ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಜಾವಾಣಿ

ವಿಕಿಸೋರ್ಸ್ದಿಂದ

ಪ್ರಜಾವಾಣಿ ನಾಡಿಗೆ ಸ್ವತಂತ್ರ ಬಂದ ಮೇಲೆ ಆರಂಭವಾದ ಕೂಡು ಬಂಡವಾಳದ ವೃತ್ತಪತ್ರಿಕಾ ಪ್ರಕಾಶನ ಸಂಸ್ಥೆಗಳಲ್ಲಿ `ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ ಗಮನಾರ್ಹವಾದುದು. ಉದ್ಯಮಿ ಕೆ.ಎನ್.ಗುರುಸ್ವಾಮಿ ನೇತೃತ್ವದಲ್ಲಿ ರೂಪುಗೊಂಡ ಈ ಸಂಸ್ಥೆ ಮೊದಲು ಡೆಕ್ಕನ್ ಹೆರಾಲ್ಡ್ ದೈನಿಕವನ್ನು (1948, ಜೂನ್ 17) ಮತು ನಾಲ್ಕು ತಿಂಗಳ ನಂತರ 1948ರ ಅಕ್ಟೋಬರ್ 15ರಂದು ಪ್ರಜಾವಾಣಿ ಕನ್ನಡ ದೈನಿಕವನ್ನು ಪ್ರಕಟಿಸಿತು. ಈ ಎರಡು ದೈನಿಕಗಳು ಕರ್ನಾಟಕದ ಪತ್ರಿಕೋದ್ಯಮದಲ್ಲಿ ಇತಿಹಾಸದಲ್ಲಿ ಎದ್ದು ಕಾಣುವ ಘಟನೆ.

ಪ್ರಜಾವಾಣಿಯ ಮೊದಲ ಸಂಪಾದಕರು; ಬಿ.ಪುಟ್ಟಸ್ವಾಮಯ್ಯ ಅವರ ನಂತರ ಸಂಸ್ಥೆಯ ಜನರಲ್ ಮ್ಯಾನೇಜರ್ ಸಿ.ಜಿ.ಕೆ. ರೆಡಿ ಕೆಲಕಾಲ ಸಂಪಾದಕರಾಗಿದ್ದರು. ಟಿ.ಎಸ್. ರಾಮಚಂದ್ರರಾವ್ ಸಂಪಾದಕರಾಗಿ 27 ವರ್ಷಕಾಲ ಸಮರ್ಥವಾಗಿ ಪತ್ರಿಕೆಯನ್ನು ಮುನ್ನಡೆಸಿದರು. ಇವರು ಬರೆಯುತ್ತಿದ್ದ `ಛೂಬಾಣ' ಅಂಕಣ ಜನಪ್ರಿಯವಾಗಿತ್ತು. ತಿಳಿಹಾಸ್ಯದಲ್ಲಿ ಚುಚ್ಚುಮಾತಿನಲ್ಲಿ ರಾಜ್ಯದ ರಾಜಕೀಯ, ಸಾಮಾಜಿಕ ಆಗುಹೋಗುಗಳಿಗೆ ಟೀಕೆ ಟಿಪ್ಪಣೆಗಳನ್ನು ಛೂಬಾಣ ಒದಗಿಸುತ್ತಿತ್ತು.

