ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಚೇತಸ

ವಿಕಿಸೋರ್ಸ್ದಿಂದ

ಪ್ರಚೇತಸ - ಪೃಥು ಚಕ್ರವರ್ತಿಯ ವಂಶಸ್ಥನಾದ ಪ್ರಾಚೀನ ಬರ್ಹಿ ಮತ್ತು ಶತದೃತಿಗಳ ಮಗ. ವೃಕ್ಷಗಳ ಕನ್ಯೆಯಾದ ಮಾರಿಷೆಯನ್ನು ಮದುವೆಯಾಗಿ ದಕ್ಷ ಪ್ರಜಾಪತಿಯನ್ನು ಪಡೆದ. ಇದು ಭಾರತ ಭಾಗವತಗಳಿಂದ ತಿಳಿದು ಬರುವ ವಿಷಯ. ಪ್ರಾಚೇತಸರು ಹನ್ನೊಂದು ಮಂದಿ. ಇವರು ಶಿವನನ್ನು ತಪಸ್ಸಿನಿಂದ ಮೆಚ್ಚಿಸಿ ಅವನಿಂದ ಪ್ರಜಾಧಿಪತ್ಯವನ್ನು ಬಯಸಿದರು. ಶಿವನಾದರೋ "ನಿಮಗೆ ಪ್ರಜಾಧಿಪತ್ಯ ದೊರೆಯಲಾರದು. ನಿಮ್ಮ ಪುತ್ರನಾದ ದಕ್ಷನಿಗೆ ಪ್ರಜಾಧಿಪತ್ಯ ದೊರೆಯುವುದು" ಎಂದು ಹೇಳಿ ಅದೃಶ್ಯನಾದ. ಇದಾದ ಅನಂತರ ಪ್ರಾಚೇತಸರು ಹಿಂದಿರುಗುವಾಗ ಲೋಕದಲ್ಲೆಲ್ಲ ಮರಗಳು ಬೆಳೆದುಕೊಂಡು, ಲೋಕವೇ ಅರಣ್ಯಮಯವಾಗಿತ್ತು. ಇದನ್ನು ಕಂಡು ಕ್ಷುದ್ರರಾದ ಪ್ರಾಚೇತಸರು ಮರಗಳನ್ನೆಲ್ಲ ಕಡಿಯತೊಡಗಿದರು. ಆಗ ವೃಕ್ಷಗಳು ಓಷಧೀಶನಾದ ಚಂದ್ರನಿಗೆ ಮೊರೆಯಿಟ್ಟುವು. ಚಂದ್ರ ಬಂದು ಪ್ರಾಚೇತಸರನ್ನು ಶಾಂತಗೊಳಿಸಿ ಅವರಿಗೆ ಅರಣ್ಯ ಮಂತ್ರಿಯಾದ ಮಾರಿಷೆಯನ್ನು ಕೊಟ್ಟು ವಿವಾಹ ಮಾಡಿಸಿದ.

ಅವರ ಮಗನಾದ ದಕ್ಷ ಪ್ರಜಾಪತಿಯಾದ. ಈ ವಿಷಯ ವಿಷ್ಣು ಪುರಾಣದಲ್ಲಿದೆ. (ಡಿ.ಎಚ್.)3