ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೀಟ್ರ

ವಿಕಿಸೋರ್ಸ್ದಿಂದ

ಪೀಟ್ರ - ಜಾರ್ಡನ್ ರಾಜ್ಯದ ನೈಋತ್ಯ ಭಾಗದಲ್ಲಿ ಮೊರಾನ್ ನಗರದ ವಾಯುವ್ಯಕ್ಕೆ 26 ಕಿ.ಮೀ. ದೂರದಲ್ಲಿ, ಆಧುನಿಕ ವಾಡಿ ಮೂಸಕ್ಕೆ ಪಶ್ಚಿಮದಲ್ಲಿ ಇರುವ ಪ್ರಾಚೀನ ನಗರ. ಅರಬ್ಬಿಯಲ್ಲಿ ಬಾಟ್ರವೂ ಬೈಬಲ್‍ನ ಸೀಲವೂ ಆದ ಈ ನಗರದ ಗ್ರೀಕ್ ಹೆಸರು ಇದು. ಈ ನೆಲೆಯಲ್ಲಿ ಪುರಾತನ ಶಿಲಾಯುಗ ಮತ್ತು ಅಂತಿಮ ಶಿಲಾಯುಗದ ಆಯುಧೋಪಕರಣಗಳು, ಗುಹೆಗಳು, ನವಶಿಲಾಯುಗದ ಅವಶೇಷಗಳು ದೊರಕಿರುವುದರಿಂದ ಇಲ್ಲಿ ಅತ್ಯಂತ ಪ್ರಾಚೀನ ಕಾಲದಿಂದಲೂ ಜನವಸತಿ ಇದ್ದುದು ಖಚಿತವಾಗಿದೆ. ಪೀಟ್ರ ನಗರದ ಸ್ಥಾಪನೆ ಕಬ್ಬಿಣ ಯುಗದಲ್ಲಿ ಕ್ರಿ.ಪೂ. ಸು. 9 ನೆಯ ಶತಮಾನದಲ್ಲಿ ಆಯಿತು. ಆಗ ಇಲ್ಲಿ ವಾಸಿಸುತ್ತಿದ್ದ ಬೈರಟ್ ಪಂಗಡದ ಜನರನ್ನು ಸ್ವಲ್ಪ ಕಾಲದ ಅನಂತರ ಎಡೊಮೈಟ್ ಪಂಗಡದವರು ಹೊಡೆದೋಡಿಸಿದರು. ಕ್ರಿ.ಪೂ. ಸು. 312 ರ ವೇಳೆಗೆ ಅರಬ್ ಮೂಲದ ನಬಟಿಯನ್ನರು ಪೀಟ್ರವನ್ನು ಆಕ್ರಮಿಸಿದರು. ಮೆಡಿಟರೇನಿಯನ್ ಪ್ರದೇಶದ ವರ್ತಕರು ಕ್ಷಾರಸ್ತ್ಯ ದೇಶಗಳೊಂದಿಗೆ ನಡೆಸುತ್ತಿದ್ದ ಸಂಬಾರ ಪದಾರ್ಥಗಳ ವ್ಯಾಪಾರ ಪೂರ್ಣವಾಗಿ ಅವರ ವಶವಾಯಿತು. ಜೊತೆಗೆ ಇವರು ತಾಮ್ರದ ಅದುರನ್ನು ಅಗೆದು ತೆಗೆದು ಶುದ್ಧಗೊಳಿಸಿ ಆ ಲೋಹವನ್ನು ನೆರೆಹೊಯವರೊಂದಿಗೆ ಒದಗಿಸುತ್ತಿದ್ದರು. ಆಗಾಗ್ಗೆ ನಬಟಿಯನ್ನರ ಮತ್ತು ಸೆಲ್ಯೂಸಿಡ್ ಗ್ರೀಕರ ನಡುವೆ ಕದನಗಳಾಗುತ್ತಿದ್ದುದಾಗಿ ತಿಳಿದುಬರುತ್ತದೆ. ಗ್ರೀಕರು ಕ್ರಿ.ಪೂ. 