ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೆಂಗ್ವಿನ್

ವಿಕಿಸೋರ್ಸ್ದಿಂದ

ಪೆಂಗ್ವಿನ್ ಹಾರಲು ಬಾರದ ಒಂದು ಪಕ್ಷಿಜಾತಿ. ಏವೀಸ್ ವರ್ಗದ ನೀಯಾರ್ನಿತೀಸ್ ಉಪವರ್ಗಕ್ಕೂ, ಇಂಪೆನೀಸ್ ಅಥವಾ ಸ್ಟೆನಿಸಿ ಫಾರ್ಮೀಸ್ ಅಧಿಗಣಕ್ಕೂ ಸ್ಪೆನಿಸೀಡೀ ಕುಟುಂಬಕ್ಕೂ ಸೇರಿದೆ. ಇದರಲ್ಲಿ ಸುಮಾರು 6 ಜಾತಿ ಹಾಗೂ 15 ಪ್ರಭೇದಗಳನ್ನು ಗುರುತಿಸಲಾಗಿದೆ. ದಕ್ಷಿಣಾರ್ಧಗೋಳಕ್ಕೆ ಸೀಮಿತವಾಗಿರುವ ಇವು ಆಸ್ಟ್ರೇಲಿಯ, ಆಫ್ರಿಕ, ದಕ್ಷಿಣ ಅಮೆರಿಕ ಖಂಡಗಳ ದಕ್ಷಿಣ ಕರಾವಳಿಯಲ್ಲೂ ನ್ಯೂಜಿಲೆಂಡಿನಲ್ಲೂ, ದಕ್ಷಿಣ ಧ್ರುವ ಪ್ರದೇಶದ ಸಮುದ್ರ ತೀರಗಳಲ್ಲೂ ಅಲ್ಲಿನ ಸಾಗರಗಳ ಫಾಕ್‍ಲೆಂಡ್, ದಕ್ಷಿಣ ಆರ್ಕ್‍ನೀಸ್, ದಕ್ಷಿಣ ಶೆಟ್‍ಲೆಂಡ್ ಮತ್ತಿತರ ಸಣ್ಣಪುಟ್ಟ ದ್ವೀಪಗಳಲ್ಲೂ ವಾಸಿಸುವುವು.

