ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಕಟಣೋದ್ಯಮ
ಪ್ರಕಟಣೋದ್ಯಮ- ಯಾವುದೇ ಬರಹದ ಆಯ್ಕೆಮಾಡಿ ಅದರ ಹಲವು ಪ್ರತಿಗಳನ್ನು ತಯಾರಿಸಿ ಪ್ರಸಾರ ಮಾಡುವ ಉದ್ದೇಶದಿಂದ ನಡೆಯುವ ಉದ್ಯಮ. ಇದು ಇಂದು ವಾಸ್ತವವಾಗಿ ಮುದ್ರಣ, ಕಾಗದ ಮುಂತಾದ ಅಂಶಗಳನ್ನು ಅವಲಂಬಿಸಿದ್ದರೂ ಇವಕ್ಕಿಂತ ಪ್ರಾಚೀನವಾದ್ದು 9ನೆಯ ಶತಮಾನದ ಮಧ್ಯಭಾಗದಲ್ಲಿ ಚೀನಾದಲ್ಲಿ ಅಚ್ಚುಗಳಿಂದ ಮುದ್ರಿಸುತ್ತಿದ್ದರು. ಹೀಗೆ ಮುದ್ರಿತವಾಗಿ ಸುರಳಿಯ ರೂಪದಲ್ಲಿದ್ದ, ಕ್ರಿ. ಶ. 868ರ, ಪುಸ್ತಕ ಹೀರಕ ಸೂತ್ರ ಈಗ ಉಪಲಬ್ಧವಾಗಿದೆ. ಇದೇ ನಮಗೆ ಸಿಕ್ಕಿರುವ ಮೊದಲನೆಯ ಪುಸ್ತಕ. ಬಿಡಿ ಅಚ್ಚು ಮೊಳೆಗಳಿಂದ ಮುದ್ರಣ ಮಾಡುವ ರೂಢಿ ಬಂದದ್ದು 11ನೆಯ ಶತಮಾನದ ಮಧ್ಯಭಾಗದಲ್ಲಿ. ಅಲ್ಲಿಂದ ಈ ಪದ್ಧತಿ ಯೂರೋಪಿಗೆ ಬಂದದ್ದು 15ನೆಯ ಶತಮಾನದಲ್ಲಿ. ಆಧ್ಯಾತ್ಮಿಕ, ಸಾಂಸ್ಕøತಿಕ ಹಾಗೂ ಬೌದ್ಧಿಕ ವಿಕಾಸಗಳ ಒಂದು ಮುಖ್ಯ ಸಾಧನವಾಗಿ, ಲಿಪಿಕಾರರು ಪ್ರತಿಮಾಡಿ ಬಲು ಕಷ್ಟದಿಂದ ಸಂಗ್ರಹಿಸಿಡುತ್ತಿದ್ದ ಹಳೆಯ ಪದ್ಧತಿಗೆ ಅತ್ಯುತ್ತಮ ಬದಲಿಯಾಗಿ ಪರಿಣಮಿಸಿದ ಮುದ್ರಣ ಕಲೆ ಪ್ರಪಂಚದಲ್ಲಿ ಈ ಕಾರಣದಿಂದಾಗಿ ಅತ್ಯಂತ ಮಹತ್ತ್ವದ ಆವಿಷ್ಕಾರವೆನಿಸಿತು. ಮೊದಲಿಗೆ ಪ್ಯಾಪಿರಸ್ ಅಥವಾ ಪಾರ್ಚ್‍ಮೆಂಟ್ ಹಾಳೆಯ ಮೇಲೆ ಪ್ರತಿಕಾರರು ಬರೆದು ಅದನ್ನು ಸುರುಳಿಯಾಗಿ ಕಟ್ಟಿಡುತ್ತಿದ್ದರು. ಮೇಲೆ ಹೇಳಿದ ಮೊದಲನೆಯ ಪುಸ್ತಕ ಈ ರೀತಿಯದೇ. ರೋಮ್ ಮತ್ತು ಗ್ರೀಸ್‍ಗಳಲ್ಲಿ ಪ್ಯಾಪಿರಸ್ ತಯಾರಿಸುವ ಕಾರ್ಖಾನೆಗಳಿದ್ದವು. ಪ್ರಾಚೀನ ಮಹಾಕಾವ್ಯಗಳನ್ನೂ ಧರ್ಮತತ್ತ್ವಗಳನ್ನೂ ಅದರ ಮೇಲೆ ಬರೆದು ಸಂರಕ್ಷಿಸಿಡುತ್ತಿದ್ದರು. ಈ ಪದ್ಧತಿಯೂ ಮೂಲರೂಪದಲ್ಲಿ ಹೆಚ್ಚು ಕಡಿಮೆ ಆಧುನಿಕ ಪ್ರಕಟೋದ್ಯಮವನ್ನೇ ಹೋಲುತ್ತಿತ್ತು ಎನ್ನಬಹುದು. ಪ್ರತೀಕರಿಸುವುದಕ್ಕಾಗಿ ಹಸ್ತಪ್ರತಿಗಳನ್ನು ಆಯುವುದು : ಲೇಖಕರ ಹಕ್ಕುಗಳನ್ನು ಕೊಂಡದ್ದಕ್ಕಾಗಿ ಅವರಿಗೆ ಹಣ ಪಾವತಿ ಮಾಡುವುದು; ವಿವಿಧ ಶೀರ್ಷಿಕೆಗಳ ಅಳತೆ, ಬೆಲೆ, ವಿನ್ಯಾಸಗಳನ್ನು ನಿಗದಿಪಡಿಸುವುದು ಮತ್ತು ಈ ಆವೃತ್ತಿಗಳಿಗೆ ಲಾಭದಾಯಕವಾದ ಮಾರುಕಟ್ಟೆಗಳನ್ನು ಹುಡುಕುವುದು ಮತ್ತು ಬೆಳೆಸುವುದು. ಈಗಿನಂತೆ ಖಚಿತವಾಗಿ ಪುಸ್ತಕ ರೂಪವನ್ನು ತಳೆದಿರದಿದ್ದರೂ ಪುಸ್ತಕ ಪ್ರಕಟಣೋದ್ಯಮ ಹೆಚ್ಚು ಕಡಿಮೆ ಈಗಿನಂತೆಯೇ ಇತ್ತು. ಸುಮಾರು 6-7ನೆಯ ಶತಮಾನದ ವೇಳೆಗೆ ರಟ್ಟು ಕಟ್ಟಿದ ಪುಸ್ತಕದ ಪರಿಚಯವಾಗಿತ್ತು. ಕ್ರೈಸ್ತ ಧಾರ್ಮಿಕ ನಾಯಕರು ಮತ್ತು ನ್ಯಾಯವಾದಿಗಳು ಮೊದಲಿಗೆ ರಟ್ಟು ಕಟ್ಟಿದ ಪುಸ್ತಕವನ್ನು ಬಳಸಿದ್ದರು. ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾದ ಪುಸ್ತಕವೆಂಬ ಖ್ಯಾತಿ ಆಗ ಸಿದ್ಧವಾದ 'ಬುಕ್ ಆಫ್ ಕೆಲ್ಸ್ ' ಎಂಬ ಐರ್ಲೆಂಡಿನಲ್ಲಿ ಪ್ರಕಟವಾದ ಪುಸ್ತಕಕ್ಕೆ ಲಭಿಸಿದೆ. ಪ್ಯಾಪಿರಸ್ ಸುರಳಿಯನ್ನು ವಾಲ್ಯುಮೆನ್ ಎಂದು ಕರೆಯುತ್ತಿದ್ದರು. ಇದರಿಂದಲೇ ವಾಲ್ಯೂಮ್ ಎಂಬ ಪದ ಬಂದಿದೆ. ಕ್ರಮೇಣ ಇದನ್ನು ಬುಕ್ ಎಂಬುದಕ್ಕೆ ಸಂವಾದಿಯಾಗಿ ಪ್ರಯೋಗಿಸಲಾಯಿತು. ಅದಾದ ನಂತರ ರಟ್ಟು ಕಟ್ಟಿದ ಮೊದಮೊದಲು ಪುಸ್ತಕಗಳನ್ನು ಕೋಡೆಕ್ಸ್ ಎಂದು ಕರೆಯುತ್ತಿದ್ದರು. ಮಧ್ಯ ಯುಗದ ಪುಸ್ತಕದ ಮಾದರಿ ಈ ಕೋಡೆಕ್ಸ್ ಮುಖ್ಯವಾಗಿ ಚರ್ಚುಗಳು ಇವನ್ನು ತಯಾರಿಸಿ ಪ್ರಕಟಿಸುತ್ತಿದ್ದವು. ಅಂದಿಗೆ ಅವೇ ಮುಖ್ಯ ಪ್ರಕಾಶನ ಕೇಂದ್ರಗಳಾಗಿದ್ದವು. ಆ ವೇಳೆಗೆ ದೊಡ್ಡ ನಗರಗಳಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯಗಳು ನ್ಯಾಯಶಾಸ್ತ್ರ, ವೈದ್ಯಶಾಸ್ತ್ರ, ಅಲಂಕಾರಶಾಸ್ತ್ರ ಮತ್ತಿತರ ಜ್ಞಾನಭಾಗಗಳನ್ನು ಕೋಡೆಕ್ಸ್‍ಗಳನ್ನು ತಯಾರಿಸಿ ಪ್ರಕಟಿಸತೊಡಗಿದವು. ಪ್ರಕಟನೆಯ ಉದ್ಯಮ ಕೇಂದ್ರ ನಿಧಾನವಾಗಿ ಚರ್ಚುಗಳಿಂದ ಮತ್ತು ಸರಕಾರದಿಂದ ವಿಶ್ವವಿದ್ಯಾಲಯಗಳ ಕಡೆಗೆ ಸರಿಯಿತು. ವಿಶ್ವವಿದ್ಯಾಲಯಗಳು ಲಾಭದಾಸೆಯಿಲ್ಲದೆ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಒದಗಿಸಬೇಕಾಯಿತು. ಹೆಚ್ಚು ಹೆಚ್ಚು ಪ್ರತಿಗಳ ಆವೃತ್ತಿಗಳನ್ನು ವರ್ಷ ವರ್ಷ ಹೊರತರಬೇಕಾಯಿತು. ಈ ಕೋಡೆಕ್ಸ್‍ಗಳು ಕೈಬರಹದವೇ. ಚರ್ಚುಗಳಲ್ಲಿ ಈ ಕೆಲಸಕ್ಕೆ ನಿಗದಿಯಾದ 'ಸ್ಕ್ರಿಪ್ಟೋರಿಯಮ್ ' ಅಥವಾ 'ರೈಟರಿ' ಗಳು (ಬರಹ ಶಾಲೆ) ಇರುತ್ತಿದ್ದುವು. ಹಗಲಿನ ಬೆಳಕಿನಲ್ಲಿ ಲಿಪಿಕರು ಕುಳಿತು ಶ್ರದ್ಧೆಯಿಂದ ಬಹಳ ಕಷ್ಟಪಟ್ಟು ಬರೆಯುತ್ತಿದ್ದರು. ರಾತ್ರಿ ವೇಳೆ ಕೃತಕ ಬೆಳಕಿನಲ್ಲಿ ಕೆಲಸ ಮುಂದುವರಿಸಿದ್ದಾದರೆ ಆಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಬಿಡಬಹುದೆಂಬ ಗಾಬರಿಯಿಂದ ಕೆಲಸ ಕೈದು ಮಾಡುತ್ತಿದ್ದರು. ಆಮೇಲೆ ಕರಡು ಓದಿ ತಪ್ಪುಗಳಿದ್ದರೆ ತಿದ್ದಿ, ಚಿತ್ರಗಳನ್ನು ಬರೆಯಿಸಿ ಹೊಳಪು ಕೊಟ್ಟು, ರಟ್ಟು ಕಟ್ಟುತ್ತಿದ್ದರು. ಪದ್ಧತಿಯೇನೋ ಈಗಿನದರಂತೆಯೇ.
15ನೆಯ ಶತಮಾನದ ಕೊನೆಗೆ ಪ್ರಕಾಶನೋದ್ಯಮದಲ್ಲಿ ಏರಿಕೆ ಕಂಡುಬರಲು ಮುಖ್ಯವಾಗಿ ಕಾರಣ ಜೋಹಾನ್ ಗುಟೆನ್‍ಬರ್ಗ್ ಬಿಡಿ ಮೊಳೆಗಳಿಂದ ಮುದ್ರಣ ಮಾಡುವುದನ್ನು ಕಂಡುಹಿಡಿದದ್ದು. ಮೊಳೆಗಳನ್ನು ಉಪಯೋಗಿಸಿದವರಲ್ಲಿ ಅವನೇ ಮೊದಲಿಗನಲ್ಲವಾದರೂ ಗುಟೆನ್‍ಬರ್ಗ್‍ನ ಹೆಸರು ಪುಸ್ತಕ ಪ್ರಕಾಶನ ಮತ್ತು ಮುದ್ರಣ ಉದ್ಯಮದಲ್ಲಿ ಬಹಳ ಮಹತ್ತ್ವ ಪಡೆದಿದೆ. ಅವನ ಅದ್ಭುತ ಸಾಧನೆಯ ಅನಂತರ ಜರ್ಮನಿಯಲ್ಲಿ ಅವನಿದ್ದ ಸ್ಥಳ ಮೇನ್ವ್ ಬಹಳ ದೊಡ್ಡ ಪ್ರಕಾಶನ ಕೇಂದ್ರವಾಯಿತು. 1500 ಕ್ಕಿಂತ ಮೊದಲಿಗೇ ಸುಮಾರು 30,000 ಪುಸ್ತಕಗಳನ್ನು ಯೂರೋಪಿನಲ್ಲಿ ಪ್ರಕಟಿಸಲಾಗಿತ್ತು. ಅವುಗಳ ಪೈಕಿ ಮೂರನೆಯ ಎರಡಕ್ಕಿಂತಲೂ ಹೆಚ್ಚು ಭಾಗ ಲೀಪ್‍ಜಿóಗ್ ಕೊಲೋನ್, ಬಾಸೆಲ್, ಸ್ಟ್ರಾಸ್‍ಬರ್ಗ್ ಮೊದಲಾದ ಶಿಕ್ಷಣ ಕೇಂದ್ರಗಳಿಂದ ಬಂದವು. ಆ ಸ್ಥಳಗಳಲ್ಲಿ ತರಬೇತಿ ಹೊಂದಿದ ಕುಶಲ ಕರ್ಮಿಗಳು ಮುದ್ರಣ ಮತ್ತು ಪ್ರಕಾಶನೋದ್ಯಮವನ್ನು ಇಟಲಿಗೆ ಒಯ್ದರು. ಸಂಸ್ಕøತಿ ಹಾಗೂ ವಾಣಿಜ್ಯಗಳ ಪ್ರಸಾರದಲ್ಲಿ, ಅಲ್ಲಿಯದು ಬಹು ಮಹತ್ತ್ವ್ವದ ಪಾತ್ರ ವಹಿಸಿತು. ಆ ಜರ್ಮನ್ನರೇ 16ನೆಯ ಶತಮಾನದ ಪ್ರಾರಂಭದ ವರ್ಷಗಳಲ್ಲಿ ಈ ಕಲೆಯನ್ನು ಫ್ರಾನ್ಸಿಗೆ ಹರಡಿದರು.
