ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಾರ್ಸಿ ಭಾಷೆ

ವಿಕಿಸೋರ್ಸ್ ಇಂದ
Jump to navigation Jump to search

ಪಾರ್ಸಿ ಭಾಷೆ - ಪ್ರಾಚೀನ ಪರ್ಷಿಯದ ಈಗಿನ ಇರಾನಿನ ಒಂದು ಮುಖ್ಯ ಭಾಷೆ. ಇಂಡೋ-ಯೂರೋಪಿಯನ್ ಭಾಷಾ ಪರಿವಾರಕ್ಕೆ ಸೇರಿದ ಇಂಡೋ ಇರಾನಿಯನ್ ಶಾಖೆಗೆ ಇದು ಸೇರುತ್ತದೆ.

ಪ್ರಾಚೀನ ಪರ್ಷಿಯದಲ್ಲಿದ್ದು ಆ ಕಾಲದ ಅಧಿಕೃತ ಭಾಷೆಗಳಲ್ಲೊಂದಾಗಿತ್ತು. ಅಂದಿನ ದೊರೆಗಳು ತಮ್ಮ ಶಾಸನಗಳಲ್ಲಿದ್ದನ್ನು ಉಪಯೋಗಿಸಿದ್ದಾರೆ. ಅಕಮೆನಿಡೇ ವಂಶದ ಶಾಸನಗಳಿಂದಲೇ ಇದರ ಸ್ವರೂಪ ನಮಗೆ ತಿಳಿದುಬರುತ್ತದೆ. ಹಾಗೆ ನೋಡಿದರೆ ಪಹ್ಲವಿ ಇದರ ಒಂದು ಮಾರ್ಪಟ್ಟ ರೂಪ. ಅಲೆಕ್ಸಾಂಡರ್ ಮಹಾಶಯನ ಆಡಳಿತದಲ್ಲಿ ಸ್ಥಗಿತಗೊಂಡ ಈ ಭಾಷೆ ಮಧ್ಯಕಾಲೀನ ಸಸೇನಿಯನ್ ದೊರೆಗಳ ಕಾಲದಲ್ಲಿ ಪುನಃ ಅಧಿಕೃತ ಭಾಷೆಯಾಗಿ ಮುಂದುವರೆಯಿತು. ಆಧುನಿಕ ಪಾರಸಿ ಈಗಿನ ಇರಾನಿ ಭಾಷೆಗಳಲ್ಲೆಲ್ಲ ಅತ್ಯಂತ ಪ್ರಮುಖವಾದ್ದು. ಈಗ ಇದು ತನ್ನ ಹಳೆಯ ಕುರುಹುಗಳನ್ನು ಸಂಪೂರ್ಣವಾಗಿ ತ್ಯಜಿಸಿ ಬೇರಾವು ಇಂಡೋ-ಯೂರೋಪಿಯನ್ ಭಾಷೆ ಮುಟ್ಟದಿರುವಂಥ ಪರಿಷ್ಕøತಾವಸ್ಥೆಯನ್ನು ಮುಟ್ಟಿ ಅತ್ಯಂತ ಸಮೃದ್ಧವಾಗಿ ಬೆಳೆದಿದೆ. ಇದರಲ್ಲಿ ಅರಬ್ಬಿ ಪದಗಳು ಈಗ ಹೇರಳವಾಗಿವೆ. ಲಿಪಿ ಅರಬ್ಬಿಯದಾಗಿದ್ದು ಕೊಂಚ ಮಟ್ಟಿಗೆ ಉರ್ದುವನ್ನು ಹೋಲುತ್ತದೆ.

ಅರಬ್ಬಿ, ತುರ್ಕಿ ಹಾಗೂ ಉರ್ದು ಭಾಷೆಗಳ ಮೇಲೆ ಪಾರಸಿ ಹೆಚ್ಚಿನ ಪ್ರಭಾವ ಬೀರಿದೆ. ಆಫ್ಘಾನಿಸ್ತಾನದಲ್ಲಿದು ರಾಷ್ಟ್ರೀಯ ಸಾಹಿತ್ಯಕ ಭಾಷೆ.

ರೂದಖೀ ಮತ್ತು ದಖೀಖಿ (ಕ್ರಿ. ಶ. ಹತ್ತನೆಯ ಶತಮಾನ)-ಇವರು ಪುರಾತನ ಪ್ರೌಢ ಪಾರಸಿ ಸಾಹಿತ್ಯದ ಪ್ರಸಿದ್ಧ ಕವಿಗಳು. ಘಜ್ನಿ ಮಹಮೂದನ ಆಸ್ಥಾನದಲ್ಲಿದ್ದ ಪಿರ್ದೂಸಿ ಕವಿಯ ಷಹಾನಾಮ ಈ ಭಾಷೆಯಲ್ಲಿಯ ಮಹಾಕಾವ್ಯ. ಇರಾನಿನಲ್ಲೇ ಅಲ್ಲದೆ ಇತರ ದೇಶಗಳಲ್ಲೂ ಪಾರಸಿ ಸಾಹಿತ್ಯ ಬೆಳೆದುಬಂತು. ಭಾರತ ಪಾರಸಿ ಸಾಹಿತ್ಯಕ್ಕೆ ಎರಡನೆಯ ತವರು. (ಕೆ.ಎನ್.ಎಸ್.)