ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತಾಪರುದ್ರದೇವ

ವಿಕಿಸೋರ್ಸ್ದಿಂದ

ಪ್ರತಾಪರುದ್ರದೇವ ಒರಿಸ್ಸದ ಒಬ್ಬ ದೊರೆ. ಸೂರ್ಯವಂಶದ ಪುರುಷೋತ್ತಮ ದೇವನ ಮಗ. 1497ರಲ್ಲಿ ಪಟ್ಟಕ್ಕೆ ಬಂದ. ಇವನು ಸಿಂಹಾಸನವನ್ನೇರಿದಾಗ ಒರಿಸ್ಸ ರಾಜ್ಯ ಉತ್ತರದಲ್ಲಿ ಗಂಗಾ ನದಿಯಿಂದ ದಕ್ಷಿಣದಲ್ಲಿ ಉದಯಗಿರಿ ಮತ್ತು ಗುಂಟೂರಿನವರೆಗೂ ಹಬ್ಬಿತ್ತು. ಪ್ರತಾಪರುದ್ರದೇವ ಹೆಚ್ಚು ಪ್ರಬಲನಾಗಲು ಆಗಿನ ರಾಜಕೀಯ ಪರಿಸ್ಥಿತಿ ಅನುಕೂಲವಾಗಿತ್ತು. ಬಹಮನಿ ರಾಜ್ಯ ಒಡೆದು 5 ಸ್ವತಂತ್ರ ರಾಜ್ಯಗಳಿಗೆ ಎಡೆಕೊಟ್ಟಿತ್ತು. ವಿಜಯನಗರವೂ ಆಂತರಿಕ ಕಲಹಗಳಿಂದಾಗಿ ದುರ್ಬಲವಾಗಿತ್ತು. ಇಂಥ ಸಮಯದಲ್ಲಿ ಪ್ರತಾಪರುದ್ರ ತನ್ನ ಶತ್ರು ರಾಜ್ಯಗಳ ಮೇಲೆ ದಾಳಿ ಮಾಡಬಹುದಿತ್ತು. ಆದರೆ ಅವನಿಗೆ ಇದು ಬೇಡದ ಕೆಲಸವಾಗಿತ್ತು.

ಅಲ್ಲದೆ ಇಂಥ ಅನುಕೂಲಕರವಾದ ರಾಜಕೀಯ ಪರಿಸ್ಥಿತಿ ಬಹಳ ದಿನಗಳವರೆಗೆ ಮುಂದುವರಿಯಲಿಲ್ಲ. 1510ರ ವೇಳೆಗೆ ಪ್ರತಾಪರುದ್ರ ಅನೇಕ ಗಂಡಾಂತರಗಳನ್ನು ಎದುರಿಸಬೇಕಾಗಿ ಬಂತು. ವಿಜಯನಗರದ ಇತಿಹಾಸದಲ್ಲಿ ಆತ್ಯಂತ ಪ್ರಸಿದ್ಧನಾಗಿರುವ ತುಳುವ ಸಂತತಿಯ ಕೃಷ್ಣದೇವರಾಯ 1509ರಲ್ಲಿ ಪಟ್ಟಕ್ಕೆ ಗೋಲ್ಕೊಂಡದ ಕುಲಿ ಕುತ್ಬ್ ಶಾಹ ಬಹಮನಿ ಸುಲ್ತಾನನಿಂದ ಸ್ವತಂತ್ರವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ಸುತ್ತಮುತ್ತಣ ಪ್ರದೇಶಗಳನ್ನು ಗೆದ್ದುಕೊಳ್ಳಲು ಹವಣಿಸುತ್ತಿದ್ದ. ಒರಿಸ್ಸದ ಉತ್ತರದಲ್ಲಿ ಕೂಡ ಬಂಗಾಲದ ಸುಲಾಹುಸೇನ್ ಶಾಹ ಪ್ರಬಲನಾಗಿ ನೆರೆ ರಾಜ್ಯಗಳ ಮೇಲೆ ಬೀಳಲು ಹೊಂಚುಹಾಕುತ್ತಿದ್ದ. ಇವರೆಲ್ಲರೂ ಒರಿಸ್ಸದ ಮೇಲೆ ತಮ್ಮ ದೃಷ್ಟಿಗಳನ್ನು ಹರಿಸಿದ.