3 ನೆಯ ಶತಮಾನದಲ್ಲಿ ಪೀಟ್ರವನ್ನು ಸೂರೆ ಮಾಡಿದರು. ಆದರೆ ಕ್ರಮೇಣ ಪ್ರಬಲರಾದ ನಬಟಿಯನ್ನರು ಕ್ರಿ. ಪೂ. 85 ರಲ್ಲಿ ಗ್ರೀಕರ ಮುಖ್ಯ ನಗರವಾದ ಡಮಾಸ್ಕಸನ್ನು ಕೊಳ್ಳೆ ಹೊಡೆದರು. ಉನ್ನತಿಯ ಹಾದಿಯಲ್ಲಿದ್ದ ಪೀಟ್ರ ವಿಸ್ತಾರವಾದ ರಾಜ್ಯದ ಕೇಂದ್ರವಾಗಿತ್ತು. ಕ್ರಿ. ಶ. 106 ರಲ್ಲಿ ರೋಮನರು ಪೀಟ್ರ ರಾಜ್ಯವನ್ನು ಗೆದ್ದು ತಮ್ಮ ಚಕ್ರಾಧಿಪತ್ಯದಲ್ಲಿ ವಿಲೀನಗೊಳಿಸಿದರು. ಸ್ವಲ್ಪ ಕಾಲದ ಅನಂತರ ಮಧ್ಯ ಪ್ರಾಚ್ಯದ ವ್ಯಾಪಾರ ಮಾರ್ಗಗಳು ಸ್ಥಳಾಂತರಗೊಂಡವು. ಹೊಸ ವ್ಯಾಪಾರ ಮಾರ್ಗಗಳು ಪರ್ಷಿಯನ್ ಖಾರಿಯ ಮೂಲಕ ಹಾದು ಹೋಗುತ್ತಿದ್ದುದರಿಂದ ಪೀಟ್ರ ನಗರದ ಪ್ರಾಮುಖ್ಯ ಕಡಿಮೆಯಾಯಿತು. ಹೊಸದಾಗಿ ಬೆಳೆಯಲಾರಂಭಿಸಿದ ಪಾಮಿರ ಪ್ರಾಮುಖ್ಯ ಗಳಿಸಿತು. ಸ್ವಲ್ಪ ಕಾಲದ ಬಳಿಕ ಆ ಸುತ್ತಿನಲ್ಲಿ ಕ್ರೈಸ್ತ ಧರ್ಮ ಪ್ರಬಲವಾಯಿತು. ಪೀಟ್ರದಲ್ಲಿ ಕ್ರೈಸ್ತ ಧರ್ಮಗುರುವಿನ ಪೀಠ ಸ್ಥಾಪಿತವಾಯಿತು. 7 ನೆಯ ಶತಮಾನದ ವೇಳೆಗೆ ಇದರ ಪ್ರಾಮುಖ್ಯ ತಗ್ಗಿತು. ಇಸ್ಲಾಮಿನ ಆಶ್ರಯದಲ್ಲಿ ಇದು ಮತ್ತೆ ಉಚ್ಛ್ರಾಯ ಸ್ಥಿತಿಗೆ ಬಂತು. 12 ನೆಯ ಶತಮಾನದಲ್ಲಿ ಇಸ್ಲಾಮ್ ಮತ್ತು ಕ್ರೈಸ್ತಧರ್ಮಗಳ ನಡುವೆ ಘರ್ಷಣೆಗಳು ಸಂಭವಿಸಿದವು. ಧರ್ಮಯುದ್ಧದಲ್ಲಿ ತೊಡಗಿದ್ದ ಕ್ರೈಸ್ತರು ಪೀಟ್ರ ನಗರದಲ್ಲಿ ಕೋಟೆ ಕಟ್ಟಿ, ಪ್ರಾಚೀನ ನಗರದ ನೆನಪಾಗಿ ಸೀಲ ಎಂದು ಇದನ್ನು ಕರೆದರೂ ಮತ್ತೆ ಪೀಟ್ರ ಅವನತಿಗೆ ಈಡಾಯಿತು. ಮರೆತು ಹೋಗಿದ್ದ ಈ ನಗರವನ್ನು ಸ್ವಿಸ್ ಪ್ರವಾಸಿ ಜಿ. ಎಲ್. ಬರ್ಕ್‍ಹಾರ್ಡ್ 1812 ರಲ್ಲಿ ಬೆಳಕಿಗೆ ತಂದ.

