ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೋಷಣೆ

ವಿಕಿಸೋರ್ಸ್ದಿಂದ

ಪೋಷಣೆ - ಪ್ರತಿಯೊಂದು ಜೀವಿಯೂ ಆರೋಗ್ಯ ಸ್ಥಿತಿಯಲ್ಲಿ ಬದುಕಿ ಬಾಳಲು ಹಾಗೂ ವಂಶಾಭಿವೃದ್ಧಿ ಮಾಡಲು ಸ್ವಂತ ಪರಿಸರದಿಂದ ಪಡೆಯಲೇಬೇಕಾದ ಆಹಾರದ ಅವಶ್ಯಕ ಘಟಕಗಳು ಅವನ್ನು ಕುರಿತ ಅಧ್ಯಯನ ಹಾಗೂ ಅವು ಒಡಲೊಳಗೆ ಜೀರ್ಣವಾಗಿ ರಕ್ತಗತವಾಗಿ ಕೋಶಗತವಾಗುವ ಪ್ರಕ್ರಿಯೆ (ನ್ಯೂಟ್ರಿಶನ್). ಆಹಾರದ ಈ ಆವಶ್ಯಕ ಘಟಕಗಳಿಗೆ ಪೋಷಕಗಳು (ನ್ಯೂಟ್ರಿಯೆಂಟ್ಸ್) ಎಂದು ಹೆಸರು. ಇವು ಆರು ; ಶರ್ಕರ, ಸಸಾರಜನಕ, ಮೇದಸ್ಸು, ಜೀವಸತ್ತ್ವ, ಖನಿಜ ಲವಣ ಮತ್ತು ನೀರು. ನೀರು ಪೋಷಕವೇ ಅಲ್ಲವೇ ಎಂಬುದು ವಿವಾದಾಸ್ಪದವಾದರೂ ದೇಹದ ಸಮಸ್ತ ಕ್ರಿಯೆಗಳೂ ಜರುಗುವುದು ನೀರಿನ ಮಾಧ್ಯಮದಲ್ಲೇ. ತೂಕರೀತ್ಯಾ ಮಾನವದೇಹದ ಅರ್ಧಾಂಶ ನೀರು, ನೀರಿಲ್ಲದೆ ದೇಹ ಬದುಕಿರದು. ಈ ಸಂಗತಿಗಳನ್ನು ಗಮನಿಸುವಾಗ ನೀರನ್ನು ಕೂಡ ಪೋಷಕ ಎಂದೇ ಪರಿಗಣಿಸಬೇಕಾಗುತ್ತದೆ. ವ್ಯಾಪಕವಾಗಿ ಪೋಷಕಗಳ ಅಧ್ಯಯನವೇ ಪೋಷಣೆ.

ಪ್ರಸಕ್ತ ಲೇಖನದಲ್ಲಿ ಮಾನವ ದೇಹವನ್ನು ಕುರಿತಂತೆ ಪೋಷಣೆಯನ್ನು ಚರ್ಚಿಸಿದೆ. ದೇಹ ಸರಿಯಾಗಿ ಬೆಳೆಯುತ್ತ ಆರೋಗ್ಯ ಸ್ಥಿತಿಯಲ್ಲಿರಬೇಕಾದರೆ ಅದಕ್ಕೆ ಸರಿಯಾದ ಪೋಷಣೆ ಅವಶ್ಯಕ. ಹೊಟ್ಟೆ ತುಂಬುವಷ್ಟು ಸಂತುಲಿತ ಆಹಾರ (ಬ್ಯಾಲೆನ್ಸ್ಡ್ ಡೈಯೆಟ್) ಮತ್ತು ಕುಡಿಯಲು ತಕ್ಕಷ್ಟು ನೀರು ಇವುಗಳಿಂದ ಈ ಅವಶ್ಯಕತೆ ಪೂರೈಕೆ ಆಗುತ್ತದೆ. ವಿವಿಧ ಪೋಷಕಗಳು ದೇಹಾವಶ್ಯಕ ಪ್ರಮಾಣಗಳಲ್ಲಿ ಮೇಳೈಸಿರು ಆಹಾರವೇ ಸಂತುಲಿತ ಆಹಾರ. ಇಂಥ ಆಹಾರ ಮತ್ತು ನೀರು ಕೇವಲ ಹಸಿವು ನೀರಡಿಕೆಗಳನ್ನು ಮಾತ್ರ ತೃಪ್ತಿಪಡಿಸದೇ ದೇಹಾರೋಗ್ಯವನ್ನು ಕೂಡ ಕಾಪಾಡುತ್ತವೆ. ಬೆಳವಣಿಗೆಯನ್ನು ಉತ್ತೇಜಿಸುತ್ತವೆ ಮತ್ತು ಬಗೆಬಗೆಯ ಚಟುವಟಿಕೆಗಳನ್ನು ಯುಕ್ತವೇಳೆಗಳಲ್ಲಿ ಆಗಗೊಳಿಸುತ್ತವೆ. ಹೀಗಲ್ಲದೇ ಪೋಷಕಗಳನ್ನು ಬೇಕಾದಷ್ಟಕ್ಕಿಂತ ಹೆಚ್ಚಿಗೆ ತೆಗೆದುಕೊಂಡರೆ ಅಥವಾ ಸಾಕಾದಷ್ಟಕ್ಕಿಂತ ಕಡಿಮೆ ತೆಗೆದುಕೊಂಡರೆ - ಇದರ ಕಾರಣ ಬಡತನ, ಸಿರಿವಂತಿಕೆ, ಅಲಭ್ಯತೆ. ಅಥವಾ ಅಜ್ಞಾನ ಯಾವುದೇ ಆಗಿರಬಹುದು - ದೇಹಾರೋಗ್ಯ ಮತ್ತು ಬೆಳವಣಿಗೆ ಕುಂಠಿತವಾಗುತ್ತವೆ. ಆಹಾರ ಸಾಮಗ್ರಿಗಳನ್ನು ಹೆಚ್ಚಿಗೆ ತೆಗೆದುಕೊಳ್ಳುವ ಅನುಕೂಲತೆ ಇದ್ದು ಹಾಗೆ ಮಾಡಿದರೆ ಮಾತ್ರ ಶರೀರಕ್ಕೆ ಒಳ್ಳೆಯ ಪೋಷಣೆ ಒದಗುತ್ತದೆ ಎಂದು ತಿಳಿಯುವುದು ತಪ್ಪು. ಸೇವಿಸಿದ ಪದಾರ್ಥ ಜೀರ್ಣವಾಗಿ, ರಕ್ತಗತವಾಗಿ ಕೊನೆಗೆ ಕೋಶಗತವಾಗಿ ದೇಹದಲ್ಲಿ ಉಪಯೋಗ ಆಗಬೇಕು ಎಂಬುದು ಅತಿ ಮುಖ್ಯ. ಈ ಚಟುವಟಿಕೆಗಳಿಗೆ ಯಾವ ರೀತಿಯ ಅಡಚಣೆ ಉಂಟಾದರೂ ಪೋಷಣೆ ಸರಿಯಾಗಿಲ್ಲ ಎಂದೇ ಅರ್ಥ. ಇಂಥ ಪರಿಸ್ಥಿತಿಗೆ ನ್ಯೂನ ಪೋಷಣೆ - ಇದು ಅವಪೋಷಣೆ ಆಗಿರಬಹುದು ಅತಿಪೋಷಣೆ ಆಗಿರಬಹುದು - ಎಂದು ಹೆಸರು.

ನಾವು ಸೇವಿಸುವ ಆಹಾರ ಮತ್ತು ನೀರು ಜೀವಕ್ರಿಯೆಗಳು ನಿರಂತರವಾಗಿ ಜರಗಲು ಹಾಗೂ ಎಚ್ಚರವಾಗಿರುವಾಗ ನಮಗೆ ಕೆಲಸ ಮಾಡಲು ತಕ್ಕಷ್ಟು ಶಕ್ತಿಯನ್ನು ಒದಗಿಸುವಷ್ಟು ಇರಲೇಬೇಕು. ಜೊತೆಗೆ ದೇಹ ಯಂತ್ರ ಸದಾ ಕೆಲಸ ಮಾಡುತ್ತ ಶಿಥಿಲವಾಗುತ್ತಿರುವುದರಿಂದ ಅದರ ದುರಸ್ತಿಗೂ ಸಾಕಷ್ಟು ಆಹಾರ ಮತ್ತು ನೀರು ಪೂರೈಕೆ ಆಗಬೇಕು. ಒಟ್ಟು ಎಷ್ಟು ಆಹಾರ ಮತ್ತು ನೀರು ಬೇಕೆಂಬುದು ಹಸಿವು ನೀರಡಿಕೆಗಳಿಂದ ಸ್ಥೂಲವಾಗಿ ವೇದ್ಯವಾದರೂ ಅವೇ ಕರೆಗಳಿಂದ ದೇಹ ಸುಸ್ಥಿಯಲ್ಲಿದೆ ಎಂದಾಗಲಿ ಅವನ್ನು ಸುಲಭ ಮಾರ್ಗದಿಂದ ಒಡನೆ ಶಮನಗೊಳಿಸಿದಾಗ ದೇಹ ಚೆನ್ನಾಗಿರುವುದು ಎಂದಾಗಲಿ ಭರವಸೆ ತಳೆಯುವಂತಿಲ್ಲ. ಪ್ರಾಯಶಃ ಆದಿಮಾನವನ ಅಥವಾ ಅವನಿಗಿಂತ ಹಿಂದಿನ ಆದಿಮ ಮಾನವನ ನೈಸರ್ಗಿಕ ಜೀವನವನ್ನೇ ನಾವು ಅನುಸರಿಸುತ್ತಿದ್ದುದಾಗಿದ್ದರೆ ಈ ಹಸಿವು ನೀರಡಕೆಗಳೇ ಪೋಷಣೆಯನ್ನು ಒದಗಿಸಲು ಸಾಕಾಗಿರುತ್ತಿದ್ದುವೇನೋ ! ಅದರೆ, ವಸ್ತುಸ್ಥಿತಿ ಹೀಗಿಲ್ಲವಷ್ಟೆ. ಸುದೀರ್ಘ ಕಾಲದ ಕೃತಕ ಜೀವನದ ಪರಿಣಾಮವಾಗಿ ನೈಸರ್ಗಿಕ ಕರೆಗಳು ಮೊನಚು ಕಳೆದುಕೊಂಡು ಬೊಡ್ಡಾಗಿವೆ. ಹೀಗಾಗಿ ಆಹಾರವನ್ನು ಕುರಿತಂತೆ ಪೋಷಕಗಳು ಹಾಗೂ ಪೋಷಣೆ ಎಂಬುವನ್ನು ವೈಜ್ಞಾನಿಕವಾಗಿ ಅಭ್ಯಸಿಸುವುದು ಅವಶ್ಯವಾಗಿದೆ.

ಆಹಾರದಲ್ಲಿ ಸಸಾರಜನಕ, ಮೇದಸ್ಸು, ಶರ್ಕರ, ಲವಣ ಜೀವಸತ್ತ್ವ ಮತ್ತು ನೀರು ಇರಲೇಬೇಕು. ಸಾಧಾರಣವಾಗಿ ಎಲ್ಲ ಬಗೆಯ ಆಹಾರಗಳಲ್ಲೂ ಅವು ಇದ್ದೇ ಇರುತ್ತವೆ. ಆಹಾರ ಜೀರ್ಣವಾಗಿ ರಕ್ತಗತವಾದ ಬಳಿಕ ಈ ಸಾಮಗ್ರಿಗಳು ಕೋಶಗಳ ಜೀವವಸ್ತುವಾಗಿಯೂ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುವ ಪದಾರ್ಥಗಳಾಗಿಯೋ ಉಪಯೋಗಿಸಲ್ಪಡುತ್ತವೆ. ಜೀರ್ಣವಾಗದೇ ಉಳಿಯುವ ಆಹಾರ ಮಲವಾಗಿ ವಿಸರ್ಜಿಸಲ್ಪಡುತ್ತದೆ. ಆಹಾರ ಘಟಕಗಳು ದೇಹದೊಳಗೆ ಬಳಕೆ ಆಗುವಾಗ ದೇಹಕ್ಕೆ ಬೇಡವಾದ ಅನೇಕ ರಾಸಾಯನಿಕಗಳು ಸಂಜನಿಸುವುವು. ಅವು ಶ್ವಾಸದ ಇಲ್ಲವೇ ಮೂತ್ರದ ಮೂಲಕ ವಿಸರ್ಜಿಸಲ್ಪಡುತ್ತವೆ. ಜೀರ್ಣವಾಗಿ ರಕ್ತಗತವಾಗಿ ಉಪಯೋಗವಾಗುವ ರಾಸಾಯನಿಕಗಳಾವುವು, ಅವು ದೇಹದಲ್ಲಿ ಯಾವ ಸಾರ್ಥಕತೆಗೆ ಮತ್ತು ಎಷ್ಟು ಮೊತ್ತದಲ್ಲಿ ಉಪಯೋಗವಾಗುತ್ತವೆ ಎಂಬ ಅಂಶಗಳು ತಿಳಿದರೆ ದೈನಂದಿನ ಆಹಾರದಿಂದ ಇವೆಲ್ಲವೂ ಒದಗುತ್ತವೆಯೇ ಎಂಬುದನ್ನು ನಿರ್ಧರಿಸಬಹುದು.

