ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತ್ಯರ್ಪಣ

ವಿಕಿಸೋರ್ಸ್ದಿಂದ

ಪ್ರತ್ಯರ್ಪಣ - ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರಕ್ಕೆ ಕೋರಿಕೆಯ ಮೇರೆಗೆ ಆಪಾದಿತ ಅಥವಾ ಅಪರಾಧಿಯನ್ನು ಹಿಂದಿರುಗಿಸುವುದು (ಎಕ್ಸ್ಟ್ರಾಡಿಷನ್). ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರಕ್ಕೆ ಅದರ ಬೇಡಿಕೆಯ ಪ್ರಕಾರ ಆ ರಾಷ್ಟ್ರದ ಪ್ರಾದೇಶಿಕ ವ್ಯಾಪ್ತಿಯಲ್ಲಿ ಮಾಡಿದ ಅಪರಾಧದ ವಿಚಾರಣೆಗೆ ಅಥವಾ ಆಗಲೇ ಅಪರಾಧಿ ಎಂದು ತೀರ್ಮಾನವಾಗಿದ್ದಲ್ಲಿ ಅಂಥ ನಿರ್ಣಯದ ಮೇರೆಗೆ ಶಿಕ್ಷೆಗೆ ಗುರಿಪಡಿಸಲು ಆಪಾದಿತನನ್ನು ಅಥವಾ ಅಪರಾಧಿಯನ್ನು ಒಪ್ಪಿಸುವ ಕಾನೂನು ವಿಧಾನವಿದು. ಮಹಾಸಾಗರಗಳ ವ್ಯಾಪ್ತಿಯಲ್ಲಿದ್ದು ನೌಕೆಗಳಲ್ಲಿ ಅಥವಾ ಆಕಾಶದಲ್ಲಿನ ವಾಯುವಾಹನಗಳಲ್ಲಿ ಮಾಡಿದ ಅಪರಾಧಗಳಿಗೂ ಪ್ರತ್ಯರ್ಪಣ ಕಾನೂನು ಅನ್ವಯಿಸುತ್ತದೆ. ಪ್ರತ್ಯರ್ಪಣವನ್ನು ಕುರಿತ ಕಾನೂನಿನ ಪರಿಕಲ್ಪನೆಗೂ ದೇಶಬಹಿಷ್ಕಾರ (ಬ್ಯಾನಿಷ್‍ಮೆಂಟ್) ನಿಷ್ಕಾಸನ (ಹೊರದೂಡುವುದು-ಎಕ್ಸ್‍ಪಲ್ಲ್ಷನ್) ಅಜ್ಞೆಗಳನ್ನೂ ಗಡೀಪಾರು (ಡಿಪೊರ್ಚೇಷನ್) ಕುರಿತು ಕಾನೂನು ಪರಿಕಲ್ಪನೆಗಳಿಗೂ ವ್ಯತ್ಯಾಸವಿದೆ.

ಪರಸ್ಪರ ಹೊಂದಾಣಿಕೆ ಇದ್ದ ರಾಜ್ಯಗಳು ತಮ್ಮ ರಾಜ್ಯದಲ್ಲಿ ಬಂದು ಸೇರಿಕೊಂಡಂಥ ಅಪರಾಧಿಗಳನ್ನು ಸಂಬಂಧಪಟ್ಟ ರಾಜ್ಯಕ್ಕೆ ಕಳಿಸಿದ ಬಗ್ಗೆ ಭಾರತದ ಪ್ರಾಚೀನ ಕಾವ್ಯಗಳಲ್ಲಿ ಮತ್ತು ಪೌರಾಣಿಕ ಗ್ರಂಥಗಳಲ್ಲಿ ಸೂಚನೆಗಳಿವೆ. ಐತಿಹಾಸಿಕ ಆಧಾರದ ಮೇಲೆ ಹೇಳುವುದಾದರೆ, ಅನೇಕ ಶತಮಾನಗಳವರೆಗೆ ರಾಜತಾಂತ್ರಿಕ ಒಡಂಬಡಿಕೆಗಳ ಪಡಿನೆಳಲಲ್ಲಿಯೇ ಪ್ರತ್ಯರ್ಪಣ ಸೂತ್ರಗಳೂ ಸೇರಿ ಕೊಂಡಿರುತ್ತಿದ್ದುವು. 18ನೆಯ ಶತಮಾನದಿಂದೀಚೆಗೆ ರಾಷ್ಟ್ರಗಳ ಕಾನೂನುಗÀಳಲ್ಲಿ ಒಂದು ಭಾಗವಾಗಿ ಅಥವಾ ಪ್ರತ್ಯೇಕ ಕಾನೂನುಗಳಾಗಿ ಪ್ರತ್ಯರ್ಪಣ ವಿಧಾನ ಅಸ್ತಿತ್ವಕ್ಕೆ ಬಂದಿದೆ. ಭಾರತದಲ್ಲಿ ಸಂವಿಧಾನದ ಏಳನೆಯ ಅನುಸೂಚಿಯ ಸಂಘ ಸೂಚಿಯನ್ವಯ ಸಂಸತ್ತು ಮಾತ್ರ ಪ್ರತ್ಯರ್ಪಣದ ಬಗ್ಗೆ ಕಾನೂನನ್ನು ಮಾಡುವ ಅಧಿಕಾರ ಹೊಂದಿದೆ.

ಅಂತರಾಷ್ಟ್ರೀಯ ಪ್ರತ್ಯರ್ಪಣ ಮತ್ತು ಅಂತರರಾಜ್ಯ ಪ್ರತ್ಯರ್ಪಣ ಎಂದು ಇದರಲ್ಲಿ ಎರಡು ವಿಧಗಳುಂಟು. ಒಕ್ಕೂಟ ಸ್ವರೂಪದ ರಾಷ್ಟ್ರಗಳಲ್ಲಿ ರಾಜ್ಯಘಟಕಗಳು ಅಪರಾಧಿಗಳನ್ನು ಹಿಂದಿರುಗಿಸುವ ವ್ಯವಸ್ಥೆಯನ್ನು ಪರಸ್ಪರವಾಗಿ ಮಾಡಿಕೊಂಡಿರಬೇಕಾಗುತ್ತದೆ. ಸಂಯುಕ್ತ ಸಂಸ್ಥಾನಗಳಲ್ಲಿ ಸಂವಿಧಾನದ 4ನೆಯ ಪರಿಚ್ಛೇದದ 2ನೆಯ ಪ್ರಕರಣದನ್ವಯ ಅಂತರರಾಜ್ಯಕ್ಕೆ ಸೇರಿದ ಪ್ರತ್ಯರ್ಪಣ ನಿಯಮಗಳನ್ನು ನಿಯಂತ್ರಿಸಲಾಗುತ್ತಿದೆ. ರಾಜ್ಯಘಟಕಗಳು ಈ ಬಗ್ಗೆ ಕಾನೂನುಗಳನ್ನು ಮಾಡಬಹುದು. ಒಕ್ಕೂಟ ಸ್ವರೂಪದ ರಾಷ್ಟ್ರಗಳಾದ ಆಸ್ಟ್ರೇಲಿಯ ಮತ್ತು ಕೆನಡದಲ್ಲೂ ಅಂತರರಾಜ್ಯ ಪ್ರತ್ಯರ್ಪಣ ವಿಧಾನ ಬಹಳ ಸರಳವಾಗಿದೆ. ಅಪರಾಧಿಯನ್ನು ರಾಜ್ಯ ಘಟಕಗಳ ನಡುವೆ ಅಪರಾಧಿಯ ಪ್ರತ್ಯರ್ಪಣೆಗೆ ಅಧಿಕೃತ ಅಧಿಕಾರಿಯ ವಾರಂಟು ಸಾಕಾಗುತ್ತದೆ. ಸಂವಿಧಾನದ ಸ್ವರೂಪ. ಭಾರತೀಯ ನ್ಯಾಯಪದ್ಧತಿ ಮತ್ತು ಪ್ರಕ್ರಿಯಾ ಸಂಹಿತೆಗಳಿಗೆ ಅನುಗುಣವಾಗಿ ಭಾರತದಲ್ಲಿ ರಾಜ್ಯಗಳ ನಡುವೆ ಪ್ರತ್ಯರ್ಪಣ ಸ್ವರೂಪದ ವಿಧಾನದ ಅಗತ್ಯವಿಲ್ಲ.