ಸುದ್ದಿಮನೆಗೆ ಸುದ್ದಿ ಸರಬರಾಜು ಮಾಡುವ ಟೆಲಿಪ್ರಿಂಟರ್ ಯಂತ್ರಕ್ಕೆ ಅಂಟಿಕೊಂಡಿತ್ತು, ಅಂದಿನ ಪತ್ರಿಕೋದ್ಯಮ. ಸ್ವಾತಂತ್ರ್ಯ ಬಂದ ಮೇಲೂ ಹೋರಾಟದ ಗುಂಗಿನಲ್ಲಿಯೇ ಇದ್ದ ಪತ್ರಿಕೆಗಳು ಮುಂದಿನ ಹಾದಿಯಾವುದೆನ್ನುವ ಸ್ಪಷ್ಟ ಕಲ್ಪನೆ ಇಲ್ಲದೆ ತೊಳಲಾಡುತ್ತಿದ್ದವು. ಈ ಸಂದರ್ಭದಲ್ಲಿ ಹುಟ್ಟಿದ ಪ್ರಜಾವಾಣಿ ಜನರ ಆಶೋತ್ತರಗಳಿಗೆ ಸ್ಪಂದಿಸಿ ಜನವಾಣಿಯಾಗಿ ಮೆರೆಯಿತು. ಅಠಾರ ಕಛೇರಿ-ವಿಧಾನಸೌಧದ ಆಳರಸರು, ಅಧಿಕಾರಿಗಳು ಮಾತ್ರ ಸುದ್ದಿಯಾಗಲಿಲ್ಲ. ವಿಧಾನಸೌಧದ ಲಿಫ್ಟ್ ಚಾಲಕನೂ ಸುದ್ದಿಯಾದ, ಮುಂಜಾನೆ ಬಿದಿಯಲ್ಲಿ ಚಿಂದಿ ಆಯುವ ಪೊರನೂ ಸುದ್ದಿಗೆ ಮೂಲವಾದ, ಪಟ್ಟಣಿಗರ, ಗ್ರಾಮೀಣ ಜನತೆಯನ್ನೂ ಕಾಡುವ ಸಮಸ್ಯೆಗಳೆಲ್ಲಾ ಪತ್ರಿಕೆಗೆ ಗ್ರಾಸವಾದುವು. ದನಿಯಿಲ್ಲದವರ ದನಿಯಾಯಿತು ಪ್ರಜಾವಾಣಿ. ಜನರಿಗೆ ಲೋಕವಿಚಾರವನ್ನು ಸರಳವಾಗಿ ತಿಳಿಸಿ ಅದರ ಹಿನ್ನಲೆ ಪರಿಣಾಮಗಳ ಬಗೆಗೆ ಮಾಹಿತಿ ನಿಡಿ ಅವರ ವಿಚಾರ ಶಕ್ತಿ ಬೆಳೆಸುವುದಕ್ಕೆ ಪ್ರಜಾವಾಣಿ ಆದ್ಯತೆ ನಿಡಿತು. ಅದಕ್ಕೆ ಪೂರಕವಾಗಿ ಹಲವಾರು ಅಂಕಣಗಳು, ಪ್ರಜಾವಾಣಿಯ ವಾಚಕರ ವಾಣಿ ಇಂದಿಗೂ ಅತ್ಯಂತ ಪ್ರಭಾವಶಾಲಿ.

ಲವಲವಿಕೆಯಿಂದ ಕೂಡಿದ ವರದಿಗಾರಿಕೆ, `ಸದನ ಸಮೀಕ್ಷೆ, ಅಂಕಣ, ಶಾಸನ ಸಭಾ ಕಾರ್ಯಕಲಾಪಗಳು ಸಿಂಹಾವಲೋಕನ, ಓದುಗರ ಆಸಕ್ತಿಯಿಂದ ಎದುರು ನೋಡುತ್ತಿದ್ದ ಅಂಕಣ, ಮುಖ್ಯ ವರದಿಗಾರ ಎಸ್ ವಿ ಜಯಶೀಲರಾವ್ ಬರಹ. ಆನಂತರದ ದಿನಗಳಲ್ಲಿ ರಘುರಾಂ ಶೆಟ್ಟಿ, ಪಿ.ಕೆ.ಜಾಗೀರ್‍ದಾರ್, ಶ್ರೀಧರಆಚಾರ್, ಅರ್ಜುನ್‍ದೇವ್, ಆರ್.ಪಿ. ಜಗದಿಶ್ ಅಂಕಣಗಳನ್ನು ಬರೆದಿದ್ದಾರೆ.

ಕ್ರೀಡೆಗಳಿಗೆ ಪೂರ್ಣ ಒಂದು ಪುಟ ಮೀಸಲು. ಕನ್ನಡದಲ್ಲಿ ಪ್ರಥಮ. ಕ್ರೀಡಾಪುಟದ ಸಂಪಾದಕ. ಎಚ್.ಎಸ್. ಸೂರ್ಯನಾರಾಯಣ-(ಸೂರಿ) ವರದಿ, ವಿಮರ್ಶೆಗಳು ಕ್ರೀಡಾಲೋಕದಲ್ಲಿ ಮಾನ್ಯ. ಜಿಲ್ಲಾ ಸುದ್ದಿಗಳನ್ನು ಒಪ್ಪ ಓರಣ ಮಾಡಿ ಪ್ರಕಟಣೆಗೆ ಪ್ರತ್ಯೇಕ ತಂಡ. ಅಂತೆಯೇ ವಾಣಿಜ್ಯ ಸುದ್ದಿಗೂ ವ್ಯವಸ್ಥೆ.

