ದರು. ತರುವಾಯ ಪಾರ್ಸಿಕರು ತಮ್ಮದೇ ಆದ ದುಂಡಾದ ನಸಖಿ ಲಿಪಿಯನ್ನು ಬೆಳೆಸಿಕೊಂಡರು. ಆಗಿನ ಈ ಕಲೆಯ ಆದ್ಯಪ್ರವರ್ತಕ ಇಬ್ರಾಹಿಮ್ ಸೆಗ್‍ಜಿ. 10ನೆಯ ಶತಮಾನದ ಅಂತ್ಯಕಾಲದಲ್ಲಿ ಜೀವಿಸುತ್ತಿದ್ದ ಘನಾ ಖುಸ್ರಾ ಮತ್ತೊಬ್ಬ ಪ್ರಮುಖ. 12ನೆಯ ಶತಮಾನದಲ್ಲಿ ಸೆಲ್ಜುಕ್ ದೊರೆಗಳ ಕಾಲದಲ್ಲಿ ಬಾಗ್ದಾದ್ ಶೈಲಿಯ ಲೇಖನ ಕಲೆ ಪ್ರಬಲವಾಯಿತು. ಕುರಾನಿನ ಹಸ್ತಪ್ರತಿಗಳಲ್ಲದೇ ಲೌಕಿಕ ಗ್ರಂಥಗಳನ್ನು ಅಲಂಕಾರಿಕ ಲಿಪಿಯಲ್ಲಿ ಪ್ರತಿ ಮಾಡುತ್ತಿದ್ದರು; ಅವುಗಳ ನಡುವೆ ವಿವರಣಾತ್ಮಕವಾದ ವರ್ಣಚಿತ್ರಗಳನ್ನೂ ಅಳವಡಿಸಲಾಗುತ್ತಿತ್ತು. ಇದೇ ಸಮಯದಲ್ಲಿ ಹಸ್ತಪ್ರತಿಗಳಲ್ಲಿ ಸೂಕ್ಷ್ಮವರ್ಣ ಚಿತ್ರಗಳು ಹೆಚ್ಚುಹೆಚ್ಚಾಗಿ ಬಳಕೆಗೆ ಬಂದುವು. ಕಲಾಪ್ರಿಯರಾದ ಷಾಹ ದೊರೆಗಳು ಉತ್ತಮ ಚಿತ್ರ - ಲಿಪಿಕಾರರಿಗೆ ಆಶ್ರಯ ಪ್ರೋತ್ಸಾಹಗಳನ್ನು ನೀಡುತ್ತಿದ್ದರು. ಆ ಕಾಲದ ಸುಪ್ರಸಿದ್ಧ ಕೃತಿಗಳಲ್ಲಿ ಕುರಾನಿನ ಕೆಲವು ಪ್ರತಿಗಳೂ ಮನಾಫಿಆಲ್ ಹಯಾವನ್ ಗ್ರಂಥದ ಪ್ರತಿಗಳು ಸೇರಿವೆ.
ತೈಮೂರ ವಂಶದ ಮತ್ತು ಸಫಾವಿಡ್ ದೊರೆಗಳ ಕಾಲದ ಲೌಕಿಕ ಗ್ರಂಥಗಳ ಹಸ್ತಪ್ರತಿಗಳು ಅನಂತರ ಕಾಲದ ಉತ್ತಮ ಕೃತಿಗಳು. ಫಿರ್ದೌಸಿ, ನಿಜಾಮಿ ಇವರ ಕವನಗಳ ಪ್ರತಿಗಳನ್ನು ಖ್ಯಾತಚಿತ್ರಕಾರರು ತಯಾರಿಸುತ್ತಿದ್ದರು. ಈ ಚಿತ್ರಕಾರರಲ್ಲಿ ಬಿಹಜಾದ್ (1440-1536). ಷಾಹ್ ತಹ್ಮಾಸ್ಪ್‍ನ (1524-1576) ಆಸ್ಥಾನಿಕರಾದ ಮಿರಾಕ್ ಮತ್ತು ಸುಲ್ತಾನ್ ಮುಹಮುದ್ ಅಗ್ರಗಣ್ಯರು. ದೊರೆಗಳ ವಿಲಾಸೀ ಜೀವನದ ಬೇಟೆ, ಸಂಗೀತ, ಪ್ರಣಯ ಮತ್ತು ಸಂತೋಷಕೂಟಗಳ ದೃಶ್ಯಗಳನ್ನೂ ಇಂಥ ಲೌಕಿಕ ಗ್ರಂಥಗಳಲ್ಲಿ ಚಿತ್ರಿಸಲಾಗುತ್ತಿತ್ತು. ಇಂಥ ಕೃತಿಗಳಲ್ಲಿ ಅಮೋಘವಾದದ್ದು. ನಿಜಾಮಿಯ ಲೈಲಾಮಜನು ಗ್ರಂಥದ ಪ್ರತಿ; ಇದರ ಚಿತ್ರಕಾರ ಮಿರಾಕ್. ಆಸನದ ಮೇಲೆ ಚಾವಟಿ ಹಿಡಿದು ಕುಳಿತ ಗುರು, ಅವನ ಮುಂಭಾಗದಲ್ಲಿ ವಿವಿಧ ಆಟಗಳಲ್ಲಿ ಮಗ್ನರಾದ ಶಿಷ್ಯರು, ಮಧ್ಯರಂಗದಲ್ಲಿ ಪರಸ್ಪರ ಅಭಿಮುಖರಾಗಿ ನಿಂತ ಲೈಲಾಮಜನು-ಇವರುಗಳ ಚಿತ್ರಣ ಸೂಕ್ಷ್ಮವಾದರೂ ಹೃದಯಾಂಗಮವಾಗಿದೆ. ಆದರೆ ಸಮತಲವಾಗಿದ್ದು, ನೆರಳು-ಬೆಳಕಗಳ ರೂಪಣೆಯಿಲ್ಲವಾಗಿದೆ. ಬಣ್ಣಗಳ ಸಮನ್ವಯದಿಂದ ಅಲಂಕಾರಿಕ ಭಾವನೆ ಉಂಟಾಗಿದೆ. ಅದೇ ಕಾಲದ ಷಹನಾಮಾ ಖುಸ್ರು-ಷಿರಿನ್ ಮೊದಲಾದ ಗ್ರಂಥಗಳ ವರ್ಣಚಿತ್ರಿತ ಹಸ್ತಪ್ರತಿಗಳೂ ಈ ಗುಂಪಿಗೆ ಸೇರಿದ್ದವು.
