ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ಲೀಸ್ಟೊಸೀನ್ ಯುಗ
ಪ್ಲೀಸ್ಟೊಸೀನ್ ಯುಗ
ತೃತೀಯ ಜೀವಕಲ್ಪವಾದ ಮೇಲೆ ಆರಂಭವಾದ ಯುಗ. ಇದನ್ನು ಚತುರ್ಥ ಜೀವಕಲ್ಪಕ್ಕೆ ಸೇರಿಸಲಾಗಿದೆ. ಇದರ ಕಾಲ ಅಲ್ಪಾವಧಿಯದಾದರೂ ಈ ಕಾಲದಲ್ಲೇ ಇಂದು ಕಾಣುವ ಭೂಮಿಯ ಮೇಲ್ಮೈಲಕ್ಷಣಗಳು ರೂಪುಗೊಂಡವು. ಅಲ್ಲದೆ ಈಗ ಕಾಣಬರುತ್ತಿರುವ ಪ್ರಾಣಿ ಮತ್ತು ಸಸ್ಯ ವರ್ಗಗಳ ಹಂಚಿಕೆಯೂ ಈ ಯುಗದ ಮೊದಲ ಭಾಗದಲ್ಲೇ ಆಯಿತು. ಈ ಕಾಲದ ಶಿಲಾಸಮುದಾಯದ ಒಟ್ಟು ಸಲೆ 4,03,336 ಚದರ ಕಿ.ಮೀ.ಗಳೆಂದು ಅಂದಾಜು ಮಾಡಲಾಗಿದೆ. ಯುಗದ ಆರಂಭದಲ್ಲಿಯೇ ಉತ್ತರ ಗೋಳಾರ್ಧದಲ್ಲಿ ತೀವ್ರ ಶೀತಲ ವಾಯುಗುಣ ತಲೆದೋರಿತು. ಈಗ ಸಮಶೀತೋಷ್ಣ ಹವೆಯುಳ್ಳ ಹಲವು ಪ್ರದೇಶಗಳಲ್ಲಿ ಅತಿಶೀತ ವಾಯುಗುಣವಿತ್ತೆಂಬುದಕ್ಕೆ ಈ ಯುಗಕ್ಕೆ ಸೇರಿದ ಶಿಲೆಗಳಲ್ಲಿ ಖಚಿತ ಆಧಾರಗಳಿವೆ. ಅನೇಕ ಶಿಲೆಗಳಲ್ಲಿ ಹಿಮಾಶ್ಮ ಪ್ರವಾಹದ ಲಕ್ಷಣಗಳಿದ್ದು ಅಂದು ನಡೆದುಹೋದ ಹಿಮಯುಗದ ಅಚ್ಚಳಿಯದ ಮುದ್ರೆಯನ್ನು ಸುಲಭವಾಗಿ ಗುರುತಿಸಬಹುದು. ಆದ್ದರಿಂದಲೇ ಈ ಯುಗವನ್ನು ಮಹಾ ಹಿಮಯುಗ ಎಂದು ಕರೆಯಲಾಗಿದೆ. ತೃತೀಯ ಜೀವಕಲ್ಪದಲ್ಲಿದ್ದ ಹಿತಕರ ವಾಯುಗುಣ ಈ ವೇಳೆಗಾಗಲೇ ಇಳಿಮುಖವಾಗಿ ಹವೆ ಅತಿಶೀತಲವಾಯಿತು. ಇಂಥ ಶೈತ್ಯಕ್ಕೆ ನಿರ್ದಿಷ್ಟ ಕಾರಣಗಳೇನೆಂಬುದು ಸ್ಪಷ್ಟಗೊಂಡಿಲ್ಲ. ಭೂವಿಜ್ಞಾನಿಗಳಲ್ಲಿ ಈ ವಿಷಯದ ಬಗ್ಗೆ ಒಮ್ಮತವಿಲ್ಲ. ಅಂತೂ ಹಿಮಯುಗಕ್ಕೆ ಒಳಗಾದ ಕಾರಣ ಪ್ಲೀಸ್ಟೊಸೀನ್ ಕಾಲದ ನಿಕ್ಷೇಪಗಳು ಹೆಚ್ಚಾಗಿ ಹಿಮಾಶ್ಮ ಪ್ರವಾಹದ ಮೊರೇನುಗಳು, ಪರದೇಶಿ ಬಂಡೆಗಳು, ಮರಳು, ಗುಂಡುಶಿಲೆ, ಟೆಲ್ ಎಂಬ ಅಸ್ತಾವಸ್ಥೆಯ ಹಿಮಾಶ್ಮ ಪ್ರವಾಹದ ನಿಕ್ಷೇಪಗಳು ಹಾಗೂ ನೀಲಿ ಊದಾ ಮತ್ತು ಹಾಕಿ ಬಣ್ಣದ ಜೇಡು ಪ್ರಸ್ತರಗಳು ಮತ್ತು ಒಂಡು (ಸಿಲ್ಟ್) ಶಿಲೆಗಳಿಂದ ಕೂಡಿದೆ. ಇವೆಲ್ಲ ಅಲ್ಲದೆ ಮತ್ತೊಂದು ದೃಷ್ಟಿಯಿಂದಲೂ ಈ ಯುಗ ಭೂಚರಿತ್ರೆಯಲ್ಲಿ ಸಾಕಷ್ಟು ಪ್ರಮುಖವಾದುದು. ಜೀವವಿಕಾಸದ ಉತ್ತುಂಗ ಸೃಷ್ಟಿ ಎನಿಸಿದ ಮಾನವ ಕಂಡುಬಂದುದು ಈ ಯುಗದಲ್ಲೇ. ಹೀಗಾಗಿ ಮಾನವನ ವಿಕಾಸದ ದೃಷ್ಟಿಯಿಂದಲೂ ಈ ಯುಗಕ್ಕೆ ತುಂಬ ಪ್ರಾಮುಖ್ಯವುಂಟು.
ಅಮೆರಿಕ ವಿಸ್ಕಾನ್‍ಸಿನ್ ಹಿಮಾಶ್ಮ ಪ್ರವಾಹ ಹಂತ, ಸಾನ್‍ಮೌನ್ ಅಂತರಹಿಮಾಶ್ಮ ಪ್ರವಾಹ ಹಂತ
ಇಲಿನಾಯ್ಸಿಯನ್ ಹಿಮಾಶ್ಮ ಪ್ರವಾಹ ಹಂತ. ಯಾರ್‍ಮಾತ್ ಅಂತರಹಿಮಾಶ್ಮ ಪ್ರವಾಹ ಹಂತ. ಕಾನ್ಸಾಸ್ ಹಿಮಾಶ್ಮ ಪ್ರವಾಹ ಹಂತ. ಅಪ್ಟೋನಿಯನ್ ಅಂತರಹಿಮಾಶ್ಮ ಪ್ರವಾಹ ಹಂತ.
ನೆಬ್ರಾಸ್ಕನ್ ಹಿಮಾಶ್ಮ ಪ್ರವಾಹ ಹಂತ ಯೂರೋಪ್ ಉರ್ಮ್ ಹಿಮಾಶ್ಮ ಪ್ರವಾಹ ಹಂತ. ಮೂರನೆಯ ಅಂತರಹಿಮಾಶ್ಮ ಪ್ರವಾಹ ಹಂತ
ರಿಸ್ ಹಿಮಾಶ್ಮ ಪ್ರವಾಹ ಹಂತ. ಎರಡನೆಯ ಅಂತರಹಿಮಾಶ್ಮ ಪ್ರವಾಹ ಹಂತ. ಮಿಂಡೆಲ್ ಹಿಮಾಶ್ಮ ಪ್ರವಾಹ ಹಂತ. ಮೊದಲ ಅಂತರಹಿಮಾಶ್ಮ ಪ್ರವಾಹ ಹಂತ
