ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಕೃತಿ ನಿಯಮ

ವಿಕಿಸೋರ್ಸ್ದಿಂದ

ಪ್ರಕೃತಿ ನಿಯಮ - ಯಾವುದು ಸರಿ : ಯಾವುದು ತಪ್ಪು ಎಂದು ನಿಷ್ಕರ್ಷಿಸುವ ದೇಶ ಕಾಲ ಪರಿಮಿತಿಗಳಿಗೊಳಗಾಗದ ಪ್ರಕೃತಿಯಲ್ಲೇ ನಿಹಿತಗೊಂಡ ಶಾಶ್ವತವಾದ ನಿಯಮ. ಭಾರತೀಯ ತಾತ್ತ್ವಿಕ ಪರಂಪರೆಯಲ್ಲಿ ಇದೆನ್ನು ಪ್ರಕೃತಿ ನಿಯಮ (ನ್ಯಾಚುರಲ್ ಲಾ) ಎಂದು ಕರೆಯಲಾಗಿದೆ. ಇದು ಮಾನವ ನಿರ್ಮಿತ ಎಲ್ಲ ನಿಯಮಗಳಿಗಿಂತ ಉನ್ನತವಾದ ನಿಯಮ. ಮಾನವನ ಒಪ್ಪು - ತಪ್ಪು, ಧರ್ಮಾಧರ್ಮಗಳ ಇತ್ಯರ್ಥಕ್ಕೆ ಈ ಸಿದ್ಧಾಂತದಿಂದ ಬಲವಾದ - ಸ್ಫೂರ್ತಿ ಮತ್ತು ಬೆಂಬಲ ಸಿಕ್ಕಿದೆ. ಸಾಕ್ರಟೀಸ್ ಆತೆನ್ಸ್ ನಗರ ನಿಯಮಗಳಿಗಿಂತ ಈ ನಿಯಮದಲ್ಲಿ ಹೆಚ್ಚು ನಂಬಿಕೆ ಇಟ್ಟಿದ್ದ.

ಮಹಾನ್ ತತ್ತ್ವಜ್ಞಾನಿಗಳಾದ ಪ್ಲೇಟೊ ಮತ್ತು ಅರಿಸ್ಟಾಟಲರು ಪ್ರಚಲಿತ ಮತ್ತು ಪ್ರಕೃತಿ ನಿಯಮಗಳ ಅಂತರವನ್ನು ಅರಿತಿದ್ದರೂ, ಅವರ ತತ್ತ್ವಶಾಸ್ತ್ರದಲ್ಲಿ ಈ ಸಿದ್ಧಾಂತಕ್ಕೆ ಅಷ್ಟು ಪ್ರಾಮುಖ್ಯತೆ ದೊರೆತಿಲ್ಲ. ಅವರ ಅನಂತರವೇ ಈ ಸಿದ್ಧಾಂತಕ್ಕೆ ಪಾಶ್ಚಾತ್ಯ ವೈಚಾರಿಕ ಪರಂಪರೆಯಲ್ಲಿ ಪ್ರಾಮುಖ್ಯತೆ ದೊರೆತಿರುವುದು. ರಾಜ್ಯಶಾಸ್ತ್ರ ಹಾಗೂ ನ್ಯಾಯಶಾಸ್ತ್ರಗಳ ಮೇಲೂ ಇದರ ಪ್ರಭಾವ ವ್ಯಾಪಕವಾಗಿದೆ. ಈ ಪರಂಪರೆಯಲ್ಲಿ ಸ್ಟೋಯಿಕ್ ರೋಮನ್ ಕ್ರಿಶ್ಚಿಯನ್ ಆಧುನಿಕ ಎಂಬುದಾಗಿ ಸ್ಥೂಲವಾಗಿ ನಾಲ್ಕು ಹಂತಗಳನ್ನು ಗುರುತಿಸಲಾಗಿದೆ.

