ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ಲ್ಯಾಟಿಪಸ್
ಪ್ಲ್ಯಾಟಿಪಸ್
ಪ್ರೋಟೊ ತೀರಿಯ ಉಪವರ್ಗ, ಮಾನೊಟ್ರಿಮಟ ಗಣ ಹಾಗೂ ಆರ್ನಿತೊರಿಂಕಿಡೀ ಕುಟುಂಬಕ್ಕೆ ಸೇರಿದ ಒಂದು ವಿಚಿತ್ರ ಜಲವಾಸಿ ಸ್ತನಿ. ದಕ್ಷಿಣ ಮತ್ತು ಪೂರ್ವ ಆಸ್ಟ್ರೇಲಿಯ ಹಾಗೂ ಟಾಸ್ಮೇನಿಯ ದ್ವೀಪಗಳಲ್ಲಿ ಮಾತ್ರ ಇದು ವಾಸಿಸುತ್ತದೆ. ಶಾಸ್ತ್ರೀಯ ನಾಮ ಆರ್ನಿತೊರಿಂಕಸ್ ಅನಾಟಿನಸ್.
ಚಿಕ್ಕಗಾತ್ರದ ಪ್ರಾಣಿಯಿದು. ಗುಂಡಿನ ದೇಹದ ಉದ್ದ 300-450 ಮಿಮೀ. 100-150 ಮಿಮೀ. ಉದ್ದದ ಪುಟ್ಟ ಬಾಲವೊಂದುಂಟು. ತೂಕ 0.5-2.0 ಕೆಜಿ. ಹೆಣ್ಣುಗಳು ಇನ್ನೂ ಚಿಕ್ಕಗಾತ್ರದವು. ಮೈಬಣ್ಣ ಬೆನ್ನಮೇಲೆ ಕಗ್ಗಂದು, ಹೊಟ್ಟೆಯ ಮೇಲೆ ಬೂದಿಮಿಶ್ರಿತ ಬಿಳಿ. ದೇಹದ ಮೇಲೆ ಎರಡು ತೆರನ ಕೂದಲುಗಳುಂಟು. ಉಣ್ಣೆಯಂಥ ದಟ್ಟ ಹಾಗೂ ಮೋಟು ಕೂದಲುಗಳು ಒಂದು ತೆರನಾದರೆ, ಚಪ್ಪಟೆಯಾದ, ಹೊಳೆಯುವ ಹಾಗೂ ಅಲ್ಲಲ್ಲಿ ಚದುರಿದಂತೆ ಬೆಳೆದಿರುವ ಉದ್ದ ಕೂದಲುಗಳು ಇನ್ನೊಂದು ತೆರದ, ದೇಹ ತುಂಬ ಸಪೂರವಾಗಿದೆಯಲ್ಲದೆ ಚಪ್ಪಟೆಯಾಗೂ ಇದೆ. ಬಾಲ ಬೀವರ್ ಪ್ರಾಣಿಯ ಬಾಲದಂತಿದೆ. ಕಾಲುಗಳು ಮೋಟು. ಪಾದ ಬಾತಿನ ಪಾದದಂತೆ ಅಗಲವಾಗಿದೆ. ಹಿಂಗಾಲು ಮುಂಗಾಲುಗಳೆರಡರಲ್ಲೂ ತಲಾ ಐದು ಬೆರಳುಗಳುಂಟು. ಬೆರಳುಗಳಲ್ಲಿ ನಖಗಳೂ ಇವೆ. ಮೂತಿ ಒಂದು ತೆರನ ಕೊಕ್ಕಿನಂತೆ ಮುಂದಕ್ಕೆ ಚಾಚಿಕೊಂಡಿದೆ. ಇದರ ಆಕಾರ ಬಾತುಕೋಳಿಯ ಕೊಕ್ಕಿನದರಂತೆ. ಆದ್ದರಿಂದಲೇ ಪ್ಲ್ಯಾಟಿಪಸ್ಸಿಗೆ ಬಾತುಕೊಕ್ಕಿನ (ಡಕ್‍ಬಿಲ್ಡ್) ಪ್ಲ್ಯಾಟಿಪಸ್ ಎಂಬ ಹೆಸರೂ ಉಂಟು. ಕೊಕ್ಕನ್ನು ಮೃದುವಾದ, ತೇವಪೂರಿತವಾದ, ಕೂದಲುರಹಿತವಾದ, ಚರ್ಮ ಆವರಿಸಿದೆ. ಈ ಚರ್ಮದ ಮೇಲೆಲ್ಲ ಸಂವೇದನಶೀಲ ರಂಧ್ರಗಳುಂಟು. ಕೊಕ್ಕಿನ ಮೇಲ್ಭಾಗದಲ್ಲಿ ನಾಸಿಕ ರಂಧ್ರಗಳು ಸ್ಥಿತವಾಗಿವೆ. ಪ್ಲ್ಯಾಟಿಪಸ್ಸಿಗೆ ಘ್ರಾಣಶಕ್ತಿ ಕಡಿಮೆ. ಇದಕ್ಕೆ ಹೊರ ಕಿವಿಗಳೂ ಇಲ್ಲ.
