ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತಿಮಾವಿಧಾನ ಮತ್ತು ಕಲ್ಪನೆ

ವಿಕಿಸೋರ್ಸ್ದಿಂದ

ಪ್ರತಿಮಾವಿಧಾನ ಮತ್ತು ಕಲ್ಪನೆ - ಪ್ರತಿಮೆಗಳು (ಇಮೇಜಸ್) ಬಾಹ್ಯವಸ್ತುಗಳ ಮಾನಸಿಕ ಪಡಿಯಚ್ಚುಗಳಾಗಿ ಬಹಳ ಹಿಂದಿನ ಕಾಲದಿಂದಲೂ ತತ್ತ್ವಶಾಸ್ತ್ರಜ್ಞರ ಸಂಶೋಧನಾ ವಸ್ತುಗಳಾಗಿವೆ. ವೈಜ್ಞಾನಿಕ ಮನಶಾಸ್ತ್ರದ ಆರಂಭದೊಡನೆ, ಪ್ರತಿಮೆಗಳನ್ನು ಪ್ರಜ್ಞಾವಸ್ಥೆಯ ಘಟಕಾಂಶಗಳಲ್ಲೊಂದೆಂದು ಪ್ರಮುಖವಾಗಿ ಸ್ವರೂಪಾತ್ಮಕ ಸಿದ್ಧಾಂತದ ಪ್ರತಿಪಾದಕ ಇ. ಬಿ. ಟಿಚ್ನರನಿಂದ ಪರಿಗಣಿಸಲ್ಪಟ್ಟುವು. ಸಂವೇದನೆಗಳು (ಸೆನ್‍ಸೇಷನ್ಸ್) ಮತ್ತು ಭಾವಗಳು(ಫೀಲಿಂಗ್ಸ್) ಪ್ರಜ್ಞಾವಸ್ಥೆಯ ಇನ್ನಿತರ ಘಟಕಾಂಶಗಳು ಎಂದು ತಿಳಿಯಲಾಗಿತ್ತು. ಮನಶ್ಯಾಸ್ತ್ರದ ಇತಿಹಾಸದಲ್ಲಿ ಮುಖ್ಯವಾಗಿ ಅಂತರಾವಲೋಕನ ವಿಧಾನವನ್ನು ಬಳಸಿಕೊಂಡು ಸ್ವಲ್ವಕಾಲ ಪ್ರತಿಮೆಗಳ ಸ್ವರೂಪ ಮತ್ತು ಆಲೋಚನಾಪ್ರಕ್ರಿಯೆಯಲ್ಲಿ ಅವುಗಳ ಸ್ಥಾನವನ್ನು ಕುರಿತು ಸಂಶೋಧನೆ ಮಾಡಲಾಯಿತು. ಪ್ರತಿಮೆಗಳು ಮತ್ತು ಭಾವಗಳು ಮೂಲ ಸಂವೇದನೆಗಳ ಸಮ್ಮಿಶ್ರಣವಾಗಿದೆ ಎಂಬ ಅಭಿಪ್ರಾಯ 1900 ಸುಮಾರಿಗೆ ಸಾಮಾನ್ಯವಾಗಿತ್ತು.

