ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಕೃತೈತೀತವಾದ

ವಿಕಿಸೋರ್ಸ್ದಿಂದ

ಪ್ರಕೃತೈತೀತವಾದ - ಮಾನವ ವ್ಯವಹಾರದಲ್ಲಿ ಪ್ರಾಕೃತಿಕವಲ್ಲದ, ಪ್ರಕೃತಿಗೆ ಅತೀತವಾದ ವಸ್ತುಗಳ ಕೈವಾಡ ಇದೆ ಎನ್ನುವ ವಾದಸರಣಿ (ಸೂಪರ್ ನ್ಯಾಚುರಲಿಸಂ). ಭೂತ_ಪ್ರೇತಾದಿಗಳಲ್ಲಿ ಅಥವಾ ದೇವತೆಗಳಲ್ಲಿನ ನಂಬಿಕೆಯನ್ನೇ ಮಾನವತಾವಿಕಾಸ ಶಾಸ್ತ್ರಜ್ಞರು ಪ್ರಕೃತ್ಯತೀತ ಎಂದು ವ್ಯವಹರಿಸುವರು. ಕಾಡು ಜನರ ಸಂಸ್ಕøತಿಯಲ್ಲಿ ಪ್ರಾಚೀನ ಮಾನವನಿಗೆ ಪ್ರಾಕೃತ-ಅಪ್ರಾಕೃತ ಎಂಬ ವಿವೇಕ ಎಷ್ಟರಮಟ್ಟಿಗೆ ಇದ್ದಿತೆಂಬ ವಿಚಾರದಲ್ಲಿ ಮತಭೇದಗಳಿವೆ. ನಾವು ಇಂದು ಪ್ರಕೃತ್ಯತೀತವೆನ್ನಬಹುದಾದ ಶಕ್ತಿಗಳಲ್ಲಿ ಅಪ್ರಬುದ್ಧ ಮಾನವನಿಗೆ ವಿಶ್ವಾಸವಿದ್ದಿತೆಂದಷ್ಟೆ ಫ್ರೇಜûರ್ ಹೇಳುತ್ತಾನೆ. ಆ ಮನೋಭಾವವನ್ನು ಮನ ಎಂದು ಕೆಲವರು ಹೆಸರಿಸಿದ್ದಾರೆ. ಅದರಲ್ಲಿ ಅಡಗಿರುವ ಅಂಶಗಳನ್ನು ಹೀಗೆ ವಿಭಜಿಸಿ ತೋರಿಸಬಹುದು:

1 ಪಾರವಶ್ಯ: ದೇವತಾವಿಷಯಕ ಚಿತ್ರವೃತ್ತಿಯಲ್ಲಿ ಅನೇಕ ಅಂಶಗಳು ಸೇರಿಕೊಂಡು ಅದನ್ನು ಜಟಿಲಗೊಳಿಸಿವೆಯೆಂಬುದು ಮನಶ್ಯಾಸ್ತ್ರಕಾರರ ಅಭಿಪ್ರಾಯ. ದೇವತೆಗಳು ಕ್ಷುದ್ರರಿರಲಿ ಮೇಲ್ಮಟ್ಟದವರಿರಲಿ ಅವರನ್ನು ಕುರಿತ ಮನೋವೃತ್ತಿಯನ್ನು ಹೆಚ್ಚಾಗಿ ನಮ್ಮ ಇಂದಿನ ಸಭೆಯ ವಿಸ್ಮಯವೆಂಬ ಶಬ್ದ ಸೂಚಿಸಬಲ್ಲುದು. ಅಂಜಿಕೆ ಆಶ್ಚರ್ಯ ಅಹಂಕಾರನಿರಸನ_ಈ ಮೂರೂ ಅದರಲ್ಲಿ ಕೂಡಿರುತ್ತವೆ. ಭಯ ಗೌರವ ಪ್ರಣತ ಭಾವಗಳು ಪೂಜ್ಯ ದೇವತೆಯ ಬಗ್ಗೆ ಏಕಕಾಲದಲ್ಲಿ ಉಂಟಾಗುತ್ತವೆ. ಸೌಮ್ಯ ದೇವತೆಯಂತೆ ಉಗ್ರದೇವತೆ ಇಲ್ಲವೆ ಮಾಂತ್ರಿಕನ ಬಗೆಗೂ ಈ ಭಾವಗಳಿಗೆ ಸಮಾನ ಆಸ್ಪದವಿದೆ ಆದಿಮಾನವ ಧರ್ಮವಿಕಾಸದ ಪ್ರಥಮಸ್ತರಗಳಲ್ಲಿ ಗತಿಸಿದ ಪ್ರೇತಗಳಿಗೂ ಅದೃಶ್ಯ ಪ್ರಕೃತಿ ಶಕ್ತಿಗಳಿಗೂ ಅತಿಮಾನುಷ ಶಕ್ತಿಗಳನ್ನು ಆರೋಪಿಸಿ ತನಗೆ ಒಳಿತು ಅಥವಾ ಕೆಡುಕನ್ನು ಮಾಡುವ ಸಾಮಥ್ರ್ಯವಿರಬೇಕೆಂದು ಭಾವಿಸುತ್ತಾನೆ. ಅಷ್ಟೇಕೆ, ಅವನನ್ನು ಒಂದಿಲ್ಲೊಂದು ರೀತಿಯಿಂದ ಚಕಿತಗೊಳಿಸಿ ವಿಸ್ಮಯವನ್ನುಕ್ಕಿಸುವಂಥ ಮರ ಗಿಡ ಬೆಟ್ಟ ತೊರೆ-ಮುಂತಾದವೂ ಪ್ರಕೃತ್ಯತೀತ ಶಕ್ತಿಸಂಪನ್ನವೆಂಬ ಭಾವನೆ ಅವನಲ್ಲಿ ಮೂಡುವಂತಾಗುತ್ತದೆ. ಹೀಗೆ ಪ್ರಾಚೀನ ಮಾನವನ ಚಿಂತನೆಯಲ್ಲಿ ಬಹುಭಾಗವನ್ನು ಪಾರವಶ್ಯದ ಈ ಚಿತ್ತವೃತ್ತಿ ಆಕ್ರಮಿಸಿರುತ್ತದೆ.

2 ವೈಚಾರಿಕತೆ: ಪ್ರಕೃತ್ಯತೀತವಾದದಲ್ಲಿ ಅದೃಶ್ಯಶಕ್ತಿಗಳ ಸಂಪರ್ಕದ ಬಗೆಗೆ ವಿಧಿ-ನಿಷೇಧ ಎರಡು ಮುಖಗಳೂ ಇರುತ್ತವೆ. ನಿಷೇಧಾತ್ಮಕ ವಿಚಾರಸರಣಿ ಮುಂದಾದರೆ ಟಾಬು ಅಥವಾ ವಜ್ರ್ಯಗಳ ವಿವೇಚನೆ ಬರುತ್ತದೆ: ವಿಧಿ. ಪ್ರಮುಖ ವಿಚಾರ ಸರಣಿ ಬೆಳೆದರೆ "ಮನ" ಅಥವಾ ಪವಿತ್ರ ಕರ್ತವ್ಯಗಳ ವಿವೇಚನೆ ಮೂಡುತ್ತದೆ. ಕಾಡುಜನರಲ್ಲಿ ಇವು ವ್ಯವಸ್ಥಿತವಾಗಿ ಬೆಳೆದುದನ್ನು ಕಾಣಲಾರೆವು. ಮಾನವ ವಿಕಾಸದ ಯಾವ ಹಂತದಲ್ಲಿ ಇವು ವ್ಯವಸ್ಥಿತವಾದುವೆಂಬುದನ್ನು ಹೇಳುವುದು ಕಷ್ಟ. ಪ್ರಕೃತ್ಯೆತೀತವಾದದಲ್ಲಿ ಒಳ್ಳೆಯ ಹಾಗು ಕೆಟ್ಟ ಶಕ್ತಿಗಳೆರಡಕ್ಕೂ ಸಮಪ್ರವೇಶವಿರುವ ಕಾರಣ ಮಾಟಗಾರನಿಗೂ ದೇವತಾರಾಧಕನಿಗೂ ಏಕರೀತಿಯ ಸ್ಥಾನವಿರುವುದು ಅನಿವಾರ್ಯವಾಗುತ್ತದೆ, ಇಷ್ಟಾದರೂ ಅವರಲ್ಲಿ ಕೂಡ ಆಕಸ್ಮಿಕಗಳಿಗೆ ಎಡೆಯಿಲ್ಲದ ಮೂಲಭೂತ ಪ್ರಕೃತಿಯ ಮೂಲನಿಯಮಗಳ ಬಗ್ಗೆ ಅಷ್ಟಿಷ್ಟಾದರೂ ಪರಿಜ್ಞಾನವಿದ್ದಿರುವುದು ಅಸಂಭವವೇನೂ ಅಲ್ಲ. ಆದ್ದರಿಂದಲೇ ಪಾಲಿನೇಷನ್ ಕಾಡುಜನರಲ್ಲಿ ಲೌಕಿಕ_ಧಾರ್ಮಿಕ ಕ್ರಿಯೆಗಳ ಅಂತರದ ಪರಿಜ್ಞಾನವನ್ನು ಕಾಣಬಹುದಾಗಿದೆ.

