ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುನವರ್ಯ್‌ವಸ್ಥೆ

ವಿಕಿಸೋರ್ಸ್ದಿಂದ

ಪುನವ್ರ್ಯವಸ್ಥೆ - ಪ್ರಾಂಕ್ಲಿನ್ ಡಿ. ರೊಸ್ವೆಲ್ಟರು ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾದಾಗ ಜಾರಿಗೆ ತಂದ ರಾಜಕೀಯ ನೀತಿಗಳು ಹಾಗೂ ಕ್ರಮಗಳನ್ನು ನ್ಯೂಡೀಲ್ ಅಥವಾ ಪುನವ್ರ್ಯವಸ್ಥೆ ಎಂದು ಕರೆಯಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ತಮ್ಮ ನಾಮಕರಣವನ್ನು ಒಪ್ಪಿಕೊಂಡ ಸಂದರ್ಭದಲ್ಲಿ (2 ಜುಲೈ 1932) ಅವರು ಮೊದಲು ನ್ಯೂ ಡೀಲ್ ಎಂಬ ಶಬ್ದವನ್ನು ಬಳಸಿದರು. 1933 ರಲ್ಲಿ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಆ ದೇಶ ತನ್ನ ಇತಿಹಾಸದಲ್ಲೇ ಎಂದೂ ಕಾಣದಷ್ಟು ಚಿಂತಾಜನಕವಾದ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿತ್ತು. ಒಂದನೆಯ ಮಹಾಯುದ್ಧದ ಅನಂತರ ದೇಶ ಎಂಥ ಆರ್ಥಿಕ ಉನ್ನತಿಯನ್ನು ಸಾಧಿಸಿತ್ತೆಂದರೆ, ಇನ್ನೆಂದೂ ಅದು ಕುಸಿಯಲಾರದೆಂದು ಅಮೆರಿಕದ ಜನತೆ ಭಾವಿಸಿತ್ತು. ಆದರೆ, 1929 ರಲ್ಲಿ, ಒಮ್ಮಿಂದೊಮ್ಮೆಲೆ ಆರ್ಥಿಕ ವ್ಯವಸ್ಥೆ ಮುಗ್ಗರಿಸಿತು, ಬೆಲೆಗಳು ಕುಸಿದುವು, ಉತ್ಪಾದನೆ ತಗ್ಗಿತು, ನಿರುದ್ಯೋಗ ಹೆಚ್ಚಿತು. 1933 ರಲ್ಲಿ 1.4 ಕೋಟಿ ನಿರುದ್ಯೋಗಿಗಳಿದ್ದರು. ವ್ಯವಸಾಯ, ಕೈಗಾರಿಕೆ ಮುಂತಾದ ಎಲ್ಲ ರಂಗಗಳಲ್ಲೂ ನಿರಾಶೆ ಮೂಡಿತ್ತು. ಅನೇಕ ಬ್ಯಾಂಕುಗಳು ದಿವಾಳಿ ತೆಗೆದವು. ಜನತೆಯ ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಒಪ್ಪದ ಅಮೆರಿಕದ ಜನತೆ ಆಗ ಸರ್ಕಾರದ ಪ್ರವೇಶವನ್ನು ನಿರೀಕ್ಷಿಸತೊಡಗಿತು. ಅಮೆರಿಕ ಎದುರಿಸಬೇಕಾಗಿ ಬಂದ ಈ ಆರ್ಥಿಕ ಮುಗ್ಗಟ್ಟು 1873 ರ ಅಥವಾ 1893 ರ ಮುಗ್ಗಟ್ಟಿಗಿಂತಲೂ ಹೆಚ್ಚು ಭಯಾನಕವಾಗಿತ್ತು. ಇದರ ಪರಿಣಾಮವನ್ನು ಎಲ್ಲ ದೇಶಗಳು ಅನುಭವಿಸಬೇಕಾಯಿತು. ಇಂಥ ಒಂದು ಪರಿಸ್ಥಿತಿಯಲ್ಲಿ ರೂಸ್ವೆಲ್ಟರು 1833 ರಲ್ಲಿ ಅಧಿಕಾರಕ್ಕೆ ಬಂದರು. ಅವರು ಈ ಮುಗ್ಗಟ್ಟನ್ನು ಎದುರಿಸಲು ಅನೇಕ ಹೊಸ ನೀತಿಗಳನ್ನು ರೂಪಿಸಬೇಕಾಯಿತು. ಹೊಸ ಕ್ರಮಗಳನ್ನು ತೆಗೆದುಕೊಳ್ಳಬೇಕಾಯಿತು. ಇವಕ್ಕೆಲ್ಲ ಒಟ್ಟಿನಲ್ಲಿ ಈ ಹೆಸರನ್ನು ಕೊಡಲಾಗಿದೆ.

