ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೆಡಿಪ್ಯಾಲ್ಪಿ
ಗೋಚರ
ಪೆಡಿಪ್ಯಾಲ್ಪಿ - ಸಂಧಿಪದಿ ವಂಶದ ಅರ್ಯಾಕ್ನಾಯ್ಡಿಯ ವರ್ಗಕ್ಕೆ ಸೇರಿದ ಒಂದು ಗಣ. ಇದಕ್ಕೆ ಸೇರಿದ ಕೀಟಗಳಿಗೆ ಚಾಟಿಚೇಳುಗಳೆಂದು (ವಿಪ್ ಸ್ಕಾರ್ಪಿಯನ್ಸ್) ಹೆಸರು. ಇವು ಪ್ರಧಾನವಾಗಿ ಉಷ್ಣವಲಯದಲ್ಲಿ ಕಾಣಬರುತ್ತವೆ. ಯೂರೋಪ್, ಅಮೆರಿಕಗಳಲ್ಲೂ ಈ ಗುಂಪಿನ ಕೆಲವು ಪ್ರಭೇದಗಳು ಉಂಟು. ಇವುಗಳ ಉದ್ದ 1-12 ಸೆಂ.ಮೀ. ನೋಡಲು ಹೆಚ್ಚು ಕಡಿಮೆ ಚೇಳಿನಂತೆಯೇ ಇವೆ. ಆದರೆ, ಬಾಲ ಉದ್ದನೆಯ ಚಾಟಿಯಂತಿದೆ. ಬಾಲದ ತುದಿಯಲ್ಲಿ ಕುಟುಕು ಕೊಂಡಿಯಿಲ್ಲ. ಇವು ನಿಶಾಚರಿಗಳು. ಹಗಲಿನಲ್ಲಿ ದಿಮ್ಮಿಗಳ ಕೆಳಗೋ ಮರಳಿನಲ್ಲಿ ಹುದುಗಿಕೊಂಡಿರುವುವು. ಇವುಗಳ ಆಹಾರ ಇತರ ತೆರನ ಕೀಟಗಳು. ಇವುಗಳಲ್ಲಿ ಕೆಲವು ಬಗೆಯವು ಉದ್ರೇಕಗೊಂಡಾಗ ವಿನಿಗರ್ ದ್ರವವನ್ನು ಹೋಲುವ ವಾಸನೆಯನ್ನು ಹೊರಸೂಸುವುವು.
ತೆಲಿಫೋನಸ್ ಮತ್ತು ಫ್ರೈನಿಕಸ್ ಎಂಬವು ಈ ಗುಂಪಿನ ಮುಖ್ಯ ಉದಾಹರಣೆಗಳು. (ಪಿ.ಎ.ಆರ್.)