ಸ್ಟೋಯಿಕ್ ಪಂಥದವರು ವಿವಿಧ ಸಾಮಾಜಿಕ ಮತ್ತು ರಾಜಕೀಯ ಘಟಕಗಳ ನಿಯಮಗಳ ಭೇದ ಭಾವ ಮತ್ತು ನ್ಯೂನತೆಗಳನ್ನು ಒತ್ತಿ ಹೇಳಿ, ಎಲ್ಲ ಜನರಿಗೂ ಅನ್ವಯಿಸುವ ಪ್ರಕೃತಿ ನಿಯಮ ಮಾನವ ನಿರ್ಮಿತ ಭೇದ ಭಾವಗಳನ್ನರಿಯದೇ ಸಮಾನತೆ ಮತ್ತು ಭ್ರಾತೃತ್ತ್ವವನ್ನು ಕಲಿಸುತ್ತದೆಂದು ಬೋಧಿಸಿದರು. ಈ ತತ್ತ್ವದಲ್ಲಿ ಗಮನಿಸಬೇಕಾದ ಅಂಶವೆಂದರೆ ಸಮಾನತೆ ಮುಂತಾದ ಮಾನವೀಯ ಹಕ್ಕುಗಳು ಪ್ರಕೃತಿ ನಿಯಮಕ್ಕೆ ಅನುಗುಣವಾಗಿರುವುದರಿಂದ ಅವು ಪ್ರಾಕೃತಿಕ ಹಕ್ಕುಗಳು : ಈ ಹಕ್ಕುಗಳನ್ನು ಉಲ್ಲಂಘಿಸಿದರೆ ಅಥವಾ ಕಾಪಾಡದಿದ್ದರೆ ಪ್ರಕೃತಿ ನಿಯಮವನ್ನೇ ಉಲ್ಲಂಘಿಸಿದಂತಾಗುವುದು ಎಂದರು.

ಮುಂದೆ ರೋಮನ್ ವಿಚಾರವಂತರು ಮತ್ತು ನ್ಯಾಯಶಾಸ್ತ್ರ ತಜ್ಞರು ಸ್ಟೋಯಿಕರ ಈ ತತ್ತ್ವವನ್ನು ತಮ್ಮ ನ್ಯಾಯವ್ಯವಸ್ಥೆಯ ಒಂದು ಮುಖ್ಯ ಅಂಗವನ್ನಾಗಿ ಮಾಡಿಕೊಂಡರು. ಅವರು ಪ್ರಕೃತಿ ನಿಯಮ ಮತ್ತು ಪ್ರಚಲಿತ ಶಾಸನಗಳಲ್ಲಿ ಇರುವ ಅಂತರವನ್ನು ವಿಶ್ಲೇಷಿಸಿಶಾಸಕರು ಮತ್ತು ನ್ಯಾಯಾಲಯಗಳು ಸರ್ವಸಾಮಾನ್ಯವಾದ ಪ್ರಕೃತಿ ನಿಯಮದಿಂದ ಮಾರ್ಗದರ್ಶನ ಪಡೆಯಬೇಕೆಂದು ಹೇಳಿದರು. ರೋಮನ್ ಸಾಮ್ರಾಜ್ಯ ಪತನದ ನಂತರ ಕ್ರಿಶ್ಚಿಯನ್ ತತ್ತ್ವಜ್ಞಾನಿಗಳು ಈ ಪರಂಪರೆಯನ್ನು ಮುಂದುವರಿಸಿದರು.

