ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಿನಾಸಿ ಹುಲ್ಲು

ವಿಕಿಸೋರ್ಸ್ದಿಂದ

ಪಿನಾಸಿ ಹುಲ್ಲು - ಲೆಗ್ಯೂಮಿನೋಸೀ ಕುಟುಂಬಕ್ಕೆ ಸೇರೊ ಒಂದು ದ್ವಿದಳ ಸಸ್ಯ (ಬರ್ ಕ್ಲೋವರ್). ಕುದುರೆ ಮಸಾಲೆ ಸೊಪ್ಪು ಅಥವಾ ಲೂಸರ್ನ್ ಸೊಪ್ಪಿನ (ಮೆಡಿಕ್ಯಾಗೊ ಸೇಟಿವ) ಹತ್ತಿರದ ಸಂಬಂಧಿ. ಅದರಂತೆಯೇ ಇದೂ ಕೂಡ ದನಕರು, ಕುದುರೆ, ಕುರಿ, ಒಂಟೆ ಮುಂತಾದುವಕ್ಕೆ ಒಳ್ಳೆಯ ಹಸುರು ಮೇವು ಎನಿಸಿದೆ. ಕೋಳಿಗಳಿಗೂ ಇದು ಒಳ್ಳೆಯ ತಿನಿಸು. ಮೆಡಿಕ್ಯಾಗೊ ಹಿಸ್ಪಿಡ ಇದರ ಶಾಸ್ತ್ರೀಯ ಹೆಸರು.

ಭಾರತಾದ್ಯಂತ ಕಾಣಬರುವ ಇದು ಪಂಜಾಬ್, ಹಿಮಾಲಯದ ತಪ್ಪಲು ಪ್ರದೇಶ, ಗಂಗಾ ನದಿಯ ಬಯಲು ಪ್ರದೇಶ, ಬಂಗಾಳದ ಉತ್ತರ ಭಾಗ, ತಮಿಳುನಾಡುಗಳಲ್ಲಿ ಪ್ರಧಾನವಾಗಿ ಬೆಳೆಯುತ್ತದೆ. ಇದು 60 ಸೆಂ.ಮೀ., ಎತ್ತರದವರೆಗೆ ಬೆಳೆಯುವ ದುರ್ಬಲ ಕಾಂಡೊ ಏಕವಾರ್ಷಿಕ ಸಸ್ಯ. ತಲಾ ಮೂರು ಕಿರುಪತ್ರಗಳಿಂದ ಕೂಡಿದ ಸಂಯುಕ್ತ ಮಾದರಿಯ ಎಲೆಗಳೂ ಹಳದಿಬಣ್ಣದ ಪುಟ್ಟ ಹೂಗಳೂ 2-4 ಸುತ್ತುಗಳಿಂದ ಕೂಡಿದ ಕಾಯಿಗಳೂ (ಬರ್ಸ್) ಇದರ ಲಕ್ಷಣಗಳಲ್ಲಿ ಕೆಲವು. ಕಾಯಿಗಳ ಮೇಲೆ ಸಣ್ಣ ಮುಳ್ಳುಗಳುಂಟು. ಪ್ರತಿ ಕಾಯಿಯಲ್ಲಿ ಅವರೆಕಾಳಿನಾಕಾರದ ಕಂದುಮಿಶ್ರಿತ ಹಳದಿ ಬಣ್ಣದ 3-5 ಬೀಜಗಳಿವೆ.

ಪಿನಾಸಿ ಹುಲ್ಲು ಚಳಿಗಾಲದಲ್ಲಿ ಹುಲುಸಾಗಿ ಬೆಳೆಯುವಂಥದು. ಎಂಥ ಮಣ್ಣಿನಲ್ಲಾದರೂ ಇದು ಬೆಳೆಯಬಲ್ಲದು. ಆದರೆ ತೇವ ಹೆಚ್ಚಾಗಿರುವಂಥ, ನೀರು ಸುಲಭವಾಗಿ ಬಸಿದುಹೋಗುವಂಥ ಕೊಂಚ ಕ್ಷಾರೀಯವಾಗಿರುವ ಗೋಡು ಮಣ್ಣಿನಲ್ಲಿ ತುಂಬಾ ಹುಲುಸಾಗಿ ಬೆಳೆಯುತ್ತದೆ. ಇದನ್ನು ಬೀಜಗಳ ಮೂಲಕ ವೃದ್ಧಿಸಬಹುದು. ಬೀಜವನ್ನು ಕಾಯಿಯಲ್ಲಿರುವಾಗಲೇ ಬಿತ್ತಬಹುದು. ಇಲ್ಲವೇ ಸಿಪ್ಪೆ ತೆಗೆದುಹಾಕಿ ಬಿತ್ತಬಹುದು. ಹೆಕ್ಟೇರಿಗೆ 25 ಕೆ.ಜಿ. ಬೀಜ ಬೇಕಾಗುತ್ತದೆ. ಇಳುವರಿ ಹೆಕ್ಟೇರಿಗೆ ಸುಮಾರು 15.000 ಕೆ.ಜಿ. ಪಿನಾಸಿ ಹುಲ್ಲನ್ನು ತರಕಾರಿಯಾಗಿ ಬಳಸುವುದೂ ಉಂಟು. ಅಲ್ಲದೆ, ಇದು ಒಳ್ಳೆಯ ಹಸುರು ಗೊಬ್ಬರವೂ ಹೌದು. (ಎಂ.)