ಪ್ರತಿಮಾವಿಧಾನದಲ್ಲಿನ ವ್ಯಕ್ತಿಗತ ವ್ಯತ್ಯಾಸಗಳ ಮೇಲೆ ತಾನು ನಡೆಸಿದ ಮೂಲ ಸಂಶೋಧನೆಗಳಿಂದ ವೈಜ್ಞಾನಿಕ ವಿಚಾರಮಂಡಲ ಆಲೋಚನೆಯಲ್ಲಿ ಪ್ರತಿಮಾವಿಧಾನವನ್ನು ಅಪರೂಪವಾಗಿ ಮಾತ್ರ ಬಳಸಿಕೊಂಡಿದ್ದಾರೆಂದು ಫ್ರಾನ್ಸಿಸ್ ಗಾಲ್ಟನ್ (1880) ಹೇಳಿದ. ಫ್ರಾನ್ಸಿನಲ್ಲಿ ಬಿನೆ, ಬೆಲ್ಜಿಯಂನಲ್ಲಿ ಮಿಷಾಟ್ ಮತ್ತು ಜರ್ಮನಿಯ ವೂರ್ಜ್‍ಬರ್ಗ್ ಮೊದಲಾದ ಮನೋವಿಜ್ಞಾನಿಗಳು ನಡೆಸಿದ ಪ್ರಯೋಗಗಳು ಆಲೋಚನೆಗೆ ಪ್ರತಿಮೆಗಳು ಅತ್ಯಾವಶ್ಯಕಗಳು ಎಂಬುದನ್ನು ತೋರಿಸಿಕೊಟ್ಟವು. ಈ ಹೇಳಿಕೆಗಳು ಮನಶಾಸ್ತ್ರದಲ್ಲಿ ಪ್ರತಿಮಾರಹಿತ ಆಲೋಚನೆಯ ವಾದವಿವಾದಕ್ಕೆ ಎಡೆಮಾಡಿಕೊಟ್ಟುವು. ಮೇಲಿನ ಪ್ರಯೋಗಗಳಲ್ಲಿ ಅರ್ಥವನ್ನು ಸಂಪೂರ್ಣವಾಗಿ ತೆಗೆದು ಹಾಕಿರಲಿಲ್ಲ. ಎನ್ನುವ ಆಧಾರದ ಮೇಲೆ ಟಿಚ್ನರ್ ಮತ್ತು ವುಡ್‍ವರ್ತ್ ಆ ಪ್ರಯೋಗಗಳನ್ನು ಟೀಕಿಸಿದ್ದಾರೆ. ಪ್ರತಿಮೆಗಳನ್ನು ಬಳಸದೆಯೇ ಅರ್ಥವನ್ನು ಬಳಸಿಕೊಂಡು ಆಲೋಚನೆ ನಡೆದಿರಬಹುದು ಎನ್ನುವುದು ಅವನ ಅಭಿಮತ. ಉದಾಹರಣೆಗೆ ನ್ಯಾಯ ಅನಂತತೆ, ಪ್ರೇಮ ಮೊದಲಾದ ಅಮೂರ್ತ ಸಂಕಲ್ಪಗಳ ಬಗೆಗೆ ಯೋಚಿಸಲು ಪ್ರತಿಮೆಗಳ ಅವಶ್ಯಕತೆ ಇರುವುದಿಲ್ಲ. ಪ್ರತಿಮಾವಿಧಾನದ ಬಳಕೆ ವಯಸ್ಸಾದಂತೆ ಕಡಿಮೆಯಾಗುತ್ತದೆ. ಏಕೆಂದರೆ ನಾವು ಹೆಚ್ಚು ಹೆಚ್ಚಾಗಿ ಸಾಮಾನ್ಯೀಕರಿಸಿದ ಸಂಕಲ್ಪಗಳನ್ನು ಬೆಳೆಸಿಕೊಳ್ಳುತ್ತೇವೆ ಮತ್ತು ಅನೇಕ ವಸ್ತುಗಳು ಅವುಗಳ ಗುಣವಿಶೇಷಣಗಳಿಂದ ನಮ್ಮ ಮನಸ್ಸಿನಲ್ಲಿ ಪ್ರತಿನಿಧಿಸಲ್ಪಡುತ್ತವೆ. ಅಂದ ಮಾತ್ರಕ್ಕೆ ನಿತ್ಯಜೀವನದಲ್ಲಿ ಪ್ರತಿಮಾವಿಧಾನದ ಬಳಕೆಯನ್ನು ಇದು ತಳ್ಳಿಹಾಕುವುದಿಲ್ಲ. ಉದಾಹರಣೆಗೆ ತನ್ನ ಜ್ಞಾಪಕಕ್ಕೆ ನಿಲುಕುವ ತನ್ನ ಯಾವುದಾದರೂ ಅನುಭವದ ಪ್ರತಿಮೆಯನ್ನು ಇಚ್ಛಾಪೂರ್ವಕವಾಗಿ ನೆನೆಯಬಹುದು.

