ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಕೃತಿ ಪ್ರಾಧಾನ್ಯವಾದಿಗಳು

ವಿಕಿಸೋರ್ಸ್ದಿಂದ

ಪ್ರಕೃತಿ ಪ್ರಾಧಾನ್ಯವಾದಿಗಳು - ಹದಿನೆಂಟನೆಯ ಶತಮಾನದಲ್ಲಿದ್ದ, ಸಾಮಾಜಿಕ ಹಾಗೂ ಆರ್ಥಿಕ ವಿದ್ಯಮಾನಗಳ ಪರಿವೀಕ್ಷಣೆಯ ಪ್ರಪ್ರಥಮ ಸುವ್ಯವಸ್ಥಿತ ಪ್ರಯತ್ನ ಕೈಗೊಂಡ. ಫ್ರಂಚ್ ರಾಜನೀತಿಜ್ಞರು ತತ್ವಜ್ಞರು (ಫಿಸಿಯೋಕ್ರಾಟ್ಸ್). ಆರ್ಥಿಕ ಚಿಂತನೆಯ ಇತಿಹಾಸದಲ್ಲಿ ಪ್ರಮುಖ ಸ್ಥಾನವಿದೆ. ಪ್ರಕೃತಿ ಪ್ರಾಧಾನ್ಯವಾದಿಗಳು ಅನೇಕ ಆರ್ಥಿಕ ವಿಚಾರಗಳನ್ನು ಕುರಿತು ಚಿಂತನೆ ನಡೆಸಿದರು.

ಆರ್ಥಿಕ ವಿಚಾರಗಳನ್ನು ನಿಯಂತ್ರಿಸುವ ಸಹಜ ನಿಯಮಗಳ ಬಗ್ಗೆ ಇವರು ಬಹಳ ಮಟ್ಟಿಗೆ ಸರಿ ಎನಿಸುವ ದೃಷ್ಟಿಯನ್ನೇ ತಳೆದಿದ್ದರೆನ್ನಬಹುದು. ಹಣದ ಸ್ವರೂಪ. ಮುಕ್ತ ವ್ಯಾಪರ ಮುಂತಾದುವುಗಳ ಬಗ್ಗೆ ಇವರ ಅಭಿಪ್ರಾಯಗಳು ಸಮಂಜಸವೆನಿಸಿದರೂ ಸಂಪತ್ತಿನ ಸ್ವರೂಪ ಮತ್ತು ಅದರ ವಿತರಣೆ-ಇವುಗಳ ಬಗ್ಗೆ ಇವರ ಅಭಿಪ್ರಾಯಗಳು ಸರಿ ಎನಿಸವು. ಕೀನೇ. ಗೂರ್ನೇ, ಡೂ ಪಾನ್ ಡ ನೆಮೂರ್, ಮೀರಾಬೋ ಮತ್ತು ಟುರ್ಗೋ ಇವರು ಪ್ರಕೃತಿ ಪ್ರಾಧಾನ್ಯವಾದಿ ಪಂಥದ ಕೆಲವು ಪ್ರಮುಖ ಚಿಂತಕರು. ಕೀನೇ ಮತ್ತು ಟುರ್ಗೋ ಇವರನ್ನು ಪ್ರಕೃತಿ ಪ್ರಾಧಾನ್ಯವಾದಿಗಳ ಅಧ್ವರ್ಯುಗಳೆಂದು ಪರಿಗಣಿಸಲಾಗಿದೆ.

ಪ್ರಕೃತಿ ಪ್ರಾಧಾನ್ಯವಾದಿಗಳ ಚಿಂತನೆಗೆ ಆಧಾರಭೂತವಾಗಿ ತತ್ವ ಚಿಂತನೆ ಇದೆ. ನಿಸರ್ಗ ನಿಯಮ ತತ್ತ್ವ ಇವರ ಎಲ್ಲ ಚಿಂತನೆಗೆ ಆಧಾರ. ನಿಸರ್ಗ ನಿಯಮದ ಅಥವಾ ಪ್ರಕೃತಿ ನಿಯಮದ ಹಿಂದೆ ಇರುವ ತತ್ವಗಳನ್ನು ಶೋಧಿಸುವುದೇ ಈ ಚಿಂತಕರ ಮುಖ್ಯ ಗುರಿಯಾಗಿತ್ತು. ಎಲ್ಲ ಭೌತ ನಿಯಮಗಳನ್ನು ರಚಿಸಿರುವಂತೆಯೇ ಸಾಮಾಜಿಕ ರೀತಿಗಳನ್ನೂ ದೇವರೇ ನಿಯಮಿಸಿದ್ದಾನೆ. ಇವು ಮಾನವ ನಿರ್ಮಿತವಲ್ಲ. ಸಮಾಜದ ಒಳಿತಿಗಾಗಿ ಮಾನವರು ಈ ನೈಸರ್ಗಿಕ ನಿಯಮಗಳನ್ನು ಅನುಸರಿಸಲೇಬೇಕು. ಹೇಗೆ ಭೌತ ನಿಯಮಗಳು ವಿಶ್ವದ ಸಮತೋಲವನ್ನು ಕಾಪಾಡುತ್ತಿವೆಯೋ ಹಾಗೆಯೇ ನೈತಿಕ ನಿಯಮಗಳು ಸಮಾಜದ ಸಮತೋಲವನ್ನು ಕಾಪಾಡುತ್ತವೆ ಎನ್ನುವುದು ಪ್ರಕೃತಿ ಪ್ರಾಧಾನ್ಯವಾದಿಗಳ ಮೂಲ ಭಾವನೆ.

