ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತಿಸ್ಥಾಪನೆ

ವಿಕಿಸೋರ್ಸ್ದಿಂದ

ಪ್ರತಿಸ್ಥಾಪನೆ - ಪ್ರತಿಸ್ಥಾಪನೆ ಅಥವಾ ಪ್ರತಿನಿಧಾನ ಪರಿಭಾವನೆಯನ್ನು ಅರ್ಥವಿಜ್ಞಾನದಲ್ಲಿ ಮೂರು ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಅವೆಂದರೆ, ಉತ್ಪಾದನಾಂಗಗಳ ಪ್ರತಿನಿಧಾನ. ವಸ್ತುಗಳ ಪ್ರತಿನಿಧಾನ ಮತ್ತು ಪ್ರತಿನಿಧಾನ ಪರಿಣಾಮ.

ಉತ್ಪಾದನಾಂಗಗಳಿಗೆ ಸಂಬಂಧಿಸಿದಂತೆ, ಒಂದು ನಿರ್ದಿಷ್ಟ ಮಟ್ಟದವರೆಗೆ, ಉತ್ಪಾದನೆಯಲ್ಲಿ ಒಂದು ಉತ್ಪಾದನಾಂಗವನ್ನು ಮತ್ತೊಂದು ಉತ್ಪಾದನಾಂಗಕ್ಕೆ ಪ್ರತಿನಿಧಾನಿಸುತ್ತಾ ಹೋಗಬಹುದು ಎಂದರೆ ಒಂದರ ಬದಲು ಇನ್ನೊಂದನ್ನು ಬಳಸಬಹುದು. ಉದಾಹರಣೆಗೆ ಒಂದು ಪದಾರ್ಥ ಉತ್ಪಾದನೆಯಲ್ಲಿ ಹೆಚ್ಚು ಶ್ರಮವನ್ನು ಮತ್ತು ಕಡಿಮೆ ಬಂಡವಾಳವನ್ನು ಬಳಸಬಹುದು, ಅಥವಾ ಶ್ರಮದ ಪ್ರಮಾಣದಲ್ಲಿ ಕಡಿಮೆಮಾಡಿ, ಬಂಡವಾಳದ ಪ್ರಮಾಣವನ್ನು ಹೆಚ್ಚುಮಾಡಬಹುದು. ಆದರೆ ಪ್ರತಿಸ್ಥಾಪನೆಗೆ ಒಂದು ಮಿತಿ ಇದ್ದೇ ಇರುತ್ತದೆ. ಒಂದು ಘಟ್ಟದ ಅನಂತರ ಒಂದು ಉತ್ಪಾದನಾಂಗವನ್ನು ಮತ್ತೊಂದು ಉತ್ಪಾದನಾಂಗದಿಂದ ಪ್ರತಿಸ್ಥಾಪಿಸುವುದು ಸಾಧ್ಯವಾಗುವುದೇ ಇಲ್ಲ.

ಎರಡು ಸರಕುಗಳು ಪರಸ್ಪರ ಪ್ರತಿನಿಧಾನಗೊಳ್ಳುವುದು ಸಾಧ್ಯವಿರುವಾಗ, ಒಂದು ಸರಕಿನ ಬೇಡಿಕೆ ಹೆಚ್ಚಿದಾಗ, ಅದನ್ನು ಪ್ರತಿನಿಧಾನಿಸಬಹುದಾದ ವಸ್ತುವಿನ ಬೇಡಿಕೆ ಕಡಿಮೆಯಾಗುತ್ತದೆ. ಕಾಫಿ, ಚಹ, ಬಗೆಬಗೆಯ ಟೂತ್ ಪೇಸ್ಟ್‍ಗಳು ಮುಂತಾದವು ಪರಸ್ಪರ ಪ್ರತಿನಿಧಾನಿಸಬಹುದಾದ ಸರಕುಗಳು. ಈ ಸರಕುಗಳಲ್ಲಿ ಯಾವುದಾದರೂ ಒಂದು ಸರಕಿನ ಬೆಲೆ ಕಡಿಮೆಯಾದರೆ ಸಹಜವಾಗಿಯೇ ಆ ವರ್ಗದ ಇತರ ಸರಕುಗಳ ಬೇಡಿಕೆ ಕಡಿಮೆಯಾಗಿ ಬಿಡುತ್ತದೆ. ಆದ್ದರಿಂದ ಉತ್ಪಾದಕರು ತಾವು ಉತ್ಪಾದಿಸುತ್ತಿರುವ ಸರಕಿಗೆ ಇರಬಹುದಾದ, ಪ್ರತಿಸ್ಥಾಪಿಸಬಹುದಾದ ಇತರ ಸರಕುಗಳು ಮತ್ತು ಅವುಗಳ ಬೆಲೆಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ವ್ಯಕ್ತಿಯ ವರಮಾನ ಮಿತವಾಗಿದ್ದು, ಕೊಳ್ಳಬೇಕಾಗಿರುವ ವಸ್ತುಗಳು ಹೇರಳವಾಗಿರುವುದರಿಂದ, ಪ್ರತಿಯೊಂದು ಗುಂಪಿನ ಸರಕುಗಳೂ ಪ್ರತಿಸ್ಥಾಪಿಸಬಹುದಾದ ವಸ್ತುಗಳಾಗಿರುತ್ತವೆ ಎಂಬುದು ವಿಶಾಲಾರ್ಥದಲ್ಲಿ ಗಮನಿಸಬೇಕಾದ ಸಂಗತಿ ಆದರೆ, ಎರಡು ಸರಕುಗಳು ಒಂದೇ ಮಟ್ಟದ ತುಷ್ಟಿಗುಣವನ್ನು ನೀಡುವಾಗ ಆ ಸರಕುಗಳ ಪ್ರತಿಸ್ಥಾಪನೆಯ ಮಟ್ಟ ಮಹತ್ತ್ವದ್ದಾಗುತ್ತದೆ.