ಆರ್ಥಿಕ ಮುಗ್ಗಟ್ಟು 1829 ರಲ್ಲಿಯೇ ಕಾಣಿಸಿಕೊಂಡಿತಾದರೂ ಆಗ ಅಧ್ಯಕ್ಷರಾಗಿದ್ದ ಹೂವರರ ಆಡಳಿತ ಸಾಕಷ್ಟು ಕ್ರಮಗಳನ್ನು ಕೈಗೊಂಡಿರಲಿಲ್ಲ. ಆದ್ದರಿಂದ ಪರಿಸ್ಥಿತಿ ಹದಗೆಟ್ಟಿತ್ತು. 1833 ರಲ್ಲಿ ಅಧ್ಯಕ್ಷ ರೂಸ್ವೆಲ್ಟರು ಅಧಿಕಾರಕ್ಕೆ ಬಂದ ಕೂಡಲೇ ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಅಧಿನಿಯಮಗಳನ್ನು ಜಾರಿಗೆ ತಂದು ಅನೇಕ ಕ್ರಮಗಳನ್ನು ಕೈಕೊಳ್ಳಲಾಯಿತು. ಇವನ್ನೆಲ್ಲ ಎರಡು ಗುಂಪುಗಳಾಗಿ ವಿಂಗಡಿಸಬಹುದು. ಒಂದು ಗುಂಪಿಗೆ ಪರಿಹಾರ ಹಾಗೂ ಪುನಶ್ಚೇತನ ಕ್ರಮಗಳೆಂದೂ ಇನ್ನೊಂದು ಗುಂಪಿಗೆ ಸುಧಾರಣೆ ಹಾಗೂ ಪುನರ್ರಚನೆಯ ಕ್ರಮಗಳೆಂದೂ ಹೇಳಲಾಗಿದೆ.

ಮೊದಲನೆಯ ಗುಂಪಿಗೆ ಸೇರಿದ ಕ್ರಮಗಳಲ್ಲಿ ಮಾರ್ಚ್ 1933 ರ ನಿರುದ್ಯೋಗ ಪರಿಹಾರ ಅಧಿನಿಯಮವನ್ನು ಸೇರಿಸಬಹುದು. ಅನೇಕ ಸರ್ಕಾರಿ ಕಾಮಗಾರಿಗಳನ್ನು ಆರಂಭಿಸಿ ಜನರಿಗೆ ಉದ್ಯೋಗ ದೊರಕಿಸಿಕೊಡುವುದು ಹಾಗೂ ಅವರಿಗೆ ಇತರ ಅನೇಕ ಸವಲತ್ತುಗಳನ್ನು ಒದಗಿಸುವುದು ಈ ಅಧಿನಿಯಮದ ಅಡಿಯಲ್ಲಿ ಸಾಧ್ಯವಾಯಿತು. ಮೇ. 1933 ರಲ್ಲಿ ಜಾರಿಗೆ ಬಂದ ಸಂಯುಕ್ತ ಸರ್ಕಾರದ ಗಂಡಾಂತರ ಪರಿಹಾರ ಅಧಿನಿಯಮ ಇನ್ನೊಂದು. ರಾಜ್ಯ ಸರ್ಕಾರಗಳು ಕೈಗೊಳ್ಳುವ ನಿರುದ್ಯೋಗ ಪರಿಹಾರ ಕ್ರಮಗಳಿಗೆ ಧನಸಹಾಯ ಒದಗಿಸಲು ಈ ಅಧಿನಿಯಮದಿಂದ ಅನುಕೂಲವಾಯಿತು. 