ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತಿಚಯ ಸರ್ವೇಕ್ಷಣೆಗಳು

ವಿಕಿಸೋರ್ಸ್ದಿಂದ

ಪ್ರತಿಚಯ ಸರ್ವೇಕ್ಷಣೆಗಳು - ಸಮಷ್ಟಿಯ ಬಗ್ಗೆ ಮಾಹಿತಿ ಬೇಕಾದಾಗ ಅದರಿಂದ ಕೆಲವು ಘಟಕಗಳನ್ನು ಮಾತ್ರ ಆಯ್ದು, ಆಭ್ಯಸಿಸಿ ಅದರ ಬಗ್ಗೆ ಅನುಗಮಿಸಲು (ಇಂಡಕ್ಷನ್) ನಡೆಸಬೇಕಾದ ಪರಿಕರ್ಮ(ಸ್ಯಾಂಪಲ್ ಸರ್ವೇಸ್). ಸಮಷ್ಟಿ ಎಂಬುದು ವ್ಯಕ್ತಿ, ವಸ್ತು, ಹೊಲ ಅಥವಾ ಸಂಸ್ಥೆಗಳ ಸಮೂಹವಾಗಿರಬಹುದು. ಇದರ ಕಾರ್ಯವ್ಯಾಪ್ತಿಯಲ್ಲಿ ಸರ್ವೇಕ್ಷಣೆಯ ಪೂರ್ವಸಿದ್ಧತೆ, ಅದರ ಪ್ರತ್ಯಕ್ಷ ಪ್ರಯೋಗ, ಸಂಗ್ರಹಿಸಿದ ಮಾಹಿತಿಯ ಸಂಸ್ಕರಣೆ, ವರದಿ ತಯಾರಿಕೆ ಇವೆಲ್ಲ ಸೇರಿವೆ. ಪ್ರತಿಚಯ ಸರ್ವೇಕ್ಷಣೆಯ ತಂತ್ರ ವಸ್ತುಸ್ಥಿತಿಯನ್ನು ಅರಿಯಲು ಒದಗಿಸಿರುವ ಒಂದು ಸುವ್ಯವಸ್ಥಿತ ಉಪಕರಣ. ಆಧುನಿಕ ಯುಗಕ್ಕೆ ಸಾಮಾನ್ಯವಾಗಿ ಲಭ್ಯವಲ್ಲದ ಮಾಹಿತಿಯನ್ನು ಇದು ಸಾರಾಂಶ ರೂಪದಲ್ಲಿ ದೊರಕಿಸಿಕೊಟ್ಟು ಸಂಬಂಧಪಟ್ಟ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ದಾರಿ ಮಾಡಿಕೊಡುವುದರ ಮೂಲಕ ಉಪಯುಕ್ತವೆನಿಸಿದೆ.