ಜೀರ್ಣಾಂಗಗಳು ಸ್ರವಿಸುವಕಿಣ್ವಗಳಿಂದ ಆಹಾರ ಜೀರ್ಣವಾಗುತ್ತದೆ. ಮೊದಲು ಬಾಯಿಯಲ್ಲಿ ಲಾಲಾ ಗ್ರಂಥಿಗಳಿಂದ ಸ್ರವಿಸುವ ಜೊಲ್ಲಿನೊಡನೆ ಮಿಲನವಾಗಿ ಅದರಲ್ಲಿರುವ ಟೈಯಲಿನ್ ಎಂಬ ಕಿಣ್ವದಿಂದ ಆಹಾರದಲ್ಲಿಯ ಪಿಷ್ಟ ಸ್ವಲ್ಪ ಮಟ್ಟಿಗೆ ಮಾತ್ರ ಸಕ್ಕರೆಯಾಗಿ ಮಾರ್ಪಾಡಾಗುತ್ತದೆ. ವ್ಯಕ್ತಿ ತುತ್ತನ್ನು ಸಾಮಾನ್ಯವಾಗಿ ಅವಸರದಿಂದ ನುಂಗಿಬಿಡುವನಾದ್ದರಿಂದ ಟೈಯಲಿನ್ ಪ್ರಭಾವ ಅದರ ಮೇಲೆ ಹೆಚ್ಚು ಕಾಲ ಇರುವುದಿಲ್ಲ. ಮುಂದೆ ಆಹಾರ ಜಠರವನ್ನು ಪ್ರವೇಶಿಸಿದ ಬಳಿಕ ಜಠರರಸದಲ್ಲಿರುವ ಹೈಡ್ರೋಕ್ಲೋರಿಕ್ ಆಮ್ಲ ಮಾಧ್ಯಮದಲ್ಲಿ ಟೈಯಲಿನ್ ಕೆಲಸ ಮಾಡಲಾರದು. ಜಠರರಸದಲ್ಲಿ ಪೆಪ್ಸಿನ್ ಎಂಬ ಕಿಣ್ವ ಉಂಟು. ಇದು ಹೈಡ್ರೊಕ್ಲೋರಿಕ್ ಆಮ್ಲದ ಜೊತೆ ಆಹಾರದ ಸಸಾರಜನಕಭಾಗದ ಮೇಲೆ ವರ್ತಿಸಿ ಅದನ್ನು ಪೆಪ್ಟೋನ್ ದರ್ಜೆಗೆ ಪರಿವರ್ತಿಸುತ್ತದೆ. ಬಹುಶಃ ಹೈಡ್ರೊಕ್ಲೋರಿಕ್ ಆಮ್ಲ ಆಹಾರದಲ್ಲಿಯ ಕಬ್ಬಿನ ಸಕ್ಕರೆಯನ್ನು ದ್ರಾಕ್ಷಿಸಕ್ಕರೆ ಮತ್ತು ಫಲ ಸಕ್ಕರೆಯಾಗಿ ಸ್ವಲ್ಪ ಮಟ್ಟಿಗೆ ಮಾರ್ಪಡಿಸುವುದು. ಮಿಕ್ಕ ಆಹಾರ ಭಾಗಗಳು ಅಲ್ಲಿ ಬೇರೆ ಯಾವ ಬದಲಾವಣೆಯನ್ನು ಹೊಂದುವುದಿಲ್ಲ. ಅರ್ಧ ಪಚನವಾದ ಈ ಆಹಾರ ಜಠರದಿಂದ ಮುಂದಕ್ಕೆ ಸಣ್ಣ ಕರುಳಿಗೆ ಹರಿಯುತ್ತದೆ. ಇದು ಸ್ವಲ್ಪ ಸ್ವಲ್ಪವಾಗಿರುವುದರಿಂದ ಸುಮಾರು ಐದು ಗಂಟೆಗಳ ಕಾಲ ಜಠರದಲ್ಲಿ ಆಹಾರ ನಿಲ್ಲುತ್ತದೆ. ಸಣ್ಣ ಕರುಳಿನ ಮೊದಲ ಭಾಗವಾದ ಮುಂಗರುಳಿನಲ್ಲಿ (ಡುಯೊಡೀನಮ್) ಸಣ್ಣ ಕರುಳಿನ ರಸದ ಜೊತೆಗೆ ಮೇದೋಜೀರಕರಸವೂ ಪಿತ್ಥರಸವೂ ಇರುತ್ತವೆ. ಏಕೆಂದರೆ ಪಿತ್ಥನಾಳವೂ ಮೇದೋಜೀರಕಾಂಗ ನಾಳವೂ ಇಲ್ಲಿಯೇ ಬಂದು ಕರುಳನ್ನು ಸೇರುವುದಾಗಿದೆ. ಈ ಎಲ್ಲ ರಸಗಳಲ್ಲಿರುವ ಕಿಣ್ವಗಳು ಆಹಾರದ ಮೇಲೆ ಕೆಲಸ ಮಾಡಿ ಅದನ್ನು ಪೂರ್ಣವಾಗಿ ಪಚನಮಾಡುತ್ತವೆ. ಸಸಾರಜನಕ ಭಾಗ ಅಮೈನೋ ಆಮ್ಲಗಳಾಗಿಯೂ ಶರ್ಕರಗಳು ಎಲ್ಲವೂ ಗ್ಲೂಕೋಸ್, ಫ್ರಕ್ಟೋಸ್ ಅಥವಾ ಗ್ಯಾಲಾಕ್ಟೋಸುಗಳಾಗಿಯೂ ಮೇದಸ್ಸು ಬಹು ಸಣ್ಣ ತುಂತುರುಗಳಾಗಿಯೂ ಮಾರ್ಪಟ್ಟು ಜೀರ್ಣಕಾರ್ಯ ಕೊನೆಗೊಳ್ಳುತ್ತದೆ.

ಹೀಗೆ ಪಚನವಾದ ಆಹಾರ ಪದಾರ್ಥಗಳು ಮುಖ್ಯವಾಗಿ ಸಣ್ಣ ಕರುಳಿನಲ್ಲಿಯೂ ಕೆಲವು ಮಾತ್ರ ಕೆಲವು ಸಂದರ್ಭಗಳಲ್ಲಿ ಜಠರ ಮತ್ತು ದೊಡ್ಡ ಕರುಳಿನಲ್ಲಿಯೂ ರಕ್ತಗತವಾಗುತ್ತವೆ. ಬಳಿಕ ಅವು ಯಕೃತ್ತಿಗೆ ಮೊದಲು ಬಂದು ಸೇರುತ್ತವೆ. ಈ ಪಚನಾನಂತರ ವಸ್ತುಗಳು ತತ್‍ಕ್ಷಣ ಅಥವಾ ಸ್ವಲ್ಪ ಕಾಲಾನಂತರ ಅಥವಾ ಯಾವಾಗಲೂ ಯಕೃತ್ತಿನ ಕೋಶಗಳಲ್ಲಿ ಮತ್ತು ಬಹುಶಃ ಇದೇ ರೀತಿ ದೇಹದ ಎಲ್ಲ ಕೋಶಗಳಲ್ಲಿ ಇನ್ನು ಬೇರೆ ಬೇರೆ ರಾಸಾಯನಿಕ ಬದಲಾವಣೆಗಳಿಗೆ ಒಳಪಟ್ಟು ಅನೇಕ ರೀತಿಯಲ್ಲಿ ಉಪಯೋಗಿಸಲ್ಪಡುತ್ತವೆ. ಮುಖ್ಯವಾಗಿ ಇವು ಇಂಧನವಾಗಿ ಉಪಯೋಗಿಸಲ್ಪಟ್ಟು ದೇಹದಲ್ಲಿ ಉಷ್ಣವನ್ನೂ ದೇಹದ ವಿವಿಧ ಭಾಗಗಳು ಕೆಲಸ ಮಾಡಲು ಬೇಕಾದ ಶಕ್ತಿಯನ್ನೂ ಒದಗಿಸುತ್ತವೆ. ಇವೆಲ್ಲವನ್ನೂ ಉಷ್ಣಶಕ್ತಿಯಾಗಿ ಅಳೆದು ನೋಡಿದರೆ ಒಬ್ಬ ವ್ಯಕ್ತಿ ದಿವಸಕ್ಕೆ ಎಷ್ಟು ಆಹಾರ ತೆಗೆದುಕೊಂಡರೆ ಅದು ಅಷ್ಟು ಉಷ್ಣವನ್ನು ಒದಗಿಸುತ್ತದೆ ಎಂದು ತಿಳಿಯಬಹುದು. ಒಬ್ಬ ವ್ಯಕ್ತಿಗೆ ದಿವಸಕ್ಕೆ ಸಾಧಾರಣವಾಗಿ 2,500 - 3,000 ಕಿಲೊಕೆಲೊರಿಗಳಷ್ಟು ಉಷ್ಣಕ್ಕೆ ಸಮಾನವಾದ ಆಹಾರ ಬೇಕಾಗುತ್ತದೆ ಎಂದು ಬೇರೆ ಬೇರೆ ಪ್ರಯೋಗಗಳಿಂದ ಶೋಧಿಸಲಾಗಿದೆ. ವ್ಯಕ್ತಿ ವ್ಯಕ್ತಿಗೂ ವ್ಯತ್ಯಾಸವಿರುವುದು ಸಹಜ. ವ್ಯಕ್ತಿಯ ಆಕಾರ (ಅಂದರೆ ತೂಕ ಮತ್ತು ಎತ್ತರ) ವಯಸ್ಸು, ಲಿಂಗ ಮುಂತಾದವು ಈ ವ್ಯತ್ಯಾಸಕ್ಕೆ ಕಾರಣ. ತೂಕ ಮತ್ತು ಎತ್ತರಕ್ಕೆ ಸಂಬಧಸಿರುವಂತೆಯೇ ವ್ಯಕ್ತಿಯ ಮೇಲ್ಮೈ ವಿಸ್ತೀರ್ಣಕ್ಕೆ ಕೂಡ ಸಂಬಂಧವಿರುತ್ತದೆ. ಮೇಲ್ಮೈ ವಿಸ್ತೀರ್ಣ ಸಾಮಾನ್ಯವಾಗಿ 1.3 ರಿಂದ 1.7 ಚದರ ಮೀಟರುಗಳಷ್ಟಿರುತ್ತದೆ. ಚದರ ಮೀಟರ್ ಮೇಲ್ಮೈ ವಿಸ್ತೀರ್ಣಕ್ಕೆ 1 ಗಂಟೆಗೆ ಪ್ರಾಯದ ಗಂಡಸಿಗೆ 35 ರಿಂದ 40 ಕಿಲೊ ಕೆಲೊರಿಯಷ್ಟು ಉಷ್ಣವೂ ಪ್ರಾಯದ ಮಹಿಳೆಗೆ 30 ರಿಂದ 35 ರಷ್ಟು ಉಷ್ಣವೂ ಬೇಕಾಗುತ್ತವೆಂದು ಪ್ರಯೋಗಗಳಿಂದ ಶೋಧಿಸಲಾಗಿದೆ. ಸರಾಸರಿ ಅಂದಾಜಿನಂತೆ ಗಂಡಸಿಗೆ 37 ಕಿಲೊಕೆಲೊರಿಯಂತೆಯೂ ಹೆಂಗಸಿಗೆ 35 ಕಿಲೊ ಕೆಲೊರಿಯಂತೆಯೂ ಬೆಳೆಯುತ್ತಿರುವ ಸುಟಿ ಮಕ್ಕಳಿಗೆ 40 ರಿಂದ 45 ಕಿಲೊಕೆಲೊರಿಯಂತೆಯೂ ಮುದುಕರಿಗೆ 30 ರಿಂದ 32 ಕಿಲೊಕೆಲೊರಿಯಂತೆಯೂ ಬೇಕಾಗುತ್ತವೆಂದು ಇಟ್ಟುಕೊಳ್ಳಬಹುದು. ಕೆಲಸ ಮಾಡುವಾಗ ಅನುಗುಣವಾಗಿ ಶಕ್ತಿ ಒದಗಬೇಕಾದ್ದರಿಂದ ತಕ್ಕ ಉಷ್ಣವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಕಷ್ಟದ ಕೆಲಸ ಮಾಡುವ ಬಡಗಿಗಳು ಕಲ್ಲು ಕುಟಿಕರು ಮುಂತಾದವರಿಗೆ ಸುಮಾರು 3,000 ದಿಂದ 4,000 ದಷ್ಟು ಕಿಲೊಕೆಲೊರಿ ಅಧಿಕ ಶಕ್ತಿ ಬೇಕಾಗುತ್ತದೆ. ಗುಮಾಸ್ತ, ಉಪಾಧ್ಯಾಯ ಮೊದಲಾದವರಿಗೆ ಸಹಜವಾಗಿಯೇ ಅಷ್ಟು ಬೇಕಾಗುವುದಿಲ್ಲ. 1 ಗ್ರಾಮ್ ಶರ್ಕರದಲ್ಲಿರುವ ಶಕ್ತಿಯನ್ನು ಪೂರ್ತಿ ಬಸಿದಾಗ ಅದು ಸುಮಾರು 4 ಕಿಲೊಕೆಲೊರಿಗಳಷ್ಟಾಗುತ್ತದೆ ಎಂದು ಬೇರೆ ಪ್ರಯೋಗದಿಂದ ಶೋಧಿಸಲಾಗಿದೆ. ಇದೇ ರೀತಿ ಮೇದಸ್ಸು 1 ಗ್ರಾಮಿಗೆ 9.3 ಕಿಲೊಕೆಲೊರಿಗಳನ್ನು ಒದಗಿಸಬಲ್ಲದು ಎಂದೂ ಸಸಾರಜನಕಗಳು ದೇಹದಲ್ಲಿ ಒಳಪಡುವ ರಾಸಾಯನಿಕ ಬದಲಾವಣೆಯಿಂದ 1 ಗ್ರಾಮಿಗೆ ಸುಮಾರು 4 ಕಿಲೊಕೆಲೊರಿಯಷ್ಟು ಉಷ್ಣವನ್ನು ಒದಗಿಸಬಲ್ಲವು ಎಂದೂ ತಿಳಿದುಬಂದಿದೆ. ಈ ಜ್ಞಾನದಿಂದ ಆಹಾರದಲ್ಲಿರುವ ಸಸಾರಜನಕ, ಮೇದಸ್ಸು ಮತ್ತು ಶರ್ಕರಗಳು ಎಷ್ಟು ಶಕ್ತಿಯನ್ನು ಒದಗಿಸಬಲ್ಲವು. ಅವು ಆ ವ್ಯಕ್ತಿಗೆ ಬೇಕಾಗಿರುವಷ್ಟು ಇವೆಯೇ ಎಂದು ತಿಳಿಯಬಹುದು. ಶಕ್ತಿ ಪೂರೈಕೆಯೇ ಅಲ್ಲದೆ ಆಹಾರದ ಸಸಾರಜನಕ, ಮೇದಸ್ಸು ಮತ್ತು ಇತರ ಭಾಗಗಳು ದೇಹದಲ್ಲಿ ಇತರ ವಿಶೇಷ ಉಪಯೋಗಕ್ಕೂ ಬರುವುದರಿಂದ ಆಹಾರ ಮತ್ತು ಅದರ ಪೋಷಕಗಳನ್ನು ಲೆಕ್ಕ ಹಾಕುವಾಗ ಅವು ಒದಗಿಸುವ ಶಕ್ತಿಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವ ಹಾಗಿಲ್ಲ. 1 ಗ್ರಾಮ್ ಶರ್ಕರ ಒದಗಿಸುವ ಶಕ್ತಿಯನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ 1 ಗ್ರಾಮ್ ಸಸಾರಜನಕಕ್ಕೆ ಸಮಾನ ಅಥವಾ ಸುಮಾರು 0.5 ಗ್ರಾಮ್ ಮೇದಸ್ಸಿಗೆ ಸಮಾನ. ಅಂದ ಮಾತ್ರಕ್ಕೆ ದೇಹಕ್ಕೆ ಒದಗಬೇಕಾದ ಸುಮಾರು 2,500-3,000 ಕಿಲೊಕೆಲೊರಿಯಷ್ಟು ಶಕ್ತಿಯನ್ನು ಲೆಕ್ಕ ಹಾಕಿದಂತೆ ಪರಿಶುದ್ಧವಾದ ಸಕ್ಕರೆ ಅಥವಾ ಕೇಸಿನ್ ಎಂಬ ಸಸಾರಜನಕ ವಸ್ತು ಅಥವಾ ಎಣ್ಣೆ, ಬೆಣ್ಣೆ, ತುಪ್ಪ ವಗೈರೆ ಯಾವುದಾದರೂ ಒಂದು ಜಾತಿಯಿಂದಲೇ ಪೂರೈಸಿದರೆ ಪೋಷಣೆ ಆಗುವುದಿಲ್ಲ.

ಆಹಾರದ ಸಸಾರಜನಕ ಘಟಕಗಳ ಪಚನದಿಂದ ಬಿಡುಗಡೆ ಆಗುವ ಅಮೈನೋ ಆಮ್ಲಗಳು ಪುನಃ ಸಂಶ್ಲೇಷಿಸಲ್ಪಟ್ಟು ಶರೀರದ ಬೇರೆ ಬೇರೆ ಕೋಶಗಳ ವಿಶಿಷ್ಟವಾದ ಸಸಾರಜನಕ ಪದಾರ್ಥಗಳಾಗುತ್ತವೆ. ಹೀಗೆ ಆಹಾರದ ಸಸಾರಜನಕಪದಾರ್ಥಗಳು ಜೀರ್ಣಿಸಲ್ಪಟ್ಟು ಅಮೈನೋ ಆಮ್ಲಗಳಾಗಿ, ಆ ಆಮ್ಲಗಳು ಪುನಃ ಬೇರೆ ರೀತಿಯಲ್ಲಿ ಸಂಶ್ಲೇಷಿಸಲ್ಪಟ್ಟು ದೇಹದ ಸಸಾರಜನಕ ಪದಾರ್ಥಗಳಾಗುವುದರಿಂದಲೇ ಹೊಸ ಜೀವವಸ್ತುವಿನ ನಿರ್ಮಾಣ, ಹೊಸ ಕೋಶಗಳ ಉತ್ಪತ್ತಿ, ಆದ್ದರಿಂದ ಶರೀರದ ಬೆಳವಣಿಗೆ ಎಲ್ಲ ಸಾಧ್ಯ. ರೋಗದಿಂದ ಚೇತರಿಸಿಕೊಳ್ಳುತ್ತಿರುವವರು, ಗರ್ಭಿಣಿ, ಬಾಣಂತಿಯರು ಮತ್ತು ಎದೆ ಹಾಲೂಡಿಸುತ್ತಿರುವ ತಾಯಿಯರು ತಮ್ಮ ನಶಿಸಿರುವ ದೇಹಭಾಗಗಳನ್ನೂ ಕೋಶಗಳನ್ನೂ ಆರೋಗ್ಯಸ್ಥಿತಿಗೆ ತಂದುಕೊಳ್ಳುವುದು ಕೂಡ ಇದರಿಂದಲೇ ಸಾಧ್ಯ. ಹೀಗೆ ಶರೀರದ ವಿಶಿಷ್ಟ ಸಸಾರಜನಕ ಪದಾರ್ಥಗಳು ದೇಹದಲ್ಲಿ ಸಂಶ್ಲೇಷಿತವಾಗಬೇಕಾದರೆ ಸಹಜವಾಗಿಯೇ ಅವುಗಳಿಗೆ ಬೇಕಾದ ಘಟಕ ಅಮೈನೋ ಆಮ್ಲಗಳೆಲ್ಲ ಇದ್ದೇ ಇರಬೇಕು. ಇವುಗಳ ಪೈಕಿ ಕೆಲವು ಶರೀರದಲ್ಲಿ ರಾಸಾಯನಿಕವಾಗಿ ಸೃಷ್ಟಿ ಆಗಬಹುದಾದರೂ ಮಿಕ್ಕವು ಹೀಗಾಗಲು ಸಾಧ್ಯವಿಲ್ಲ. ಇಂಥ ಅಮೈನೋ ಆಮ್ಲಗಳು ಆಹಾರದಿಂದ ಒದಗುವುದು ಅಗತ್ಯ. ಇವಕ್ಕೆ ಅಗತ್ಯ ಅಮೈನೋ ಆಮ್ಲಗಳೆಂದು ಹೆಸರು. ಸಹಜವಾಗಿಯೇ ಪ್ರಾಣಿಜನಿತ ಆಹಾರ ವಸ್ತಗಳಲ್ಲಿರುವ ಸಸಾರಜನಕದಲ್ಲಿ ಅಗತ್ಯ ಅಮೈನೋ ಆಮ್ಲಗಳೇ ಸಾಧಾರಣವಾಗಿ ಇರುತ್ತವೆ. ಇಂಥ ಸಸಾರಜನಕಕ್ಕೆ ಮೊದಲನೆಯ ದರ್ಜೆಯ ಸಸಾರಜನಕವೆಂದು ಹೆಸರು. ಹಾಲು, ಮೊಟ್ಟೆ, ಮಾಂಸ, ಮೀನು ಇತ್ಯಾದಿ ಪದಾರ್ಥಗಳಲ್ಲಿ ಇಂಥ ಅಗತ್ಯ ಅಮೈನೋ ಆಮ್ಲಗಳಿರುವ ಸಸಾರಜನಕಗಳಿವೆ. ಎಂದೇ ಅವು ಉತ್ತಮ ಪೋಷಕಗಳು. ಸಸ್ಯಜನಿತ ಆಹಾರವಸ್ತುಗಳಲ್ಲಿ ಸಾಧಾರಣವಾಗಿ ಎಲ್ಲ ಅಗತ್ಯ ಅಮೈನೋ ಆಮ್ಲಗಳೂ ಒಟ್ಟಿಗೆ ಇರುವುದಿಲ್ಲ. ಕೆಲವಲ್ಲಿ ಕೆಲವು ಅಗತ್ಯ ಅಮೈನೋ ಆಮ್ಲಗಳು ಇನ್ನು ಕೆಲವಲ್ಲಿ ಬೇರೆ ಕೆಲವು ಅಗತ್ಯ ಅಮೈನೋ ಆಮ್ಲಗಳು ಹೀಗೆ ಹರಡಿ ಹೋಗಿರುತ್ತವೆ. ಅನೇಕ ವಿಧವಾದ ಸಸ್ಯಜನಿತ ಆಹಾರಗಳನ್ನು ಬೆರೆಸಿ ಸೇವಿಸುವುದರ ಮೂಲಕ ಒಂದರ ಕೊರತೆಯನ್ನು ಸರಿದೂಗಿಸಿ ಎಲ್ಲ ಅಗತ್ಯ ಅಮೈನೋ ಆಮ್ಲಗಳೂ ದೇಹಕ್ಕೆ ಒದಗುವಂತೆ ಮಾಡುವುದು ಸಾಧ್ಯ. ಯಾವ ಯಾವ ಸಸ್ಯಜನಿತ ಪದಾರ್ಥಗಳನ್ನು ಇನ್ನು ಯಾವ ಸಸ್ಯಜನಿತ ಪದಾರ್ಥಗಳೊಡನೆ ಸೇರಿಸಿದರೆ ಎಲ್ಲ ಅಗತ್ಯ ಅಮೈನೋ ಆಮ್ಲಗಳ ಪೂರೈಕೆ ಆಗುತ್ತದೆ ಎಂದು ತಿಳಿದರೆ ದೇಹಕ್ಕೆ ಬೇಕಾದ ಸಸಾರಜನಕಗಳೆಲ್ಲವನ್ನು ಸಸ್ಯಜನಿತ ಆಹಾರದಿಂದಲೇ ಒದಗಿಸಬಹುದು. ಜೊತೆಗೆ ಪ್ರಾಣಿಜನಿತ ಆಹಾರವೆಲ್ಲವೂ ಮೊದಲ ದರ್ಜೆಯ ಸಸಾರಜನಕವನ್ನು ಹೊಂದಿರುತ್ತವೆಂದೂ ಎಲ್ಲ ಸಸ್ಯಜನಿತ ಆಹಾರಗಳಲ್ಲೂ ಈ ಮೊದಲ ದರ್ಜೆಯ ಸಸಾರಜನಕವಿಲ್ಲವೆಂದೂ ತಿಳಿಯುವುದು ತಪ್ಪು. ಜಿಲಾಟಿನ್ ಎಂಬ ಸಸಾರ ಜನಕವಸ್ತು ಆದರೆ ಪ್ರಾಣಿಜನಿತ. ಇದರಲ್ಲಿ ಯಾವುದೋ ಒಂದು ಅಗತ್ಯ ಅಮೈನೋ ಆಮ್ಲ ಇಲ್ಲವಾದ್ದರಿಂದ ಅದು ಮೊದಲನೆಯ ದರ್ಜೆಯದಲ್ಲ. ಆದರೆ, ಆಲೂಗಡ್ಡೆಯಲ್ಲಿರುವ ಸಸಾರಜನಕ ಮೊದಲನೆಯ ದರ್ಜೆಯದೇ ಆಗಿದೆ. ಒಟ್ಟಿನಲ್ಲಿ ಮೇಲೆ ಹೇಳಿದಂತೆ ಪ್ರಾಣಿಜನಿತ ಆಹಾರ ಈ ವಿಷಯದಲ್ಲಿ ಸಸ್ಯಜನಿತ ಆಹಾರಕ್ಕಿಂತ ಒಳ್ಳೆಯದಾದರೂ ಅನೇಕ ಬಗೆಯ ಸಸ್ಯಜನಿತ ಪದಾರ್ಥಗಳನ್ನು ಬೆರೆಸಿ ತೆಗೆದುಕೊಳ್ಳುವುದರಿಂದಲೂ ಬೇಕಾದ ಅವಶ್ಯಕತೆಯನ್ನು ಪಡೆಯಬಹುದು. ಇದು ಮಿಶ್ರಾಹಾರ ಗೋದಿಯಲ್ಲಿರುವ ಸಸಾರಜನಕ ಮೊದಲ ದರ್ಜೆಯದಲ್ಲ, ಹಾಗೆ ಮುಸುಕಿನ ಜೋಳದಲ್ಲಿರುವ ಸಸಾರಜನಕವೂ ಮೊದಲನೆಯ ದರ್ಜೆಯದಲ್ಲ. ಆದರೆ, ಗೋದಿ ಮುಸುಕಿನ ಜೋಳ ಎರಡನ್ನೂ ಒಟ್ಟಿಗೆ ಸೇವಿಸಿದರೆ ಒಂದರ ಅಭಾವವನ್ನು ಇನ್ನೊಂದು ನೀಗಿ ಒಟ್ಟಿನಲ್ಲಿ ಮೊದಲ ದರ್ಜೆಯ ಸಸಾರಜನಕದಂತೆಯೇ ಪೋಷಣೆಯನ್ನು ಒದಗಿಸುತ್ತವೆ. ಸಾಧಾರಣವಾಗಿ ಸಸಾರಜನಕ ಹೆಚ್ಚಿಗೆ ಇರುವ ಆಹಾರ ಪದಾರ್ಥಗಳು ಮೇದಸ್ಸು ಪಿಷ್ಟಗಳು ಹೆಚ್ಚಿಗೆ ಇರುವವುಗಳಿಗಿಂತ ದುಬಾರಿ. ಅದರಲ್ಲೂ ಪ್ರಾಣಿಜನಿತ ಆಹಾರಗಳ ಬೆಲೆ ಸಸ್ಯಜನಿತ ಆಹಾರಗಳಗಿಂತ ಜಾಸ್ತಿ. ಹೀಗಾಗಿ, ಮಧ್ಯಮ ವರ್ಗದವರಿಗೆ ಮತ್ತು ಬಡವರಿಗೆ ತಮ್ಮ ಸಸಾರಜನಕ ಪೂರೈಕೆಗಾಗಿ ಪ್ರಾಣಿಜನಿತ ವಸ್ತುಗಳನ್ನು ತೆಗೆದುಕೊಳ್ಳಿ ಎಂದು ಹೇಳುವುದು ಸರಿ ಎನ್ನಿಸುವುದಿಲ್ಲ. ಬದಲು ಅವರು ಯಾವ ರೀತಿಯ ಸಸ್ಯ ಜನಿತ ಮಿಶ್ರಾಹಾರವನ್ನು ತೆಗೆದುಕೊಂಡರೆ ಆದಷ್ಟು ಪ್ರಾಣಿಜನಿತ ಆಹಾರವನ್ನು ಕಡಿಮೆಮಾಡಬಹುದು ಎಂದು ಕಾಲ ದೇಶಗಳಿಗೆ ಅನುಗುಣವಾಗುವಂತೆ ಪತ್ತೆ ಮಾಡಿ ವಿವೇಕ ಹೇಳುವುದು ಒಳ್ಳೆಯದು. ಜೊತೆಗೆ ಜನರಲ್ಲಿ ಮಡಿ, ಆಚಾರ, ಅಭ್ಯಾಸ ಇವು ಬೇರೆ ಬೇರೆ ಆದ್ದರಿಂದ ಎಲ್ಲರಿಗೂ ಒಂದೇ ರೀತಿಯ ಮಾತೂ ಅನ್ವಯವಾಗದು.

ಆಹಾರದ ಸಸಾರಜನಕದಲ್ಲಿ ಇರಬೇಕಾದ ಅಗತ್ಯ ಅಮೈನೋ ಆಮ್ಲಗಳ - ಇವು ಒಟ್ಟು ಎಂಟು ಬಗೆಯವು, ಕೆಲವರ ಮತದಂತೆ ಹತ್ತು ಬಗೆಯವು - ಪೈಕಿ ಯಾವುದೇ ಒಂದು ಇಲ್ಲವಾದರೂ ಇಡೀ ಸಸಾರಜನಕದ ಅಮೈನೋ ಆಮ್ಲಗಳೆಲ್ಲ ದೇಹಕ್ಕೆ ಶಕ್ತಿ ಒದಗಿಸುವ ಇಂಧನವಾಗಿ ಮಾತ್ರ ಉಪಯೋಗಿಸಲ್ಪಡುತ್ತವೆ. ಇಂಥ ವೇಳೆ ದೇಹಕ್ಕೆ ಬೇಕೇ ಬೇಕಾದ ಮೊದಲ ದರ್ಜೆಯ ಸಸಾರಜನಕ, ಶರೀರದ ಇನ್ನೊಂದು ಭಾಗ ನಶಿಸಿ ಸಸಾರಜನಕದಿಂದ ಬಿಡುಗಡೆ ಮಾಡಲ್ಪಟ್ಟ ಅಗತ್ಯ ಅಮೈನೋ ಆಮ್ಲಗಳ ಪುನಸ್ಸಂಶ್ಲೇಷಣೆಯಿಂದಲೇ ಆಗಬೇಕು ಮತ್ತು ಅದೇ ರೀತಿ ನಡೆಯುತ್ತದೆ. ಅಂದರೆ ಆಹಾರದಲ್ಲಿ ಮೊದಲ ದರ್ಜೆಯ ಸಸಾರಜನಕ ಇಲ್ಲದಿದ್ದರೆ ಒಟ್ಟು ಎಷ್ಟು ಸಸಾರಜನಕವಿದ್ದರೂ ದೇಹ ನಶಿಸಿಹೊಗುವುದೇ ವಿನಾ ಸ್ವಾಭಾವಿಕವಾಗಿರುವುದಿಲ್ಲ. ಸಸಾರಜನಕ ಪದಾರ್ಥಗಳು ದೇಹೋಷ್ಣತೆಯನ್ನು ಹೆಚ್ಚಿಸುತ್ತವೆ ಮತ್ತು ಮೂತ್ರದ ಮೂಲಕವೇ ವಿಸರ್ಜಿಸಲ್ಪಡಬೇಕಾದ ನಿರುಪಯುಕ್ತ ವಸ್ತುಗಳ ಅಧಿಕೋತ್ಪತ್ತಿಗೆ ಕಾರಣವಾಗುತ್ತವೆ. ಇವೆರಡೂ ಅನೇಕ ವೇಳೆ ಶರೀರಕ್ಕೆ ಹೆಚ್ಚು ಹೊರೆಯನ್ನು ಉಂಟುಮಾಡುತ್ತವೆ.