ಅಂತರರಾಷ್ಟ್ರೀಯ ಪ್ರತ್ಯರ್ಪಣವನ್ನು ಸಾಮಾನ್ಯವಾಗಿ ರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾದ ಒಡಂಬಡಿಕೆಗಳ ಮೇರೆಗೆ ಮಾಡಲಾಗುವುದು. ಈ ರೀತಿಯ ಒಡಂಬಡಿಕೆಗಳಿಗೆ ಸಂಬಂಧಿಸಿದಂತೆ ಕಾನೂನು ಮಾಡುವ ಅಧಿಕಾರ ಅಮೆರಿಕದಲ್ಲಿ ಒಕ್ಕೂಟದ ಅಧಿಕಾರ ವ್ಯಾಪ್ತಿಗೆ ಸೇರಿದೆ. ಅಮೆರಿಕದಲ್ಲಿ ಕಾನೂನಿನ ಭಾಗವಾಗಿ 1793ರಲ್ಲಿ ಪ್ರತ್ಯರ್ಪಣೆ ಅಸ್ತಿತ್ವಕ್ಕೆ ಬಂತು. 1948ರಲ್ಲಿ ಹಾಗೂ 1953ರಲ್ಲಿ ಈ ಕಾನೂನಿನಲ್ಲಿ ತಿದ್ದುಪಡಿಗಳಾಗಿವೆ. 19ನೆಯ ಶತಮಾನದವರೆಗೆ ರಾಜಕೀಯ ಸ್ವರೂಪದ ಅಪರಾಧದ ಆಪಾದಿತರನ್ನೂ ಸಾಮಾನ್ಯವಾಗಿ ಪ್ರತ್ಯರ್ಪಿಸಲಾಗುತ್ತಿತ್ತು. ಈಗ ಹಾಗಿಲ್ಲ. ಸಾಧಾರಣವಾಗಿ ಪ್ರತಿಯೊಂದು ರಾಷ್ಟ್ರದ ಕಾನೂನಿನಲ್ಲೂ ಪ್ರತ್ಯರ್ಪಣ ಅಪರಾಧಗಳನ್ನು ನಮೂದಿಸಲಾಗುವುದು. ಅಂಥ ಅಪರಾಧದ ಆಪಾದನೆಯಿಲ್ಲದ ಪ್ರತ್ಯರ್ಪಣೆ ಬೇಡಿಕೆಯನ್ನು ನಿರಾಕರಿಸಲಾಗುವುದು.

ಏಳು ಬಗೆಯ ಪ್ರತ್ಯರ್ಪಣ ಅಪರಾಧಗಳನ್ನು ಅದಕ್ಕೆ ಸಂಬಂಧಿಸಿದ ವಿಷಯಗಳನ್ನೂ ಬೆಲ್ಜಿಯಮ್ ದೇಶದ 1833ರ ಪ್ರತ್ಯರ್ಪಣ ಅಧಿನಿಯಮದಲ್ಲೂ ಸ್ಪಷ್ಟೀಕರಿಸಲಾಗಿತ್ತು. ಈ ಅಧಿನಿಯಮ 1874ರಲ್ಲಿ ಮಾರ್ಪಾಟು ಹೊಂದಿತು. ಪ್ರತ್ಯರ್ಪಣಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡಿನ 1870ರ ಮತ್ತು 1873ರ ಅಧಿನಿಯಮಗಳು ಹಾಗೂ 1881ರ ಬ್ರಿಟಿಷ್ ಪರಾರಿ ಅಪರಾಧಿಗಳ ಅಧಿನಿಯಮ ಪ್ರಮುಖ ಹೆಜ್ಜೆಗಳಾಗಿವೆ. ಪ್ರತ್ಯರ್ಪಣ ಅಪರಾಧಿಗಳ ಪಟ್ಟಿಯಲ್ಲಿ ದೇಶದಿಂದ ದೇಶಕ್ಕೆ ವ್ಯತ್ಯಾಸವಿರುವುದುಂಟು. ಪ್ರತ್ಯರ್ಪಣದ ಅರ್ಥವ್ಯಾಪ್ತಿಗೆ, ಗೆರಹಾರ್ಟ್ ಇಸ್ಲರ್ ಪ್ರಕರಣ ಹೊಸ ತಿರುವು ಕೊಟ್ಟಿತ್ತು. ಉಭಯ ಅಪರಾಧಿತ್ವ, ಎಂದರೆ ಆಪಾದಿಸಿದ ಅಪರಾಧ ಉಭಯ ರಾಷ್ಟ್ರಗಳಲ್ಲೂ ಅಪರಾಧವೆಂದು ಗ್ರಹಿಸಲಾಗಿರಬೇಕು. ಇಸ್ಲರ್ ಜರ್ಮನ್, ಅಮೆರಿಕೆಯಲ್ಲಿ ಉದ್ದೇಶ ಪೂರ್ವಕ ಸುಳ್ಳು ಹೇಳಿಕೆ ನೀಡಿದ ಅಪರಾಧ ಮಾಡಿ, ಪೋಲೆಂಡಿನ ನೌಕೆಯಲ್ಲಿ ಸಂಚರಿಸಿ, ಇಂಗ್ಲೆಂಡಿನಲ್ಲಿ ಕೈದಿಯಾದ. ಅವನು ಇಂಗ್ಲೆಂಡಿನಲ್ಲಿ ಪ್ರತ್ಯರ್ಪಣ ಅಪರಾಧಿಯಾಗಿರದ ಪ್ರಯುಕ್ತ ಅವನನ್ನು ಬಿಟ್ಟುಬಿಡಲಾಯಿತು. ಹಾಗೆಯೇ, ಬೇಡಿಕೆ ಸಲ್ಲಿಸಿದ ರಾಷ್ಟ್ರ ನಿರ್ದಿಷ್ಟ ಅಪರಾಧದ ಸಂಬಂಧದಲ್ಲಿ ಅಪರಾಧಿಯನ್ನು ಪಡೆದ ಅನಂತರ ಬೇರೊಂದು ಅಪರಾಧದ ಆಪಾದನೆಯ ವಿಚಾರಣೆಗೆ ಅವನನ್ನು ಗುರಿಪಡಿಸಲಾಗುವುದಿಲ್ಲ.