ಗುಂಜ್ ಹಿಮಾಂಶಪ್ರವಾಹ ಹಂತ ಇಂಡಿಯ ನಾಲ್ಕನೆಯ ಹಿಮಾಶ್ಮ ಪ್ರವಾಹ ಹಂತ. ಮೂರನೆಯ ಅಂತಹಿಮಾಶ್ಮ ಪ್ರವಾಹ ಹಂತ (ಸೋಮನ್) ಪ್ರವಾಹ ಹಂತ ಮೂರನೆಯ ಹಿಮಾಶ್ಮ (ಪೊತ್ವಾರ್ ಓಂಡು) ಎರಡನೆಯ ಅಂತರಹಿಮಾಶ್ಮ ಪ್ರವಾಹ ಹಂತ (ಕದಂಬಶಿಲೆ) ಮೊದಲ ಅಂತರಹಿಮಾಶ್ಮ ಪ್ರವಾಹ ಹಂತ (ಪಿಂಜೋರ್) ಮೊದಲ ಹಿಮಾಶ್ಮ ಪ್ರವಾಹ ಹಂತ (ಟಟ್ರೋಟ್)
ಭೂವಿಜ್ಞಾನಿಗಳು ಈ ಕಾಲದಲ್ಲಿ ಪ್ರಧಾನವಾಗಿ ನಾಲ್ಕು ಹಿಮಪ್ರವಾಹಗಳು ಸಂಭವಿಸಿದ್ದವೆಂದೂ ಇವು ಪರಸ್ಪರ ಅಂತರ ಹಿಮಾಶ್ಮಪ್ರವಾಹ ಕಾಲಗಳಿಂದ ಬೇರಾಗಿದ್ದುವೆಂದೂ ಅಭಿಪ್ರಾಯಪಟ್ಟಿದ್ದಾರೆ. ಇವರ ಲೆಕ್ಕಾಚಾರದಂತೆ ನಾವೀಗ ಐದನೆಯ ಹಿಮಾಶ್ಮ ಪ್ರವಾಹಯುಗದಲ್ಲಿದ್ದೇವೆ. ಹಿಮಾಶ್ಮ ಪ್ರವಾಹಗಳಾದಲ್ಲಿ ಇಡೀ ಉತ್ತರ ಗೋಳಾರ್ಧವೇ ಹಿಮದ ಹಾಳೆಗಳಿಂದ ಆವೃತವಾಗಿ ನಿರ್ನಾಮವಾದಾವು.
ಪ್ಲೀಸ್ಟೊಸೀನ್ ಶಿಲಾಸಮುದಾಯಗಳು ಪ್ರಪಂಚದ ಹಲವಾರು ಪ್ರದೇಶಗಳಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾಣಬರುತ್ತವೆ. ಅಮೆರಿಕ, ಯೂರೊಪ್, ಗ್ರೀನ್‍ಲೆಂಡ್ ಮತ್ತು ಭಾರತಗಳಲ್ಲಿ ಇವನ್ನು ಅಧ್ಯಯನ ಮಾಡಿ ವರ್ಗೀಕರಿಸಲಾಗಿದೆ*.
ಇಂಡಿಯಾದ ಪ್ಲೀಸ್ಟೊಸೀನ್ ನಿಕ್ಷೇಪ 3600 ಮೀ. ಮಂದವಾಗಿದೆ ಇದು ನದಿ. ಸರೋವರ ಮತ್ತು ಹಿಮಾಶ್ಮ ಪ್ರವಾಹ ಶಿಲಾವಸ್ತುಗಳಿಂದ ಕೂಡಿದೆ. ಇವು ಹಿಮಾಲಯ ತಪ್ಪಲಿನಲ್ಲಿ ಮೆಕ್ಕಲುಮಣ್ಣಿನ ಮೇಲೆ ಹರಡಿವೆ. ಕಾಶ್ಮೀರ ಪ್ರಾಂತದಲ್ಲಿ ಈ ವರ್ಗದ ನಿಕ್ಷೇಪಗಳನ್ನು ಕರೇವಾ ಶಿಲೆಗಳೆಂದು ಕರೆಯಲಾಗಿದೆ. ವಾಯವ್ಯ ಪ್ರದೇಶದಲ್ಲಿ ಇವುಗಳ ಅಗಲ 80.ಕಿ.