ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತ್ಯಯತಾವಾದ

ವಿಕಿಸೋರ್ಸ್ದಿಂದ

ಪ್ರತ್ಯಯತಾವಾದ - ಸಾಮಾನ್ಯ ತತ್ತ್ವಗಳ ಬಗ್ಗೆ. ಅಂದರೆ ಪ್ರತ್ಯಯಗಳ ಬಗ್ಗೆ ಶಾಬ್ಧಿಕವಾದ (ನಾಮಿನಲಿಸಂ) ಮತ್ತು ವಾಸ್ತವತಾವಾದಗಳ (ರಿಯಲಿಸಂ). ಅತಿರೇಕತೆಯಿಂದ ದೂರವಾಗಿ ಸುವರ್ಣ ಮಾಧ್ಯಮವನ್ನು ಸ್ಥಾಪಿಸಿರುವ ಒಂದು ಸಿದ್ದಾಂತ (ಕಾನ್ಸೆಪ್ಚು ಅಲಿಸಮ್).

ವಾಸ್ತವತಾವಾದ ವರ್ಗಕ್ಕೆ ಅಥವಾ ಜಾತಿಗೆ ಹೆಚ್ಚು ಪ್ರಾಮುಖ್ಯ ಕೊಟ್ಟು ಆ ವರ್ಗಕ್ಕೆ ಸೇರುವ ಬಿಡಿ ವಸ್ತುಗಳಿಗೆ (ಪ್ರಭೇದ) ಯಾವ ಮಹತ್ತ್ವವನ್ನೂ ಕೊಡುವುದಿಲ್ಲ. ಅಂದರೆ ವರ್ಗ ಸತ್ಯವಾದುದು ಹಾಗೂ ವಾಸ್ತವವಾದುದೇ ಹೊರತು ಪ್ರಭೇದ ಅಲ್ಲ. ಶಾಬ್ಧಿಕವಾದದಲ್ಲಿ ವರ್ಗ ಮತ್ತು ಪ್ರಭೇದ ಎರಡೂ ಹೆಸರಿಗೆ ಮಾತ್ರ ಇರುವವಂಥವು. ಇವು ಗುಣವಾಚಕಗಳು ಮಾತ್ರ. ಪ್ರತ್ಯಯತಾವಾದವಾದರೋ ನಮ್ಮ ಮನೋರಾಜ್ಯದಲ್ಲಿ ಸಾಮಾನ್ಯ ತತ್ತ್ವಗಳು ಅಂದರೆ ಪ್ರತ್ಯಯಗಳು (ಕಾನ್ಸೆಪ್ಟ್ಸ್) ನಿಜವಾಗಿಯೂ ಇರುತ್ತವೆ. ಈ ಪ್ರತ್ಯಯಗಳು ನಮ್ಮಲ್ಲಿ ಇರುವುದರಿಂದಲೇ ನಾವು ವಸ್ತುಗಳನ್ನು ನೋಡಿದಾಕ್ಷಣ ಅವು ಯಾವ ಜಾತಿಗೆ ಇಲ್ಲವೆ ವರ್ಗಕ್ಕೆ ಸೇರುತ್ತದೆಂಬುದನ್ನು ನಿರ್ಧರಿಸುತ್ತೇವೆ-ಎಂದು ಹೇಳುತ್ತದೆ. ಉದಾ : ನಮ್ಮ ಮನಸ್ಸಿನಲ್ಲಿ ದೋಣಿಯ ಬಗ್ಗೆ ಒಂದು ಸಾಮಾನ್ಯ ಭಾವನೆ ಇದೆ. ಆ ಭಾವನೆ ಇರುವ್ಯದರಿಂದಲೇ ನಮ್ಮ ಎದುರಿಗೆ ಇರುವ ವಸ್ತು ದೋಣಿ ಹೌದೊ ಅಲ್ಲವೊ ಎಂಬುದನ್ನು ನಿರ್ಧರಿಸುತ್ತೇವೆ. ಪ್ರತ್ಯಯಗಳು ಯಾವುದೇ ಒಂದು ವಸ್ತುವಿಗೆ ಅನ್ವಯಿಸದೆ, ಆ ಜಾತಿಯ ವಸ್ತುವಿಗೆಲ್ಲ ಇರುವ ಒಂದು ಸಾಮಾನ್ಯ ಗುಣವನ್ನೂ ಸಾಮಾನ್ಯ ತತ್ತ್ವವನ್ನೂ ಪ್ರತಿಬಿಂಬಿಸುತ್ತವೆ. ಮನುಷ್ಯಸಾಮಾನ್ಯರಿಗೆಲ್ಲ ಅನ್ವಯವಾಗುವ ಗುಣ ಸಾವು. ಆದ್ದರಿಂದಲೇ ಎಲ್ಲ ಮಾನವರೂ ಮತ್ರ್ಯರು ಎಂದು ಹೇಳುವುದು. ಮೃತಿ ಇಲ್ಲಿ ಪ್ರತ್ಯಯ. ಆದ್ದರಿಂದ ಒಬ್ಬ ಸಾಕ್ರಟೀಸ್ ಒಬ್ಬ ದೇವದತ್ತ ಒಬ್ಬ ಸಹದೇವ ಮತ್ರ್ಯರು ಎಂಬ ಅಭಿಪ್ರಾಯ ಸಾಧುವೆನಿಸುತ್ತದೆ. ಬಿಡಿ ಬಿಡಿ ವ್ಯಕ್ತಿಗಳಿಗೆ ಮಾತ್ರವಲ್ಲ ಆ ವರ್ಗಕ್ಕೇ ಅನ್ವಯವಾಗುವ ಗುಣವಿಶೇಷವನ್ನು ಎತ್ತಿ ಹೇಳುವುದು ಪ್ರತ್ಯಯದ ಕೆಲಸ. (ವೈ.ಎಸ್.ಜಿ.)