ಭೂಮಿಯೇ ಸಂಪತ್ತಿನ ಏಕೈಕ ಮೂಲ. ನಿಸರ್ಗದ ಕೊಡುಗೆಯಾದ ಭೂಮಿಯನ್ನು ಬಳಸಿ ಕೃಷಿಕ ವರ್ಗ ತಾನು ತನ್ನ ಅನುಭೋಗಕ್ಕಾಗಿ ಮಾತ್ರವೇ ಅಲ್ಲದೆ ಸಮಾಜದ ಉಳಿದ ವರ್ಗದವರೂ ಅ ನುಭೋಗಿಸಬಹುದಾದಷ್ಟು ಕೃಷಿ ಸಂಪತ್ತನ್ನು ಉತ್ಪಾದನೆ ಮಾಡುತ್ತದೆ. ಹೆಚ್ಚುವರಿಯನ್ನು ಉತ್ಪಾದಿಸುವುದು ಕೃಷಿಯೊಂದೇ. ಕೃಷಿ ಉತ್ಪನ್ನದಲ್ಲಿ ಮಾತ್ರ ಅಧಿಶೇಷ ಸಾಧ್ಯ ಪ್ರಕೃತಿ ಪ್ರಾಧಾನ್ಯವಾದಿಗಳ ಮಾತಿನಲ್ಲಿ ಈ ಅಧಿಶೇಷ ನಿವ್ವಳ ಉತ್ಪನ್ನ. ಭೂಮಿಯ ಉತ್ಪನ್ನ ಇತರ ಉತ್ಪನ್ನಗಳಿಗಿಂತ ವಿಶಿಷ್ಟವಾದ್ದು. ಕೈಗಾರಿಕೆ, ವ್ಯಾಪಾರ ಮತ್ತು ಇತರ ಉದ್ಯೋಗಿಗಳು ಅನುತ್ಪಾದಕ. ಏಕೆಂದರೆ ಅವು ಅಧಿಶೇಷವನ್ನು ಸೃಷ್ಟಿಸುವುದಿಲ್ಲ. ಅವುಗಳಿಂದ ಕಚ್ಚಾ ಸಾಮಗ್ರಿಗಳ ಮೌಲ್ಯ ಹೆಚ್ಚಬಹುದು ಅಷ್ಟೆ. ಕೃಷೀತರ ವೃತ್ತಿಗಳಿಂದ ನಡೆಯುವ ಕಲಾಪಗಳಿಂದ ಶ್ರಮ ಮತ್ತು ಬಂಡವಾಳಕ್ಕೆ ಪ್ರತಿಫಲ ದೊರೆಯುತ್ತದೆ ಅಷ್ಟೆ. ಉದಾಹರಣೆಗೆ ಒಬ್ಬ ಬಡಗಿ ಒಂದು ಮೇಜನ್ನು ತಯಾರಿಸಿದರೆ ಮೇಜು ಮತ್ತು ಮರದ ಮೌಲ್ಯದ ನಡುವಣ ವ್ಯತ್ಯಾಸ ಬಡಗಿಗೆ ಸಂದಾಯವಾಗುವ ಶ್ರಮದ ಪ್ರತಿಫಲವಾಗುತ್ತದೆ ಅಷ್ಟೆ. ಇದರಿಂದ ಬೇರೆಯವರಿಗೆ ಯಾವ ಅಧಿಶೇಷವೂ ಲಭ್ಯವಾಗುವುದಿಲ್ಲ. ಪ್ರಕೃತಿ ಪ್ರಾಧಾನ್ಯವಾದಿಗಳ ಪ್ರಕಾರ ಅಧಿಶೇಷವನ್ನುಂಟುಮಾಡಿದರೆ ಮಾತ್ರ ಉತ್ಪಾದನೆ ನಡೆದಂತೆ.