16 ನೆಯ ಶತಮಾನದಿಂದೀಚಿಗೆ ಮಧ್ಯ ಯುಗದ ಧಾರ್ಮಿಕ ನಂಬಿಕೆಗಳು ಕ್ಷೀಣವಾಗಿ ವೈಜ್ಞಾನಿಕ ಮನೋವೃತ್ತಿ ಕ್ರಮೇಣ ಪ್ರಾಧಾನ್ಯ ಪಡೆಯಿತು. ಈ ವೈಜ್ಞಾನಿಕ - ಲೌಕಿಕಮನೋವೃತ್ತಿ ಆಧುನಿಕ ಕಾಲದ ಹೆಗ್ಗುರುತು ಎನ್ನಬಹುದು. ಮುಂದಿನ ತಾತ್ತ್ವಿಕ ಚಿಂತಕರಾದ ಹ್ಯೂಗೋ (1583-1645), ಹಾಬ್ಸ್ (1588-1679), ಲಾಕ್ (1632-1704) ಮುಂತಾದವರು ತಮ್ಮ ಬರಹಗಳಲ್ಲಿ ಈ ಸಿದ್ಧಾಂತಕ್ಕೆ ಮಹತ್ತ್ವದ ಸ್ಥಾನ ದೊರಕಿಸಿಕೊಟ್ಟರು. ಲಾಕ್ ತನ್ನ ವಿಚಾರಧಾರೆಯಲ್ಲಿ ಪ್ರಕೃತಿ ನಿಯಮದಲ್ಲಿ ಕಾಣುವ ವಿವೇಕ ಮತ್ತು ನೀತಿಯ ಹೊಂದಾಣಿಕೆಯನ್ನು ಪ್ರಸ್ತಾಪಿಸಿ, ಎಲ್ಲಾ ಜನರು (ಸ್ವಾಭಾವಿಕವಾಗಿ) ಸಮಾನ ಮತ್ತು ಸ್ವತಂತ್ರರಾಗಿದ್ದು ಯಾರೂ ಇನ್ನೊಬ್ಬರ ಜೀವನ, ಸ್ವಾತಂತ್ರ್ಯ ಮತ್ತು ಆಸ್ತಿಗೆ ಧಕ್ಕೆ ತರಬಾರದೆಂಬುದೇ ಪ್ರಕೃತಿ ನಿಯಮದ ತಿರುಳು. ಇದರಿಂದಲೇ ಪ್ರಾಕೃತಿಕ ಹಕ್ಕುಗಳು ಉದ್ಭವಿಸುತ್ತವೆ. ಈ ಹಕ್ಕುಗಳನ್ನು ರಕ್ಷಿಸುವುದೇ ರಾಜ್ಯದ ಮುಖ್ಯ ಉದ್ದೇಶ ಎಂದಿದ್ದಾನೆ. ಲಾಕನ ಈ ವಿಚಾರಗಳು ಪ್ರಜಾತಾಂತ್ರಿಕ ವಿಚಾರಧಾರೆಯ ಮೇಲೆ ಆಳವಾದ ಪ್ರಭಾವ ಬೀರಿವೆ.

19 ನೆಯ ಶತಮಾನದಲ್ಲಿ ಬೆಂತಮ್ (1748-1832) ಮತ್ತು ಆತನ ಅನುಯಾಯಿಗಳು ಪ್ರಕೃತಿ ನಿಯಮ ಸಿದ್ಧಾಂತ ಅವೈಜ್ಞಾನಿಕ ಮತ್ತು ಅಸಂಬದ್ಧವೆಂದು ಹೇಳಿ ಕಟುವಾಗಿ ಟೀಕಿಸಿದರು. ಪ್ರಕೃತಿ ನಿಯಮ ಸಂಧಿಗ್ಧವಿದ್ದು, ಅನುಭವದ ಒರೆಗಲ್ಲಿನ ಮೇಲೆ ಸಾಕಷ್ಟು ನಿಚ್ಚಳವಾಗಿ ಮೂಡುವುದಿಲ್ಲವೆಂದು ಇನ್ನೂ ಹಲವರ ಅಭಿಮತ. ಆದರೂ ಇದರ ಮಹತ್ತ್ವವನ್ನು ಅಲ್ಲಗಳೆಯುವಂತಿಲ್ಲ. ಮಾರ್ಟಿನ್ ಹಿಲ್ಲೆನ್ ಬ್ರಾಂಡ್ ಆವರು ತಮ್ಮ ಪವರ್ ಆಂಡ್ ಮಾರಲ್ಸ್ ಎಂಬ ಗ್ರಂಥದಲ್ಲಿ ಅಧಿಕಾರದ ವ್ಯಾಪಕ ದುರುಪಯೋಗದ ಈ ಕಾಲದಲ್ಲಿ ಪ್ರಕೃತಿ ನಿಯಮ ಸಿದ್ಧಾಂತದಿಂದಲೇ ಯೋಗ್ಯ ಪರಿಹಾರ ದೊರೆಯುವುದೆಂದು ವಿವೇಚಿಸಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಾರ್ವತ್ರಿಕ ಪ್ರಕಟಣೆ ಪ್ರಕೃತಿ ನಿಯಮ ಸಿದ್ಧಾಂತದ ಔಚಿತ್ಯಕ್ಕೆ ಜ್ವಲಂತಸಾಕ್ಷಿ.

(ಎಸ್‍ಎಚ್.ಐವಿ.)