ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತ್ಯಭಿಜ್ಞಾ

ವಿಕಿಸೋರ್ಸ್ದಿಂದ

ಪ್ರತ್ಯಭಿಜ್ಞಾ - ಕಾಶ್ಮೀರ ಶೈವದರ್ಶನಕ್ಕೆ ಇರುವ ಇನ್ನೊಂದು ಹೆಸರು. ಮೂಲತಃ ಪರಮಾತ್ಮಸ್ವರೂಪನಾಗಿದ್ದು ಆದರೆ ತನ್ನ ನಿಜಸ್ವರೂಪವನ್ನು ಮರೆತು ತಾನು ಶರೀರ-ಮನಸ್ಸುಗಳ ಸಮುದಾಯವೇ ಎಂದು ಭಾವಿಸುವ ಜೀವನು ಆಧ್ಯಾತ್ಮಿಕ ಸಾಧನೆಯಿಂದ ಪುನಃ ತನ್ನ ಪರಮಾತ್ಮಸ್ವರೂಪವನ್ನು ಕಂಡುಕೊಳ್ಳಬಹುದು ಎಂದು ಈ ದರ್ಶನ ಬೋಧಿಸುವುದರಿಂದ ಇದಕ್ಕೆ ಪ್ರತ್ಯಭಿಜ್ಞಾ (ಪುನಃ ನೆನಪು ಮಾಡಿಕೊಳ್ಳುವುದು) ಎಂಬ ಹೆಸರು.

ಪ್ರತ್ಯಭಿಜ್ಞಾ ಮತ ಕ್ರಿ.ಶ. ಎಂಟು ಅಥವಾ ಒಂಬತ್ತನೆಯ ಶತಮಾನದಲ್ಲಿ ಕಾಶ್ಮೀರ ದೇಶದ ವಸುಗುಪ್ತನೆಂಬಾತನಿಂದ ಪುನರುಜ್ಜೀವನಗೊಂಡಿತು. ಶಿವ-ಸೂತ್ರಗಳು ವಸುಗುಪ್ತನಿಗೆ ಉಂಟಾದ ಅನುಭವಗಳ ದಾಖಲೆ, ಪ್ರತ್ಯಭಿಜ್ಞಾ ಮತವನ್ನು ಕುರಿತು ಸಾಹಿತ್ಯ ಹೇರಳವಾಗಿದೆ. ಇದನ್ನು ಆಗಮ, ಸ್ಪಂದ ಮತ್ತು ಪ್ರತ್ಯಭಿಜ್ಞಾ ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮಾಲಿನೀ ವಿಜಯ ಸ್ವಚೌಂದ ವಿಜ್ಞಾನಭೈರವ, ಮೃಗೇಂದ್ರ, ನೈಶ್ವಾಸ, ಸ್ವಯಂಭುವ, ರುದ್ರಯಾಮಲ, ಶಿವಸೂತ್ರಗಳೇ ಮುಂತಾದ ಆಗಮಗ್ರಂಥಗಳು ಗುರುಶಿಷ್ಯರಿಗೆ ಬಾಯಿಂದ ಬಾಯಿಗೆ ಹರಿದು ಬಂದವೆಂದು ಶೈವರ ನಂಬಿಕೆ. ಶಿವ-ಸೂತ್ರಗಳಲ್ಲಿ ಅಡಕವಾಗಿರುವ ತತ್ತ್ವಗಳ ವಿವರಣೆಯನ್ನು ಒಳಗೊಂಡಿರುವ ಸ್ಪಂದಶಾಸ್ತ್ರವಿಭಾಗ ಸೇರಿದ ಮುಖ್ಯಗ್ರಂಥವೆಂದರೆ ಕಲ್ಲಟಭಟ್ಟನ ಸ್ಪಂದಕಾರಿಕಾ. ಇದಕ್ಕೆ ರಮಾಕಾಂತನ ಸ್ಪಂದವಿವೃತ್ತಿ ಉತ್ಪಲ ವೈಷ್ಣವನ ಸ್ಪಂದ ಪ್ರದೀಪಿಕಾ, ಕ್ಷೇಮರಾಜನ ಸ್ಪಂದ ಸಂದೋಹ ಮತ್ತು ಸ್ಪಂದ ನಿರ್ಣಯ-ಎಂಬ ವ್ಯಾಖ್ಯಾನಗಳಿವೆ. ಪ್ರತ್ಯಭಿಜ್ಞಾ ವಿಭಾಗವು ಇತರ ಮತಗಳ ಖಂಡನೆ ಮತ್ತು ಸ್ವಮತದ ಯುಕ್ತಿಯುಕ್ತ ಸಮರ್ಥನೆಗಳನ್ನು ಒಳಗೊಂಡಿದೆ. ಸೋಮನಂದನ ಶಿವದೃಷ್ಟಿ. ಉತ್ಪಲನ ಈಶ್ವರ ಪ್ತತ್ಯಭಿಜ್ಞಾ ಇವು ಮುಖ್ಯ ಒರತ್ಯಭಿಜ್ಞಾ ಗ್ರಂಥಗಳು. ಈಶ್ವರನ ಪ್ರತ್ಯಭಿಜ್ಞಾ ಎಂಬ ಗ್ರಂಥಕ್ಕೆ ಉತ್ಪಲನದೇ ಆದ ಒಂದು ವೃತ್ತಿಯಿದೆಯಲ್ಲದೆ ಅವನ ಪ್ರಶಿಷ್ಯನಾದ ಅಭಿನವಗುಪ್ತನೆಂಬಾತನ ಪ್ರತ್ಯಭಿಜ್ಞಾ-ವಿಮರ್ಶಿನಿ ಮತ್ತು ಪ್ರತ್ಯಭಿಜ್ಞಾ ಹೃದಯ, ಅಭಿನವ ಗುಪ್ತನ ತಂತ್ರಲೋಕ, ತಂತ್ರಾಲೋಕಸಾರ ಮತ್ತು ಪರಮಾರ್ಥಸಾರ-ಇವು ಇತರ ಪ್ರತ್ಯಭಿಜ್ಞಾಗ್ರಂಥಗಳು.