ಪ್ರಕೃತಿ ಪ್ರಾಧಾನ್ಯವಾದಿಗಳ ಚಿಂತನೆಯ ಮಹತ್ವದ ಅಂಶವೆಂದರೆ ಸಂಪತ್ತು. ಸಮಾಜದ ನಾನಾ ವರ್ಗಗಳ ಜನರ ನಡುವೆ ಹೇಗೆ ವಿತರಣೆಯಾಗುತ್ತದೆ ಎಂಬುದರ ವಿವರಣೆ. ವರಮಾನ ವಿವರಣೆಗೆ ಸಂಬಂಧಿಸಿದಂತೆ ಕೀನೇ ನೀಡಿರುವ ಆರ್ಥಿಕ ನಿರೂಪಣದಲ್ಲಿ ರಾಷ್ಟ್ರೀಯ ವರಮಾನದ ಆಧುನಿಕ ಲೆಕ್ಕಾಚಾರದ ಪ್ರಾರಂಭಿಕ ಎಳೆಗಳನ್ನು ಕಾಣಬಹುದಾಗಿದೆ. ಈ ಕೋಷ್ಟಕದ ಪ್ರಕಾರ ರಾಷ್ಟ್ರೀಯ ಸಂಪತ್ತು ಆವರ್ತವಾಗಿ ಸಮಾಜದ ವಿವಿಧ ವರ್ಗಗಳ ನಡುವೆ ವಿತರಣೆಯಾಗುತ್ತದೆ. ಸಮಾಜದಲ್ಲಿ ಭೂಮಿಯ ಒಡೆತನ ಹೊಂದಿರುವವರಿಂದ ಬೇಸಾಯಗಾರರು ಭೂಮಿಯನ್ನು ಗೇಣಿಗೆ ಪಡೆಯುತ್ತಾರೆ. ಇವರು ಭೂಮಿಯನ್ನು ಉತ್ತು ಹತ್ತಿ ಬೆಳೆಯನ್ನು ತೆಗೆಯುತ್ತಾರೆ. ಇವರೇ ನಿವ್ವಳ ಉತ್ಪನ್ನವನ್ನು ಉತ್ಪಾದಿಸುವ ಜನ. ಈ ಉತ್ಪನ್ನ ಈ ವರ್ಗದ ಜನರಿಗಷ್ಟೇ ಆಹಾರವನ್ನು ಒದಗಿಸುವುದಿಲ್ಲ. ಸಮಾಜದ ಇತರ ವರ್ಗದ ಜನರಿಗೂ ಇವರು ಆಹಾರವನ್ನು ಪೂರೈಸುತ್ತಾರೆ. ನಿವ್ವಳ ಉತ್ಪನ್ನ ಈ ವರ್ಗಗಳ ಜನರ ನಡುವೆ ಹೇಗೆ ಚಲಿಸುತ್ತದೆ ಮತ್ತು ಈ ನಿವ್ವಳ ಉತ್ಪನ್ನದ ಪುನರುತ್ಪಾದನೆ ಪ್ರತಿ ವರ್ಷವೂ ಹೇಗೆ ನಡೆಯುತ್ತದೆ ಎಂಬುದನ್ನು ಕೀನೇಯ ಆರ್ಥಿಕ ಕೋಷ್ಟಕ ವಿವರಿಸುತ್ತದೆ.

ಸಮಾಜದ ಮೂರು ವರ್ಗಗಳ ನಡುವೆ ಹಣ, ಸರಕು ಮತ್ತು ಸೇವೆಗಳ ಹರಿವಿನ ವಿವರಣೆಯನ್ನು ಕೀನೇಯ ಆದರ್ಶ ನಿರೂಪಣೆದಲ್ಲಿ ನೀಡಲಾಗಿದೆ. ಆಗ ಫ್ರಾನ್ಸಿನಲ್ಲಿ ಅಸ್ತಿತ್ವದಲ್ಲಿದ್ದ ವರ್ಗ ವ್ಯವಸ್ಥೆಗಿಂತಲೂ ಆದರ್ಶ ಚಿತ್ರ ಹೆಚ್ಚು ಮುಂದುವರಿದದ್ದಾಗಿತ್ತು. ಈ ನಿರೂಪಣದ ಪ್ರಕಾರ ಸಮಾಜದ ಮೂರು ವರ್ಗಗಳ ಪೈಕಿ ಅತ್ಯಂತ ದೊಡ್ಡದು ಉತ್ಪಾದಕ ವರ್ಗ. ಇದು ಒಟ್ಟು ಜನಸಂಖ್ಯೆಯ ಅರ್ಧದಷ್ಟು. ಕೃಷಿ, ಮೀನುಗಾರಿಕೆ ಮತ್ತು ಗಣಿಗಾರಿಕೆಯಲ್ಲಿ ನಿರತವಾದ ವರ್ಗವಿದು. ಮಾಲಿಕ ವರ್ಗ ಎರಡನೆಯದು. ಜಮೀನಿನ ಮಾಲೀಕರು, ಮಾಲೀಕತ್ವದ ಮೂಲದಿಂದ ವರಮಾನ ಪಡೆಯುವವರು - ಈ ವರ್ಗದ ಜನ. ಇವರು ಒಟ್ಟು ಜನಸಂಖ್ಯೆಯಲ್ಲಿ ಕಾಲು ಭಾಗ. ಉಳಿದವರದು ಜಡ. ಬಂಧ್ಯ, ಅನುತ್ಪಾದಕ, ಅಥವಾ ಕಾರೇಗಾರ ವರ್ಗ, ಕ್ರಮೇಣ ಫ್ರಾನ್ಸಿನ ವರ್ಗದ ರಚನೆ ಈ ರೀತಿ ವಿಕಾಸಗೊಳ್ಳುವುದೆಂದು ಪ್ರಕೃತಿ ಪ್ರಾಧಾನ್ಯವಾದಿಗಳು ಪರಿಭಾವಿಸಿದ್ದರು. ಆರ್ಥಿಕ ವ್ಯವಸ್ಥೆಯ ವಿಕಾಸಶೀಲತೆಯನ್ನು ಅವರು ಗುರುತಿಸಿದ್ದರು.

ಸ್ಥೂಲ ರಾಷ್ಟ್ರೀಯ ಉತ್ಪನ್ನ ಮತ್ತು ವರಮಾನದ ವರ್ಗಾಂತರ ಹರಿವನ್ನು ಕೀನೇ ತನ್ನ ವಿವರಣದಲ್ಲಿ ಸ್ಥೂಲವಾಗಿ ನಿರೂಪಿಸಿದ್ದಾನೆ. ಕೀನೇ ಎತ್ತಿಕೊಂಡ ವರ್ಷದ ಅವಧಿಯಲ್ಲಿ ಉತ್ಪಾದಕ ವರ್ಗದ ಉತ್ಪಾದನೆಯ ಮೌಲ್ಯ 500 ಕೋಟಿ ಲೀವ್ರ್ (ಒಂದು ಹಳೆಯ ಫ್ರೆಂಚ್ ನಾಣ್ಯ 1795 ರಲ್ಲಿ ಇದರ ಬದಲು ಫ್ರಾಂಕ್ ಚಲಾವಣೆಗೆ ಬಂತು). ಜಮೀನಿನ ಮಾಲೀಕರಿಂದ ಗೇಣಿಗೆ ಪಡೆದ ಜಮೀನು, ಬೀಜ, ಸಾಗುವಳಿ ಮುಂತಾದವುಗಳ ರೂಪದಲ್ಲಿ 200 ಕೋಟಿ ಲೀವ್ರ್ ವಾರ್ಷಿಕ ವಿನಿಯೋಜನೆ. ಹೆಚ್ಚು ದೀರ್ಘ ಅವಧಿಯಲ್ಲಿ ಗತ ಕಾಲದಲ್ಲಿ-ಉಪಕರಣ, ಜಾನುವಾರು ಮುಂತಾದವುಗಳಿಗಾಗಿ ಮಾಡಿದ 1000 ಕೋಟಿ ಲೀವ್ರ್‍ಗಳ ವಿನಿಯೋಜನೆ-ಇವುಗಳಿಂದ ಈ ಉತ್ಪನ್ನ ಸಾಧ್ಯವಾಯಿತು. ಗತಕಾಲದಲ್ಲಿ-ಹೆಚ್ಚು ದೀರ್ಘ ಅವಧಿಯಲ್ಲಿ-ಮಾಡಲಾದ, ಮೇಲೆ ಹೇಳಿರುವ 1,000 ಕೋಟಿ ಲೀವ್ರ್ ವಿನಿಯೋಜನೆಯ ಹತ್ತನೆಯ ಒಂದು ಭಾಗವನ್ನು ವಾರ್ಷಿಕವಾಗಿ ನವೀಕರಿಸಲು ವೆಚ್ಚ ಮಾಡಲಾಗುವುದೆಂದು ಕೀನೇಯ ಅಂದಾಜು.

