ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಾಕೃತಿಕ ಆಯ್ಕೆ

ವಿಕಿಸೋರ್ಸ್ದಿಂದ

ಪ್ರಾಕೃತಿಕ ಆಯ್ಕೆ - ಜೀನುಗಳ ಮರುಸಂಯೋಗ ಅಥವಾ ಉತ್ಪರಿ ವರ್ತನೆಗಳ ಫಲವಾಗಿ ಉದ್ಬವಿಸುವ ಗುಣಲಕ್ಷಣಗಳ ಪೈಕಿ ಅಪೇಕ್ಷಿತವಾದವನ್ನು ಉಳಿಸಿಕೊಂಡು ಅವು ವಂಶಪಾರಂಪರ್ಯವಾಗಿ ಪ್ರವಹಿಸುವಂತೆ ಮಾಡುವುದರೊಂದಿಗೆ ಅನಪೇಕ್ಷಿತವಾದವನ್ನು ತೊಡೆದು ಹಾಕುತ್ತ, ಜೀವಿಗಳು ಪರಿಸರದ ವಿವಿಧ ಪರಿಸ್ಥಿತಿಗಳಿಗೆ ಹೊಂದಿಕೊಂಡು ಬದುಕಿ ಉಳಿಯುವಂತೆ ಮಾಡುವ ನೈಸರ್ಗಿಕ ಪ್ರಕ್ರಿಯೆ (ನ್ಯಾಚುರಲ್ ಸೆಲೆಕ್ಷನ್). ಈ ರೀತಿ ಯೋಗ್ಯತೆಯುಳ್ಳ ಜೀವಿಗಳ ಉಳಿಯುವಿಕೆ ಎಂಬ ತತ್ತ್ವಕ್ಕನುಸಾರವಾಗಿ ಪ್ರಕೃತಿಯಲ್ಲಿ ಜೀವಿಗಳ ಆಯ್ಕೆ ಆಗುತ್ತದೆ ಎಂಬುದನ್ನು ಚಾರ್ಲ್‍ಸ್ (1809-1882) ಪ್ರತಿಪಾದಿಸಿದ (1859). ಈತನ ಜೀವವಿಕಾಸ ಸಿದ್ದಾಂತ ಅಥವಾ ಪ್ರಾಕೃತಿಕ ಆಯ್ಕೆ ಸಿದ್ಧಾಂತ ಎಷ್ಟು ಚಿರಪರಿಚಿತ ಎಂದರೆ ಇದಕ್ಕೆ ಲೋಕರೂಢಿಯಲ್ಲಿ ಡಾರ್ವಿನಿಸಮ್ ಎಂದೇ ಹೆಸರು. ಆದರೆ ಇದನ್ನು ಡಾರ್ವಿನಿಸಮ್ ಎಂದು ನಿರ್ದೇಶಿಸುವುದು ತಪ್ಪಾಗುತ್ತದೆ. ಏಕೆಂದರೆ, ಡಾರ್ವಿನ್ನನಿಗೂ ಹಿಂದೆ ಗ್ರೀಕ್ ತತ್ತ್ವಜ್ಞಾನಿಗಳು ಈ ವಿಚಾರದಲ್ಲಿ ಆಲೋಚನೆ ನಡೆಸಿ ಕೆಲವು ವಿಷಯಗಳನ್ನು ಬೆಳಕಿಗೆ ತಂದಿದ್ದರು. ಹೀಗಿದ್ದರೂ ಇತರರಿಗಿಂತ ಡಾರ್ವಿನ್ನನ ಹೆಸರು ಪ್ರಾಕೃತಿಕ ಆಯ್ಕೆಯ ಸಿದ್ಧಾಂತ ದೊಡನೆ ಹಾಸುಹೊಕ್ಕಾಗಿದೆ. ಏಕೆಂದರೆ, ಡಾರ್ವಿನ್ನನು ಈ ವಿಚಾರದಲ್ಲಿ ನಡೆಸಿದ ಅಧ್ಯಯನ ಬಹಳ ಆಳವಾಗಿಯೂ ವಿಶಾಲವಾಗಿಯೂ ಇತ್ತು. ಈ ಸಿದ್ಧಾಂತವನ್ನು ಈತನಿಗಿಂತ ಹೆಚ್ಚು ವಿಮರ್ಶಾತ್ಮಕವಾಗಿ ತಿಳಿಸಿದವರು ಯಾರೂ ಇಲ್ಲ.

ಡಾರ್ವಿನ್ನನ ಸಿದ್ಧಾಂತಗಳು ಕೆಳಗೆ ತಿಳಿಸಿದ ಸೂತ್ರಗಳ ಮೇಲೆ ಆಧಾರಿತವಾಗಿವೆ.

1 ವಿಪುಲ ಉತ್ಪಾದನೆ : ಜೀವರಾಶಿಗಳಲ್ಲಿ ಅಗತ್ಯ ಪರಿಮಾಣವನ್ನು ಮೀರಿ, ಧಾರಾಳ ಪರಿಮಾಣದಲ್ಲಿ ಸಂತಾನೋತ್ಪತ್ತಿ ಆಗುತ್ತದೆ ಎಂಬ ವಿಷಯವನ್ನು ಎಲ್ಲ ಜೀವವಿಜ್ಞಾನಿಗಳೂ ಒಪ್ಪಿಕೊಂಡಿದ್ದಾರೆ. ಉತ್ಪತ್ತಿಯಾದ ಜೀವ ರಾಶಿಗಳಲ್ಲಿ ಉಳಿಯುವುವೆಷ್ಟೊ ಅಳಿಯುವುವೆಷ್ಟೊ. ಸೀತಾಳಗೆಡ್ಡೆಯ ಒಂದು ಹೂ 1,000,000 ಕ್ಕೂ ಹೆಚ್ಚು ಬೀಜಗಳನ್ನು ಒಂದು ಅಮರ್ಯಾಂತಸ್ ಗಿಡ 2,000,000 ಕ್ಕೂ ಹೆಚ್ಚು ಬೀಜಗಳನ್ನು ಉತ್ಪಾದಿಸುತ್ತದೆ. ಒಂದು ನಾಯಿಕೊಡೆ ಸುಮಾರು 2,000,000,000 ಬೀಜಗಳನ್ನು ಗಾಳಿಯಲ್ಲಿ ತೂರಿ ಬಿಡುತ್ತದೆ. ಪ್ರಪಂಚದಲ್ಲಿ ಲಭ್ಯವಿರುವ ಆಹಾರ ಮತ್ತು ವಸತಿಗೆ ಒಂದು ಮಿತಿಯುಂಟಷ್ಟೆ. ಉದ್ಬವವಾಗುವ ಕೋಟ್ಯಂತರ ಜೀವಿಗಳಿಗೆಲ್ಲ ಆಹಾರ ಮತ್ತು ವಸತಿ ಸಿಗುವುದು ಅಸಾಧ್ಯ. ಹೀಗಾಗಿ ಬಹುಪಾಲು ಜೀವಿಗಳು ವಸತಿ ಮತ್ತು ಆಹಾರ ಸಿಗದೆ ಅಳಿಯುತ್ತವೆ, ಉಳಿವ ಅಲ್ಪಸಂಖ್ಯೆಯ ಜೀವಿಗಳು ಮಾತ್ರ ಬದುಕಿ ಜೀವನ ನಿರ್ವಹಿಸುವುವು.