1933 ರ ಜೂನ್ ತಿಂಗಳಲ್ಲಿ ಜಾರಿಗೆ ಬಂದ ರಾóಷ್ಟ್ರೀಯ ಉದ್ಯೋಗ ಸೇವಾ ಅಧಿನಿಯಮದಿಂದಾಗಿ ದೇಶಾದ್ಯಂತ ಸಾರ್ವಜನಿಕ ಉದ್ಯೋಗ ದೊರಕಿಸುವ ಕಚೇರಿಗಳನ್ನು ತೆರೆಯಲಾಯಿತು. ರಾಷ್ಟ್ರೀಯ ಕೈಗಾರಿಕಾ ಪುನಶ್ಚೇತನ ಅಧಿನಿಯಮ ಜೂನ್ 1933 ರಲ್ಲಿ ಜಾರಿಗೆ ಬಂದಾಗ ನಿರುದ್ಯೋಗ ನಿವಾರಣೆಗೆ ಎಷ್ಟೋ ಅನುಕೂಲವಾಯಿತು. ಇದಲ್ಲದೆ ನಿರುದ್ಯೋಗದ ಶಾಶ್ವತ ಪರಿಹಾರಕ್ಕಾಗಿ 1935 ರಲ್ಲಿ ಸಾಮಾಜಿಕ ಭದ್ರತಾ ಅಧಿನಿಯಮ ಜಾರಿಗೆ ಬಂದು ಮಕ್ಕಳ ಕಲ್ಯಾಣ, ಹೆರಿಗೆ ಸೌಲಭ್ಯ, ವೃದ್ಧರಿಗೆ ನಿವೃತ್ತಿ ವೇತನ ಸೌಕರ್ಯ, ನಿರುದ್ಯೋಗ ವಿಮಾ ಯೋಜನೆ ಮುಂತಾದ ಕ್ರಮಗಳು ಕಾರ್ಯಗತವಾದುವು.

ಕೈಗಾರಿಕೋದ್ಯಮಗಳಿಗೆ ಸಹಾಯಕವಾಗುವಂತೆ 1933 ರಲ್ಲಿ ರಾಷ್ಟ್ರೀಯ ಕೈಗಾರಿಕಾ ಪುನಶ್ಚೇತನ ಅಧಿನಿಯಮವನ್ನು ಜಾರಿಗೆ ತರಲಾಯಿತು. ಯೋಗ್ಯ ಸ್ಪರ್ಧೆಗೆ ಅಗತ್ಯವಾದ ನಿಯಮಾವಳಿಗಳ ರಚನೆ, ಕಾರ್ಮಿಕ ಸಂಘಗಳ ಸ್ಥಾಪನೆ, ಸಾಮೂಹಿಕ ಕರಾರು ಮಾಡಿಕೊಳ್ಳುವ ಸಾಮಥ್ರ್ಯವನ್ನು ಬೆಳೆಯಗೊಡುವುದು, ದೇಶದ ಕೈಗಾರಿಕೆಗಳನ್ನು ವಿದೇಶಿ ಸ್ಪರ್ಧೆಯಿಂದ ರಕ್ಷಿಸುವುದು, ಮುಂತಾದ ಅವಶ್ಯವಾದ ಅಧಿಕಾರಗಳು ಈ ಅಧಿನಿಯಮದ ಮೂಲಕ ಅಧ್ಯಕ್ಷರಿಗೆ ಪ್ರಾಪ್ತವಾದವು. ಈ ಅಧಿನಿಯಮದ ಒಳ್ಳೆಯ ಪರಿಣಾಮ ಕೂಡಲೇ ಕಂಡುಬಂತು. 1933 ರಲ್ಲಿ ಕೆಲಸ ದೊರೆತವರ ಸಂಖ್ಯೆ ಸೇಕಡ 37 ರಷ್ಟು, ಕೂಲಿಯ ದರಗಳು ಸೇ. 25 ರಷ್ಟು ಏರಿದವು. ಕೈಗಾರಿಕಾ ಹುಟ್ಟುವಳಿಯೂ ಗಣನೀಯವಾಗಿ ಏರಿತು. ಆದರೆ ಈ ಅಧಿನಿಯಮ ಸಂವಿಧಾನ ಬಾಹಿರವಾದ್ದೆಂದು 1935 ರಲ್ಲಿ ಅಲ್ಲಿಯ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿತು. ಆದ್ದರಿಂದ ಇದರ ಉತ್ತಮ ಅಂಶಗಳನ್ನು ಆ ವರ್ಷ ಜಾರಿಗೆ ತಂದ ವ್ಯಾಗ್ನರ್ ಅಧಿನಿಯಮದಲ್ಲಿ ಸೇರಿಸಲಾಯಿತು. ವ್ಯವಸಾಯ ವಲಯದಲ್ಲಿ ಕೃಷಿಯ ಹುಟ್ಟುವಳಿಯ ದರಗಳನ್ನು ಏರಿಸಲು 1933 ರಲ್ಲಿ ಕೃಷಿ ಸಮಂಜನ (ಅಡ್ಜಸ್ಟ್‍ಮೆಂಟ್) ಅಧಿನಿಯಮವನ್ನು ಜಾರಿಗೆ ತರಲಾಯಿತು. ಉತ್ಪಾದನಾ ಕ್ಷೇತ್ರವನ್ನು ಕಡಿಮೆ ಮಾಡಲು ಈ ಅಧಿನಿಯಮ ಅವಕಾಶ ನೀಡಿತು. ಹೀಗೆ ಕಡಿಮೆ ಮಾಡುವವರಿಗೆ ಯೋಗ್ಯ ಪರಿಹಾರವನ್ನು ಸರ್ಕಾರ ಕೊಡಲು ಅವಕಾಶ ನೀಡಿತು. ಇದರಿಂದ ಕೃಷಿ ಉತ್ಪನ್ನಗಳ ಬೆಲೆಗಳು ಏರಲು ಸಾಧ್ಯವಾಯಿತು. ಈ ಅಧಿನಿಯಮ ಸಂವಿಧಾನ ಬಾಹಿರವೆಂದು ನ್ಯಾಯಾಲಯ ತೀರ್ಮಾನಿಸಿತು. ಆದ್ದರಿಂದ 1938 ರಲ್ಲಿ ಕೃಷಿಕ್ಷೇತ್ರ ಅಧಿನಿಯಮವನ್ನು ಜಾರಿಗೆ ತಂದು ಮೊದಲಿನ ಅಧಿನಿಯಮದ ಮುಖ್ಯಾಂಶಗಳನ್ನು ಉಳಿಸಿಕೊಳ್ಳಲಾಯಿತು. ಹಣಕಾಸಿನ ವಿಚಾರದಲ್ಲೂ ಸರ್ಕಾರ ಕ್ರಮ ತೆಗೆದುಕೊಂಡಿತು. ಬೆಲೆಗಳನ್ನು ಏರಿಕೆಯ ಸ್ಥಿತಿಗೆ ತರುವುದಕ್ಕಾಗಿ ಹಣದ ಹಾಗೂ ಉದ್ದರಿಯ ಪರಿಮಾಣವನ್ನು ಹೆಚ್ಚಿಸಲಾಯಿತು. ಅಲ್ಲದೆ 1933 ರ ಏಪ್ರಿಲ್ ತಿಂಗಳಲ್ಲಿ ಸುವರ್ಣ ಪ್ರಮತಿಯನ್ನೇ ಬಿಟ್ಟಿಕೊಡಲಾಯಿತು. ಇದರಿಂದ ಹಣದ ವಿಸ್ತರಣೆಗೆ ಅವಕಾಶ ದೊರಕಿತು. 1934 ರ ಬೆಳ್ಳಿಯನ್ನು ಕೊಳ್ಳುವ ಅಧಿನಿಯಮದ ಪ್ರಕಾರ ಅಧಿಕ ಬೆಲೆಯಲ್ಲಿ ಬೆಳ್ಳಿಯನ್ನು ಕೊಳ್ಳಲಾಯಿತು. ಇವೆಲ್ಲ ಕ್ರಮಗಳಿಂದ ನಿಯಂತ್ರಿತ ರೀತಿಯಲ್ಲಿ ಹಣದ ಪ್ರಸರಣವನ್ನು ಅಧಿಕಗೊಳಿಸಲಾಯಿತು. ಬೆಲೆಗಳು ಗಣನೀಯವಾಗಿ ಹೆಚ್ಚುವ ಪ್ರವೃತ್ತಿಗಳು ತಲೆದೋರಿದುವು.

