ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರುಷೋತ್ತಮ ಗಜಪತಿ

ವಿಕಿಸೋರ್ಸ್ದಿಂದ

ಪುರುಷೋತ್ತಮ ಗಜಪತಿ - ಒರಿಸ್ಸವನ್ನು ಆಳಿದ ಒಬ್ಬ ದೊರೆ. ಕಪಿಲೇಶ್ವರನ ಕಿರಿಯ ಮಗ. ಇವನ ಅಣ್ಣ ಹಂಮೀರ. ತಂದೆಯ ರಾಜ್ಯ ವಿಸ್ತರಣೆಯ ಕಾರ್ಯದಲ್ಲಿ ಇಬ್ಬರೂ ಅವನಿಗೆ ನೆರವು ನೀಡಿದರೆಂದು ಕಾಣುತ್ತದೆ. ಹಂಮೀರನ ಸಾಹಸಗಳ ವಿವರಗಳು ಶಾಸನದಲ್ಲಿ ಕಾಣಬರುತ್ತವೆ. ಇವರಿಬ್ಬರಲ್ಲಿ ಯಾರೂ ತನ್ನ ಉತ್ತರಾಧಿಕಾರಿಯಾಗಬೇಕೆಂಬ ಬಗ್ಗೆ ಕಪಿಲೇಶ್ವರನಿಗೆ ಅವನ ಕೊನೆಗಾಲದಲ್ಲಿ ಚಿಂತೆ ಉಂಟಾಯಿತೆಂದು ಕಾಣುತ್ತದೆ. ಪುರುಷೋತ್ತಮನ ಕಡೆಗೆ ಅವನ ಒಲವು ಇತ್ತೆಂದೂ ಇವನಿಗೆ ಯುವರಾಜ ಪದವಿ ನೀಡಬೇಕೆಂದು ಕಪಿಲೇಶ್ವರನಿಗೆ ಜಗನ್ನಾಥ ದೇವರು ಸ್ವಪ್ನದಲ್ಲಿ ಸೂಚಿಸಿದನೆಂದೂ ಪ್ರತೀತಿ. ಹಂಮೀರ ದಂಗೆ ಎದ್ದ. ಶತ್ರುಗಳು ಈ ಅಂತಃಕಲಹದ ದುರುಪಯೋಗ ಪಡೆದುಕೊಂಡರು. ಸಾಳುವ ನರಸಿಂಹ ವಿಜಯನಗರಕ್ಕೆ ಸೇರಿದ್ದ ಚಂದ್ರಗಿರಿ ಮುಂತಾದ ಪ್ರದೇಶಗಳನ್ನು ಹಂಮೀರನಿಂದ ಹಿಂದಕ್ಕೆ ಗೆದ್ದುಕೊಂಡ. ಅವನನ್ನು ಎದುರಿಸಿದ ಪುರುಷೋತ್ತಮನಿಗೆ ಬೆಂಬಲವಾಗಿ ಕಪಿಲೇಶ್ವರನೂ ಸೈನ್ಯದೊಂದಿಗೆ ಹೋಗಿ ಕೃಷ್ಣಾ ನದಿಯ ತೀರದಲ್ಲಿ ತಂಗಿ ಇಲ್ಲಿ ಅವನಿಗೆ ಅಧಿಕಾರ ವಹಿಸಿಕೊಟ್ಟ. ಯುದ್ಧಭೂಮಿಯಲ್ಲೇ ಕಪಿಲೇಶ್ವರ ತೀರಿಕೊಂಡ. ಪುರುಷೋತ್ತಮ ದೊರೆಯಾದ. (1468).