3 ಅನುಷ್ಠಾನ: ವನ್ಯಮಾನವ ಹೆಚ್ಚು ವಿಚಾರಶೀಲನಲ್ಲದಿದ್ದರು ಕ್ರಿಯಾಶೀಲನಾಗಿರುತ್ತಿದ್ದ. ಆದ್ದರಿಂದ ಅವನ ಆಚಾರ-ಅನುಷ್ಠಾನಗಳಲ್ಲಿ ಸಾಮಾಜಿಕ ವ್ಯವಹಾರದಲ್ಲಿ ಅವನ ಮನೋವೃತ್ತಿಯ ಒಂದು ಸ್ಪಷ್ಟ ಚಿತ್ರವನ್ನು ಕಂಡುಕೊಳ್ಳಬೇಕಾಗುತ್ತದೆ. ಒಂದು ಮಾನವರ್ಗದ ವಿಚಾರ ಹಾಗು ಮನೋಭಾವನೆಗಳೆಲ್ಲ ಆ ವರ್ಗ ಪಾಲಿಸುವ ಸಾಂಪ್ರದಾಯಿಕ ಆಚರಣೆಗಳಲ್ಲಿ ಅಭಿವ್ಯಕ್ತವಾಗುತ್ತವೆ. ಪ್ರಕೃತ್ಯತೀತ ಶಕ್ತಿಗಳ ನಂಬಿಕೆಯಿಂದ ಪ್ರೇರಿತವಾದ ವಿಶಿಷ್ಟ ಆಚರಣೆಗಳೇನು ಎಂಬುದು ಮುಖ್ಯಪ್ರಶ್ನೆಯೇ ಸರಿ. ಅತಿ ಕೆಳಗಿನ ಹಂತದ ನಾಗರಿಕತೆಯಲ್ಲಿ ಲೌಕಿಕ ಕೆಲಸಗಳಿಗೂ ಧಾರ್ಮಿಕ ಅನುಷ್ಠಾನಗಳಿಗೂ ಸುಸ್ಪಷ್ಟ ಭೇದವಿರುತ್ತದೆ. ಲೌಕಿಕ ಜೀವನಕ್ರಿಯೆಗಿಂತ ಧಾರ್ಮಿಕ ಕ್ರಿಯೆಯಲ್ಲಿ ಹೆಚ್ಚಿನ ಆಸಕ್ತಿಯೂ ಇರುತ್ತದೆ. ಇವಿಷ್ಟೂ ಮಾನವತಾವಿಕಾಸ ಶಾಸ್ತ್ರದ ವಿಚಾರ ಸರಣಿ.