1501ರಲ್ಲಿ ಆಲ್ಡೋ ಮೆನೂಜಿûಯೋ ಎಂಬಾತ ಮೊದಲು ಪುಸ್ತಕಗಳಿಗೆ ಅಡಕವಾದ ಒಂದು ಆಕಾರವನ್ನು ವಿನ್ಯಾಸ ಮಾಡಿದ. ಅಳವಿಗೆ ಮೀರಿದ ಭಾರೀ ಗಾತ್ರದ ಕೋಡೆಕ್ಸ್ ವಾಲ್ಯೂಮ್ ಸ್ಥಾನದಲ್ಲಿ ಬುಕ್ ಅಥವಾ ಪುಸ್ತಕ ಬಂತು. ಗಾತ್ರ ಚಿಕ್ಕದು, ಅಡಕವಾದದ್ದು, ಸುಂದರವಾದದ್ದು. ಸಹಜವಾಗಿಯೇ ಇದು ಬಹು ಜನಪ್ರಿಯವಾಯಿತು. ವಿವಿಧ ವಿನ್ಯಾಸಗಳ ಹಾಗೂ ಗಾತ್ರಗಳ ಅಚ್ಚುಮೊಳೆಗಳನ್ನು ತಯಾರಿಸಲಾಯಿತು. ವಿವಿಧ ರೀತಿಯ ಪುಸ್ತಕಗಳು ಸಾವಿರಾರು ಸಂಖ್ಯೆಯಲ್ಲಿ ಹೊರಬಂದವು. ಪ್ರಕಾಶಕರು ಮತ್ತು ಮುದ್ರಕರು ಸಂಘಟಿತರಾದರು. ತಮ್ಮ ಹಕ್ಕು ಸೌಲಭ್ಯಗಳನ್ನು ಸಂರಕ್ಷಿಸಿಕೊಳ್ಳುವ ಸಲುವಾಗಿ ಗಿಲ್ಡ್‍ಗಳನ್ನೂ ಕಾರ್ಪೋರೇಷನ್‍ಗಳನ್ನೂ ರಚಿಸಿಕೊಂಡರು. ಸರಕಾರ, ಚರ್ಚು ಹಾಗೂ ಇತರ ಶಕ್ತಿಗಳ ವಿರೋಧದ ಎದುರು ಹೋರಾಡಿ ಉದ್ಯಮ ನಿಲ್ಲಬೇಕಾಯಿತು. ಆದರೆ ಜನಪ್ರಿಯತೆ ಅಪಾರವಾಗಿದ್ದುದರಿಂದ ಉದ್ಯಮ ತಾನೇ ತಾನಾಗಿ ಬೆಳೆಯಿತು. ವಿರೋಧದ ಒಂದು ಪರಿಣಾಮವೆಂದರೆ ಬಹುಸಂಖ್ಯೆಯ ಮುದ್ರಕರು ಇಂಗ್ಲೆಂಡಿಗೆ ವಲಸೆ ಹೋದದ್ದು. 1476 ರಿಂದ 1536ರ ಅವಧಿಯಲ್ಲಿ ಇಂಗ್ಲೆಂಡಿನಲ್ಲಿದ್ದ ಮುದ್ರಕರು, ರಟ್ಟು ಕಟ್ಟುವವರು, ಮತ್ತು ಲೇಖನ ಸಾಮಗ್ರಿ ವಿತರಕರಲ್ಲಿ ಮೂರನೆಯ ಎರಡು ಪಾಲು ಮಂದಿ ಹೀಗೆ ಹೊರಗಿನಿಂದ ಹೋದವರು. ಅಲ್ಲಿ ಪ್ರಕಟಣೋದ್ಯಮ ಚೆನ್ನಾಗಿ ಚಿಗುರೊಡೆಯಿತು. ಆನ್ ರಾಣಿಯ ಆಳ್ವಿಕೆಯಲ್ಲಿ 1709ರಲ್ಲಿ ಮೊದಲನೆಯ ಕಾಪಿರೈಟ್ (ಕೃತಿಸ್ವಾಮ್ಯ) ಅಧಿನಿಯಮ ಜಾರಿಗೆ ಬಂತು. ಫ್ರಾನ್ಸಿನಲ್ಲಿ ಇದು 1793ರಲ್ಲಿ ಜಾರಿಗೆ ಬಂದು ಪ್ರಕಾಶನೋದ್ಯಮವನ್ನು ಎಲ್ಲ ಬಗೆಯ ಏಕಸ್ವಾಮ್ಯಗಳಿಂದ ಬಿಡುಗಡೆ ಮಾಡಿತು. ಇಂಗ್ಲಿಷ್ ಕೃತಿಸ್ವಾಮ್ಯ ಕಾನೂನಿನ ವೈಶಿಷ್ಟ್ಯವೆಂದರೆ ನಿಶ್ಚಿತ ಅವಧಿ ಕಳೆದ ಅನಂತರ ಕೃತಿಯ ಹಕ್ಕು ಸಾರ್ವಜನಿಕ ಸ್ವತ್ತಾಗಿ ಬಿಡುತ್ತದೆ ಎಂದು ಹೇಳಿದ್ದು. ಈ ಅವಧಿ 14 ವರ್ಷಗಳಿಂದ 50 ವರ್ಷಗಳ ತನಕ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆಯಾಗಿತ್ತು. ಆಧುನಿಕ ಪ್ರಕಟಣೋದ್ಯಮದ ಕೃತಿಸ್ವಾಮ್ಯ ಕಾನೂನಿನ ಸಾರಾಂಶ ಇದು. ಲೇಖಕರು ತಮ್ಮ ಬರಹದ ಹಕ್ಕನ್ನು ಕಾಪಾಡಿಕೊಳ್ಳಲು, ಪ್ರಕಾಶಕರು ಆ ಹಕ್ಕುಗಳನ್ನು ವಿಧಿಬದ್ಧ ರೀತಿಯಲ್ಲಿ ಕೊಳ್ಳಲು ಇದರಿಂದ ಅವಕಾಶವಾಯಿತು. ಹೀಗೆ ಮೊದಲು ಚರ್ಚುಗಳು ಇಟ್ಟುಕೊಂಡಿದ್ದ ಪ್ರಕಟಣೋದ್ಯಮದ ಸ್ವಾಮ್ಯ ಕ್ರಮೇಣ ವಿಶ್ವವಿದ್ಯಾಲಯಗಳ ವಶಕ್ಕೆ, ಅನಂತರ ಅಲ್ಲಿಂದ ಖಾಸಗಿ ಪ್ರಕಾಶಕರ ಗಿಲ್ಡ್ ಮತ್ತು ಕಾರ್ಪೊರೇಷನ್‍ಗಳಿಗೆ ಆಮೇಲೆ ಸ್ಪರ್ಧಾಶೀಲ ಖಾಸಗಿ ಮುದ್ರಕರಿಗೆ ವರ್ಗಾವಣೆಗೊಂಡಿತು. ಅವರಿಂದ ಪುಸ್ತಕ ವ್ಯಾಪಾರಿಗಳ ಕಡೆಗೆ ಉದ್ಯಮದ ಭಾರ ಒಲಿದದ್ದು ಮುಂದಿನ ಬದಲಾವಣೆ. ಈ ಪರಿವರ್ತನೆಗಳು ಸಾಕಷ್ಟು ದೀರ್ಘ ಕಾಲದ ಹರಹಿನಲ್ಲಿ ನಡೆದಂಥವು. 1580ರ ವೇಳೆಗೆ ಮುದ್ರಕರು ಪ್ರಕಾಶಕರು ಬಂಡವಾಳಕ್ಕಾಗಿ ಪುಸ್ತಕ ವ್ಯಾಪಾರಿಗಳನ್ನು ಮುಂಗಡ ಕೇಳುತ್ತಿದ್ದುದು ತಿಳಿದುಬರುತ್ತದೆ. 18ನೆಯ ಶತಮಾನದ ವೇಳೆಗೆ ಪುಸ್ತಕ ವ್ಯಾಪಾರಿ ಪ್ರಕಾಶನೋದ್ಯಮದ ಕೇಂದ್ರ ವ್ಯಕ್ತಿಯಾಗಿದ್ದ. ಈ ವೇಳೆಗೆ ಧರ್ಮಗ್ರಂಥಗಳು, ವ್ಯಾಖ್ಯಾನಗಳು, ಪಠ್ಯಪುಸ್ತಕಗಳು ಇವಕ್ಕಿಂತ ಹೊಸ ಬಗೆಯ ಜನಪ್ರಿಯ ಪುಸ್ತಕಗಳ ವ್ಯಾಪಾರ ಹೇರಳವಾಗಿ ಆಗುತ್ತಿತ್ತು. ಸಂಚಾಲನ ಗ್ರಂಥಾಲಯಗಳು (ಸಕ್ರ್ಯುಲೇಟಿಂಗ್ ಲೈಬ್ರೆರಿ) ಸ್ಥಾಪಿತವಾಗಿದ್ದುವು. ಹೊಸ ಹೊಸ ಬರಹಗಾರರು ಉದಯಿಸುತ್ತಿದ್ದರು. ವಾಸ್ತವವಾಗಿ ಕಾದಂಬರಿ ಹಾಗೂ ಇತರ ಕಥಾ ಸಾಹಿತ್ಯ ಪ್ರಕಟಣೆಗೆ ಪ್ರಾಧಾನ್ಯ ಬಂದದ್ದು ಆಗಲೇ.
ಕ್ರಮೇಣ ಪ್ರಕಾಶನೋದ್ಯಮದ ಮೂರು ಮುಖಗಳಾದ ಮುದ್ರಕ, ಪ್ರಕಾಶಕ, ಪುಸ್ತಕ ವ್ಯಾಪಾರಿ ಬೇರೆ ಬೇರೆಯಾದರು. ಅವರ ಕರ್ತವ್ಯಗಳು ಖಚಿತವಾಗಿ ರೂಪುಗೊಂಡುವು. ಮೊದಲ ಇಬ್ಬರು ಪುಸ್ತಕವನ್ನು ತಯಾರಿಸಿದರೆ, ಮೂರನೆಯವನು ಅದನ್ನು ಪ್ರಸಾರ ಮಾಡುತ್ತಿದ್ದ. ಕಥಾ ಸಾಹಿತ್ಯ, ಜೀವನ ಚರಿತ್ರೆ, ಇತಿಹಾಸ, ಸ್ಮøತಿಗಳು, ಮನಶ್ಯಾಸ್ತ್ರ ಇತ್ಯಾದಿ ವಿಷಯಗಳ ಬಗೆಗೆ ಹೇರಳವಾಗಿ ಪುಸ್ತಕಗಳು ಪ್ರಕಟವಾಗುತ್ತಿದ್ದವು. ನಿಧಾನವಾಗಿ ಇದು ವಿಶಿಷ್ಟ ಪರಿಣತಿಯ ಕಡೆಗೆ ದಾರಿ ಮಾಡಿತು. 1963ರಲ್ಲಿ ಅಮೆರಿಕದಲ್ಲಿ 19,000 ಮತ್ತು ಇಂಗ್ಲೆಂಡಿನಲ್ಲಿ 20,000 ಹೊಸ ಶೀರ್ಷಿಕೆಗಳು ಪ್ರಕಟವಾದವು. ಅತೀವ ವೇಗದಲ್ಲಿ ಉದ್ಯಮ ಬೆಳೆಯಿತು. ಪುಸ್ತಕಗಳಿಗೆ ಹೊಸದೊಂದು ಸಾಮಾನ್ಯ ಓದುಗರ ಮಾರುಕಟ್ಟೆ ಸೃಷ್ಟಿಯಾಯಿತು. 1950 ರಿಂದ ಕಾಗದ ರಟ್ಟಿನ ಪುಸ್ತಕಗಳು ಬರತೊಡಗಿದವು. ಪ್ರತಿ ಶೀರ್ಷಿಕೆಯೂ 5,000 ದಿಂದ 20,000 ಪ್ರತಿಗಳವರೆಗೆ ಮುದ್ರಿತವಾಗಿ ಪ್ರಸಾರವಾಗತೊಡಗಿತು. ಉದ್ಯಮಕ್ಕೆ ಇದು ಒಂದು ಮಹತ್ತ್ವದ ಚಾಲನೆ. ಪೆಂಗ್ವಿನ್, ಪೆಲಿಕನ್ ಮೊದಲಾದ ಹೆಸರುಗಳು ಈಗ ಸುವಿಖ್ಯಾತ. ಅವುಗಳ ಸಾಧನೆ ಮಹತ್ತ್ವಪೂರ್ಣ. ಹಿಂದಿನ ಮಹಾಕೃತಿಗಳೆಲ್ಲ ಕಾಗದ ರಟ್ಟಿನ ಪುಸ್ತಕದ ಹೊಸರೂಪದಲ್ಲಿ ಮುದ್ರಣಗೊಂಡು ಸುಲಭ ಬೆಲೆಯ ಆವೃತ್ತಿಗಳಾಗಿ ಪ್ರಕಟವಾದವು. ಜನಸಾಮಾನ್ಯರ ಕೈಸೇರಿದವು.
