ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೈಲಾಸ್

ವಿಕಿಸೋರ್ಸ್ದಿಂದ

ಪೈಲಾಸ್ - ಪ್ರಾಚೀನ ಗ್ರೀಸಿನಲ್ಲಿ ಕಂಚಿನ ಯುಗದಲ್ಲಿ ವಾಸಿಸುತ್ತಿದ್ದ ಮೈಸಿನಿಯನ್ನಿರ ಅರಮನೆ; ಮತ್ತು ನಗರ. ನವಾರಿನೋ ಕೊಲ್ಲಿಯ ಪ್ರದೇಶದಲ್ಲಿ ಪೆಲಪನೀಸ್ ಪ್ರಾಂತ್ಯದ ಮೈಸಿನಿಯನ್ನರ ದೊರೆ ನೆಸ್ಟಾರನ ಕಾಲದಲ್ಲಿ ಈ ಮಂದಿರವನ್ನು ನಿರ್ಮಿಸಲಾಯಿತು. ಆಧುನಿಕ ಎಫಾನೋ ಎಂಗ್ಲಿಯನೋಸ್ ಎಂಬ ಸ್ಥಳದಲ್ಲಿ 1939ರಲ್ಲಿ ಗ್ರೀಕ್ ಮತ್ತು ಅಮೆರಿಕನ್ ಪ್ರಾಚ್ಯ ಶಾಸ್ತ್ರಜ್ಞರ ಸಂಶೋಧನೆಗಳಿಂದ ಆ ಪ್ರಾಚೀನ ನಗರವನ್ನು ಗುರುತಿಸಲಾಯಿತು. ಉತ್ಖನನಗಳಲ್ಲಿ ಈವರೆವಿಗೂ ದೊರಕಿರುವುದರಲ್ಲೆಲ್ಲ ಭವ್ಯವಾದ ಅರಮನೆಯೊಂದರ ಅಡಿಪಾಯ ಕಂಡುಬಂದಿದೆ. ಒಳಾಂಗಣದ ಸುತ್ತ ಇರುವ ಅನೇಕ ಕಟ್ಟಡಗಳ ಪೈಕಿ ವಾಯುವ್ಯ ಭಾಗದಲ್ಲಿರುವ ಮೆಗರಾನ್ ಮಾದರಿಯದು. (ಪ್ರಾಚೀನ ಮೈಸಿನಿಯನ್ನರಿಗೆ ವಿಶಿಷ್ಟವಾದ ರೀತಿ; ಇದರ ನಡು ಹಜಾರ ಆಯಾಕಾರವಾಗಿದ್ದು ನಡುವೆ ವರ್ತುಲವಾದ ಬೆಂಕಿಗೂಡಿನಿಂದ ಕೂಡಿರುತ್ತದೆ.) 13 ಮೀ. ( 11 ಮೀ. ವಿಸ್ತೀರ್ಣದ ಮತ್ತು ನಾಲ್ಕು ಕಂಬಗಳಿಂದ ಕೂಡಿದ ಹಜಾರ, ಮುಂಭಾಗದಲ್ಲಿ ಅದೇ ಅಗಲದ ಮೊಗಸಾಲೆ, ಮತ್ತೆ ಅದರ ಮುಂದೆ ಎರಡು ಕಂಬಗಳಿರುವ ಮುಖಮಂಟಪ ಇವೆ. ಮಂದಿರವನ್ನು ಬೆಚ್ಚಗಿಡಲು 4 ಮೀ. ಸುತ್ತಳತೆಯ ಬೆಂಕಿಗೂಡು. ಅದಕ್ಕೆ ಸಂಬಂಧಿಸಿದ ಸುಟ್ಟಮಣ್ಣಿನ ಹೊಗೆಕೊಳವೆ, ಬೆಂಕಿಗೂಡಿನ ಹೊರಮೈಯ ಮೇಲಿನ ಮನೋಜ್ಞ ಅಲಂಕರಣ ಇವೆಲ್ಲ ಗಮನಾರ್ಹ. ಅರಮನೆಯ ಹಜಾರದ ಗೋಡೆಗಳ ಮೇಲೆ ವಿವಿಧ ಬಣ್ಣಗಳಲ್ಲಿ ಗ್ರಿಫಿನ್ (ಹದ್ದಿನ ತಲೆ ಮತ್ತು ರೆಕ್ಕೆಗಳಿಂದಲೂ ಸಿಂಹದ ಒಡಲಿನಿಂದಲೂ ಕೂಡಿದ ಪೌರಾಣಿಕ ಪ್ರಾಣಿ), ಸಿಂಹ ಮತ್ತು ಯುದ್ಧ ಇವುಗಳ ಚಿತ್ರಗಳಿದ್ದವು. ಇಡೀ ನೆಲಗಟ್ಟನ್ನು ಬಣ್ಣಗಳಿಂದ ಚಿತ್ರಿಸಲಾಗಿತ್ತು. ಕ್ರಿ.ಪೂ. 12ನೆಯ ಶತಮಾನದಲ್ಲಿ ನಡೆದ ಡೋರಿಯನ್ ದಾಳಿಯ ಸಮಯದಲ್ಲಿ ಈ ಮಂದಿರ ಅಗ್ನಿಗೆ ಆಹುತಿಯಾಯಿತು. ಅರಮನೆಯ ನೈಋತ್ಯ ಭಾಗದಲ್ಲಿ ಅತಿಥಿಗಳನ್ನು ಸ್ವಾಗತಿಸುವ ಕೋಣೆಗಳಿವೆ. ಅವುಗಳ ಆಗ್ನೇಯ ಭಾಗದಲ್ಲಿರುವ ಪ್ರವೇಶ ಕೋಣೆಯಿಂದ ರಾಜಮನೆತನದವರ ವಾಸಗೃಹಗಳಿಗೆ ಹೋಗಬಹುದಾಗಿತ್ತು. ಹೊರ ಅರಮನೆಯಲ್ಲಿದ್ದ ಆಸ್ಥಾನ ಮಂದಿರವನ್ನು ಹೋಲುವ ಸಣ್ಣ ಪ್ರಮಾಣದ ಸಿಂಹಾಸನ ಮಂದಿರವೊಂದು ಈ ವಾಸಗೃಹಗಳ ನಡುವೆ ಇತ್ತು. ಅದರ ಬಳಿಯ ಕೋಣೆಯೊಂದರಲ್ಲಿ ಸುಣ್ಣ ಜೇಡಿಮಣ್ಣಿನಲ್ಲಿ ಮಾಡಿ ಬಣ್ಣಗಳಿಂದ ಚಿತ್ರಿಸಲಾಗಿದ್ದ ಸ್ನಾನದ ತೊಟ್ಟಿಯಿತ್ತು. ಅರಮನೆಯ ಖಾದ್ಯ ವಸ್ತುಗಳ ಉಗ್ರಾಣದಲ್ಲಿ ಬಡುಗಳ ಮೇಲೆ ಜೋಡಿಸಿಟ್ಟಿದ್ದ 2,147 ಬಟ್ಟಲುಗಳು ದೊರಕಿವೆ. ಕುಡಿಯಲು ಇವನ್ನು ಉಪಯೋಗಿಸಲಾಗುತ್ತಿತ್ತು.