1903ರ ಭಾರತ ಪ್ರತ್ಯರ್ಪಣ ಅಧಿನಿಯಮ ಪರಿಪೂರ್ಣವಾಗಿರಲಿಲ್ಲ. ಬ್ರಿಟನ್ನಿನ ಈ ಸಂಬಂಧದ ಇತರ ಅಧಿನಿಯಮಗಳು ಪೂರಕವಾಗಿದ್ದುವು. ಶ್ರೇಷ್ಠ ನ್ಯಾಯಾಲಯ ಸಿ. ಜಿ. ಮೆನನ್ ಪ್ರಕರಣದಲ್ಲಿ ಬ್ರಿಟಿಷ್ ಪರಾರಿ ಅಪರಾಧಿಗಳ 1881ರ ಅಧಿನಿಯಮ ಭಾರತ ಗಣರಾಜ್ಯಕ್ಕೆ ಅನ್ವಯ ಆಗುವುದಿಲ್ಲವೆಂದು ನಿರ್ಣಯಿಸುವುದರ ಜೊತೆಗೆ ಹೊಸ ಕಾನೂನಿನ ಅವಶ್ಯಕತೆಯನ್ನು ವ್ಯಕ್ತಪಡಿಸಿತು. ಭಾರತದ ನ್ಯಾಯ ಸಮಿತಿ ತನ್ನ ಐದನೆಯ ವರದಿಯಲ್ಲಿ ಹೊಸ ಕಾನೂನನ್ನು ರಚಿಸುವಂತೆ ಸರಕಾರಕ್ಕೆ ಸೂಚಿಸಿತು. ಸಂಸತ್ತು 1962ರಲ್ಲಿ ಪ್ರತ್ಯರ್ಪಣ ಅಧಿನಿಯಮಕ್ಕೆ ಒಪ್ಪಿಗೆ ಕೊಟ್ಟಿತು. 1962ರ ಪ್ರತ್ಯರ್ಪಣ ಅಧಿನಿಯಮದ 37 ಕಲಮಗಳನ್ನು ಐದು ಭಾಗಗಳಲ್ಲಿ ಹೊಂದಿಸಲಾಗಿದೆ. ಈ ಅಧಿನಿಯಮದಲ್ಲೂ ವಿದೇಶಗಳನ್ನು 1 ಪ್ರತ್ಯರ್ಪಣ ಹೊಂದಾಣಿಕೆಯಿರುವ ಕಾಮನ್‍ವೆಲ್ತ್ ದೇಶಗಳು ಮತ್ತು 2 ಹೊಂದಾಣಿಕೆಯಿರದ ಕಾಮನ್‍ವೆಲ್ತ್ ದೇಶಗಳು ಹಾಗೂ ಇತರ ದೇಶಗಳು ಎಂದು ಎರಡು ವಿಧವಾಗಿ ವಿಂಗಡಿಸಲಾಗಿದೆ. ಅಧಿನಿಯಮದ ಎರಡನೆಯ ಅನುಸೂಚಿಯಲ್ಲಿ ಪ್ರತ್ಯರ್ಪಣ ಅಪರಾಧಗಳನ್ನು ನಮೂದಿಸಲಾಗಿದೆ. ವಿದೇಶಗಳೊಂದಿಗೆ ಭಾರತ ಸರ್ಕಾರ ಒಪ್ಪಂದ ಮಾಡಿಕೊಳ್ಳವುದರ ಬಗ್ಗೆ ತತ್ಸಂಬಂಧವಾಗಿ ಸಂಸತ್ತಿಗೆ ತಿಳಿಸುವ ಕ್ರಮ ಪ್ರತ್ಯರ್ಪಣ ಬೇಡಿಕೆ ಸಲ್ಲಿಸುವ ಹಾಗೂ ಆ ಬಗ್ಗೆ ಕೇಂದ್ರ ಸರ್ಕಾರ ಪಾಲಿಸಬೇಕಾದ ವಿಧಾನ ಮತ್ತು ತತ್ಸಂಬಂಧಿ ವಿಷಯಗಳನ್ನು ಕಾನೂನಿನಲ್ಲಿ ವಿವರಿಸಲಾಗಿದೆ. ಪ್ರತ್ಯರ್ಪಣ ಬೇಡಿಕೆ ಬಂದ ಅನಂತರ ಮ್ಯಾಜಿಸ್ಟ್ರೇಟರ ಮೂಲಕ ವಿಚಾರಣೆ ನಡೆಯಿಸಿ, ಅಂಥ ವಿಚಾರಣಾವರದಿ ಮತ್ತು ಸಂಬಂಧಪಟ್ಟ ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ಪ್ರತ್ಯರ್ಪಣದ ಅವಶ್ಯಕತೆ ಮತ್ತು ಸೂಕ್ತತೆಯನ್ನು ಕೇಂದ್ರ ಸರ್ಕಾರ ನಿರ್ಧರಿಸುವುದು. ಆಪಾದಿಸಿದ ಅಪರಾಧ ಪ್ರತ್ಯರ್ಪಣ ಅಪರಾಧವಲ್ಲವೆಂದು ಅಥವಾ ಅದು ರಾಜಕೀಯ ಸ್ವರೂಪದ ಅಪರಾಧವೆಂದು ಸರ್ಕಾರ ಅಭಿಪ್ರಾಯ ಪಟ್ಟರೆ, ಕಾನೂನಿನ ಮೇರೆಗೆ ಅಪರಾಧಿಯನ್ನು ಪ್ರತ್ಯರ್ಪಿಸಲು ಸರ್ಕಾರ ನಿರಾಕರಿಸಬೇಕಾಗುವುದು. ಬೇಡಿಕೆ ಸಲ್ಲಿಸಿದ ರಾಷ್ಟ್ರದ ಕಾನೂನಿನ ಮೇರೆಗೆ ಆಪಾದಿಸಿದ ಅಪರಾಧದ ವಿಚಾರಣಾ ಅವಧಿ ಮೀರಿದ್ದರೂ ಪ್ರತ್ಯರ್ಪಣಕ್ಕೆ ಅವಕಾಶವಿಲ್ಲ.

ಅಪರಾಧಿಗಳ ನಿಯಂತ್ರಣಕ್ಕಾಗಿ ಪ್ರತ್ಯರ್ಪಣೆ ಅಂತರರಾಷ್ಟ್ರೀಯ ಕರ್ತವ್ಯಪಾಲನೆಯ ಸಾಧನವಾಗಿದೆ ಎಂಬುದು ವಿದ್ವಾಂಸರಮತ. ಪ್ರವಾಹ ಹಾಗೂ ವಾರ್ತಾಸಂಪರ್ಕಗಳ ಪ್ರಗತಿ ಅಪರಾಧಿಗಳ ಪಲಾಯನಕ್ಕೆ ಅನುಕೂಲವಾಗುವಂತೆ. ಪ್ರತ್ಯರ್ಪಣ ಒಪ್ಪಂದಗಳ ಅವಶ್ಯಕತೆಯನ್ನು ಧೃಢೀಕರಿಸಿದೆ ಮತ್ತು ಅಪರಾಧಿಗಳ ಶೋಧನೆ ಮತ್ತು ರವಾನೆಯನ್ನು ಸುಗಮಗೊಳಿಸಿದೆ. ಅಂತೆಯೇ ಪ್ರತ್ಯರ್ಪಣೆ ಒಪ್ಪಂದಗಳು ಅನೇಕ ರಾಷ್ಟ್ರಗಳಲ್ಲಿ ರೂಪುಗೊಳ್ಳುತ್ತ, ಸುಧಾರಣೆಗೊಳ್ಳುತ್ತ ನಡೆದಿವೆ. ನೆದರ್ಲೆಂಡ್ಸ್, ಅರ್ಜೆಂಟೀನ, ಸ್ವಿಟ್ಜ್‍ರ್ಲೆಂಡ್, ಬ್ರಜಿಲ್, ಫ್ರಾನ್ಸ್, ಜರ್ಮನಿ ಇತ್ಯಾದಿ ದೇಶಗಳಲ್ಲಿ ಪ್ರತ್ಯರ್ಪಣ ಕಾನೂನುಗಳು ಅಸ್ತಿತ್ವಕ್ಕೆ ಬಂದಿದೆ. ಹೀಗೆ ಪ್ರತ್ಯರ್ಪಣವೆಂಬುವುದು ಅಪರಾಧ ಪ್ರವೃತ್ತಿಯ ವಿರುದ್ಧ ಅಂತರರಾಷ್ಟ್ರೀಯ ಹೋರಾಟ ವಿಧಾನವಾಗಿದೆ. (ಎಲ್.ಎಸ್.ಜೆ.)