2 ಪೈಪೋಟಿ : ನಿಯಮಿತ ಮೊತ್ತದಲ್ಲಿ ಮಾತ್ರ ಆಹಾರ ಮತ್ತು ವಸತಿ ದೊರಕುವುದರಿಂದ ಹುಟ್ಟುವ ಜೀವಿಗಳ ನಡುವೆ ಆಹಾರ ಮತ್ತು ವಸತಿ ದೊರಕಿಸಿ ಕೊಳ್ಳಲು ಸ್ಪರ್ಧೆ ನಡೆಯುತ್ತದೆ. ಸ್ಪರ್ಧೆಗಳು ಪ್ರಭೇದಗಳ ನಡುವೆ ಮಾತ್ರವಲ್ಲದೆ ಒಂದೇ ಪ್ರಭೇದದ ವಿವಿಧ ಜೀವಿಗಳಲ್ಲೂ ನಡೆಯುತ್ತದೆ. ಇಲ್ಲೂ ಬಹಳಷ್ಟು ಸಂಖ್ಯೆಯ ಜೀವಿಗಳು ಸೋತು ಅಳಿಯುತ್ತವೆ ಮತ್ತು ಅಲ್ಪ ಸಂಖ್ಯೆಯ ಜೀವಿಗಳು ಗೆದ್ದು ಉಳಿಯುತ್ತವೆ. ಈ ಪೈಪೋಟಿ ಜೀವಿಸಂಖ್ಯೆಯ ಸ್ಛೋಟವನ್ನು ತಡೆಹಿಡಿಯುವ ಒಂದು ನೈಸರ್ಗಿಕ ನಿಯಂತ್ರಣೋಪಾಯ. ಪ್ರಪಂಚದಲ್ಲಿ ಜೀವಪ್ರಭೇದಗಳ ಯಾವ ಯಾವ ಪ್ರಮಾಣದಲ್ಲಿರಬೇಕೆಂಬುದನ್ನು ನಿಸರ್ಗ ಗೊತ್ತುಪಡಿಸಿದೆ. ಯಾವುದೇ ಒಂದು ಜೀವಿ ಅಥವಾ ಜೀವಪ್ರಭೇದ ಉಳಿದವಕ್ಕಿಂತ ಪ್ರತ್ಯೇಕವಾಗಿ ನಿಸರ್ಗ ನಿರ್ಧರಿಸಿದ ಪ್ರಮಾಣದ ಮೇರೆ ಮೀರಿ ಸಂತಾನಾಭಿವೃದ್ದಿ ನಡೆಸದಂತೆ ನಿಯಂತ್ರಿಸುವ ಸಾಧನವೇ ಪೈಪೋಟಿ. ಎಲ್ಲಿಯವರೆಗೆ ನಿಸರ್ಗವನ್ನು ಕೆರಳಿಸುವ ಒಂದು ಪ್ರತಿಶಕ್ತಿ ಅಥವಾ ಕಾರಣಾಂಶ ಉದ್ಬವವಾಗುವುದಿಲ್ಲವೊ ಅಲ್ಲಿಯವರೆಗೆ ಜೀವಸಂಖ್ಯೆಯ ಮೊತ್ತ ಸಂರಕ್ಷಿತವಾಗಿರುತ್ತದೆ.

3 ವೈವಿಧ್ಯ : ಒಂದು ಜೀವಜಾತಿಯ ವೈಯಕ್ತಿಕ ಜೀವಿಗಳಲ್ಲಿ ಸಮಾನ ಗುಣರೂಪಗಳಿರದೆ ವಿವಿಧ ತೆರನ ಮತ್ತು ವಿವಿಧ ಪರಿಣಾಮದ ವ್ಯತ್ಯಾಸಗಳು ಇರುವುವು ಎಂಬ ವಿಷಯ ಜೀವವಿಜ್ಞಾನದಲ್ಲಿ ಹಿಂದಿನಿಂದಲೂ ತಿಳಿದು ಬಂದದ್ದೇ. ಡಾರ್ವಿನ್ನನ ಪ್ರಕಾರ ಒಂದು ನಿಖರವಾದ ಪರಿಸರದಲ್ಲಿ ಜೀವಪ್ರಭೇದದ ಕೆಲವು ಜೀವಿಗಳಲ್ಲಿ ಬದಲಾಗುವ ಪರಿಸರಕ್ಕೆ ಹೊಂದಿಕೊಳ್ಳುವಂಥ ಯೋಗ್ಯತಾಗುಣಗಳಿರುವುವು. ಇನ್ನುಳಿದ ಜೀವಿಗಳಲ್ಲಾದರೊ ಇಂಥ ಯೋಗ್ಯತಾಗುಣಗಳಿರುವುದಿಲ್ಲ. ಬದಲಾಗುವ ಪರಿಸರಕ್ಕೆ ಹೊಂದಿಕೊಳ್ಳುವ ಅನುಕೂಲ ಗುಣಗಳಿರುವ ಜೀವಿಗಳೇ ಅಸ್ತಿತ್ವಕ್ಕಾಗಿ ನಡೆಯುವ ಸ್ಪರ್ಧೆಯಲ್ಲಿ ಗೆದ್ದು ಉಳಿಯುವ ಜೀವಿಗಳು ಎಂದೂ, ಹೊಂದಿಕೊಳ್ಳಲಾರದಂಥ ಗುಣಗಳಿರುವ ಜೀವಿಗಳೇ ಅಸ್ತಿತ್ವಕ್ಕಾಗಿ ನಡೆಯುವ ಸ್ಪರ್ಧೆಯಲ್ಲಿ ಗೆದ್ದು ಉಳಿಯುವ ಜೀವಿಗಳು ಎಂದೂ, ಹೊಂದಿಕೊಳ್ಳಲಾರದಂಥ ಗುಣಗಳನ್ನು ಪಡೆದಿರತಕ್ಕ ಜೀವಿಗಳು ಅಳಿಯುತ್ತವೆ ಎಂದೂ ಡಾರ್ವಿನ್ ತಿಳಿಸಿದ. ಅನುಕೂಲಕರ ಗುಣಮಾರ್ಪಾಟುಗಳನ್ನು ಪಡೆದಿರುವ ಜೀವಿಗಳು ತಮ್ಮ ಈ ಗುಣಗಳನ್ನು ಮುಂದಿನ ಪೀಳಿಗೆಗೆ ರವಾನಿಸುತ್ತವೆ. ಹೀಗೆ ಉದ್ಬವವಾದ ಸಂತಾನದಲ್ಲಿ ಬದಲಿಸಿದ ಪರಿಸರಕ್ಕೆ ಹೊಂದಿಕೊಳ್ಳತಕ್ಕ ಗುಣಲP್ಪ್ಷಣಗಳ ಮಾರ್ಪಾಟು ನಡೆಯುತ್ತಲೇ ಇರುತ್ತದೆ. ಮತ್ತೆ ಮತ್ತೆ ಅಸ್ತಿತ್ವಕ್ಕಾಗಿ ಹೋರಾಟ ನಡೆದು ಕೆಲವು ಜೀವಿಗಳು ಉಳಿಯುತ್ತವೆ, ಕೆಲವು ಅಳಿಯುತ್ತವೆ. ಈ ಹೋರಾಟದಲ್ಲಿ ಸಫಲವಾಗುವಂಥ ಜೀವಿಗಳು ಮಾರ್ಪಾಟಾದ ಪರಿಸರಕ್ಕೆ ಹೊಂದಿಕೊಳ್ಳುವಂಥ ತಮ್ಮ ಯೋಗ್ಯ ಗುಣಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುತ್ತವೆ. ಈ ತೆರನ ವರ್ಗಾವಣೆ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತ ಹೋಗುತ್ತದೆ. ಡಾರ್ವಿನ್ನನ್ನು ಇದನ್ನು “ಯೋಗ್ಯತಾಗುಣವುಳ್ಳದ್ದರ ಉಳಿಯುವಿಕೆ” ಎಂದು ಹೆಸರಿಸಿ ಇದು ಆಯ್ಕೆಯ ಒಂದು ವಿಧಾನ ಎಂದು ತಿಳಿಸಿದ. ಇದು ಡಾರ್ವಿನ್ನನ ಪ್ರಾಕೃತಿಕ ಆಯ್ಕೆ ಸಿದ್ಧಾಂತ ಎಂದು ಪ್ರಸಿದ್ಧವಾಗಿದೆ. ವಂಶ ಪಾರಂಪರ್ಯವಾಗಿ ನಡೆಯುವ ಈ ಪ್ರಾಕೃತಿಕ ಆಯ್ಕೆಯ ಕಾರ್ಯ ಬಲು ನಿಧಾನ ಗತಿಯದು. ಆದರೆ ಗುಣ ನವೀನತೆ ವಂಶದಿಂದ ವಂಶಕ್ಕೆ ಪರಿಷ್ಕಾರ ಹೊಂದುತ್ತ, ಬದಲಾಗುತ್ತ ಹೋಗುವ ಪರಿಸರಕ್ಕೆ ತಕ್ಕಂತೆ ಜೀವಿ ಹೊಂದಿಕೊಳ್ಳಲು ಹೆಚ್ಚು ಹೆಚ್ಚಿನ ಪ್ರಮಾಣದಲ್ಲಿ ಪರಿಪ್ಕ್ರತವಾಗುತ್ತ ಜೀವಿಸುವ ಯೋಗ್ಯತೆಯನ್ನು ಹೆಚ್ಚಿನ ಮೊತ್ತದಲ್ಲಿ ಪಡೆಯುತ್ತ ಹೋಗುತ್ತದೆ. ಗುಣಪರಿಷ್ಕರಣ ಒಂದು ವಂಶಾನುಗತ ಕಾರ್ಯ. ನಿಸರ್ಗದ ಈ ಕುಲುಮೆಯಲ್ಲಿ ಜೀವಿಗಳು ಗುಣಪರಿಷ್ಕಾರ ಹೊಂದಿ ಕಾಲಾನುಕ್ರಮದಲ್ಲಿ ತಮ್ಮ ಹಿಂದಿನ ಪೀಳಿಗೆಯಲ್ಲಿ ಇಲ್ಲದಿದ್ದಂಥ ನವೀನುಗುಣಗಳನ್ನು ಪಡೆದು ಹೊಸಮಾದರಿಯ ಜೀವಿಗಳಾಗಿ ಅವತರಿಸುತ್ತವೆ. ಎಂಬುದು ಡಾರ್ವಿನ್ನನ ಸಿದ್ದಾಂತ.

ಡಾರ್ವಿನ್ನನ ಜೀವವಿಕಾಸ ಸಿದ್ಧಾಂತ ಎಬ್ಬಿಸಿದಷ್ಟು ಕೋಲಾಹಲವನ್ನು ಇನ್ನಾವ ಸಿದ್ಧಾಂತವೂ ಉಂಟುಮಾಡಲಿಲ್ಲ. ಡಾರ್ವಿನ್ನನ ಸಿದ್ಧಾಂತವನ್ನು ಅನೇಕ ಜೀವವಿಜ್ಞಾನಿಗಳು ಪೂರ್ತಿಯಾಗಿ ಮತ್ತೆ ಕೆಲವರು ಭಾಗಶಃ ಮಾತ್ರ ಒಪ್ಪಿಕೊಂಡಿದ್ದಾರೆ. ಡಾರ್ವಿನ್ನನ ಮೂಲಪ್ರತಿಪಾದನೆಗಳು ಅಂದರೆ ವಿಪುಲ ಉತ್ಪಾದನೆ, ಪೈಪೋಟಿ, ವೈವಿಧ್ಯ, ಯೋಗ್ಯತೆ ಉಳ್ಳಜೀವಿಯ ಉಳಿಯುವಿಕೆ ಎಂಬವು ಖಂಡಿತ ಒಪ್ಪಿಕೊಳ್ಳುವಂಥ ವಿಚಾರಗಳೇ. ಆದರೆ ಡಾರ್ವಿನ್ನನ ಪ್ರತಿಪಾದನೆಯ ಬಹು ವಿವಾದಾತ್ಮಕ ಅಂಶಗಳೆಂದರೆ ವಿನೂತನಗುಣಗಳು ವಂಶಪಾರಂಪರ್ಯವಾಗಿ ಮುಂದಿನ ಪೀಳಿಗೆಗಳಿಗೆ ರವಾನೆಯಾಗುವುದು ಮತ್ತು ಪ್ರಾಕೃತಿಕ ಆಯ್ಕೆಯಿಂದ ಉದ್ಭವವಾಗುವ ಜೀವಿಗಳ ಮಾರ್ಪಾಟು. ತನ್ನ ಪ್ರತಿಪಾದನೆಯ ದುರ್ಬಲತೆಯನ್ನು ಡಾರ್ವಿನ್ನನೇ ಗಮನಿಸಿದ್ದ. ಅಂದರೆ ಪ್ರಾಕೃತಿಕ ಆಯ್ಕೆ ಜೀವವಿಕಾಸಕಾರ್ಯದ ಒಂದು ಅಂಶವೇ ಹೊರತು, ಆದುದರಿಂದಲೇ ಜೀವವಿಕಾಸ ನಡೆಯುವುದಿಲ್ಲ ಎಂಬ ವಿಚಾರ ಡಾರ್ವಿನ್ನನ ಪ್ರತಿಪಾದನೆಯ ಬಗ್ಗೆ ಇರವು ಇನ್ನೊಂದು ಟೀಕೆ. ಅಂದರೆ ಒಗ್ಗದಿರುವ ಗುಣಗಳ ಬಗ್ಗೆ ಜೀವಿಗಳು ಪರಿಸರಕ್ಕೆ ಹೊಂದಿಕೊಳ್ಳಲು ಪ್ರಾಕೃತಿಕ ಆಯ್ಕೆಯಲ್ಲಿ ತಮ್ಮ ರಚನೆಯಲ್ಲಿ ಅನೇಕ ಮಾರ್ಪಾಡುಗಳನ್ನು ಅಳವಡಿಸಿಕೊಳ್ಳುತ್ತವೆ. ಪರಿಸರಕ್ಕೆ ಯಶಸ್ವೀ ಹೊಂದಾಣಿಕೆಯೆಂದರೆ ಜೀವಿ ತನ್ನ ಸುತ್ತಲಿರುವ ಜಟಿಲ ಪರಿಸ್ಥಿತಿಯನ್ನು ಎದುರಿಸಿ ಜೀವಿಸಲು ಗುಣಶಕ್ತಿ ಪಡೆಯುವುದು ಈ ಅಮೂಲ್ಯ ಯೋಗ್ಯಗುಣಗಳ ಜೊತೆಯಲ್ಲಿ ಅನೇಕ ಜೀವಿಗಳು ಗಣನೀಯವಲ್ಲದ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳಲು ಯಾವ ಪ್ರಯೋಜವೂ ಇಲ್ಲದೆ ಕೆಲವು ಗುಣಗಳನ್ನು ಪಡೆದಿರುವುವು. ಅನುಪಯುಕ್ತ ಗುಣಗಳು ಜೀವಿಗಳ ಅಳಿವು ಮತ್ತು ಉಳಿವುಗಳಿಗೆ, ಪರಿಸರಕ್ಕೆ ಹೊಂದಿಕೊಳ್ಳುವುದಕ್ಕೆ ಯಾವ ಒತ್ತಾಸೆಯನ್ನೂ ಕೊಡಲಾರವಾದ್ದರಿಂದ ಸಸ್ಯಗಳಲ್ಲೇ ಆಗಲಿ, ಪ್ರಾಣಿಗಳಲ್ಲೇ ಆಗಲಿ ಜೀವಪ್ರಭೇದಗಳನ್ನು ಅವುಗಳ ಗುಣ ಲಕ್ಷಣ ಆಧಾರದ ಮೇಲೆ ವಿಂಗಡಿಸುವುದು ಅಮುಖ್ಯ ಮತ್ತು ನಿರರ್ಥಕ. ಡಾರ್ವಿನ್ನನ ಜೀವವಿಕಾಸವಾದ ಯೋಗ್ಯಗುಣಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿದೆ; ಯೋಗ್ಯವಲ್ಲದ ಗುಣಗಳಿಗೆ ಯಾವ ಪ್ರಾಮುಖ್ಯವನ್ನು ಕೊಟ್ಟಿಲ್ಲ. ಜೀವಪ್ರಭೇದಗಳಲ್ಲಿ ಅನೇಕ ಸಲ ಯೋಗ್ಯವಲ್ಲದ ಗುಣಗಳೇ ಪ್ರಧಾನ ವ್ಯತ್ಯಾಸ ಅಂಶಗಳಾಗಿರುತ್ತವೆ.

ಡಾರ್ವಿನ್ನನ ವಾದದ ಬಗ್ಗೆ ಇರುವ ಇನ್ನೂ ಒಂದು ಟೀಕೆಯೆಂದರೆ ಆತ ಪಿತ್ರಾರ್ಜಿತ ಮತ್ತು ಅಪಿತ್ರಾರ್ಜಿತ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಳ್ಳದೆ ಇರುವುದು ಮತ್ತು ಎಲ್ಲ ಗುಣವ್ಯತ್ಯಾಸಗಳು ಪಿತ್ರಾರ್ಜಿತವೆಂದು ತಿಳಿದದ್ದು. ಸರ್ವೇಸಾಮಾನ್ಯವಾಗಿ ಲೈಂಗಿಕಕೋಶದ ಕೋಶರಸ ಅಥವಾ ಕ್ರೊಮ್ಯಾಟಿನ್ ನಿಯಂತ್ರಣ ಮಾರ್ಪಾಟುಗಳು ಮಾತ್ರ ಅನುವಂಶಿಕವಾಗಿ ಸಾಗುತ್ತವೆ. ಬೇರೆ ಮಾರ್ಪಾಟುಗಳಲ್ಲಿ ಪರಿಸರದ ಪರಿಣಾಮದಿಂದ ಉಂಟಾದ ದೈಹಿಕ ಕೋಶಗಳನ್ನು ಸಂಬಂಧಿಸಿದ ವ್ಯತ್ಯಾಸಗಳೇ ಹೊರತು ಅನುವಂಶಿಕವಾಗಿ ಸಾಗಿ ಬಂದಂಥವಲ್ಲ. ದೈಹಿಕ ಕೋಶಗಳು ಪರಿಸರದ ಪರಿಸ್ಥಿತಿಯಿಂದ ಗುಣವ್ಯತ್ಯಾಸ ಹೊಂದುತ್ತವಷ್ಟೆ. ಹೀಗೆ ವ್ಯತ್ಯಾಸಗೊಂಡ ಗುಣಗಳು ಅನುವಂಶಿಕವಾಗಿ ಹರಿಯುವುದಿಲ್ಲ.

ಹೀಗೆ ಡಾರ್ವಿನ್ನನ ಪ್ರಾಕೃತಿಕ ಆಯ್ಕೆ ಸಿದ್ದಾಂತದಲ್ಲಿ ಕೆಲವು ದೋಷಗಳಿದ್ದರೂ, ಜೀವವಿಜ್ಞಾನದಲ್ಲಿ ಇದು ಒಂದು ಕ್ರಾಂತಿಕಾರಕ ಪ್ರತಿಪಾದನೆ ಎಂಬುದರಲ್ಲಿ ಸಂಶಯವಿಲ್ಲ. (ಕೆ.ಆರ್.ಜಿಎ;ಎನ್,ಎಚ್,ವಿ;ಎ.ಎಸ್.ಸಿ.)