ಮರಿ ಪ್ಲ್ಯಾಟಿಪಸುಗಳಲ್ಲಿ ಸಣ್ಣ ಹಲ್ಲುಗಳುಂಟು. ಆದರೆ ಪ್ರೌಢಪ್ರಾಣಿಗಳಲ್ಲಿ ಹಲ್ಲುಗಳ ಬದಲು ಪ್ರತಿ ದವಡೆಯ ಉದ್ದಕ್ಕೂ ಕೊಂಬಿನಂಥ ಫಲಕವಿದೆ. ಬಾಯ ಮುಂಭಾಗದಲ್ಲಿ ಫಲಕಗಳ ಅಂಚು ಚೂಪಾಗಿದೆಯಾದರೆ, ಹಿಂದವಡೆಗಳ ಬಳಿ ಅರೆಯುವ ಕಲ್ಲಿನಂತೆ ಚಪ್ಪಟೆಯಾಗಿದೆ. ಮೇಲಿನ ಹಾಗೂ ಕೆಳಗಿನ ದವಡೆಗಳ ಮೂಳೆಗಳು ಕೊಕ್ಕಿನೊಳಗೆ ಚಾಚಿಕೊಂಡಿದ್ದು ಅದಕ್ಕೆ ಆಧಾರವನ್ನು ಒದಗಿಸುತ್ತವೆ. ಪ್ಲ್ಯಾಟಪಸ್ಸಿನ ಮಿದುಳು ಚಿಕ್ಕದು ಹಾಗೂ ನಯವಾದ ಹಾಲೆಗಳಿಂದ ಕೂಡಿದುದು.
ಗಂಡು ಪ್ಲ್ಯಾಟಿಪಸ್ಸುಗಳ ಹಿಂಗಾಲುಗಳ ಮಣಿಕಟ್ಟಿನಲ್ಲಿ ಹಿಮ್ಮೊಗವಾಗಿ ಚಾಚಿರುವ ಎರಡು ಮುಳ್ಳುಗಳುಂಟು. ಒಳಗಿನ ವಿಷಗ್ರಂಥಿಗಳೊಂದಿಗೆ ಸಂಪರ್ಕದಲ್ಲಿರುವ ಈ ಮುಳ್ಳುಗಳು ಪ್ರಾಣಿಯ ರಕ್ಷಣೆಯ ಸಾಧನೆಗಳೆನಿಸಿವೆ. ಮನುಷ್ಯನಿಗೂ ಈ ವಿಷ ಅಪಾಯಕಾರಿ.
ಗಂಡು ಪ್ರಾಣಿಗಳು ಒಂದು ತೆರನ ಕಟುವಾಸನೆಯನ್ನು ಸೂಸುತ್ತವೆ. ಪ್ಲ್ಯಾಟಿಪಸ್ ಕೂಗುವುದು ಕಡಿಮೆ, ಕೂಗು ಒಂದು ಬಗೆಯ ಕೆಳಮಟ್ಟದ ಗುರುಗುಟ್ಟುವಿಕೆ. ಇದಕ್ಕೆ ಚುರುಕಾದ ದೃಷ್ಟಿಯೂ ಶ್ರವಣಸಾಮಥ್ರ್ಯವೂ ಉಂಟು, ನೀರಿನಲ್ಲಿ ಮುಳುಗಿ ಈಜುವಾಗ ತಮ್ಮ ತೀಕ್ಷ್ಣ ಸ್ಪರ್ಶಸಾಮಥ್ಯದಿಂದ ಮಾರ್ಗ ಕಂಡುಕೊಳ್ಳುವುವು.