ಮೇಲೆ ಹೇಳಿದ ಅಂಶಗಳನ್ನೆಲ್ಲ ಗಮನಕ್ಕೆ ತೆಗೆದುಕೊಂಡರೆ ಸಾಧಾರಣವಾಗಿ ಆಹಾರಕ್ಕೆ ಕಡಿಮೆ ಎಂದರೆ ಸುಮಾರು 50 ಗ್ರಾಮ್‍ಗಳಷ್ಟಾದರೂ ಸಸಾರಜನಕವಿದ್ದು ಇದರಲ್ಲಿ ಸುಮಾರು ಅರ್ಧದಷ್ಟಾದರೂ ಮೊದಲ ದರ್ಜೆಯ ಸಸಾರಜನಕವಾಗಿರಬೇಕು. ಇದು ಸಸ್ಯಜನಿತ ಮಿಶ್ರಾಹಾರದಿಂದಾಗಲಿ ಪ್ರಾಣಿಜನಿತ ಆಹಾರದಿಂದಾಗಲಿ ಒದಗಬಹುದು. ಮೊಟ್ಟೆ ಮಾಂಸ ಮೀನುಗಳಷ್ಟೇ ಹಾಲು ಮೊಸರು ಸೇವನೆ ಮುಖ್ಯವಾಗಿ ಶಾಕಾಹಾರಿಗಳಿಗೆ ಅತ್ಯಗತ್ಯ. ಒಬ್ಬ ವ್ಯಕ್ತಿಗೆ ದಿವಸವೊಂದಕ್ಕೆ ಸುಮಾರು ಒಂದು ಲೀಟರಿನಷ್ಟಾದರೂ ಹಾಲು ಮೊಸರು ಒದಗಿದರೆ ದೇಹ ಪೋಷಣೆ, ಸಸಾರಜನಕ ಪೂರೈಕೆ ವಿಚಾರದಲ್ಲಿ ಸರಿಯಾಗಿ ನಡೆಯಬಹುದು. ಮೇಲೆ ಹೇಳಿದಂತೆ ರುಗ್ಣಾವಸ್ಥೆಯಿಂದ ಚೇತರಿಸಿಕೊಳ್ಳುತ್ತಿರುವವರು, ಬೆಳೆಯುವ ಹುಡುಗರು, ಗರ್ಭಿಣಿ ಮತ್ತು ಎದೆ ಹಾಲೂಡಿಸುತ್ತಿರುವ ಸ್ತ್ರೀಯರು ಇವರುಗಳಿಗೆ ಇನ್ನೂ ಹೆಚ್ಚು ಮೊದಲ ದರ್ಜೆಯ ಸಸಾರಜನಕದ ಅವಶ್ಯಕತೆ ಇರುತ್ತದೆ. ಅತಿ ಆಯಾಸಕರವಾದ ಕೆಲಸ ಮಾಡುವ ಜನರಿಗೆ ಮತ್ತು ಚಳಿಗಾಳಿ ಪ್ರದೇಶಗಳಲ್ಲಿ ದೇಹದ ಕಾವನ್ನು ಸಮಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಾದವರಿಗೆ ಇದೇ ರೀತಿಯಲ್ಲಿ ಸಸಾರಜನಕ ಹೆಚ್ಚಿಗೆ ಬೇಕಾಗುತ್ತದೆ.

ಮೇದಸ್ಸೂ ಸಸಾರಜನಕದಂತೆಯೇ ಇಂಧನವಾಗಿ ಮಾತ್ರವಲ್ಲ ಬೇರೆ ಅವಶ್ಯ ಉಪಯೋಗಕ್ಕೆ ವಸ್ತುವಾಗಿ ಕೂಡ ಬೇಕಾಗುತ್ತದೆ. ಆದ್ದರಿಂದ ಮೇದಸ್ಸು ಇಲ್ಲದೆ ದೇಹಕ್ಕೆ ಬೇಕಾದ ಸಸಾರಜನಕ ಮತ್ತು ಉಷ್ಣ ಪೂರೈಕೆಗೆ ಸಾಕಾಗುವಷ್ಟು ಶರ್ಕರಗಳು ಒದಗಿದರೂ ಪೋಷಣೆ ಸಾಧ್ಯವಿಲ್ಲ. ಮೇದಸ್ಸಿನಲ್ಲಿ ವಿಲೀನವಾಗಿದ್ದು ಅದರೊಡನೆಯೇ ರಕ್ತಗತವಾಗಬೇಕಾಗಿರುವ ಜೀವಸತ್ತ್ವಗಳು ಪೋಷಣೆಗೆ ಅತಿ ಮುಖ್ಯವಾಗಿರುವುದರಿಂದ ಮೇದಸ್ಸು ಆಹಾರದಲ್ಲಿ ಇದ್ದೇ ತೀರಬೇಕು. ಈಗ ಶರ್ಕರ ಸಸಾರಜನಕಗಳಿಗಿಂತ ಮೇದಸ್ಸು ಸುಮಾರು ಎರಡರಷ್ಟು ಶಕ್ತಿ ಉತ್ಪನ್ನಮಾಡಬಲ್ಲದಾದ್ದರಿಂದ ಆಹಾರದಲ್ಲಿ ಮೇದಸ್ಸಿನ ಅಂಶ ಹೆಚ್ಚಾಗಿದ್ದರೆ ಸೇವಿಸುವ ಆಹಾರದ ಮೊತ್ತವನ್ನು ಕಡಿಮೆ ಮಾಡಬಹುದು. ಮೇದಸ್ಸು ಎಣ್ಣೆ ಕೊಬ್ಬುಗಳ ರೂಪದಲ್ಲಿ ಸುಲಭ್ಯವಾಗಿಯೂ ದೊರೆಯುತ್ತದೆ. ಆದರೆ, ಬರೀ ಮೇದಸ್ಸಿನ ಅಂಶ ಮಿತಿಮೀರಿದರೆ ಅಂಥ ಪದಾರ್ಥಗಳ ಸೇವನೆ ಕಷ್ಟ. ರುಚಿಕೆಟ್ಟು ಬಿಡಿಚಲು ಬಡಿಯುತ್ತದೆ. ದೇಹದಲ್ಲಿ ಮೇದಸ್ಸು ಸರಿಯಾಗಿ ಉಪಯೋಗವಾಗಬೇಕಾಗಿದ್ದರೆ ಶರ್ಕರಗಳು ಜೊತೆಯಲ್ಲಿ ಇದ್ದೇ ತೀರಬೇಕು. ಇವು ದೇಹದಲ್ಲಿ ಇಂಧನವಾಗಿ ಉಪಯೋಗವಾಗುವಾಗ ಮಾತ್ರ ಮೇದಸ್ಸೂ ಪೂರ್ತಿ ದಹಿಸಿ ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರು ಉತ್ಪತ್ತಿಯಾಗುತ್ತವೆ. ಈ ಕ್ರಿಯೆಯನ್ನು ಶರ್ಕರದಹನದ ಜ್ವಾಲೆಯಲ್ಲಿ ಮೇದಸ್ಸಿನ ದಹನವೆಂದು ವರ್ಣಿಸುತ್ತಾರೆ. ಶರ್ಕರ ಇಲ್ಲದೇ ಇದ್ದರೆ ದೇಹದಲ್ಲಿ ಮೇದಸ್ಸಿನ ದಹನ ಪೂರ್ಣವಾಗದೇ ಅದರಿಂದ ದೇಹಕ್ಕೆ ಅಪಾಯವಾಗುವಂಥ ಮಧ್ಯವಸ್ತುಗಳು ಒಳಗಡೆಯೇ ಉಳಿದುಕೊಳ್ಳುತ್ತವೆ. ಹೀಗಾಗದಂತೆ ಮಾಡಲು ಆಹಾರದಲ್ಲಿ ಸಾಕಷ್ಟು ಶರ್ಕರ ಇದ್ದೇ ತೀರಬೇಕು ಮತ್ತು ಅವು ದೇಹದಲ್ಲಿ ದಹನಗೊಳ್ಳುತ್ತಿರಲೂ ಇರಬೇಕು. ಸಾಧಾರಣವಾಗಿ ಒಂದು ಭಾಗ ಮೇದಸ್ಸಿನ ಪೂರ್ಣದಹನಕ್ಕೆ ನಾಲ್ಕು ಭಾಗ ಶರ್ಕರ ದಹಿಸಲ್ಪಡುತ್ತಿರಬೇಕು. ಅಲ್ಲದೆ, ಶರ್ಕರಗಳು ಹೆಚ್ಚಾಗಿರುವ ಆಹಾರಪದಾರ್ಥಗಳು ಅಗ್ಗ ; ಸಾಮಾನ್ಯವಾಗಿ ಎಲ್ಲೆಡೆಯೂ ದೊರೆಯುತ್ತವೆ ; ಅವು ಜೀರ್ಣಗೊಂಡು ರಕ್ತಗತವಾಗಿ ಕೋಶಗತವಾಗುವುದು ಸುಲಭ. ಹೀಗೆ ಉಪಯೋಗಿಸಲ್ಪಟ್ಟ ಬಳಿಕ ಉಳಿಯುವ ಪದಾರ್ಥಗಳು ನೀರು ಮತ್ತು ಕಾರ್ಬನ್ ಡೈಆಕ್ಸೈಡ್ ಮಾತ್ರ. ಅವು ಶ್ವಾಸದ ಮತ್ತು ಮೂತ್ರದ ಮೂಲಕ ಸುಲಭವಾಗಿ ವಿಸರ್ಜಿಸಲ್ಪಡಬಹುದಾದ ಪದಾರ್ಥಗಳು. ಆದ್ದರಿಂದ ಆಹಾರದಲ್ಲಿ ಹೆಚ್ಚಾಗಿ ಇರುವ ಆಂಶ ಶರ್ಕರಾದಿಗಳೇ.

ಮೇಲೆ ಹೇಳಿರುವ ಎಲ್ಲ ಅಂಶಗಳನ್ನು ಗಮನಿಸಿದರೂ ಶರೀರಕ್ಕೆ ಉಷ್ಣವನ್ನು ಒದಗಿಸುವ ಈ ಆಹಾರ ಭಾಗಗಳಿಂದಲೇ ಸಾಧ್ಯವಿಲ್ಲ. ಕಂಡಂತೆಯೇ ದೇಹಕ್ಕೆ ಸಾಕಾದಷ್ಟು ನೀರು ಬೇಕು. ದೇಹದಿಂದ ನೀರು ಮೂತ್ರ, ಸ್ವೇದ, ಶ್ವಾಸಗಳ ಮೂಲಕ ಮಾತ್ರವಲ್ಲ ಬೇರೆ ರೀತಿಯಲ್ಲಿ ಕೂಡ ಹೊರಕ್ಕೆ ಹೋಗುತ್ತಲೇ ಇರುತ್ತದೆ. ಇದನ್ನು ಭರ್ತಿ ಮಾಡಲು ಆಹಾರಾಂಗವಾಗಿ ಇಲ್ಲವೇ ಪಾನೀಯಗಳಾಗಿ ತಕ್ಕಷ್ಟು ನೀರು ದೇಹವನ್ನು ಸೇರಲೇಬೇಕು. ಸಾಧಾರಣವಾಗಿ ಸುಮಾರು ಮೂರು ಲೀಟರಿನಷ್ಟು ನೀರು ದಿವಸವೊಂದಕ್ಕೆ ಬೇಕು. ದೇಹದಿಂದ ವಿಸರ್ಜಿಸಲ್ಪಡುವ ನೀರು ಹೆಚ್ಚಾದರೆ ಕುಡಿಯಲೂ ಹೆಚ್ಚು ಬೇಕಾಗುತ್ತದೆ. ಇದರಂತೆಯೇ ಲವಣಗಳೂ ದೇಹಪೋಷಣೆಗೆ ಅಗತ್ಯ. ಇವು ಕೂಡ ಮಲ ಮೂತ್ರ ಸ್ವೇದಗಳ ಮೂಲಕ ದೇಹದಿಂದ ಹೊರಗೆಡಹಲ್ಪಡುವುದರಿಂದ ಇವುಗಳ ಪೂರೈಕೆಗೆ ಲಕ್ಷ್ಯ ಹರಿಸಬೇಕು. ನಾವು ತಿನ್ನುವ ಉಪ್ಪು ಆಹಾರಕ್ಕೆ ರುಚಿ ಕೊಡುವುದೊಂದೇ ಅಲ್ಲ, ಅದು ದೇಹ ಪೋಷಕವೂ ಹೌದು. ಕಬ್ಬಿಣ ಕೆಂಪುರಕ್ತಕಣಗಳಲ್ಲಿಯೂ ಕ್ಯಾಲ್ಸಿಯಮ್ ಮತ್ತು ರಂಜಕ ಎಲುಬಿನಲ್ಲಿಯೂ ಅಯೊಡೀನ್ ಥೈರಾಕ್ಸಿಸ್ ಎಂಬ ಹಾರ್ಮೋನಿನಲ್ಲಿಯೂ ಇರುವ ಮುಖ್ಯ ಪದಾರ್ಥಗಳಾದ್ದರಿಂದ ದೇಹಕ್ಕೆ ಇವುಗಳ ಅವಶ್ಯಕತೆ ಬಹಳ ಇದೆ. ಆದರೆ, ಸಾಧಾರಣವಾಗಿ ನಮ್ಮ ಆಹಾರದಲ್ಲಿ ಅದರಲ್ಲೂ ಸಾಕಾದಷ್ಟು ಹಾಲು ತರಕಾರಿಗಳನ್ನು ತೆಗೆದುಕೊಂಡಾಗ ಇವು ಸಾಕಾದಷ್ಟು ಮೊತ್ತದಲ್ಲಿ ಇರುವುದರಿಂದ ಪೋಷಣೆಗೆ ತೊಂದರೆ ಇಲ್ಲ. ಬೆಳೆಯುವ ಮಕ್ಕಳಿಗೆ ಮತ್ತು ಮಕ್ಕಳಾಗುವ ವಯಸ್ಸಿನ ಸ್ತ್ರೀಯರಿಗೆ ಕಬ್ಬಿಣ ಹೆಚ್ಚಿಗೆ ಬೇಕಾಗುತ್ತದೆ. ಗಮನಿಸಬೇಕಾದ ಅಂಶವೇನೆಂದರೆ ಕಬ್ಬಿಣ ಹಾಲಿನಲ್ಲಿ ಇರುವುದು ಅತಿಕಡಿಮೆ. ಇಲ್ಲವೆಂದೇ ಹೇಳಬಹುದು. ಆದ್ದರಿಂದ ಕಬ್ಬಿಣದ ಅವಶ್ಯಕತೆ ಹೆಚ್ಚಾದಾಗ ಹಾಲು ಹೆಚ್ಚಿಗೆ ಸೇವಿಸಿದರೆ ಪ್ರಯೋಜನವಾಗುವುದಿಲ್ಲ. ಹಾಲೂಡುವ ಶಿಶುಗಳಿಗೆ ಸುಮಾರು ಆರರಿಂದ ಎಂಟು ತಿಂಗಳಾದ ಮೇಲೆ ಹಾಲು ಕೊಟ್ಟು ಮಾತ್ರ ಪೋಷಿಸುತ್ತಿದ್ದರೆ ಅದು ಸರಿಯಾದ ಪೋಷಣೆ ಆಗದು. ಕಬ್ಬಿಣ ಹೆಚ್ಚಾಗಿರುವ ತರಕಾರಿ ಆಹಾರ ಪದಾರ್ಥಗಳನ್ನು ಅಭ್ಯಾಸ ಮಾಡಿಸಬೇಕು.