ವ್ಯಾಖ್ಯಾನದ ಸೌಲಭ್ಯಕ್ಕಾಗಿ ವ್ಯವಸಾಯದಿಂದ ಸಮ ಅಥವಾ ಅಚರ ಪ್ರತಿಫಲ ದೊರಕುವುದೆಂದು ತಿಳಿಯಲಾಗಿತ್ತು. ಹೆಚ್ಚು ಆದಾನಗಳಿಗೆ ಹೆಚ್ಚು ಪ್ರದಾನ. ಪ್ರತಿಫಲ ಅಥವಾ ಉತ್ಪನ್ನ ದೊರಕಬೇಕಾದರೆ ಕಟ್ಟಡ, ನೆಲದ ಅಬಾದು, ಜಲೋತ್ಸಾರಣ ಮುಂತಾದವಕ್ಕಾಗಿ ಜಮೀನಿನ ಮಾಲೀಕರು ಹಿಂದೆ ಮಾಡಿರುವ ವಿನಿಯೋಜನವನ್ನು ಅವಲಂಬಿಸಿರುತ್ತದೆಂದು ತಿಳಿಯಲಾಗಿತ್ತು. ಪ್ರಕೃತಿ ಪ್ರಾಧಾನ್ಯವಾದಿಗಳಲ್ಲಿ ಒಬ್ಬನಾದ ಟುರ್ಗೋ ಏರುಮುಖ ಮತ್ತು ಇಳಿಮುಖ ಪ್ರತಿಫಲಗಳನ್ನು ವಿವೇಚಿಸಿದನಾದರೂ ಆ ವಿವೇಚನೆ ಮೇಲೆ ಹೇಳಿದ ಸಂದರ್ಭಕ್ಕೆ ಸಂಬಂಧಿಸಿದಂತೆ ಅಲ್ಲ. ವಾರ್ಷಿಕ ಉತ್ಪನ್ನವಾದ 500 ಕೋಟಿ ಲೀವ್ರ್‍ಗಳಲ್ಲಿ 300 ಕೋಟಿ ಲೀವ್ರ್‍ಗಳು ಮೇಲೆ ಹೇಳಿದ ಖರ್ಚಿನ ವಾಪಾಸ್ಸು ಉಳಿದ 200 ಕೋಟಿ ಲೀವ್ರ್ ನಿವ್ವಳ ಉತ್ಪನ್ನ ಕೃಷಿಕರಿಂದ ಮಾಲೀಕರಿಗೆ ಹರಿದ ಸಂಪತ್ತಿನ ಹಣ ಮೌಲ್ಯವನ್ನು ಸ್ಪರ್ಧಾತ್ಮಕವಾಗಿ ಮುಂದಾಗಿಯೇ ಸ್ಥೂಲವಾಗಿ ನಿರೀಕ್ಷಿಸಿ ನಿಗದಿಪಡಿಸಲಾಗಿತ್ತು. ನಿವ್ವಳ ಉತ್ಪನ್ನದ ಹಣ ಮೌಲ್ಯವಿದು. ಉತ್ಪಾದಕ ವರ್ಗದಿಂದ 100 ಕೋಟಿ ಲೀನ್ ಮೌಲ್ಯದ ಉತ್ಪನ್ನವನ್ನು ಕೊಳ್ಳಲು ಮಾಲೀಕರು ವಾಸ್ತವವಾಗಿ ಬಳಸಿಕೊಂಡದ್ದು ಈ ಹಣವನ್ನು. ಉತ್ಪಾದಕ ವರ್ಗದಿಂದ ಬಂಧ್ಯ ವರ್ಗ 200 ಕೋಟಿ ಲೀವ್ರ್ ಮೌಲ್ಯದ ಉತ್ಪನ್ನ ಪಡೆಯಿತು. ಇದನ್ನು ಆ ವರ್ಗ ಉಳಿದ ಎರಡು ವರ್ಗಗಳಿಗೆ ಅಥವಾ ತನ್ನ ಸ್ವಂತಕ್ಕೆ ಅಗತ್ಯವಾದ ಸರಕು ಮತ್ತು ಸೇವೆಗಳ ನಿರ್ಮಾಣಕ್ಕಾಗಿ ಉಪಯೋಗಿಸಿಕೊಂಡಿತು. ಆ ವರ್ಗ ಸ್ಥಿರ ಬಂಡವಾಳವನ್ನೇನೂ ಬಳಸಿಕೊಳ್ಳಲಿಲ್ಲ. ಅಥವಾ ಬಳಸಿಕೊಂಡಿದ್ದರೂ ಅದು ಅತ್ಯಲ್ಪ. ಅದು ವಿನಿಯೋಗಿಸಿದ ಕಾರ್ಯವಾಹಿ ಬಂಡವಾಳವನ್ನು ಪ್ರಚಲಿತ ಉತ್ಪಾದನಾವಧಿಯಲ್ಲೇ ತುಂಬಿಕೊಂಡಿತು. ಇದು ಕೀನೇಯ ಆರ್ಥಿಕ ವಿವರಣ.

