ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುಟ್ಟಯ್ಯ, ಬೆಂಗಳೂರು
ಪುಟ್ಟಯ್ಯ, ಬೆಂಗಳೂರು 1879-1944. ಸಮಾಜ ಸೇವಕರು, ಮುದ್ರಣಕಾರರು, ಲೇಖಕರು. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ 1902ರಲ್ಲಿ ಪದವೀಧರರಾದರು. ಸ್ವಲ್ಪ ಕಾಲ ಚಿತ್ರದುರ್ಗದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದು, ಒಕ್ಕಲಿಗರ ಸಂಘ ಹುಟ್ಟಿಕೊಂಡ ತರುಣದಲ್ಲಿ ಅದರ ಮುಖ್ಯ ಕಾರ್ಯದರ್ಶಿಯಾಗಿ, ಒಕ್ಕಲಿಗರ ಪತ್ರಿಕೆಯ ಸಂಪಾದಕರಾಗಿ, ಮುದ್ರಣಾಲಯದ ಮೇಲ್ವಿಚಾರಕರಾಗಿ ಕೆಲಸ ಮಾಡಿದರು. 1908ರಲ್ಲಿ ಮುದ್ರಣ ಉಮೇದುವಾರರನ್ನು ಚುನಾಯಿಸಲು ಸರಕಾರ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ವರ್ಗದಲ್ಲಿ ಉತ್ತೀರ್ಣರಾಗಿ ಮುದ್ರಣಕಲೆಯಲ್ಲಿ ವಿಶೇಷ ಶಿಕ್ಷಣ ಪಡೆಯಲು ಲಂಡನ್ನಿಗೆ ಹೋಗಿ ಮೂರು ವರ್ಷ ಕಾಲ ಅಲ್ಲಿನ ಪ್ರಸಿದ್ಧ ಮುದ್ರಣಾಲಯವೊಂದರಲ್ಲಿ ಮುದ್ರಣ ಕಲೆಯ ಎಲ್ಲ ಭಾಗಗಳಲ್ಲಿಯೂ ಶಿಕ್ಷಣ ಹೊಂದಿ ಉತ್ತಮ ಪ್ರಶಸ್ತಿ ಪಡೆದು 1915ರಲ್ಲಿ ಸ್ವದೇಶಕ್ಕೆ ಹಿಂದಿರುಗಿದರು. ವಿದೇಶದ ತಮ್ಮ ಅನುಭವಗಳನ್ನು ಪತ್ರರೂಪವಾಗಿ ವಾರವಾರ ಒಕ್ಕಲಿಗರ ಪತ್ರಿಕೆಯಲ್ಲಿ ಪ್ರಕಟಿಸಿದರು. ಅವು ಅಭಿವೃದ್ಧಿ ಸಂದೇಶ ಎಂಬ ಹೆಸರಿನಿಂದ ಪುಸ್ತಕ ರೂಪದಲ್ಲಿ 1921ರಲ್ಲಿ ಪ್ರಕಟವಾದುವು.
ಬೆಂಗಳೂರು ನಗರದಲ್ಲಿ ಈ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು, ಮಿತಿಕ್ ಸೊಸೈಟಿ, ಸಾಮಾಜಿಕ ಪೌರ ಪುರೋಭಿವೃದ್ಧಿ ಸಂಘ ಮೊದಲಾದ ಸಂಸ್ಥೆಗಳು ಹುಟ್ಟಿಕೊಂಡಿದ್ದುವು. ಈ ಸಂಸ್ಥೆಗಳ ಕಾರ್ಯಕಲಾಪಗಳಲ್ಲಿ ಪುಟ್ಟಯ್ಯನವರು ಮುಖ್ಯ ಪಾತ್ರ ವಹಿಸಿದರು. ಮಿತಿಕ್ ಸೊಸೈಟಿ ಪತ್ರಿಕೆಯಲ್ಲಿ ಚಿಕ್ಕದೇವರಾಜ ಒಡೆಯರ ಆಡಳಿತ ವ್ಯವಸ್ಥೆ, ಕೆಂಪೇಗೌಡ ಪ್ರಭುಗಳ ಚರಿತ್ರೆ. ಮೈಸೂರು ರತ್ನ ಸಿಂಹಾಸನದ ಕಥೆ ಮುಂತಾದ ಪ್ರಬಂಧಗಳು ಪ್ರಕಟವಾದವು. 1923ರಲ್ಲಿ ಅವರು ಸರಕಾರಿ ಮುದ್ರಣಾಲಯದ ನಿರ್ದೇಶಕರಾಗಿ ನೇಮಕವಾದರು. ಹತ್ತು ವರ್ಷಗಳ ಕಾಲ ಆ ಅಧಿಕಾರದಲ್ಲಿದ್ದು ಮುದ್ರಣಾಲಯವನ್ನು ಅಭಿವೃದ್ಧಿಪಡಿಸಿ 1933 ರಲ್ಲಿ ನಿವೃತ್ತರಾದರು. ಆಮೇಲೆ ಸಾಹಿತ್ಯ ಪರಿಷತ್ತಿನ ಅಚ್ಚುಕೂಟ, ದೇಶಬಂಧು ಮುದ್ರಣಾಲಯಗಳನ್ನು ಸ್ಥಾಪಿಸಿದರು. ಇಂಗ್ಲಿಷ್, ಕನ್ನಡ ನಿಘಂಟಿನ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಸೆನೆಟರಾಗಿಯೂ ಕೆಲಕಾಲ ಕೌನ್ಸಿಲರಾಗಿಯೂ ಸೇವೆ ಸಲ್ಲಿಸಿದರು. 1944ರ ಡಿಸೆಂಬರ್ ತಿಂಗಳಲ್ಲಿ ನಡೆದ ರಬಕವಿಯ ಸಾಹಿತ್ಯ ಸಮ್ಮೇಳನದಲ್ಲಿ ಪಾತ್ರ ವಹಿಸಲು ಹೋದವರು ಹಠಾತ್ತನೆ ವರ್ಷದ ಕೊನೆಯ ದಿನ ದೈವಾಧೀನರಾದರು. (ಬಿ.ಪಿ.ಆರ್.)