ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಾಣೇಶ ವಿಠಲದಾಸ
ಪ್ರಾಣೇಶ ವಿಠಲದಾಸ
ಸು. 1822. ಕ್ರಿ.ಶ. ಸು. 15ನೆಯ ಶತಮಾನದಲ್ಲಿ ಶ್ರೀಪಾದರಾಜರಿಂದ ಪ್ರಾರಂಭವಾದ ಕರ್ನಾಟಕದ ಹರಿದಾಸ ಪರಂಪರೆಯಲ್ಲಿ ನಾನೂರು ವರ್ಷಗಳ ತರುವಾಯ ಇದ್ದವ. ಪೂರ್ವಶ್ರಮದ ಹೆಸರು ಯೋಗೀಂದ್ರ. ಲಿಂಗಸೂಗೂರಿನ ಕುಲಕರ್ಣಿಗಳಾಗಿದ್ದು ಜಗನ್ನಾಥದಾಸರ ಶಿಷ್ಯತ್ವ ಸ್ವೀಕರಿಸಿ ಸುಮಾರು 60 ವರ್ಷಗಳ ಕಾಲ ಅವರ ಸೇವೆ ಮಾಡಿ ಅವರ ಅನುಗ್ರಹಕ್ಕೆ ಪಾತ್ರನಾದವ. ಜಗನ್ನಾಥದಾಸರಿಂದ ಪ್ರಾಣೇಶವಿಠಲ ಎಂಬ ಅಂಕಿತವನ್ನೂ ಹದಿನಾಲ್ಕು ದೇವತಾ ಪ್ರತಿಮೆಗಳನ್ನೂ ಪಡೆದನೆಂಬ ಮಾತಿದೆ. ಅಂಕಿತ ದೊರೆತ ಬಳಿಕ ಅನೇಕ ಪದ ಸುಳಾದಿ ಉಗಾಭೋಗಗಳನ್ನೂ ರಚಿಸಿದ್ದಲ್ಲದೇ ಗಾಲವಚರಿತ್ರೆ, ಕಾಲಿಯಾಮರ್ದನಕತೆ, ಬುಡ್ಡಿಬ್ರಹ್ಮನಕತೆ, ಗೋಪಿಕಾವಿಲಾಸ, ಭ್ರಮರಗೀತಾ, ಮುಯ್ಯದಪದ, ಶ್ರೀಹರಿವಾಯುಸ್ತುತಿ, ಸೀತಾ ಸ್ವಯಂವರ, ಕಾಳೀಸ್ವಯಂವರ, ಹನುಮದ್ವಿಲಾಸ (ಗರುಡಗರ್ವಭಂಗ), ಭೀಮಸೇನವಿಲಾಸ, ವೀರಭದ್ರವಿಲಾಸ, ಪಾರ್ಥ ವಿಲಾಸ, ಅನಿರುದ್ಧವಿಲಾಸ, ವಸಿಷ್ಠ ವಿಶ್ವಾಮಿತ್ರಾಖ್ಯಾನ, ಊಧ್ರ್ವಪುಂಡ್ರ್ಯ ಮಹಾತ್ಮೆ, ಶಿಥಿತ್ರಯ ನಿರ್ಣಯ ಮುಂತಾದ ಪ್ರಕರಣಗಳನ್ನು ಬಹುರಸಭರಿತವಾಗಿಯೂ ಭಕ್ತ್ಯುದ್ರೇಕವಾಗುವಂತೆಯೂ ಬರೆದಿದ್ದಾನೆಂದು ತಿಳಿದುಬರುತ್ತದೆ.