ಪ್ರಕೃತಿ ಪ್ರಾಧಾನ್ಯವಾದಿ ಪಂಥದ ಈ ವಿವರಣಕ್ಕೆ ತಳಹದಿಯಾಗಿರುವ ಆದರ್ಶ ಮೂಲಭೂತ ಅಭಿಗೃಹೀತವಿದು: ಜಮೀನಿನ ಸಾಗುವಳಿ ಮಾಡುವ ವರ್ಗವೊಂದೇ ಉತ್ಪಾದಕ ವರ್ಗ. ನಿವ್ವಳ ಉತ್ಪನ್ನವನ್ನು ಉತ್ಪಾದಿಸುವುದು ಅದು ಮಾತ್ರ ಬಂಧ್ಯ ವರ್ಗ ಸರಕು ಸೇವೆಗಳ ನಿರ್ಮಾಣಕ್ಕಾಗಿ ಮಾಡಿದ ವೆಚ್ಚವನ್ನು ಪುನಃ ಪಡೆದುಕೊಳ್ಳುತ್ತದೆಯಷ್ಟೆ. ಆವರ್ತ ಆರ್ಥಿಕ ಹರಿವನ್ನು ಮುಂದುವರಿಸುವ ಕಾರ್ಯದಲ್ಲಿ ಮಾಲೀಕ ವರ್ಗ ನಿರತವಾಗಿರುವುದಿಲ್ಲ. ಅದು ಮುಖ್ಯತಃ ಸಾರ್ವತ್ರಿಕ ಉದ್ದೇಶವನ್ನು ನೆರವೇರಿಸಬಹುದಷ್ಟೆ. ಆದ್ದರಿಂದ ಜನಸಂಖ್ಯೆ, ಆರ್ಥಿಕತೆಯ ವಿಸ್ತರಣೆ ಇವು ಉತ್ಪಾದಕ ವರ್ಗದ ಖರ್ಚಿನ ವಿಸ್ತರಣೆಯನ್ನೂ ತತ್ಫಲವಾಗಿ ನಿವ್ವಳ ಉತ್ಪನ್ನದ ವಿಸ್ತರಣೆಯನ್ನೂ ಅವಲಂಬಿಸುತ್ತವೆ. ಆದ್ದರಿಂದ ಖರ್ಚಿನ ಬೆಳವಣಿಗೆ ಹಾಗೂ ಸ್ಥಿರತೆಯಷ್ಟೇ ಅದರ ರಚನೆಯೂ ಮುಖ್ಯವಾದ್ದಾಗಿರುತ್ತದೆ. ಆದ್ದರಿಂದ ಪ್ರಕೃತಿ ಪ್ರಾಧಾನ್ಯವಾದಿಗಳು ಬಂಧ್ಯವರ್ಗ ಅತಿಯಾಗಿ ಖರ್ಚು ಮಾಡುವುದನ್ನು ಖಂಡಿಸಿದರು. ಆದರೆ, ಉತ್ಪಾದಕ ವರ್ಗ ಅಧಿಕ ಖರ್ಚು ಮಾಡುವುದನ್ನು ಸ್ವಾಗತಿಸಿದರು. ಉತ್ಪಾದಕ ವರ್ಗದಿಂದ ಬಂಧ್ಯ ವರ್ಗಕ್ಕೆ ಖರ್ಚಿನ ವರ್ಗಾವಣೆಯಾದರೆ ಉತ್ಪಾದಕ ವರ್ಗದ ನಿವ್ವಳ ಖರ್ಚು ಕಡಿಮೆಯಾಗಿ, ನಿವ್ವಳ ಉತ್ಪನ್ನ ಇಳಿಯುವುದೆಂದು ಅವರು ಭಾವಿಸಿದರು. ಉತ್ಪನ್ನದ ವಿಕ್ರಯಕ್ಕೆ ಮಾನವ ಕೃತ ಪ್ರತಿಬಂಧಕಗಳನ್ನು ಒಡ್ಡುವುದು ತಪ್ಪೆಂದು ಅವರು ಹೇಳಿದರು. ಸುಂಕ, ಉತ್ಪನ್ನದ ಅಕ್ರಮ ದಾಸ್ತಾನು, ವಿದೇಶಗಳಿಗೆ ಹಣದ ಹರಿವು, ಕೃಷಿ ಮಾರುಕಟ್ಟೆಗೆ ಹೋಗದಂತೆ ಅನ್ಯ ದಿಕ್ಕುಗಳಿಗೆ ಹಣವನ್ನು ತಿರುಗಿಸುವುದು - ಇವನ್ನೆಲ್ಲ ಅವರು ಒಪ್ಪಲಿಲ್ಲ.