ಇವರ ಪೈಕಿ ಬಂಗಾಲದ ಸುಲ್ತಾನ ಮೊದಲು ಪ್ರತಾಪರುದ್ರನ ರಾಜ್ಯದ ಮೇಲೆ ಎರಗಿದ. ಅವನು ಇಸ್ಮೇಲ್ ಘಾಜಿ ಎಂಬ ದಂಡನಾಯಕನನ್ನು ಒರಿಸ್ಸದ ವಿರುದ್ಧ ಕಳುಹಿಸಿಕೊಟ್ಟ. ಬಂಗಾಲದ ಸೈನ್ಯ ಒರಿಸ್ಸವನ್ನು ಆಕ್ರಮಿಸಿದಾಗ ಪ್ರತಾಪರುದ್ರ ತನ್ನ ರಾಜ್ಯದ ದಕ್ಷಿಣಭಾಗದಲ್ಲಿದ್ದ. ಇಸ್ಮೇಲ್ ಘಾಜಿ ಒರಿಸ್ಸದ ಹಲವು ಭಾಗಗಳಲ್ಲಿ ಗೆದ್ದುಕೊಂಡು ಪುರಿಯವರೆಗೂ ಬಂದು ಅದನ್ನು ಮುತ್ತಿದ. ಜಗನ್ನಾಥ ದೇವಸ್ಥಾನದ ಅರ್ಚಕರು ಜಗನ್ನಾಥನ ವಿಗ್ರಹವನ್ನು ದೇವಸ್ಥಾನದಿಂದ ತೆಗೆದುಕೊಂಡು ಹೋಗಿ ಚಿಲ್ಕ ಸರೋವರದಲ್ಲಿ ಹುದುಗಿಸಿಟ್ಟರು. ಆಕ್ರಮಣದ ಸುದ್ದಿ ತಿಳಿದ ಕೂಡಲೇ ಪ್ರತಾಪರುದ್ರ ರಾಜಧಾನಿಗೆ ಹಿಂದಿರುಗಿ ಇಸ್ಮೇಲ್ ಘಾಜಿಯ ಸೈನ್ಯವನ್ನು ಹೊಡೆದೋಡಿಸಿ ಉತ್ತರದಲ್ಲಿ ತನ್ನ ರಾಜ್ಯವನ್ನು ಹೇಗೋ ರಕ್ಷಿಸಿದ. ಆದರೆ ದಕ್ಷಿಣದಿಂದ ಒಂದು ಪ್ರಬಲವಾದ ದಾಳಿ ಬಂತು. ಕೃಷ್ಣದೇವರಾಯ ರಾಯಚೂರು ಮಹಮ್ಮದೀಯರಿಂದಲೂ ಉದಯಗಿರಿಯನ್ನು ಒರಿಸ್ಸ ರಾಜ್ಯದಿಂದಲೂ ಗೆದ್ದುಕೊಳ್ಳಲು ತೀರ್ಮಾನಿಸಿದ. ಅದರಂತೆ ಅವನು ಒರಿಸ್ಸದ ಮೇಲೆ ದಂಡೆತ್ತಿ ಬಂದ ಆದರೆ ಅವನ ಕೆಲಸ ಪ್ರಾರಂಭದಲ್ಲಿ ಅಷ್ಟು ಸುಲಭವಾಗಿ ನೆರವೇರಲಿಲ್ಲ. ಸುಮಾರು ಒಂದೂವರೆ ವರ್ಷಗಳ ಕಾಲ ಹೋರಾಡಿದ ಮೇಲೆ ಉದಯಗಿರಿ ಅವನ ವಶವಾಯಿತು. ಅನಂತರ ಅವನು ಒರಿಸ್ಸದ ಮತ್ತೊಂದು ಆಯಕಟ್ಟಿನ ಸ್ಥಳವಾದ ಕೊಂಡವೀಡು ಕಡೆಗೆ ತಿರುಗಿದ. ಪ್ರತಾಪರುದ್ರ ಅಲ್ಲೂ ಸೋತ. ಕೊಂಡವೀಡು ಕೃಷ್ಣದೇವರಾಯನ ವಶವಾಯಿತು. ಈ ವಿಜಯಗಳಿಂದ ಪ್ರೇರೇಪಿತನಾಗಿ ಕೃಷ್ಣದೇವರಾಯ ಸಿಂಹಾಚಲದವರೆಗೂ ದಂಡೆತ್ತಿ ಹೋದ. ಪ್ರತಾಪರುದ್ರ ತನ್ನ ಅನೇಕ ಅಪಜಯಗಳಿಂದಾಗಿ ಅಂತಿಮವಾಗಿ ಕೃಷ್ಣದೇವರಾಯನೊಡನೆ ಒಪ್ಪಂದವನ್ನು ಮಾಡಿಕೊಂಡು ಗೋದಾವರಿಯ ದಕ್ಷಿಣದ ಪ್ರಾಂತ್ಯಗಳನ್ನು ವಿಜಯನಗರಕ್ಕೆ ಒಪ್ಪಿಸಿಕೊಟ್ಟು ತನ್ನ ಮಗಳಾದ ಜಗನ್ಮೋಹಿನಿಯನ್ನು ಕೃಷ್ಣದೇವರಾಯನಿಗೆ ಕೊಟ್ಟು ಮದುವೆ ಮಾಡಿದ. ಹೀಗೆ ಪ್ರತಾಪರುದ್ರ ಅನೇಕ ಪ್ರಾಂತ್ಯಗಳನ್ನು ಕಳೆದುಕೊಂಡು ಕಷ್ಟಕ್ಕೀಡಾದ.

