ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತೀಪ

ವಿಕಿಸೋರ್ಸ್ದಿಂದ

ಪ್ರತೀಪ ಚಂದ್ರವಂಶದ ದೊರೆ, ಭೀಷ್ಮನ ತಾತ. ಈತನಿಗೆ ಪರಿಶ್ರಮ ಎಂಬ ಇನ್ನೊಂದು ಹೆಸರು ಇರುವುದಾಗಿ ತಿಳಿದುಬರುತ್ತದೆ. ಇವನ ಬಗ್ಗೆ ಎರಡು ರೀತಿಯ ಉಲ್ಲೇಖ ಕಂಡು ಬರುತ್ತವೆ. ಒಂದೆಡೆ ಚಂದ್ರವಂಶದ ಧೃತರಾಷ್ಟ್ರನೆಂಬ ದೊರೆಯ ಮಗನೆಂದೂ ಇನ್ನೊಂದೆಡೆ ಪರೀಕ್ಷಿತನ ಮಗನಾದ ಭೀಮಸೇನ ಮತ್ತು ಸುಕುಮಾರಿ ಎಂಬ ರಾಜದಂಪತಿಗಳ ಮಗನೆಂದೂ ಹೇಳಿದೆ. ಈತ ಶೈಬ್ಯರಾಜನ ಮಗಾಳಾದ ಸುನಂದಿ ಎಂಬುವಳನ್ನು ವಿವಾಹವಾಗಿ ಆಕೆಯಲ್ಲಿ ದೇವಾಪಿ, ಶಂತನು ಮತ್ತು ಬಾಹ್ಲೀಕ ಎಂಬ ಗಂಡುಮಕ್ಕಳನ್ನು ಪಡೆದ. ಒಂದು ದಿನ ಈತ ಗಂಗಾತೀರದಲ್ಲಿ ತಪಸ್ಸು ಮಾಡುತ್ತಿದ್ದಾಗ ಇವನ ರೂಪಕ್ಕೆ ಮರುಳಾದ ಗಂಗೆ ದಿವ್ಯ ಸ್ತ್ರೀರೂಪದಿಂದ ಬಂದು ಇವನ ಬಲತೊಡೆಯ ಮೇಲೆ ಕುಳಿತುಕೊಳ್ಳುತ್ತಾಳೆ. ಪ್ರತೀಪ ಕಣ್ಣುತೆರೆದು ಗಂಗೆಯನ್ನು ನೋಡಿ ತಾನು ಏಕಪತ್ನೀವ್ರತಸ್ಥನಾಗಿರುವುದಾಗಿಯೂ ಆಕೆ ಬಲ ತೊಡೆಯ ಮೇಲೆ ಕುಳಿತಿದ್ದರಿಂದ ಮಗಳಿಗೆ ಸಮನಾಗಿರುವುದಾಗಿಯೂ ಹೇಳುತ್ತಾನಲ್ಲದೆ ತನ್ನ ಮಗನನ್ನು ವಿವಾಹವಾಗಲು ತಿಳಿಸುತ್ತಾನೆ. ಅದರಂತೆ ಗಂಗೆ ಪ್ರತೀಪನ ಮಗ ಶಂತನುವನ್ನು ವರಿಸುತ್ತಾಳೆ. (ಜಿ.ಎಸ್.ಎಸ್.ಬಿ.)