ಸುತ್ತಲೂ ಬೆಟ್ಟಗಳಿಂದ ಆವೃತವಾದ ಪೀಟ್ರದ ನಿವೇಶನವನ್ನು 1.6 ಕಿ.ಮೀ. ಉದ್ದದ ಕಮರಿಯ ಮೂಲಕ ಪ್ರವೇಶಿಸಬಹುದು. ನಬಟಿಯನ್ನರು ಸಿಕ್ ಎಂಬ ಹೆಸರಿನ ಆ ಕಮರಿಯನ್ನು ಸುಮಾರು 4 ಮೀ.ಗಳಷ್ಟು ಅಗಲಗೊಳಿಸಿ ಕಲ್ಲು ಚಪ್ಪಡಿಗಳನ್ನು ನೆಲಕ್ಕೆ ಹಾಸಿ ರಸ್ತೆಯನ್ನು ನಿರ್ಮಿಸಿದ್ದರು. ಪೀಟ್ರ ನಗರದವರೆಗಿನ ಆ ರಸ್ತೆ ಅಲ್ಲಿಂದ ಬೇರೆ ಬೇರೆ ಎಡೆಗಳಿಗೆ ಹೋಗುವ ರಸ್ತೆಗಳಿಗೆ ಸಂಪರ್ಕ ಕಲ್ಪಿಸಿತ್ತು. ಕಮರಿಯ ಇಬ್ಬದಿಗಳಲ್ಲಿ 91 ಮೀ. ಎತ್ತರದ ಬಂಡೆಗಳ ಮೇಲೆ ನಗರದ ಮುಖ್ಯ ದೈವವಾದ ದುಸಾರೆಸನ್ ಲಾಂಛನಗಳನ್ನು ಕೆತ್ತಲಾಗಿತ್ತು. ರಸ್ತೆಯ ಪಕ್ಕದ ಕಲ್ಲುಬಂಡೆಗಳಲ್ಲಿ ಕಂಬಗಳಿಂದ ಕೂಡಿದ ಮುಖಭಾಗವಿರುವ ಕೆಲವು ಗುಹೆಗಳನ್ನು ಜೀರ್ಣಾವಸ್ಥೆಯಲ್ಲಿರುವ ಒಂದು ಕಮಾನು ಬಾಗಿಲನ್ನೂ ಕಾಣಬಹುದು. ಗುಹಾ ಮಂದಿರಗಳ ಪೈಕಿ 2 ನೆಯ ಶತಮಾನದ ಫೇರೋನ ಭಂಡಾರವೆಂಬ ಹೆಸರಿನ ಅಲ್ ಖಜ್ನಾ ಪ್ರಮುಖವಾದದ್ದು. ಗುಲಾಬಿಗೆಂಪು ಕಲ್ಲಿನಲ್ಲಿ ಆ ಮಂದಿರದ ಮುಖ ಭಾಗವನ್ನು ಕೆತ್ತಲಾಗಿದೆ. ಆ ಕೊಳ್ಳದ ಬೆಟ್ಟಗುಡ್ಡಗಳ ಬಂಡೆಗಳನ್ನು ಲಂಭಾಕಾರದ ಫಲಕಗಳಂತೆ ಸಮಗೊಳಿಸಿ ಅವುಗಳ ಮೇಲೆ ಮಂದಿರಗಳ, ಗುಡಿಗಳ, ಅರಮನೆಗಳ ಅಥವಾ ಸಾಮಾನ್ಯ ವಸತಿಗಳ ಮುಖಭಾಗವನ್ನು ರೂಪಿಸಲಾಗಿದೆ. ಮುಖಭಾಗದ ಚಚ್ಚೌಕನಾದ ಬಾಗಿಲುಗಳ ಮೂಲಕ ಹಿಂಬದಿಯ ವಿಶಾಲವಾದ ಗುಹಾ ಕೋಣೆಗಳನ್ನು ಪ್ರವೇಶಿಸಬಹುದಿತ್ತು. ಈ ಗುಹಾಕೋಶಗಳು ಸಮಾಧಿಗಳೆನ್ನಲಾಗಿದ್ದರೂ ಈಗ ವಾಸಗೃಹಗಳನ್ನಾಗಿ ಬಳಸಲಾಗುತ್ತಿದೆ. ಸುತ್ತಣ ಬೆಟ್ಟ ಗುಡ್ಡಗಳಲ್ಲಿ ಚಾತುರ್ಯದಿಂದ ನಿರ್ಮಿಸಿದ ಹಲವು ಕಾಲುವೆಗಳೂ ತೊಟ್ಟಿಗಳೂ ಇವೆ. ನಬಟಿಯನ್ ಯಂತ್ರಶಿಲ್ಪಿಗಳು ಮಳೆಯ ನೀರನ್ನು ವರ್ಷವಿಡೀ ಜಾಗ್ರತೆಯಾಗಿ ಸಂರಕ್ಷಿಸಲು ಬಳಸುತ್ತಿದ್ದ ತಂತ್ರಗಳಿಗೆ ಇವು ಸಾಕ್ಷಿಗಳಾಗಿವೆ.

