ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತ್ಯಕ್ಷ
ಪ್ರತ್ಯಕ್ಷ ಇದು ಇಂದ್ರಿಯಾರ್ಥಸಂನಿಕರ್ಷಜನ್ಯಜ್ಞಾನ, ಎಂದರೆ ಐದು ಜ್ಞಾನೇಂದ್ರಿಯಗಳು (ಕಣ್ಣು, ಕಿವಿ, ಮೂಗು ನಾಲಿಗೆ, ಚರ್ಮ) ತಮ್ಮ ತಮ್ಮ ವಿಷಯಗಳಲ್ಲಿ (ರೂಪ, ಶಬ್ದ, ವಾಸನೆ, ರುಚಿ, ಸ್ಪರ್ಶ) ಪ್ರಸಕ್ತವಾಗಿ ಮಾನಸಿಕ ವ್ಯಾಪಾರವನ್ನು ಉದ್ಬೋಧಿಸಿದಾಗ ಉಂಟಾಗುವ ತಿಳಿವಳಿಕೆ. ಆತ್ಮಪದಾರ್ಥ ಮನಸ್ಸಿನೊಂದಿಗೆ ಸೇರಿ, ಮನಸ್ಸು ಇಂದ್ರಿಯಗಳೊಂದಿಗೆ ಸೇರಿ, ಇಂದ್ರಿಯಗಳು ಬಾಹ್ಯವಿಷಯಗಳೊಂದಿಗೆ ಸೇರಿ ಪ್ರತ್ಯಕ್ಷವಾಗುವುದು (ಆತ್ಮಾ ಮನಸಾ ಸಂಯುಜ್ಯತೇ, ಮನ ಇಂದ್ರಿಯೇಣ, ಇಂದ್ರಿಯಮರ್ಥೇನ, ತತಃ ಪ್ರತ್ಯಕ್ಷಂ). ಅಕ್ಷ ಎನ್ನುವುದು ಇಂದ್ರಿಯವನ್ನು ಸೂಚಿಸುತ್ತದೆ; ವ್ಯಾಪಾರ ಅದಕ್ಕೆ ಅಭಿಮುಖ (ಪ್ರತಿ)ವಾಗಿದ್ದಾಗ ಪ್ರತ್ಯಕ್ಷ. ಇಂದ್ರಿಯ ವಿಷಯಗಳ ಸಂಯೋಗವಿಲ್ಲದೆ, ವಿಷಯದ ಸನ್ನಿಧಿಯಿಲ್ಲದೆ, ಇಂದ್ರಿಯದಲ್ಲಿ ಯೋಗ್ಯತೆಯಿಲ್ಲದೆ ಪ್ರತ್ಯಕ್ಷವಾಗದು. ಪ್ರತ್ಯಕ್ಷಜ್ಞಾನ ವಸ್ತುತಂತ್ರ, ಬಾಹ್ಯವಿಷಯಗಳನ್ನು ಅವಲಂಬಿಸಿದೆಯೆಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಮನಸ್ಸಿನ ಕಲ್ಪನಾವ್ಯಾಪಾರವಿಲ್ಲದೆ ವಸ್ತುವನ್ನೇ ಆಶ್ರಯಿಸಿ ಇಂದ್ರಿಯವ್ಯಾಪಾರಗಳ ಪ್ರಸಕ್ತವಾದಾಗ ಸಂವೇದನೆಗಳು (ಸಂಮೂಢವಸ್ತು ಮಾತ್ರ) ಮೊದಲು ಉತ್ಪನ್ನವಾಗಿ ಅನಂತರ ವಸ್ತುವಿನ ಲಕ್ಷಣಗಳೆಲ್ಲ ಗೃಹೀತವಾಗುತ್ತವೆ (ವಸ್ತುವಿಶೇಷ) ಎಂದು ಸಾಂಖ್ಯರು