ಭಾರತದಲ್ಲಿ ಹಸ್ತಪ್ರತಿಗಳ ಸಂರಕ್ಷಣೆ, ಪ್ರತಿ ಮಾಡುವುದು ಮತ್ತು ಈ ಮೂಲಕ ಗ್ರಂಥ ಪ್ರಸಾರ ಮಾಡುವುದು ಹಿಂದಿನಿಂದಲೂ ಅವ್ಯಾಹತವಾಗಿ ನಡೆದುಬಂದಿದೆ. 5,000 ವರ್ಷ ಹಿಂದಿನ ಮೊಹೆಂಜೋದಾರೋದ ಮುದ್ರಿಕೆಗಳು ಇವನ್ನು ಸೂಚಿಸುತ್ತವೆ. ಗ್ರಂಥದಾನದ ಕಲ್ಪನೆ ಮಹತ್ತ್ವದ್ದು. ಆದರೆ ಮುದ್ರಣ ತಂತ್ರ ಭಾರತದಲ್ಲಿ ಬೆಳೆದದ್ದು ತುಂಬ ತಡವಾಗಿ. ಎಂದೇ ಆಧುನಿಕ ಅರ್ಥದಲ್ಲಿ ಪ್ರಕಾಶನೋದ್ಯಮ ಕೂಡ ಬೆಳೆದದ್ದು ತಡವಾಗಿಯೇ. 1556ರ ಸೆಪ್ಟಂಬರ್ 6 ನೆಯ ತಾರೀಕು ಮುದ್ರಣ ಕಲೆ ಭಾರತಕ್ಕೆ ಕಾಲಿಟ್ಟಿತು. ಅದೊಂದು ಹಿತಕರ ಆಕಸ್ಮಿಕ ಘಟನೆ. ಮುದ್ರಣ ಯಂತ್ರ ಯೂರೋಪಿನಿಂದ ಹೊರಕ್ಕೆ ಬಂದಂದಕ್ಕೆ ಕ್ರೈಸ್ತ ಮಿಷನರಿಗಳು ಮಾಡುತ್ತಿದ್ದ ಮತಾಂತರ ಹಾಗೂ ಧರ್ಮಪ್ರಸಾರ ಕಾರ್ಯ ಮುಖ್ಯಕಾರಣ. ಹೆಚ್ಚು ಹೆಚ್ಚು ಜನರನ್ನು ಕ್ರೈಸ್ತ ಧರ್ಮಕ್ಕೆ ಪರಿವರ್ತಿಸಿ ಧರ್ಮವನ್ನು ಹರಡಲು ಈ ಸಾಧನವನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಯಿತು. ಜೆಸ್ಯುಯಿಟ್ ಸೊಸೈಟಿ, ಲಂಡನ್ ಮಿಷನ್, ವೆಸ್ಲಿಯನ್ ಮೆಥಾಡಿಸ್ಟ್ ಮಿಷನ್ ಹಾಗೂ ಜರ್ಮನ್ ಬಾಸೆಲ್ ಮಿಷನ್ ಇವುಗಳಿಗೆ ಸೇರಿದ ಮಾಧ್ಯಮಗಳು, ಭಾರತದ ಬೇರೆ ಬೇರೆ ಭಾಗಗಳಲ್ಲಿ ತಮ್ಮ ಧರ್ಮ ಪ್ರಸಾರಕಾರ್ಯದಲ್ಲಿ ತೊಡಗಿದ್ದರು. 1556ರಲ್ಲಿ ಅಬಿಸೀನಿಯದಲ್ಲಿ ನಡೆಯುತ್ತಿದ್ದ ಈ ಧರ್ಮಪ್ರಸಾರ ಕಾರ್ಯಕ್ಕೆ ನೆರವಾಗಲೆಂದು ಪೋರ್ಚುಗಲ್ ಒಂದು ಮುದ್ರಣ ಯಂತ್ರವನ್ನು ಅದಕ್ಕೆ ಸಂಬಂಧಿಸಿದ ಇತರ ಸಲಕರಣೆಗಳೊಂದಿಗೆ ಕಳುಹಿಸಿತು. ಇಂತಾಬ್ ದ ಬುಸ್ತೆಮಾಂಟ್ ಎಂಬ ಮುದ್ರಕ ಈ ತಂಡದಲ್ಲಿದ್ದ. ಆಗಿನ್ನೂ ಸೂಯೆಜ್ ಕಾಲುವೆ ತೆರೆದಿರಲಿಲ್ಲವಾಗಿ ಪೋರ್ಚುಗಲ್ಲಿನಿಂದ ಅಬಿಸೀನಿಯಕ್ಕೆ ಹೋಗಬೇಕಾದರೆ ಕೇಪ್ ಭೂಶಿರವನ್ನು ಬಳಸಿಕೊಂಡು ಭಾರತದ ಗೋವೆಯನ್ನು ಮುಟ್ಟಿ ಮುಂದಕ್ಕೆ ಹೋಗಬೇಕಾಗಿತ್ತು. ಈ ದಾರಿಯಾಗಿ ಬಂದ ತಂಡ ಗೋವೆಯ ಗವರ್ನರನ ಅಪೇಕ್ಷೆಯಂತೆ ಸ್ವಲ್ಪ ಕಾಲ ಅಲ್ಲೇ ತಂಗಿತು. ಮುಂದಕ್ಕೆ ಹೊರಡಬೇಕೆನ್ನುವಷ್ಟರಲ್ಲಿ ತಂಡದ ನಾಯಕ ತೀರಿಕೊಂಡ. ಮುದ್ರಣ ಯಂತ್ರ ಅಲ್ಲೇ ಉಳಿಯಿತು. ಮುದ್ರಣ ಮತ್ತು ಪ್ರಕಾಶನೋದ್ಯಮ ಭಾರತದಲ್ಲಿ ಬೇರು ಬಿಡಲುತೊಡಗಿದ್ದು ಹೀಗೆ.
ಗೋವೆಯಲ್ಲಿ ಈ ಯಂತ್ರದಿಂದ ಅಚ್ಚಾದ ಮೊದಲನೆಯ ಪುಸ್ತಕ ಸೆಂಟ್ ಜೇವಿಯರನ ಡಾಟ್ರಿನೌ ಕ್ರಿಸ್ತ (1557), ಭಾರತದಲ್ಲಿ ಮುದ್ರಣ ಉದ್ಯಮವನ್ನು ಹುಟ್ಟು ಹಾಕಿದ ಕೀರ್ತಿ ಬುಸ್ತೆಮಾಂಟನಿಗೆ ಸಲ್ಲುತ್ತದೆ. ಅವನ ಜೊತೆಯಲ್ಲೇ ಬಂದಿದ್ದ ಜೋ ಆವೋ ಗೋನ್ಸೌಲ್ವೇಸ್ ಭಾರತೀಯ ಲಿಪಿಗಳಿಗೆ ಮೊಳೆಗಳನ್ನು ತಯಾರಿಸಲು ಪ್ರಯತ್ನಿಸಿದ ಮೊದಲಿಗ. ಅವನೊಬ್ಬ ಕುಶಲ ಕಮ್ಮಾರ. ಅವನು ಮಲಬಾರ್ ಅಕ್ಷರಗಳನ್ನು (ತಮಿಳನ್ನು ಹೋಲುವಂಥವು) ತಯಾರಿಸಿದ. ಡಾಟ್ರಿನಾ ಕ್ರಿಸ್ತ ಅಚ್ಚಾದ್ದು ಈ ಅಕ್ಷರಗಳಲ್ಲೇ. ಅದಕ್ಕೂ ಮೊದಲೇ ಗೋನ್ಸಾಲ್ವೇಸ್ ಕನ್ನಡದ (ಕೆನರೀಸ್) ಮೊಳೆಗಳಣ್ನು ತಯಾರಿಸಲು ಪ್ರಯತ್ನಿಸಿದನೆಂದೂ ಲಿಪಿಯ ಕ್ಲಿಷ್ಟತೆಯಿಂದಾಗಿ ಆ ಪ್ರಯತ್ನವನ್ನು ಬಿಟ್ಟು ತಮಿಳು ಅಕ್ಷರಗಳನ್ನು ತಯಾರಿಸಿದನೆಂದೂ ಫಾದರ್ ಜೇ. ಸಿ. ರೋಡೆಲೀಸ್ ಬರೆಯುತ್ತಾರೆ. ಸುಮಾರು 50 ಕೆನರೀಸ್ ಮೊಳೆಗಳನ್ನು ತಯಾರಿಸಲಾಗಿತ್ತೆಂದು ತಿಳಿದುಬರುತ್ತದೆ.
