ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಾಲಿಕೀಟ
ಪಾಲಿಕೀಟ - ವಲಯವಂತ ವಂಶದ ಕೀಟಪೊಡವರ್ಗಕ್ಕೆ ಸೇರಿದ ಗಣ. ಇದಕ್ಕೆ ಸೇರಿದ ಪ್ರಾಣಿಗಳು ಸಾಗರವಾಸಿಗಳು. ಈ ಪ್ರಾಣಿಗಳ ದೇಹದಲ್ಲಿ ತಲೆಭಾಗ ಸ್ಪಷ್ಟವಾಗಿ ರೂಪುಗೊಂಡಿದೆ. ತಲೆಯಲ್ಲಿ ಆಂಟಿನಾ ಹಾಗೂ ಸೂಕ್ಷ್ಮಾಂಗಗಳುಂಟು. ದೇಹ ಖಂಡಗಳಾಗಿ ವಿಭಾಗವಾಗಿದೆಯಾದರೂ ಎರೆಹುಳುವಿನ ದೇಹದಲ್ಲಿ ಕಂಡುಬರುವ ಕ್ಲೈಟೆಲಮ್ ಭಾಗ ಇಲ್ಲಿ ಕಂಡುಬರುವುದಿಲ್ಲ. ಪಾಲಿಕೀಟ ಗುಂಪಿನ ಪ್ರಾಣಿಗಳು ಕಿವಿರಿನ ಸಹಾಯದಿಂದ ಉಸಿರಾಡುತ್ತವೆ. ದೇಹ ಖಂಡಗಳ ಎರಡೂ ಪಕ್ಕಗಳಲ್ಲಿರುವ ಪಾದಗಳು, ಹಲವು ಬಿರುಗೂದಲನ್ನೊಳಗೊಂಡಿವೆ. ಬಿರುಗೂದಲುಗಳು ಕೈಟಿನ್ ಎಂಬ ವಸ್ತುವಿನಿಂದ ರಚಿತವಾಗಿವೆ. ಪ್ರತಿ ಖಂಡದಲ್ಲಿಯೂ ನೆಫ್ರೀಡಿಯ ಎಂಬ ವಿಸರ್ಜನಾಂಗಗಳಿವೆ.
ಪಾಲಿಕೀಟ ಗುಂಪಿನ ಪ್ರಾಣಿಗಳು ಭಿನ್ನಲಿಂಗಿಗಳು. ಅಂಡಾಣುಗಳ ನಿಷೇಚನ ಹೆಣ್ಣಿನ ದೇಹದ ಹೊರಭಾಗದಲ್ಲಿ ನಡೆಯುತ್ತದೆ. ಸ್ವತಂತ್ರ ಜೀವನ ನಡೆಸುವ ಟ್ರೋಕೋಫೋರ್ ಡಿಂಬ ಕಂಡುಬರುತ್ತದೆ. ಇದು ಕೊಂಚ ಕಾಲ ಈಜಾಡಿ ಕೊನೆಗೆ ಸಾಗರದ ತಳ ಸೇರಿ, ರೂಪಪರಿವರ್ತನೆ ಹೊಂದಿ, ಮರಿಯಾಗಿ ರೂಪುಗೊಳ್ಳುತ್ತದೆ. ಪಾಲಿಕೀಟ ಗಣದ ಪ್ರಮುಖ ಉದಾಹರಣೆಗಳೆಂದರೆ ನೀರೀಸ್, ಸಿಲ್ಲಿಸ್, ಸಬೆಲ ಮುಂತಾದವು. (ಎಂ.ಎನ್.ವಿ.ಐ.)