ವಾದಿಸುತ್ತಾರೆ. ಈ ಎರಡು ಹಂತಗಳನ್ನು ನಿರ್ವಿಕಲ್ಪಕ, ಸವಿಕಲ್ಪಕಗಳೆಂದೂ ನಿರ್ದೇಶಿಸುತ್ತಾರೆ. ಜೈನರು ಇದೇ ಜಾಡನ್ನು ಹಿಡಿದು ಬೋಧದಲ್ಲಿ ದರ್ಶನ (ದಂಸಣ), ಜ್ಞಾನ(ಣಾಣ)ಗಳೆಂಬ ಪ್ರಕಾರಗಳನ್ನು ಹೇಳುತ್ತಾರೆ. ವಿಷಯಗ್ರಹಣ ಅಸ್ಫುಟವಾಗಿ ಸಾಮಾನ್ಯವಾಗಿದ್ದಾಗ ಅದು ನಿರಾಕಾರ, ನಿರ್ವರ್ಣನ (ನಿವ್ವಣ್ಣನ). ಆದರೆ ಇದು ಮೊದಲ ಹೆಜ್ಜೆಯಷ್ಟೆ. ಪ್ರತ್ಯಕ್ಷ ಸಿದ್ಧಿಸಬೇಕಾದರೆ ಪ್ರವೃತ್ತಿಗಳು ಸಾಕಾರವಾಗಬೇಕು, ವಿಷಯಗಳ ರೂಪ-ಲಕ್ಷಣಗಳು ತಿಳಿಯಬೇಕು. ಜಿನಭದ್ರ ಇದನ್ನು ಸಂವ್ಯವಹಾರ ಪ್ರತ್ಯಕ್ಷವೆನ್ನುತ್ತಾನೆ. ಇಂದ್ರಿಯಗಳ ವ್ಯಾಪಾರದಿಂದಲೇ ಉತ್ಪನ್ನವಾಗಿ ವರ್ತಮಾನ ಕಾಲಕ್ಕೆ ಮಾತ್ರ ಸೀಮಿತವಾಗಿ (ಸಾಂಪ್ರತ ಕಾಲವಿಷಯ) ಪ್ರತ್ಯಕ್ಷ ಜೈನರ ಪರಿಭಾಷೆಯಲ್ಲಿ ಮರೆಜ್ಞಾನ ಅಥವಾ ಅಭಿನಿಬೋಧಕಜ್ಞಾನವೆನಿಸಿಕೊಳ್ಳುತ್ತದೆ. ಅವರ ಪಾಲಿಗೆ ಇದು ಪರೋಕ್ಷ ಜ್ಞಾನವೇ; ಅಪರೋಕ್ಷವೆಂದರೆ ಕೇವಲಜ್ಞಾನವಷ್ಟೆ. ಪ್ರತ್ಯಕ್ಷಕ್ಕೆ ಭದ್ರಬಾಹು ಹುಡುಕುವುದು, ಇಂದ್ರಿಯಜ್ಞಾನ, ವಿಮರ್ಶೆ, ಲಕ್ಷಣನಿರ್ದೇಶ, ನೆನಪು, ಪ್ರತ್ಯಭಿಜ್ಞೆ ಎಂದು ಪರ್ಯಾಯಗಳನ್ನು ಹೇಳಿದ್ದಾನೆ. ಅಕ್ಷವೆಂಬುದು ಆಶ್ ಧಾತುವಿನಿಂದ ಆದದ್ದೆಂದೂ ವ್ಯಾಪಿಸುವುದು ಎಂದು ಅರ್ಥವೆಂದೂ ಪ್ರತಿ ಎಂದರೆ ಪ್ರತಿಗತ ಅಥವಾ ಆಶ್ರಯಿಸಿ ಇರುವುದು ಎಂದೂ ಪ್ರತ್ಯಕ್ಷವೆಂದರೆ ವಸ್ತುತಂತ್ರವಾದ ವ್ಯಾಪಾರವೆಂದೂ ಜೈನರ ನಿರ್ಯುಕ್ತಿ. ಈ ಪ್ರತ್ಯಕ್ಷದಲ್ಲಿ ಅವಗ್ರಹ, ಈಹಾ, ಅವಾಯ, ಧಾರಣಾ ಎಂಬ ಹಂತಗಳಿವೆ. ವಿಷಯದ ಸ್ವರೂಪವನ್ನು ಗ್ರಹಿಸುವುದು ವ್ಯಂಜನಾವಗ್ರಹ, ವಿಷಯದ ಲಕ್ಷಣಗಳನ್ನು ಗ್ರಹಿಸುವುದು ಅರ್ಥಾವಗ್ರಹ-ಈ ಎರಡೂ ಅವಗ್ರಹ, ವಿಷಯಗಳ ಕಡೆ ಪ್ರವೃತ್ತಿಬಿಡುವುದು ಈಹಾ ಎನಿಸಿಕೊಳ್ಳುತ್ತದೆ. ವಸ್ತುವಿನ ವಿಶಿಷ್ಟಧರ್ಮವನ್ನು ತಿಳಿಯಲು ಪ್ರಯತ್ನಿಸುವುದೇ ಈಹೆಯೆಂದು ದೇವನಂದಿಯವಾದ. ಅವಾಯವೆಂದರೆ ಆವರ್ತನ, ವಸ್ತುವಿನ ವಿಶಿಷ್ಟಲಕ್ಷಣಗಳನ್ನು ಗ್ರಹಿಸಿ ನಿರ್ಧರಿಸುವುದು. ಹೀಗೆ ನಿಶ್ಚಿತವಾದದ್ದು ಜೀವಿಯಲ್ಲಿ ನಿಂತರೆ, ಪ್ರತಿಷ್ಠೆಯಾದರೆ ಅದು ಧಾರಣೆ. ನೆನಪು ಇದರ ಒಂದು ಪ್ರಕಾರವಷ್ಟೆ. ವೇದನಾನಿಷ್ಠವಾದ ವ್ಯಾಪಾರವನ್ನು ಬೌದ್ಧರು ಪ್ರತ್ಯಕ್ಷವೆನ್ನುತ್ತಾರೆ. ವೇದನೆಯೆನ್ನುವುದು ನಾಮರೂಪಗಳ ಪ್ರಪಂಚದಲ್ಲಿ ಪ್ರಸಕ್ತವಾದುದು. ವಿಷಯಾನುಭವವೇ ವೇದನೆಯೆಂದು ಸಂಘಪಾಲಸ್ಥವಿರನ ನಿರೂಪಣೆ. ಅವರ ಪರಿಭಾಷೆಯಲ್ಲಿ ಪ್ರತ್ಯಕ್ಷ ಸಂಜ್ಞೆಯೆಂಬ ಸ್ಕಂಧದಲ್ಲಿ ಸೇರುತ್ತದೆ. ರೂಪವನ್ನು ಗ್ರಹಿಸುವುದು ಅಧಿರೂಪ ಸಂಜ್ಞಾ, ಹೀಗೆ ಗ್ರಹಿಸಿದದನ್ನು ಮಾತಿನಲ್ಲಿ ಮೂಡಿಸುವುದು ಅಧಿವಚನಸಂಜ್ಞಾ; ಹೀಗೆ ಸಂಜ್ಞೆಯಲ್ಲಿ ಎರಡು ಬಗೆ. ಅನಾತ್ಮವಾದಿಗಳಾದ ಸ್ಥರವಿರಬೌದ್ಧರು ಪ್ರತ್ಯಕ್ಷ ವ್ಯಾಪಾರಕ್ಕೆ ಅಧಿಷ್ಠಾನರೂಪವಾಗಿ ಭವಂಗವನ್ನು ನಿರೂಪಿಸುತ್ತಾರೆ. ಭವಂಗವೆಂಬುದು ನದಿಯಂತೆ, ದೀಪಶಿಖೆಯಂತೆ ಸಂತತಿ ಸತ್ಯವಾಗಿ ವ್ಯಕ್ತಿಯ ಎಲ್ಲ ವ್ಯಾಪಾರಗಳಿಗೂ ಹಿನ್ನಲೆಯಲ್ಲಿ ಇರುತ್ತದೆ. ಸ್ಥೂಲವಾಗಿ ಇದು ವೈದಿಕ ಸಂಪ್ರದಾಯದ ಆತ್ಮವಿದ್ದಂತೆ. ಇದನ್ನು ಭವಂಗಚಿತ್ತವೆಂದು ನಿರ್ದೇಶಿಸುತ್ತಾರೆ. ಪ್ರತ್ಯಕ್ಷ ವ್ಯಾಪಾರ ಆರಂಭವಾಗುವ ವಿಷಯಗಳಿಂದ ಉತ್ತೇಜವಾಗಿ ಇಂದ್ರಿಯ ಈ ಭವಂಗಸ್ರೋತಕ್ಕೆ ಅಡ್ಡಿಬರುತ್ತದೆ. ಭವಂಗದ ನದಿ ಮುಂದೆ ಹರಿಯದೆ ನಿಲ್ಲುತ್ತದೆ. ಆಗ ಪ್ರತ್ಯಕ್ಷ ಪ್ರವೃತ್ತಿ ವಿಷಯದಡೆ ಹೋಗಲು ಹವಣಿಸುತ್ತದೆ. ಇಂದ್ರಿಯಗಳು ವಿಷಯಗಳೊಂದಿಗೆ ಬೆರೆಯುತ್ತವೆ. ಇಂದ್ರಿಯ ಜನ್ಯವಾದ ವೇದನಾ ವಿವರಗಳನ್ನು ಗ್ರಹಿಸಿ ಒಳಗೂಡಿಸಿಕೊಳ್ಳುವ ವ್ಯಾಪಾರ ಸಂಪಟಚ್ಛನ. ಹೀಗೆ ಒಳಗೂಡಿಸಿಕೊಂಡಿದ್ದನ್ನು ವಿಮರ್ಶೆ ಮಾಡುವುದು ಸಂಕೀರಣ: ಇಲ್ಲಿ ಮನೋದ್ಧಾರ ತೆರೆದು ಮಾನಸವ್ಯಾಪಾರಗಳು ಹೆಚ್ಚುತ್ತವೆ. ವಿಮರ್ಶೆಮಾಡಿ ಲಕ್ಷಣಗಳನ್ನು ನಿರ್ಧರಿಸಿ ವಸ್ತುವನ್ನು ನಿಲ್ಲಿಸುವುದು ವೋಟ್ಠಪ್ಪನಪ; ಹೀಗೆ ನಿಲ್ಲಿಸಿದ್ದನ್ನು ತ್ವರಿತವಾದ ಮಾನಸಕ್ರಿಯೆಗಳಿಂದ ಅರಗಿಸಿಕೊಂಡು ವಿಷಯವನ್ನು ಸಂಪೂರ್ಣವಾಗಿ ಅರಿಯುವುದು ಜವನ. ಹೀಗೆ ಅರಿತಿದ್ದನ್ನು ಅರ್ಥವತ್ತಾಗಿ ಸಂಜ್ಞಾರೂಪದಲ್ಲಿ ಉಳಿಸಿಕೊಳ್ಳುವುದು ತದಾರಮ್ಮಣ. ಇಲ್ಲಿಗೆ ಪ್ರತ್ಯಕ್ಷವ್ಯಾಪಾರಗಳ ಸಂತತಿ ಮುಗಿಯಿತು. ಬಾಹ್ಯವಿಷಯ ವ್ಯಕ್ತಿಯಲ್ಲಿ ಹೀಗೆ ಅಂತರ್ಗತವಾಗಲು ಹಿಂದೆ ಅಡ್ಡಿಯಿಂದ ನಿಂತಿದ್ದ ಭವಂಗಸ್ರೋತ ಮತ್ತೆ ಹರಿಯತೊಡಗುತ್ತದೆ. ಭವಂಗಕ್ಕೆ ಅಡ್ಡಿಬಂದಿದ್ದಾಗ ಪ್ರತ್ಯಕ್ಷವ್ಯಾಪಾರದ ಅವಧಿಯನ್ನು ವೀಥಿಚಿತ್ತವೆಂದೂ ಬೌದ್ಧರು ವ್ಯವಹರಿಸುತ್ತಾರೆ. ಪ್ರತ್ಯಕ್ಷದ ವ್ಯಾಪಾರ ಭವಂಗ- ಉಪಚ್ಛೇದ ವೀಥಿಚಿತ್ತ, ಭವಂಗಪಾತವೆಂಬ ಹಂತಗಳಲ್ಲಿ ವ್ಯಾಪ್ತವಾಗುತ್ತದೆ. ವೀಥಿ ಎಂದರೆ ವಿಷಯಾನುಗತವಾದ ಪ್ರವೃತ್ತಿ. ಇದರಲ್ಲಿ ಇಂದ್ರಿಯಗಳಿಂದ ಉಂಟಾದ ಚಕ್ಷುದ್ವಾರ ವೀಥಿ. ಅದನ್ನು ಅನುಸರಿಸಿ ಉಂಟಾದ ತದನುವರ್ತಕ ಮನೋದ್ವಾರ ವೀಥಿ ಎಂದು ವಿಭಾಗಗಳನ್ನು ಹೇಳುತ್ತಾರೆ. ಪ್ರತ್ಯಕ್ಷದಲ್ಲಿ ವಿಷಯವನ್ನು ಮಾತಿನಿಂದ ನಿರ್ದೇಶಿಸುವುದು (ಶಬ್ಬಪ್ರಜ್ಞಪ್ತಿ ಅಥವಾ ನಾಮಪ್ರಜ್ಞಪ್ತಿ) ಮತ್ತು ಅರ್ಥದಿಂದ ನಿರ್ದೇಶಿಸುವುದು (ಅರ್ಥಪ್ರಜ್ಞಪ್ತಿ) ಎರಡೂ ಉಂಟು. ಇಂದ್ರಿಯಗಳ ಮೂಲಕ ಒದಗಿದ ಬಾಹ್ಯವಸ್ತುಗಳ ಜ್ಞಾನವೇ ಪ್ರತ್ಯಕ್ಷವೆಂದು ಮೀಮಾಂಸಕರು ಒಪ್ಪುತ್ತಾರೆ. ಅನನುಭೂತವಾದದ್ದನ್ನು ಗ್ರಹಿಸಿ, ವರ್ತಮಾನ ಕಾಲಕ್ಕೆ ಮಾತ್ರ ವ್ಯಾಪ್ತವಾಗಿ ವಾಸ್ತವವಾಗಿ ಇರುವ ಪದಾರ್ಥಗಳ ಸಾನ್ನಿಧ್ಯದಲ್ಲಿ ಪ್ರವೃತ್ತವಾಗುವುದು ಪ್ರತ್ಯಕ್ಷ. ಕುಮಾರಿಲಭಟ್ಟ ನಿರ್ವಿಕಲ್ಪಕ ಪ್ರತ್ಯಕ್ಷ, ಸವಿಕಲ್ಪಕ ಪ್ರತ್ಯಕ್ಷವೆಂದು ವಿಭಾಗಮಾಡುತ್ತಾನೆ. ವಸ್ತುವಿನ ಸ್ಥೂಲಗ್ರಹಣಕ್ಕೆ ಆಲೋಚನವೆನ್ನುತ್ತಾನೆ. ಪ್ರತ್ಯಕ್ಷದಲ್ಲಿ ಬೇರೆ ಬೇರೆ ವಿವರಗಳನ್ನು ಒಂದುಗೂಡಿಸುವ ಅನುವೃತ್ತ ವ್ಯಾಪಾರವೂ ವಿವರಗಳನ್ನು ಬೇರ್ಪಡಿಸುವ ವ್ಯಾವೃತ್ತವ್ಯಾಪಾರವೂ ಇರುತ್ತವೆ. ಒಮ್ಮೆ ಪ್ರತ್ಯಕ್ಷದಿಂದ ಗ್ರಹಿಸಿದ ವಸ್ತು. ಮತ್ತೊಂದು ಪ್ರತ್ಯಕ್ಷದಿಂದ ಬಾಧಿತವಾಗದು. ಪ್ರಾಭಾಕರ ಮೀಮಾಂಸಕರು ಪ್ರತ್ಯಕ್ಷವನ್ನು ಸಾಕ್ಷಾತ್ಪ್ರತೀತಿಯೆಂದು ನಿರೂಪಿಸುತ್ತಾರೆ. ಪ್ರತ್ಯಕ್ಷವಿಷಯವಾದ ವಸ್ತು ಅವಯವಿಯಾಗಿಬೇಕೆಂದು ಇವರ ವಾದ; ವಸ್ತುವಿನ ವಿಭಿನ್ನ ಅವಯವಗಳನ್ನು ಪ್ರತ್ಯಕ್ಷ ಗ್ರಹಿಸುವುದಕ್ಕಿಂತ ಸಮಷ್ಟಿಯಿಂದ ವಸ್ತುವನ್ನು ಗ್ರಹಿಸುವುದು ಅಗತ್ಯ. ಪ್ರತ್ಯಕ್ಷವೆಂಬುದು ಸಾರ್ಥಕವಾದ ಕ್ರಿಯೆಗಳಿಗೆ ಎಡೆಮಾಡಿಕೊಡುವುದೆಂಬ ವಾದವನ್ನು ಎಲ್ಲರೂ ಒಪ್ಪುತ್ತಾರೆ. ಇದೇ ಪ್ರಮಾ ಮತ್ತು ಭ್ರಮಾಗಳಿಗೆ ಇರುವ ಭೇದ. ಪ್ರತ್ಯಕ್ಷದಿಂದ ಉಪಲಬ್ಧವಾದ ವಿವರಗಳನ್ನವಲಂಬಿಸಿ ಕ್ರಿಯೆ ಸಿದ್ಧವಾಗುವ ಲಕ್ಷಣವನ್ನು ಸೌತ್ರಾಂತಿಕರು ಸಂವಾದಕತ್ವವೆನ್ನುತ್ತಾರೆ. ಉದಯನನ ಪ್ರಕಾರ ಪ್ರತ್ಯಕ್ಷ ಸಮ್ಯಕ್ ಪರಿಚ್ಛಿತ್ತಿ, ಧರ್ಮಕೀರ್ತಿಯ ಪ್ರಕಾರ ಅರ್ಥಪ್ರಾಪಕ. ಶ್ರೀಹರ್ಷನ ಖಂಡಖಂಡಕಾವ್ಯದಲ್ಲಿ ಪ್ರತ್ಯಕ್ಷದ ವಿಚಾರವಾಗಿ ವಿವಿಧ ಮತಗಳನ್ನು ಸಂಗ್ರಹಿಸಲಾಗಿದೆ-ಯಥಾರ್ಥಾನುಭವ, ಅವ್ಯಭಿಚಾರಿ ಅನುಭವ, ಅವಿಸಂವಾದಿ, ಪ್ರವೃತ್ತಿ ಸಮರ್ಥ ಇತ್ಯಾದಿಯಾಗಿ, ದೃಷ್ಟ-ದೃಶ್ಯ ಭೇದ ವಾಸ್ತವವಾಗಿ ಇದ್ದರೂ ಪ್ರತ್ಯಕ್ಷದಲ್ಲಿ ಇದು ವ್ಯಕ್ತವಾಗುವುದಿಲ್ಲವೆಂದೂ ದೃಶ್ಯವಿವರಗಳಲ್ಲೇ ಪ್ರತ್ಯಕ್ಷ ಭೇದವನ್ನು ತೋರಿಸುವುದೆಂದೂ ಮಂಡನಮಿಶ್ರ ವಾದಿಸುತ್ತಾನೆ. ವೇದಾಂತಿಗಳು ಸ್ವಾಪ್ನ ಪ್ರತ್ಯಕ್ಷವನ್ನು ಜಾಗ್ರತ್ಪ್ರತ್ಯಕ್ಷದಿಂದ ಬೇರೆಯಾಗಿ ನಿರೂಪಿಸುತ್ತಾರೆ. ಯೋಗಚಾರರೂ ದೃಷ್ಟಿಸೃಷ್ಟಿವಾದಿಗಳೂ ಪ್ರತ್ಯಕ್ಷವನ್ನು ನಿರಾಕರಿಸುತ್ತಾರೆ; ಇದನ್ನು ವೇದಾಂತಿಗಳು ಪ್ರತಿಭಟಿಸುತ್ತಾರೆ.
ಮನಶ್ಶಾಸ್ತ್ರದ ಪ್ರಕಾರ ಪ್ರತ್ಯಕ್ಷದ ವಿವರಗಳಿಗೆ (ನೋಡಿ- ಪ್ರತ್ಯಕ್ಷಾನುಭವ) (ಎಸ್.ಕೆ.ಆರ್.)