ಇನ್ನು ಸುಧಾರಣೆ ಹಾಗೂ ಪುನರ್ರಚನೆಯ ಗುಂಪಿಗೆ ಸೇರಿದ ಕ್ರಮಗಳ ಪೈಕಿ 1938 ರ ಬ್ಯಾಂಕಿಂಗ್ ಅಧಿನಿಯಮ ಒಂದು. ಇದರ ಅಡಿಯಲ್ಲಿ ಫೆಡರಲ್ ರಿಸರ್ವ್ ಬೋರ್ಡಿಗೆ (ಕೇಂದ್ರೀಯ ಬ್ಯಾಂಕಿಂಗ್ ವ್ಯವಸ್ಥೆ) ಹೆಚ್ಚಿನ ಅಧಿಕಾರ ಕೊಡಲಾಯಿತಲ್ಲದೆ, ಬ್ಯಾಂಕುಗಳು ಹಣವನ್ನು ಸಟ್ಟಾ ವ್ಯಾಪಾರಕ್ಕಾಗಿ ಸಾಲ ಕೊಡುವುದನ್ನು ತಡೆ ಹಿಡಿಯಲಾಯಿತು. 1935 ರ ಬ್ಯಾಂಕಿಂಗ್ ಅಧಿನಿಯಮದ ಪ್ರಕಾರ ಫೆಡರಲ್ ರಿಸರ್ವ್ ಬೋರ್ಡಿನ ಅಧಿಕಾರ ವ್ಯಾಪ್ತಿಯನ್ನು ಇನ್ನೂ ಹೆಚ್ಚಿಸಲಾಯಿತಲ್ಲದೆ ಫೆಡರಲ್ ರಿಸರ್ವ್ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. 1933 ರಲ್ಲಿ ಪ್ರತಿಭೂತಿಗಳ (ಸೆಕ್ಯುರಿಟೀಸ್) ಅಧಿನಿಯಮ ಜಾರಿಗೆ ಬಂತು. ಹಣ ತೊಡಗಿಸುವವರ, ವಿನಿಯೋಜಕರ, ಹಿತರಕ್ಷಣೆ ಇದರಿಂದ ಸಾಧ್ಯವಾಯಿತು. 1934 ರಲ್ಲಿ ಜಾರಿಗೆ ಬಂದ ಪ್ರತಿಭೂತಿಗಳ ವಿನಿಮಯ ಅಧಿನಿಯಮ ಇನ್ನೊಂದು ಮುಖ್ಯ ಕ್ರಮ. ಇದರಲ್ಲಿ ಸ್ಟಾಕ್ ಎಕ್ಸ್‍ಚೇಂಜಿನ ವ್ಯವಹಾರಗಳ ಬಗ್ಗೆ ವಿನಿಮಯ ನಿಯಮಗಳನ್ನು ರೂಪಿಸಲಾಯಿತಲ್ಲದೆ, ಅನೇಕ ಸಟ್ಟಾ ಪದ್ಧತಿಗಳನ್ನು ನಿರ್ಬಂಧಿಸಲಾಯಿತು. ಈ ಎಲ್ಲ ಅಧಿನಿಯಮಗಳನ್ನು ಕಾರ್ಯಗತಗೊಳಿಸಲು ಪ್ರತಿಭೂತಿಗಳ ಆಧಾರ ಮತ್ತು ವಿನಿಮಯ ಆಯೋಗವೊಂದನ್ನು ನೇಮಿಸಲಾಯಿತು. 1933 ರಲ್ಲಿ ರೈಲ್ವೆ ಹಾಗೂ ರಸ್ತೆ ಸಾರಿಗೆ ಅಧಿನಿಯಮ ಜಾರಿಗೆ ಬಂತು. ಸಾರಿಗೆ ವ್ಯವಸ್ಥೆಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನಡೆಸಲು ಹಾಗೂ ಜನತೆಗೆ ಅನುಕೂಲವಾಗುವಂತೆ ಕಡಿಮೆ ದರಗಳಲ್ಲಿ ಸರಕುಗಳನ್ನು ಸಾಗಿಸಲು ಇದರಿಂದ ಅನುಕೂಲವಾಯಿತು. ಇದರ ಮೇಲ್ವಿಚಾರಣೆಗಾಗಿ ಸಂಯುಕ್ತ ಸಂಯೋಜಕನನ್ನು (ಫೆಡರಲ್ ಕೋ - ಆರ್ಡಿನೇಟರ್) ನೇಮಿಸಿ ಅವನಿಗೆ ವ್ಯಾಪಕ ಅಧಿಕಾರಗಳನ್ನು ನೀಡಲಾಯಿತು.

