ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತಿಆಮ್ಲ

ವಿಕಿಸೋರ್ಸ್ದಿಂದ

ಪ್ರತಿಆಮ್ಲ - ಜಠರರಸದ ಆಮ್ಲತೆಯ ತೀವ್ರತೆಯನ್ನು ಶಮನಗೊಳಿಸುವ ರಾಸಾಯನಿಕ (ಏಂಟ್‍ಆ್ಯಸಿಡ್). ಅಧಿಕಾಮ್ಲತೆಯಿಂದ ವ್ಯಕ್ತಿಗೆ ಹೊಟ್ಟಿನೋವು ಉರಿ ಹುಣ್ಣು ಮುಂತಾದವು ಉಂಟಾಗಿ ತೀವ್ರ ಬಾಧೆ ಉಂಟುಮಾಡಬಹುದು. ಜಠರ ರಸದ ಆಮ್ಲತೆಗೆ ಕಾರಣವಾದ ಆಮ್ಲವನ್ನು ಪ್ರತಿಆಮ್ಲಗಳು ಅಪೇಕ್ಷಿತವಾದಷ್ಟು ಮಟ್ಟಿಗೆ ನಿಶ್ಚೇತನಗೊಳಿಸಿ ಬಾಧೆಗಳನ್ನು ಶಮನಗೊಳಿಸುವುದು ಈ ಔಷಧಿಗಳ ಕ್ರಿಯಾತ್ಮಕ ಸ್ವಭಾವ. ಅನೇಕ ಸಾಮಾಜಿಕ ಹಾಗೂ ಆರ್ಥಿಕ ಅಹಿತ ಪ್ರಸಂಗಗಳಿಂದ ಮತ್ತು ಆಂತರಿಕ ತುಮುಲಗಳಿಂದ ದೇಹಕ್ಕೆ ತೊಂದರೆ ಆಗಿ ಜಠರದಲ್ಲಿ ಉರಿಊತಹುಣ್ಣುಗಳು ಕಂಡುಬರಬಹುದು. ಪ್ರತಿಆಮ್ಲಗಳ ಸೇವನೆಯಿಂದ ಈ ರೀತಿಯ ದೇಹಬಾಧೆಗಳನ್ನು ತಹಬಂದಿಗೆ ತರುವುದು ವ್ಶೆದ್ಯಚಿಕಿತ್ಸೆಯ ಒಂದು ಮಾರ್ಗ. ಮಾರುಕಟ್ಟೆಯಲ್ಲಿ ದೊರೆಯುವ ಅನೇಕ ಪ್ರತಿಆಮ್ಲಗಳು ಆಮ್ಲಜನಕವನ್ನು ಮಿತಿಗೊಳಿಸಿ, ಜಠರದ ಒಳಭಾಗದಲ್ಲಿ ಹರಡಿ, ಹೊಟ್ಟೆಯಲ್ಲಿ ಉಂಟಾಗುವ ಉರಿಯನ್ನೂ ಹುಣ್ಣನ್ನೂ ಮಾಯಿಸಿ ಗುಣಪಡಿಸುವುದಕ್ಕೆ ಸಹಾಯಮಾಡುತ್ತವೆ. ಸಾಮಾನ್ಯವಾಗಿ ಹೆಚ್ಚು ಬಳಕೆಯಲ್ಲಿರುವ ಪ್ರತಿಆಮ್ಲಗಳೆಂದರೆ ಮ್ಯಾಗ್ನೀಸಿಯಮ್ ಟ್ರೈಸಿಲಿಕೇಟ್ ಮತ್ತು ಅಲ್ಯೂಮಿನಿಯಮ್ ಹೈಡ್ರಾಕ್ಸೈಡ್. ಇವು ವೈದ್ಯರ ಚಿಕಿತ್ಸಾಕ್ರಮದಲ್ಲಿ ಅತ್ಯಂತ ಉಪಯೋಗಕಾರಿ ಔಷಧಿಗಳು. (ಎಂ.ಎಸ್.ಎಸ್.)