ಪ್ರತಾಪರುದ್ರ ಕಾಲದ ಒರಿಸ್ಸದ ಧಾರ್ಮಿಕ ಇತಿಹಾಸ ಉಜ್ವಲವಾದ ಅವನ ಕಾಲದಲ್ಲಿ ಒರಿಸ್ಸದಲ್ಲಿ ಭಕ್ತಿಪಂಥ ಹೆಚ್ಚು ಪ್ರಚಾರಕ್ಕೆ ಬಂತು. ಪ್ರತಾಪರುದ್ರ ವೈಷ್ಣವ ಪಂಥಕ್ಕೆ ಸೇರಿದ್ದ. ವೈಷ್ಣವ ಸಾಹಿತ್ಯಕ್ಕೆ ಸಂಬಂಧಪಟ್ಟ ಒರಿಯಾ ಬಂಗಾಲಿ ಮತ್ತು ಸಂಸ್ಕøತ ಭಾಷೆಗಳಲ್ಲಿ ರಚಿತವಾದ ವೈಷ್ಣವ ಸಾಹಿತ್ಯ ಗ್ರಂಥಗಳಲ್ಲಿ ಪ್ರತಾಪರುದ್ರನ ಹೆಸರನ್ನು ಉಲ್ಲೇಖಿಸಲಾಗಿದೆ. ಚೈತನ್ಯದ ಪ್ರಭಾವದಿಂದಾಗಿ ಭಕ್ತಿಪಂಥ ಒರಿಸ್ಸದಲ್ಲಿ ಹೆಚ್ಚು ಜನರನ್ನು ಆಕರ್ಷಿಸಿತು. ಚೈತನ್ಯರ ಹಲವಾರು ವರ್ಷಗಳ ಕಾಲ ಪುರಿಯಲ್ಲಿ ನೆಲಸಿ ಭಕ್ತಿಮಾರ್ಗದ ಪ್ರಚಾರ ಮಾಡಿ ಪ್ರತಾಪರುದ್ರ ದೇವ ಚೈತನ್ಯರಿಂದ ಬಹಳ ಮಟ್ಟಿಗೆ ಪ್ರಭಾವಿತನಾದ. 1550 ಬೃಂದಾವನ ದಾಸನಿಂದ ರಚಿತವಾದ ಚೈತನ್ಯಭಾಗವತ ಎಂಬ ಗ್ರಂಥದಲ್ಲಿ ಪ್ರತಾಪರುದ್ರನಿಗೆ ಚೈತನ್ಯ ನೀಡಿದ ಬೋಧೆಯ ವಿಚಾರವಿದೆ. ನಿನ್ನ ಮನಸ್ಸು ಕೃಷ್ಣನಲ್ಲೇ ತಲ್ಲೀನವಾಗಿರಬೇಕು. ಬೇರೆ ಯಾವುದಕ್ಕೂ ಗಮನ ಕೊಡಬಾರದು ಯಾವಾಗಲೂ ಕೃಷ್ಣನನ್ನು ಜಪಿಸಬೇಕು ಎಂದು ಅವನಿಗೆ ಚೈತನ್ಯ ಹೇಳಿದರೆಂದು ನಿರೂಪಿಸಲಾಗಿದೆ.

