ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೆಲೇಜಿಯಸ್ಸನ ಮತ

ವಿಕಿಸೋರ್ಸ್ದಿಂದ

ಪೆಲೇಜಿಯಸ್ಸನ ಮತ- 360? - 430?, ಪೆಲೇಜಿಯಸ್ ಬೋಧಿಸಿದ ಒಂದು ಮತ. ಕ್ರೈಸ್ತ ಸಂನ್ಯಾಸಿ. ಬಹುಶಃ ಈತ ಐರ್ಲೆಂಡಿನವ. ಕ್ರಿ.ಶ. 400ರಲ್ಲಿ ರೋಮ್ ಪಟ್ಟಣಕ್ಕೆ ಹೋಗಿ ಅಲ್ಲಿನ ಜನರ ಅನಾಚಾರಗಳನ್ನು ಕಂಡು ವಿಸ್ಮಯಗೊಂಡುದಲ್ಲದೆ ಅವರು ಸದಾಚಾರಿಗಳಾಗುವುದಕ್ಕೆ ಲೇಶವಾದರೂ ಪ್ರಯತ್ನಿಸದೆ ಇರುವುದನ್ನು ಗಮನಿಸಿದ. ಸದಾಚಾರಕ್ಕೆ ದೈವಕೃಪೆಯೊಂದೇ ಕಾರಣವೆಂದು ಅಗಸ್ಟೀನ್ ಬೋಧಿಸುತ್ತಿರುವುದರಿಂದ ಆ ಬೋಧನೆಯ ಮೇರೆಗೆ ಮಾನವ ಸ್ವಾತಂತ್ರ್ಯಕ್ಕೂ ಚಿತ್ತಪೂರ್ವಕವಾದ ಪ್ರಯತ್ನಕ್ಕೂ ಕೊರತೆ ಬಂತೆಂದು ಭಾವಿಸಿ ಮನುಷ್ಯ ಉತ್ತಮನಾಗಬೇಕಾದರೆ ಅವನ ಆಶೆಯೂ ಪ್ರಯತ್ನವೂ ಅತ್ಯಾವಶ್ಯಕವಾಗಿದೆ ಎಂಬುದಾಗಿ ಬೋಧಿಸಲಾರಂಭಿಸಿದ. ಮನುಷ್ಯ ಜನ್ಮದಿಂದ ದುಷ್ಟನಲ್ಲ. ತನ್ನ ಮನೋಭಾವದಿಂದಲೂ ತಾನು ಮಾಡುವ ಕ್ರಿಯೆಗಳಿಂದಲೂ ದುಷ್ಟನಾಗುತ್ತಾನೆ. ಆದುದರಿಂದ ಅವನು ತಕ್ಕ ಪ್ರಯತ್ನ ಮಾಡುವುದಾದರೆ ಉತ್ತಮನಾಗಬಲ್ಲನೆಂಬುದು ಪೆಲೇಜಿಯಸ್ಸನ ನಂಬಿಕೆಯಾಗಿತ್ತು. ದೇವರು ಮನುಷ್ಯನಲ್ಲಿ ತೋರುವ ಕೃಪಾಕಾರ್ಯಕ್ಕೆ ಪೆಲೇಜಿಯಸ್ ಪ್ರಾಧಾನ್ಯ ಕೊಡಲಿಲ್ಲವೆಂಬುದು ಆಗಸ್ಟೀನ್ ತಿಳಿದು ಅವನ ಮತವನ್ನು ಖಂಡಿಸಲಾರಂಭಿಸಿದ. ದೇವರ ಕೃಪೆಯಿಂದಲ್ಲದೆ ಬೇರೆ ವಿಧದಲ್ಲಿ ತಾನು ಎಂದೂ ದೇವರ ಕಡೆಗೆ ತಿರುಗು ತ್ತಿರಲಿಲ್ಲವೆಂದು ಆತ ತನ್ನ ಅನುಭವವನ್ನು ತಿಳಿಸಿದ. ಮಾನವ ರಕ್ಷಿಸಲ್ಪಡಬೇಕಾದರೆ ದೇವರ ಕೃಪೆ ಅತ್ಯಗತ್ಯ. ಮಾನವ ತನ್ನನ್ನು ತಾನು ರಕ್ಷಿಸಿಕೊಳ್ಳಲಾರ ಎಂದು ಬೋಧಿಸಿದ.

ಕ್ರೈಸ್ತ ಧಾರ್ಮಿಕ ಸಭೆ ಪೆಲೇಜಿಯಸ್ಸನನ್ನು ಪಾಷಂಡಿಯೆಂದು ತೀರ್ಪು ಕೊಟ್ಟಿತಲ್ಲದೆ ಇವನ ಬೋಧೆಯನ್ನು ತಿರಸ್ಕರಿಸಿತು. (ಎಚ್.ಎಸ್.)