ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಿಕಲಕ್ಕಿ
ಗೋಚರ
ಪಿಕಲಕ್ಕಿ - ಪ್ಯಾಸರಿಫಾರ್ಮೀಸ್ ಗಣದ ಟರ್ಡಿಡೀ ಕುಟುಂಬಕ್ಕೆ ಸೇರಿದ ಪಕ್ಷಿ (ನೈಟಿಂಗೇಲ್). ಮಧುರವಾದ ಕಂಠಕ್ಕೆ ಹೆಸರಾಗಿದೆ. ಲ್ಯುಸೀನಿಯ ಮೆಗಾರಿಂಕಾಸ್ ಇದರ ಶಾಸ್ತ್ರೀಯ ಹೆಸರು. ಇದು, ಉತ್ತರ ಆಫ್ರಿಕ, ನೈರುತ್ಯ ಸೈಬೀರಿಯ ಮತ್ತು ಮಧ್ಯ ಏಷ್ಯದಲ್ಲಿ ಕಂಡುಬರುತ್ತದೆ. ಇದರ ಉದ್ದ ಸುಮಾರು 16 ಸೆಂ.ಮೀ. ದೇಹದ ಬಣ್ಣ ಕಂದು. ಪಿಕಲಕ್ಕಿ ನೀರಿನ ಹತ್ತಿರದಲ್ಲಿ ಬೆಳೆಯುವ ಪೊದೆಗಳಲ್ಲಿ ವಾಸಿಸುತ್ತದೆ. ಹುಳುಗಳು ಮತ್ತು ಸಂಧಿಪದಿಗಳು ಇದರ ಪ್ರಮುಖ ಆಹಾರ. ಒಣಗಿದ ಎಲೆಗಳಿಂದ ಹೆಣ್ಣು ಹಕ್ಕಿ ಗೂಡು ಕಟ್ಟಿ 4-6 ಕಂದು ಬಣ್ಣದ ಮೊಟ್ಟಗಳನ್ನಿಡುತ್ತದೆ. ಕೆಲವೊಮ್ಮೆ ಮೊಟ್ಟಗಳ ಮೇಲೆ ಚುಕ್ಕೆಗಳಿರುವುದುಂಟು. ಮರಿಗಳ ಪಾಲನೆಯಲ್ಲಿ ಗಂಡು ಹಕ್ಕಿಯೂ ಪಾಲುಗೊಳ್ಳುತ್ತದೆ. (ಜಿ.ಕೆ.ಯು.) (ಪರಿಷ್ಕರಣೆ : ಕೆ ಎಸ್ ನವೀನ್)