ಪ್ರತಿಮೆಗಳ ಬಗೆಗಳು: ಪ್ರತಿಮೆಗಳನ್ನು ಎರಡು ಗುಂಪುಗಳಾಗಿ ವಿಭಾಗಿಸಲಾಗಿದೆ. ಅನುಬಿಂಬ ಮತ್ತು ಸ್ಮøತಿ ಪ್ರತಿಮೆಗಳು ಎಂದು:

ಅನುಬಿಂಬ ಪ್ರಕಾಶಮಾನವಾದ ವಿದ್ಯುದ್ದೀಪ ಅಥವಾ ಸೂರ್ಯನನ್ನು ದೃಷ್ಟಿಸಿ ಅನಂತರ ಗೋಡೆಯಂಥ ಕಡಿಮೆ ಪ್ರಕಾಶದ ಮೇಲ್ಮೈಯತ್ತ ದೃಷ್ಟಿ ಹರಿಸಿದಾಗ, ಒಂದು ಕ್ಷಣ ಪ್ರಕಾಶಮಾನವಾದ ಚುಕ್ಕೆಯೊಂದು ಕಾಣಿಸುತ್ತದೆ. ಕೂಡಲೆ ಅದು ಒಂದು ಕಪ್ಪು ಮಚ್ಚೆಯಾಗಿ ಪರಿವರ್ತನೆಗೊಂಡು ಕ್ರಮವಾಗಿ ನಶಿಸಿಹೋಗುತ್ತದೆ. ಮೊದಲನೆಯ ಹಂತವನ್ನು ಸಮ ಅನುಬಿಂಬ ಎಂದೂ ಎರಡನೆಯ ಹಂತವನ್ನು ವಿರುದ್ಧ ಅನುಬಿಂಬ ಎಂದೂ ಕರೆಯಲಾಗಿದೆ. ಈ ಘಟನೆ ಕೆಲವು ನಿಯಮಗಳನ್ನು ಅನುಸರಿಸುತ್ತದೆ. ಪ್ರತಿಮೆಯ ಗಾತ್ರ ವ್ಯಕ್ತಿಗೂ ಪ್ರತಿಮೆ ಪ್ರಕ್ಷೇಪಗೊಳ್ಳುವ ಮೇಲ್ಮೈಗೂ ಇರುವ ಅಂತರದ ಪ್ರಮಾಣಕ್ಕನುಗುಣವಾಗಿರುತ್ತದೆ (ಎಮರ್ಟಿನ ನಿಯಮ). ವಿರುದ್ಧ ಅನುಬಿಂಬಗಳು ಸ್ವರೂಪದಲ್ಲಿ ಮೂಲವಸ್ತುವಿಗೆ ಪೂರಕವಾಗಿರುತ್ತವೆ. ಅಂತೆಯೇ ಪ್ರಕಾಶಮಾನವಾದ ವಸ್ತುಗಳು ಕಪ್ಪು ಅನುಬಿಂಬಗಳನ್ನೂ ಕೆಂಪು ಹಸಿರನ್ನೂ ನೀಲಿ ಹಳದಿಯನ್ನೂ ಉತ್ಪತ್ತಿಮಾಡುತ್ತವೆ ಮತ್ತು ಇವು ಪ್ರತಿಕ್ರಮದಲ್ಲಿಯೂ ಉತ್ಪತ್ತಿಯಾಗುತ್ತವೆ. ಅನುಬಿಂಬದ ತೀಕ್ಷ್ಣತೆ ಮತ್ತು ಅಧ್ಯವಸಾಯ ಮೂಲವಸ್ತುವಿನ ತೀಕ್ಷ್ಣತೆ ಮೂಲವಸ್ತುವಿನ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಿದ ಅವಧಿ ಮತ್ತು ಪ್ರತಿಮೆ ಪ್ರಕ್ಷೇಪಗೊಳ್ಳುವ ಮೇಲ್ಮೈನ ಪ್ರಕಾಶ ಇವು ಜಟಿಲವಾದ ಸಂಬಂಧಗಳ ಪರಿಣಾಮವಾಗಿರುತ್ತದೆ. ಅಕ್ಷಿಪಟ ಮತ್ತು