ಪ್ರತಾಪರುದ್ರ ತೀವ್ರ ದೈವಭಕ್ತಿಯಿಂದಾಗಿ ಆಡಳಿತವನ್ನು ಕಡೆಗಣಿಸಿದ. ಅದರಲ್ಲಿ ಬಿಗಿ ತಪ್ಪಿತು. ಪ್ರತಾಪರುದ್ರನ ಕಾಲದಲ್ಲಿ ರಾಮಾನಂದರಾಯ ರಾಜಮಹೇಂದ್ರಿಯ ರಾಜ್ಯಪಾಲನಾಗಿದ್ದ. ಅವನು ಶ್ರೀ ಕೃಷ್ಣನಲ್ಲಿ ಅನಂತ ಪ್ರೀತಿಯನ್ನಿಟ್ಟಿದ್ದ. ರಾಮಾನಂದನಿಗೆ ಶ್ರೀಕೃಷ್ಣನ ಮೇಲೆ ಎಷ್ಟೊಂದು ಭಕ್ತಿ ಇತ್ತೆಂದರೆ ತನ್ನ ಪ್ರಾಂತ್ಯದ ಆಯವ್ಯಯಗಳ ಪಟ್ಟಿಯನ್ನು ಕೂಡ ಸರಿಯಾಗಿಡಲು ಅವನಿಗೆ ಸಮಯವಿರಲಿಲ್ಲ. ಅವನಿಗೆ ಚೈತನ್ಯರ ದರ್ಶನವಾದ ಮೇಲೆ ಶ್ರೀಕೃಷ್ಣ ಧ್ಯಾನದಲ್ಲೇ ತನ್ನ ಉಳಿದ ಕಾಲವನ್ನು ಮೀಸಲಾಗಿಡಬೇಕೆಂದು ನಿರ್ಧರಿಸಿ ರಾಜ್ಯದ ಕೆಲಸಕ್ಕೆ ರಾಜೀನಾಮೆ ಇತ್ತ. ಮಿಡ್ನಾಪುರದ ರಾಜ್ಯಪಾಲ ಗೋಪಿನಾಥ ಬದಜೆನಾನನ್ನು ತನ್ನ ಪ್ರಾಂತ್ಯದ ಪ್ರಜೆಗಳಿಂದ ತೆರಿಗೆಯನ್ನು ವಸೂಲಿ ಮಾಡಲಿಲ್ಲ. ರಾಜ್ಯಕ್ಕೆ ಸಂದಾಯವಾಗಬೇಕಾಗಿದ್ದ ಆದಾಯ ಸಂಪೂರ್ಣವಾಗಿ ನಿಂತುಹೋಗಿತ್ತು. ಇದರಿಂದ ಕೋಪಗೊಂಡ ಪ್ರತಾಪರುದ್ರ ಗೋಪಿನಾಥ ಬದಜೆನಾನನ್ನು ಕೊಲ್ಲಲು ಆಜ್ಞಾಪಿಸಿದ ಆದರೆ ಚೈತನ್ಯ ಮಧ್ಯೆ ಪ್ರವೇಶಿಸಿ ಗೋಪಿನಾಥನನ್ನು ಕ್ಷಮಿಸುವಂತೆ ಪ್ರತಾಪರುದ್ರನಿಗೆ ತಿಳಿಸಿದ. ಅದರಂತೆ ಪ್ರತಾಪರುದ್ರ ಅವನನ್ನು ಕ್ಷಮಿಸಿ ಅವನು ರಾಜ್ಯಪಾಲನಾಗಿ ಮುಂದುವರಿಯುವಂತೆ ಆಜ್ಞೆ ಮಾಡಿದ. ಇವೆಲ್ಲ ಕ್ರಮಗಳೂ ರಾಜ್ಯದ ಅವನತಿಗೆ ಕಾರಣಗಳಾದವು. ಸುತ್ತಮುತ್ತಲೂ ಶತ್ರುಗಳು ಪ್ರಬಲರಾಗಿ ಒರಿಸ್ಸದ ಬಾಗಿಲನ್ನು ತಟ್ಟುತ್ತಿದ್ದಾಗ ಪ್ರತಾಪರುದ್ರ ಅವರನ್ನೆದುರಿಸಲು ಗಮನ ನೀಡಲಿಲ್ಲ. ಅವನ ಕಾಲದ ಒಂದು ಮುಖ್ಯ ಅಂಶವೆಂದರೆ, ಭಕ್ತಿಮಾರ್ಗದ ಪ್ರಸಾರದಿಂದಾಗಿ ಒರಿಯ ಭಾಷೆಗೆ ಹೆಚ್ಚಿನ ಪ್ರೋತ್ಸಾಹ ದೊರಕಿದ್ದು. ಈ ಭಾಷೆಯಲ್ಲಿ ಭಕ್ತಿ ಮಾರ್ಗಕ್ಕೆ ಸಂಬಂಧಿಸಿದ ಹಾಗೆ ಅನೇಕ ಗ್ರಂಥಗಳು ರಚಿತವಾದುವು. 1540ರಲ್ಲಿ ಪ್ರತಾಪರುದ್ರ ದೇವ ಮರಣ ಹೊಂದಿದ. (ಎಸ್.ಎಜ್.ಐ.)