ಸರಕಿನ ಉತ್ಪಾದನೆಯಲ್ಲಿ, ಸರಕುಸಾಮಗ್ರಿಗಳ ಮತ್ತು ಸೇವಾಸೌಲಭ್ಯಗಳ ಉಳಿಕೆಯಲ್ಲಿ ಅಥವಾ ಬೇರಾವುದೇ ವಿದ್ಯಮಾನದಲ್ಲಿ ಯೋಜನೆ ಅವಶ್ಯ. ಕಾರ್ಯಕ್ರಮವೊಂದರ ರೂಪರಚನೆಯಲ್ಲಿ ಮತ್ತು ಅದನ್ನು ಕಾರ್ಯಗತಗೊಳಿಸುವಾಗ ಮಾಡಬೇಕಾದ ನಿರ್ಧಾರಗಳಿಗೆ ಆಧಾರರೂಪ ಅಂಕಿಅಂಶಗಳನ್ನು ಪಡೆಯುವಲ್ಲಿ ಹಾಗೂ ಕಾರ್ಯಕ್ರಮದ ಉಪಯುಕ್ತತೆಯನ್ನು ಅಳೆಯುವಲ್ಲಿ ಪ್ರತಿಚಯ ಸರ್ವೇಕ್ಷಣೆಯನ್ನು ಕೈಗೊಳ್ಳುವುದು ಬಹುತೇಕ ಅನಿವಾರ್ಯ. ಯೋಜನೆಗೆ ಅವಶ್ಯವಾದ ಅಂಕಿಅಂಶಗಳನ್ನು ಸಂಗ್ರಹಿಸಲು ವಿಶೇಷತಃ ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ, ಪ್ರತಿಯೊಬ್ಬನಿಗೆ ಪ್ರತಿ ಸಂಸ್ಥೆಗೆ ಅಥವಾ ಪ್ರತಿ ಹೊಲಕ್ಕೆ ಪ್ರತಿ ವರ್ಷ ಭೇಟಿ ಕೊಡುವುದು ಅತಿ ದುಬಾರಿ. ಸಮಷ್ಟಿಯ ಬಗ್ಗೆ ನಂಬಲರ್ಹವಾದ ಅಂದಾಜುಗಳನ್ನು ಮಾಡಲು ಪೂರ್ಣಗಣತಿ ಆತ್ಯವಶ್ಯವೇನಲ್ಲ. ಹಾಗೆ ಪೂರ್ಣಗಣತಿ ಯಾವಾಗಲೂ ನಿಖರ ಅಂಕಿಅಂಶಗಳನ್ನು ಒದಗಿಸುವುದೂ ಇಲ್ಲ. ಬಳಕೆಗಾಗಿ ಮಾಹಿತಿ ಆತ್ಯಂತ ನಿಖರವಾಗಿ ಇರಬೇಕೆಂದೂ ಇಲ್ಲ. ಅದೇ ಕಾಳಜಿಪೂರ್ವಕವಾಗಿ ಯೋಜಿಸಿ ಪಡೆದ ಪ್ರತಿಚಯ ಕಡಿಮೆ ವೆಚ್ಚದಲ್ಲಿ ಈ ಉದ್ದೇಶವನ್ನು ಸಾಧಿಸಬಲ್ಲದು. ಇದರಿಂದಾಗಿ ಪ್ರತಿಚಯ ಸರ್ವೇಕ್ಷಣೆ ಪ್ರಯೋಗಾರ್ಹತೆಯನ್ನು ಪಡೆಯುವುದಾಗಿದೆ. ಅಂದಮಾತ್ರಕ್ಕೆ ಇದನ್ನು ಯಾವಾಗಲೂ ಪೂರ್ಣಗಣತಿಗೆ ಬದಲಿ ಎಂದು ತೆಗೆದುಕೊಳ್ಳಬೇಕಾಗಿಲ್ಲ. ಪೂರ್ಣಗಣತಿಯ ಮಾಹಿತಿಯನ್ನು ಮೂಲಭೂತವಾಗಿಟ್ಟುಕೊಂಡು, ಅಲ್ಲದೆ ಪೂರ್ಣಗಣತಿಗೆ ಸಹಾಯಕ ಹಾಗೂ ಅನುಬಂಧವಾಗಿ ಕೂಡ ಪ್ರತಿಚಯನವನ್ನು ನಡೆಸಲಾಗುತ್ತದೆ.