ಭಾನುವಾರದ ಸಂಚಿಕೆ. ಪ್ರತ್ಯೇಕ ವಾರಪ್ರತಿಕೆಯ ಕೊರತೆ ನಿವಾರಿಸುವ ವಿಭಾಗ. ಮೊದಲು ನಾಲ್ಕು ಅನಂತರ ಆರು ಪುಟಗಳು. ಸಾಹಿತ್ಯ, ವಿಜ್ಞಾನ, ಧರ್ಮ, ರಾಜಕಾರಣ, ಶಿಕ್ಷಣ, ಮನರಂಜನೆ, ಜನಜೀವನಕ್ಕೆ ಸಂಬಂಧಪಟ್ಟ ಎಲ್ಲ ವಿಚಾರಗಳ ಸಮಗ್ರ ಚಿಂತನೆ, ಸಾಪ್ತಾಹಿಕ ಪುರವಣಿ, ಹಿರಿಯ ಸಾಹಿತಿಗಳನ್ನು ಪುರಸ್ಕರಿಸಿತು. ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡಿತು. ನವೋದಯ ಪಂಥ ಚಳುವಳಿಯಿಂದ ಬಂಡಾಯ ಸಾಹಿತ್ಯ ಚಳುವಳಿಯವರೆಗೆ ಸಾಹಿತ್ಯ ಚಳವಳಿಯ ವೇದಿಕೆಯಾಗಿ `ಸಾಪ್ತಾಹಿಕ ಪುರವಣಿ ಅಗ್ರಸ್ಥಾನ ವಹಿಸಿತು. ಸಾಪ್ತಾಹಿಕ ಪುರವಣಿ ಮುಖ್ಯಸ್ಥರಾಗಿ ಗಂಗಾಧರ ಮೊದಲಿಯಾರ್ ಅವರು ಆರಂಭಿಸಿದ `ಸಾಹಿತ್ಯ ಸಂವಾದ ಚರ್ಚಾ ವೇದಿಕೆ, ಆಧುನಿಕ ಸಾಹಿತ್ಯದ ಮಹತ್ವದ ಚರ್ಚೆಗೆ ವೇದಿಕೆಯಾಗಿತ್ತು. ನೆರೆ ನಾಡಿನಲ್ಲಿರುವ ಹಾಗೂ ಅನಿವಾಸಿ ಕನ್ನಡಿಗರ ಒತ್ತಾಯದ ಮೇಲೆ, ಭಾನುವಾರದ ಸಂಚಿಕೆಯನ್ನು, ಅಂಚೆಯಲ್ಲಿ ಪೂರೈಸಲು ಚಂದಾ ವ್ಯವಸ್ಥೆ ಮಾಡಿದ್ದು ಪ್ರಜಾವಾಣಿ ವೈಶಿಷ್ಟ್ಯ. ಸಾಪ್ತಾಹಿಕ ಪುರವಣಿಯ ವಿಭಾಗದ ಆರಂಭದ ಸಂಪಾದಕರು ಎಂ.ಬಿ.ಸಿಂಗ್. ಇವರು ಮೊಟ್ಟಮೊದಲ ಸಿನಿಮಾ ಪತ್ರಕರ್ತರು ಕೂಡ.

ಪ್ರಜಾವಣಿ ದೀಪಾವಳಿ ಸಂಚಿಕೆಗಳು, ಸಾಹಿತ್ಯ ಸಂಚಿಕೆಗಳ ವೈಶಿಷ್ಟ್ಯಪೂರ್ಣವಾಗಿದ್ದುವು. ಇಂದಿನ ಹಲವು ಪ್ರಸಿದ್ಧ ಕತೆಗಾರರು ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ ಮೂಲಕ ಬೆಳಕಿಗೆ ಬಂದವರು. ದೀಪಾವಳಿ ಸಂಚಿಕೆಯ ಜೊತೆಗೆ ಉಪಯುಕ್ತ ಮಾಹಿತಿ ನಿಡುವ ಪುಸ್ತಕಗಳನ್ನು ಉಚಿತವಾಗಿ ನಿಡುವ ಸಂಪ್ರದಾಯ ಆರಂಭಿಸಿದ್ದು ಪ್ರಜಾವಾಣಿ ಹೆಗ್ಗಳಿಕೆ. ಇಂತಹ ಹಲವಾರು ಪ್ರಥಮಗಳಿಗೆ ಪ್ರೇರಕ ಶಕ್ತಿ ಟಿ.ಎಸ್.ರಾಮಚಂದ್ರರಾವ್. ಅವರ ಯೋಜನೆಗಳಿಗೆ ಒತ್ತಾಸೆಯಾಗಿ ನಿಂತದ್ದು ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್‍ನ ಅಧ್ಯಕ್ಷ ಕೆ ಎನ್ ಗುರುಸ್ವಾಮಿ ಅವರ ವೈಯಕ್ತಿಕ ಆಸಕ್ತಿ ಹಾಗೂ ಅವರು ನಿಡಿದ ಆರ್ಥಿಕ ಬೆಂಬಲ ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದ ಕೆ ಎನ್ ನೆಟ್ಟಕಲ್ಲಪ್ಪ ಅವರ ವ್ಯವಹಾರದ ಕೌಶಲ.