ಮಸ್ತಿಷ್ಕಗಳಲ್ಲಿ ಉಂಟಾಗುವ ಸರಳವಾದ ಶಾರೀರಿಕ ಬದಲಾವಣೆಗಳಿಂದ ಅನುಬಿಂಬಗಳು ಪರಿಣಮಿಸುವುದರಿಂದ ಅವನ್ನು ಅನುಬಿಂಬಗಳಿಗೆ ಬದಲಾಗಿ ಉತ್ತರ ಪರಿಣಾಮ (ಆಫ್ಟರ್ ಎಫೆಕ್ಸ್) ಎಂದು ಕರೆಯುವುದು ಈಚಿನ ವಾಡಿಕೆ. ಅಭ್ಯಾಸದೊಂದಿಗೆ ಸ್ಪರ್ಶ ಶಬ್ದ ಮೊದಲಾದ ಇತರ ಸಂವೇದನಾ ರೀತಿಗಳಲ್ಲೂ ಈ ಪರಿಣಾಮಗಳನ್ನು ನಾವು ಅನುಭವಿಸುವುದು ಸಾಧ್ಯವಾಗುತ್ತದೆ.

ಸ್ಮøತಿ ಪ್ರತಿಮೆಗಳು; ಇವು ಒಮ್ಮೆ ಅನುಭವಿಸಿದ ವಸ್ತುಗಳ ಮಾನಸಿಕ ಚಿತ್ರಗಳು. ನಾವು ಅನುಭವಿಸುವ ಎಂಟು ಸಂವೇದನಾ ರೀತಿಗಳಿಗೆ ಅನುಗುಣವಾಗಿ ಎಂಟು ರೀತಿಯ ಸ್ಮøತಿ ಪರಿಣಾಮಗಳಿವೆ. ಚಾಕ್ಷುಷ, ಶ್ರವಣ, ಸ್ಪರ್ಶ, ಉಷ್ಣ, ಗತಿ ಸಂವೇದನ, ವೇದನಾ ಸಂವೇದನ, ಸ್ವಾದ ಸಂವೇದನ ಮತ್ತು ಘ್ರಾಣ ಸಂವೇದನ ಪ್ರತಿಮೆಗಳೂ ಚಾಕ್ಷುಪ ಅಥವಾ ಶ್ರವಣ ಸಂವೇದನ ಪ್ರತಿಮೆಗಳಂಥ ಒಂದೆರಡು ರೀತಿಯ ಪ್ರತಿಮೆಗಳಲ್ಲಿ ಪ್ರಧಾನವಾಗಿದ್ದರೂ ಜನ ಎಲ್ಲ ರೀತಿಯ ಪ್ರತಿಮಾವಿಧಾನವನ್ನೂ ಅನುಭವಿಸುತ್ತಾರೆಂದು ಪ್ರಯೋಗಗಳು ತೋರಿಸಿಕೊಟ್ಟಿವೆ. ಎಮಿಲಿ ಜೊóೀಲಾನ ಬರವಣಿಗೆಗಳ ವಿಶ್ಲೇಷಣೆಯಿಂದ ಆತ ಪ್ರಬಲವಾದ ಘ್ರಾಣಸಂವೇದನ ಪ್ರತಿಮಾವಿಧಾನವನ್ನು ಹೊಂದಿರಬೇಕೆಂದು ಹೇಳಲಾಗಿದೆ. ಅಂತೆಯೇ ಬಿತೋವನ್ ತಾನು ಕಿವುಡನಾದ ಅನಂತರ ತನ್ನ ಶ್ರವಣ ಪ್ರತಿಮೆಗಳ ಮೇಲೆ ಪೂರ್ಣ ಅವಲಂಬನೆಗೊಂಡು ತನ್ನ ವಾದ್ಯಮೇಳ ಕೃತಿಗಳನ್ನು ರಚಿಸಿರಬೇಕೆಂದು ಶಂಕಿಸಲಾಗಿದೆ. ಗತಿ ಸಂವೇದನ ಪ್ರತಿಮಾನಿಧಾನ ಪ್ರಜ್ಞಾನುಭವಕ್ಕೆ ಸ್ಫುಟವಾಗಿಬಾರದಿದ್ದರೂ ಜೀವನದಲ್ಲಿ ಬಹುಮುಖ್ಯಪಾತ್ರ ವಹಿಸುವುದಾಗಿ ಹೇಳಲಾಗಿದೆ. ಉದಾಹರಣೆಗೆ: ಗತಿ ಸಂವೇದನಾ ಪ್ರತಿಮಾವಿಧಾನ ಮತ್ತು ವೇದನಾ ಸಂವೇದನಾ ಪ್ರತಿಮಾವಿಧಾನಗಳು ಪ್ರತಿಮಾರಹಿತ ಆಲೋಚನೆಯನ್ನು ಸಾಧ್ಯಮಾಡಿರಬಹುದೆಂದು ಕಾಮ್‍ಸ್ಟಾಕ್ ವರದಿ ಮಾಡಿದ (1921). ಸ್ಮøತಿ ಪ್ರತಿಮೆಯ ಒಂದು ರೂಪವಾದ ಸ್ಪಷ್ಟಬಿಂಬ ವಯಸ್ಕರಲ್ಲಿ ಅಪರೂಪವಾದರೂ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಅದು ಎಷ್ಟು ಸ್ಟಷ್ಟವಾಗಿರುತ್ತದೆಂದರೆ ಕೆಲವು ಮಕ್ಕಳು ತೊಡಕಾದ ಚಿತ್ರ ಅಥವಾ ಉದ್ದನೆಯ ವಾಕ್ಯಗಳ ಮೇಲೆ ಒಮ್ಮೆ ದೃಷ್ಟಿಹಾಯಿಸಿದರೆ ಸಾಕು ಅವುಗಳಲ್ಲಿ ಅಡಕವಾಗಿರುವ ವಿವರಗಳನ್ನೆಲ್ಲ ತಪ್ಪಿಲ್ಲದೆ ವಿವರಿಸಬಲ್ಲರು. ನಿದ್ರೆ ಮತ್ತು ಜಾಗ್ರತಾವಸ್ಥೆಗಳ ನಡುವಿನ ಮಂಪರುಸ್ಥಿತಿಯಲ್ಲಿ ಇನ್ನೊಂದು ವಿಧದ ಪ್ರತಿಮಾವಿಧಾನ ಬಹಳ ಸ್ಪಷ್ಟ ಅನುಭವಕ್ಕೆ ಬರುತ್ತದೆ. ಮಂಪರು ಸ್ಥಿತಿಯ ಪ್ರತಿಮೆಗಳಿಂದ ಅವು ಹೆಸರಾಗಿವೆ. ಅಂಥವು ಸರ್ವೆ ಸಾಧಾರಣ. ಕೆಲವರು ಸಹಸಂವೇದನೆ ಎನ್ನುವ ವಿಕಾರಸ್ಥಿತಿಯನ್ನು ಅನುಭವಿಸುತ್ತಾರೆ. ಅದರಲ್ಲಿ ಒಂದು ಜ್ಞಾನೇಂದ್ರಿಯ ಪ್ರಚೋದಿಸಲ್ಪಟ್ಟರೆ ಬೇರೊಂದು ಜ್ಞಾನೇಂದ್ರಿಯಕ್ಕೆ ಸಂಬಂಧಪಟ್ಟ ಪ್ರತಿಮೆಗಳು ಅನುಭವಕ್ಕೆ ಬರುತ್ತವೆ. ಉದಾಹರಣೆಗೆ ಒಬ್ಬಳು ಹುಡುಗಿ ತಾನು ಸಂಗೀತದ ಲಯಗಳನ್ನು ಕೇಳಿದಾಗಲೆಲ್ಲ ಬಣ್ಣಗಳನ್ನು ಅನುಭವಿಸಿದುದಾಗಿ ವರದಿ ಮಾಡಿದಳು. ಪ್ರಲಾಪ, ನಿರ್ವೇದಕ ಮತ್ತು ಔಷಧ ಪ್ರೇರಿತ ಸ್ಥಿತಿಗಳಲ್ಲಿ ಪ್ರತಿಮೆಗಳು ಸ್ಫುಟವಾಗಿರುವುದೇ ಅಲ್ಲದೆ, ಅನೇಕ ಸಂದರ್ಭಗಳಲ್ಲಿ ವಿರೂಪಗೊಂಡಿರುತ್ತವೆ.

