ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೃಥು

ವಿಕಿಸೋರ್ಸ್ದಿಂದ

ಪೃಥು

(i). ಯದುವಂಶದ ಒಬ್ಬ ಅರಸು. ವಿಪೃಥು, ವಿಢೂರಥ ಮೊದಲಾದ ರಾಜರೊಡನೆ ದ್ರೌಪದಿಯ ಸ್ವಯಂವರಕ್ಕೆ ಬಂದಿದ್ದ.

(ii) ಅಷ್ಟವಸುಗಳಲ್ಲಿ ಒಬ್ಬ.

(iii) ಚೌಕ್ಷುಷ ಮನ್ವಂತರದಲ್ಲಿದ್ದ ವೇನರಾಜನಮಗ. ವೇನ ನಾಸ್ತಿಕನಾಗಿದ್ದುದರಿಂದ ಭೂಮಿಯಲ್ಲಿ ಬೆಳೆಯಾಗದೆ ಬಿತ್ತಿದ ಬೀಜಗಳನ್ನೆಲ್ಲ ಭೂಮಿಯೇ ನುಂಗಿತು. ಆಗ ಪ್ರಜೆಗಳು ವೇನನ ಶರೀರವನ್ನು ಮಥಿಸಿ ಪೃಥುವನ್ನು ಸೃಷ್ಟಿಸಿದರು. ಪೃಥು ಭೂಮಿ ನುಂಗಿದ್ದ ವಸ್ತುಗಳನ್ನೆಲ್ಲ ಜನರಿಗೆ ಕೊಡಿಸಿ ಪ್ರಜೆಗಳ ಸುಖಕ್ಕೆ ಕಾರಣನಾದ. ಅಂದಿನಿಂದ ಭೂಮಿಗೆ ಪೃಥಿವೀ ಎಂಬ ಹೆಸರು ಬಂತು. ಈತ ಆರ್ಚಿಸ್ ಎಂಬುವಳನ್ನು ವರಿಸಿ ಆಕೆಯಿಂದ ಅಂತರ್ಧಾನನೆಂಬ ಮಗನನ್ನು ಪಡೆದ. ಪ್ರಾಚೀನ ಬರ್ಹಿ ಈತನ ಮೊಮ್ಮಗ. ಇವನು ಪ್ರಪಂಚದ ಮೊದಲ ಪಟ್ಟಾಭಿಷಿಕ್ತ ರಾಜರ್ಷಿ. ಈತನಿಂದ ಸೂತ, ಮಾಗಧರು ಜನಿಸಿದರು. ಈತನ ಕಾಲದಲ್ಲಿಯೇ ಬ್ರಹ್ಮ ಜಲರಾಜ್ಯ, ಯಕ್ಷರಾಜ್ಯ, ವಿಶ್ವದೇವತೆಗಳ ರಾಜ್ಯ ಮೊದಲಾದವಕ್ಕೆ ವರುಣ, ಕುಬೇರ, ಬೃಹಸ್ಪತಿ ಮೊದಲಾದ ಆಧಿರಾಜರನ್ನು ನೇಮಿಸಿದ.

(iv) ವೈವಸ್ವತ ಮನ್ವಂತರದಲ್ಲಿದ್ದ ಈತ ಆನೇನಸ ರಾಜನ ಮಗ. ಭೂಮಂಡಲದ ಅರಸರನ್ನೆಲ್ಲ ಗೆದ್ದು ಸುಧರ್ಮ, ಶಂಖಪದ, ಕೇತುಮಂತ ಮತ್ತು ಹಿರಣ್ಯದೇವರೆಂಬ ನಾಲ್ವರನ್ನು ನಾಲ್ಕು ದಿಕ್ಕುಗಳಿಗೆ ಪ್ರತಿನಿಧಿಗಳಾಗಿ ನೇಮಿಸಿದ. ಮಧ್ಯರಾಷ್ಟ್ರದಲ್ಲಿ ಚಕ್ರವರ್ತಿಯಾಗಿ ರಾಜ್ಯಪಾಲನೆ ಮಾಡುತ್ತಿದ್ದ. (ಡಿ.ವಿ.)