ಪ್ರಕೃತಿ ಪ್ರಾಧಾನ್ಯವಾದಿಗಳ ಚಿಂತನೆ ಕೆಲವು ದೃಷ್ಟಿಗಳಿಂದ ಮಹತ್ವದ್ದೂ ಇನ್ನೂ ಕೆಲವು ದೃಷ್ಟಿಗಳಿಂದ ಅತ್ಯಂತ ಅಸಮರ್ಪಕವೂ ಆದ್ದು. 18 ನೆಯ ಶತಮಾನದಲ್ಲಿ ಇವರ ವಾದಗಳು ಫ್ರಾನ್ಸ್ ಮತ್ತು ಇತರ ಯೂರೋಪಿಯನ್ ರಾಷ್ಟ್ರಗಳಲ್ಲಿ ಮಾನ್ಯತೆ ಪಡೆದದ್ದು ನಿಜ. ಆದರೆ, ಇವರ ಅನೇಕ ವಾದಗಳು ಬಹಳ ಟೊಳ್ಳಾಗಿದ್ದವು. ಕೃಷಿಯೇ ರಾಷ್ಟ್ರದ ಸಂಪತ್ತಿನ ಮೂಲ ಎಂಬುದು ಇವರ ಮುಖ್ಯ ನಂಬಿಕೆ. ಇದು ಮುಂದೆ ತೀರಾ ಪ್ರಶ್ನಾರ್ಹವಾಯಿತು. ಕೃಷಿಯೊಂದೇ ಯಾವ ಆರ್ಥಿಕತೆಯಲ್ಲಾಗಲಿ ಸಂಪತ್ತನ್ನು ಉತ್ಪಾದಿಸುವ ವೃತ್ತಿಯಾಗಲಾರದು ಎನ್ನುವುದು ಸುಸ್ಪಷ್ಟ. ಕೃಷಿಯೊಂದರಿಂದಲೇ ನಿವ್ವಳ ಉತ್ಪನ್ನ ಶಕ್ಯ ಎಂಬ ಅಭಿಪ್ರಾಯ ಸರಿಯಾದ್ದೆನಿಸಲಿಲ್ಲ. ನೈಸರ್ಗಿಕ ನಿಯಮದ ಭಾವನೆಯ ಚೌಕಟ್ಟಿನೊಳಗೆ ಚಿಂತಿಸಬೇಕಾಗಿದ್ದ ಪರಿಸ್ಥಿತಿಯೇ ಇವರ ಏಕ ಮುಖವಾದ ಸಂಪತ್ತಿನ ಮೂಲದ ವಿಶ್ಲೇಷಗೆ ಕಾರಣವಾಗಿದ್ದಿರಬಹುದು.