ಧರ್ಮಪ್ರಸಾರದಲ್ಲಿ ಮುದ್ರಣ ಮತ್ತು ಪ್ರಕಾಶನ ವ್ಯವಸ್ಥೆಯ ಪಾತ್ರ ಎಷ್ಟು ಮಹತ್ತ್ವದ್ದು ಎಂಬುದನ್ನು ಮಿಷನರಿಗಳು ಅರಿತಿದ್ದರು. ಅವರು ಸ್ಥಳೀಯ ಭಾಷೆಗಳನ್ನು ಕಲಿತರು. ಅವುಗಳಿಗೆ ವ್ಯಾಕರಣ, ನಿಘಂಟು ಮೊದಲಾದ ಅಧ್ಯಯನ ಸಾಮಗ್ರಿ ರಚಿಸಿದರು. ಆ ಭಾಷೆಗಳಲ್ಲಿ ಧರ್ಮಪ್ರಸಾರ ಮಾಡಿದರು.
ಕನ್ನಡದಲ್ಲಿ : ಮದರಾಸಿನ ಪೋರ್ಟ್ ಸೆಂಟ್ ಜಾರ್ಜ್‍ನಲ್ಲಿ ಒಂದು ಮುದ್ರಣಾಲಯ ಸ್ಥಾಪನೆಗೊಂಡು ತೆಲುಗು, ತಮಿಳು, ಕನ್ನಡ ಪುಸ್ತಕಗಳ ಮುದ್ರಣ ಕಾರ್ಯ ಪ್ರಾರಂಭವಾಯಿತು. 19ನೆಯ ಶತಮಾನದ ಆದಿಯಲ್ಲಿ ಕಲ್ಕತ್ತಾದ ಬಳಿಯ ಸೆರಾಂಪುರ್ ಎಂಬಲ್ಲಿ ವಿಲಿಯಮ್ ಕೇರಿ ಎಂಬ ಮಿಷನರಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿ ಭಾರತದ ಹಾಗೂ ಹೊರಗಿನ ನೂರಾರು ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸತೊಡಗಿದ. 1817ರಲ್ಲಿ ಕೇರಿ ಕನ್ನಡದ ಒಂದು ವ್ಯಾಕರಣ ಕೃತಿಯನ್ನು ಪ್ರಕಟಿಸಿದ. ಇದೇ ಕನ್ನಡದ ಮೊದಲನೆಯ ಮುದ್ರಿತ ಪುಸ್ತಕ. ಎ ಗ್ರಾಮರ್ ಆಫ್ ದಿ ಕರ್ನಾಟ ಲ್ಯಾಂಗ್ವೇಜ್ ಎಂದು ಇದನ್ನು ಕರೆಯಲಾಗಿದೆ. ಬಿಡಿ ಮೊಳೆಗಳಿಂದ ಅಚ್ಚಾದ ಮೊದಲ ಕನ್ನಡ ಪುಸ್ತಕ ಇದು. ಆಮೇಲೆ 1824ರಲ್ಲಿ ಮದರಾಸಿನಲ್ಲಿ ರೀವ್ ಸಂಪಾದಿಸಿದ ಇಂಗ್ಲಿಷ್ ಕನ್ನಡ ನಿಘಂಟು ಪ್ರಕಟವಾಯಿತು. ಅವನು ಲಂಡನ್ ಮಿಷನರಿ ಸೊಸೈಟಿಗೆ ಸೇರಿದ್ದವನು. 1820ರಲ್ಲಿ ಜಾನ್ ಮೆಕೆರಲ್‍ನ ಎ ಗ್ರಾಮರ್ ಆಫ್ ದಿ ಕರ್ನಾಟಿಕ್ ಲ್ಯಾಂಗ್ವೇಜ್ ಎಂಬ ಇನ್ನೊಂದು ವ್ಯಾಕರಣ ಹೊರಬಂತು. ಕನ್ನಡದ ಮುದ್ರಣ ಕಾರ್ಯ ಹೀಗೆ ಕಲ್ಕತ್ತಾ ಮದರಾಸುಗಳಲ್ಲಿ ಪ್ರಾರಂಭವಾಯಿತಾದರೂ ವಿವಿಧ ವಿನ್ಯಾಸಗಳಿಂದ ಬೇರೆ ಬೇರೆ ಅಕ್ಷರ ರೂಪಗಳು ಸಿದ್ಧವಾಗಿ ಪ್ರಚಾರವಾದ್ದು ಬಳ್ಳಾರಿ, ಮಂಗಳೂರು, ಬೆಂಗಳೂರು ಮುಂತಾದ ಸ್ಥಳಗಳಲ್ಲಿದ್ದ ಮಿಷನರಿಗಳ ಮತ್ತು ಪ್ರಕಾಶನೋದ್ಯಮಿಗಳ ಸಾಹಸದ ಫಲವಾಗಿ. ಕನ್ನಡದ ಮೊಳೆಗಳಿಗೆ ಇಂದಿನ ಸುಂದರವಾದ ರೂಪವನ್ನು ಕೊಟ್ಟವನು ಮಂಗಳೂರಿನ ಒಬ್ಬ ಅಕ್ಕಸಾಲಿಗ. ಅನಂತಚಾರಿ ಎಂದು ಹೇಳುತ್ತಾರೆ. 1863ರ ವೇಳೆಗೆ ಮರದ ಮುದ್ರಣ ಯಂತ್ರಗಳ ಸ್ಥಾನದಲ್ಲಿ ಕಬ್ಬಿಣದ ಯಂತ್ರಗಳು ಬಂದುವು. ಕೈಗಳಿಂದಲೇ ಮಾತೃಕೆಗಳನ್ನು ಕೊರೆಯುವ ಕಷ್ಟಕರವಾದ ಕಲೆಯಲ್ಲಿ ಮದರಾಸಿನ ಅಕ್ಕಸಾಲಿಗಳು ಬಹಳ ಪ್ರಖ್ಯಾತರಾಗಿದ್ದರು. ಎಂದೇ ಅಲ್ಲಿ ಅಚ್ಚಾಗಿರುವ ಕನ್ನಡ ಪುಸ್ತಕಗಳಲ್ಲಿ ಕೊನೆಯ ಪಕ್ಷ ಮೂರು ಬಗೆಯ ಅಕ್ಷರ ನಮೂನೆಗಳು, ವಿವಿಧ ವಿನ್ಯಾಸಗಳಲ್ಲಿ ಮುದ್ರಣವಾಗಿರುವುದು ಕಂಡುಬರುತ್ತದೆ.