ಪ್ರತ್ಯಭಿಜ್ಞಾ ಒಂದು ಆದ್ವೈತದರ್ಶನ. ಅದರ ಪ್ರಕಾರ ಶಕ್ತಿಯಿಂದೊಡಗೂಡಿದ ಶಿವನೊಬ್ಬನೆ ಅಂತಿಮ ತತ್ತ್ವ. ಶಿವನ ಈ ಶಕ್ತಿಯ ಅಭಿವ್ಯಕ್ತಿಯ ಸ್ಥೂಲಪ್ರಪಂಚ, ಶಿವ ಶಕ್ತಿಗಳಿಗೆ ಇರುವ ಸಂಬಂಧ ಭೇದಾಭೇದರೂಪವಾದುದು. ಸೃಷ್ಟಿಪೂರ್ವದಲ್ಲಿ ಶಿವ ಶಕ್ತಿಗಳು ಒಂದಾಗಿರುತ್ತವೆ. ಸೃಷ್ಟಿಯ ಅನಂತರ ಶಕ್ತಿ ಪ್ರಪಂಚವಾಗಿ ಅಭಿವ್ಯಕ್ತವಾದ ಮೇಲೆ ಶಿವ ಶಕ್ತಿಗಳಿಗೆ ಭೇದ ಪ್ರಾಪ್ತವಾಗುತ್ತದೆ. ಅದ್ವೈತಿಗಳು ಹೇಳುವಂತೆ ಈ ಭೇದ ಮಿಥ್ಯಯಲ್ಲ. ಎಂದರೆ ಸೃಷ್ಟಿಪೂರ್ವದಲ್ಲಿ ಪ್ರಪಂಚ ಶಿವನಲ್ಲಿ ಅಂತಸ್ಥವಾಗಿದ್ದು ಸೃಷ್ಟಿಯ ಅನಂತರ ವ್ಯಕ್ತವಾಗುತ್ತದೆ. ಆದರೆ ಇಲ್ಲಿ ಅಭೇದವೆಂದರೆ ಸಂಪೂರ್ಣ ಏಕತೆಯಲ್ಲ. ಸೃಷ್ಟಿಪೂರ್ವದಲ್ಲಿ ಶಿವ-ಶಕ್ತಿಗಳು ಅಭೇದವೆಂದರೆ ಅವು ಬೇರೆಬೇರೆಯಾಗಿರುವುದಿಲ್ಲವೆಂದರ್ಥ. ಬೇರೆಯಾಗದಿದ್ದರೂ ಅವು ಬೇರೆ ಬೇರೆಯೆಂದು ನಾವು ಗುರುತಿಸಬಹುದು.

