ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೃಥಿವೀ

ವಿಕಿಸೋರ್ಸ್ದಿಂದ

ಪೃಥಿವೀ ಪಂಚಭೂತಗಳಲ್ಲಿ ಒಂದು. ಭೂಮಿ. ಅತಿ ವಿಸ್ತಾರವಾಗಿರುವುದರಿಂದ ಆ ಹೆಸರು. ಆದಿತ್ಯನ ಅಧಿದೇವತೆ. ಮಗ ಅಂಗಾರಕ. ಪರ್ಯಾಯ ಪದಗಳು ಅನೇಕ. ಋಗ್ವೇದದಲ್ಲಿ ಇದನ್ನುದ್ದೇಶಿಸಿ ಒಂದು ಸೂಕ್ತವಿದೆ. ದ್ಯೌಃ ಎಂಬ ದೇವತೆಯೊಡನೆ ಸೇರಿದ ಆರು ಸೂಕ್ತಗಳಿವೆ (ಪ್ರಕೃತಿ-ಪುರುಷರ ಸಂಬಂಧ). ದೇವತೆಗಳೆಲ್ಲ ಅಮರತ್ವವನ್ನು ಪಡೆದುದ್ದು ಭೂಮಿಯಲ್ಲಿಯೇ ಯಜ್ಞಯಾಗ ತಪಸ್ಸುಗಳನ್ನಾಚರಿಸಿ. ಪ್ರಪಂಚದ ಸೃಷ್ಟಿಯನ್ನು ತೈತ್ತರೀಯೋಪನಿಷತ್ತು ಮತ್ತು ಮನ್ವಾದಿಸ್ಮøತಿಗಳಲ್ಲಿ ಹೀಗೆ ಹೇಳಿದೆ - ಮಾಯೆಯಿಂದ ಕೂಡಿದ ಬ್ರಹ್ಮನ ಮನಸ್ಸಿನಿಂದ ಆಕಾಶ ತತ್ತ್ವವೂ, ಆಕಾಶತತ್ತ್ವದಿಂದ ವಾಯುತತ್ತ್ವವೂ, ವಾಯುತತ್ತ್ವದಿಂದ ಅಗ್ನಿತತ್ತ್ವವೂ, ಅಗ್ನಿತತ್ತ್ವದಿಂದ ಅಪ್‍ತತ್ತ್ವವೂ, ಅಪ್‍ತತ್ತ್ವದಿಂದ ಪೃಥಿವೀತತ್ತ್ವವೂ ಪೃಥಿವಿಯಿಂದ ಓಷಧಿ (ಬತ್ತ ಮೊದಲಾದವು) ವನಸ್ಪತಿಗಳೂ ಔಷಧಿಗಳಿಂದ ಅನ್ನವೂ ಅನ್ನದಿಂದ ಪುರುಷನೂ ಹುಟ್ಟಿದವೆಂದು ತಿಳಿಸಿದೆ.

ಸೃಷ್ಟಿಯ ಆದಿಯಲ್ಲಿ ಪ್ರಪಂಚವೆಲ್ಲ ಜಲಮಯವಾಗಿತ್ತು. ಮಹಾವಿಷ್ಣು ವಟಪತ್ರಶಾಯಿಯಾಗಿದ್ದ. ವಿಷ್ಣುವಿನ ನಾಭಿಕಮಲದಲ್ಲಿ ಬ್ರಹ್ಮ ಶೋಭಿಸುತ್ತಿದ್ದ. ಮಹಾ ವಿಷ್ಣು ಕರ್ಣಮಲವನ್ನು ಹೊರಕ್ಕೆಸೆಯಲು ಅದರಿಂದ ಭೀಕರಾಕೃತಿಯ ಮಧುಕೈಟಭರು ಅವತರಿಸಿದರು. ಹುಟ್ಟಿದ ಕ್ಷಣ ಹಸಿವೆಯಿಂದ ಬಳಲಿದ ಅವರು ಬ್ರಹ್ಮನನ್ನೇ ತಿನ್ನಲೆತ್ನಿಸಿದರು. ಹೆದರಿದ ಬ್ರಹ್ಮ ತಂದೆಯಲ್ಲಿ ಮೊರೆಯಿಟ್ಟು ಕಮಲದಲ್ಲಿ ಅಡಗಿದ. ಪರಿಪಾಲಕನಾದ ವಿಷ್ಣು ಅವರೊಡನೆ ಐದು ಸಹಸ್ರವರ್ಷಗಳ ಕಾಲ ಘೋರ ಕಾಳಗ ನಡೆಸಿದ. ಅತುಲಬಲರಾದ ಮಧುಕೈಟಬರು ಜಗ್ಗಲಿಲ್ಲ. ವಿಷ್ಣು ಪರಾಶಕ್ತಿಯಾದ ಮಾಯೆಯನ್ನು ಪ್ರಾರ್ಥಿಸಿದ. ಮಹಾಮೋಹಿತರಾದ ಮಧುಕೈಟಬರು ಬೇಕಾದ ವರ ಕೇಳಲು ವಿಷ್ಣುವನ್ನೇ ಕೋರಿದರು. ಉಪಾಯದಿಂದ ಅವರನ್ನು ಜಯಿಸಬೇಕೆಂದು ಯೋಚಿಸಿ ವಿಷ್ಣು ಅವರ ತಲೆ ಕೇಳಿದ. ಮೋಸ ಹೋದ ಅವರು, ಅಸಾಧ್ಯವೆಂದು ಊಹಿಸಿ ನೀರಿಲ್ಲದ ಪ್ರದೇಶದಲ್ಲಿ ತಮ್ಮ ತಲೆ ಕತ್ತರಿಸುವಂತೆ ಅನುಮತಿ ನೀಡಿದರು. ವಿಷ್ಣು ತನ್ನ ತೊಡೆಯ ಮೇಲೆ ಇರಿಸಿಕೊಂಡು ಚಕ್ರದಿಂದ ಅವರ ತಲೆ ಕತ್ತರಿಸಿದ. ಮಧುವಿನ ಛೇದ್ಯರೂಪವಾದ ಭೂಮಿಗೆ ಮೇದಿನೀ ಎಂಬ ಹೆಸರು ಬಂತು. ಪುಷ್ಕರ ತೀರ್ಥದಲ್ಲಿ ಮಲಗಿರುವ ವಿರಾಟಪುರುಷನ ರೋಮಕೂಪಗಳಲ್ಲಿ ಪೃಥ್ವಿಯ ಅಂಶಗಳು ಸೇರಿಕೊಂಡವು. ಸೃಷ್ಟಿಯ ವೇಳೆಯಲ್ಲಿ ಜಲದ ಪಾತಾಳಿಗಿಂತ ಎತ್ತರವಾಗಿ ಅವನು ಪ್ರಕಟವಾಗುತ್ತಾನೆ. ಗೋಲಾಕಾರದ ಅವನ ಉದರ ಪ್ರದೇಶವೇ ಭೂಮಿ. ಪ್ರಲಯಕಾಲದಲ್ಲಿ ನೀರಿನಲ್ಲಿ ಅಂತರ್ಧಾನನಾಗುವನು. ಸೂರ್ಯವಂಶದ ಐದನೆಯ ರಾಜ ವೇನನೆಂಬಾತ ತನ್ನ ಆಳ್ವಿಕೆಯಲ್ಲಿ ನಾಸ್ತಿಕನಂತೆಯೂ ಧರ್ಮರಹಿತನಾಗಿಯೂ ರಾಜ್ಯಭಾರ ಮಾಡತೊಡಗಿದ. ಭೂದೇವಿ ಕುಪಿತಳಾದಳು. ಘೋರಕ್ಷಾಮ ಒದಗಿ ಬಂತು. ಕುಪಿತರಾದ ಜನ ವೇನರಾಜನನ್ನು ಮಥಿಸಿದಾಗ ಪೃಥು ಎಂಬಾತ ಹುಟ್ಟಿದ. ಅವನು ಸಕಲ ರಾಜ ಲಕ್ಷಣಗಳಿಂದ ಕೂಡಿದ್ದು ಧರ್ಮದಿಂದ ರಾಜ್ಯ ರಕ್ಷಣೆ ಮಾಡುವ ಸಂಕಲ್ಪದಿಂದ ಭೂಮಿಯನ್ನು ನಿಗ್ರಹಿಸಿ ಕಾಮಧೇನು ಸ್ವರೂಪಿಣಿಯಾದ ಅವಳಿಂದ ಜನಗಳಿಗೆ ಬೇಕಾದ ಸಕಲವನ್ನೂ ಕೊಡಿಸಿದ. ಅಂದಿನಿಂದ ಸಮೃದ್ಧಳಾದಳು. ಪೃಥುವಿನ ಭೂಮಿ ಪೃಥಿವೀ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು.