ಮಿಷನರಿಗಳ ಜೊತೆಗೆ ಇತರರೂ ಪ್ರಕಾಶನೋದ್ಯಮದ ಮಹತ್ತ್ವವನ್ನು ಕಂಡುಕೊಂಡರು. ಖಾಸಗಿ ಮುದ್ರಣಾಲಯಗಳು ಪ್ರಾರಂಭವಾಗಿ ಪುಸ್ತಕಗಳು ಪ್ರಕಟವಾಗತೊಡಗಿದವು. ಖಗೋಳಶಾಸ್ತ್ರ, ಭೂಗೋಳ, ಧರ್ಮ, ತತ್ತ್ವಪದಗಳು, ಲಾವಣಿಗಳು, ಪ್ರದೇಶ ಪರಿಚಯ, ಗಣಿತ ಮೊದಲಾದ ವಿವಿಧ ವಿಷಯಗಳ ಬಗ್ಗೆ ಪುಟ್ಟಪುಟ್ಟ ಪುಸ್ತಕಗಳನ್ನು ಮುದ್ರಿಸಿ ಪ್ರಕಟಿಸುತ್ತಿದ್ದರು. ಬಿಡಿಮೊಳೆಗಳು ಚಾಲ್ತಿಗೆ ಬಂದಿದ್ದಾಗಲೇ ಕಲ್ಲಚ್ಚು ಮುದ್ರಣವೂ ರೂಢಿಯಲ್ಲಿತ್ತು. ಮುದ್ರಣಕ್ಕೆ ಅಗತ್ಯವಾದ ಮಸಿ ಇಲ್ಲೇ ತಯಾರಾಗುತ್ತಿತ್ತು. ಮೊದಲು ಲಿಥೋ ಕಲ್ಲನ್ನು ಆಮದು ಮಾಡಿಕೊಳ್ಳುತ್ತಿದ್ದರು. ಕ್ರಮೇಣ ಕರ್ನೂಲಿನ ಕಲ್ಲುಗಳು ಈ ಕೆಲಸಕ್ಕೆ ಬಹು ಉಪಯುಕ್ತವೆನಿಸಿದವು. ಕಲ್ಲಚ್ಚಿನ ಮುದ್ರಣ ವೆಚ್ಚ ಕಡಿಮೆಯಾಗಿರುತ್ತಿತ್ತು. ಇದು ಜನಪ್ರಿಯವಾಯಿತು. ಕಾಗದದ ಕಾರ್ಖಾನೆಗಳು ಸ್ಥಾಪಿತವಾದವು. ಮುಂಬಯಿಯಲ್ಲಿ ನಿರ್ಣಯಸಾಗರ ಪ್ರೆಸ್ ಪ್ರಾರಂಭವಾಯಿತು. 1813ರಲ್ಲಿ ಗಣಪತ್ ಕೃಷ್ಣಾಜಿ ಸ್ವಂತದ ಒಂದು ಮುದ್ರಣಾಲಯ ಕಟ್ಟಿದ. 1831ರಲ್ಲಿ ಮರಾಠಿ ಪಂಚಾಂಗವನ್ನು ಮುದ್ರಿಸಿ ಪ್ರಕಟಿಸಿದ.
ಪ್ರಕಾಶನೋದ್ಯಮಕ್ಕೆ ಸರ್ಕಾರದ ವಿರೋಧ ಎದುರಾದ್ದು ಆಗಿನ ಪರಿಸ್ಥಿತಿಯಲ್ಲಿ ಸಹಜ. ದೇಶ ಭಾಷೆಗಳನ್ನು ಅರಿಯದ ಬ್ರಿಟಿಷರು ಇಲ್ಲಿ ಪ್ರಕಟವಾಗುವ ವಾಙ್ಮಯವನ್ನು ಕುರಿತು ಸಂಶಯ ದೃಷ್ಟಿ ತಳೆದುದರಿಂದಾಗಿ ಪ್ರಾಂತ ಸರ್ಕಾರಗಳಲ್ಲಿ ಟ್ರಾನ್ಸ್‍ಲೇಟರ್ ಹುದ್ದೆಗಳು ಸೃಷ್ಟಿಯಾದುವು. 1867ರ ರಿಜಿಸ್ಟ್ರೇಷನ್ ಅಧಿನಿಯಮ ಜಾರಿಗೆ ಬಂತು. ಭಾರತದಲ್ಲಿ ಪ್ರಕಟವಾಗುವ ಎಲ್ಲ ಪುಸ್ತಕಗಳನ್ನು ಈ ಅಧಿನಿಯಮದನ್ವಯ ಕಾಫಿರೈಟ್ ಗ್ರಂಥಾಲಯಗಳಿಗೆ ಕಳಿಸಿಕೊಡಲೇಬೇಕೆಂದು ಕಾನೂನು ಹೇಳಿತು. ಹಾಗೆ ಬಂದ ಪುಸ್ತಕಗಳ ಪಟ್ಟಿ ಮಾಡಿ ಮೇಲಧಿಕಾರಿಗಳಿಗೆ ಕಳುಹಿಸಲಾಗುತ್ತಿತ್ತು.
ಬಳ್ಳಾರಿ ಜೇಮ್ಸ್ ಹಾಂಡ್ಸ್ 1816ರಲ್ಲಿ ಒಂದು ಮುದ್ರಣ ಯಂತ್ರವನ್ನು ಮದರಾಸಿನಲ್ಲಿ ಸ್ಥಾಪಿಸಿ (ಕಮರ್ಷಿಯಲ್ ಪ್ರೆಸ್) ಹೊಸ ಒಡಂಬಡಿಕೆಯ ಪೂರ್ವಾರ್ಧವನ್ನು ಪ್ರಕಟಿಸಿದ. ಸಂಪೂರ್ಣವಾಗಿ ಕನ್ನಡ ಭಾಷೆ ಹಾಗೂ ಲಿಪಿಯಲ್ಲಿರುವ ಮೊದಲ ಪುಸ್ತಕ (1870) ಇದೇ. ಕನ್ನಡದ ಪುಸ್ತಕಗಳು ಕರ್ನಾಟಕದಲ್ಲೇ ಪ್ರಕಟವಾಗತೊಡಗಿದ್ದು, 1826ರಲ್ಲಿ ಬಳ್ಳಾರಿಗೆ ಅಚ್ಚುಕೂಟ ಬಂದನಂತರ, ಅದುವರೆಗಿನವೆಲ್ಲ ಮದರಾಸು ಕಲ್ಕತ್ತಾಗಳಲ್ಲಿ ಅಚ್ಚಾದವು. ಬಳ್ಳಾರಿಯ ಮಿಷನ್ 1840ರ ತನಕ ಪುಸ್ತಕಗಳನ್ನು ಪ್ರಕಟಿಸಿತು. ಬೆಂಗಳೂರು, ಮೈಸೂರುಗಳಲ್ಲಿ 19ನೆಯ ಶತಕದ ಕೊನೆಯ ದಶಕದಲ್ಲಿ ಮುದ್ರಣಾಲಯಗಳು ಸ್ಥಾಪಿತವಾದವು. ವೆಸ್ಲಿಯನ್ ಮಿಷನ್ ಈ ನಿಟ್ಟಿನಲ್ಲಿ ಬಹಳ ಕೆಲಸ ಮಾಡಿತು. ಮಂಗಳೂರು ಬಾಸೆಲ್ ಮಿಷನ್ ಪ್ರೆಸ್ ದಾಸರ ಪದಗಳು, ಗಾದೆಗಳು ಮತ್ತು ಧಾರ್ಮಿಕ ಕೃತಿಗಳನ್ನು ಪ್ರಕಟಿಸಿತು. ಸುಂದರವಾದ ಅಕ್ಷರ ನಮೂನೆಗಳು ಈ ಪ್ರೆಸ್ಸಿನ ವೈಶಿಷ್ಟ್ಯವಾಗಿದ್ದವು.