ಪ್ರತಿಚಯನ ಅಷ್ಟೇನೂ ಖಾತ್ರಿ ವಿಧಾನವಲ್ಲ ಎಂದೆನ್ನಿಸುವುದು ಸಹಜ. ಉತ್ಪಾದಿತ ವಸ್ತುಸಮೂಹವೊಂದರಲ್ಲಿ 10% ನ್ಯೂನತಾಯುಕ್ತವಸ್ತುಗಳಿರಬಹುದು. ಹೀಗಿದ್ದರೂ ಆ ಸಮೂಹದಿಂದ ಆಯ್ದ ಪ್ರತಿಚಯಗಳು ಪೂರ್ತಿ ಉತ್ತಮವಾದುವೇ ಆಗಿರುವುದು ಸಾಧ್ಯ. ಪ್ರತಿಚಯದಿಂದ ದೊರೆತ ಅಂಕೆ (ಸರಾಸರಿ, ಮೊತ್ತ ಇತ್ಯಾದಿ) ಸಮಷ್ಟಿಯ ಅಂಕೆಗೆ ಯಥಾರ್ಥವಾಗಿ ಸಮವಾಗಿರುವುದು ವಿರಳವೇ ಸರಿ. ಇಲ್ಲಿರುವ ದೋಷ ಪ್ರತಿಚಯನಸಂಭೂತವಾದುದು. ಕೈಗೊಂಡ ಪ್ರತಿಚಯನ ವಿಧಾನ ನೀಡುವ ಅಂದಾಜುಕಾರಿಯ ಪ್ರತಿಚಯನ ದೋಷದ ಒಂದು ಮಾನವಾಗಿ ಶಿಷ್ಟದೋಷವನ್ನು (ಸ್ಯಾಂಡರ್ಡ್ ಎರರ್) ಬಳಸಲಾಗುತ್ತದೆ. ಶಿಷ್ಟದೋಷ ಕಡಿಮೆ ಇರುವ ವಿಧಾನ ಹೆಚ್ಚು ದಕ್ಷ. ಪ್ರತಿಚಯನದೋಷವನ್ನು ಆದಷ್ಟು ಕಡಿಮೆ ಮಾಡುವುದಕ್ಕೆ ಆಧುನಿಕ ಪ್ರತಿಚಯನಶಾಸ್ತ್ರ ಅವಕಾಶ ಮಾಡಿಕೊಟ್ಟಿದೆ. ಪ್ರತಿಚಯನವಾಗಲಿ ಪೂರ್ಣಗಣತಿಯಾಗಲಿ ಮಾಹಿತಿಯಲ್ಲಿ ಕೆಲವು ದೋಷಗಳು ಸೇರಿಕೊಳ್ಳುವುದು ಸಾಧ್ಯ. ಉದಾಹರಣೆಗೆ ವ್ಯಕ್ತಿಯ ಆದಾಯದ ಬಗ್ಗೆ ಕೇಳಿದ ಪ್ರಶ್ನೆಗೆ ನಿಖರವಾದ ಉತ್ತರ ದೊರೆಯುವುದು ಅಪರೂಪ. ಕೆಲವು ಸಲ ಸಂದರ್ಶಕ ತಪ್ಪಾಗಿ ಬರೆದುಕೊಳ್ಳಲೂಬಹುದು-ಗೊತ್ತಿಲ್ಲದ ಅಥವಾ ಗೊತ್ತಿದ್ದ ಇವು ಕೆಲವು ಪ್ರತಿಚಯನೇತರ ದೋಷಗಳು, ನೈಜಸ್ಥಿತಿಯಲ್ಲಿ ಇವನ್ನು ಸಂಪೂರ್ಣವಾಗಿ ಇಲ್ಲದಂತೆ ಮಾಡುವುದು ಸಾಧ್ಯವಿಲ್ಲ. ಪ್ರತಿಚಯಗಾತ್ರ ಹೆಚ್ಚಿದಂತೆಲ್ಲ ಪ್ರತಿಚಯನದೋಷ ಕಡಿಮೆಯಾಗುತ್ತ ಹೋಗುವುದು. ಆದರೆ ಪ್ರತಿಚಯನೇತರ ದೋಷಗಳು ಸಾಧಾರಣವಾಗಿ ಹೆಚ್ಚುತ್ತ ಹೋಗುವುವು. ಇವನ್ನು ಹತೋಟಿಯಲ್ಲಿಡಲು ಮತ್ತು ಇವುಗಳ ಪರಿಣಾಮವನ್ನು ಅಳೆಯಲು ಅನೇಕ ವಿಧಾನಗಳು ಪ್ರತಿಪಾದಿಸಲ್ಪಟ್ಟಿವೆ. ಪ್ರಶಾಂತಚಂದ್ರ ಮಹಾಲನೊಬಿಸ್ ಅವರ ಅಂತರಬೇಧಕ ಉಪಪ್ರತಿಚಯನ ಇಂಥ ಒಂದು ಪ್ರಮುಖ ವಿಧಾನ.

