ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೊಸೈಡೋನಿಯಸ್
ಪೊಸೈಡೋನಿಯಸ್ ಕ್ರಿ. ಪೂ. ಸು. 135-50. ಗ್ರೀಕ್ ತತ್ತ್ವವಿಜ್ಞಾನಿ. ಕ್ರೀಡಾಪಟು ಎಂಬ ಅಡ್ಡ ಹೆಸರಿದ್ದ ಈ ಸ್ಟೋಯಿಕ್ ತತ್ತ್ವವಿಜ್ಞಾನಿ ಆ ಕಾಲದ ಅತ್ಯಂತ ಹಿರಿಯ ವಿದ್ವಾಂಸನೆಂದು ಖ್ಯಾತಿ ಗಳಿಸಿದ್ದ. ಪ್ರಕೃತಿ ಶಾಸ್ತ್ರ, ಭೂಗೋಳ ಶಾಸ್ತ್ರ, ಗಣಿತ ಹಾಗೂ ಖಗೋಳ ವಿಜ್ಞಾನಗಳಲ್ಲಿ ಈತನಿಗೆ ಅಪಾರ ಆಸಕ್ತಿ. ಭೂಮಿಯಿಂದ ಸೂರ್ಯನಿಗಿರುವ ದೂರ, ಸೂರ್ಯನ ಗಾತ್ರ, ಭೂಮಿಯ ವ್ಯಾಸ, ಸಾಗರದ ಉಬ್ಬರವಿಳಿತದ ಮೇಲೆ ಚಂದ್ರನ ಪ್ರಭಾವ-ಇವೇ ಮುಂತಾದವುಗಳ ಶೋಧನೆ ಈತ ಅನ್ವೇಷಣೆಗೆ ತೆಗೆದುಕೊಂಡಿದ್ದ ಹಲವು ಸಮಸ್ಯೆಗಳು. ಈತನ ತೌರೂರು ಸಿರಿಯಾ ದೇಶದ ಅಪೇಮಿಯ. ಆಗಿನ ಕಾಲದಲ್ಲಿ ಪ್ರಸಿದ್ಧಿ ಪಡೆದಿದ್ದ ಪನೇಷಿಯಸ್ ಎಂಬ ಗುರುಗಳಲ್ಲಿ ವ್ಯಾಸಂಗವನ್ನು ಮುಗಿಸಿದ ಬಳಿಕ ಈತ ಅನೇಕ ವರ್ಷಗಳ ಪರ್ಯಂತ ಸ್ಪೇನ್, ಆಫ್ರಿಕ, ಇಟಲಿ, ಗಾಲ್, ಲಿಗ್ಯೂರಿಯ, ಸಿಸಿಲಿ ಹಾಗೂ ಏಡ್ರಿಯಾಟಿಕ್ ಸಮುದ್ರದಪೂರ್ವ ಕರಾವಳಿಯ ದೇಶಗಳಲ್ಲಿ ಸಂಚರಿಸುತ್ತ ಅನೇಕ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿದ. ಆ ತರುವಾಯ ರ್ಹೋಡ್ಸ್ ದ್ವೀಪಕ್ಕೆ ಬಂದು ಉಪಾಧ್ಯಾಯನಾಗಿ ನೆಲೆಸಿದ. ಈ ವೇಳೆಗೆ ಈತನ ವಿದ್ವತ್ತಿನ ಕೀರ್ತಿ ಎಲ್ಲ ಕಡೆಗೂ ಹರಡಿ ಅನೇಕ ಮಂದಿ ವಿದ್ವಾಂಸರು ಇಲ್ಲಿಗೆ ಆಕರ್ಷಿತರಾದರು. ಇವರಲ್ಲಿ ಪ್ರಮುಖರು ಮರೈಯಸ್, ರೊಟೀಲಿಯಸ್ ರೂಫಸ್, ಪಾಂಪೀ ಹಾಗೂ ಸಿಸಿರೋ. ಸಿಸಿರೋ ಕ್ರಿ. ಪೂ. 78-77ರಲ್ಲಿ ಪೊಸಿಡೋನಿಯಸನ ಶಿಷ್ಯನಾಗಿದ್ದ. (ಡಿ.ವಿ.ಆರ್.)