ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಜಾಪತಿ

ವಿಕಿಸೋರ್ಸ್ದಿಂದ

ಪ್ರಜಾಪತಿ - ಬ್ರಹ್ಮನಿಗೂ ತರುವಾಯ ಕಶ್ಯಪ, ಮರೀಚ, ಮತ್ತು ಕರ್ದವನು ಇವರುಗಳಿಗೂ ಈ ಹೆಸರು ಅನ್ವಯವಾಗುತ್ತದೆ. ಒಂದು ಸಲ ದೇವದಾನವ ಮಾನವರಾದಿಯಾಗಿ ಜಗತ್ತಿನ ಸಕಲ ವರ್ಗದವರೂ ಪ್ರಜಾಪತಿಯ ಬಳಿಗೆ ಹೋಗಿ ತಾವು ಬದುಕುವ ಮಾರ್ಗವನ್ನು ತಿಳಿಸಬೇಕೆಂದು ಬೇಡಿಕೊಂಡರು. ಆಗ ಪ್ರಜಾಪತಿ ದೇವತೆಗಳನ್ನು ಕುರಿತು ಯಜ್ಞವೇ ನಿಮಗೆ ಜೀವಸಾಧಾರಣವಾದ್ದರಿಂದ ಅದೇ ನಿಮಗೆ ಅನ್ನವಾಗಲಿ, ಅಮೃತಪಾನೀಯವಾಗಲಿ, ಸೂರ್ಯ ನಿಮಗೆ ಪ್ರಕಾಶವನ್ನು ಕೊಡಲಿ ಎಂದು ಹೇಳಿದ. ಇದನ್ನು ಕೇಳಿ ದೇವತೆಗಳಿಗೆ ತುಂಬ ಸಂತೋಷವಾಯಿತು. ಅನಂತರ ಮಾನವರು ಪ್ರಜಾಪತಿಯ ಮುಂದೆ ಬಂದು ತಾವು ಬದುಕುವ ಮಾರ್ಗವನ್ನು ತಿಳಿಸಬೇಕೆಂದು ಬೇಡಿಕೊಂಡರು. ಆಗ ಪ್ರಜಾಪತಿ ನೀವು ಬೆಳಗಿನ ಸಮಯದಲ್ಲಿ ಮತ್ತು ಸಾಯಂಕಾಲದಲ್ಲಿ - ಹೀಗೆ ಎರಡೂ ಸಲ ಮಾತ್ರ ಊಟ ಮಾಡಬೇಕು. ಅಗ್ನಿ ನಿಮಗೆ ಬೆಳಕು ಮತ್ತು ಶಾಖವನ್ನು ಕೊಡುತ್ತಾನೆ ಎಂದು ಹೇಳಿದ. ಅನಂತರ ಪ್ರಾಣಿಗಳೂ ಪ್ರಜಾಪತಿಯನ್ನು ಬೇಡಿಕೊಳ್ಳಲಾಗಿ ಆಹಾರ ಸೇವನೆಯ ಬಗ್ಗೆ ನಿಮಗಾವ ನಿರ್ಬಂಧವೂ ಇರುವುದಿಲ್ಲ. ನಿಮಗೆ ಬೇಕಾದಾಗ ಸಿಕ್ಕಿದ ಆಹಾರವನ್ನೇ ತಿನ್ನಬಹುದು. ಅದರಿಂದಲೇ ನಿಮಗೆ ಒಳ್ಳೆಯದಾಗುವುದು ಎಂದ. ಅನಂತರ ಅಸುರರು ಪ್ರಜಾಪತಿಯ ಎದುರು ಬಂದು ತಾವು ಬದುಕುವ ದಾರಿಯನ್ನು ತಿಳಿಸಬೇಕೆಂದು ಕೇಳಿಕೊಂಡರು. ಅವರ ತಾಮಸ ಪ್ರವೃತ್ತಿಯ ಪರಿಚಯವಿದ್ದ ಪ್ರಜಾಪತಿ ಅವರಿಗೆ ಅಹಂಕಾರ ಮತ್ತು ಮಾಯೆಯನ್ನು ಅನುಗ್ರಹಿಸಿದ. ಅಂದಿನಿಂದ ಅಸುರರು, ಅಹಂಕಾರಿಗಳು ಮತ್ತು ಮಾಯಾವಿಗಳೂ ಆದರು. ಅಲ್ಲಿಂದ ಮುಂದೆ ದೇವತೆಗಳೂ ಪಶುಗಳೂ ದಾನವರೂ ಪ್ರಜಾಪತಿಯ ಆಜ್ಞೆಯನ್ನು ತಪ್ಪದೆ ಪಾಲಿಸಿಕೊಂಡು ಬಂದರು. ಆದರೆ, ಮಾನವರು ಮಾತ್ರ ಪ್ರಜಾಪತಿಯ ಮಾತಿಗೆ ಕಿವಿಗೊಡಲಿಲ್ಲ, ಮನಸ್ಸಿಗೆ ಬಂದ ಹಾಗೆ ನಡೆಯುತ್ತ ಸಿಕ್ಕಾಪಟ್ಟೆ ತಿಂದು ಕುಡಿದು ನಿರ್ವೀರ್ಯರಾಗತೊಡಗಿದರು. (ಡಿ.ಕೆ.ಇ.)