ಇದೇ ರೀತಿ ಸರಿಯಾದ ಪೋಷಣೆಗೆ ಬೇಕಾದ ಮುಖ್ಯ ವಸ್ತುಗಳು, ಜೀವಸತ್ತ್ವಗಳು. ಆಹಾರದಲ್ಲಿ ಇವು ಇಲ್ಲದಿದ್ದರೆ ಸ್ವಲ್ಪ ಕಾಲದಲ್ಲಿಯೇ ನಿರ್ದಿಷ್ಟ ರೋಗಗಳು ಉದ್ಬವಿಸುತ್ತವೆ. ಜೀವಸತ್ತ್ವಗಳೂ ಆಹಾರದ ಮೂಲಕ ದೇಹವನ್ನು ಹೊಕ್ಕು ಅಲ್ಲಿ ಯಾವ ಕಾರ್ಯ ಮಾಡುತ್ತವೆ ಎಂಬುದನ್ನು ನಿಖರವಾಗಿ ಅನೇಕ ವೇಳೆ ಹೇಳಲಾಗದಿದ್ದರೂ ಅವುಗಳ ಅಭಾವದಿಂದ ಬರುವ ರೋಗಗಳನ್ನು ತಡೆಗಟ್ಟುವುದಕ್ಕೆ ಅವನ್ನು ಸೇವಿಸಲೇಬೇಕೆಂಬುದಂತೂ ನಿಜ. ಅವುಗಳಲ್ಲಿ ಎರಡು ಬಗೆಯವು ಇವೆ. ಒಂದು ಈ ಮೇಲೆ ಹೇಳಿದಂತೆ ಮೇದಸ್ಸಿನಲ್ಲಿ ವಿಲೀನವಾಗಿ ಅದರೊಡನೆ ರಕ್ತಗತವಾಗುವುದು. ಈ ಬಗೆಗೆ ಂ, ಆ, ಇ, ಏ ಜೀವಸತ್ತ್ವಗಳು ಸೇರಿವೆ. ಇನ್ನೊಂದು ಬಗೆಯವು ನೀರಿನಲ್ಲಿ ವಿಲೀನವಾಗುತ್ತವೆ. ಈ ಬಗೆಗೆ ಃ, ಅ ಜೀವಸತ್ತ್ವಗಳು ಸೇರಿವೆ. ಃ ಮತ್ತು ಏ ಜೀವಸತ್ತ್ವಗಳು ದೊಡ್ಡ ಕರುಳಿನಲ್ಲಿ ಸಾಧಾರಣವಾಗಿ ಸೌಹಾರ್ದದಿಂದ ಇರುವ ಬ್ಯಾಕ್ಟೀರಿಯಮುಗಳಿಂದಲೂ ಒದಗುತ್ತವೆ. ಆರಿಯೊಮೈಸಿನ್, ಕ್ಲೋರೊಮೈಸಿಟಿನ್ ಮುಂತಾದ ನವೀನ ಔಷಧಗಳನ್ನು ಅಜ್ಞಾನದಿಂದ ಅತಿಯಾಗಿ ಸೇವಿಸಿದರೆ ಈ ಬ್ಯಾಕ್ಟೀರಿಯಮುಗಳು ನಾಶಹೊಂದಿ ಶರೀರದ ಃ ಮತ್ತು ಏ ಜೀವಸತ್ತ್ವಗಳ ಪೂರೈಕೆಗೆ ಧಕ್ಕೆ ಬರುತ್ತದೆ. ಂ ಜೀವಸತ್ತ್ವ ಹಾಲು, ಮೊಸರು, ಬೆಣ್ಣೆ ಮತ್ತು ಹಸಿರು, ಕೆಂಪು ತರಕಾರಿಗಳನ್ನು ಸೇವಿಸುವುದರಿಂದ ಒದಗುತ್ತದೆ. ಆ ಜೀವಸತ್ತ್ವ ಹಾಲು, ಮೊಸರು ಬೆಣ್ಣೆಗಳಲ್ಲಿದೆ. ಅಲ್ಲದೆ ಮುಂಜಾನೆ ಬಿಸಿಲು ಚರ್ಮದ ಮೇಲೆ ಬಿದ್ದು ಅದರ ಪರಿಣಾಮವಾಗಿಯೂ ಒದಗುತ್ತದೆ. ಃ ಜೀವಸತ್ತ್ವ ಅಕ್ಕಿಯ ತೌಡಿನಲ್ಲಿ ವಿಶೇಷವಾಗಿ ಇರುವುದರಿಂದ ಮೆರುಗು ಮಾಡದ ಅಕ್ಕಿಯನ್ನು ಸೇವಿಸಿದರೆ ಅದು ಸಾಕಾದಷ್ಟು ಒದಗುತ್ತದೆ. ಃ ಮತ್ತು ಅ ಜೀವಸತ್ತ್ವ ನೀರಿನಲ್ಲಿ ವಿಲೀನವಾಗುವುದರಿಂದ ಆಹಾರ ಪದಾರ್ಥಗಳನ್ನು ಬಹಳವಾಗಿ ತೊಳೆದರೆ ಅಥವಾ ನೀರಿನಲ್ಲಿಯೇ ಇಟ್ಟಿದ್ದರೆ ಅಥವಾ ಬೇಯಿಸಿದ ನೀರನ್ನು ಬಸಿದುಬಿಟ್ಟರೆ ಅವು ವ್ಯರ್ಥವಾಗಿಹೋಗಬಹುದು. ಅಲ್ಲದೆ ಆಹಾರ ಪದಾರ್ಥಗಳನ್ನು ಶೇಕರಿಸಿಟ್ಟು ಬಹಳ ದಿವಸಗಳಾದರೆ ಅ ಜೀವಸತ್ತ್ವ ನಾಶವಾಗಿಹೋಗುತ್ತದೆ. ಹಾಲಿನಪುಡಿಯಿಂದ ಹಾಲು ತಯಾರಿಸಿ ಶಿಶುಗಳಿಗೆ ಊಡುವಾಗ ಇದನ್ನು ನೆನಪಿನಲ್ಲಿಟ್ಟು ಅ ಜೀವಸತ್ತ್ವವನ್ನು ವಿಶೇಷವಾಗಿ ಅದಕ್ಕೆ ಬೆರೆಸಬೇಕು : ಅಥವಾ ಅ ಜೀವಸತ್ತ್ವ ಹೇರಳವಾಗಿರುವ ಕಿತ್ತಳೆಹಣ್ಣು ಟೊಮಾಟೋ ಹಣ್ಣುಗಳ ರಸವನ್ನಾದರೂ ಕುಡಿಸಬೇಕು.

ದೇಹಕ್ಕೆ ಅವಶ್ಯವಾಗುವ ಉಷ್ಣವನ್ನು ಒದಗಿಸುವಷ್ಟು ಆಹಾರವನ್ನೂ ಸಾಕಾದಷ್ಟು ನೀರನ್ನೂ ಸೇವಿಸಿದರೆ ದೇಹ ಪೋಷಣೆಗೆ ಬೇಕಾಗುವ ಮಿಕ್ಕ ಸಾಮಗ್ರಿಗಳೂ ಒದಗುತ್ತವೆ ಎಂಬ ನಂಬಿಕೆ ಇತ್ತು. ಕೆಲೊರಿಗಳ (ಶಕ್ತಿಪೂರೈಕೆ) ಬಗ್ಗೆ ಎಚ್ಚರವಿರಲಿ. ಸಸಾರಜನಕ ಮತ್ತು ಜೀವಸತ್ತ್ವಗಳ ಪೂರೈಕೆ ತಂತಾನೇ ಆಗುತ್ತದೆ ಎಂಬುದಾಗಿ ಹಿಂದಿನವರು ಹೇಳುತ್ತಿದ್ದರು. ಆದರೆ, ಪೋಷಣವಿಜ್ಞಾನ ವೃದ್ಧಿಯಾದಂತೆಲ್ಲ ಪ್ರತಿ ಅಂಶವೂ ಮಂದಟ್ಟಾಗಿ ಇಂಥ ನಂಬಿಕೆ ಅನೇಕ ವೇಳೆ ನಿಜವಲ್ಲ ಎಂಬುದು ಸ್ಪಷ್ಟವಾಗಿದೆ. ಆಹಾರದಲ್ಲಿ ಕರಾರುವಾಕ್ಕಾಗಿ ಇಷ್ಟೇ ಸಸಾರಜನಕ, ಇಷ್ಟೇ ಮೇದಸ್ಸು, ಇಷ್ಟೇ ಶರ್ಕರ, ಇಷ್ಟೇ ನೀರು ಲವಣ, ಜೀವಸತ್ತ್ವ ಇರಬೇಕು ಎಂದು ಗಣಿಸಿ ಆ ರೀತಿ ಸೇವಿಸಿದರೂ ಪೋಷಣೆ ಸರಿಯಾಗಿ ನಡೆಯುತ್ತದೆಂದು ನಿಶ್ಚಯವಿಲ್ಲ. ಅಂಗಡಿಯಲ್ಲಿ ಸಿಕ್ಕುವ ಕಚ್ಚಾ ಆಹಾರಪದಾರ್ಥಗಳಲ್ಲಿ ಇರುವ ಪೋಷಕಗಳನ್ನು ಲೆಕ್ಕೆ ಹಾಕಿದರೆ ಸಾಲದು ; ಅವನ್ನು ಬೇಯಿಸಿ ಪಾಕ ಮಾಡುವಾಗ ಅಥವಾ ಬೇರೆ ರೀತಿಯಲ್ಲಿ ತಿನ್ನುವುದಕ್ಕೆ ತಯಾರುಮಾಡುವಾಗ ವ್ಯರ್ಥವಾಗುವ ಅಂಶಗಳೆಷ್ಟೊ ಇವೆಯಷ್ಟೆ. ಸಿದ್ಧಾಹಾರವನ್ನು ಸೇವಿಸಿದಾಗಲೂ ಪಚನವಾಗದೆ ಅಥವಾ ರಕ್ತಗತವಾಗದೆ ವಿಸರ್ಜಿಸಲ್ಪಡುವ ಅಂಶಗಳೂ ಎಷ್ಟೊ ಇವೆಯಷ್ಟೆ. ಇವಕ್ಕೆಲ್ಲ ಸರಿಹೋಗುವಂತೆ ಸಾಧಾರಣವಾಗಿ ಲೆಕ್ಕಾಚಾರಕ್ಕಿಂತ ಶೇಕಡ ಹತ್ತರಷ್ಟಾದರೂ ಹೆಚ್ಚುವರಿ ಆಹಾರ ತೆಗೆದುಕೊಳ್ಳಬೇಕು. ಆಹಾರ ಪಚನವಾಗಿ ರಕ್ತಗತವಾಗಿ ಕೋಶಗತವಾಗುವಾಗಿ ಪ್ರಾಯಶಃ ಅಲ್ಲಿ ಬಳP ಆಗುವಾಗ ತನ್ನಲ್ಲಿ ಅಡಕವಾಗಿರುವ ಉಷ್ಣಕ್ಕಿಂತ ಸರಾಸರಿ ಶೇಕಡ ಸುಮಾರು 10 ರಷ್ಟು ಹೆಚ್ಚಿಗೆ ಉಷ್ಣವನ್ನು ಉತ್ಪತ್ತಿಮಾಡುತ್ತದೆ. ಇದು ಹೇಗೆನ್ನುವ ಜ್ಞಾನ ಸಂದೇಹಾತೀತವಾಗಿ ತಿಳಿಯದಿದ್ದರೂ ಈ ಹೆಚ್ಚು ಉತ್ಪನ್ನ ಸಹಜವಾಗಿಯೇ ಕೋಶಗಳ ರಾಚನಿಕ ರಾಸಾಯನಿಕಗಳ ದಹನದಿಂದ ಅರ್ಥಾತ್ ದೇಹ ನಾಶದಿಂದ ಉತ್ಪತ್ತಿಯಾಗಬೇಕು ಎನ್ನುವುದು ಸ್ಪಷ್ಟ. ಆದ್ದರಿಂದ ಇದನ್ನು ನಿವಾರಿಸಲೆಂದಾದರೂ ಶೇಕಡ ಸುಮಾರು 10 ರಷ್ಟು ಹೆಚ್ಚು ಆಹಾರವನ್ನು ತೆಗೆದುಕೊಳ್ಳಬೇಕು. ಅಂದರೆ ಪ್ರಯೋಗದ ಪ್ರಕಾರ ಒಬ್ಬ ಮನುಷ್ಯನಿಗೆ ದಿನಕ್ಕೆ 2,500 ಕಿಲೊಕೆಲೊರಿಗಳಷ್ಟು ಉಷ್ಣ ಮತ್ತ ಶಕ್ತಿಯ ಅವಶ್ಯಕತೆ ಇದ್ದರೆ ಅವನು ಸಾಧಾರಣವಾಗಿ 3,000 ಕಿಲೊಕೆಲೊರಿಗಳನ್ನು ಒದಗಿಸುವ ಮಿಶ್ರಾಹಾರ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ. ಸರಾಸರಿ ಲೆಕ್ಕಾಚಾರದಂತೆ ವ್ಯಕ್ತಿಯ ತೂಕಕ್ಕೆ ತಕ್ಕಂತೆ 1 ಕೆ.ಜಿ. ತೂಕಕ್ಕೆ 1 ಗ್ರಾಮ್ ಸಸಾರಜನಕ (ಇದರಲ್ಲಿ ಅರ್ಧ ಮೊದಲ ದರ್ಜೆಯದು). ಸುಮಾರು 1.75 ಗ್ರಾಮ್ ಮೇದಸ್ಸು, ಸುಮಾರು 7 ಗ್ರಾಮ್ ಶರ್ಕರ ಇರುವ ಆಹಾರವನ್ನು ಸೇವಿಸಿದರೆ ಸಾಧಾರಣವಾಗಿ ಸಾಕಾಗುತ್ತದೆ.

ಜೀರ್ಣಿಸಲ್ಪಡದೇ ಇರುವ ಆಹಾರಭಾಗ ಮಲವಾಗಿ ವಿಸರ್ಜನೆಗೊಳ್ಳುತ್ತದೆ. ಹೀಗಾಗಬೇಕಾದರೆ ಸಾಕಷ್ಟು ಪರಿಮಾಣದಲ್ಲಿ ಮಲಶೇಖರಣೆ ಆಗಬೇಕು. ದೇಹಾರೋಗ್ಯಕ್ಕೆ ಇದು ಅಗತ್ಯ. ಇದನ್ನು ಗಮನದಲ್ಲಿಟ್ಟು ಜೀರ್ಣವಾಗದ ನಾರು, ಸೆಲ್ಯುಲೋಸ್ ಮುಂತಾದುವು ಹೆಚ್ಚಿಗೆ ಇರುವ ಸೊಪ್ಪು ತರಕಾರಿಗಳನ್ನು ಆಹಾರದೊಡನೆ ಸೇವಿಸಬೇಕು. ನೋಡಲು ಅಂದವಾಗಿಯೂ ತಿನ್ನಲು ರುಚಿಯಾಗಿಯೂ ಇದ್ದರೆ ಆಹಾರಸೇವನೆ ಸಂತೋಷದಾಯಕವಾಗಿದ್ದು ಜೀರ್ಣರಸಗಳು ಹೆಚ್ಚು ಉತ್ಪತ್ತಿ ಆಗುವುವು. ಆದ್ದರಿಂದ ಆಹಾರದ ರುಚಿಗೂ ಅದನ್ನು ಬಡಿಸುವ ಒಪ್ಪ ಓರಣಗಳ ಕಡೆಗೂ ಲಕ್ಷ್ಯ ಹರಿಸಬೇಕು. ರುಚಿಗೆ ಬೇಕಾದ ಮಸಾಲೆ ಸಾಮಾನುಗಳನ್ನು ಈ ಉದ್ದೇಶದಿಂದಲೇ ಆಹಾರಕ್ಕೆ ಸೇರಿಸು ವುದಾಗಿದೆ. ಮಸಾಲೆ ಸಾಮಾನುಗಳಿಂದಲೇ ನೇರವಾಗಿ ಯಾವ ಪೋಷಣೆಯೂ ಆಗುವುದಿಲ್ಲ. ಒಟ್ಟಿನಲ್ಲಿ ಶರೀರ ಪೋಷಣೆ ಸರಿಯಾಗಿ ಆಗಬೇಕಾದರೆ ಅನೇಕ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಕಾಲ, ದೇಶ, ಸಂಪತ್ತು, ಆಚಾರ, ವ್ಯವಹಾರಗಳು, ವಯಸ್ಸು, ದೇಹಸ್ಥಿತಿ, ಬೆಳವಣಿಗೆ ರುಗ್ಣಾವಸ್ಥೇ, ಚೇತರಿಸಿಕೊಳ್ಳುತ್ತಿರುವ ಸ್ಥಿತಿ, ಗರ್ಭಿಣಿ ಸ್ಥಿತಿ, ಮಕ್ಕಳಿಗೆ ಹಾಲೂಡುವಿಕೆ ಮುಂತಾದವು ಅತಿ ಮುಖ್ಯವಾದವು. ಇವನ್ನೆಲ್ಲ ಎಣಿಕೆಗೆ ತೆಗೆದುಕೊಂಡು ಸರಿಯದ ಆಹಾರ ಸೇವನೆ ಮಾಡಿದರೆ ಮಾತ್ರ ಒಳ್ಳೆಯ ಪೋಷಣೆ ಒದಗುತ್ತದೆ.