ಪ್ರಕೃತಿ ಪ್ರಾಧಾನ್ಯವಾದಿಗಳ ಆರ್ಥಿಕತೆಯನ್ನು ಅದರ ಸಮಗ್ರತೆಯಲ್ಲಿ ವಿಶ್ಲೇಷಿಸಿದ್ದರೆಂಬುದು ಗಮನಾರ್ಹ. ನಿಸರ್ಗ ನಿಯಮ ಇಡೀ ಆರ್ಥಿಕತೆಯ ಸಮತೋಲನವನ್ನು ಕಾಪಾಡುತ್ತದೆ ಎಂಬ ನಂಬಿಕೆಯೇ ಇಂಥ ವಿಶ್ಲೇಷಣೆಗೆ ಪ್ರೇರಣೆಯಾಗಿತ್ತು. ಆರ್ಥಿಕೇತರ ಅಂಶಗಳೂ ಸಮಾಜದ ಸಮತೋಲಕ್ಕೆ ಅತ್ಯಂತ ಮುಖ್ಯವಾದವು ಎಂಬುದನ್ನು ಇವರು ಮನಗಂಡಿದ್ದರು. ಆರ್ಥಿಕತೆಯ ಒಂದು ಕ್ಷೇತ್ರ ಮತ್ತೊಂದು ಕ್ಷೇತ್ರದೊಡನೆ ಹೇಗೆ ಸಂಬಂಧ ಹೊಂದಿರುತ್ತದೆ ಎಂಬುದರ ಸ್ಥೂಲ ವಿಶ್ಲೇಷಣೆಗೂ ಅವರು ಯತ್ನಿಸಿದರು. ಕೀನೇಯ ವಿವರಣ ಇಂಥ ಪ್ರಯತ್ನಗಳಲ್ಲಿ ಒಂದು.

ಈ ಪಂಥಕ್ಕೆ ಸೇರಿದ ಚಿಂತಕರು ಆ ಕಾಲದಲ್ಲಿ ಪ್ರಚಲಿತವಾಗಿದ್ದ ವಣಿಕವಾದವನ್ನು ಅತ್ಯಂತ ಯಶಸ್ವಿಯಾಗಿ ಎದುರಿಸಿದರು. ವಾಸ್ತವವಾಗಿ ಪ್ರಕೃತಿ ಪ್ರಾಧಾನ್ಯವಾದ ಹುಟ್ಟಿದ್ದು ವಣಿಕವಾದಕ್ಕೆ ಪ್ರತಿಕ್ರಿಯೆಯಾಗಿ, ವಾಣಿಜ್ಯವೇ ರಾಷ್ಟ್ರದ ಸಂಪತ್ತನ್ನು ಹೆಚ್ಚಿಸುತ್ತದೆ ಎಂಬ ವಾದವನ್ನು, ಪ್ರಕೃತಿ ಪ್ರಾಧಾನ್ಯ ವಾದಿಗಳು ಅಲ್ಲಗಳೆದರಷ್ಟೇ ಅಲ್ಲದೆ, ರಾಷ್ಟ್ರ ಸಂಪತ್ತು ಕೃಷಿಯಿಂದ ಸೃಷ್ಟಿಯಾಗುತ್ತದೆಂದು ವಾದಿಸಿದರು. ವಣಿಕ ವಾದವನ್ನು ಎದುರಿಸುವ ದೃಷ್ಟಿಯಿಂದಲೇ ಇವರು ಮುಕ್ತ ವ್ಯಾಪಾರ ನೀತಿಯನ್ನು ಎತ್ತಿ ಹಿಡಿದರು. ಇದನ್ನೇ ಮುಂದೆ ಆಡಮ್ ಸ್ಮಿತ್ ಮತ್ತು ಅವನ ಅನುಯಾಯಿತಲು ಅಭಿವೃದ್ಧಿಗೊಳಿಸಿದರು.

ಪ್ರಕೃತಿ ಪ್ರಾಧಾನ್ಯವಾದ ಅನೇಕ ದೃಷ್ಟಿಗಳಿಂದ ಏಕ ಮುಖವಾದ್ದಾದರೂ ರಾಷ್ಟ್ರೀಯ ಉತ್ಪನ್ನ ಮತ್ತು ವಿತರಣೆಯ ವಿಶ್ಲೇಷಣೆಯಲ್ಲಿ ಈ ಪಂಥದವರು ನಡೆಸಿದ ಚಿಂತನೆ ಅತ್ಯಂತ ಗಹನವಾದ್ದೆಂದು ಇಂದಿಗೂ ಪರಿಗಣಿತವಾಗಿದೆ. ಆರ್ಥಿಕ ಚಿಂತನೆಯ ವಿಕಾಸಕ್ಕೆ ಈ ಪಂಥದಿಂದ ಗಮನಾರ್ಹವಾದ ಕಾಣಿಕೆ ಸಂದಿದೆ ಎನ್ನಬಹುದು. ಇವರು ಮಂಡಿಸಿದ ಕೆಲವು ವಿಚಾರಗಳಲ್ಲಿ ಅರ್ಥಶಾಸ್ತ್ರಜ್ಞರು ಇಂದಿಗೂ ಆಸಕ್ತಿ ಹೊಂದಿದ್ದಾರೆ. (ಸಿ.ಕೆ.ಆರ್.)