ಮೊದಲ ಪುಸ್ತಕಗಳು ಕ್ರಮಿಕ ಪುಸ್ತಕಗಳು, ಬೈಬಲ್‍ಗಳು. ಖಾಸಗಿ ಪ್ರಕಾಶನದ ಮೊದಲ ಕತೆ ಸ್ವಾರಸ್ಯವಾದದ್ದು. ಬಳ್ಳಾರಿಯ ಶಿವಲಿಂಗಂ ಶೆಟ್ಟ್ರು, ಕೋನೇರಿಶೆಟ್ಟ್ರು ಕನ್ನಡ ಪುಸ್ತಕ ಪ್ರಕಾಶನ ಮತ್ತು ಮಾರಾಟದಲ್ಲಿ ತುಂಬ ಹೆಸರಾದವರು. ಮದರಾಸಿನಲ್ಲಿ ಅಚ್ಚು ಮಾಡಿಸಿ ಬಳ್ಳಾರಿಯಲ್ಲಿ ಪ್ರಸಿದ್ಧಿ ಪಡಿಸಿ ಪ್ರಾಂತಾದ್ಯಂತ ಪ್ರಸಾರ ಮಾಡುತ್ತಿದ್ದ ಇವರು ಪುಸ್ತಕೋದ್ಯಮಕ್ಕೆ ಸಲ್ಲಿಸಿದ ಸೇವೆ ಮಹತ್ತ್ವದ್ದು. ನಗರದವರನ್ನು ನಗಿಸುವ ಕಲೆ, ಹಿತೋಪದೇಶ, ಸ್ತೋತ್ರಗಳು, ಕತೆಗಳು ಮುಂತಾದವನ್ನು ಇವರು ಪ್ರಕಟಿಸಿದರು. ಸಂಚಾರ ಸಾರಿಗೆ ಕಷ್ಟಕರವಾಗಿದ್ದು, ಆ ಕಾಲದಲ್ಲಿ ಇವರು ಗಾಡಿಗಳಲ್ಲಿ ಪುಸ್ತಕಗಳನ್ನು ತುಂಬಿಕೊಂಡು ಸಂತೆಗಳಿಗೆ ಹೋಗಿ ಮಾರಿದರು. ಬೆಳಗಾಂವಿ ರಾಮತತ್ತ್ವ ಪ್ರಕಾಶ ಪ್ರಕಾಶನಾಲಯದ ರಾಮಚಂದ್ರ ಸಾವಂತ ಆವರು ಮರಾಠಿ, ಸಂಸ್ಕøತ, ಕನ್ನಡಗಳಲ್ಲಿ ಪ್ರಕಟಿಸುತ್ತಿದ್ದರು. ಈ ಸಂಸ್ಥೆ ಈಗಲೂ ಇದೆ. ಈ ಸಂಸ್ಥೆಯ ಉಪಯೋಗಕ್ಕೆಂದೇ ಆಗ ಒಂದು ಅಂಚೆ ಕಚೇರಿಯನ್ನು ತೆರೆಯಲಾಯಿತು ಎಂಬುದರಿಂದ ಇದರ ವಹಿವಾಟು ಎಷ್ಟಿತ್ತೆಂಬುದನ್ನು ತಿಳಿದುಕೊಳ್ಳಬಹುದು. ಗದಿಗೆಯ್ಯ, ಹುಚ್ಚಯ್ಯ ಹೊನ್ನಾಪುರ ಮಠ ಅವರು ಚಂದ್ರೋದಯ ಪ್ರೆಸ್ ಸ್ಥಾಪಿಸಿ ಮೊದಲು ಕಲ್ಲಚ್ಚಿನಲ್ಲೂ ಆಮೇಲೆ ಬಿಳಿ ಮೊಳೆಗಳಲ್ಲೂ ಮುದ್ರಣ ಕಾರ್ಯ ನಡೆಸಿದರು. ಚಂದ್ರೋದಯ ಎಂಬ ಪತ್ರಿಕೆ ನಡೆಸಿದರು. ಇವರು ಮುಖ್ಯವಾಗಿ ಕಾನೂನು ಪುಸ್ತಕಗಳನ್ನು ಪ್ರಕಟಿಸಿದರು. ಧಾರವಾಡದ ಕರ್ನಾಟಕ ಪ್ರಿಂಟಿಂಗ್ ಪ್ರೆಸ್‍ನಲ್ಲಿ ಮೊಳೆಗಳನ್ನು ಎರಕ ಒಯ್ಯುವ ಒಂದು ಪೌಂಡ್ರಿ ಇತ್ತು. ಈ ಮುದ್ರಣಾಲಯದಿಂದ ಅನೇಕ ಪಠ್ಯಪುಸ್ತಕಗಳು ಹೊರಬಂದುವು. ಧಾರವಾಡದ ಕರ್ನಾಟಕ ಬುಕ್ ಡಿಪೋ, ಬೆಂಗಳೂರಿನ ಟಿ.ಎನ್. ಕೃಷ್ಣಯ್ಯಶೆಟ್ಟಿಯವರ ಕಳಾನಿಧಿ ಬುಕ್ ಡಿಪೋ ಇವು ಮಹತ್ತರವಾದ ಕೆಲಸ ಮಾಡಿದುವು. ಕೃಷ್ಣಯ್ಯಶೆಟ್ಟರು ಚಾಮರಾಜೋಕ್ತಿ ವಿಲಾಸ, ರಾಮಾಯಣ, ವಾಣೀವಿಲಾಸ ಭಾರತ, ಅಮರಕೋಶ, ಲಕ್ಷ್ಮೀಶನ ಜೈಮಿನಿ ಭಾರತ, ಕುಮಾರವ್ಯಾಸ ಭಾರತ, ಇತರ ಪ್ರಾಚೀನ ಕೃತಿಗಳು. ಇತ್ಯಾದಿ ಹಲವಾರು ಉದ್ಗ್ರಂಥಗಳನ್ನು ಪ್ರಕಟಿಸಿದರು. ಹಾಗೆಯೇ ಬೆಂಗಳೂರಿನಲ್ಲಿ ಕಾರ್ಯತತ್ಪರರಾಗಿದ್ದ ವೆಲನಾಡು ಬಿ. ಸುಬ್ಬಯ್ಯ, ವಾಜಪೇಯ ಕೃಷ್ಣಯ್ಯ ಮತ್ತು ಗೋವಿಂದಯ್ಯ ಇವರನ್ನು, ಹಾಗೆಯೇ ಮಂಗಳೂರಿನ ಬಾಲ ಸಾಹಿತ್ಯ ಮಂಡಲವನ್ನು ಉಲ್ಲೇಖಿಸಬಹುದು. ಈ ಪ್ರಯತ್ನಗಳು ಕನ್ನಡ ಪ್ರಕಾಶನೋದ್ಯಮದ ಎರಡನೆಯ ಹಂತವನ್ನು ಪ್ರತಿನಿಧಿಸುತ್ತವೆ. ಮೊದಲನೆಯ ಹಂತದಲ್ಲಿ ಮಿಷನರಿಗಳು ಕೆಲಸ ಮಾಡಿದರೆ ಎರಡನೆಯ ಹಂತದಲ್ಲಿ ಖಾಸಗಿ ಪ್ರಯತ್ನಗಳು ಮತ್ತು ಸರ್ಕಾರದ ವಿದ್ಯಾ ಇಲಾಖೆಯ ಪ್ರಕಟಣೆಗಳು ಮುಖದಯವಾದವು. ಒಂದು ಕಡೆ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಭಾಷಾಂತರಕಾರರ ನೆರವಿನಿಂದ ಪುಸ್ತಕಗಳನ್ನು ಸಿದ್ಧಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರ ಪ್ರಕಟಿಸುತ್ತಿತ್ತು. ಇನ್ನೊಂದು ಕಡೆ ಜನಸಾಮಾನ್ಯರಿಗೆ ಬೇಕಾದ ನೂರಾರು ಬಗೆಯ ಪುಸ್ತಕಗಳನ್ನು ಖಾಸಗಿ ಪ್ರಕಾಶಕರು ಪ್ರಕಟಿಸುತ್ತಿದ್ದರು. ಮೂರನೆಯ ಹಂತ ಈಚಿನ ಬೆಳವಣಿಗೆ. ವಿವಿಧ ಗ್ರಂಥಮಾಲೆಗಳು (ಮನೋಹರ, ಮಿಂಚಿನ ಬಳ್ಳಿ, ಪ್ರತಿಭಾ ಇತ್ಯಾದಿ). ಪ್ರಕಾಶನೋದ್ಯಮವನ್ನು ಕೈಗೊಂಡವು. ಕಾದಂಬರಿ, ನಾಟಕಗಳು, ಜೀವನ ಚರಿತ್ರೆ, ಬಾಲ ಸಾಹಿತ್ಯ, ಶಾಸ್ತ್ರ ವಿಷಯಗಳು ಹೇರಳವಾಗಿ ಪ್ರಕಟವಾದುವು. ಸತ್ಯ ಶೋಧ ಪ್ರಕಟನಾಲಯ, ಸ್ಟ್ಯಾನ್‍ಡರ್ಡ್, ಬುಕ್ ಡಿಪೋ ಮೊದಲಾದ ಕೆಲವು ಈಗ ಚಟುವಟಿಕೆಯಿಂದಿಲ್ಲವಾದರೂ ಅವುಗಳ ಪ್ರಕಟಣೆಗಳು ಅವರ ಸೇವೆಗೆ ಸಾಕ್ಷಿಯಾಗಿ ಉಳಿದಿವೆ. ನಾಲ್ಕನೆಯ ಹಂತದಲ್ಲಿ ಪ್ರಕಾಶನ ಕೇಂದ್ರಗಳು ಬಹುಮಟ್ಟಿಗೆ ಬೆಂಗಳೂರು, ಮೈಸೂರುಗಳಿಗೆ ವರ್ಗಾವಣೆಗೊಂಡುವು. ಕಾವ್ಯಾಲಯ, ಉಷಾ ಸಾಹಿತ್ಯ ಮಾಲೆ, ಶಾರದಾ ಮಂದಿರ, ಡಿ.ವಿ.ಕೆ. ಮೂರ್ತಿ ವಿದ್ಯಾನಿಧಿ, ಗೀತಾ ಬುಕ್ ಹೌಸ್, ಉದಯರವಿ, ಸಮಾಜ ಪುಸ್ತಕಾಲಯ ಮೊದಲಾದ ಪ್ರಕಾಶನ ಸಂಸ್ಥೆಗಳು ಕಾರ್ಯಶೀಲವಾಗಿವೆ. ಹಲವು ಅಲಂಕಾರ ಶಾಸ್ತ್ರಗ್ರಂಥಗಳನ್ನು, ಪ್ರಾಚೀನ ಕೃತಿಗಳನ್ನು ಶಾರದಾ ಮಂದಿರ ಪ್ರಕಟಿಸಿದೆ. ಜನಪ್ರಿಯ ಕಾದಂಬರಿ, ಕತೆ ಮತ್ತು ಸಾಮಾನ್ಯ ಆರೋಗ್ಯ ಕೃತಿಗಳು ಜೊತೆಗೆ ಹಲವು ಶಾಸ್ತ್ರ ಕೃತಿಗಳನ್ನು ಡಿ.ವಿ.ಕೆ. ಮೂರ್ತಿ ಸಂಸ್ಥೆ ಪ್ರಕಟಿಸಿದೆ. ಇದು ಸಮಕಾಲೀನ ಸಂಗತಿ.