ಕನ್ನಡ ಪತ್ರಿಕೋದ್ಯಮದಲ್ಲಿ `ಪ್ರಜಾವಾಣಿಯನ್ನು ಹೊಸ ಎತ್ತರಕ್ಕೆ ಮುಟ್ಟಿಸಿದ ಟಿ ಎಸ್ ರಾಮಚಂದ್ರರಾಯರು (ನಿಧನ : 11.04.1977) ನಿಧನರಾದ ಮೇಲೆ ಸುದ್ದಿ ಸಂಪಾದಕರಾಗಿದ್ದ ವೈ ಎನ್ ಕೃಷ್ಣಮೂರ್ತಿ (ನೋಡಿ) ಸಂಪಾದಕರಾದರು. ಪ್ರಜಾವಾಣಿ ಸಾಪ್ತಾಹಿಕದಲ್ಲಿದ್ದು ನಂತರ ಸುಧಾ, ಮಯೂರ ಸಂಪಾದಕರಾಗಿದ್ದ ಎಂ. ಬಿ. ಸಿಂಗ್, ಪ್ರಜಾವಾಣಿಗೂ 1980ರಲ್ಲಿ ಸಂಪಾದಕರಾದರು. ಅನಂತರ ಪ್ರಿಂಟರ್ಸ್ ಲಮಿಟೆಡ್‍ನ ಮ್ಯಾನೆಜಿಂಗ್ ಡೈರೆಕ್ಟರಾದ ಕೆ ಎನ್ ಹರಿಕುಮಾರ್ ಪ್ರಜಾವಾಣಿಯಲ್ಲದೆ ಸಂಸ್ಥೆಯ ಇತರ ಪ್ರಕಟಣೆಗಳಾದ `ಸುಧಾ, `ಮಯೂರ, `ಡೆಕ್ಕನ್ ಹೆರಾಲ್ಡ್` ಪತ್ರಿಕೆಗಳಿಗೆ ಸಂಪಾದಕರಾದರು. ಈಗಿನ ಸಂಪಾದಕರು ಕೆ ಎನ್ ಶಾಂತಕುಮಾರ್

ಮುದ್ರಣ ಕ್ಷೇತ್ರಕ್ಕೆ `ಪ್ರಜಾವಾಣಿ ಕೊಡುಗೆ ಮಹತ್ವದ್ದು. ಸಾಲಕ್ಷರ ಜೋಡಣೆ (ಲೈನೋ ಟೈಪ್) ಮತ್ತು ಗಣಕ ಯಂತ್ರ ಬಳಸಿ ಅಕ್ಷರ ಜೋಡಣೆಗೆ ಅಗತ್ಯವಾದ ಕೀಲಿಮಣೆ ಹಾಗೂ ಅಕ್ಷರ ಶೈಲಿಗಳನ್ನು ರೂಪಿಸಿ, ಬಳಕೆಗೆ ತಂದಿತು. ಮುದ್ರಣ ವಿನ್ಯಾಸಕ್ಕಾಗಿ ಪ್ರಜಾವಾಣಿ ಒಂಬತ್ತು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ. ಇತ್ತೀಚೆಗೆ ಪ್ರತಿದಿನವೂ ಒಂದೊಂದು ವಿಶೇಷ ಪುರವಣಿಗಳನ್ನು `ಪ್ರಜಾವಾಣಿ ನೀಡುತ್ತಿದೆ. ಬೆಂಗಳೂರಿಗೇ ಸೀಮಿತವಾದ `ಮೆಟ್ರೊ ಪುರವಣಿ ಕುಡ ನೀಡಲಾಗುತ್ತಿದೆ. ಆಧುನಿಕ ತಂತ್ರಜ್ಞಾನ, ವೃತ್ತಿಪರರಿಂದ ರೂಪಿಸಿದ ಹೊಸ ವಿನ್ಯಾಸಕ್ಕೂ `ಪ್ರಜಾವಾಣಿ ಇತ್ತೀಚಿನ ದಿನಗಳಲ್ಲಿ ಮುಂದಾಗಿದೆ. ಬೆಂಗಳೂರು ಕೇಂದ್ರವೇ ಅಲ್ಲದೆ, ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗ, ಮಂಗಳೂರು ದಾವಣಗೆರೆ ಕೇಂದ್ರಗಳಿಂದಲೂ ಪ್ರಜಾವಾಣಿ ಆವೃತ್ತಿ ಈಗ ಪ್ರಕಟವಾಗುತ್ತಿದೆ. (ಗಂಗಾಧರ ಮೊದಲಿಯಾರ್)