ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಿತ್ತನಾಳಗಳು
ಪಿತ್ತನಾಳಗಳು - ಯಕೃತ್ತಿನಿಂದ ಪಿತ್ತ ಕರುಳಿಗೆ ಹರಿವ ನಾಳಗಳು (ಬೈಲ್ ಡಕ್ಟ್ಸ್). ಇವು ಯಕೃತ್ತಿನ ಒಳಗೂ ಹೊರಗೂ ಇವೆ. ಯಕೃತ್ತಿನ ಒಳಗಿರುವ ಪಿತ್ತನಾಳಗಳು ; ಯಕೃತ್ತಿನಲ್ಲಿ 5 ಮಿ.ಮೀ. ಉದ್ದ 2 ಮಿ.ಮೀ. ವ್ಯಾಸ ಇರುವ ಸುಮಾರು ಹತ್ತು ಲಕ್ಷ ಚಿಕ್ಕ ಹಾಲೆಗಳಿವೆ. ಪ್ರತಿ ಚಿಕ್ಕ ಹಾಲೆಯಲ್ಲಿಯೂ ಕೋಟ್ಯಂತರ ಯಕೃತ್ ಕಣಗಳಿವೆ. ಪ್ರತಿ ಕಣದಲ್ಲೂ ಉತ್ಪತ್ತಿಯಾದ ಪಿತ್ತವನ್ನು ಕಣದೊಳಗಿರುವ ಸೂಕ್ಷ್ಮ ಪಿತ್ತನಾಳಗಳು ಆಚೆ ಸಾಗಿಸಿ ಹಾಲೆಯ ಒಳಗಿರುವ ಸಣ್ಣ ನಾಳಗಳೊಳಗೆ ಬಿಡುತ್ತವೆ. ಆಮೇಲೆ ಪಿತ್ತ ಹಾಲೆಗಳ ಒಳಗಿನ ನಾಳಗಳಿಂದ ಹಾಲೆಗಳ ನಡುವೆ ಇರುವ ನಾಳಗಳನ್ನು ಸೇರುತ್ತ ಕಡೆಗೆ ಬಲ ಅಥವಾ ಎಡ ಯಕೃನ್ನಾಳವನ್ನು ಸೇರುತ್ತದೆ.
ಯಕೃತ್ತಿನ ಆಚೆ ಇರುವ ಪಿತ್ತನಾಳಗಳು ; ಇವು ಮೂರು-ಅವಿಭಕ್ತ ಯಕೃನ್ನಾಳ, ಪಿತ್ತಕೋಶನಾಳ, ಅವಿಭಕ್ತ ಪಿತ್ತನಾಳ. ಅವಿಭಕ್ತ ಯಕೃನ್ನಾಳ ; ಬಲ ಯಕೃನ್ನಾಳ ಪಿತ್ತವನ್ನು ಯಕೃತ್ತಿನ ಬಲ ಹಾಲೆಯಿಂದಲೂ ಎಡ ಯಕೃನ್ನಾಳ ಎಡ ಹಾಲೆಯಿಂದಲೂ ಸಾಗಿಸಿ ಈ ಎರಡು ನಾಳಗಳು ಯಕೃತ್ತಿನ ನಾಭಿಯಲ್ಲಿ (ಇಲ್ಲವೇ ಸ್ವಲ್ಪ ಒಳಗೆ ಅಥವಾ ಹೊರಗೆ) ಕೂಡಿ ಅವಿಭಕ್ತ ಯಕೃನ್ನಾಳವಾಗುತ್ತದೆ. ಸುಮಾರು 4 ಸೆಂ.ಮೀ. ಕೆಳಗೆ ಇದನ್ನು ಪಿತ್ತಕೋಶನಾಳ ಸೇರಿದಾಗ ಅವಿಭಕ್ತ ಪಿತ್ತನಾಳವಾಗುತ್ತದೆ. ಪಿತ್ತಕೋಶ ನಾಳ ; ಇದರ ಉದ್ದ 4 ಸೆಂ.ಮೀ. ಇದು ಪಿತ್ತಕೋಶದ ಕತ್ತಿನಿಂದ ಹಿಂದಕ್ಕೆ ಕೆಳಕ್ಕೆ ಮತ್ತು ಎಡಕ್ಕೆ ಹೊರಟು ಅವಿಭಕ್ತ ಯಕೃನ್ನಾಳದೊಡನೆ ಕೂಡುತ್ತದೆ. ಕೋಶನಾಳದಲ್ಲಿ 5-12 ಲೋಳೆ ಪೊರೆಯ ಬಾಲಚಂದ್ರಾಕಾರದ ಮಡಿಕೆಗಳು ಸುರುಳಿ ವಿನ್ಯಾಸದಲ್ಲಿವೆ. ಇವು ಹೀಸ್ಟರನ ಕವಾಟ. ಮಾನವ ಮತ್ತು ಕಪಿಗಳಲ್ಲಿ ಮಾತ್ರ ಈ ಕವಾಟ ಇದೆ. ನೆಟ್ಟ ನಿಲವಿನಲ್ಲಿ ವ್ಯತ್ಯಾಸವಾಗುವ ಭಂಗಿಗಳಿಂದ ನಾಳ ಒಳಮಡಿಕೆಗಳಿಂದ ಮುದುಡಿಕೊಳ್ಳದಂತಾಗುತ್ತದೆ. ಆಚೆ ಕೂಡ ನಾಳ ತಿರುಚಿದಂತೆ ಗಂಟುಗಂಟಾಗಿ ಕಾಣಿಸುತ್ತದೆ.