ಇವೆಲ್ಲ ಕ್ರಮಗಳ ಪರಿಣಾಮವಾಗಿ 1936 ರ ವೇಳೆಗೆ ಕೈಗಾರಿಕೆಗಳ ಹುಟ್ಟುವಳಿ, ಬೆಲೆಗಳ ಮಟ್ಟ, ಉದ್ಯೋಗ ಸೌಲಭ್ಯ ಇವು ಉತ್ತಮಗೊಂಡುವು. ಆದರೂ ನಿರುದ್ಯೋಗ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗಲಿಲ್ಲ. ಇನ್ನೂ ಸುಮಾರು ಒಂದು ಕೋಟಿ ಜನರು ನಿರುದ್ಯೋಗಿಗಳಾಗಿ ಉಳಿದಿದ್ದರು. ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದುದ್ದೇನೋ ನಿಜ. ಆದರೆ, ಈ ಅವಧಿಯಲ್ಲಿ ಜಾಗತಿಕ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದೂ ಇದಕ್ಕೆ ಒಂದು ಕಾರಣವಾಗಿತ್ತು. ಜರ್ಮನಿಯಲ್ಲಿ ಹಿಟ್ಲರ್ ಪ್ರಬಲನಾಗುತ್ತಿದ್ದ. ಎರಡನೆಯ ಮಹಾಯುದ್ಧದ ಸಿದ್ಧತೆ ಆರಂಭವಾಗಿತ್ತು. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ಪ್ರಚೋದನೆ ಉಂಟಾಗಿತ್ತು. ಪುನವ್ರ್ಯವಸ್ಥೆಯ ಕಾರ್ಯಕ್ರಮದ ವೆಚ್ಚ ಅತಿ ಹೆಚ್ಚಾಗಿತ್ತು. 1933 ರಿಂದ 1937 ರ ವರೆಗಿನ ಅವಧಿಯಲ್ಲಿ ರಾಷ್ಟ್ರದ ಋಣದ ಮೊತ್ತ 1,950 ಕೋಟಿ ಡಾಲರುಗಳಿಂದ 3,600 ಕೋಟಿ ಡಾಲರುಗಳಿಗೆ ಏರಿತ್ತು. ಈ ಕಾರ್ಯಕ್ರಮಕ್ಕೆ ಇಷ್ಟೊಂದು ವೆಚ್ಚವಾಗಿದ್ದಾಗ್ಯೂ ಆಗಿದ್ದ ಸುಧಾರಣೆ ಇದಕ್ಕೆ ಅನುಗುಣವಾಗಿರಲಿಲ್ಲ. ಉತ್ತಮಗೊಂಡ ಪರಿಸ್ಥಿತಿ ಶಾಶ್ವತವಾಗಿ ಉಳಿಯುವುದೋ ಇಲ್ಲವೋ ಎಂಬ ಅಂಜಿಕೆಯೂ ಅಮೆರಿಕದ ಜನಕ್ಕೆ ಇದ್ದೇ ಇತ್ತೆಂದು ವಿಮರ್ಶಕರು ಹೇಳುತ್ತಿದ್ದರು. ಇದು ಹೊಸ ವ್ಯವಸ್ಥೆಯ ನಿರ್ಮಾಣ ಕ್ರಮವಲ್ಲ, ಹಳೆಯ ರುಗ್ಣ ವ್ಯವಸ್ಥೆಯೇ ಜೀವಸಹಿತ ಮುಂದುವರಿಯುವಂತೆ ನಡೆಸಿದ ಪ್ರಯತ್ನ ಎಂದೂ ಟೀಕಿಸಲಾಗಿತ್ತು. ಒಟ್ಟಿನಲ್ಲಿ ಪುನವ್ರ್ಯವಸ್ಥೆಯ ಕಾರ್ಯಕ್ರಮ ಇಡೀ ದೇಶದ ಹಾಗೂ ವಿಶ್ವದ ಇತರ ದೇಶಗಳ ಆಸಕ್ತಿಯನ್ನು ಕೆರಳಿಸಿತ್ತು ಎಂದು ಹೇಳಬಹುದು. (ಬಿ.ಬಿ.ಕೆ.)