ಪೆಂಗ್ವಿನುಗಳ ಗುಂಪು ಬಹು ಪ್ರಾಚೀನವಾದ ಹಾಗೂ ವಿಕಾಸದ ದೃಷ್ಟಿಯಿಂದ ಬಹು ಹಿಂದುಳಿದ ಗುಂಪು. ಉಳಿದ ತೆರನ ಪಕ್ಷಿಗಳೊಂದಿಗೆ ಇವುಗಳ ಸಂಬಂಧ ಯಾವ ಬಗೆಯದು ಎಂಬುದು ಇಂದಿಗೂ ವಿವಾದಾತ್ಮಕವಾಗಿದೆ. ಸಾಗರೋತ್ತರ ಜೀವನಕ್ಕೆ ಇವು ತುಂಬ ಚೆನ್ನಾಗಿ ಹೊಂದಿಕೊಂಡಿವೆ. ಹಾರುವ ಹಕ್ಕಿಗಳಲ್ಲಿರುವಂತೆ ಇವುಗಳಲ್ಲೂ ಬಲವಾದ ತಳಪಟ್ಟಿಯಿರುವ (ಕೀಲ್ ಬೋನ್) ಎದೆಮೂಳೆಯಿದೆಯಾದರೂ ರೆಕ್ಕೆಯ ಹಾರುಗರಿಗಳೇ ಇಲ್ಲದಿರುವುದು ಬಲು ವಿಚಿತ್ರ ಸಂಗತಿಯಾಗಿದೆ. ಪೆಂಗ್ವಿನುಗಳ ಭ್ರೂಣಾವಸ್ಥೆಯ ಒಂದು ಹಂತದಲ್ಲಿ ಮಾತ್ರ ರೆಕ್ಕೆ ಗರಿಗಳು ಕಾಣಿಸಿಕೊಂಡು ಬಲುಬೇಗ ಉದುರಿಬಿಡುವುವು. ಇದರಿಂದ ಪೆಂಗ್ವಿನುಗಳು ಹಾರುವ ಸಾಮಥ್ರ್ಯವಿದ್ದ ಪೂರ್ವಜಗಳಿಂದ ಉಗಮಿಸಿರಬಹುದೆನ್ನಲಾಗಿದೆ. ಅಂತೆಯೇ ಪೆಂಗ್ವಿನುಗಳಲ್ಲಿ ಮೊಳಕೈ ಕೀಲು ಇಲ್ಲ. ಮೊಂಡುರೆಕ್ಕೆ ತುಂಬ ಗಡುಸಾಗಿದ್ದು ಭುಜದ ಬಳಿ ಮಾತ್ರ ಚಲಿಸುತ್ತದೆ. ಪೆಂಗ್ವಿನುಗಳ ಕೊಕ್ಕು ಕೂಡ ವಿಚಿತ್ರವಾಗಿಯೇ ಇದೆ. ಬೇರೆ ಹಕ್ಕಿಗಳ ಕೊಕ್ಕು ಏಕಫಲಕದಿಂದ ರಚಿತವಾಗಿದೆಯಾದರೆ ಇವುಗಳಲ್ಲಿ ಹಲವಾರು ಕೊಂಬಿನ ರಚನೆಗಳಿಂದ ಇದು ರೂಪಿತವಾಗಿದೆ. ಈ ಲಕ್ಷಣ ಪೆಂಗ್ವಿನಗಳಿಗೂ ಆಲ್ಬಟ್ರಾಸ್ ಹಕ್ಕಿಗಳಿಗೂ ಇರಬಹುದಾದ ದೂರ ಸಂಬಂಧವನ್ನು ಸೂಚಿಸುತ್ತದೆ. ಪೆಂಗ್ವಿನುಗಳಿಗೂ ಮುಳುಗುಹಕ್ಕಿ, ನೀರು ಕಾಗೆ (ಕಾರ್ಮೊರಾಂಟ್) ಮತ್ತು ಪೆಲಿಕನುಗಳಿಗೂ ಸಂಬಂಧ ಇದೆ. ಎಲ್ಲ ಬಗೆಯ ಪೆಂಗ್ವಿನುಗಳಲ್ಲೂ ಕಾಣಬರುವ ಸಾಮಾನ್ಯ ಲಕ್ಷಣಗಳು ಇಂತಿವೆ; ದೇಹದ ಎತ್ತರ 30-90 ಸೆಂ.ಮೀ. ವರೆಗೆ ವ್ಯತ್ಯಾಸವಾಗುತ್ತದೆ. ತೂಕ 2-4 ಕೆ.ಜಿ. ಮನುಷ್ಯರಂತೆ ಎರಡು ಕಾಲುಗಳ ಮೇಲೆ ನಿಂತು ತಮ್ಮ ಎರಡು ಮೋಟು ರೆಕ್ಕೆಗಳನ್ನು ಕೈಯಂತೆ ಕೆಳಕ್ಕೆ ಚಾಚಿಕೊಂಡಿರುವುವು. ದೇಹದ ಮೇಲೆಲ್ಲ ದಪ್ಪ ತುಪ್ಪಳಿನಂಥ ಗರಿಹೊದಿಕೆಯುಂಟು. ನೀರಲ್ಲಿ ಈಜುವಾಗ ತಮ್ಮ ರೆಕ್ಕೆಗಳನ್ನು ಬಲವಾದ ಹುಟ್ಟುಗಳಂತೆ ಬಳಸುವುವು. ಮುಂಗಾಲುಗಳು ದಪ್ಪವಾಗಿವೆ ಪಾದ ಜಾಲಪಾದ ರೀತಿಯದು. ಈಜುವಾಗ ಪಾದಗಳು ಚುಕ್ಕಾಣಿಯಂತೆ ವರ್ತಿಸುವುವು. ದೇಹದ ಆಕಾರ ನೀರಲ್ಲಿ ಈಜಲು ಅನುಕೂಲವಾಗುವಂತೆ ಕದಿರಿನಾಕಾರದಲ್ಲಿದೆ. ಪೆಂಗ್ವಿನುಗಳು ಗಂಟೆಗೆ ಸುಮಾರು 36 ಕಿ.ಮೀ. ವೇಗದಲ್ಲಿ ಈಜಬಲ್ಲವು.