(ಎಸ್.ಆರ್.ಆರ್.ಬಿ.ಎಸ್.ಎಲ್.)

ಪ್ರಾಣಿಗಳಲ್ಲಿ ಪೋಷಣೆ : ಪ್ರಾಣಿಗಳು ಸೇವಿಸಿದ ಆಹಾರಾಂಶಗಳು ಬೇರೆ ಬೇರೆ ರಾಸಾಯನಿಕ ಕ್ರಿಯೆಗಳ ಮೂಲಕ ದೇಹಪೋಷಕ ಘಟಕಗಳಾಗಿ ಪರಿವರ್ತನೆ ಹೊಂದಿ ಬೆಳವಣಿಗೆಗೂ ಸಮಸ್ತ ಜೈವಿಕ ಕ್ರಿಯೆಗಳನ್ನು ಸಹಜರೀತಿಯಲ್ಲಿ ಜರುಗಿಸುವುದಕ್ಕೂ ಅನುವಾಗುವ ವಿಧಾನವನ್ನು ತಿಳಿಸುವ ಶಾಸ್ತ್ರ (ಆ್ಯನಿಮಲ್ ನ್ಯೂಟ್ರಿಷನ್) ಪ್ರಾಣಿಗಳ ದೇಹದ ರಾಸಾಯನಿಕ ರಚನೆ ಮತ್ತು ಅವು ತೆಗೆದುಕೊಳ್ಳುವ ಆಹಾರಗಳ ರಚನೆಯ ತುಲನಾತ್ಮಕ ಕೂಲಂಕಷ ಆಧ್ಯಯನ ಈ ಶಾಸ್ತ್ರದ ಮುಖ್ಯ ವಿಷಯ. ಸುಪ್ರಸಿದ್ಧ ಆಂಗ್ಲ ವಿಜ್ಞಾನಿಗಳಾದ ಲೋರ್ಸ್ ಮತ್ತು ಗಿಲ್ಬರ್ಟ್ ಎಂಬವರು. ಸುಮಾರು 75 ವರ್ಷಗಳ ಕೆಳಗೆ ಸಾಕುಪ್ರಾಣಿಗಳ ದೇಹದ ರಾಸಾಯನಿಕ ರಚನೆಯ ವ್ಯಾಸಂಗವನ್ನು ಪ್ರಾರಂಭಿಸಿದರು. ಅಲ್ಲಿಂದ ಈಚೆಗೆ ಅನೇಕ ವಿಜ್ಞಾನಿಗಳು ಈ ದಿಸೆಯಲ್ಲಿ ಕೆಲಸಮಾಡಿದ್ದಾರೆ. ಇವುಗಳ ಫಲವಾಗಿ ಎಲ್ಲ ಪ್ರಾಣಿಗಳ ದೇಹದಲ್ಲೂ ನೀರು, ಸಸಾರಜನಕ (ಪ್ರೋಟೀನ್), ಮೇದಸ್ಸು (ಲಿಪಿಡ್), ಲವಣ ಮತ್ತು ಶರ್ಕರಗಳು (ಕಾರ್ಬೊಹೈಡ್ರೇಟ್ಸ್) ವಿವಿಧ ಮೊತ್ತಗಳಲ್ಲಿ ಇರುವುವೆಂದು ತಿಳಿದಿದೆ. ಇವು ಯುಕ್ತ ಮೊತ್ತದಲ್ಲಿ ಇದ್ದು ದೇಹ ದಿನದಿನಕ್ಕೂ ಬೆಳವಣಿಗೆ ಹೊಂದಲು ಬೇಕಾಗುವ ಮುಖ್ಯ ಅಂಶಗಳು ಪ್ರಾಣಿಗಳು ತಿನ್ನುವ ಆಹಾರದಿಂದಲೇ ಲಭ್ಯವಾಗಬೇಕಾಗಿದೆ. ಏಕೆಂದರೆ ಆಹಾರದಲ್ಲಿ ಪ್ರಾಣಿದೇಹಕ್ಕೆ ಸಹಜವಾದ ರಾಸಾಯನಿಕ ಘಟಕಗಳಿವೆ. ಅಲ್ಲದೆ, ಹಾಲು, ತತ್ತಿ, ಉಣ್ಣೆ ಮುಂತಾದ ಮಾನವನಿಗೆ ಉಪಯುಕ್ತವಾದ ಪ್ರಾಣಿಜನ್ಯವಸ್ತುಗಳ ಉತ್ಪಾದನೆಗೆ ಅಗತ್ಯವಾದ ಕಚ್ಚಾ ಪದಾರ್ಥಗಳು ಮತ್ತು ಶಕ್ತಿ ಕೂಡ ಆಹಾರದಿಂದಲೇ ದೊರೆಯಬೇಕಾಗಿದೆ. ಎಲ್ಲ ಪ್ರಾಣಿಗಳ ಆಹಾರವೂ ಅಂತಿಮವಾಗಿ ಸಸ್ಯಜನ್ಮವೇ. ಆಹಾರಜನಕ ಸಸ್ಯಗಳ ರಾಸಾಯನಿಕ ಘಟಕಗಳು ಹೆಚ್ಚು ಕಡಿಮೆ ಪ್ರಾಣಿದೇಹದ ರಾಸಾಯನಿಕ ಘಟಕಗಳಂತೆಯೇ ಇರಬೇಕೆಂಬುದು ವ್ಯಕ್ತ. ಕೆಳಗಿನ ಪಟ್ಟಿಯಿಂದ ಈ ವಿಷಯವನ್ನು ಮನಗಾಣಬಹುದು. (ಸಂಖ್ಯೆಗಳು ಶೇಕಡಾಂಶವನ್ನು ಸೂಚಿಸುತ್ತವೆ).


ನೀರು ಸಸಾರಜನಕ ಮೇದಸ್ಸು ಶರ್ಕರ ಲವಣ

ಹಸಿರು ವನಸ್ಪತಿ

68-76 
    2-4.4

0.6-0.9 20-26.3

1.3-2.2

ಒಣಗಿದ ವನಸ್ಪತಿ 9.5 - 15 5.9-22.3 1.6-3.9 54.7-77.3

1.2-10.5

ಪ್ರಾಣಿಗಳು (ಬೇರೆ ಬೇರೆ ಜಾತಿ) 54-60

15-21

17-24 < 1%

 2.8-46
	ನೀರು : ಪ್ರಾಣಿಗಳಲ್ಲಿ ನೀರಿನ ಅಂಶ 50%-60% ಕ್ಕಿಂತಲೂ ಹೆಚ್ಚಾಗಿರುತ್ತದೆ. ಎಲ್ಲ ಅಂಗಗಳಿಗಿಂತಲೂ ರಕ್ತದಲ್ಲಿ ನೀರಿನ ಮೊತ್ತ ಹೆಚ್ಚು. ನೀರು ಪ್ರಾಣಿ ದೇಹದ ಪ್ರಮುಖ ರಾಸಾಯನಿಕ ಎನ್ನುವುದು ಇದರಿಂದ ವ್ಯಕ್ತವಾಗುತ್ತದೆ.  ಸಾಮಾನ್ಯ ಜನರ ಜ್ಞಾನದ ನಿಲವಿನಂತೆ ನೀರನ್ನು ಪೋಷಕ ಅಥವಾ ಆಹಾರವೆಂದು ಗಣಿಸಲಾಗದಿದ್ದರೂ ದೇಹದ ಎಲ್ಲ ರಾಸಾಯನಿಕ ಪರಿವರ್ತನೆಗಳಲ್ಲೂ ಇದು ಭಾಗವಹಿಸುವುದರಿಂದ ಅತ್ಯಂತ ಅಗತ್ಯವಸ್ತುವೇ ಆಗಿದೆ.  ರೂಬ್ನರ್ ಎಂಬ ವಿಜ್ಞಾನಿ ಶರೀರದಲ್ಲಿ ನೀರಿನ ಮಹತ್ವವನ್ನು ಕುರಿತು ಹೀಗೆ ಹೇಳಿದ್ದಾನೆ.  ಪ್ರಾಣಿದೇಹದಲ್ಲಿ ಕೊಬ್ಬು ಇರದಿದ್ದರೂ ಸಸಾರಜನಕ ಅರ್ಧದಷ್ಟು ಕಡಿಮೆ ಆದರೂ ಅದು ಜೀವಂತವಾಗಿರಬಲ್ಲದು : ಆದರೆ, ನೀರಿನ ಮೊತ್ತ ಕೇವಲ ಹತ್ತರಲ್ಲಿ ಒಂದು ಪಾಲು ಕಡಿಮೆ ಆದರೂ ಅದು ಮರಣವನ್ನಪ್ಪಬೇಕಾಗುತ್ತದೆ.  ನಿಜದ್ರಾವಣ ಹಾಗೂ ಕಲಿಲ ದ್ರಾವಣರೂಪದಲ್ಲಿ ಆಹಾರದ ಸಮಸ್ತ ಪೋಷಕಗಳನ್ನೂ ದೇಹದ ಬೇರೆ ಬೇರೆ ಭಾಗಗಳಿಗೆ ಒಯ್ದು ಮುಟ್ಟಿಸುವ ಕೆಲಸ ನೀರನದೇ. ವಿವಿಧ ಪದಾರ್ಥಗಳನ್ನು ಲೀನವಾಗಿಸಿಕೊಂಡು ಅವುಗಳ ವಿಭಜನೆ ಮುಂತಾದ ರಾಸಾಯನಿಕ ಕ್ರಿಯೆಗಳಿಗೆ ಎಲ್ಲ ದ್ರವಗಳಿಗಿಂತಲೂ ಅಧಿಕವಾಗಿ ಅನುವಾಗಬಲ್ಲದ್ರವ ನೀರೇ. ನೀರಿನ ವಿóಶಿಷ್ಟೋಷ್ಣ (ಸ್ಪೆಸಿಫಿಕ್ ಹೀಟ್) ಅಧಿಕವಾಗಿರುವುದರಿಂದ ದೇಹದಲ್ಲಿ ಜರಗುವ ರಾಸಾಯನಿಕ ಕ್ರಿಯೆಗಳ ಪರಿಣಾಮವಾಗಿ ಬಿಡುಗಡೆ ಆಗುವ ಉಷ್ಣವನ್ನು ಹೀರಿ, ತಾತ್ಕಾಲಿಕವಾಗಿ ಪ್ರಾಣಿದೇಹದ ಉಷ್ಣತೆ ನಿರ್ದಿಷ್ಟಮಟ್ಟಕ್ಕಿಂತ ತ್ವರಿತವಾಗಿ ಏರದಂತೆ ರಕ್ಷಣೆ ನೀಡುತ್ತದೆ.  (ಎಡಬಿಡದೆ 20 ಮಿನಿಟುಗಳತನಕ ಅತ್ಯಂತ ವೇಗದಿಂದ ಸ್ನಾಯುಗಳು ಸಂಕೋಚಿಸಿ ವ್ಯಾಕೋಚಿಸುತ್ತಿದ್ದರೆ ಆ ಕ್ರಿಯೆಯಿಂದ ಉತ್ಪನ್ನವಾಗುವ ಉಷ್ಣ ದೇಹದ ಸಸಾರಜನಕ ವಸ್ತುಗಳನ್ನು ಕುದಿಸಿದ ತತ್ತಿಯಂತೆ ಮಾಡಬಹುದೆಂಬುದಾಗಿ ಹಾರ್ವರ್ಡ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಕ್ಯಾನನ್ ಹೇಳಿದ್ದಾನೆ.)  ದೇಹದ ಬೆಳವಣಿಗೆಗೂ ನೀರು ಅವಶ್ಯಕ.  ಪ್ರಾಣಿಗಳಿಗೆ ಬೇಕಾಗುವ ನೀರಿನ ಮೊತ್ತ ಬೇರೆ ಬೇರೆ ಅಂಶಗಳನ್ನು ಅವಲಂಬಿಸಿದೆ.  ದೇಹ ಬೆಳೆಯುವ ವಯಸ್ಸಿನಲ್ಲಿದ್ದಾಗ 75% ನೀರು ಸ್ನಾಯುಗಳಲ್ಲಿರುತ್ತದೆ.  ಪ್ರೌಢಾವಸ್ಥೆ ತಲುಪಿ, ತತ್ತಿ ಮುಂತಾದವನ್ನು ಈಯುವ ಪ್ರಾಣಿಗಳಿಗೆ ನೀರು ಆಯಾ ವಸ್ತುಗಳ ಉತ್ಪತ್ತಿಯ ಮೊತ್ತಕ್ಕೆ ಅನುಗುಣವಾಗಿರುತ್ತದೆ.  ಮಲಮೂತ್ರಾದಿಗಳ ಮೂಲಕ ನೀರು ಶರೀರದ ಹೊರಗೆ ಹೋಗುವುದರಿಂದ ಆ ಕೊರತೆಯನ್ನು ತುಂಬಿಕೊಡಲು ಅಷ್ಟೇ ಮೊತ್ತದ ನೀರು ಅವಶ್ಯ.  ಹೀಗೆ ಪ್ರಾಣಿಗಳು ಯಾವ ವಯಸ್ಸಿನಲ್ಲೇ ಇರಲಿ ಜೀವಿಸಿರಲು ಮತ್ತು ಸಶಕ್ತವಾಗಿ ಬೆಳೆಯಲು ನೀರು ಬೇಕೇ ಬೇಕು.

