ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೆರಿಡೊಟೈಟ್
ಗೋಚರ
ಪೆರಿಡೊಟೈಟ್
ಭಾರವಾದ ಮಾಸಲು ಹಸುರು ಬಣ್ಣದ ಪ್ರತ್ಯಾಮ್ಲಿತ ಅಥವಾ ಕ್ಷಾರ ಅಗ್ನಿಶಿಲೆ. ಇದರಲ್ಲಿ ಶೇಕಡಾ 45 ಕ್ಕಿಂತಲೂ ಕಡಿಮೆ ಸಿಲಿಕವಿದೆ; ಮೆಗ್ನೀಸಿಯ ಹೆಚ್ಚಿಗೆ ಇದೆ. ಇದರಲ್ಲಿ ಕಬ್ಬಿಣ, ಮೆಗ್ನೀಸಿಯವನ್ನು ಒಳಗೊಂಡಿರುವ ಖನಿಜಗಳು ಹೇರಳವಾಗಿರುತ್ತವೆ. ಈ ಪ್ರಮುಖ ಖನಿಜಗಳೆಂದರೆ ಪೈರಾಕ್ಸಿನ್, ಆಲಿವಿನ್, ಹಾರ್ನ್‍ಬ್ಲೆಂಡ್, ಇಲ್ಮನೈಟ್, ಕ್ರೋಮೈಟ್ ಇತ್ಯಾದಿ. ಇಂಥ ಕ್ಷಾರ ಶಿಲೆಗಳಲ್ಲಿ ಹೆಚ್ಚಾಗಿ ಕ್ರೋಮಿಯಮ್ ಅದುರು ಸಿಕ್ಕುತ್ತದೆ. ಭೂಮಿಯ ನಾನಾ ಕಡೆಗಳಲ್ಲಿ ಸಿಕ್ಕಿರುವ ಕ್ರೋಮೈಟ್ ಅದುರು ನಿಕ್ಷೇಪಗಳು ಬಹಳವಾಗಿ ಈ ಶಿಲೆಯಲ್ಲಿ ಅಥವಾ ಇದರ ರೂಪಾಂತರಿತ ಶಿಲೆಯಲ್ಲಿ ಕಂಡುಬಂದಿವೆ. ಕ್ರೋಮಿಯಮ್ ಅದುರು ಅಲ್ಲದೆ ತಾಮ್ರದ ಅದುರು, ವಜ್ರ, ಪ್ಲಾಟಿನಮ್ ಅದುರು ಕೂಡ ಈ ಶಿಲೆಯ ಜೊತೆಯಲ್ಲೇ ಸಿಗುತ್ತವೆ. ಮೈಸೂರು ಮತ್ತು ನಂಜನಗೂಡು ನಡುವೆ ಹಾದು ಹೋಗುತ್ತಿರುವ ಪೆರಿಡೊಟೈಟ್ ಮತ್ತು ಅವುಗಳ ರೂಪಾಂತರಿತ ಶಿಲಾ ಸಮುದಾಯದಲ್ಲಿ ಕ್ರೋಮೈಟ್ ಹೇರಳವಾಗಿ ದೊರಕುತ್ತದೆ.
(ಟಿ.ಟಿ)