ದೇಹದ ಮೇಲ್ಭಾಗದಲ್ಲಿ ಪುಕ್ಕಗಳು ಬಹಳ ಒತ್ತಾಗಿ ಜೋಡಣೆಗೊಂಡಿವೆ; ಒಂದು ಚದರ ಸೆಂಟಿಮೀಟರ್‍ಗೆ ಸುಮಾರು 46 ಪುಕ್ಕಗಳಿರುವುದುಂಟು. ಪೆಂಗ್ವಿನ್‍ಗಳು ತಮ್ಮ ಮರಿಗಳನ್ನು ಸಾಕಿ ಸಲಹಿದ ನಂತರ ಪುಕ್ಕಗಳನ್ನು ಕಳೆದುಕೊಂಡು ಹೊಸ ಪುಕ್ಕಗಳನ್ನು ಬೆಳೆಸಿಕೊಳ್ಳುತ್ತವೆ. ಈ ರೀತಿ ಪೂರ್ಣವಾಗಿ ಪುಕ್ಕ ಕಳೆದುಕೊಳ್ಳುವುದಕ್ಕೆ ಸುಮಾರು 2 ರಿಂದ 6 ವಾರಗಳ ಕಾಲ ಬೇಕಾಗಬಹುದು. ಈ ಅವಧಿಯಲ್ಲಿ ಪಕ್ಷಿ ನೆಲದ ಮೇಲೆ ಒಂದೇ ಸ್ಥಳದಲ್ಲಿ ನಿಂತಿರುತ್ತದೆ ಮತ್ತು ಉಪವಾಸವಿರುತ್ತದೆ. ಪುಕ್ಕ ಕಳೆಯುವಿಕೆ ಪ್ರಾರಂಭವಾಗುವಾಗ ಗಂಡು ಹಕ್ಕಿಯ ತೂಕ ಸುಮಾರು 7.8 ಕೆ.ಜಿ. ಇರುತ್ತದೆ. ಪುಕ್ಕ ಕಳೆದ ಅನಂತರ ತೂಕ ಸುಮಾರು 4.5 ಕೆ.ಜಿ. ಇರುತ್ತದೆ. ಇದೇ ರೀತಿ ಹೆಣ್ಣಿನ ದೇಹದ ತೂಕ ಪ್ರಾರಂಭದಲ್ಲಿ 7.5 ಕೆ.ಜಿ. ಇದ್ದು ಅನಂತರ 4 ಕೆ.ಜಿ.ಗೆ ಇಳಿಯುತ್ತದೆ.

ಪೆಂಗ್ವಿನುಗಳ ಚರ್ಮದ ಕೆಳಭಾಗದಲ್ಲಿ ಬಹಳ ಮಂದವಾದ ಹಾಗೂ ಅನೇಕ ಪದರಗಳುಳ್ಳ ಕೊಬ್ಬಿದೆ. ಶರೀರದ ಉಷ್ಣತೆಯನ್ನು ಕಾಪಾಡಲು ಇದು ಸಹಾಯಕ. ಪೆಂಗ್ವಿನುಗಳ ಶ್ವಾಸನಾಳ ಎರಡು ಅಸಮ ಭಾಗಗಳಾಗಿ ಸೀಳಿರುವುದರಿಂದ ಇವು ಕೂಗಾಡುವಾಗ ಒಂದೇ ಸಮಯದಲ್ಲಿ ಎರಡು ಶ್ರುತಿಗಳು ಹೊರಡುತ್ತವೆ.

ಉಪವಾಸವಿರುವುದರಲ್ಲಿ ವಿಶ್ವದಾಖಲೆ ಸ್ಥಾಪಿಸಿರುವ ಪಕ್ಷಿಯೆಂದರೆ ಎಂಪರರ್ ಪೆಂಗ್ವಿನು. ವೈಜ್ಞಾನಿಕ ನಾಮದ್ವಯ ಆಪ್ಟೆನೊ ಡೈಟ್ಸ್ ಪೆಟಗೋನಿಕಸ್ ಇದು ಧ್ರುವ ಪ್ರದೇಶದ ಸಹಿಸಲಸಾಧ್ಯವಾದ ಹಿಮಚಳಿಯಲ್ಲಿ ಸುಮಾರು 60 ದಿನಗಳ ತನಕ ಉಪವಾಸವಿರುವುದುಂಟು. ಇದೇ ರೀತಿ ಹೊಟ್ಟೆಬಾಕತನಕ್ಕೂ ಪೆಂಗ್ವಿನುಗಳು ಹೆಸರುವಾಸಿಯಾಗಿವೆ. ಅಡಿಲೈ ಪೆಂಗ್ವಿನುಗಳು ಹೊಟ್ಟೆ ತುಂಬ ಉಂಬುವ ತನಕ ಮೀನು, ಸೀಗಡಿ ಸೆಪಿಯ ಪ್ರಾಣಿಗಳನ್ನು ನುಂಗಿ ಅನಂತರ ಎಲ್ಲವನ್ನು ಕಕ್ಕಿ ಪುನಃ ಬೇಸರಪಡದೆ ಆಹಾರವನ್ನು ತೆಗೆದುಕೊಳ್ಳುತ್ತವೆ. ಪೆಂಗ್ವಿನುಗಳ ಇನ್ನೊಂದು ವಿಚಿತ್ರ ಲಕ್ಷಣ ಥಟಕ್ಕನೆ ಸಮುದ್ರದ ನೀರನ್ನು ಕುಡಿಯುವುದನ್ನು ನಿಲ್ಲಿಸಿ ಸಿಹಿನೀರು ಅಥವಾ ಮಂಜನ್ನು ತಿನ್ನಲು ಪ್ರಾರಂಭಿಸುವುದು.

ಪೆಂಗ್ವಿನುಗಳು ಧ್ರುವ ಪ್ರದೇಶದಲ್ಲಿ ಅತಿ ಕಡಿಮೆ ಉಷ್ಣತೆಯಲ್ಲಿ (ಅಂದರೆ - 620 ಅ) ಸಂತಾನ ವೃದ್ಧಿ ಮಾಡುತ್ತವೆ. ಸಂತಾನೋತ್ಪತ್ತಿ ಕಾಲದಲ್ಲಿ ಗಂಡು ಪೆಂಗ್ವಿನುಗಳು ಹೆಣ್ಣಿಗಾಗಿ ಬಡಿದಾಡುತ್ತವೆ. ಪ್ರಣಯಾಚರಣೆಯ ಕಾಳಗ ಅತಿ ಉತ್ಸಾಹದಿಂದ ನಡೆಯುತ್ತದೆ. ಹೆಣ್ಣು ಈ ತಮಾಷೆ ನೋಡುತ್ತ ಸುಮ್ಮನೆ ನಿಂತಿರುತ್ತದೆ.

ಗೂಡು ಕಟ್ಟುವಾಗ ಅಡಿಲೈ ಪೆಂಗ್ವಿನುಗಳು ಕಲ್ಲುಗಳನ್ನು ಮತ್ತು ಗೂಡು ಕಟ್ಟಲು ಉಪಯೋಗಿಸುವ ವಸ್ತುಗಳನ್ನು ಇತರ ಹಕ್ಕಿಗಳ ಗೂಡುಗಳಿಂದ ಕದಿಯುತ್ತಿರುತ್ತವೆ. ಧ್ರುವ ಪ್ರದೇಶದಲ್ಲಿ ಗೂಡು ಕಟ್ಟಲು ಬೇಕಾಗುವ ವಸ್ತುಗಳಿಗೆ ಬರಗಾಲವಿರುವುದರಿಂದ ಪೆಂಗ್ವಿನುಗಳು ತಮ್ಮ ತಮ್ಮ ಸಣ್ಣ ಗೂಡುಗಳನ್ನು ರಕ್ಷಿಸಿಕೊಳ್ಳಲು ಬಹಳ ಬಿರುಸಾಗಿ ಕಾದಾಡುತ್ತವೆ. ಎಂಪರರ್ ಪೆಂಗ್ವಿನ್ ಮಾತ್ರ ಗೂಡು ಕಟ್ಟುವುದಿಲ್ಲ.