ಈತನ ಕೀರ್ತನೆಗಳನ್ನು ಅರ್ಥ ಟಿಪ್ಪಣಿಗಳ ಸಹಿತವಾಗಿ ಶ್ರೀವರದೇಂದ್ರ ಸಾಹಿತ್ಯಮಂಡಲ ಲಿಂಗಸೂಗೂರು-ಇವರು ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹಿಸಿ, ಬೋಧಾಮೃತ, ಗುರುನಮನ, ದೇವತಾಮನನ, ಮತ್ತು ಸಾತ್ವಿಕ ಸ್ತವನ_ಎಂಬ ನಾಲ್ಕು ಹೊತ್ತಗೆಗಳಾಗಿ ಹೊರತಂದಿದ್ದಾರೆ. ಬೋಧಾಮೃತದಲ್ಲಿ ಜನಸಾಮಾನ್ಯರಿಗೆ ಬೋಧಿಸಿದ ಭಕ್ತಿ ಜ್ಞಾನ ನೀತಿ ವಿವೇಕ ಸದಾಚಾರ ವ್ಯವಹಾರಾದಿಗಳನ್ನು ಕುರಿತ 38 ಕೀರ್ತನೆಗಳೂ ಒಂದು ಸುಳಾದಿಯೂ 3 ಉಗಾಭೋಗಗಳೂ ಇವೆ. ವಿಷಯ ತೃಷ್ಣೆಯಬಿಡು ವಿಶ್ವದಲ್ಲಿ ಬಾಳು ಕುಶಲವಪ್ಪದು ನಿನಗೆ ಎಂದೆಂದಿಗೂ-ಇದೇ ಈ ದಾಸನ ಬೋಧನೆಯ ತಿರುಳು. ಗುರುನಮನದಲ್ಲಿ ಮಧ್ವಯತಿ ಪರಂಪರೆಯ ಹಾಗೂ ಮಧ್ವಾಚಾರ್ಯರಿಂದ ಜಗನ್ನಾಥದಾಸರವರೆಗಿನ ಗುರು ಪರಂಪರೆಯ ಮೂವತ್ತು ಸ್ತೋತ್ರ ಪದಗಳಿವೆ. ಗುರುಗಳಾದ ಜಗನ್ನಾಥದಾಸರನ್ನು ರಂಗನೊಲಿದ ದಾಸರು ಎಂದು ಸ್ತುತಿಸಿದ್ದಾನೆ. ಮಧ್ವಮತಪರವಾದ ಹಾಗೂ ದೇವತಾ ತಾರತಮ್ಯ ಸಾರವಾದ ಸ್ತುತಿಪದ್ಯಗಳನ್ನು ದೇವತಾಮನನದಲ್ಲಿ ನೋಡಬಹುದು. ಕಕ್ಷದೇವತೆಗಳ ಸ್ತೋತ್ರ, ಸಮಸ್ತನದಿಗಳ ಸ್ತೋತ್ರ, ಗಣಪತಿದೇವರ ಸ್ತೋತ್ರದಿಂದ ಗರುಡ ದೇವರ ಸ್ತೋತ್ರದವರೆಗೆ ಒಟ್ಟು 23 ಬಿಡಿ ಸ್ತೋತ್ರಪದ್ಯಗಳಿವೆ. ನಾಲ್ಕನೆಯ ಸಾತ್ವಿಕ ಸ್ತವನ ಅಥವಾ ಋಜುನಮನದಲ್ಲಿ ಭಾರತೀದೇವಿಸ್ತುತಿ, ವಾಯುದೇವರಸ್ತುತಿ, ಭೀಮನಸ್ತುತಿ, ಬ್ರಹ್ಮದೇವರಸ್ತುತಿಯೇ ಮೊದಲಾದ 37 ಕೀರ್ತನೆಗಳಿವೆ.
ಅಚ್ಚಾಗಿರುವ ಈ 131 ಕೀರ್ತನೆಗಳನ್ನು ಒಟ್ಟಾಗಿ ಪರಿಶೀಲಿಸಿದಾಗ ಈ ಕೆಲವು ಮಾತುಗಳನ್ನು ಹೇಳಬಹುದು : (ಅ) ಉಳಿದ ದಾಸರುಗಳಂತೆಯೆ ಭಾರತ, ಭಾಗವತಾದಿ ಪುರಾಣಗ್ರಂಥಗಳನ್ನು ಧಾರಾಳವಾಗಿ ಬಳಸಿಕೊಳ್ಳಲಾಗಿದೆ. (ಅ) ಹರಿಸರ್ವೋತ್ತಮಾದಿ ಮಾಧ್ವಮತತತ್ತ್ವಗಳ ಪ್ರತಿಪಾದನೆಗೆ ಆದ್ಯತೆ ಕೊಡಲಾಗಿದೆ. (ಇ) ಹರಿಭಕ್ತಿಯ ಪ್ರಾಶಸ್ತ್ಯ, ಜ್ಞಾನ-ಭಕ್ತಿ-ವೈರಾಗ್ಯಗಳ ಶ್ರೇಷ್ಠತೆ-ಇವುಗಳೊಂದಿಗೆ ವೈಷ್ಣದ ಸದಾಚಾರಗಳನ್ನು ಪ್ರತಿಪಾದಿಸಲಾಗಿದೆ. (ಈ) ಮನುಷ್ಯಸಹಜ ದೌರ್ಬಲ್ಯಗಳನ್ನು ಗುರುತಿಸಿ ಅವನ್ನು ಗೆದ್ದುಬರುವ ಉಪಾಯವಾಗಿ ಹರಿಭಕ್ತಿಯನ್ನು ಬೋಧಿಸಲಾಗಿದೆ. (ಉ) ಹರಿದಾಸ ಪರಂಪರೆಯನ್ನು ಚಾಚೂ ತಪ್ಪದೆ ಅನುಸರಿಸಿರುವುದರಿಂದ ಈ ಕೃತಿಗಳು ಉಳಿದ ದಾಸರ ಕೃತಿಗಳ ಅನುಕರಣೆಯಾಗಿ ತೋರುತ್ತವೆ.