ಮೀ. ವರೆಗೂ ಇದೆ. ಈಶಾನ್ಯ ಭಾಗದಲ್ಲಿ ಕರೇವಾ ನಿಕ್ಷೇಪ ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿದೆ. ಇಲ್ಲಿ ಸುಮಾರು 7770 ಚ.ಕಿ.ಮೀ ವಿಶಾಲವಾಗಿದ್ದು 3810 ಮೀ.ಗಳಿಗೂ ಮೀರಿ ಮಂದವಾಗಿದೆ. ಕರೇವಾ ನಿಕ್ಷೇಪವನ್ನು ಎರಡು ಭಾಗಗಳಾಗಿ ವಿಭಾಗಿಸಬಹುದು. ಎರಡರ ಮಧ್ಯೆ ಅನನುರೂಪತೆಯೂ ಇದೆ. ಇದು ಪ್ಲಿಯೊಸೀನ್ ಯುಗದ ಆದಿಯಿಂದ ಪ್ಲೀಸ್ಟೊಸೀನ್ ಯುಗದ ಅಂತ್ಯದತನಕ ನಿಕ್ಷೇಪಗೊಂಡಿತು. ಅನೇಕ ಕಡೆ ಈ ಶಿಲಾವರ್ಗದ ಮೇಲೆ ಜೇಲಮ್ ನದಿಯಿಂದ ಉಂಟಾದ ಇತ್ತೀಚಿನ ಶಿಲೆಗಳು ಅನುರೂಪತೆಯಿಂದ ಶೇಖರವಾಗಿವೆ.
ಈ ಯುಗದ ಪ್ರಾಣಿ ಮತ್ತು ಸಸ್ಯವರ್ಗಗಳು ಬಲುಮಟ್ಟಿಗೆ ಈಗ ಕಂಡುಬರುವಂತೆಯೇ ಇದ್ದುವು. ಆದರೆ ಸಿವಾಲಿಕ್ ಕಾಲದಲ್ಲಿದ್ದ ಬಹುತೇಕ ಸ್ತನಿಗಳು ನಿರ್ನಾಮವಾದುವೆಂದು ಭಾವಿಸಲಾಗಿದೆ. ಹಿಮಾಲಯ ಪರ್ವತ ಸಹ ಈ ಕಾಲದಲ್ಲೇ ತನ್ನ ಇಂದಿನ ಔನ್ನತ್ಯವನ್ನು ಪೂರ್ಣವಾಗಿ ಪಡೆಯಿತು. ಭಾರತದ ಭೂವಿಜ್ಞಾನಕ್ಕೆ ಮಹತ್ತರ ಸೇವೆ ಸಲ್ಲಿಸಿದ ಡಬ್ಲ್ಯು. ಟಿ. ಬ್ಲಾನ್‍ಫರ್ಡ್ ಅವರ ಭಾರತ ಮತ್ತು ಶ್ರೀಲಂಕಾ ನಡುವಣ ಬೆಟ್ಟಗುಡ್ಡಗಳಲ್ಲಿ ಕಂಡುಬರುವ ಶೀತವಾಯುಗುಣ ಪ್ರಮಾಣಗಳನ್ನು ವಿವರಿಸಿದ್ದಾರೆ. ಆದರೆ ಈ ಕಾಲದಲ್ಲಿ ದಖ್ಖನ್ ಪ್ರಸ್ಥಭೂಮಿಯಲ್ಲಿ ಅತಿಶೀತ ಅಥವಾ ಹಿಮಾಂಶಪ್ರವಾಹ ವಾಯುಗುಣ ಇತ್ತೆಂಬುದಕ್ಕೆ ಸರಿಯಾದ ರುಜುವಾತು ದೊರೆತಿಲ್ಲ. ಅವರ ಅಧ್ಯಯನದಂತೆ ದಖ್ಖಿನ್ನಿನ ನೀಲಗಿರಿ ಅಣ್ಣಾಮಲೆ ಮತ್ತು ಸೆವರಾಯ್ ಮತ್ತು ಶ್ರೀಲಂಕಾದ ಬೆಟ್ಟಗಳ ತುದಿಯಲ್ಲಿ ಸಮಶೀತೋಷ್ಣವಲಯದ ಸಸ್ಯಗಳೂ ಹಲವಾರು ಪ್ರಾಣಿಗಳು ಇವೆ. ಆದರೆ ಇವು ಅದೇ ಪ್ರದೇಶದ ಬೆಟ್ಟದ ತಪ್ಪಲು ಅಥವಾ ಕೆಳಮೈದಾನ ಪ್ರದೇಶಗಳಲ್ಲಿ ಕಂಡುಬಂದಿಲ್ಲ. ಇವು ಸಮಶೀತೋಷ್ಣ ಹವೆಯುಳ್ಳ ಹಿಮಾಲಯ, ಅಸ್ಸಾಮಿನ ಬೆಟ್ಟಗಳು, ಮಲೇಷಿಯಾ, ಜಾವಾ ಪ್ರಾಂತಗಳ ಸಸ್ಯ ಮತ್ತು ಪ್ರಾಣಿಗಳನ್ನು ಹೋಲುತ್ತವೆ. ಹಿಮಾಲಯದ ರೋಡೊಡೆನ್ ಡ್ರಾನ್‍ಅರ್ಬೇರಿಯಮ್ ಎಂಬ ಸಸ್ಯ ಹಾಗೂ ಮಾರ್ಟಿಸ್ ಫ್ಲಾವಿಗ್ಯೂಲ ಎಂಬ ಸ್ತನಿ ನೀಲಗಿರಿ ಮತ್ತು ಶ್ರೀಲಂಕಾದ ಬೆಟ್ಟಗಳಲ್ಲಿ ಕಂಡುಬಂದಿವೆ. ಅಂದರೆ ಹಿಮಾಲಯದಲ್ಲಿ ಶೀತಲವಾಯುಗುಣ ಇತ್ತೆಂಬುದು ಸ್ಪಷ್ಟವಾಗಿದೆ.
ಇಂದಿನ ಹಿಮಾಲಯದ ಹಿಮನದಿಗಳು ಬಲು ದೊಡ್ಡವೆಂದು ಪರಿಗಣಿತವಾಗಿವೆ. ಆದರೆ ಪ್ಲೀಸ್ಟೊಸೀನ್ ಕಾಲದಲ್ಲಿ ಇವು ಇನ್ನೂ ವಿಶಾಲವಾಗಿದ್ದು ಕ್ರಮೇಣ ಗಾತ್ರದಲ್ಲಿ ಸಣ್ಣದಾಗಿವೆ ಎಂದು ಕಾಣುತ್ತದೆ. ಈ ಯುಗದ ಅನೇಕ ಸ್ತನಿಗಳು ಅತ್ಯಲ್ಪ ಕಾಲದಲ್ಲಿ ನಾಶವಾದ ವಿಷಯವನ್ನು ಈಗಾಗಲೇ ನಮೂದಿಸಲಾಗಿದೆ. ಇದು ಭೂ ಹಾಗೂ ಜೀವಿ ವಿಜ್ಞಾನಿಗಳಿಗೆ ವಿಸ್ಮಯಕರವಾದ ಒಗಟಾಗಿದೆ. ಪ್ರಕೃತಿ ವಿಜ್ಞಾನಿ ಅಲ್‍ಫ್ರೆಡ್ ರಸೆಲ್ ವ್ಯಾಲೇಸ್ ಈ ಕುತೂಹಲಕಾರಕ ಸಂಗತಿಯ ಕಡೆಗೆ ಪ್ರಪಂಚದ ಗಮನವನ್ನು ಮೊತ್ತಮೊದಲಿಗೆ ಸೆಳೆದರು. ಈ ಯುಗದ ಶಿವಾಲಿಕ್ ಕಾಲದಲ್ಲಿದ್ದ ಶಿವಥೀರಯಮ್ ಮುಂತಾದ ವಿವಿಧ ಆನೆಗಳು, ಗೊರಸುಳ್ಳ ಪ್ರಾಣಿಗಳು ಮತ್ತು ಕಪಿಗಳು ಬದಲಾದ ಶೀತಲ ವಾತಾವರಣಕ್ಕೆ ಹೊಂದಿಕೊಳ್ಳಲಾರದೆ ನಾಶಗೊಂಡಿರಬಹುದು. ಆದರೆ ಹೆಚ್ಚಿನ ರೀತಿಯ ವಿಕಾಸಕ್ಕೆ ಒಳಗಾಗದಿದ್ದ ಜೀವಿಗಳು ಹೀಗಾಗದೆ ತಮ್ಮ ಶರೀರರಚನೆಯಲ್ಲಿ ಯುಕ್ತ ಮಾರ್ಪಾಟು ಹೊಂದಿ ಅಥವಾ ಯುಕ್ತಪ್ರದೇಶಗಳಿಗೆ ವಲಸೆ ಹೋಗಿ ಮುಂದಿನ ಯುಗಕ್ಕೂ ಮುಂದುವರಿದವು. ಈ ಕಾಲದಲ್ಲೆಲ್ಲ ನಡೆದ ಹಿಮಾಲಯ ಪರ್ವತದ ಏರಿಕೆಗೂ ತಪ್ಪಲು ಪ್ರದೇಶದಲ್ಲಿ ಉಂಟಾದ ತಗ್ಗಿಗೂ ಸಂಬಂಧ ಉಂಟು. ಈ ಕಿರಿದಾದ ತಗ್ಗು ಪ್ರದೇಶ ಪರ್ವತೋತ್ತರ ಮುನ್ನುಗ್ಗುವಿಕೆಗೆ ಸಂಬಂಧಿಸಿದ ಭೂಚಲನೆಗಳಿಂದಾದವೆಂದು ಎಡ್ವರ್ಡ್ ಸುಯೆಸ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಸಿಡ್ನಿ ಬರಾರ್ಡ್ ಅವರು ಇವು ಪರ್ವತಜನಿತ ಸ್ತರಭಂಗಗಳಿಂದ ಉಂಟಾದವು ಎಂಬುದಾಗಿ ಸೂಚಿಸಿದ್ದಾರೆ. ಇಲ್ಲಿ ಹರಿಯುವ ಸಿಂಧೂ, ಗಂಗಾ, ಯಮುನಾ ಮತ್ತಿತರ ನದಿಗಳು ಈ ತಪ್ಪಲ ತಗ್ಗಿಗೆ ಮೆಕ್ಕಲ ಮಣ್ಣನ್ನು ಸುರಿದು ಸುಮಾರು 7,77,000 ಚ.ಕಿ.ಮೀ ಸಲೆಯುಳ್ಳ ಅತಿ ಫಲವತ್ತಾದ ಸಿಂಧೂ ಗಂಗಾ ಬಯಲನ್ನು ಇದೇ ಯುಗದಲ್ಲಿ ಉಂಟುಮಾಡಿದುವು.
ಮಾನವನ ವಿಕಾಸಕ್ಕೆ ಸಂಬಂಧಿಸಿದ ಅವಶೇಷಗಳ ಅಧ್ಯಯನದಲ್ಲಿ ಪ್ಲೀಸ್ಟೊಸೀನ್ ಯುಗದ ನಿಕ್ಷೇಪಗಳಿಗೆ ವಿಶೇಷ ಮಹತ್ತ್ವ ಉಂಟು. ಆಫ್ರಿಕಾದ ಬೆಚೂನಾಲೆಂಡಿನ ಟಾಂಗ್ ಎಂಬಲ್ಲಿ ಮೊತ್ತಮೊದಲ ಬಾರಿಗೆ ತಲೆಬುರುಡೆಯ ಅವಶೇಷವೊಂದು ದೊರೆಯಿತು. ಇದು ಕಪಿ ಬುರುಡೆಯಂತಿದೆಯಾದರೂ ಹಲವು ರೂಪರೇಖೆಗಳಲ್ಲಿ ನಿರ್ದಿಷ್ಟವಾಗಿ ಮಾನವನ ಬುರುಡೆಗೆ ಸಂಬಂಧಿಸಿದೆ. ಹೀಗೆಯೇ ಟ್ಯಾಂಗನೀಕಾದ ಓಲ್ಡೊವೇ ಎಂಬಲ್ಲಿಯ ಕೆಳ ಪ್ಲೀಸ್ಟಸೀನ್ ಪ್ರಸ್ತರಗಳಲ್ಲಿ ಹಲವಾರು ಬೆಣಚಿನ ಆಯುಧಗಳೊಡನೆ ಮಾನವನ ತಲೆಬುರುಡೆಯೊಂದರ ಚೂರುಗಳು ಬೆರೆತಿದ್ದುದು ಪತ್ತೆಯಾಗಿದೆ. ಈ ಆದಿಮಾನವನಿಗೆ ಜಿನ್‍ಜಾನ್‍ಥ್ರೋಪಸ್ ಮಾನವ ಎಂದು ಹೆಸರಿಡಲಾಯಿತು. 1898 ಮತ್ತು 1930ರಲ್ಲಿ ಜಾವಾ (ಇಂಡೊನೇಷ್ಯ) ದ್ವೀಪದ ನಿಕ್ಷೇಪಗಳಲ್ಲಿ ಶೋಧನೆ ನಡೆದು ತಲೆಬುರುಡೆಯ ಚಿಪ್ಪು, ತೊಡೆಯ ಮೂಳೆ, ದವಡೆ, ಸಂಪೂರ್ಣ ತಲೆಬುರುಡೆ-ಈ ಮೊದಲಾದ ಅವಶೇಷಗಳು ದೊರೆತು ಇವೆಲ್ಲವೂ ಆದಿಮಾನವನಿಗೆ ಸಂಬಂಧಿಸಿದವೆಂದು ನಿರ್ಣಯಿಸಿ ಅವನನ್ನು ಪಿಥಿಕ್ಯಾನ್‍ಥ್ರೋಪಸ್ ಇರೆಕ್ಟಸ್ ಎಂದು ಕರೆಯಲಾಯಿತು. ಚೀನಾದ ಪೀಕಿಂಗ್ ಬಳಿಯ ಭೂಶೋಧನೆಯಲ್ಲಿ ಹಲವಾರು ತಲೆಬುರುಡೆಗಳು, ದವಡೆಗಳು, ದಂತಗಳು ಕೈಕಾಲಿನ ಎಲುಬುಗಳು ಸುಮಾರು ನಲವತ್ತು ಜನರದ್ದು ದೊರೆತುವು. ಇವನೇ ಪೀಕಿಂಗ್ ಮಾನವ. ಇವೆಲ್ಲವೂ ಈ ಯುಗದ ಮೊದಲ ಅಂತರ ಹಿಮಾಂಶ ಪ್ರವಾಹ ಹಂತಕ್ಕೆ ಸಮವಾದವೆಂದು ಪರಿಗಣಿತವಾಗಿವೆ.
ಇವೇ ಅಲ್ಲದೆ ದ್ವಿತೀಯ ಹಿಮಾಂಶ ಪ್ರವಾಹ ಹಂತಕ್ಕೆ ಸರಿಸಮವಾದ ಆಲ್ಜೀರಿಯದ ನಿಕ್ಷೇಪಗಳಲ್ಲಿ ಮಾನವನ ಅವಶೇಷಗಳು ದೊರೆತು ಇವನನ್ನು ಅಟ್ಲಾಂಥ್ರೋಪಸ್ ಮೌರಿಟಾನಿಕಸ್ ಎಂದು ಹೆಸರಿಸಲಾಗಿದೆ. ಜರ್ಮನಿಯ ಹಿಡೆಲ್‍ಬಾರ್ಗ್ ಬಳಿಯ ನದಿ ನಿಕ್ಷೇಪವೊಂದರಲ್ಲಿ ಮಾನವನ ಹಲ್ಲಿರುವ ದವಡೆಯ ಅವಶೇಷ ದೊರೆಯಿತು. ಇವನೇ ಹಿಡಲ್‍ಬರ್ಗ್ ಮಾನವ. ಒಟ್ಟಿನಲ್ಲಿ ಮಾನವವಿಕಾಸಕ್ಕೆ ಸಂಬಂಧಿಸಿದ ಶೋಧನೆಗಳಿಗೆ ಈ ಯುಗದ ನಿಕ್ಷೇಪಗಳು ಹೆಸರಾಂತವು. (ಬಿ.ವಿ.ಜಿ.)