ಪ್ರತಿಚಯ ಸರ್ವೇಕ್ಷಣೆಯೊಂದನ್ನು ಯೋಜಿಸುವಾಗ ಪರಿಗಣಿಸಬೇಕಾದ ಹಲವು ಪ್ರಮುಖ ಸಂಗತಿಗಳಿವು:

1. ಸರ್ವೇಕ್ಷಣೆಯ ಫಲಿತಗಳನ್ನು ಉಪಯೋಗಿಸುವಾತನ ಧ್ಯೇಯಗಳನ್ನು ಸಂಖ್ಯಾಕಲನದ ಭಾಷೆಯಲ್ಲಿ ಹೆಚ್ಚು ಸ್ಟಷ್ಟವಾಗಿ ರೂಪಿಸುವುದು.

2. ಮಾಹಿತಿಯಲ್ಲಿ ಗ್ರಾಹ್ಯದೋಷದ ಮಟ್ಟ ಎಷ್ಟಿರಬಹುದು? ಆ ಮಟ್ಟವನ್ನು ಮೀರದಂತೆ ಮಾಹಿತಿ ಸಂಗ್ರಹಿಸಲು ದಕ್ಷ ಪ್ರತಿಚಯನ ಸರ್ವೇಕ್ಷಣೆಯನ್ನು ಹೇಗೆ ಯೋಜಿಸುವುದು? ಸರ್ವೇಕ್ಷಣೆ ಕಂಡುಹಿಡಿಯುವ ಮಾಹಿತಿಯ ಮೇಲೆ ಕೈಗೊಳ್ಳಲಾಗುವ ನಿರ್ಧಾರಗಳಲ್ಲಿ ಹೊಂದಾಣಿಕೆ ಎಷ್ಟರಮಟ್ಟಿಗೆ ಸಾಧ್ಯ. ಎನ್ನುವುದನ್ನು ಅವಲಂಬಿಸಿ ಗ್ರಾಹ್ಯದೋಷದ ಮಟ್ಟವನ್ನು ನಿಗದಿಮಾಡಬೇಕು.

3 ಮಾಹಿತಿ ಸಂಗ್ರಹಣ ವಿಧಾನ: ವೈಯುಕ್ತಿಕ ಸಂದರ್ಶನ, ಅಂಚೆ ಮೂಲಕ ನೋಂದಾವಣೆಯಿಂದ ಅಥವಾ ದಾಖಲೆಗಳಿಂದ ಬರೆದುಕೊಳ್ಳುವುದು.

4 ಪ್ರಶ್ನಾವಳಿ ಆಥವಾ ಮಾಹಿತಿ ಅನುಬಂಧ ಇವುಗಳಲ್ಲಿ ಯಾವುದು ಹೆಚ್ಚು ಸಮಂಜಸವೆಂಬುದನ್ನು ಪರೀಕ್ಷಿಸುವುದು.

5 ಪ್ರತಿಚಯದ ಆಧಾರಬಂಧ: ಉದಾಹರಣೆಗೆ ನಗರವೊಂದರ ಸರಾಸರಿ ಕುಟುಂಬಗಾತ್ರ ತಿಳಿಯಲು ಆ ನಗರದ ಕುಟುಂಬಗಳ ಪಟ್ಟಿ ಮತ್ತು ಬ್ಲಾಕುಗಳ ಪಟ್ಟಿ ಇವುಗಳಲ್ಲಿ ಯಾವುದಾದರೊಂದನ್ನು ಘಟಕಗಳ ಆಯ್ಕೆಗಾಗಿ ಆಧಾರಬಂಧವಾಗಿ ಇಟ್ಟುಕೊಳ್ಳಬಹುದು.