ಕ್ರಿ.ಪೂ. 14-13ನೆಯ ಶತಮಾನಗಳ ಕಾಲದ ಈ ಅರಮನೆಯಿಂದ 16 ಕಿ.ಮೀ. ಸುತ್ತಳತೆಯಲ್ಲಿ ಕ್ರಿ.ಪೂ. 16-15 ನೆಯ ಶತಮಾನ ಕಾಲದ ಥೊಲಾಯಿ ಸಮಾಧಿಗಳೂ ಅದರ ಪಕ್ಕದಲ್ಲಿಯೇ ಕೋಣೆÂಗೋರಿಗಳೂ ಇರುವುದರಿಂದ ಈ ನಿವೇಶನ ಬಹಳ ಹಿಂದಿನಿಂದಲೂ ಪ್ರಮುಖ ಸಾಂಸ್ಕøತಿಕ ಕೇಂದ್ರವಾಗಿತ್ತೆಂದು ಭಾವಿಸಬಹುದಾಗಿದೆ. ಈ ಅರಮನೆಯ ನೈಋತ್ಯ ದಿಕ್ಕಿನಲ್ಲಿ ಅದಕ್ಕೂ ಹಿಂದಿನ ಅರಮನೆಯೊಂದರ ಅವಶೇಷಗಳು ಕಂಡುಬಂದಿವೆ. ಅದರ ಸಿಂಹಾಸನ ಮಂದಿರವನ್ನು ಗುರುತಿಸಬಹುದಾಗಿದೆ.

ಅರಮನೆಯ ಹಜಾರದ ಆಗ್ನೇಯ ಭಾಗದಲ್ಲಿರುವ ವಿಶಾಲವಾದ ಪ್ರವೇಶ ಮಂದಿರದಲ್ಲಿದ್ದ ಗ್ರಂಥ ಭಂಡಾರದ 1,200 ಲಿಖಿತ ಜೇಡಿಮಣ್ಣಿನ ಫಲಕಗಳಿಂದ ರೇಖಿಯ ಲಿಪಿಯನ್ನು ಪ್ರಥಮ ಬಾರಿಗೆ ಓದಲು ಸಾಧ್ಯವಾಯಿತು. ಪ್ರಾಚ್ಯ ಸಂಶೋಧನೆಯಿಂದ ತಿಳಿದುಬರುವ ಮಾಹಿತಿಗಳನ್ನು ದೃಢಪಡಿಸಿಕೊಳ್ಳಲು ಮತ್ತು ಈ ಕಟ್ಟಡದ ಇತಿಹಾಸವನ್ನು ತಿಳಿಯಲು ಈ ಲಿಖಿತ ದಾಖಲೆಗಳು ಸಹಾಯಕವಾಗಿವೆ. (ಬಿ.ಕೆ.ಜಿ.)