ತತ್ವಶಾಸ್ತ್ರದಲ್ಲಿ ಮಾನವಸಮೇತವಾದ ಜಗತ್ತಿಗೆ ಮೂಲಕಾರಣ ಕೇವಲ ಅಚೇತನ ಪ್ರಕೃತಿಯಾಗಿರದೆ, ವಿಶ್ವಾತೀತನಾದ ಪರಮಾತ್ಮನೊಬ್ಬನಾಗಿರಬೇಕೆಂಬವಾದ ಪ್ರಕೃತ್ಯತೀತವಾದವೆನಿಸುತ್ತದೆ. ಪರಮಾತ್ಮ ಜಗತ್ತಿನಲ್ಲಿ ಅಂತರ್ಗತನಾಗಲಾರನೆಂಬುದು ಇದರ ಇನ್ನೊಂದು ವಿಚಾರಧಾರೆ.

ಕ್ರಿಶ್ಚನ್ ಮತಧರ್ಮದಲ್ಲಿಯ ಒಂದು ಪ್ರಕ್ರಿಯೆಗೂ ಪ್ರಕೃತ್ಯತೀತವಾದವೆಂಬ ಹೆಸರಿದೆ. ಕ್ರಿಶ್ಚನ್ ಮತಧರ್ಮದ ಸತ್ಯತೆಗೆ ಸಮರ್ಥನೆ ಬೈಬಲಿನಲ್ಲಿ ಉಕ್ತವಾಗಿರುವ ಅನೇಕ ಪವಾಡಗಳಿಂದ ದೊರೆಯುತ್ತದೆಯಷ್ಟೆ. ಆ ಪವಾಡಗಳಿಗೆ ಪ್ರಾಕೃತಿಕ ಕಾರಣಗಳೊಂದನ್ನೂ ಕೊಟ್ಟು ಮುಗಿಸುವಂತಿಲ್ಲ. ಅವಕ್ಕೆಲ್ಲ ದೇವರ ಆಚಿಂತ್ಯ ಶಕ್ತಿಯೊಂದೇ ಏಕೈಕ ಕಾರಣ ಎಂಬ ಸಾಂಪ್ರದಾಯಿಕ ವಿಚಾರಧಾರೆ ಇಲ್ಲಿ ಪ್ರಸ್ತುತವಾಗುತ್ತದೆ.

ಆದರೆ, ಆಧುನಿಕ ವಿಚಾರಯುಗದ ಚಿಂತನೆಯೆಲ್ಲ ಪ್ರಾಕೃತಿಕತೆಯ ಕಡೆಗೇ ಪ್ರಬಲವಾಗಿ ಹರಿಯುತ್ತಿದೆ. ಜಗತ್ತಿನಲ್ಲಿ ದೇವರ ವ್ಯಾಪಾರವೇ ಇಲ್ಲವೆಂದು ಹೇಳದಿದ್ದರೂ ಇಂದಿನವರು ಯಾವದನ್ನೂ ದೇವರ ನಿರ್ಮಾಣವೆನ್ನುತ್ತಿದ್ದರೊ ಅದೆಲ್ಲ ನಿಜವಾಗಿ ಪ್ರಕೃತಿಯಲ್ಲಿಯೇ ನಿಗೂಢವಾಗಿರುವ ಸೂಕ್ಷ್ಮ ಶಕ್ತಿಗಳ ಪ್ರಭಾವವೆನ್ನುವ ಅಭಿಪ್ರಾಯ ಮುಂದಾಗುತ್ತಿದೆ. ಇದರಿಂದಾಗಿ ಕ್ರಿಶ್ಚನ್ ಧರ್ಮದ ಇತಿಹಾಸ ಹಾಗೂ ವಿಧಿಗಳನ್ನೆಲ್ಲ ಪ್ರಾಕೃತಿಕ ವಿಕಾಸದ ಸಹಜ ಸ್ತರಗಳಲ್ಲಿ ವರ್ಗೀಕರಿಸುವ ಪ್ರಯತ್ನ ನಡೆದಿದೆ. (ಕೆ.ಕೆ.)