6 ಪ್ರತಿಚಯನ ವಿಧಾನದ ಆಯ್ಕೆ.

7 ಎಣಿಕೆ, ವರ್ಗೀಕರಣ ಮತ್ತು ಮಾಪನ ಇವುಗಳ ಸಮಂಜಸ ಬಳಕೆ.

8 ಮಾಹಿತಿಯ ಸಂಸ್ಕರಣ ವಿಧಾನದ ನಿರ್ಧಾರ.

ಒಂದು ಸಂಗತಿಯನ್ನು ಮಾತ್ರ ತಿಳಿಯಲು ಸರ್ವೇಕ್ಷಣೆ ಕೈಗೊಳ್ಳುವುದು ವಿರಳ. ಒಂದೇ ಸಲ ಅನೇಕ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಸರ್ವಸಾಮಾನ್ಯ. ಅದು ಮಿತವ್ಯಯಕರವೂ ಹೌದು. ಸಂಗ್ರಹಿಸಿದ ಮಾಹಿತಿಯ ಗುಣಮಟ್ಟ ಪ್ರತಿಚಯದ ಯೋಜನೆಯ ಊರ್ಜಿತತ್ವ ಮತ್ತು ದಕ್ಷತೆಗಳಷ್ಟೇ ಮಹತ್ತ್ವವುಳ್ಳದ್ದು. ಇದನ್ನು ಸಾಧಿಸಲು ವ್ಯವಸ್ಥಿತವಾಗಿ ನಡೆಯಬೇಕಾದ ಕ್ರಮವನ್ನೂ ಶಾಸ್ತ್ರ ಬೆಳೆಸಿಕೊಂಡಿದೆ. ರಾಷ್ಟ್ರೀಯ ಯೋಜನಕಾರ್ಯದಲ್ಲಿ ಪ್ರತಿಚಯನ ಸರ್ವೇಕ್ಷಣೆಗಳ ಮಹತ್ತ್ವ ದೊಡ್ಡದು. ಅಂತೆಯೇ ವಿಶ್ವಸಂಸ್ಥೆಯ ಈ ಸಂಖ್ಯಾಕಲನ ಕಾರ್ಯಾಲಯ ಪ್ರತಿಚಯನವನ್ನು ವಿವಿಧ ಕ್ಷೇತ್ರಗಳಲ್ಲಿ ಕಾರ್ಯರೂಪಗೊಳಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಹಕಾರ ನೀಡುತ್ತಿದೆ. ಸಂಖ್ಯಾಕಲನೀಯಪ್ರತಿಚಯ ಸರ್ವೇಕ್ಷಣೆಗಳೂ ಇಂದು ಪಡೆದಿರುವ ಮಾನ್ಯತೆ ಮತ್ತು ವಿಶ್ವಾಸಯೋಗ್ಯತೆಗೆ ಕಾರಣರಾದವರಲ್ಲಿ ಮಹಾಲನೊಬಿಸ್ ಒಬ್ಬರು.

ಭಾರತದ ರಾಷ್ಟ್ರೀಯ ಪ್ರತಿಚಯ ಸರ್ವೇಕ್ಷಣೆ: ಭಾರತ ಸರ್ಕಾರಕ್ಕೆ ಮತ್ತು ಇತರ ಸಂಶೋಧನ ಸಂಘಸಂಸ್ಥೆಗಳಿಗೆ ಯೋಜನೆಯಲ್ಲಿ ಅವಶ್ಯವಾದ ಸಾಮಾಜಿಕ-ಆರ್ಥಿಕ ಮಾಹಿತಿಯನ್ನು ಒದಗಿಸಲು 1950ರಲ್ಲಿ ಪ್ರಾರಂಭಿಸಲಾದ ಈ ಅಧ್ಯಯನ ಸುತ್ತ ರೂಪದಲ್ಲಿ ಮರುಕಳಿಸುತ್ತದೆ. ಮೂರರಿಂದ ಎಂಟು ತಿಂಗಳ ಅವಧಿಯ ಒಂದು ಸುತ್ತಿನಲ್ಲಿ ಆಗ ಪ್ರಚಲಿತ ವಿಷಯಗಳನ್ನು ಪರಿಗಣಿಸಲಾಗುತ್ತದೆ. ಕೇಂದ್ರವಿಭಾಗಗಳ, ಯೋಜನಾ ಆಯೋಗದ, ಕೇಂದ್ರ ಸಚಿವರ ಖಾತೆಗಳ ಸಲಹೆ ಪಡೆದು ಪ್ರತಿಸುತ್ತಿನ ವಿಷಯವ್ಯಾಪ್ತಿಯನ್ನು ನಿರ್ಧರಿಸಲಾಗುವುದು. ಯಾವುದೇ ಹಂತದಲ್ಲಿ ಪ್ರತಿಚಯವನ್ನು ಎರಡು ಹಂತಗಳ ಸ್ತರೀಕೃತ ಪ್ರತಿಚಯನವಿಧಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಮೊದಲ ಹಲವು ಗ್ರಾಮಗಳನ್ನು ಮತ್ತು ಎರಡನೆಯ ಹಂತದಲ್ಲಿ ಮನೆ ಅಥವಾ ವಿಷಯಕ್ಕೆ ಸಮಂಜಸವಾದ ಬೇರೆ ಅವಲೋಕನ ಘಟಕಗಳನ್ನು ಆಯಲಾಗುತ್ತದೆ. ಮೊದಲ ಕೆಲವು ಸುತ್ತು ರಾಷ್ಟ್ರೀಯ ಆದಾಯದ ಲೆಕ್ಕಾಚಾರ, ಬಳಕೆದಾರನ ವೆಚ್ಚ. ಗೃಹಕೈಗಾರಿಕೆ ಇವುಗಳಿಗೆ ಸಂಬಂಧಪಟ್ಟಿತ್ತು. ಜನನ, ಮರಣ, ನೌಕರಿ, ನಿರುದ್ಯೋಗ, ಸಣ್ಣಕೈಗಾರಿಕೆ, ಬೆಳೆ, ಶಾಲೆಗಳು, ಶಿಕ್ಷಕರು, ವೈದ್ಯರು, ಗ್ರಾಮಗಳು ಮುಂತಾದವಕ್ಕೆ ಸಂಬಂಧಪಟ್ಟ ಪ್ರಮುಖ ಅಂಕೆ ಅಂಶಗಳನ್ನು ಬೇರೆ ಬೇರೆ ಸುತ್ತುಗಳಲ್ಲಿ ಸಂಗ್ರಹಿಸಲಾಗಿದೆ. ಮೂವತ್ತೆರಡನೆಯ ಸುತ್ತಿನಲ್ಲಿ ಉದ್ಯೋಗವಕಾಶ ಹಾಗೂ ನಿರುದ್ಯೋಗ ಸಮಸ್ಯೆ ಮತ್ತು ಮನೆಬಳಕೆಯ ವಸ್ತುಗಳ ಮೇಲಿನ ಖರ್ಚು ಇವನ್ನೂ ಅಭ್ಯಸಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸರ್ವೇಕ್ಷಣೆಗಳು:

(a) ಭೌತವಿಜ್ಞಾನ ಹಾಗೂ ಎಂಜಿನಿಯರಿಂಗ್: ಖನಿಜ ಸಂಪತ್ತನ್ನು ಪತ್ತೆಹಚ್ಚಲು ನಡೆಸುವ ಭೂವಿಜ್ಞಾನದ ಸರ್ವೇಕ್ಷಣೆ, ಕೈಗಾರಿಕೆ ಉತ್ಪನ್ನದ ಗುಣನಿಯಂತ್ರಣ ವ್ಯವಸ್ಥೆ, ವಾಹನಸಂಚಾರ ಸರ್ವೇಕ್ಷಣೆ.