ಕರ್ನಾಟಕದ ಹರಿದಾಸ ಪರಂಪರೆಯಲ್ಲಿ ಬಂದ ಕೊನೆಯ ಅಪರೋಕ್ಷಜ್ಞಾನಿಯೆಂದು ಈತನನ್ನು ಗುರುತಿಸುವುದು ವಾಡಿಕೆ. ಈತ ಪಾಂಡುರಾಜನ ಅಂಶವೆಂದು ಪ್ರತೀತಿ. ಗುರುಗಳೊಂದಿಗೆ ಪ್ರವಾಸ ಮಾಡಿ ಕೀರ್ತನೆ, ಶಾಸ್ತ್ರಾರ್ಥ ಮಾಡುವುದರಲ್ಲಿ ಪಾಲ್ಗೊಳ್ಳುತ್ತಿದ್ದುದಾಗಿ ತಿಳಿದು ಬರುತ್ತದೆ. ವರದಾನದಿ ತೀರದ ಕರ್ಜಗಿ ಎಂಬಲ್ಲಿಗೆ ಬಂದಾಗ ಅಲ್ಲಿಯ ದಾಸಪ್ಪ ಎಂಬ ವೇಶ್ಯಾಲೋಲನನ್ನು ಆದದ್ದಾಯ್ತಿನ್ನಾದರು ಒಳ್ಳೇಹಾದಿ ಹಿಡಿಯೊ ಪ್ರಾಣಿ ಎಂದು ಹಾಡಿ, ಸನ್ಮಾರ್ಗಕ್ಕೆ ಹಚ್ಚಿದನಂತೆ. ಆ ದಾಸಪ್ಪನೆ ಮುಂದೆ ಕರ್ಜಗೀ ದಾಸನೆಂದು ಖ್ಯಾತರಾಗಿ ಜಗನ್ನಾಥದಾಸರಿಂದ ಶ್ರೀದವಿಠಲ ಎಂಬ ಅಂಕಿತವನ್ನು ಪಡೆದು ಅವರ ಹರಿಕಥಾಮೃತಸಾರಕ್ಕೆ ಫಲಸ್ತುತಿಯನ್ನು ಬರೆದ. ಪ್ರಾಣೇಶನ ಶಿಷ್ಯರಲ್ಲಿ ಒಬ್ಬನಾದ ವೆಂಕಟವಿಠಲ ತನ್ನ ಗುರುವನ್ನು ಸ್ತುತಿಸಿದ್ದಾನೆ ಎಂದು ಮೆಚ್ಚಿಕೊಂಡಿದ್ದಾರೆ.
ಪ್ರಾಣೇಶದಾಸ ತನ್ನ ಊರಾದ ಲಿಂಗಸೂಗೂರಿನಲ್ಲಿ ಗುರು ವರದೇಂದ್ರರ ವೃಂದಾವನವನ್ನು ಪ್ರತಿಷ್ಠಾಪಿಸಿದ್ದಾನೆ. ದಾಸರು `ಮಾರನಯ್ಯನೇ ಕೇಳಾ ಕಲಿವ್ಯಾಪ್ತಿ ಆದದ್ದು ಎಂಬ ಕೀರ್ತನೆಯಲ್ಲಿ ಲಿಂಗಸೂಗೂರಿನ ಸುತ್ತಮುತ್ತಲಿನ ಗುಡಿ ಹಾಳು, ಈಚಲ ಹಾಳು, ಹೆಸರೂರು, ಹಾಳ್ಕೇರಿ, ಕುಪ್ಪಿ, ಛತ್ರ ಚನ್ನಪಟ್ಟಣ, ಹುಲಿ ಗುಡ್ಡವೇ ಮೊದಲಾಗಿ ಸು. 30 ಊರುಗಳ ಹೆಸರುಗಳನ್ನು ಹೇಳಿದ್ದಾನೆ. ಇವುಗಳಲ್ಲಿ ಗೂಡಾರ್ಥವೂ ಇದೆಯೆಂಬುದು ಬಲ್ಲವರ ಮತ.
ಮುಂದೆ ಪ್ರಾಣೇಶದಾಸನ ಶಿಷ್ಯಪರಂಪರೆ ಬೆಳೆದು ಗುರುಪ್ರಾಣೇಶವಿಠಲದಾಸ ಸುಂದರವಿಠಲದಾಸ ಸುಖಸುಂದರವಿಠಲದಾಸ ರಾಮದಾಸ ಶಪ್ರಾಣೇಶವಿಠಲದಾಸ ಸಿರಿವಿಠಲದಾಸರೇ ಮೊದಲಾದವರಿಂದ ಸಮೃದ್ಧವಾಯಿತು. (ಟಿ.ಎನ್.ಎನ್.ಆರ್.)