ಶರ್ಕರಗಳು (ಕಾರ್ಬೋಹೈಡ್ರೇಟುಗಳು) : ಸಕ್ಕರೆ, ಪಿಷ್ಟಪದಾರ್ಥ ಮತ್ತು ಸೆಲ್ಯುಲೋಸ್ ಮುಂತಾದವು ಶರ್ಕರಗಳ ಸಾಲಿಗೆ ಸೇರುವುವು. ಪ್ರಾಣಿದೇಹದಲ್ಲಿ ಸಕ್ಕರೆ ಮತ್ತು ಗ್ಲೈಕೋಜನ್ ಇವೆರಡು ಶರ್ಕರಗಳ ಹೊರತಾಗಿ ಉಳಿದ ಅನೇಕವು ಲಿಪಿಡುಗಳು ಮತ್ತು ಸಸಾರಜನಕಗಳೊಡನೆ ಸಂಯೋಗಿಸಿ ಸಂಯುಕ್ತರೂಪದಲ್ಲಿ ಕಾಣಸಿಗುತ್ತವೆ. ಪ್ರಾಣಿಗಳು ತಿನ್ನುವ ಶರ್ಕರಪದಾರ್ಥದ ಮೊತ್ತ ಅಧಿಕವಾಗಿದೆ. ಅವು ಸೇವಿಸುವ ಹುಲ್ಲು ಮತ್ತು ಸಸ್ಯಗಳಲ್ಲಂತೂ ಮುಕ್ಕಾಲುಭಾಗ ಇದೆ. ಹುಲ್ಲಿನ ಜಾತಿಗೆ ಸೇರಿದ ಎಲ್ಲ ದವಸಧಾನ್ಯಗಳು ಮತ್ತು ಆಲೂಗಡ್ಡೆಯಂಥ ಗೆಡ್ಡೆಗೆಣಸುಗಳು ಪ್ರಾಣಿಗೆ ಶರ್ಕರ ವಸ್ತುಗಳ ಆಕರವಾಗಿವೆ. ಜೀವನಾವಶ್ಯಕ ಶಕ್ತಿಯನ್ನು ಉತ್ಪಾದಿಸಲು ಪ್ರಾಣಿಗಳಿಗೆ ಶರ್ಕರಗಳು ಅಗತ್ಯ. ವಿವಿಧ ರೂಪಗಳಲ್ಲಿ ದೊರೆಯುವ ಶರ್ಕರ ಪದಾರ್ಥದ ಸಾಮಥ್ರ್ಯ ಮತ್ತು ಪೋಷಕತೆ ಬೇರೆ ಬೇರೆ. ಸಕ್ಕರೆ ಮತ್ತು ಪಿಷ್ಟ ಸುಲಭವಾಗಿ ಪಚನವಾಗುವುದರಿಂದ ಅವನ್ನು ಉತ್ತಮ ಶರ್ಕರಗಳೆಂದು ಪರಿಗಣಿಸಲಾಗಿದೆ. ಮೆಲುಕು ಹಾಕುವ ಪ್ರಾಣಿಗಳ ಜಠರದಲ್ಲಿರುವ ದಂಡಾಣುಗಳಿಂದ ಮತ್ತು ಇತರ ಪ್ರಾಣಿಗಳಲ್ಲಿ ಜೀರ್ಣನಾಳದ ಬೇರೆ ಭಾಗಗಳಲ್ಲಿರುವ ದಂಡಾಣುಗಳಿಂದ ಸೆಲ್ಯುಲೋಸ್ ಮುಂತಾದ ಸಂಕೀರ್ಣ ಶರ್ಕರಗಳು ಪಚನವಾಗುತ್ತವೆ. ಪ್ರಾಣಿಯ ಜೀರ್ಣಾಂಗಗಳಿಂದಲೆ ಜರಗುವ ಪಚನಕ್ರಿಯೆಯಲ್ಲಿ ಪಿಷ್ಟ, ಸಂಕೀರ್ಣ ಸಕ್ಕರೆ ಮುಂತಾದವು ಸುಲಭ ರಾಸಾಯನಿಕ ರಚನೆಯ ಸಕ್ಕರೆಗಳಾಗಿ ಪರಿವರ್ತಿತವಾಗಿ ರಕ್ತದಲ್ಲಿ ಬೆರೆಯುತ್ತವೆ. ಬ್ಯಾಕ್ಟೀರಿಯಗಳ ಸಹಾಯದಿಂದ ಪಚನವಾಗುವ ಶರ್ಕರಗಳು ಕಾರ್ಬನಿಕ ಆಮ್ಲಗಳಾಗಿ ಮಾರ್ಪಟ್ಟು ರಕ್ತಗತವಾಗುತ್ತವೆ. ದೇಹೋಷ್ಣತೆಯನ್ನು ಕಾಯ್ದುಕೊಳ್ಳಲು ಮತ್ತು ದೇಹದಲ್ಲಿ ಶಕ್ತಿಯನ್ನು ಉತ್ಪಾದಿಸಲು ಶರ್ಕರವಸ್ತುಗಳು ಅಗತ್ಯ. ಕೊಬ್ಬಿನ ಶೇಖರಣೆ, ಮಾಂಸಖಂಡಗಳ ಬೆಳವಣಿಗೆ, ಹಾಲು, ಉಣ್ಣೆ ಇತ್ಯಾದಿಗಳ ಉತ್ಪಾದನೆ ಇವೆಲ್ಲವೂ ಪ್ರಾಣಿ ತಿನ್ನುವ ಆಹಾರದಲ್ಲಿಯ ಶರ್ಕರ ಪದಾರ್ಥಗಳ ಪರಿಮಾಣಕ್ಕೆ ಅನುಗುಣವಾಗಿರುತ್ತವೆ. ಸುಲಭವಾಗಿ ಪಚನವಾಗುವ ಹಾಗೂ ಶಕ್ತಿಯನ್ನು ಮತ್ತು ಉಷ್ಣತೆಯನ್ನು ಸುಲಭವಾಗಿ ಬಿಡುಗಡೆ ಮಾಡುವ ಶರ್ಕರವಸ್ತುಗಳು ಉತ್ತಮವಾದವು. ಯಾವುದೋ ಶರ್ಕರ ವಸ್ತು ಅಧಿಕವಾಗಿ ದೊರೆಯುವಂತಿದ್ದರೆ ಸಾಲದು.

ಸಸಾರಜನಕಗಳು : ಪ್ರಾಣಿಗಳ ದೇಹದ ಮೃದುಭಾಗಗಳ ಮತ್ತು ಆವಯವಗಳ ಬೆಳವಣಿಗೆಗೆ ಬೇಕಾಗುವ ಮುಖ್ಯ ಆಹಾರ ಘಟಕಗಳಿವು. ಆದ್ದರಿಂದ ಇವು ಅಲ್ಪ ಮೊತ್ತದಲ್ಲಾದರೂ ಪ್ರಾಣಿಗಳಿಗೆ ದೊರೆಯಲೇಬೇಕು. ದೇಹದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯಿಂದ ಇಲ್ಲವೇ ಆವಯವಗಳ ಚಲನವಲನದಿಂದ, ಉಂಟಾಗುವ ಸವೆತದಿಂದ ಆಗುವ ವ್ಯಯವನ್ನು ಪೂರೈಸಲು ಅಲ್ಲದೇ ಕೂದಲು, ಉಣ್ಣೆ, ಮೈದೊಗಲು ಮತ್ತು ಖಂಡಗಳ ಬೆಳವಣಿಗೆ ಸರಿಯಾಗಿ ಆಗಲು ಸಸಾರಜನಕಗಳು ಬೇಕು. ಮಾಂಸಖಂಡಗಳ ರಚನೆಗೆ ಇವು ಅವಶ್ಯ. ಗರ್ಭಾಶಯದಲ್ಲಿರುವ ಭ್ರೂಣದ ಅಧಿಕಭಾಗ ಸಸಾರಜನಕವೇ. ಹೀಗಾಗಿ ಗಬ್ಬದ ಪ್ರಾಣಿಗಳಿಗೆ ಇದು ಅತಿ ಮುಖ್ಯವೆಂದು ಬೇರೆ ಹೇಳಬೇಕಿಲ್ಲ. ಹಾಲು, ತತ್ತಿಗಳ ಉತ್ಪಾದನೆಗೆ ಸಸಾರಜನಕ ಅಗತ್ಯ. ಪ್ರಾಣಿ ಸೇವಿಸುವ ಪ್ರತಿನಿತ್ಯದ ಆಹಾರದಲ್ಲಿ ಇರುವ ಸಸಾರಜನಕ, ಅದರ ದೇಹಕ್ಕೆ ಬೇಕಾಗುವ ಸಸಾರಜನಕವಾಗಿ ಕೋಶಗಳಲ್ಲಿ ಪರಿವರ್ತನೆ ಆಗುವುದು ಅಗತ್ಯ. ಇದೊಂದು ಅತಿ ಮುಖ್ಯ ಜೈವಿಕ ಕ್ರಿಯೆಯಾದ್ದರಿಂದ ಯುಕ್ತ ಸಸಾರಜನಕವಿರುವ ಆಹಾರ ಒದಗುವಂತಿರಬೇಕು. ಸಸಾರಜನಕವಸ್ತು ಇಪ್ಪತ್ತಕ್ಕೂ ಮೇಲ್ಪಟ್ಟು ಬೇರೆ ಬೇರೆ ಅಮೈನೋ ಆಮ್ಲಗಳಿಂದ ಸಂಯೋಜಿತವಾದ ರಾಸಾಯನಿಕ. ಪಚನಕ್ರಿಯೆ ಜರಗಿದಾಗ ಈ ಅಮೈನೋ ಆಮ್ಲಗಳು ಬಿಡುಗಡೆ ಆಗಿ ರಕ್ತಗತವಾಗುತ್ತವೆ. ರಕ್ತದ ಮೂಲಕ ಇವನ್ನು ದೇಹದ ಎಲ್ಲ ಕೋಶಗಳೂ ಪಡೆದು ಸವಕಳಿಯನ್ನು ಪೂರೈಸಿಕೊಳ್ಳುತ್ತವೆ. ಅಲ್ಲದೆ, ಆಯಾ ಅಂಗದ ವಿಶಿಷ್ಟ ಸಸಾರಜನಕವಸ್ತುವನ್ನು ಉತ್ಪಾದಿಸಿಕೊಳ್ಳುತ್ತವೆ. ಹಾಲು, ಉಣ್ಣೆ ಇತ್ಯಾದಿಗಳ ಉತ್ಪಾದನೆ, ಮಾಂಸಖಂಡಗಳ ಸಂವರ್ಧನೆಗಳಿಗೆ ಕೆಲವು ವಿಶಿಷ್ಟವಾದ ಅಮೈನೋ ಆಮ್ಲಗಳು ಅಗತ್ಯ. ಇವು ಎಂಟು ಬಗೆಯವು. ಹತ್ತುಬಗೆಯವು ಎಂದು ಕೆಲವರ ಮತ. ಇವು ಪ್ರಾಣಿದೇಹದಲ್ಲಿ ಉತ್ಪತ್ತಿ ಆಗಲಾರವಾದ್ದರಿಂದ ಆಹಾರದಿಂದಲೇ ಒದಗಬೇಕಾಗಿದೆ. ಈ ಅಗತ್ಯವನ್ನು ಅರಿತು ಅದನ್ನು ಪೂರೈಸಬಲ್ಲ ಸಸಾರಜನಕಗಳಿರುವ ಆಹಾರಗಳನ್ನು ಸಾಕು ಪ್ರಾಣಿಗಳಿಗೆ ಕೊಡಬೇಕಾಗುತ್ತದೆ. ಆಹಾರದಲ್ಲಿ ಈ ಹತ್ತು ಅಮೈನೋ ಆಮ್ಲಗಳಲ್ಲಿ ಯಾವುದೇ ಒಂದರ ಕೊರತೆ ಇದ್ದರೂ ಉಳಿದವುಗಳ ಉಪಯುಕ್ತತೆ ಕುಂಠಿತಗೊಳ್ಳುತ್ತದೆ. ಅಂಥ ವೇಳೆ ಸಸಾರಜನಕವಸ್ತು ಪೂರ್ತಿಯಾಗಿ ಶಕ್ತಿಯ ಮತ್ತು ಉಷ್ಣದ ಉತ್ಪತ್ತಿಗಾಗಿ ಬಳಸಲ್ಪಡುತ್ತದೆ. ಶರ್ಕರವಸ್ತುವಿನಂತೆಯೇ ಸಸಾರಜನಕ ಘಟಕದ ಒಟ್ಟು ಪರಿಮಾಣಕ್ಕಿಂತ ಅದರ ಗುಣವನ್ನು ಅಂದರೆ ಅದರಲ್ಲಿ ಎಲ್ಲ ಅವಶ್ಯಕ ಅಮೈನೋ ಆಮ್ಲಗಳೂ ಇವೆಯೇ ಎಂಬುದನ್ನು ಗಣಿಸುವುದು ಮುಖ್ಯ. ಪ್ರಾಣಿಗಳು ತಿನ್ನುವ ಯಾವುದೇ ಒಂದು ಆಹಾರ ವಸ್ತುವಿನಲ್ಲಿ ಹತ್ತು ಬಗೆಯ ಅವಶ್ಯಕ ಅಮೈನೋ ಆಮ್ಲಗಳೂ ಕೂಡಿರುವ ಸಸಾರಜನಕ ಇರುವುದೆಂಬ ನೆಚ್ಚಿಗೆ ಇಲ್ಲ. ಆದ್ದರಿಂದ ವಿವಿಧ ಆಹಾರವಸ್ತುಗಳ ಮಿಶ್ರಣವನ್ನು ಒದಗಿಸಬೇಕಾಗುತ್ತದೆ. ಹೀಗೆ ಮಾಡಿದಲ್ಲಿ ಒಂದು ವಸ್ತುವಿನ ಕೊರತೆ ಇನ್ನೊಂದರಿಂದ ಪೂರೈಸುವಂತಿರುತ್ತದೆ. ಎಲ್ಲ ದ್ವಿದಳಧಾನ್ಯಗಳು ಮತ್ತು ಎಣ್ಣೆಕಾಳುಗಳಲ್ಲಿ ಸಾಮಾನ್ಯವಾಗಿ ಹತ್ತು ಅವಶ್ಯಕ ಅಮೈನೋ ಆಮ್ಲಗಳೂ ಕೂಡಿರುವ ಸಸಾರಜನಕ ದೊರೆಯುತ್ತದೆ.

ಮೇದಸ್ಸು : ಪ್ರಾಣಿಗಳು ನಿತ್ಯ ತಿನ್ನುವ ಆಹಾರದಲ್ಲಿ ಸ್ವಲ್ಪ ಮೊತ್ತದಲ್ಲಿ ಮೇದಸ್ಸು ಇದ್ದೇ ಇರುತ್ತದೆ. ಅವುಗಳ ಶಕ್ತಿ ವರ್ಧನೆಗೆ ಇದೊಂದು ಪರಿಣಾಮಕಾರಿ ಅಂಶ. ಆಹಾರದ ಮೂಲಕ ಪ್ರಾಣಿಗಳು ಸೇವಿಸುವ ಮೇದಸ್ಸಿನಿಂದ ಅವುಗಳ ದೇಹದ ಬೆಳವಣಿಗೆಗೆ ಮತ್ತು ಹಾಲಿನ ಉತ್ಪಾದನೆಗೆ ಬೇಕಾಗುವ ಕೊಬ್ಬು ಸಿದ್ಧವಾಗುತ್ತದೆ. ಪಿಷ್ಟಪದಾರ್ಥಗಳಿಗಿಂತ ಅಷ್ಟೇ ತೂಕದ ಕೊಬ್ಬಿನಲ್ಲಿ ದೇಹದ ಶಕ್ತಿಯನ್ನು ಹೆಚ್ಚಿಸುವ ಮತ್ತು ದೇಹಕ್ಕೆ ಕಾವನ್ನು ಒದಗಿಸುವ ಸಾಮಥ್ರ್ಯ ಅಧಿಕವಾಗಿರುತ್ತದೆ. ಪ್ರಾಣಿಗಳ ಆಹಾರದಲ್ಲಿರುವ ಎ ಮತ್ತು ಡಿ ಜೀವಸತ್ವಗಳು ಹಾಗೂ ಕ್ಯಾಲ್ಸಿಯಮ್ ಇವು ರಕ್ತದಲ್ಲಿ ಬೆರೆಯುವುದಕ್ಕೆ ಮೇದಸ್ಸು ಹೆಚ್ಚಿನ ಸಹಾಯ ನೀಡುತ್ತದೆ. ಸಣ್ಣಕರುಗಳು ಕುಡಿಯುವ ಹಾಲಿನಲ್ಲಿ ಇದು ಒಂದು ಪ್ರಧಾನ ಆಹಾರ ಘಟಕ. ಎಲ್ಲ ಎಳೆಯ ಪ್ರಾಣಿಗಳು - ಉದಾಹರಣೆಗೆ ಕೋಳಿಮರಿ, ಮೊಲದಮರಿ, ಹಂದಿಮರಿ-ಬೆಳವಣಿಗೆ ಹೊಂದಲೂ ಆರೋಗ್ಯ ಕಾಯ್ದುಕೊಳ್ಳಲೂ ಅಷ್ಟಿಷ್ಟು ಮೊತ್ತದಲ್ಲಿ ಮೇದಸ್ಸು ಬೇಕೇಬೇಕು. ಹಾಲು ಕೊಡುವ ಪ್ರಾಣಿಗಳು ತಿನ್ನುವ ಆಹಾರದಲ್ಲಿ ಇದರ ಕೊರತೆ ಇದ್ದರೆ, ಅವುಗಳ ಹಾಲಿನ ಉತ್ಪಾದನೆಯ ಮೊತ್ತ ಕಡಿಮೆ ಆಗುತ್ತದೆ. ಸಣ್ಣ ಪ್ರಾಣಿಗಳ ಸಹಜ ಬೆಳವಣಿಗೆಗೆ ಬೇಕಾಗುವ ಕೊಬ್ಬನ್ನು ಹಾಲಿನ ಮೂಲಕ ಪೂರೈಸಬೇಕಾಗುತ್ತದೆ.