ಕಲ್ಪನೆ: ಪ್ರತಿಮೆಗಳು ಹಿಂದಿನ ಅನುಭವಗಳ ಬಿಡಿಬಿಡಿಯಾದ ಪುನರೋತ್ಪನ್ನಗಳಾದರೆ, ಕಲ್ಪನೆ ಹಿಂದಿನ ಅನುಭವಗಳನ್ನು ಹೊಸಕ್ರಮದಲ್ಲಿ ಹೆಣೆದು ಮಾಡಿರುವ ನಿರಂತರ ಪರಂಪರೆಯಾಗಿದೆ. ಅದೊಂದು ವಾಸ್ತವ ಕಟ್ಟಿನಿಂದ ಹೊರತಾಗಿರುವ ಭಾವನೆಗಳ ಅಥವಾ ಪ್ರತಿಮೆಗಳ ಮಾನಸಿಕ ಸೃಷ್ಟಿ. ಉದಾಹರಣೆಗೆ: ಕುದರೆಯ ದೇಹ, ಮಾನವನ ತಲೆ ಮತ್ತು ರೆಕ್ಕೆಗಳನ್ನು ಹೊಂದಿರುವ ಒಂದು ಪ್ರಾಣಿಯನ್ನು ಕಲ್ಪಿಸಿಕೊಳ್ಳಬಹುದು. ಕಲ್ಪನೆ ಅನುಕರಣೆಯ ಪ್ರಾತಿನಿಧಿಕ ಮಟ್ಟದಲ್ಲಿರಬಹುದು. ಅಥವಾ ಉನ್ನತಮಟ್ಟಗಳಲ್ಲಿ ಅದು ಸೃಜನಾತ್ಮಕ ಕಲ್ಪನೆಯಾಗಬಹುದು. ಪುಸ್ತಕವೊಂದರಲ್ಲಿ ಓದಿನ ಕಥೆಯ ಸನ್ನಿವೇಶವನ್ನು ಕಲ್ಪಿಸಿಕೊಳ್ಳುವುದು ಪ್ರಾತಿನಿಧಿಕ. ಆದರೆ ಕವಿಯ, ಕಾದಂಬರಿಕಾರರ, ವಿಜ್ಞಾನಿಯ ಅಥವಾ ಎಂಜಿನಿಯರನ ಕಲ್ಪನೆಗಳು ಸೃಜನಾತ್ಮಕ ಅಥವಾ ರಚನಾತ್ಮಕವಾಗಬಹುದು. ನಮ್ಮ ದಿನನಿತ್ಯದ ಬದುಕಿನಲ್ಲಿ ಒಂದು ಸಮಸ್ಯೆಯನ್ನು ಎದುರಿಸಿದಾಗ ಕಾರ್ಯಯೋಜನೆಯನ್ನು ರೂಪಿಸುವಲ್ಲಿ ನಾವು ಕಲ್ಪನೆಯಲ್ಲಿ ನಿರತರಾಗಬಹುದು. ಯಾವಾಗ ಕಲ್ಪನೆ ಮನೋವಿಲಾಸ, ಹಗಲುಗನಸು ಅಥವಾ ಅಭಿಲಾಷಾ ಚಿಂತನೆಯ ರೂಪವನ್ನು ತಾಳುತ್ತದೆಯೋ ಆಗ ಅದು ಸ್ವಲೀನಚಿಂತನೆ ಎಂದೆನಿಸಿಕೊಳ್ಳುತ್ತದೆ. ಅಂಥವು ವ್ಯಕ್ತಿಯ ಆಂತರಿಕ ಪಚೋದನೆಗಳಾದ ಅವಶ್ಯಕತೆಗಳು ಅಭಿಲಾಷೆಗಳು ಮತ್ತು ಒಳತೋಟಿಗಳಿಗೆ ಪ್ರತಿಕ್ರಿಯೆಗಳಾಗಿರುತ್ತವೆ. ಆದರೆ ಸಾಮಾನ್ಯ ಕಲ್ಪನೆ ಯಾವುದೋ ನಿರ್ದಿಷ್ಟ ಸಮಸ್ಯೆ ಅಥವಾ ಕಾರ್ಯಕ್ಕೆ ಪ್ರತಿಕ್ರಿಯೆಯಾಗಿ ಸಂಭವಿಸುತ್ತದೆ. ವಿಪರೀತ ಕಲ್ಪನೆಯಲ್ಲಿ ಮಗ್ನವಾಗುವುದು ಮಕ್ಕಳಲ್ಲಿ ಅತಿ ಸಾಮಾನ್ಯ. ಚಿಕ್ಕಮಕ್ಕಳಲ್ಲಿ ವಿಪರೀತ ಕಲ್ಪನೆ ಮತ್ತು ಪ್ರತ್ಯಕ್ಷಾನುಭವಗಳ ನಡುವಿನ ಅಂತರ ಅನೇಕ ಸಂದರ್ಭಗಳಲ್ಲಿ ಅಸ್ಟಷ್ಟವಾಗಿರುತ್ತದೆ. ವಯಸ್ಕರಲ್ಲಿ ಅತಿಯಾದ ವಿಪರೀತ ಕಲ್ಪನೆ ಅನಾರೋಗ್ಯದ ಲಕ್ಷಣವೆಂದು ಪರಿಗಣಿಸಲಾಗಿದೆ. ಭಾಷಾಸಾಮಗ್ರಿಗಳನ್ನು ನಿರ್ವಹಿಸಿಕೊಂಡು ಹೊಸ ಹೊಸ ವಿಚಾರಗಳನ್ನು ವ್ಯಕ್ತಪಡಿಸುವ ವ್ಯಕ್ತಿಯ ಸಾಮಥ್ರ್ಯಕ್ಕೆ ಪದಕಲ್ಪನೆ ಎಂದು ಕರೆಯಲಾಗಿದೆ. ಕಲ್ಪನೆ ಚಿತ್ರಗಳಿಗೆ ಸಂಬಂಧ ಪಟ್ಟಿದ್ದರೆ ಅದು ಚಾಕ್ಷುಪ ಕಲ್ಪನೆ ಎನ್ನಿಸಿಕೊಳ್ಳುತ್ತದೆ. ಈ ಮೊದಲೇ ಹೇಳಿದಂತೆ ಕೆಲವು ಕಲ್ಪನಾರೂಪಗಳು ಆಂತರಿಕ ಪ್ರಚೋದನೆಗಳಿಂದ ಪ್ರೇರಿತವಾಗಿ ಕೆಲವು ಆಂತರಿಕ ಅವಶ್ಯಕತೆಗಳನ್ನೂ ಮತ್ತು ಬಿಕ್ಕಟ್ಟುಗಳನ್ನೂ ಹೊರಗೆಡಹುವುದರಿಂದ ಪ್ರಕ್ಷೇಪಿ ಪರೀಕ್ಷೆಗಳು ಎಂಬ ಕಲ್ಪನೆಯ ಪರೀಕ್ಷೆಗಳು ರಚಿಸಲಾಗಿದೆ. ಈ ಪರೀಕ್ಷೆಗಳ ಮೂಲಕ ಜನರ ಕಲ್ಪನೆಗಳನ್ನು ಪಡೆದುಕೊಂಡು, ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ವಿವರಗಳನ್ನು ಕೊಡುವಂತೆ ಅದನ್ನು ವಿಶ್ಲೇಷಿಸಬಹುದು. (ಪಿ.ಕೆ.ಎಂ.)