ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತಿಜ್ಞೆ

ವಿಕಿಸೋರ್ಸ್ದಿಂದ

ಪ್ರತಿಜ್ಞೆ - ಈಗ ತತ್ತ್ವಶಾಸ್ತ್ರದಲ್ಲಿ ವಾಕ್ಯಗಳ ಶಬ್ದರೂಪಕ್ಕಿಂತ ಭಿನ್ನವಾದ ಅರ್ಥಾಂಶಕ್ಕೆ ಈ ಹೆಸರಿದೆ (ಪ್ರ್ರಾಪೊಸಿಷನ್) ಮತ್ತೆ ಕೆಲವರು ಇದನ್ನೇ ಹಿಂದಿನ ಕಾಲದಲ್ಲಿ ತಿರುವು ಮುರವು ಮಾಡಿ ಶಾಬ್ದಾಂಶವನ್ನು ಪ್ರತಿಜ್ಞೆಯೆಂದೂ ಅರ್ಥಾಂಶವನ್ನು ವಾಚ್ಯಾರ್ಥವೆಂದೂ (ಜಜ್‍ಮೆಂಟ್) ಕರೆಯುತ್ತಿದ್ದುದುಂಟು. ಸರಿ ಇಲ್ಲವೆ ತಪ್ಪು ಎನ್ನಬಹುದಾದ ಅತ್ಯಂತ ಸಣ್ಣ ವಾಕ್ಯವೇ ಪ್ರತಿಜ್ಞೆಯೆನ್ನಬಹುದಾಗಿದೆ. ಮಾತುಗಳೂ ನಂಬಿಕೆಗಳೂ ಸರಿ ಅಥವಾ ತಪ್ಪು ಎನಿಸಲು ಅವುಗಳಲ್ಲಡಗಿರುವ ವಾಕ್ಯಾರ್ಥ ಅಥವಾ ಪ್ರತಿಜ್ಞೆ ಸರಿ ಇಲ್ಲವೆ ತಪ್ಪಾಗಿರುವುದೇ ಆಗಿದೆ. ವ್ಯಾಕರಣವಾಕ್ಯಗಳಿಗೂ ತರ್ಕಶಾಸ್ತ್ರದ ಪ್ರತಿಜ್ಞೆಗಳಿಗೂ ಇರುವ ಸ್ಫುಟವಾದ ವ್ಯತ್ಯಾಸವನ್ನು ಗಮನಿಸಬೇಕು. ವ್ಯಾಕರಣ ವಾಕ್ಯಗಳು ಪ್ರಶ್ನಾರ್ಥಕವಿರಬಹುದು, ಆಶೀರರ್ಥಕವಿರಬಹುದು, ವಿಧ್ಯರ್ಥಕವಿರಬಹುದು. ಪ್ರಶ್ನೆಗಳಾಗಲಿ, ಹಾರೈಕೆಗಳಾಗಲಿ ವಿಧಿನಿಯಮಗಳಾಗಲಿ ಸರಿ ತಪ್ಪು ಎಂಬ ವಿಭಾಗಕ್ಕೆ ಒಳಪಡಲಾರವು. ಅದೂ ಅಲ್ಲದೆ ಎರಡು ವ್ಯಾಕರಣ ಶುದ್ದ ವಾಕ್ಯಗಳು ಸೇರಿ ಒಂದೇ ಪ್ರತಿಜ್ಞೆಯನ್ನು ಬೋಧಿಸಬಹುದು. ಇಲ್ಲವೆ ಭಿನ್ನ ಕಾಲಗಳಲ್ಲಿ ಉಚ್ಚರಿತವಾದ ಒಂದೇ ವಾಕ್ಯ ಎರಡು ಪ್ರತಿಜ್ಞೆಗಳನ್ನು ಕೂಡ ಬೋಧಿಸಲವಕಾಶವಿದೆ. ಪ್ರತಿಜ್ಞೆ ವಾಸ್ತವಿಕ ಸತ್ಯವೆ ಆಗಿರಬೇಕೆಂದಿಲ್ಲ. ಅದು ಮಿಥ್ಯೆಯೂ ಆಗಿರಬಹುದು, ಚಿಂತನವೆಂಬ ಮಾನಸಕ್ರಿಯೆಗೂ ಅದರಲ್ಲಿ ಗರ್ಭಕೃತವಾಗುವ ಪ್ರತಿಜ್ಞೆಗಳಿಗೂ ಇರುವ ಭೇದವನ್ನು ಮನಗಾಣಬೇಕು. ಪ್ರತಿಜ್ಞೆಗಳಿಗೂ ತಮ್ಮವೇ ಆದ ಒಂದು ಸ್ವತಂತ್ರ ಅಸ್ತಿತ್ವವುಂಟೆಂದು ಮೈನೋಂಗ್ ಮುಂತಾದ ಆಧುನಿಕ ತಾರ್ಕಿಕರು ಅಭಿಪ್ರಾಯಪಡುತ್ತಾರೆ. (ಕೆ.ಕೆ.)