ಶಕ್ತಿ ಪ್ರಪಂಚವಾಗಿ ಅಭಿವ್ಯಕ್ತವಾಗಲು ಇನ್ನಾವುದೇ ಬಾಹ್ಯಕರಣಗಳ ಅವಶ್ಯಕತೆಯಿಲ್ಲ. ಶಿವ ನೈಯಾಯಿಕರ ಈಶ್ವರನಂತೆ ಉಪಾದಾನ ಕಾರಣವನ್ನಾಗಲಿ ಸಾಂಖ್ಯರ ಪ್ರಕೃತಿಯಂತೆ ನಿಮಿತ್ತಕಾರಣವನ್ನಾಗಲಿ, ಅಪೇಕ್ಷಿಸದೆ ವಿಶ್ವವನ್ನು ಸೃಷ್ಟಿಸಬಲ್ಲ ಅವನೊಂದು ಸ್ವಚ್ಛವಾದ ಕನ್ನಡಿಯಂತೆ. ವಿಶ್ವ ಅವನ ಪ್ರತಿಬಿಂಬದಂತೆ. ಶಿವನೆಂಬ ಕನ್ನಡಿ ವಿಶ್ವವೆಂಬ ಪ್ರತಿಬಿಂಬವನ್ನು ಹೊರಗಿನ ಬಿಂಬ ಮತ್ತು ಬೆಳಕುಗಳ ಸಹಾಯವಿಲ್ಲದೆ ಹೊರಹೊಮ್ಮಿಸಬಲ್ಲುದು. ಈ ಕಾರಣದಿಂದಲೇ ಶಕ್ತಿಯನ್ನು ಸ್ವತಂತ್ರವೆಂದೂ ಕರೆಯುವುದು. ಶಿವನನ್ನು ಸ್ವತಂತ್ರನೆಂದು ಕರೆಯುವುದರ ಅರ್ಥವೂ ಇದೇ. ಇನ್ನೊಂದು ಅಂಶವೇನೆಂದರೆ ಶಿವ ವಿಶ್ವವನ್ನು ಸೃಷ್ಟಿಸಿದರೂ ಪ್ರತಿಬಿಂಬವನ್ನು ನೀಡುವ ಕನ್ನಡಿ ತನ್ನ ನೈರ್ಮಲವನ್ನು ಕಳೆದುಕೊಳ್ಳದಂತೆ ತಾನು ಬದಲಾವಣೆಗೆ ಒಳಗಾಗದೆ ಚಿತ್ಸ್ವರೂಪನಾಗಿಯೇ ಇರುತ್ತಾನೆ.

ಚಿತ್, ಆನಂದ, ಇಚ್ಛಾ, ಜ್ಞಾನ ಮತ್ತು ಕ್ರಿಯೆ ಇವು ಶಕ್ತಿಯ ಐದು ಅಂಶಗಳು. ವಿಶ್ವಸೃಷ್ಟಿಯನ್ನು ಉನ್ಮೇಷ (ಹೊರದೂಡುವಿಕೆ) ಎಂದು ಕರೆಯುತ್ತಾರೆ. ಸೃಷ್ಟಿಪೂರ್ವದಲ್ಲಿ ಪ್ರಪಂಚ ಶಿವನಲ್ಲಿ ಸೂಕ್ಷ್ಮವಾಗಿ ಅಡಗಿರುತ್ತದೆ ವಿವಿಧ ವರ್ಣಗಳಿಂದ ಕೂಡಿದ ಗರಿಗಳುಳ್ಳ ನವಿಲು ಅಂಡದಲ್ಲಿ ಅಡಕವಾಗಿರುವಂತೆ. ಆಗ ಶಿವನ ಚಿಚ್ಛಕ್ತಿ ಮಾತ್ರ ಪ್ರಧಾನವಾಗಿರುತ್ತದೆ. ಸೃಷ್ಟಿಕಾಲದಲ್ಲಿ ಶಿವನ ಆನಂದಶಕ್ತಿ ಪ್ರಬಲವಾಗುತ್ತದೆ. ಕಲೆಗಾರ ತನ್ನ ಹೃದಯದಲ್ಲಿ ಉಂಟಾಗುವ ಆನಂದವನ್ನು ತಡೆಹಿಡಿಯಲಾಗದೆ ಅದನ್ನು ತನ್ನ ಕಲಾಸೃಷ್ಟಿಯ ಮೂಲಕ ವ್ಯಕ್ತಪಡಿಸುವಂತೆ ಶಿವನೂ ತನ್ನ ಆನಂದವನ್ನು ತಡೆಹಿಡಿಯಲಾಗದೆ ಅದನ್ನು ತನ್ನ ಕಲಾಸೃಷ್ಟಿಯ ಮೂಲಕ ವ್ಯಕ್ತಪಡಿಸಲಿಚ್ಛಿಸುತ್ತಾನೆ. ವಿಶ್ವವನ್ನು ಸೃಷ್ಟಿಸಬೇಕೆಂಬ ಇಚ್ಛೆ ಪ್ರಬಲವಾದ ಮೇಲೆ ಅವನಿಂದ ಮೂವತ್ನಾಲ್ಕು ತತ್ತ್ವಗಳು ಒಂದರ ಅನಂತರ ಒಂದು ಹೊರಹೊಮ್ಮುತ್ತದೆ.