ಖನಿಜ ಲವಣಗಳು : ಪ್ರಾಣಿ ಶರೀರದಲ್ಲಿ ವಿವಿಧ ಬಗೆಯ ಖನಿಜಗಳಿವೆ. ಇವು ತಮ್ಮ ತಮ್ಮಲ್ಲಿಯೇ ಸಂಯೋಗವಾಗಿ ಇಲ್ಲವೇ ದೇಹದ ಇತರ ಕಾರ್ಬನಿಕ್ ಪದಾರ್ಥಗಳ ಸಂಯುಕ್ತಗಳಾಗಿ ದೊರೆಯುತ್ತವೆ. ಇವು ಜೀವನಾವಶ್ಯಕ ಆಹಾರ ಘಟಕಗಳು. ರಂಜಕ, ಕಬ್ಬಿಣ, ತಾಮ್ರ, ಸತುವು ಮುಂತಾದ ಖನಿಜಗಳು ಶರೀರದಲ್ಲಿ ಮಹತ್ವದ ಕಾರ್ಯಗಳನ್ನು ಮಾಡುವುದರಿಂದ ಅವನ್ನು ಆಹಾರಘಟಕಗಳ ರೂಪದಲ್ಲಿ ದೊರಕಿಸಿಕೊಳ್ಳುವುದು ಮುಖ್ಯವೆನಿಸಿದೆ. ಕೆಲವು ಲವಣಗಳ ಕಾರ್ಯವೇನೆಂಬುದು ಖಚಿತವಾಗಿ ಇನ್ನೂ ತಿಳಿಯದು. ಹಲವು ಖನಿಜಗಳು ನಿರುಪಯುಕ್ತ ವಸ್ತುಗಳಾಗಿ ಶರೀರದಲ್ಲಿ ಶೇಖರಗೊಂಡಿರುವುದೂ ಉಂಟು. ಜೀವನಾವಶ್ಯಕ ಖನಿಜಗಳು ದೇಹದಲ್ಲಿ ವಿವಿಧ ರಾಸಾಯನಿಕಗಳ ರೂಪಗಳಲ್ಲಿರುತ್ತವೆ. ಇವು ಅಸ್ಥಿ ಮತ್ತು ದಂತಗಳಲ್ಲಿ ಅತ್ಯಂತ ಹೇರಳವಾಗಿವೆ. ಪ್ರಚೋದನೆಗೆ ನಿರ್ದಿಷ್ಟ ಪ್ರತಿಕ್ರಿಯೆ ತೋರಿಸಬಲ್ಲ ಸ್ನಾಯು ಮತ್ತು ನರಮಂಡಲ, ಗ್ರಂಥಿಗಳು ಮುಂತಾದ ಅಂಗಗಳ ಮುಖ್ಯ ಘಟಕಗಳಾದ ಕೋಶಗಳು ಮತ್ತು ಬಂಧನಾಂಗಾಂಶಗಳಲ್ಲಿ ಇವು ಅಗತ್ಯವಾಗಿ ಇರುತ್ತವೆ. ಶರೀರದಲ್ಲಿ ರಕ್ತ ಮುಂತಾದ ದ್ರವಗಳಲ್ಲಿ ವಿಲೀನವಾಗಿ ಕಿಂಚಿತ್ ಪರಿಮಾಣದಲ್ಲಿ ಎಲ್ಲೆಡೆಯೂ ಇದ್ದು ಒತ್ತಡವನ್ನು ಕಾಯ್ದುಕೊಳ್ಳುವ, ಕ್ಷಾರ ಮತ್ತು ಆಮ್ಲಗಳ ಸಮತೋಲನವನ್ನು ಉಳಿಸಿಕೊಳ್ಳುವ ಮುಂತಾದ ನಾನಾ ಪ್ರಕಾರದ ಕಾರ್ಯಗಳನ್ನು ಮಾಡುತ್ತವೆ.

ರಕ್ತದಲ್ಲಿ ಕ್ಯಾಲ್ಸಿಯಮ್ ಮತ್ತು ರಂಜಕಗಳು ಪರಸ್ಪರ ನಿರ್ದಿಷ್ಟ ಪ್ರಮಾಣದಲ್ಲಿ ಕಾಣಸಿಗುತ್ತವೆ. ಯಾವುದಾದರೂ ಒಂದು ಹೆಚ್ಚು ಕಡಿಮೆ ಆದರೆ ಇನ್ನೊಂದು ಅನುಗುಣವಾಗಿ ಕಡಿಮೆ ಹೆಚ್ಚಾಗಿ ನರ ಹಾಗೂ ಸ್ನಾಯುಮಂಡಲಗಳ ಕ್ರಿಯೆಯಲ್ಲಿ ಏರುಪೇರಾಗುತ್ತದೆ. ಇವುಗಳ ಲಭ್ಯತೆ, ಜೀರ್ಣನಾಳದಲ್ಲಿ ರಕ್ತಗತವಾಗುವಿಕೆ, ಡಿ ಜೀವಸತ್ತ್ವ, ಪ್ಯಾರಾಥೈರಾಯ್ಡ್ ಗ್ರಂಥಿಯ ಹಾರ್ಮೋನ್, ಕ್ಯಾಲ್ಸಿಟೋನಿನ ಎಲ್ಲ ಹಾರ್ಮೋನ್-ಇವು ವ್ಯತ್ಯಾಸ್ತಗೊಳ್ಳುವುದರಿಂದ ಈ ಘಟಕಗಳಲ್ಲಿ ಪರಸ್ಪರ ಪ್ರಮಾಣದ ಏರುಪೇರುಗಳು ಉಂಟಾಗಬಹುದು. ಹಾಲು ಹಿಂಡುವ ಸಾಕು ಪ್ರಾಣಿಗಳಲ್ಲಿ ಈ ಘಟಕಗಳ ಅವಶ್ಯಕತೆ ಹೆಚ್ಚು ; ಗಬ್ಬದ ಪ್ರಾಣಿಗಳ ಗರ್ಭಕೋಶದಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೆ ಈ ಘಟಕಗಳ ಅಗತ್ಯ ಹೆಚ್ಚಾಗಿರುವುದರಿಂದ ಆ ಕಾಲದಲ್ಲಿ ಸ್ವಾಭಾವಿಕವಾಗಿಯೇ ಇವನ್ನು ಹೆಚ್ಚು ಪರಿಣಾಮದಲ್ಲಿ ನೀಡಬೇಕು. ತತ್ತಿ ಇಡುತ್ತಿರುವ ಬಾತುಕೋಳಿಗಳಲ್ಲಿಯೂ ಅಷ್ಟೆ..

ಹುಲ್ಲು ಇತ್ಯಾದಿ ಮೇವುಗಳು ಬಲಿಯುತ್ತ ಹೋದಂತೆಲ್ಲ ಅವುಗಳಲ್ಲಿ ಕ್ಯಾಲ್ಸಿಯಮ್ ಘಟಕ ಕಡಿಮೆ ಆಗುವುದು. ದ್ವಿದಳ ಧಾನ್ಯಗಳಲ್ಲಿ ಏಕದಳ ಧಾನ್ಯಗಳಿಗಿಂತ ಹೆಚ್ಚಾಗಿ ಕ್ಯಾಲ್ಸಿಯಮ್ ದೊರಕುವುದು. ಹಾಲು, ಮಾಂಸ, ಮೀನು ಮತ್ತು ಮೂಳೆಗಳಿಂದ ತಯಾರಾದ ಆಹಾರ ವಸ್ತುಗಳಲ್ಲಿ ಕ್ಯಾಲ್ಸಿಯಮ್ ಮತ್ತು ರಂಜಕ ಹೇರಳವಾಗಿರುವುವು. ಇವೆಲ್ಲವನ್ನೂ ಲಕ್ಷ್ಯದಲ್ಲಿಟ್ಟು ಸಾಕುಪ್ರಾಣಿ ಪಕ್ಷಿಗಳಲ್ಲಿ ಈ ಘಟಕಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದೂ ಅಗತ್ಯ. ಕ್ಯಾಲ್ಸಿಯಮ್ ಮತ್ತು ರಂಜಕಗಳ ಕೊರತೆಯಿಂದ ಇವುಗಳಲ್ಲಿ ರಿಕೆಟ್ಸ್ ಎಂಬ ರೋಗ ಉಂಟಾಗುತ್ತದೆ. ಹೀಗಾದಾಗ ಅಸ್ಥಿಗಳು ದುರ್ಬಲವಾಗಿ, ಬೆಳವಣಿಗೆ ನಿಂತು, ಆರೋಗ್ಯ ಕೆಡುವುದಲ್ಲದೆ ಮರಣ ಸಂಭವಿಸುವುದೂ ಉಂಟು. ಭ್ರೂಣದಲ್ಲಿ ಕೊರತೆ ಸ್ಥಿತಿ ನಿಶ್ಚಲವಾಗಿಯೂ ಮಾರಕ. ಹಾಲುಹಿಂಡುವ ಪ್ರಾಣಿಗಳಲ್ಲಿ ಕೊರತೆಯಿಂದ ಹಾಲಿನ ಪರಿಮಾಣ ಕಡಿಮೆ ಆಗುತ್ತದೆ. ಸಾಕು ಪ್ರಾಣಿಗಳಲ್ಲಿ ಬೆದೆ ಉಂಟಾಗದಿರುವುದಕ್ಕೆ ಹಾಗೂ ಗರ್ಭಧಾರಣೆ ಆಗದಿರುವುದಕ್ಕೆ ಮತ್ತು ಕೋಳಿಗಳು ತತ್ತಿಗಳನ್ನು ಇಡದೇ ಇರುವುದಕ್ಕೆ ಇವುಗಳ ಕೊರತೆ ಮುಖ್ಯ ಕಾರಣ.

ಅಯೊಡೀನ್, ಥೈರಾಕ್ಸಿನ್ ಎಂಬ ಹಾರ್ಮೋನಿನ ಘಟಕವಾಗಿ ದೇಹದ ಎಲ್ಲ ಕೋಶಗಳ ಕ್ರಿಯೆಗೂ ಅಗತ್ಯವಾಗಿದೆ. ಅಯೊಡೀನಿನ ಕೊರತೆ ಉಂಟಾದಲ್ಲಿ ಥೈರಾಕ್ಸಿನ್‍ನ್ನು ಉತ್ಪಾದಿಸುವ ಥೈರಾಯ್ಡ್ ಗ್ರಂಥಿಯ ಗಾತ್ರ ವೃದ್ಧಿಯಾಗಿ ಗಾಯ್ಟರ್ ಎಂಬ ರೋಗ ಪರಿಸ್ಥಿತಿ ಉಂಟಾಗುತ್ತದೆ. ಭ್ರೂಣದಲ್ಲಿ ಈ ಸಂಭವ ಹೆಚ್ಚಾಗಿರುವುದರಿಂದ ಸಾಕುಪ್ರಾಣಿಗಳು ಗರ್ಭ ತಾಳಿರುವಾಗ ಅಯೊಡೀನ್ ಲವಣ ಸೇರಿಸಿದ ಅಡುಗೆ ಉಪ್ಪನ್ನು ಕೊಡಬೇಕಾಗುತ್ತದೆ.

ರಕ್ತದ ಹಿಮೋಗ್ಲಾಬಿನ್ ಎಂಬ ಕೆಂಪುವರ್ಣದ ಸಸಾರಜನಕ ಘಟಕವಾಗಿ ಕಬ್ಬಿಣ ಉಂಟು. ಇದರ ಕೊರತೆ ಉಂಟಾದಾಗ ರಕ್ತದ ಆಮ್ಲಜನಕವನ್ನು ಹೀರಿಕೊಳ್ಳಲು ಸಾಮಥ್ರ್ಯ ತಗ್ಗುತ್ತದೆ. ಆಹಾರದಲ್ಲಿ ದೊರೆಯುವ ಕಬ್ಬಿಣ ಪ್ರಾಣಿ ದೇಹದಲ್ಲಿ ಹಿಮೊಗ್ಲಾಬಿನ್ನಾಗಿ ಸಂಯೋಜಿತವಾಗಲು ತಾಮ್ರ, ಲವಣಗಳು ಅಗತ್ಯವೆನಿಸಿವೆ. ಇವು ವಹಿಸುವ ಪಾತ್ರ ಅವ್ಯಕ್ತ.

ಅಡುಗೆ ಉಪ್ಪಿನ ಸೋಡಿಯಮ್ ಮತ್ತು ಕ್ಲೋರೈಡ್ ಎರಡು ಘಟಕಗಳೂ ಜೀವನಾವಶ್ಯಕ ವಸ್ತುಗಳು. ಲಾಲಾರಸದ ಉತ್ಪಾದನೆ, ಕೆಲವು ಕಿಣ್ವಗಳ ಕಾರ್ಯಾಚರಣೆ, ಕೋಶಗಳು ನೀರು ಹೀರಿ ಹಿಡಿದಿಟ್ಟುಕೊಳ್ಳುವುದಕ್ಕಾಗಿ ಅಗತ್ಯವಾದ ಒತ್ತಡ (ಆಸ್ಮಾಟಿಕ್ ಪೆಶÀರ್). ದೇಹರಸಗಳಲ್ಲಿ ಆಮ್ಲ ಕ್ಷಾರಗಳ ಸಮತೋಲನ, ಜಠರ ರಸದ ಘಟಕವಾದ ಹೈಡ್ರೊಕ್ಲೋರಿಕ್ ಆಮ್ಲ ಉತ್ಪಾದನೆ ಇವುಗಳಿಗೆಲ್ಲ ಈ ಘಟಕಗಳು ಅತ್ಯಗತ್ಯ. ಬೆವರು ಮತ್ತು ಮೂತ್ರ ರೂಪಗಳಲ್ಲಿ ಇವು ನಿರಂತರವಾಗಿ ವಿಸರ್ಜಿತವಾಗುತ್ತಾ ನಷ್ಟವಾಗುತ್ತಿರುವುದರಿಂದ ಕೊರತೆ ಉಂಟಾಗದಂತೆ ನಿರಂತರವಾಗಿ ಇವುಗಳ ಪೂರೈಕೆಗೆ ಲಕ್ಷ್ಯ ಹರಿಸುವುದು ಅಗತ್ಯ. ಕೋಬಾಲ್ಟ್, ಗಂಧಕ, ಮ್ಯಾಗ್ನೀಸಿಯಮ್, ಮ್ಯಾಂಗನೀಸ್ ಇವುಗಳ ಲವಣಗಳೂ ದೇಹ ಕಾರ್ಯಕ್ಕೆ ಅಗತ್ಯವೆನಿಸಿವೆ. (ಎಸ್.ಬಿ.ಎಚ್.)