ಅವಿಭಕ್ತ ಪಿತ್ತನಾಳ ; ಇದರ ಉದ್ದ 7.5 ಸೆಂ.ಮೀ., ವ್ಯಾಸ 4 ಮಿ.ಮೀ. ಇದು ಬಿಲ್ಲುಗರುಳಿನ ಮೊದಲ ಭಾಗದ ಹಿಂದೆ, ಆ ಮೇಲೆ ಮೇದೋಜೀರಕದ ತಲೆಯ ಹಿಂದೆ ಹಾಗೂ ನಿಮ್ನ ಮಹಾಸಿರದ ಮುಂದೆ ಇಳಿದು ಮೇದೋಜೀರಕ ನಾಳದ ಕೊನೆಯೊಡನೆ ಕೂಡಿ ಬಿಲ್ಲುಗರುಳಿನ ಎರಡನೆಯ ಭಾಗದ ಹಿಂಭಿತ್ತಿಯಲ್ಲಿ ಓರೆಯಾಗಿ ತೂರಿ ಚಿಕ್ಕ ತೊಟ್ಟಿನ ತುದಿಯಲ್ಲಿ ತೆರೆಯುತ್ತದೆ. 40% ರಷ್ಟು ಜನರಲ್ಲಿ ಎರಡು ನಾಳಗಳ ಬಾಯಿಗಳು ಬೇರೆ. ಎರಡೂ ನಾಳಗಳಿಗೂ ಒಂದೇ ಬಾಯಿ ಇರುವವರಲ್ಲಿ ಅದು ಬಹಳ ಅಪರೂಪವಾಗಿ ಪಿತ್ತಾಂಶದಿಂದ ಮುಚ್ಚಿಕೊಂಡಾಗ ಪಿತ್ತ ಮೇದೋಜೀರಕದೊಳಕ್ಕೆ ನುಗ್ಗಿ ಅದರಲ್ಲಿರುವ ರಸವನ್ನು ಕೆರಳಿಸಿ ಮೇದೋಜೀರಕ ಮತ್ತು ಅದರ ಸುತ್ತಲಿರುವ ಅಂಗಗಳು ಜೀರ್ಣವಾಗುವಂತೆ ಮಾಡಿ ಪ್ರಾಣಾಪಾಯ ಒಡ್ಡುತ್ತದೆ. ಪಿತ್ತನಾಳದ ಭಿತ್ತಿಯಲ್ಲಿ ನಾರು ಹೆಚ್ಚಾಗಿರುವುದರಿಂದ ಅದು ಹೆಚ್ಚು ಹಿಗ್ಗಲಾರದು. ಅಪರೂಪವಾಗಿ ಜಂತುಹುಳು ನಾಳದೊಳಕ್ಕೆ ನುಗ್ಗಿದಾಗ ಪಿತ್ತಾಶ್ಮ ಸಾಗುವಾಗ ಬಹಳ ಹೊಟ್ಟೆ ನೋವಾಗುತ್ತದೆ.
ಪಿತ್ತನಾಳಗಳಲ್ಲಿ ನಿರಿಚ್ಛಾ ಇಂದ್ರಿಯ ನರಗಳಿರುವುದರಿಂದ ಅವಕ್ಕೆ ರೋಗ ತಗುಲಿದಾಗ ಅವಿರುವುದು ನಮ್ಮ ಅರಿವಿಗೆ ಬರುತ್ತದೆ. ಆಗ ಬಲಭುಜದಲ್ಲಿ ತೀವ್ರ ನೋವು ಉಂಟಾಗುತ್ತದೆ. ಅನುಕಂಪ ನರಗಳು ಪೇಶಿಗಳನ್ನು ಸಡಿಲಿಸುತ್ತವೆ. ಪ್ರತ್ಯನುಕಂಪ ನರಗಳು ಪೇಶಿಸಂಕೋಚನವನ್ನು ಉಂಟುಮಾಡಿ ವೃತ್ತ ಪೇಶಿಯನ್ನು ಸಡಿಲಿಸುತ್ತವೆ. (ಎಂ.ಡಿ.)