ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಜಾನಿರ್ದೇಶನ

ವಿಕಿಸೋರ್ಸ್ದಿಂದ

ಪ್ರಜಾನಿರ್ದೇಶನ - ಕಾನೂನಾಗಿ ಮಾಡಬೇಕಾಗಿರುವ ವಿಷಯವೊಂದಕ್ಕೆ ಸಂಬಂಧಿಸಿದಂತೆ ಮತದಾರರು ತಾವಾಗಿಯೇ ತಮ್ಮ ಇಚ್ಚೆಯನ್ನು ವ್ಯಕ್ತಪಡಿಸುವ ವಿಧಾನ (ಇನಿಷಿಯೆಟೀವ್), ವಿಧಾನ ಮಂಡಲದಿಂದ ಅಂಗೀಕೃತವಾದ ವಿಧೇಯಕಗಳನ್ನು ಜನಾಭಿಪ್ರಾಯಕ್ಕೆ ಒಪ್ಪಿಸಿದಾಗ ಜನರು ತಮ್ಮ ಅಭಿಮತವನ್ನು ವ್ಯಕ್ತಪಡಿಸುವುದನ್ನು ಪ್ರಜಾನಿರ್ಧಾರ (ರೆಫರೆಂಡಮ್) ಎಂದು ಕರೆಯಲಾಗುತ್ತದೆ (ನೋಡಿ- ಪ್ರಜಾನಿರ್ಧಾರ). ಆದರೆ, ಜನರು ತಮಗೆ ಯಾವ ಕಾನೂನುಗಳು ಬೇಕೆಂಬ ವಿಚಾರವಾಗಿ ಸೂಚನೆ ನೀಡಲು ಆದು ಅವರಿಗೆ ಅವಕಾಶ ಕೊಡುವುದಿಲ್ಲ. ವಿಧಾನಮಂಡಲ ಸ್ವೀಕರಿಸಿದ ಒಂದು ವಿಧೇಯಕಕ್ಕೆ ಮತದಾರ ಒಪ್ಪಿಗೆ ಇದೆಯೆ, ಇಲ್ಲವೆ ಎಂಬುದನ್ನು ಅರಿಯುವುದಷ್ಟೆ ಪ್ರಜಾನಿರ್ಧಾರದ ಉದ್ದೇಶ. ಪ್ರಜೆಗಳು ತಾವಾಗಿಯೇ ತಮಗೆ ಬೇಕಾದ ಕಾನೂನನ್ನು ಕುರಿತು ಅಭಿಪ್ರಾಯ ವ್ಯಕ್ತಪಡಿಸಲು, ತಮ್ಮ ಇಚ್ಚೆಯನ್ನು ತಿಳಿಸಲು ವಿಧಾನಮಂಡಲಕ್ಕೆ ನಿರ್ದೇಶನ ನೀಡಲು ಪ್ರಜಾನಿರ್ದೇಶನ ವ್ಯವಸ್ಥೇ ಅನುವು ಮಾಡಿಕೊಡುತ್ತದೆ. ಒಂದು ಹೊಸ ವಿಧೇಯಕವನ್ನು ಸೂಚಿಸಲು ಅಥವಾ ಆ ಬಗ್ಗೆ ಕಾನೂನು ಮಾಡಲು ಜನರು ಈ ಮೂಲಕ ಅಧಿಕಾರ ಪಡೆದಿರುತ್ತಾರೆ. ಸ್ವಿಟ್‍ಜರ್ಲೆಂಡಿನಲ್ಲಿ ಮತದಾರರಿಗೆ ಇಂಥ ಹಕ್ಕು ಇರುತ್ತದೆ.

ಪ್ರಜಾನಿರ್ದೇಶನದಲ್ಲಿ ಎರಡು ವಿಧ. ಒಂದು ನಿರ್ದಿಷ್ಟ, ಇನ್ನೊಂದು ಅನಿರ್ದಿಷ್ಟ. ಅದು ಎಲ್ಲ ಅಂಶಗಳಲ್ಲೂ ಪೂರ್ಣವಾಗಿದ್ದು, ಅದನ್ನು ಒಂದು ವಿಧೇಯಕದಂತೆ, ಪ್ರಜೆಗಳಿಂದ ಸೂಚಿತವಾಗಿ ಬಂದ ರೀತಿಯಲ್ಲೇ, ವಿಧಾನ ಮಂಡಲ ಅಂಗೀಕರಿಸಿದರೆ ಅದು ನಿರ್ದಿಷ್ಟ ಪ್ರಜಾನಿರ್ದೇಶನವೆನಿಸುತ್ತದೆ. ಪ್ರಜೆಗಳಿಂದ ಬಂದ ಸೂಚನೆ ನಿರ್ದಿಷ್ಟವಾಗಿಲ್ಲದಿದ್ದರೆ, ಖಚಿತವಾಗಿಲ್ಲದಿದ್ದರೆ ಅದು ಅನಿರ್ದಿಷ್ಟ ಪ್ರಜಾನಿರ್ದೇಶನ. ಆ ಸೂಚನೆಗೆ ಅನುಗುಣವಾಗಿ ಆಗ ವಿಧಾನಮಂಡಲವೇ ಒಂದು ವಿಧೇಯಕವನ್ನು ಸಿದ್ಧಪಡಿಸುತ್ತದೆ. ಅದನ್ನು ಕೂಲಂಕಷವಾಗಿ ಪರಿಶೀಲಿಸಿ, ಅಂಗೀಕರಿಸಿ ಪುನಃ ಪ್ರಜಾಭಿಪ್ರಾಯಕ್ಕೆ ಒಪ್ಪಿಸುತ್ತದೆ.