ಕಲೆಗಾರನ ಮನಸ್ಸಿನಲ್ಲಿ ತಾನು ಸೃಷ್ಟಿಸಬೇಕಾದ ಕಲೆಯ ಒಂದು ಕಲ್ಪನೆ ಪ್ರಾರಂಭದಲ್ಲಿ ಅಸ್ಪಷ್ಟವಾಗಿ ಮೂಡುವಂತೆ ಶಿವನಲ್ಲಿ ವಿಶ್ವದ ಒಂದು ಅಸ್ಪಷ್ಟ ಭಾವನೆ ಮೂಡುತ್ತದೆ. ಅಸ್ಪಷ್ಟವಾದ ವಿಶ್ವದ ಭಾವನೆಯನ್ನು ಒಳಗೊಂಡ ಈ ತತ್ತ್ವವನ್ನು ಸದಾಶಿವ ಎಂದು ಕರೆಯುವರು. ಕ್ರಮೇಣ ವಿಶ್ವದ ಈ ಭಾವನೆ ಕಲೆಗಾರನಿಗೆ ಅನಂತರ ತನ್ನ ಕಲೆಯ ಒಂದು ಸ್ಪಷ್ಟ ಕಲ್ಪನೆ ಬರುವಂತೆ ಇನ್ನೂ ಸ್ಪುಟವಾಗುತ್ತದೆ. ಮುಂದೆ ಉತ್ಪನ್ನವಾಗುವ ವಿಶ್ವದ ಭಾವ ಸ್ಫುಟವಾಗುವ ಶಿವನ ಈ ತತ್ತ್ವವನ್ನೆ ಈಶ್ವರ ಎಂದು ಕರೆಯುವರು. ಶಿವನಿಗೆ ತಾನು ಸೃಷ್ಟಿಸಬಹುದಾದ ವಿಶ್ವದ ಸ್ಪಷ್ಟ ಕಲ್ಪನೆಯ ಅರಿವು ಇರುವುದರಿಂದ ಈಶ್ವರ ತತ್ತ್ವದಲ್ಲಿ ಶಿವನ ಜ್ಞಾನಶಕ್ತಿಯೆ ಪ್ರಧಾನವಾಗಿರುತ್ತದೆ.

ಸೃಷ್ಟಿ ಪೂರ್ವದಲ್ಲಿ ಶಿವನಿಗೆ ಆತ್ಮದ ಅರಿವು ಮಾತ್ರ ಇರುವುದು. ಸೃಷ್ಟಿ ಪ್ರಾರಂಭವಾದಮೇಲೆ ಸದಾಶಿವತತ್ತ್ವದಲ್ಲಿ ಪ್ರಮೇಯದ (ವಿಶ್ವದ) ಅಸ್ಪಷ್ಟ ಭಾವನೆ ಮೂಡಿದರೂ ಆತ್ಮಭಾವವೆ ಹೆಚ್ಚಾಗಿರುವುದು. ಈಶ್ವರತತ್ತ್ವದಲ್ಲಿ ಪ್ರಮೇಯದ ಸ್ಪಷ್ಟ ಭಾವನೆ ಮೂಡಿ ಪ್ರಮೇಯ ಭಾವನೆ ಹೆಚ್ಚಾಗಿ ಆತ್ಮಭಾವ ಕಡಿಮೆಯಾಗುವುದು. ಮೊದಲು ಕೇವಲ ನಾನು ಎಂಬ ಅರಿವಿದ್ದರೆ ಅನಂತರ ನಾನು ಮತ್ತು ಇದು ಈ ಎರಡರ ಅರಿವೂ ಇರುವುದು. ಅನಂತರ ಈಶ್ವರತತ್ತ್ವದಲ್ಲಿ ಇದು ಮತ್ತು ನಾನು-ಎಂಬ ಅರಿವು ಶಿವನಿಗೆ ಆಗುವುದು. ಆದರೆ ಕ್ರಮೇಣ ಪ್ರಮಾತೃ ಪ್ರಮೇಯಗಳ ಎರಡರ ಭಾವವೂ ತಕ್ಕಡಿಯ ತಟ್ಟೆಗಳಂತೆ ಸಮಾನವಾಗುವುದು. ಈ ಅವಸ್ಥೆಯಲ್ಲಿ ಶಿವನಿಗೆ ವಿಶ್ವದ ಭಾವ ತನಗಿಂತಲೂ ಭಿನ್ನವಾಗಿದ್ದರೂ ತನ್ನಿಂದ ಬೇರೆಯಲ್ಲವೆಂಬ ಅರಿವು ಬರುವುದು. ಪ್ರಮಾತೃ ಪ್ರಮೇಯಗಳ ಸಮಾನಭಾವವುಂಟಾಗುವ ಈ ತತ್ತ್ವವನ್ನು ಶುದ್ಧವಿದ್ಯಾತತ್ತ್ವವೆಂದು ಕರೆಯುವರು.

