ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಜಾಮತ

ವಿಕಿಸೋರ್ಸ್ದಿಂದ

ಪ್ರಜಾಮತ

	ಕನ್ನಡ ವಾರಪತ್ರಿಕೆ, 1931 ರಿಂದ ಪ್ರಕಟವಾಗುತ್ತಿದೆ. ಆಂಧ್ರ ರಾಜ್ಯದ ಚಿತ್ತೂರಿನ ಬೈಸಾನಿ ನರಸಿಂಹೇಶ್ವರ ಗುಪ್ತರು ಈ ಪತ್ರಿಕೆಯನ್ನು ಆರಂಭಿಸಿದರು. ಮದ್ರಾಸಿನ ಅನಿಬೆಸೆಂಟ್ ಪತ್ರಿಕೋದ್ಯಮ ಕಾಲೇಜಿನಲ್ಲಿ ಶಿಕ್ಷಣ ಪಡೆದು, ನ್ಯೂ ಇಂಡಿಯ ದಿನಪತ್ರಿಕೆ ಹಾಗೂ ಕಾಮನ್‍ವೀಲ್ ವಾರಪತ್ರಿಕೆಗಳ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು ಪತ್ರಿಕೋದ್ಯಮದಲ್ಲಿ ನುರಿತಿದ್ದ ಗುಪ್ತರಿಗೆ ಬೆಂಗಳೂರಿನಲ್ಲಿ ಪತ್ರಿಕೆಯನ್ನು ಪ್ರಾರಂಭಿಸುವ ಬಯಕೆ ಇತ್ತು. ಎಚ್.ಕೆ. ವೀರಣ್ಣಗೌಡ, ಕೆ. ಚಂಗಲರಾಯರೆಡ್ಡಿ ಮೊದಲಾದವರ ಜೊತೆಗೆ ಪ್ರಜಾಪಕ್ಷದ ಸದಸ್ಯರಾಗಿದ್ದ ಗುಪ್ತರು ಸ್ವಾತಂತ್ರ್ಯ ಹೋರಾಟಕ್ಕೆ ಉತ್ತೇಜನ ನೀಡುವ ಪತ್ರಿಕೆ ಹೊರಡಿಸಲು ಅರ್ಜಿ ಹಾಕಿದರು. ಈ ಪತ್ರಿಕೆಯ ಉದ್ದೇಶ ಸ್ವಾತಂತ್ರ್ಯ ಚಳವಳಿ ಎಂದು ಅರಿತ ಮಿರ್ಜಾ ಇಸ್ಮಾಯಿಲ್ ಇದಕ್ಕೆ ಅನುಮತಿ ಕೊಡಲಿಲ್ಲ. ಧೃತಿಗೆಡದ ಗುಪ್ತರು ಮದ್ರಾಸಿಗೆ ತೆರಳಿ 1931 ರ ಆಗಸ್ಟ್ 15 ರಂದು ಈ ವಾರಪತ್ರಿಕೆಯ ಮೊದಲ ಸಂಚಿಕೆ ಪ್ರಕಟಿಸಿದರು. ಮುಂದೆ 1933 ರಲ್ಲಿ ಮಿರ್ಜಾರಿಂದ ಒಪ್ಪಿಗೆ ದೊರೆತು ಪ್ರಜಾಮತ ಬೆಂಗಳೂರಿನಿಂದ ಪ್ರಕಟವಾಗತೊಡಗಿತು. ಬೆಂಗಳೂರಿನಲ್ಲಿ ಕಾಂಗ್ರೆಸ್ಸಿನ ಸ್ಥಾಪನೆಗೆ ಗುಪ್ತರು ಮಾಡುತ್ತಿದ್ದ ಪ್ರಯತ್ನಗಳಿಗೆ ಪ್ರಜಾಮತ ಬೆಂಬಲವಾಯಿತು. ರಾಜಕೀಯ ಸುದ್ದಿಗಳೂ ಜನತೆಯ ಆಶೋತ್ತರಗಳಿಗೆ ಅನುಗುಣವಾದ ಲೇಖನಗಳೂ ಇದರಲ್ಲಿರುತ್ತಿದ್ದುದರಿಂದ ಇದರ ಪ್ರಸಾರ ಸುಮಾರು 10 ರಿಂದ 12 ಸಾವಿರ ಇತ್ತು. ಪತ್ರಿಕೆಯ ರಾಜಕೀಯ ಚಟುವಟಿಕೆಯನ್ನು ತಡೆಗಟ್ಟಲು ಗುಪ್ತರು ಮೈಸೂರಿನವರಲ್ಲವೆಂಬ ನೆಪದಿಂದ 24 ಗಂಟೆಯೊಳಗೆ ಮೈಸೂರು ಸಂಸ್ಥಾನವನ್ನು ಬಿಡುವಂತೆ ಸರ್ಕಾರ ಆದೇಶ ನೀಡಿತು. ಆಗ ಗುಪ್ತರು ಹರ್ಡೀಕರರ ಸಹಾಯದಿಂದ ಪತ್ರಿಕೆಯನ್ನು ಹುಬ್ಬಳ್ಳಿಯಿಂದ ಪ್ರಕಟಿಸಲಾರಂಭಿಸಿದರು. ಆದರೂ ಪತ್ರಿಕೆಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದೆಂಬ ಭಯವಿದ್ದುದರಿಂದ ಆಗಿನ ಮೈಸೂರು ಸಂಸ್ಥಾನಕ್ಕೆ ರವಾನೆಯಾಗುತ್ತಿದ್ದ ಪತ್ರಿಕೆಗಳ ಮೇಲೆ ಪ್ರಜಾಮಿತ್ರ ಎಂಬ ಹೆಸರು ಅಚ್ಚಾಗುತ್ತಿತ್ತು. ಆ ಹೆಸರಿನ ಪತ್ರಿಕೆಗೂ ಸರ್ಕಾರ ಬಹಿಷ್ಕಾರ ಹಾಕಿತು. 1938 ರಲ್ಲಿ ಮೈಸೂರು ಸರ್ಕಾರದ ಆಹ್ವಾನದ ಮೇಲೆ ಗುಪ್ತರು ಮತ್ತೆ ಬೆಂಗಳೂರಿಗೆ ಬಂದು ತಮ್ಮ ನೇತೃತ್ವದಲ್ಲಿ ಪತ್ರಿಕೆಯನ್ನು 1948 ರ ವರೆಗೆ ನಡೆಸಿಕೊಂಡು ಬಂದರು. ಮುಂಬಯಿಯ ಕೈಗಾರಿಕೋದ್ಯಮಿ ಬಿ.ಎಂ.ಶ್ರೀನಿವಾಸಯ್ಯ ಈ ಪತ್ರಿಕೆಯನ್ನು 1948 ರಲ್ಲಿ ಕೊಂಡು ಎಂ.ಎಸ್. ಗುರುಪಾದಸ್ವಾಮಿಯವರನ್ನು ಸಂಪಾದಕರಾಗಿ ನೇಮಿಸಿದರು. ಇವರು ಐದು ವರ್ಷಗಳ ಕಾಲ ಸಂಪಾದಕರಾಗಿದ್ದರು. 1953 ರ ಸೆಪ್ಟಂಬರ್ 15 ರಲ್ಲಿ ಬಿ.ಎಂ. ಶ್ರೀನಿವಾಸಯ್ಯನವರು ನಿಧನರಾದ ಮೇಲೆ ಅವರ ಮಗ ಬಿ.ಎಸ್.ನಾರಾಯಣ ಅವರ ಒಡೆತನದಲ್ಲಿ ಪತ್ರಿಕೆ ಮುಂದುವರೆಯಿತು. ಗುರುಪಾದಸ್ವಾಮಿಯವರ ಅನಂತರ 1953 ರಿಂದ ಒಂದು ವರ್ಷ ಕಾಲ ಜನವಾಣಿ ಸಂಪಾದಕ ನರಸಿಂಹ ಸೋಮಯಾಜಿಯವರೇ ಪ್ರಜಾಮತದ ಸಂಪಾದಕರಾಗಿದ್ದರು. ಅನಂತರ ಸ್ವಲ್ಪ ಕಾಲ ಕಳಸ ಸತ್ಯನಾರಾಯಣರು ಸಂಪಾದಕರಾಗಿದ್ದರು. ಆಮೇಲೆ ಸಿದ್ದಪ್ಪನವರು ಸಂಪಾದಕರಾದರು. ಇವರು ಪ್ರಜಾಮತವನ್ನು ಸುಧಾರಿಸಿದರು. ಸುದ್ದಿಯ ಜೊತೆಗೆ ಛಾಯಾಚಿತ್ರಗಳೂ ಪ್ರಕಟವಾಗಲಾರಂಭವಾಯಿತು. ಪತ್ರಿಕೆ ಸಚಿತ್ರವಾಯಿತು. ಧಾರಾವಾಹಿ ಕಾದಂಬರಿ ವಿಭಾಗ ಕಾಣಿಸಿಕೊಂಡಿತು. ಈ ಕಾಲದಲ್ಲಿ ನಾಡಿಗೇರ ಕೃಷ್ಣರಾಯ, ಹ. ವೆಂ. ನಾಗರಾಜರಾವ್, ಕುಮಾರ ವೆಂಕಣ್ಣ-ಇವರು ಸಂಪಾದಕ ಮಂಡಳಿಗೆ ಸೇರಿದರು. ಕೇಳಿದ ಕಥೆ, ಸಮಾಜ ದರ್ಶನ ಇತ್ಯಾದಿ ಸ್ಥಿರ ಶೀರ್ಷಿಕೆಗಳು ಜನಪ್ರಿಯವಾದವು. ದೀಪಾವಳಿ ವಿಶೇಷಾಂಕಗಳು ಆಕರ್ಷಕವಾಗಿ ಹೊರಬರತೊಡಗಿದವು. 1958 ರಲ್ಲಿ ಪ್ರಜಾಮತವನ್ನು ಟಿ. ಸಿದ್ದಪ್ಪನವರು ಬಿಟ್ಟ ಮೇಲೆ ಕೈಗಾರಿಕೋದ್ಯಮಿ ಕೆ. ಲಕ್ಷ್ಮಯ್ಯನವರೇ ಸಂಪಾದಕತ್ವ ವಹಿಸಿಕೊಂಡರು. ಇವರ ಕಾಲದಲ್ಲಿ ತಿ.ತಾ. ಶರ್ಮಾ, ಶ್ರೀರಂಗ, ವಿ.ಸೀತಾರಾಮಯ್ಯ, ಡಿ.ವಿ. ಗುಂಡಪ್ಪ, ಮುಂತಾದ ಹಿರಿಯ ಪತ್ರಿಕೋದ್ಯಮಿಗಳು ಈ ಪತ್ರಿಕೆಗೆ ವಿಶೇಷ ಲೇಖನಗಳನ್ನು ಬರೆಯುತ್ತಿದ್ದರು. ವ್ಯವಸ್ಥಾಪಕ ಸಂಪಾದಕರಾಗಿದ್ದ ಕೆ.ಸಿದ್ದರಾಮಣ್ಣನವರೂ ಸ್ವಲ್ಪ ಕಾಲ ಪತ್ರಿಕೆಯ ಸಂಪಾದಕರಾಗಿದ್ದರು. ಇವರ ನಿಧನಾನಂತರ ಉಪಸಂಪಾದಕರಾಗಿದ್ದ ಹ.ವೆಂ. ನಾಗರಾಜರಾವ್ ಸಂಪಾದಕರಾದರು. ಇವರ ಕಾಲದಲ್ಲಿ ಪ್ರಜಾಮತ ಮತ್ತೊಮ್ಮೆ ರೂಪಪರಿವರ್ತನೆಗೊಳಗಾಯಿತು. 1969 ರಲ್ಲಿ ಈ ಪತ್ರಿಕೆಗೆ ಫೋಟೋ ಆಫ್‍ಸೆಟ್ ಮುದ್ರಣ ಸೌಲಭ್ಯ ದೊರೆಯಿತು. ವರ್ಣರಂಜಿತ ಮುಖಪುಟ ಅಚ್ಚುಮಾಡುವ ಅನುಕೂಲ ದೊರೆಯಿತು. ಆಕಾರ ಚಿಕ್ಕದಾಗಿ ಪುಟಗಳ ಸಂಖ್ಯೆ ಹೆಚ್ಚಾಗಿ ಫೋಟೋಗಳ ಆಕರ್ಷಕ ಮುದ್ರಣ ವರ್ಣಚಿತ್ರಗಳ ಪ್ರವೇಶಗಳಿಂದ ರೂಪವಾಣಿ ವಿಭಾಗ, ಕುಣಿಯೋಣ ಬಾರಾ, ಸುದ್ದಿಚಿತ್ರಗಳು ಮತ್ತು ಇತರ ಜನಪ್ರಿಯ ಸ್ಥಿರ ಶೀರ್ಷಿಕೆಗಳಿಂದ ಪತ್ರಿಕೆ ಬಹು ಜನಪ್ರಿಯವಾಯಿತು. ಕನ್ನಡದ ಕಾದಂಬರಿಗಾರ ಮ. ನ. ಮೂರ್ತಿಯವರು ಈ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿದ್ದರು. 'ಪ್ರಜಾಮತ ಪ್ರಕಟವಾಯಿತು. ಆಂಧ್ರದಲ್ಲಿ ಜನಪ್ರೀಯತೆ ಪಡೆದಿತ್ತು. ಆದರೆ ಅಲ್ಪಾಯುಷ್ಯ. ಇತ್ತೀಚೆಗೆ ಈ ಪತ್ರಿಕೆ ನಿಂತು ಹೋಗಿದೆ.										(ಎಸ್.ಎಸ್.ಎಂ.ಯು.)