ಕಶ್ಯಪಬ್ರಹ್ಮನಿಗೆ ದಿತಿಯಲ್ಲಿ ಹುಟ್ಟಿದ ಹಿರಣ್ಯಾಕ್ಷ ತಪಸ್ಸಿನಿಂದ ಬ್ರಹ್ಮನನ್ನು ಮೆಚ್ಚಿಸಿ ಯಾರಿಂದಲೂ ಯಾವ ಪ್ರಾಣಿಯಿಂದಲೂ ಮರಣ ಬಾರದಂತೆ ವರ ಪಡೆದು ಭೂಲೋಕವನ್ನೆಲ್ಲ ಜಯಿಸಿ ದೇವಲೋಕವನ್ನೂ ವಶಕ್ಕೆ ತೆಗೆದುಕೊಂಡು ಭೂಮಿಯನ್ನು ಪಾತಾಳಕ್ಕೆ ಒಯ್ಯಬೇಕೆಂದು ಸಮುದ್ರ ಮಾರ್ಗವಾಗಿ ಹೋಗುತ್ತಿರಲು ಮಹಾವಿಷ್ಣು ವರಾಹವೆಂಬ ಹೊಸ ಪ್ರಾಣಿಯಾಗಿ ಕಾಣಿಸಿಕೊಂಡು ದಾನವನ ಸಂಹಾರ ಮಾಡಿ ತನ್ನ ಕೋರೆ ದಾಡೆಯಿಂದ ಭೂಮಿಯನ್ನು ಎತ್ತಿ ಹಿಡಿದ. ಅಲ್ಲದೆ ಒಂದು ದೇವ ಮಾನವ ವರ್ಷಕಾಲ ಅಹೋರಾತ್ರಿಗಳಲ್ಲಿ ಭೂದೇವಿಯೊಡನೆ ಸಂಭೋಗಿಸಿದ. ನವಗ್ರಹಗಳಲ್ಲಿ ಒಬ್ಬನಾದ ಮಂಗಳನ ಜನನವಾಯಿತು. ವರಾಹರೂಪಿ ವಿಷ್ಣುವಿನ ಪತ್ನಿಯಾದ ಭೂಮಿಯನ್ನು ವಾರಾಹಿ ಎಂದು ಕರೆದರು.

ಗೃಹಾರಂಭ, ಗೃಹಪ್ರವೇಶ, ಕೆರೆ ಬಾವಿಗಳನ್ನು ತೋಡುವುದು ದೇವತಾರ್ಚನೆಗಳು ಯಜ್ಞಯಾಗಾದಿಗಳು ಇತ್ಯಾದಿ ಸಂದರ್ಭಗಳಲ್ಲಿ ಸರ್ವಾಧಾರೆಯಾದ ಭೂಮಿಯ ಪೂಜೆ ಮಾಡುವರು. ಆಶ್ವೀಜಮಾಸದ ಪೂರ್ಣಿಮೆಯಂದು ಭೂಮಿ ಪೂಜೆ ಮಾಡುವರು. ಆರ್ಯರು ಹಾಸಿಗೆಯಿಂದೆದ್ದು ಭೂಮಿಗೆ ಅಡಿ ಇಡುವಾಗ ಭೂಮಿತಾಯಿಗೆ ನಮಿಸಿ ಪಾದಸ್ಪರ್ಶದಿಂದ ಉಂಟಾಗುವ ತಪ್ಪಿಗೆ ಕ್ಷಮೆ ಕೇಳಿ ಹೆಜ್ಜೆ ಹಾಕುತ್ತಿದ್ದರು. ಭೂಮಿಯನ್ನು ಮಹಾವಿಷ್ಣುವೇ ಪೂಜಿಸಿದ. ನಾಸ್ತಿಕರು ಹರಿಭಕ್ತ ದ್ವೇಷಿಗಳು, ಅಧರ್ಮದಿಂದಿರುವವರು, ಅಲ್ಲದೇ ಮಣಿಶ್ರೇಷ್ಠವಾದ ಮುತ್ತುಗಳು, ಶಂಖ, ರುದ್ರಾಕ್ಷಿ, ಸಾಲಿಗ್ರಾಮ, ಸಾಲಿಗ್ರಾಮ ಜಲ, ಲಿಂಗ, ಪುಸ್ತಕ, ಚಂದನ, ದೀಪ, ಕರ್ಪೂರ ಇತ್ಯಾದಿ ವಸ್ತುಗಳೆಲ್ಲ ಭೂದೇವಿಯ ಗರ್ಭದಲ್ಲಿ ಒಳವು. ಭೂದೇವಿಗೆ ರಜೋದೋಷ ಮಿಥುನ ಸಂಕ್ರಮಣದಿಂದ ಮೂರು ದಿನಗಳು. ಆ ಸಮಯದಲ್ಲಿ ಭೂಖನನ, ಊಳುವುದು, ದಾನ ಮಾಡುವುದು ಇವುಗಳು ನಿಷಿದ್ಧ. ಭೂದಾನ ಮಾಡುವುದರಿಂದ ಹೆಚ್ಚಿನ ಫಲ ಇದೆ. ಯಜ್ಞಯಾಗಾದಿಗಳನ್ನು ನಡೆಸಿದ ಭೂಮಿಯನ್ನು ಹಾಲಿನಿಂದ ಸಿಂಪಡಿಸದಿದ್ದರೆ ಯಜ್ಞದ ಫಲ ಪ್ರಾಪ್ತಿಯಾಗುವುದಿಲ್ಲ. (ಕೆ.ಎಂ.ಬಿ.)