ಶುದ್ಧವಿದ್ಯಾತತ್ತ್ವದಲ್ಲಿ ಶಿವನ ಕ್ರಿಯಾಶಕ್ತಿ ಪ್ರಧಾನವಾಗಿರುವುದು. ಕ್ರಿಯಾಶಕ್ತಿ ಪ್ರಧಾನವಾಗುತ್ತಲೆ ಮಾಯಾ ಎಂಬ ತತ್ತ್ವ ಹೊರಹೊಮ್ಮುವುದು. ಈ ಮಾಯಾ ತತ್ತ್ವ ಶಿವನ ನಿಜಸ್ವರೂಪವನ್ನು ಆವರಿಸಿಬಿಡುವುದರಿಂದ ಶಿವನೂ ವಿಶ್ವವೂ ಬೇರೆ ಬೇರೆಯಾಗಿಬಿಡುವರು. ಇಲ್ಲಿಂದ ಮುಂದೆ ಶಿವ ಕಲಾ, ವಿದ್ಯಾ, ರಾಗ, ಕಾಲ ಮತ್ತು ನಿಯತಿ-ಎಂಬ ಐದು ತತ್ತ್ವಗಳಿಂದ ಮತ್ತು ಆವರಣಕ್ಕೊಳಗಾಗಿ ಪುರುಷ, ಅಣು, ಪಶು ಮುಂತಾದ ಹೆಸರುಗಳಿಂದ ಕರೆಯಲ್ಪಡುವನು. ಕಲಾತತ್ತ್ವದಿಂದ ಶಿವ ತಾನು ಸರ್ವಶಕ್ತನೆಂಬುದನ್ನು ಮರೆತು ಪರಿಮಿತಶಕ್ತನೆಂದು ಭಾವಿಸುವನು. ವಿದ್ಯಾತತ್ತ್ವದ ಆವರಣದಿಂದ ತಾನು ಅಲ್ಪಜ್ಞನೆಂದು ತಿಳಿಯುವ ರಾಗತತ್ತ್ವದಿಂದ ಅವನು ಯಾವ ಕೊರತೆಯೂ ಇಲ್ಲದ ಪರಿಪೂರ್ಣನೆಂಬುದನ್ನು ಮರೆತು ಅಪೂರ್ಣನೆಂದು ಭಾವಿಸುವನು. ಕಾಲತತ್ತ್ವದಿಂದ ನಿತ್ಯಯೆಂಬ ತತ್ತ್ವದಿಂದ ವಿಭು ಮತ್ತು ಸ್ವತಂತ್ರ ಎನ್ನುವುದನ್ನು ಮರೆತು ದೇಶ ಮತ್ತು ಕಾರ್ಯಕಾರಣ ಸಂಬಂಧಕ್ಕೆ ಒಳಗಾಗಿರುವೆನೆಂದು ಭಾವಿಸುವನು.

ಮಾಯೆ, ಕಲಾ, ವಿದ್ಯಾ, ರಾಗ, ಕಾಲ ಮತ್ತು ನಿಯತಿ-ಇವು ಶಿವನ ನಿಜಸ್ವರೂಪವನ್ನು ಆವರಿಸಿಬಿಡುವುದರಿಂದ ಇವನ್ನು ಕಂಚುಕಗಳು (ಹೊದಿಕೆಗಳು) ಎಂದು ಕರೆಯುವರು. ಈ ತತ್ತ್ವಗಳು ಶಿವನನ್ನು ಮತ್ತೂ ಅನೇಕ ಪುರುಷರನ್ನಾಗಿ ಮಾಡುವುದು. ಪ್ರತಿಯೋಬ್ಬ ಪುರುಷನೂ ಈ ಆರು ತತ್ತ್ವಗಳಿಂದ ಮುಚ್ಚಲ್ಪೊಟ್ಟಿರುವನು. ಅವನು ಈ ಆವರಣದಿಂದ ತಾನು ಇನ್ನಿತರ ಜೀವಗಳಿಗಿಂತ ಭಿನ್ನನೆಂದು ಭಾವಿಸುವನು.