ಹಂಮೀರನೊಂದಿಗೆ ಪುರುಷೋತ್ತಮನ ಹೋರಾಟ ಮುಂದುವರಿಯಿತು. ಮೊದಲು ಪರಿಸ್ಥಿತಿ ಇವನಿಗೆ ಪ್ರತಿಕೂಲವಾಗಿತ್ತು. ಬಹಮನಿ ಸುಲ್ತಾನರು ಹಂಮೀರನೊಂದಿಗೆ ಸೇರಿ ಇವನನ್ನು ಸೋಲಿಸಿದರು. ಕ್ರಮೇಣ ಪರಿಸ್ಥಿತಿ ಸುಧಾರಿಸಿತು. ಪ್ರಜೆಗಳೂ ಇವನತ್ತ ಹೆಚ್ಚು ವಿಶ್ವಾಸ ತಳೆಯತೊಡಗಿದರು. ಬಹಮನಿ ರಾಜ್ಯದಲ್ಲಿ ಕಲಹ ತಲೆದೋರಿದ್ದರಿಂದ ಹಂಮೀರನಿಗೆ ಅವರ ನೆರವು ದೊರಕಲಿಲ್ಲ. ಹಂಮೀರನನ್ನು ಪುರುಷೋತ್ತಮ ಸಂಪೂರ್ಣವಾಗಿ ಸೋಲಿಸಿ ರಾಜ್ಯವನ್ನು ಮತ್ತೆ ಪಡೆದುಕೊಂಡ.

ಮತ್ತೆ ಪುರುಷೋತ್ತಮ ಶತ್ರುವಿನೊಂದಿಗೆ ಕಾದಾಡಬೇಕಾಯಿತು. ಸಾಳುವ ನರಸಿಂಹ ಹಲವು ಪ್ರದೇಶಗಳನ್ನು ಜಯಿಸಿದ. ಅವನ ಅಧಿಕಾರ ಮಚಲೀಪಟ್ಟಣದವರೆಗೂ ವ್ಯಾಪಿಸಿತು. ಆದರೆ ಪುರುಷೋತ್ತಮ ದೊಡ್ಡ ಸೈನ್ಯದೊಂದಿಗೆ ಮುನ್ನುಗ್ಗಿ ಆಂಧ್ರಪ್ರದೇಶದ ಉತ್ತರ ಭಾಗದ ಮೇಲೆ ಎರಗಿದ. ಬಹಮನಿಯ ಮಹಮದ್ ಷಹನ ನೆರವಿನಿಂದ ನಿಜಾಮ್ ಊಲ್‍ಮುಲ್ಕ್ ಇನ್ನೊಂದು ಕಡೆ ನುಗ್ಗಿದ. ಸಾಳುವ ನರಸಿಂಹ ಹಿನ್ನಡೆದ. ಆ ವೇಳೆಗೆ ಬಹಮನಿ ರಾಜ್ಯದಲ್ಲಿ ಒಳಕಲಹ ಉಂಟಾಯಿತು. ಪುರುಷೋತ್ತಮ ಉದಯಗಿರಿ ಕೋಟೆಯನ್ನು ವಶಪಡಿಸಿಕೊಂಡ.

ಪುರುಷೋತ್ತಮ ಪಂಡಿತನೂ, ಕವಿಯೂ ಆಗಿದ್ದನೆನ್ನಲಾಗಿದೆ. ಅಭಿನವಗೀತ ಗೋವಿಂದ, ಆಗಮಕಲ್ಪತರು, ನಾಮಮಾಲಿಕಾ, ಗೋಪಾಲಾರ್ಚನಾವಿಧಿ ಮುಂತಾದ ಅನೇಕ ಕೃತಿಗಳನ್ನು ಇವನು ಬರೆದಿರುವನೆಂದೂ ಹೇಳಲಾಗಿದೆ. ಇವನು ಸಂಸ್ಕøತ, ಒರಿಯ ಭಾಷೆಗಳಿಗೆ ವಿಶೇಷವಾದ ಪ್ರೋತ್ಸಾಹ ನೀಡಿದ-ಪುರುಷೋತ್ತಮ 1497ರ ವರೆಗೆ ಆಳಿದ. ಅನಂತರ ಇವನ ಮಗ ಪ್ರತಾಪರುದ್ರ ಅಧಿಕಾರಕ್ಕೆ ಬಂದ. (ಎಸ್.ಎಚ್.ಐ.)