ವಾಹಿನಿ ಪ್ರಕಾಶನ ಒಂದೂವರೆ ರೂಪಾಯಿಗೆ ಒಂದು ಕಾದಂಬರಿ ಕೊಡುವ ಯೋಜನೆಯನ್ನು ಪ್ರಾರಂಭಿಸಿ ಪ್ರಕಾಶನೋದ್ಯಮದಲ್ಲಿ ಹೊಸ ಚಾಲನೆ ಕೊಟ್ಟಿತು. ಸಾಮಾನ್ಯ ಕಾಗದದ ರಟ್ಟಿನ ಸುಮಾರು 250-300 ಪುಟಗಳ ಕೈಹೊತ್ತಗೆಗಳು ಪ್ರಕಟವಾದವು.
ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ತನ್ನದೇ ಆದ ಪ್ರಕಾಶನ ಉದ್ಯಮವನ್ನು ನಿರ್ವಹಿಸುತ್ತಿದೆ. 1937 ರಿಂದಲೂ ಪ್ರಕಾಶನ ಕಾರ್ಯದಲ್ಲಿ ತೊಡಗಿರುವ ಇದು ಪ್ರಚಾರೋಪನ್ಯಾಸ ಪುಸ್ತಕ ಮಾಲೆ, ಗೃಹ ಸರಸ್ವತೀ, ಗ್ರಂಥಮಾಲೆ, ವಿಶೇಷೋಪನ್ಯಾಸ ಮಾಲೆ, ಕನ್ನಡ ಗ್ರಂಥ ಮಾಲೆ ಮೊದಲಾದ ಹಲವು ಮಾಲೆಗಳಲ್ಲಿ 1,000ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಕನ್ನಡ ಅಧ್ಯಯನ ಸಂಸ್ಥೆ ವಿವಿಧ ವಿಷಯಗಳ ಪಠ್ಯಪುಸ್ತಕಗಳನ್ನು ಮಾತ್ರವಲ್ಲದೆ, ಪ್ರಾಚೀನ ಕೃತಿಗಳು, ಜನಪರ ಕೃತಿಗಳು, ಹರಿದಾಸ ಸಾಹಿತ್ಯ, ಸಾಹಿತ್ಯ ಚರಿತ್ರೆ, ಛಂದಸ್ಸಿನ ಚರಿತ್ರೆ ಮುಂತಾದ ಯೋಜನೆಗಳ ಅಡಿಯಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಕನ್ನಡ ವಿಶ್ವಕೋಶ, ಎಪಿಗ್ರಾಫಿಯಾ ಕರ್ನಾಟಕ ಯೋಜನೆಗಳು, ವಿಷಯ ವಿಶ್ವಕೋಶ, ಇತ್ಯಾದಿ ಮಹತ್ತ್ವದ ಕಾರ್ಯಕ್ರಮಗಳು ಜಾರಿಗೆ ಬಂದಿವೆ. ಮುದ್ರಿತ ಕನ್ನಡ ಕೃತಿಗಳ ವಿವರಣಾತ್ಮಕ ಗ್ರಂಥಸೂಚಿ ಯೋಜನೆಯನ್ನು ಪ್ರಸಾರಾಂಗ ನಿರ್ವಹಿಸುತ್ತಿದೆ. ಕನ್ನಡ ಪ್ರಕಾಶನೋದ್ಯಮದ ಆಳ ಅಗಲಗಳನ್ನರಿಯಲು ಈ ಸೂಚಿ ಆಧಾರವಾಗುತ್ತದೆ. ಮೈಸೂರು ವಿಶ್ವವಿದ್ಯಾನಿಲಯದ ಮಾರ್ಗವನ್ನು ಅನುಸರಿಸಿ ಕರ್ನಾಟಕ ಬೆಂಗಳೂರು ಮತ್ತು ಕೃಷಿ ವಿಶ್ವವಿದ್ಯಾಲಯ ಪ್ರಕಟಣೋದ್ಯಮವನ್ನು ಕೈಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ಮಾಲಿಕೆಗಳಲ್ಲಿ ನೂರಾರು ಪುಸ್ತಕಗಳನ್ನು ಹೊರತರುತ್ತಿದೆ. ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್ ಟ್ರಸ್ಟ್ ಮೊದಲಾದ ಸರಕಾರಿ ಸಂಸ್ಥೆಗಳು ದೇಶ ಭಾಷೆಗಳಲ್ಲಿ ಪುಸ್ತಕ ಪ್ರಕಟಣೆಯ ಕಾರ್ಯಕ್ರಮ ಹಾಕಿಕೊಂಡು ಯಶಸ್ವಿಯಾಗಿ ನಿರ್ವಹಿಸುತ್ತಿವೆ.
ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಗ್ರಂಥ ಸೂಚಿಯ ಅಂದಾಜಿನಂತೆ ಇದುವರೆಗೂ ಸುಮಾರು 80,000 ಪುಸ್ತಕಗಳು ಪ್ರಕಟವಾಗಿವೆ. ಈಗ ಪ್ರತಿವರ್ಷ ಸುಮಾರು 1,300 ಪುಸ್ತಕಗಳು ಪ್ರಕಟವಾಗುತ್ತಿವೆ. ಸಂಖ್ಯೆಯ ದೃಷ್ಟಿಯಿಂದ ಕಾದಂಬರಿಗಳು, ಕವಿತೆಗಳು, ಬಾಲಸಾಹಿತ್ಯ ಇವಕ್ಕೆ ಮೊದಲನೆಯ ಸ್ಥಾನ. ಅನುವಾದಗಳು ಹೇರಳವಾಗಿ ಬರುತ್ತಿವೆ. ಪುಸ್ತಕೋದ್ಯಮವನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಎರಡು ನಿಯತಕಾಲಿಕೆಗಳು ಪ್ರಕಟವಾಗುತ್ತಿವೆ. ಗ್ರಂಥಲೋಕ ಪ್ರತಿ ತಿಂಗಳೂ ಕನ್ನಡದ ಪ್ರಕಟಣೆಗಳನ್ನು ಸೂಚೀಕರಿಸಿ, ವಿಮರ್ಶೆ ಮಾಡಿಸಿ, ಪರಿಚಯ ಮಾಡಿಕೊಡುತ್ತದೆ. ಪುಸ್ತಕ ಪುರವಣಿ ಗ್ರಂಥಸೂಚೀ ವಿವರ ಕೊಡುವ ಸಾಹಿತ್ಯಿಕ ಪತ್ರಿಕೆ. ಈಗ ಖಾಸಗಿ ಪ್ರಕಾಶನ ಸಂಸ್ಥೆಗಳು ಹೆಚ್ಚುತ್ತಿವೆ. ಕಾಗದ ಮುಂತಾದ ಸಾಮಗ್ರಿಗಳ ಬೆಲೆ ಹಾಗೂ ಇತರ ವೆಚ್ಚಗಳು ಏರುತ್ತಿದ್ದರೂ ಮೈಸೂರು, ಬೆಂಗಳೂರು, ಧಾರವಾಡ ಮೊದಲಾದ ಕೇಂದ್ರಗಳಿಂದ ಪುಸ್ತಕಗಳು ಹೇರಳವಾಗಿ ಪ್ರಕಟವಾಗುತ್ತಿವೆ. ಆದರೆ ವೈವಿಧ್ಯ, ಸಂಖ್ಯೆ ಹೆಚ್ಚಿದಂತೆ ಮುದ್ರಿತವಾಗುವ ಪ್ರತಿಗಳ ಸಂಖ್ಯೆ ಹೆಚ್ಚಿಲ್ಲ. ಪ್ರಸಾರ ಹೆಚ್ಚಿಲ್ಲ. ವಾಚಕ ಬಳಗ ಹೆಚ್ಚುತ್ತಿಲ್ಲ. ಮಾರುಕಟ್ಟೆ ಸಂಕುಚಿಸುತ್ತಿದೆ. ಇದರಿಂದಾಗಿ ಈಗ ಉದ್ಯಮ ಕಷ್ಟ ಸ್ಥಿತಿಯಲ್ಲಿದೆ. ಕನ್ನಡದಲ್ಲಿ ಪ್ರಕಾಶನವನ್ನು ಒಂದು ಕಲಾಕ್ರಿಯೆಯನ್ನಾಗಿ ನಿರ್ವಹಿಸುವ ಅಪೇಕ್ಷೆಯಿರುವ ಅನೇಕ ತರುಣರು ಈಗ ನಷ್ಟದಲ್ಲೂ ಆಸಕ್ತಿ ಉಳಿಸಿಕೊಂಡು ಮುನ್ನಡೆದಿದ್ದಾರೆ. ಅವರಿಂದಾಗಿ ಪ್ರಕಟಣೋದ್ಯಮ ಜೀವ ಉಳಿಸಿಕೊಂಡಿದೆ. (ಆರ್.ಎಲ್.ಎ.)