ಆರು ಕಂಚುಕಗಳಿಂದ ಶಿವ ಪ್ರತ್ಯೇಕಿಸಲ್ಪಟ್ಟ ಮೇಲೆ ಉಳಿಯುವ ಪ್ರಮೇಯ (ವಿಶ್ವವೆಂಬ ಭಾವ) ತತ್ತ್ವವನ್ನು ಪ್ರಕೃತಿಯೆಂದು ಕರೆಯುವರು. ಪ್ರಕೃತಿ ಸತ್ತ್ವ ರಜಸ್ತಮೋಗುಣಗಳಿಂದ ಕೂಡಿದೆ. ಪ್ರಕೃತಿಯಿಂದ ಬುದ್ಧಿ, ಅಹಂಕಾರ ಮತ್ತು ಮನಸ್ಸು ಎಂಬ ತತ್ತ್ವಗಳು ಉಂಟಾಗುತ್ತವೆ. ಇವನ್ನು ಒಟ್ಟಾಗಿ ಅಂತಃಕರಣವೆಂದು ಕರೆಯುವರು. ನಾನು ನನ್ನದು ಎಂಬ ಅಭಿಮಾನಕ್ಕೆ ಅಹಂಕಾರವೆ ಕಾರಣ. ಮನಸ್ಸಿನ ಸಹಾಯದಿಂದ ಪುರುಷ ಸಸ್ತುವಿನ ನಿಶ್ಚಯಜ್ಞಾನ ಬರಲು ಬುದ್ಧಿತತ್ತ್ವವೆ ಕಾರಣ. ಅಹಂಕಾರ ಅವನಲ್ಲಿ ನಾನು ಎಂಬ ಅಭಿಮಾನ ಮೂಡಿಸುತ್ತದೆ.

ಅನಂತರ ಅಹಂಕಾರದಿಂದ ಪ್ರಾಣ, ರಸನ, ಚಕ್ಷು, ಸ್ಪರ್ಶ ಮತ್ತು ಶ್ರೋತ್ರ ಎಂಬ ಐದು ಜ್ಞಾನೇಂದ್ರಿಯಗಳೂ ವಾಕ್, ಪಾಣಿ, ಪಾದ, ಪಾಯು ಮತ್ತು ಉಪಸ್ಥ ಎಂಬ ಐದು ಕರ್ಮೆಂದ್ರಿಯಗಳೂ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಎಂಬ ಐದು ತನ್ಮಾತ್ರೆಗಳೂ ಹೊರಹೊಮ್ಮುತ್ತವೆ. ಇಂದ್ರಿಯಗಳು ನಮ್ಮ ಕಣ್ಣಿಗೆ ಕಾಣುವ ಸ್ಥೂಲ ಅಂಗಗಳಲ್ಲ. ಅವು ಆ ಸ್ಥೂಲಾಂಗಗಳಲ್ಲಿ ನೆಲೆಸಿರುವ ಶಕ್ತಿಗಳು.

ಐದು ತನ್ಮಾತ್ರಗಳಿಂದ ಕ್ರಮವಾಗಿ ಆಕಾಶ, ವಾಯು, ಅಗ್ನಿ, ಅಪ್ ಮತ್ತು ಪೃಥಿವೀ ಎಂಬ ಪಂಚಭೂತಗಳುಂಟಾಗುತ್ತದೆ. ಈ ಪಂಚಮಹಾಭೂತಗಳ ವಿವಿಧ ರೀತಿಯ ಸಂಯೋಜನೆಯಿಂದ ಪ್ರಪಂಚದ ವಿವಿಧ ವಸ್ತುಗಳು ಉತ್ಪನ್ನವಾಗುತ್ತವೆ.

ಈ ರೀತಿ ಶಕ್ತಿಯಿಂದೊಡಗೊಡಿದ ಶಿವನಿಂದ ಸದಾಶಿವ, ಈಶ್ವರ, ಶುದ್ಧವಿದ್ಯಾ, ಮಾಯಾ, ಕಲಾ, ವಿದ್ಯಾ, ರಾಗ, ಕಾಲ, ನಿಯತಿ, ಬುದ್ಧಿ, ಅಹಂಕಾರ, ಮನಸ್ಸು, ಐದು ಜ್ಞಾನೇಂದ್ರಿಯಗಳು, ಐದು ಕಮೇಂದ್ರಿಯಗಳು, ಐದು ತನ್ಮಾತ್ರೆಗಳು, ಐದು ಮಹಾಭೂತಗಳು ಎಂಬ ತತ್ತ್ವಗಳು ಉಂಟಾಗುತ್ತದೆ. ಶಿವ ಮತ್ತು ಶಕ್ತಿಯೂ ಸೇರಿದಂತೆ ಇವು ಮೂವತ್ತಾರು ತತ್ತ್ವಗಳು ಪ್ರಪಂಚದ ಪ್ರಳಯವನ್ನು ನಿಮೇಷ ಎಂದು ಕರೆಯುತ್ತಾರೆ. ಶಿವ ಆಗ ತನ್ನ ಶಕ್ತಿಯಿಂದ ವ್ಯಾಕೃತ ಪ್ರಪಂಚವನ್ನು ಅವ್ಯಾಕೃತಗೊಳಿಸುತ್ತಾನೆ.