ತೈಮೂರ್ ದೊರೆಗಳ ಆಶ್ರಿತನಾದ ಬೈಸಂಕ್ವರ್ ಮಿರ್ಜಾ ಹೆರಾಟಿನಲ್ಲಿ ಸ್ಥಾಪಿಸಿದ್ದ (1434) ಅಲಂಕಾರಿಕ ಲಿಪಿ ಶಾಲೆಯಲ್ಲಿ 40 ಮಂದಿ ಶಿಷ್ಯರಿದ್ದರು. ಆ ಶಾಲೆಯ ಅತ್ಯುತ್ತಮ ಚಿತ್ರಕಾರ ಬೆಹ್‍ಜಾದ್ (ಸು. 1450.- 1520) . ಪಾರಸಿ ಚಿತ್ರಕಲೆಯಲ್ಲಿ ಅಗ್ರೇಸರನೆಂದು ಅವನನ್ನು ಗೌರವಿಸಲಾಗಿದೆ. ಅವನ ಕೃತಿಗಳು ದೇಶ ವಿದೇಶಗಳಲ್ಲಿ ಭಾರತದಲ್ಲೂ ಪ್ರಸಿದ್ಧಿ ಪಡೆದಿದ್ದವು. 16ನೆಯ ಶತಮಾನದ ಕೊನೆಗಾಲದಲ್ಲಿ ಇಸ್ಪಹಾನ್ ಶೈಲಿಯ ಚಿತ್ರಗಳು ಪ್ರಖ್ಯಾತವಾದವು. ಆ ಶೈಲಿಯ ಚಿತ್ರಕಾರರಲ್ಲಿ ಮೀರ್ ಇಮಾದ್ ಅಲ್-ಹುಸ್ನಿ (ಮ. 1618) ಮತ್ತು ರಿಜಾ ಅಬ್ಬಾಸಿ ರಾಜ ಸನ್ಮಾನಕ್ಕಾಗಿ ಪ್ರತಿಸ್ಪರ್ಧಿಗಳು. ಉಸ್ತಾದ್ ಮೊಹಮ್ಮದಿಯಾದ ರೊತನ್ನ ಪ್ರಕೃತಿ ಚಿತ್ರಗಳಿಂದ ಒಂದು ಹೊಸ ಸಂಪ್ರದಾಯದ ಸ್ಥಾಪಕ. ಅವನ ಶಿಷ್ಯನಾದ ರಿಜಾ ಅಬ್ಬಾಸಿಯ ನೂರಾರು ಚಿತ್ರಗಳು ಪರ್ಷಿಯಾ ಮತ್ತು ಭಾರತಗಳ ಸೂಕ್ಷ್ಮ ವರ್ಣಚಿತ್ರ ಸಂಗ್ರಾಹಕರ ಬಳಿ ಉಳಿದುಬಂದಿದೆ. 18ನೆಯ ಶತಮಾನ ಮತ್ತು ಅನಂತರ ಕಾಲದಲ್ಲಿ ಯೂರೋಪಿಯ ವರ್ಣಚಿತ್ರಗಳ ಪ್ರಭಾವ ಹೆಚ್ಚಾದರೂ 19 ನೆಯ ಶತಮಾನದುದ್ದಕ್ಕೂ ಸೂಕ್ಷ್ಮಚಿತ್ರಗಳ ತಯಾರಿಕೆ ಮುಂದುವರೆಯಿತು. ಆದರೆ ಅವುಗಳಲ್ಲಿ ಭವ್ಯ ರಮ್ಯ ಶೈಲಿ ಕಣ್ಮರೆಯಾಗಿ, ಅವು ಕೇವಲ ಬeóÁರಿ ಮಟ್ಟಕ್ಕೆ ಇಳಿದವು. (ಬಿ.ಕೆ.ಜಿ.)