ಪ್ರಜಾನಿರ್ದೇಶನ ವ್ಯವಸ್ಥೆ ಸ್ವಿಟ್‍ಜರ್ûರ್ಲೆಂಡಿನ ಕೇಂದ್ರ ಹಾಗೂ ಜಿಲ್ಲೆಗಳಲ್ಲಿ ಆಚರಣೆಯಲ್ಲಿದೆ. ಸಂವಿಧಾನದ ತಿದ್ದುಪಡಿಯಾಗಬೇಕಾದರೆ ಅದಕ್ಕಾಗಿ ಐವತ್ತು ಸಾವಿರ ಮತದಾರರು ಸಹಿ ಮಾಡಿದ ಕೋರಿಕೆ ಸಲ್ಲಿಸಬೇಕು. ಆದರೆ, ಕೇಂದ್ರ ಸರ್ಕಾರದ ಸಾಮಾನ್ಯ ಅಧಿನಿಯಮಗಳಿಗೆ ಈ ವಿಧಾನ ಅನ್ವಯಿಸುವುದಿಲ್ಲ. ಜಿಲ್ಲೆಗಳಲ್ಲಿ ಸಂವಿಧಾನದ ತಿದ್ದುಪಡಿಗೂ ಸಾಮಾನ್ಯ ಅಧಿನಿಯಮಗಳಿಗೂ ಪ್ರಜಾನಿರ್ದೇಶನ ವಿಧಾನವನ್ನು ಬಳಸಬಹುದು. ಅಮೆರಿಕ ಸಂಯುಕ್ತ ಸಂಸ್ಥಾನದ ಕೆಲವು ರಾಜ್ಯಗಳಲ್ಲೂ ಸಂವಿಧಾನದ ತಿದ್ದುಪಡಿಗೆ ಈ ವಿಧಾನವನ್ನು ಅನುಸರಿಸುವುದುಂಟು.

ಪ್ರಜೆಗಳು ತಮಗೆ ಬೇಕಾದ ಕಾನೂನುಗಳನ್ನು ಮಾಡಲು ಪ್ರಜಾನಿರ್ಧಾರ ವಿಧಾನ ಅವಕಾಶ ನೀಡುವುದಿಲ್ಲ. ಆದರೆ, ಪ್ರಜಾನಿರ್ದೇಶನದಲ್ಲಿ ಕಾನೂನುಗಳನ್ನು ಮಾಡುವ ಸ್ಪಷ್ಟವಾದ ಹಕ್ಕು ಪ್ರಜೆಗಳಿಗೆ ದತ್ತವಾಗಿದೆ. ಇದರ ಮೂಲಕ ಜನರು ತಮ್ಮ ಇಚ್ಛೆಯನ್ನು ಪ್ರತ್ಯಕ್ಷವಾಗಿ ವ್ಯಕ್ತಪಡಿಸಬಹುದು. ಪ್ರಜೆಗಳಿಂದ ಚುನಾಯಿತರಾದ ಪ್ರತಿನಿಧಿಗಳು ಕಾನೂನುಗಳನ್ನು ಮಾಡುವಾಗ ಪ್ರಜೆಗಳ ಇಚ್ಛೆಯನ್ನು ಪ್ರತಿಬಿಂಬಿಸಲಾರರು. ತಾವೇ ಮಾಡಿದ ಕಾನೂನುಗಳಲ್ಲಿ ಪ್ರಜೆಗಳಿಗೆ ಒಂದು ಬಗೆಯ ಆತ್ಮತೃಪ್ತಿ ಆಗುವುದಲ್ಲದೆ ಅವರು ಆ ಕಾನೂನುಗಳಿಗೆ ವಿಧೇಯರಾಗಿಯೂ ಇರುತ್ತಾರೆಂದು ಹೇಳಲಾಗಿದೆ. ಆದರೆ, ಕಾನೂನು ಮಾಡುವ ಜವಾಬ್ದಾರಿಯನ್ನು ಶಾಸನಕರ್ತರಿಂದ ಕಸಿದುಕೊಂಡಾಗ ಅವರನ್ನು ತೃಣೀಕರಿಸಿದಂತಾಗುವುದು. ಪ್ರಜೆಗಳಿಂದಲೇ ಸೂಚಿತವಾದ ಕಾನೂನುಗಳಲ್ಲಿ ಅನೇಕ ದೋಷಗಳಿರುತ್ತವೆ. ಅವು ಶಿಥಿಲವಾಗಿರಬಹುದು, ಅಸ್ಪಷ್ಟವಾಗಿರಬಹುದು. ಕೆಲವು ವೇಳೆ ಕಾನೂನುಗಳು ಅಸಭ್ಯ ಪದಗಳಿಂದ ಕೂಡಿರಲೂಬಹುದು. ಎಲ್ಲಕ್ಕಿಂತ ಮಿಗಿಲಾಗಿ ಜನರಿಗೆ ಕಾನೂನು ರಚನೆಯ ಅನುಭವವಿರುವುದಿಲ್ಲ. ಆದ್ದರಿಂದ ಅವರಿಗೆ ಈ ವಿಚಾರದಲ್ಲಿ ಅವರಿಗೆ ನೇರ ಹಕ್ಕನ್ನು ನೀಡಬಾರದು ಎಂದು ವಾದಿಸಲಾಗಿದೆ. (ಎನ್.ಎಸ್.ಎಚ್.)