ಜೀವ ಅಥವಾ ಪಶು ಆಣವ, ಮಾಯಾ ಮತ್ತು ಕಾರ್ಮ-ಎಂಬ ಮಲತ್ರಯಗಳಿಂದ ಆವೃತನಾದ ಶಿವನೇ ಆಗಿರುವನು. ಅಣವ ಮಲ ಜೀವನ ಒಳ ಅಥವಾ ಸೂಕ್ಷ್ಮ ಆವರಣ. ಇದರಿಂದ ಆವೃತನಾದ ಶಿವ ತನ್ನ ಸಹಜ ಮಹಾತ್ಮ್ಯವನ್ನು ಮರೆತು ಬಿಡುವನು. ಮಹಾದಿ ಆರು ಕಂಚುಕಗಳಿಂದ ಉಂಟಾದ ಆವರಣವೆ ಮಾಯಾಮಲ. ಇದರಿಂದ ಆವೃತನಾದ ಶಿವ ತಾನು ಒಬ್ಬನೆ ಎಂಬುದನ್ನು ಮರೆತು ಜೀವರನ್ನು ಭಿನ್ನಭಿನ್ನರೆಂದು ತಿಳಿಯುವನು. ಜೀವ ಆಚರಿಸಿದ ಕರ್ಮಗಳಿಂದ ಉಂಟಾದ ಸಂಸ್ಕಾರಗಳ ಫಲವೆ ಕಾರ್ಮಮಲ. ಶರೀರ ಜೀವನ ಕಾರ್ಮಮಲ. ಆಣವ ಮಲ ಅಕ್ಕಿಯ ಹೊದಿಕೆಯ ಒಳ ಆವರಣದಂತಾದರೆ ಕಾರ್ಮಮಲ ಅದರ ಹೊರ ಆವರಣ. ಮಾಯಾಮಲ ಈ ಎರಡು ಆವರಣಗಳ ನಡುವೆ ಇರುವ ಹೊಟ್ಟಿನಂತೆ.

ಈ ಆವರತ್ರಯಗಳಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದುವುದೇ ಪರಮ ಮುಕ್ತಿಯಲ್ಲ; ನಿಜವಾದ ಮುಕ್ತಿಯೆಂದರೆ ಪಶು ತನ್ನ ಸಹಜ ಸ್ವಾತಂತ್ರ್ಯ ಸ್ವರೂಪವನ್ನು ಪುನಃ ಕಂಡುಕೊಳ್ಳುವುದೇ ಆಗಿದೆ. ಮಲತ್ರಯಗಳಿಂದ ಬಿಡುಗಡೆ ಹೊಂದಿಯೂ ಪಶು ಪರಿಪೂರ್ಣತ್ವವನ್ನು ಪಡೆಯದಿರಬಹುದು. ತನ್ನ ಸ್ವಾತಂತ್ರ್ಯ ಸ್ವರೂಪವನ್ನು ಕಂಡುಕೊಳ್ಳುವುದೇ ಪರಿಪೂರ್ಣತೆ ಅಥವಾ ಮುಕ್ತಿ. ತಾನು ಸಶರೀರಿಯಾಗಿರುವಾಗಲೆ ಪಶುವಿಗೆ ತನ್ನ ನಿಜಸ್ವರೂಪದ ಜ್ಞಾನ ಬಂದು ಅದು ಮುಕ್ತವಾಗಬಹುದು. ಆದರೆ ಜೀವನ್ಮುಕ್ತವಾಗಿರುವ ಸ್ಥಿತಿಯಲ್ಲಿ ಪರಮಮುಕ್ತಿಗೆ ಹೋಲಿಸಿದಾಗ ಅದು ಅನುಭವಿಸುವ ಸ್ವಾತಂತ್ರ್ಯ ಪರಿಮಿತವೆಂದು ಹೇಳಬಹುದು. ಜೀವನ ಸಾಧನೆಗಳ ಫಲವಾಗಿ ಜೀವಾತ್ಮ ಹಂತ ಹಂತಗಳಲ್ಲಿ ತನ್ನ ನಿಜರೂಪವನ್ನು ಕಂಡುಕೊಳ್ಳಬಹುದು.