(b) ಜೀವಶಾಸ್ತ್ರ, ಮೀನುಗಾರಿಕೆ, ಅರಣ್ಯಶಾಸ್ತ್ರ, ಒಕ್ಕಲುತನ, ವೈದ್ಯಕೀಯ, ಸಸ್ಯರೋಗ ಮತ್ತು ವಿನಾಶಕಾರಿ ಕೀಟಗಳ ಸರ್ವೇಕ್ಷಣೆ, ಮೀನುಸಂಪತ್ತ್ತು ಅಂದಾಜುಮಾಡುವಿಕೆ, ಅರಣ್ಯಸಂಪತ್ತಿ ಕ್ಷೀಣತೆ, ಫಸಲಿನ ಅಂದಾಜು ಹಾಗೂ ಮುನ್ಸೂಚನೆ ನೀಡಲು ಬಿತ್ತನೆ ಕ್ಷೇತ್ರದ ಸರ್ವೇಕ್ಷಣೆ. ಅಂಟುಜಾಡ್ಯಗಳ ಸರ್ವೇಕ್ಷಣೆ. (C) ಸಮಾಜ, ವಾಣಿಜ್ಯ ಮತ್ತು ಶಿಕ್ಷಣಶಾಸ್ತ್ರಗಳು, ಸಾರ್ವಜನಿಕ ಆರೋಗ್ಯ, ಸರ್ಕಾರಿ ವ್ಯವಹಾರ, ಬೇರೆ ಬೇರೆ ಜನಾಂಗಗಳ ಆಚಾರ, ಜೀವನ ನಿರ್ವಹಣ ಮಟ್ಟವನ್ನು ತಿಳಿಯುವುದು, ಸರಕಿನ ಉತ್ಪಾದನ ಮೌಲ್ಯ, ಸರಬರಾಜು ವ್ಯವಸ್ಥೆ, ಬಳಕೆದಾರರ ಬೇಕು ಬೇಡಗಳು, ರಾಜಕೀಯ ಸಂಬಂಧದ ಮತ ತೆಗೆದುಕೊಳ್ಳುವಿಕೆ, ಆಕಾಶವಾಣಿ ಶ್ರೋತೃಸರ್ವೇಕ್ಷಣೆ, ಸಾರ್ವಜನಿಕಾರೋಗ್ಯ ಸರ್ವೇಕ್ಷಣೆ, ಜೀವನವೆಚ್ಚ ಸೂಚ್ಯಂಕ ಕಂಡುಹಿಡಿಯಲು ಮರುಕಳಿಸುವ ಸರ್ವೇಕ್ಷಣೆ.

ಈ ಮೇಲಿನ ವಿವರಗಳಲ್ಲಿ ಹೆಚ್ಚಿನವು ಸಂಖ್ಯಾಕಲನೀಯ ತತ್ತ್ವಗಳನ್ನು ಆಧರಿಸಿದ ಪ್ರತಿಚಯ ಸರ್ವೇಕ್ಷಣೆಗಳಿಗೆ ಸಂಬಂಧಪಟ್ಟವು. ಸಂಖ್ಯಾಕಲನೀಯವಲ್ಲದ ಪ್ರತಿಚಯಸರ್ವೇಕ್ಷಣೆಗಳನ್ನೂ ವಿಶೇಷವಾಗಿ ಅಭಿಪ್ರಾಯ ಸಂಗ್ರಹಣೆಗೆ ಮತ್ತು ಮಾರಾಟಕ್ಷೇತ್ರದಲ್ಲಿ ಉತ್ಪನ್ನವೊಂದನ್ನು ಗ್ರಾಹಕ ಮೆಚ್ಚುವ ಸಾಧ್ಯತೆ ಇತ್ಯಾದಿಗಳನ್ನು ಅಂದಾಜುಮಾಡಲು ಕೈಗೊಳ್ಳುವರು. (ಎಚ್.ಜೆ.ವಿ.)