ಬೆಲೆ ಮತ್ತು ಪ್ರತಿಸ್ಥಾಪನೆಗೆ ಸಂಬಂಧಿಸಿದಂತೆಯೂ ಕೆಲವು ಮುಖ್ಯ ಸಂಗತಿಗಳನ್ನು ಗಮನಿಸಬೇಕು. ಬೆಲೆಯ ಬದಲಾವಣೆಗಳಿಂದ ಎರಡು ಪರಿಣಾಮಗಳುಂಟಾಗುತ್ತವೆ. ಮೊದಲನೆಯದು ಪ್ರತಿನಿಧಾನ ಪರಿಣಾಮ ಎರಡನೆಯದು ವರಮಾನ ಪರಿಣಾಮ ಯಾವುದೇ ಒಂದು ಸರಕಿನ ಬೆಲೆ ಹೆಚ್ಚಾದಾಗ, ಅದಕ್ಕೆ ಪ್ರತಿನಿಧಾನಿಸಬಹುದಾದ ಸರಕುಗಳು ಸಾಮಾನ್ಯವಾಗಿ ಇರುವುದರಿಂದ ಬೆಲೆ ಹೆಚ್ಚಾಗಿರುವ ಸರಕಿನ ಬೇಡಿಕೆ ಕಡಿಮೆಯಾಗುತ್ತದೆ. ಇದು ಪ್ರತಿನಿಧಾನದ ಪರಿಣಾಮ. ಇದರ ಜೊತೆಗೆ ಬೆಲೆ ಏರಿಕೆ ಮತ್ತೊಂದು ಪರಿಣಾಮವನ್ನುಂಟುಮಾಡುತ್ತದೆ. ಅದೆಂದರೆ, ವರಮಾನ ಪರಿಣಾಮ ಯಾವುದೇ ವಸ್ತುವಿನ ಬೆಲೆ ಹೆಚ್ಚಾದಾಗ ಜನರಿಗೆ ಅದನ್ನು ಕೊಳ್ಳುವ ಶಕ್ತಿ ಕಡಿಮೆಯಾಗುವುದರಿಂದ ಬೆಲೆ ಏರಿಕೆ ಜನರ ವರಮಾನವನ್ನು ಪರೋಕ್ಷವಾಗಿ ಕಡಿಮೆಮಾಡುತ್ತದೆ. ಆದ್ದರಿಂದ ಬೆಲೆ ಏರಿಕೆಯಿಂದ ಪ್ರತಿನಿಧಾನ ಮತ್ತು ವರಮಾನ ಈ ಎರಡೂ ಬಗೆಯ ಪರಿಣಾಮಗಳಾಗುತ್ತವೆ.

ಒಂದು ನಿರ್ದಿಷ್ಟ ಬೆಲೆ ಮಟ್ಟದಲ್ಲಿ ಅನುಭೋಗಿ ಒಂದು ಸರಕನ್ನು ಮತ್ತೊಂದು ಸರಕಿನಿಂದ ಪ್ರತಿನಿಧಿಸುವ ದರವನ್ನು ಸೀಮಾಂತ ಪ್ರತಿನಿಧಾನ ದರವೆಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿ ಂ ಎಂಬ ಸರಕನ್ನು ಃಗೆ ಪ್ರತಿನಿಧಾನಿಸಿಕೊಳ್ಳಬಯಸುತ್ತಾನೆಂದು ಭಾವಿಸೋಣ. ಅವನ ಬಳಿ ಂ ಹೇರಳವಾಗಿದೆ ಎಂದು ಇಟ್ಟುಕೊಳ್ಳೋಣ. ಪ್ರಾರಂಭದಲ್ಲಿ ಅವನು ಹೆಚ್ಚು ಹೆಚ್ಚಾಗಿ ಂಯನ್ನು ಬಿಟ್ಟು ಕೊಟ್ಟು ಃ ಯನ್ನು ಪಡೆಯಲು ತಯಾರಿರುತ್ತಾನೆ. ಆದರೆ ಅವನ ಬಳಿ ಂಯ ದಾಸ್ತಾನು ಕಡಿಮೆಯಾಗುತ್ತ ಬಂದಂತೆ ಅವನು ಃಗೆ ಪ್ರತಿಯಾಗಿ ಂ ಯನ್ನು ಮೊದಲಿಗಿಂತ ಕಡಿಮೆ ಪರಿಮಾಣದಲ್ಲಿ ಮಾತ್ರ ಬಿಟ್ಟುಕೊಡಲು ತಯಾರಿರುತ್ತಾನೆ. ಃಯ ಒಂದೊಂದು ಘಟಕಕ್ಕೂ ಪ್ರತಿಯಾಗಿ ಅನುಕ್ರಮವಾಗಿ ಬಿಟ್ಟುಕೊಡಲು ತಯಾರಿರುವ ಂ ಯ ಪರಿಣಾಮವನ್ನು ಸೀಮಾಂತ ಪ್ರತಿನಿಧಾನ ದರ ಎಂದು ಕರೆಯುಲಾಗುತ್ತದೆ ಔದಾಸೀನ್ಯ ವಕ್ರರೇಖಾ ಮೀಮಾಂಸೆಯಲ್ಲಿ ಈ ಪರಿಕಲ್ಪನೆಗೆ ಮುಖ್ಯವಾದ ಸ್ಥಾನವಿದೆ. (ಸಿ.ಕೆ.ಆರ್.)