ಮುಕ್ತಿ ಪಡೆಯಲು ಜೀವನಿಗೆ ಅವಶ್ಯವಾಗಿರಬೇಕಾದುದು ಶಿವಾನುಗ್ರಹ. ಶಿವಾನುಗ್ರಹವಿಲ್ಲದೆ ಜೀವನಿಗೆ ಮುಕ್ತಿ ಸಾಧ್ಯವಿಲ್ಲ. ಜೀವ ಶಿವಾನುಗ್ರಹವನ್ನು ಸಂಪಾದಿಸಬೇಕಾದರೆ ನೈತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಸಾಧನೆ ನಡೆಸಬೇಕು. ಈ ಸಾಧನೆ ಆಣವೋಪಾಯ, ಶಾಕ್ತೋಪಾಯ ಮತ್ತು ಶಾಂಭವೋಪಾಯ ಎಂದು ಮೂರು ವಿಧ. ಆಣವೋಪಾಯ ಕ್ರಿಯಾಪ್ರಧಾನವಾದುದು. ಇದು ದೇವತಾರ್ಚನೆ. ಜಪ ಮುಂತಾದ ಕ್ರಿಯೆಗಳನ್ನು ಒಳಗೊಂಡಿದೆ. ಸಾಧನೆಯ ಆರಂಭದೆಸೆಯಲ್ಲಿರುವವರಿಗೆ ಇದು ಸೀಮಿತವಾಗಿದೆ. ಸಾಧನೆಯಲ್ಲಿ ಸ್ವಲ್ಪ ಪ್ರಗತಿ ಹೊಂದಿದವರು ಶಾಕ್ತೋಪಾಯವನ್ನು ಅನುಸರಿಸಬಹುದು. ಶಾಂಭವೋಪಾಯ ಉತ್ಕ್ರಷ್ಟ ಮಟ್ಟದಲ್ಲಿರುವ ಸಾಧಕರಿಗೆ ಮಾತ್ರ ಸೀಮಿತವಾದುದು. ಈ ಉಪಾಯದಲ್ಲಿ ಇಚ್ಛೆ ಅಥವಾ ಸಂಕಲ್ಪ ಪ್ರಮುಖ ಪಾತ್ರ ಸೀಮಿತವಾದದು. ಸಾಧಕ ಇಚ್ಛಾಮಾತ್ರದಿಂದ ತನ್ನ ನಿಜಸ್ವರೂಪವನ್ನು ಕಂಡುಕೊಳ್ಳಬಲ್ಲ.

ಈ ಉಪಾಯಗಳಿಗೆ ಪೂರ್ವಭಾವಿಯಾಗಿ ಜೀವ ಗುರುವಿನಿಂದ ಶಾಸ್ತ್ರೋಪದೇಶ ಪಡೆದು ಅದನ್ನು ಮನನ ಮಾಡುವುದು ಆವಶ್ಯಕ.

ಒಟ್ಟಿನಲ್ಲಿ ಪ್ರತ್ಯಭಿಜ್ಞಾಮತ ಅನೇಕ ದಾರ್ಶನಿಕ ತತ್ತ್ವಗಳನ್ನು ಸ್ವಲ್ಪ ಮಾರ್ಪಾಡುಗಳೊಡನೆ ಒಪ್ಪಿಕೊಳ್ಳುತ್ತದೆಂದು ಹೇಳಬಹುದು. ಇದರ ಅಂತಿಮ ತತ್ತ್ವ ಅದ್ವೈತಬ್ರಹ್ಮನಂತೆ ಚಿತ್ಸ್ವರೂಪವಾಗಿದ್ದರೂ ನಿಷ್ಕ್ರಿಯವಲ್ಲ. ಅದು ಪ್ರಪಂಚದ ಸೃಷ್ಟಿಗೆ ಕಾರಣವಾದುದು. ಶಕ್ತಿಯೆಂಬ ಕಲ್ಪನೆಯ ಮೂಲಕ ಪರತತ್ತ್ವದ ಅದ್ವಿತೀಯತ್ವವನ್ನು ಮತ್ತು ಪ್ರಪಂಚದ ಸತ್ಯತ್ವವನ್ನು ಉಳಿಸಿಕೊಳ್ಳುತ್ತದೆ. ಅದು ಸಾಂಖ್ಯರ 24 ತತ್ತ್ವಗಳನ್ನಲ್ಲದೆ ಇತರ ಹತ್ತುಗಳನ್ನೂ ಒಪ್ಪಿಕೊಳ್ಳುತ್ತದೆ. ಅವುಗಳಲ್ಲಿ ಮಾಯಾದಿ ಆರು ತತ್ತ್ವಗಳು ಶಿವ ಪುರುಷನಾಗಿ ಸಂಕೋಚಗೊಳ್ಳುವುದಕ್ಕೆ ಕಾರಣಗಳಾಗಿವೆ. ಕೆಲ ಅದ್ವೈತಿಗಳು ಹೇಳುವಂತೆ ಮಾಯೆ ಇಲ್ಲಿ ಶಕ್ತಿಯಲ್ಲ; ಶಕ್ತಿಯಿಂದ ಹೊರಹೊಮ್ಮಿದ ಒಂದು ತತ್ತ್ವ ಅಷ್ಟೆ. ಈ ದರ್ಶನ ಈಶ್ವರವೇದಾಂತಿಗಳಿಗೆ ವಿರುದ್ಧವಾಗಿ ಮುಕ್ತಿಕಾಲದಲ್ಲಿ ಜೀವ ಶಿವರ ಸಂಪೂರ್ಣ ಐಕ್ಯವನ್ನು ಒಪ್ಪಿಕೊಳ್ಳುತ್ತದೆ. (ಎಸ್.ಎಸ್.ಆರ್.)