ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುಳ್ಳಂಪುರ್ಚಿ

ವಿಕಿಸೋರ್ಸ್ದಿಂದ

ಪುಳ್ಳಂಪುರ್ಚಿ ಆಕ್ಸಾಡಿಲಿಡೇಸಿ ಕುಟುಂಬಕ್ಕೆ ಸೇರಿದ ಏಕವಾರ್ಷಿಕ ಇಲ್ಲವೇ ಬಹುವಾರ್ಷಿಕ ಮೂಲಿಕೆ ಸಸ್ಯ (ಆಕ್ಸಾಲಿಸ್). ಇದರಲ್ಲಿ ಹಲವಾರು ಪ್ರಭೇದಗಳಿದ್ದು ಭಾರತದಲ್ಲಿ ನಾಲ್ಕು ಪ್ರಭೇದಗಳು ಬಲು ಸಾಮಾನ್ಯವೆನಿಸಿವೆ. ಇವುಗಳ ಪೈಕಿ ಮುಖ್ಯವಾದ್ದು ಆಕ್ಸಾಲಿಸ್ ಕಾರ್ನಿಕ್ಯುಲೇಟ್ ಎಂಬುದು. ಇದಕ್ಕೆ ಪುಟ್ಟಂಪುರಳೆ, ಉಪ್ಪುಪ್ಪಿನ ಸೊಪ್ಪು, ಹುಳಿಚಿಕ್ಕ ಎಂಬ ಹೆಸರುಗಳೂ ಉಂಟು. ಇಂಗ್ಲಿಷಿನಲ್ಲಿ ಇದನ್ನು ಇಂಡಿಯನ್ ಸೊರೆಲ್ ಎಂದು ಕರೆವುದಿದೆ. ಭಾರತಾದ್ಯಂತ ಕಾಣದೊರೆಯುವ ಈ ಪ್ರಭೇದ ಪಾಳುಬಿಟ್ಟ ಹೊಲಗಳಲ್ಲೂ ತೋಟಗಳಲ್ಲೂ ಬೀಳುಭೂಮಿಗಳಲ್ಲೂ ಮುಖ್ಯವಾಗಿ ತೇವಪೂರಿತ ಹಾಗೂ ನೆರಳಿರುವಂಥ ಪ್ರದೇಶಗಳಲ್ಲೂ ಕಳೆಗಿಡವಾಗಿ ಬೆಳೆಯುತ್ತದೆ. ಪುಳ್ಳಂಪುರ್ಚಿ ನೆಲದ ಗುಂಟ ಹಬ್ಬಿ ಬೆಳೆಯುವ ಸಣ್ಣ ಗಾತ್ರದ ಮೂಲಿಕೆ. ಇದರಲ್ಲಿ ಹಲವಾರು ಭೂಗತ ಗೆಡ್ಡೆಗಳು. ಈ ಗೆಡ್ಡೆಗಳಿಂದ ವಿವಿಧ ದಿಕ್ಕುಗಳಲ್ಲಿ ಪಸರಿಸಿ ಬೆಳೆಯುವ ತೆಳು ಕಾಂಡಗಳೂ ಉಂಟು. ಕಾಂಡಗಳ ಮೇಲಿರುವ ಗೆಣ್ಣುಗಳಿಂದ ಮೇಲ್ಮುಖವಾಗಿ 6-25 ಸೆ.ಮೀ. ಎತ್ತರಕ್ಕೆ ಬೆಳೆಯುವ ಎಲೆ ಹಾಗೂ ಕವಲುಗಳೂ ನೆಲದೊಳಕ್ಕೆ ಇಳಿಯುವ ಬೇರುಗಳೂ ಇವೆ. ಎ¯ಯಲಗು ಹಸ್ತಾಕಾರದ್ದು. ಒಂದೊಂದು ಎಲೆಯಲ್ಲೂ 3 ಹಾಲೆಗಳುಂಟು. ಎಲೆಗಳಿಗೆ ಹುಳಿ ರುಚಿ ಇದೆ. ಹೂಗಳು ಹಳದಿ ಬಣ್ಣಕ್ಕಿವೆ. ಫಲ ಸಂಪುಟ ಮಾದರಿಯದು. ಪುಳ್ಳಂಪುರ್ಚಿಯ ಎಲೆಗಳಲ್ಲಿ ಗಣನೀಯ ಮೊತ್ತದಲ್ಲಿ ಸಿ ವಿಟಮಿನ್ (100 ಗ್ರಾಮಿಗೆ 125 ಮೀ.ಗ್ರಾಮ್) ಕ್ಯಾರೊಟೀನ್ (100.ಗ್ರಾಮಿಗೆ 3.6 ಮಿಲಿಗ್ರಾಮ್) ಕ್ಯಾಲ್ಸಿಯಮ್ (5.6 %) ಹಾಗೂ ಲಘು ಪ್ರಮಾಣದಲ್ಲಿ ಟಾರ್ಟರಿಕ್ ಮತ್ತು ಸಿಟ್ರಿಕ್ ಆಮ್ಲಗಳು ಇವೆ. ಎಲೆಗಳನ್ನು ಹಾಗೆಯೇ ತಿನ್ನುವುದಿದೆಯಲ್ಲದೆ ಬೇಯಿಸಿಯೋ ಚಟ್ನಿ ರೂಪದಲ್ಲೋ ಸೇವಿಸುವ ಕ್ರಮವೂ ಉಂಟು. ಆದರೆ, ಅತಿಯಾಗಿ ತಿಂದರೆ ಹಾನಿಕರ.

ಈ ಗಿಡಕ್ಕೆ ಹಲವಾರು ಔಷಧಿಯ ಗುಣಗಳೂ ಉಂಟು. ಇದು ಒಳ್ಳೆಯ ಪ್ರತಿಬಂಧಕ, ಜಂತು ನಿವಾರಕ, ಹಾಗೂ ಪೂತಿನಾಶಕ ಎನಿಸಿದೆ. ಅಜೀರ್ಣ, ಮೂಲವ್ಯಾಧಿ, ರಕ್ತಹೀನತೆ, ಕಿವಿನೋವುಗಳಲ್ಲಿ ಇದರ ತಾಜಾ ರಸವನ್ನು ಬಳಸುವುದಿದೆ. ಜೀರ್ಣಶಕ್ತಿಯನ್ನು ಹೆಚ್ಚಿಸುವುದ ಜೊತೆಗೆ ತಂಪುಕಾರಕವಾಗಿಯೂ ಎಲೆಗಳನ್ನು ಉಪಯೋಗಿಸಲಾಗುತ್ತದೆ. ಜ್ವರ, ಆಮಶಂಕೆ, ಸ್ಕರ್ವಿ ಮುಂತಾದ ರೋಗ ಚಿಕಿತ್ಸೆಗೂ ಗಂತಿ, ಅಣಿಗಳನ್ನು ನಿರ್ಮೂಲ ಮಾಡುವುದಕ್ಕೂ ಇವನ್ನು ಬಳಸಬಹುದು. ಕಣ್ಣು ನೆವೆಯಲ್ಲಿ ಎಲೆಗಳ ಕಷಾಯವನ್ನು ಉಪಯೋಗಿಸುವುದುಂಟು. ಉಮ್ಮತ್ತಿ ಬೀಜಗಳ ಸೇವನೆಯಿಂದ ಉಂಟಾಗುವ ಮತ್ತೇರಿಕೆಯನ್ನು ಇಳಿಸಲು ಎಲೆಗಳ ರಸ ಒಳ್ಳೆಯ ಮದ್ದು ಎನಿಸಿದೆ.

ಪುಳ್ಳಂಪುರ್ಚಿ ಕಳೆ ಗಿಡವಾದರೂ ಇದರಲ್ಲಿ ನೈಟ್ರೋಜನ್, ಪೊಟ್ಯಾಷ್, ಫಾಸ್ಫರಿಕ್ ಆಮ್ಲ ಮತ್ತಿತರ ಸಾವಯುವ ವಸ್ತುಗಳು ಗಣನೀಯವಾಗುವುದರಿಂದ ಇದನ್ನು ಹಸುರು ಗೊಬ್ಬರವಾಗಿ ಬಳಸಬಹುದು.

ಭಾರತದಲ್ಲಿ ಕಾಣದೊರೆಯುವ ಪುಳ್ಳಂಪುರ್ಚಿಯ ಇತರ ಪ್ರಭೇದಗಳೆಂದರೆ ಆಕ್ಸಾಲಿಸ್ ಅಸೆಟೊಸೆಲ, ಲ್ಯಾಟಿಪೋಲಿಯ, ಹಾಗೂ ಮಾರ್ಟಿಯಾನ.