ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತಿಜೈವಿಕಗಳು

ವಿಕಿಸೋರ್ಸ್ದಿಂದ

ಪ್ರತಿಜೈವಿಕಗಳು -

ಅಣಬೆ, ಯೀಸ್ಟ್, ಬ್ಯಾಕ್ಟೀರಿಯ ಮುಂತಾದ ಕೆಲವು ಸೂಕ್ಷ್ಮಾಣುಗಳು ತಮ್ಮ ಬೆಳೆವಣಿಗೆ ಕಾಲದಲ್ಲಿ ಸ್ರವಿಸುವ ಮತ್ತು ಅನ್ಯಸೂಕ್ಷ್ಮಾಣುಗಳ ಬೆಳೆವಣಿಗೆ ಜೀವನಕ್ರಮಗಳಿಗೆ ಮಾರಕವಾಗುವ ರಾಸಾಯನಿಕಗಳು (ಅ್ಯಂಟಿಬಯೊಟಿಕ್ಸ್). ಅಪರೂಪವಾಗಿ ಅನ್ಯಜೀವಿಗಳಲ್ಲೂ ಇಂಥ ಪ್ರತಿಜೈವಿಕಗಳ ಸ್ರಾವವನ್ನು ನೋಡಬಹುದು. ಇವುಗಳ ಬಳಕೆಯಿಂದ ಸಸ್ಯ. ಪ್ರಾಣೀ ಮತ್ತು ಮನುಷ್ಯವರ್ಗಗಳಿಗೆ ತಗುಲಬಹುದಾದಂಥ ಅನೇಕ ವಿಷಾಣು ಸೋಂಕುರೋಗಗಳನ್ನು ಗುಣಪಡಿಸಬಹುದು. ಪ್ರಾಚೀನ ಜನಾಂಗಗಳಲ್ಲಿ ಮಣ್ಣು, ಕೊಳೆಹಾಕಿದ ಸೊಪ್ಪು, ಬೂಷ್ಟುಗಳನ್ನು ಉಪಯೋಗಿಸುವ ಅಭ್ಯಾಸವಿತ್ತು. ಅವುಗಳ ಚಿಕಿತ್ಸಕ ಗುಣಗಳಿಗೆ ಅವುಗಲ್ಲಿದ್ದ ಪ್ರತಿಜೈವಿಕಗಳೇ ಕಾರಣವಾಗಿರಬೇಕು. ಸೂಕ್ಷ್ಮಾಣುಗಳು ಮಾನವರಲ್ಲಿ ಹಾಗೂ ಪ್ರಾಣಿಗಳಲ್ಲಿ ರೋಗವನ್ನು ಉಂಟುಮಾಡಬಲ್ಲವೆಂದು ಲೂಯಿಪಾಸ್ತರ್ (1822-95) ವಿಶದೀಕರಿಸಿದ ತರುಣದಲ್ಲೇ ಒಂದು ವರ್ಗದ ಸೂಕ್ಷ್ಮಾಣು ಇನ್ನೊಂದು ವರ್ಗದ ಸೂಕ್ಷ್ಮಾಣುಗಳನ್ನು ನಾಶಗೊಳಿಸಬಲ್ಲ ವಿಷಯ ತಿಳಿದಿತ್ತು. ಜೀವಂತ ಬ್ಯಾಕ್ಟೀರಿಯಗಳ ಕದಡಿಗೆ ಪೆನಿಸಿಲಿಯಮ್ ಗ್ಲಾಕಮ್ ಎಂಬ ಬೂಷ್ಟಿನ ತುಣುಕೊಂದನ್ನು ಹಾಕಿದರೆ ಅದರು ಸುತ್ತ ಬ್ಯಾಕ್ಟೀರಿಯಗಳು ಗರಣಿ ಕಟ್ಟಿಕೊಂಡು ತಳಸೇರಿ ದ್ರವಸ್ವಚ್ಛವಾಗುವುದೆಂದು ಇಂಗ್ಲೆಂಡಿನ ಜಾನ್‍ಟಿನ್‍ಡಾಲ್ 1875ರಲ್ಲಿ ತೋರಿಸಿದ್ದ. ನೆರಡಿ ರೋಗಾಣುಗಳು ವಾಯುವಿನಲ್ಲಿರುವ ಇತರ ಸೂಕ್ಷ್ಮಾಣುಗಳ ನಡುವೆ ಇದ್ದುಕೊಂಡು ಬೆಳೆಯಲಾರವೆಂದು 1877ರಲ್ಲಿ ಪಾಸ್ತರನೇ ಗಮನಿಸಿದ್ದ. ಆದರೆ ಇಂಥ ಪ್ರತಿಕೂಲತೆಯ ವಿಷಯದ ಆಸಕ್ತಿ ಮುಂದುವರಿಯಲಿಲ್ಲ. ವೈಲಿಮಿನ್ ಎಂಬಾತ ತನ್ನ ನೆರೆಯಲ್ಲಿರುವ ಜೀವಿಯನ್ನು ನಾಶಮಾಡಬಲ್ಲ ಜೀವಿಯನ್ನು ಜೀವಿನಿರೋಧಿ (ಆಂಟಿಬೈಯೋಟ್) ಎಂದು ಹೆಸರಿಸಿದ (1889). ಸೂಕ್ಷ್ಮಾಣುಗಳ ಪರಸ್ಪರ ನಿರೋಧಕ ಗುಣಕ್ಕೆ ಜೀವಿನಿರೋಧಕಗುಣ ಎಂದು ಮಾರ್ಷಲ್ ಹೆಸರಿಸಿದ (1889) ಗ್ರೀಕ್ ಭಾಷೆಯಲ್ಲಿ ಆ್ಯಂಟಿಬೈಯೊಸ್ ಎಂದರೆ ಅನ್ಯಜೀವಿನಿರೋಧತ್ವ ಎಂದಾಗುವುದರಿಂದ ಈ ಹೆಸರನ್ನು ಉಪಯೋಗಿಸಲಾಗಿತ್ತು. ಇದು ಸಹಜೀವಿತ್ವಕ್ಕೆ (ಸಿಂಬಿಯೋಸಿಸ್) ವ್ಯತಿರಿಕ್ತ ಪರಿಸ್ಥಿತಿ. 1996ರಲ್ಲಿ ಬೂಷ್ಟಿನಿಂದ ಮೈಕೊಫೀನಾಲಿಕ್ ಆಮ್ಲವೆಂಬ ಔಷಧವಸ್ತುವನ್ನು ಪ್ರತ್ಯೇಕಿಸಲಾಯಿತು. ಆದರೆ ಅದರ ಗುಣಗಳನ್ನು ಅಷ್ಟಾಗಿ ವ್ಯಾಸಂಗಿಸಲಿಲ್ಲ. ತತ್ತಿಯ ಬಿಳಿಯ ಭಾಗ ಕಣ್ಣೀರು ಇತ್ಯಾದಿಗಳಲ್ಲಿ ಲೈಸೊಸೈಮ್ ಎಂಬ ಸೂಕ್ಷ್ಮಾಣುನಿರೋಧಕವಸ್ತು ಇರುವುದೆಂಬುದನ್ನು ಫ್ಲೆಮಿಂಗ್ (ಅನಂತರ ಸರ್ ಅಲೆಗ್ಸಾಂಡರ್, 1881-1955) 1922ರಲ್ಲಿ ತೋರಿಸಿದ. ಆದರೆ ಇದಕ್ಕೆ ರೋಗಾಣುಗಳ ಮೇಲೆ ಪ್ರಬಲಕ್ರಿಯೆ ಇರುವುದಿಲ್ಲವಾದ್ದರಿಂದ ಅಷ್ಟು ಉಪಯುಕ್ತವಾಗಿಲ್ಲ. ಆದ್ದರಿಂದ ರೋಗಾಣುಗಳ ಮೇಲೆ ಪ್ರಬಲವಾಗಿ ವರ್ತಿಸಿ, ಅವನ್ನು ಶಕ್ತಿಗುಂದಿಸಿ ದೇಹದ ಭಕ್ಷಕ ಜೀವಾಣುಗಳಿಗೆ (ಫೇಗೊಸೈಟ್ಸ್, ಇವನ್ನು ಒಂದು ಬಗೆಯ ಶ್ವೇತಕಗಳು ಎಂದು ಭಾವಿಸಬಹುದು) ತುತ್ತಾಗುವಂತೆ ಮಾಡಬಲ್ಲ ಔಷಧವಸ್ತುವಿನ ಪತ್ತೆಯಾಗಿ ಆಸಕ್ತನಾಗಿ ಫ್ಲಮಿಂಗ್ ಪ್ರಯೋಗಗಳನ್ನು ಮುಂದುವರಿಸಿದ. ಈ ವಸ್ತು ಸ್ವತಃ ಶ್ವೇತಕಣಗಳ ಮೇಲೆ ಅನಿಷ್ಟ ಪರಿಣಾಮ ಉಂಟುಮಾಡದ ಗುಣ ಉಳ್ಳದ್ದಾಗಿರಬೇಕಾಗಿತ್ತು. ವ್ಯಾಸಂಗದ ಕ್ರಮವಾಗಿ ಈತ ಲಂಡನ್ನಿನ ಸೇಂಟ್ ಮೇರಿ ಆಸ್ಪತ್ರೆಯ ಪ್ರಯೋಗಶಾಲೆಯಲ್ಲಿ ಸ್ಟಾಫಿಲೋಕಾಕಸ್ ಎಂಬ ರೋಗಕಾರಕ ಸೂಕ್ಷ್ಮಾಣುಗಳನ್ನು ಬೆಳೆಸಬೇಕಾಗಿತ್ತು. ಇದಕ್ಕಾಗಿ ಗಾಜಿನ ತಟ್ಟೆಯಲ್ಲಿ ಅಣುಜೀವಿ ಆಹಾರವನ್ನಿಟ್ಟು ಅದರಲ್ಲಿ ಈ ಸೂಕ್ಷ್ಮಾಣುಗಳನ್ನು ಬಿತ್ತಿ ಬೆಳೆಸುವುದು 1928 ಸೆಪ್ಟೆಂಬರ್ ತಿಂಗಳಲ್ಲೂ ನಡೆದಿತ್ತು. ಒಂದು ಸಲ ಪೆನಿಸಿಲಿಯಮ್ ಎಂಬ ಬೂಷ್ಟು ಅಕಸ್ಮಾತ್ ಬಂದು ಸೇರಿ ಆ ತಟ್ಟಿಯಲಿ ಬೆಳೆದದ್ದೂ ಅದರ ಸುತ್ತ ಸ್ಟಾಫೀಲೋಕಾಕಸ್ಸುಗಳು ನಾಶವಾಗಿದ್ದುದೂ ಕಂಡುಬಂತು. ಆಶ್ಚರ್ಯಕರವಾದ ಈ ಕ್ರಿಯೆ ಪೆನಿಸಿಲಿಯಮ್ ಬೂಷ್ಟು ತನ್ನ ಸುತ್ತ ಸ್ರವಿಸಿದ್ದ ರಾಸಾಯನಿಕದಿಂದ ಉಂಟಾದುದೆಂದು ತರುವಾಯದ ವ್ಯಾಸಂಗದಿಂದ ತಿಳಿಯಿತು. ಫ್ಲೆಮಿಂಗ್ ಅದಕ್ಕೆ ಪೆನಿಸಿಲಿನ್ ಎಂದು ಹೆಸರಿಟ್ಟ. ಈ ಪದಾರ್ಥ ನೀರಿನಲ್ಲಿ ಸುಲಭವಾಗಿ ವಿಲೀನವಾಗದೆ ಆದರೆ ಇತರ ದ್ರಾವಣಗಳಿಂದ ಸಾರೀಕರಿಸಬಹುದಾದ (ಎಕ್ಸ್‍ಟ್ರಾಕ್ಟೆಡ್) ಹಾಗೂ ಸುಲಭವಾಗಿ ನಾಶಹೊಂದುವ ಗುಣವುಳ್ಳದ್ದೆಂದೂ ನಾಶಮಾಡುವ ಸಾಮಥ್ರ್ಯವಿದ್ದರೆ ರೋಗಚಕ್ಸಿತೆಗೆ ಉಪಯೋಗಿಸುವಷ್ಟು ಮೊತ್ತದಲ್ಲಿ ಇದನ್ನು ಬೇರ್ಪಡಿಸುವುದು ಕಷ್ಟವೆಂದು ತೋರಿದ್ದರಿಂದ ಸಂಶೋಧನೆ ಮುಂದುವರಿಯಲಿಲ್ಲ. ಸಾರವತ್ತಾದ ಮಣ್ಣಿನಲ್ಲಿ ದೊರಕುವ ಬ್ಯಾಸಿಲ್ಲಸ್ ಬ್ರೆವಿಸ್ ಎಂಬ ನಿರುಪದ್ರವಿ ಸೂಕ್ಷ್ಮಾಣುವಿನಿಂದ 1930ರಲ್ಲಿ ಅಮೆರಿಕದ ರಾಕ್‍ಫೆಲ್ಲರ್ ಇನ್‍ಸ್ಟಿಟ್ಯೂಟಿನಲ್ಲಿ ರೀನೆ ಡುಬಾಯ್ ಎಂಬ ವಿಜ್ಞಾನಿ ಟ್ರೈರೊಥ್ರೈಸಿನ್ ಎಂಬ ಜೀವನಿರೋಧಕ ವಸ್ತುವನ್ನು ಪ್ರಥಮವಾಗಿ ಬೇರ್ಪಡಿಸಿದ. ಆದರೆ ಇದು ರೋಗಾಣುಗಳಿಗೆ ಮಾರಕ ಮಾತ್ರವೇ ಅಲ್ಲದೆ ರೋಗಿಗೂ ವಿಷವಾಗಿ ವರ್ತಿಸುವುದರಿಂದ ಇದರ ದೇಹಾಂತರ ಉಪಯೋಗವನ್ನು ಕೈಬಿಟ್ಟು ಕೀತ ಗಾಯಗಳಿಗೆ ಸವರುವ ಔಷಧವಾಗಿ ಮಾತ್ರ ಮುಂದುವರಿಸಲಾಯಿತು. 1938ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಹೆರಾಲ್ಡ್ ಫ್ಲೋರಿ ಮತ್ತು ಆನ್ಸ್ರ್ಟ್ ಚೆಯ್ನ್ ಎಂಬವರು ಫ್ಲೆಮಿಂಗ್ ಶೋಧಿತ ಪೆನಿಸಿಲಿನ್ನನ್ನು ಪುನಃ ವ್ಯಾಸಂಗಿಸಲು ನಿರ್ಧರಿಸಿದರು. 1940ರಲ್ಲಿ ಪೆನಿಸಿಲಿನ್ನನ್ನು ತಕ್ಕಮಟ್ಟಿಗೆ ಶುದ್ದವಸ್ತುವಾಗಿ ಬೇರ್ಪಡಿಸಿದರು. ಮುಂದಿನ ಪ್ರಯೋಗಗಳಿಂದ ಸ್ಟಾಫಿಲೋ ಕಾಕಸ್ ಸೋಂಕಿನಿಂದ ಉಂಟಾಗುವ ಬೆನ್ನುಫಣಿ (ಕಾರ್ಬಿನ್‍ಕಲ್). ಕೀವು ತುಂಬಿದ ಬಾವುಗಳು, ಗುಂಡಿಗೆಯ ಒಳಪದರ ರೋಗಗಳು (ಎಂಡೋ ಕಾರ್ಡೈಡಿಸ್), ಸ್ಟೆಪ್ಟೊಕಾಕಸ್ ಸೋಂಕಿನಿಂದ ಉಂಟಾದ ಕೆಲವು ರೋಗಗಳು, ನೆರಡಿ, ರೋಗ, ಗಾನ್ರೆರೀಯ, ಸಿಫಿಲಿಸ್ ಮುಂತಾದವುಗಳ ಚಿಕಿತ್ಸೆಯಲ್ಲಿ ಉಪಯುಕ್ತವೆಂದೂ ಅಮಶಂಕೆ, ಟೈಫಾಯಿಡ್, ಸಾಮಾನ್ಯ ಮೂತ್ರ ಮಾರ್ಗರೋಗಗಳು, ಕ್ಷಯ ಇವುಗಳ ವಿಷಾಣುಗಳು ಒಟ್ಟಿನಲ್ಲಿ ಗ್ರಾಮ್ ಋಣ ವಿಷಾಣುಗಳು ಮತ್ತು ಟೈಫಸ್ ಹಾಗೂ ಪೋಲಿಯೋಕಾರಕಗಳ ಮೇಲೆ ಏನೂ ಪ್ರಭಾವ ಹೊಂದಿಲ್ಲವೆಂದೂ ತಿಳಿಯಿತು. 1941ರಲ್ಲಿ ಈ ವಿಜ್ಞಾನಿಗಳು ಪೆನಿಸಿಲಿನ್ನಿನ ಬೇರ್ಪಡಿಕೆ, ನಿರೋದಕ ಸಾಮಥ್ರ್ಯ, ವಿಷಗುಣ, ರಾಸಾಯನಿಕ ಸ್ವಭಾವ, ಕ್ರಿಯಾವಿಧಾನ, ಚಕಿತ್ಸಾಕ್ರಮ ಎಲ್ಲ ವ್ಯಾಸಂಗ ಫಲಿತಾಂಶಗಳನ್ನೂ ಕ್ರೋಡೀಕರಿಸಿ ಪ್ರಕಟಿಸಿದರು. 1942ರಲ್ಲಿ ವಾಕ್ಸ್ ಮನ್ನನು ಸೂಕ್ಷ್ಮಾಣುಜನಿತ ಹಾಗೂ ಅನ್ಯಸೂಕ್ಷ್ಮಾಣು ವಿರುದ್ದ ಗುಣವುಳ್ಳ ಎಲ್ಲ ರಾಸಾಯನಿಕಗಳಿಗೂ ಆ್ಯಂಟಿಬಯೊಟಿಕ್ಸ್ (ಪ್ರತಿಜೈವಿಕಗಳು) ಎಂದು ನಿರ್ದಿಷ್ಟವಾಗಿ ಹೆಸರನ್ನಿಟ್ಟ. ಅಂದಿನಿಂದ ಈ ವಸ್ತುಗಳಿಗೆ ಅದೇ ಹೆಸರು ಪ್ರಚಲಿತವಾಗಿದೆ. (ಎಸ್.ಆರ್.ಆರ್.; ವೈ.ಎಸ್.ಎಲ್.)