1958 ರಿಂದ ಇಲ್ಲಿ ನಡೆಸಿದ ಉತ್ಖನಗಳಲ್ಲಿ ರೋಮನ್-ಪೂರ್ವದ ಮಣ್ಣಿನ ಗೋಡೆಗಳ ಮನೆಗಳು ಮತ್ತು ಕ್ರಿ.ಪೂ. 290 ರಲ್ಲಿ ಆಳಿದ ಫಿನಿಷಿಯನ್ ದೊರೆ ಅರಾಡಸನ ನಾಣ್ಯಗಳು, ವರ್ಣಚಿತ್ರಿತ ಮತ್ತು ಸರಳ ನಬಟಿಯನ್ ಮಣ್ಣಿನ ಪಾತ್ರೆಗಳು ಮುಂತಾದ ಅವಶೇಷಗಳು ಸಿಕ್ಕಿವೆ. ಕ್ರಿ. ಶ. 1 ನೆಯ ಶತಮಾನದ ನಬಟಿಯನ್ನರ ವಾಸಗೃಹಕ್ಕೆ ಸೇರಿದ ಈಗಲೂ 3 ಮೀ. ಎತ್ತರದವರೆಗೆ ಉಳಿದಿರುವ, ಗೋಡೆಗಳನ್ನು ಕಲ್ಲಿನ ದಿಮ್ಮಿಗಳಿಂದ ಕಟ್ಟಲಾಗಿದೆ. ಗೋಡೆಗಳ ಒಳಮುಖವನ್ನು ಬಣ್ಣದ ಮೆತುಗಾರೆಯಿಂದ ನಯಗೊಳಿಸಲಾಗಿದೆ. 2 ನೆಯ ಶತಮಾನದ, ಬಾಲಿಕೆಯ ಕೋಟೆಮನೆ ಎಂದು ಹೆಸರಾದ, ಮತ್ತೊಂದು ಕಟ್ಟಡ ಕಂಡುಬಂದಿದೆ. ರೋಮನರ ಕಾಲದಲ್ಲಿ ಕಿರಿದಾದ ನಗರದ ವಿಸ್ತೀರ್ಣ ಸುಮಾರು 4 ಚ.ಕಿ.ಮೀ. ಆಗಿತ್ತು. ಆ ಕಾಲದ ವಾಸ್ತು ನಿರ್ಮಾಣಗಳಲ್ಲಿ ಪ್ರಮುಖನಾಗಿದ್ದ ವರ್ತುಲಾಕಾರದ ಪ್ರೇಕ್ಷಾಂಗಣದಲ್ಲಿದ್ದ 36 ಸಾಲುಗಳ ಆಸನಗಳು ಸುಮಾರು 3,000 ಮಂದಿಗೆ ಸ್ಥಳವನ್ನೊದಗಿಸುತ್ತಿದ್ದವು. ಪೀಟ್ರದ ಸಮಾಧಿಗೃಹಗಳ ಮೇಲಿರುವ ನಬಟಿಯನ್ ಅಥವಾ ಲ್ಯಾಟಿನ್ ಶಾಸನಗಳು ಅವುಗಳ ಮಾಲಿಕರ ಹೆಸರುಗಳನ್ನು ತಿಳಿಸುತ್ತವೆ.

ನಬಟಿಯನ್ ದೇವಾಲಯಗಳು ಚಾವಣಿಯಿಲ್ಲದ ಸರಳ ತಳವಿನ್ಯಾಸದವಾಗಿದ್ದವು. ಕಲ್ಲನ್ನು ಕೊರೆದು ತೆಗೆದು ನಿರ್ಮಿಸಿದ ವಿಶಾಲ ಪ್ರಾಂಗಣದಲ್ಲಿ ವೇದಿಕೆ ಮತ್ತು ಬಲಿ ಪೀಠಗಳನ್ನು ನಿರ್ಮಿಸಲಾಗುತ್ತಿತ್ತು. ದೇವತೆಗಳನ್ನು ಕಲ್ಲಿನ ದಿಮ್ಮಿ ಅಥವಾ ಸ್ಮಾರಕ ಸ್ತಂಭದ ಆಕಾರದಲ್ಲಿ ರೂಪಿಸಲಾಗುತ್ತಿತ್ತು. ನಬಟಿಯನ್ನರ ದೇವತೆಗಳಲ್ಲಿ ಅಲ್ ಉಜ್ಜಾ, ಆಕೆಯ ಪುತ್ರ ಧುಲ್ ಷಾರ (ದುಷಾರ, ದುಸಾರಸ್) ಮುಖ್ಯರು. ಶಂಕುವಿನ ಆಕಾರದ ಅಥವಾ ಚಚ್ಚೌಕವಾದ, ಕ್ರಮೇಣ ಸಣ್ಣದಾಗಿ ಮೇಲ್ತುದಿಯಲ್ಲಿ ಸಮತಲ ಸ್ತಂಭದಂತಿರುವ ಸ್ಮಾರಕ ಶಿಲೆಗಳು ಆ ದೇವತೆಗಳ ಪ್ರತೀಕಗಳು. (ಬಿ.ಕೆ.ಜಿ.)