ಹೆಣ್ಣು ಎಂಪರರ್ ಪೆಂಗ್ವಿನ್ ಒಂದೇ ಒಂದು ಮೊಟ್ಟೆಯಿಟ್ಟು ಕೂಡಲೇ ಅದನ್ನು ಗಂಡಿಗೆ ವರ್ಗಾಯಿಸುತ್ತದೆ. ಗಂಡು ನೆಟ್ಟಗೆ ನಿಂತಿರುವ ಭಂಗಿಯಲ್ಲಿಯೇ ಮೊಟ್ಟೆಯನ್ನು ತನ್ನ ಜಾಲಪಾದಗಳ ಮೇಲಿಟ್ಟುಕೊಂಡು, ಪಾದಗಳ ನಡುವಿನ ಸಡಿಲವಾದ ಚರ್ಮದಿಂದ ಒಂದು ಚೀಲವನ್ನು ನಿರ್ಮಿಸಿ ಅದರಿಂದ ಮೊಟ್ಟೆಯನ್ನು ಮುಚ್ಚಿ ಸುಮಾರು 62 ರಿಂದ 64 ದಿನಗಳ ತನಕ ಆಹಾರವಿಲ್ಲದೆ, ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುತ್ತದೆ. ಧ್ರುವ ಪ್ರದೇಶದ ಚಳಿಗಾಲದ ಉಷ್ಣತೆ - 620 ಸೆ ಗಿಂತ ಕಡಿಮೆಯಿರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಪೆಂಗ್ವಿನ್ ಮೊಟ್ಟೆಗೆ ಕಾವು ಕೊಡಬೇಕಾದರೆ ರಾತ್ರಿ ಹಗಲು ತಡೆಯಿಲ್ಲದೆ ಒಂದೇ ಸಮನಾಗಿ ಸುಮಾರು 360 ರಿಂದ 310 ಸೆ. ಉಷ್ಣತೆಯನ್ನು ಸುಮಾರು 8 ಅಥವಾ 9 ವಾರಗಳ ತನಕ ಒದಗಿಸುತ್ತಿರಬೇಕು. ಈ ಅವಧಿಯಲ್ಲಿ ಗಂಡು ತನ್ನ ದೇಹದ ಕೊಬ್ಬನ್ನು ಉಪಯೋಗಿಸಿಕೊಳ್ಳುತ್ತದೆ. ಇದರಿಂದಾಗಿ ಮೊಟ್ಟೆಯಿಂದ ಮರಿ ಹೊರಬರುವ ಕಾಲಕ್ಕೆ ಗಂಡಿನ ತೂಕ ಸಾಕಷ್ಟು ಅಂದರೆ ಸೇಕಡ 25 ರಿಂದ 40 ರ ವರೆಗೆ ಕಡಿಮೆಯಾಗಿರುತ್ತದೆ.

ಮರಿಗಳು ಮೊಟ್ಟೆಯೊಡೆದು ಬಂದ ಅನಂತರ ಅವುಗಳನ್ನು ಸಾಕಿ ಸಲಹಲು ಸಹ ಪೆಂಗ್ವಿನ್‍ಗಳು ಹೊಡೆದಾಡುತ್ತವೆ. ಇದರಿಂದ ಕೆಲವು ಸಾರಿ ಮರಿಗಳಿಗೆ ಹಾನಿಯಾಗುವುದುಂಟು. ಮರಿಗಳು ಮೊದಲಲ್ಲಿ ಕುರುಡಾಗಿರುತ್ತವೆ. ಮರಿಗಳು ಸ್ವಲ್ಪ ಬೆಳೆದು ಅಡ್ಡಾಡಲು ಪ್ರಾರಂಭಿಸಿದ ಕೂಡಲೇ ಅವುಗಳನ್ನು ಶಿಶುವಿಹಾರದಲ್ಲಿ ಮಕ್ಕಳನ್ನು ಒಂದುಗೂಡಿಸುವ ಹಾಗೆ ಒಂದು ಕಡೆ ಗುಂಪು ಕೂಡಿಸಿ ಅವುಗಳ ಸುತ್ತಲೂ ದೊಡ್ಡ ಪಕ್ಷಿಗಳೆಲ್ಲವೂ ಹಿಮದ ಬೇಲಿಯಂತೆ ನಿಂತು ಕಾವಲು ಕಾಯುತ್ತಿರುತ್ತವೆ. ಗಂಡು ಮತ್ತು ಹೆಣ್ಣು ಪೆಂಗ್ವಿನ್‍ಗಳು ತಮ್ಮಲ್ಲಿ ಅರ್ಧ ಜೀರ್ಣವಾದ ಆಹಾರವನ್ನು ಹೊರ ಕಕ್ಕಿ ಅದನ್ನು ಮರಿಗಳಿಗೆ ಆಹಾರವಾಗಿ ಕೊಟ್ಟು ಸಾಕುತ್ತವೆ.

ಸುಮಾರು 65,000,000 ವರ್ಷಗಳ ಹಿಂದಿನ ಪೆಂಗ್ವಿನ್ ಅವಶೇಷಗಳು ನ್ಯೂಜಿಲೆಂಡಿನಲ್ಲಿ ದೊರಕಿರುವುದರಿಂದ ಇವು ಬಹಳ ಹಳೆಯ ಕಾಲದ ಪಕ್ಷಿಗಳೆಂದು ತಿಳಿಯಲಾಗಿದೆ. (ಕೆ.ಪಿ.ಆರ್.) (ಪರಿಷ್ಕರಣೆ : ಕೆ ಎಸ್ ನವೀನ್)