ಇವು ಮುಂಜಾವಿನಲ್ಲಿ ಹಾಗೂ ಸಂಜೆಯಲ್ಲಿ ತುಂಬ ಚಟುವಟಕೆಯಿಂದ ಈಜುತ್ತ, ಮುಳುಗುತ್ತ, ತೇಲುತ್ತ ಆಹಾರಾನ್ವೇಷಣೆಯಲ್ಲಿ ನಿರತವಾಗಿರುವುವು. ಕೆಸರಿನಲ್ಲಿರುವ ಕ್ರೇ ಮೀನು, ಸೀಗಡಿ, ಬಸವನಹುಳು, ಗೊದಮೊಟ್ಟೆ, ಹುಳಹುಪ್ಪಟೆ, ಸಣ್ಣ ಮೀನು ಮುಂತಾದವು ಇವುಗಳ ಅಹಾರ.
ಹಳ್ಳ, ಕೆರಕಟ್ಟೆಗಳ ದಡದಲ್ಲಿ ಎರಡು ತೆರನ ಬಿಲಗಳನ್ನು ರಚಿಸಿಕೊಂಡು ಇವು ಜೀವಿಸುತ್ತವೆ. ಒಂದು ಬಗೆಯ ಬಿಲ ಗಂಡುಹೆಣ್ಣುಗಳೆರಡಕ್ಕೂ ಆಶ್ರಯವನ್ನು ಒದಗಿಸಿದರೆ ಇನ್ನೊಂದು ಬಗೆಯ ಬಿಲ ಮರಿಗಳಗಾಗಿ ಹೆಣ್ಣು ಮಾತ್ರ ರಚಿಸುವಗೂಡು.
ಪ್ಲ್ಯಾಟಿಪಸುಗಳ ಸಂತಾನವೃದ್ಧಿಶ್ರಾಯ ಆಗಸ್ಟ್-ನವೆಂಬರ್, ಸಂಭೋಗಾ ನಂತರ ಹೆಣ್ಣು-ಪ್ರಾಣಿ 1-3 ಮೊಟ್ಟೆಗಳನ್ನು ಇಡುತ್ತದೆ. ತರುವಾಯ ಆಹಾರ ಸೇವನೆಗೆ ಕೂಡ ಹೊರಬರದೆ ಗೂಡಿನಲ್ಲೇ ಇದ್ದುಕೊಂಡು 10 ದಿನಗಳ ಕಾಲ ಮೊಟ್ಟೆಗಳ ಮೇಲೆ ಕಾವುಕೂತು ಮರಿಮಾಡುತ್ತದೆ. ಈ ಕಾಲದಲ್ಲಿ ಗೂಡಿನ ಪ್ರವೇಶದ್ವಾರವನ್ನು ಮಣ್ಣಿನಿಂದ ಮುಚ್ಚಿಬಿಟ್ಟರುತ್ತದಲ್ಲದೆ ಗೂಡಿನಲ್ಲಿನ ಮೊಟ್ಟೆಗಳು ಒಣಗದಂತೆ ಅವುಗಳ ಸುತ್ತ ನೀರಿನಲ್ಲಿ ನೆನೆಸಿದ ಹುಲ್ಲು, ಎಲೆಗಳನ್ನು ಇಟ್ಟಿರುತ್ತದೆ. ಮೊಟ್ಟೆಗಳು ಹೆಚ್ಚುಕಡಿಮೆ ಗುಬ್ಬಚ್ಚಿಯ ಮೊಟ್ಟೆಗಳ ಗಾತ್ರಕ್ಕಿವೆ, ಮೊಟ್ಟೆಯೊಡೆದು ಹೊರಬರುವ ಮರಿಗಳು ಸುಮಾರು 25 ಮಿಮೀ ಉದ್ದ ಇರುವುವು ಕಣ್ಣು ತೆರೆದಿರದು. ಮೈಮೇಲೆ ರೋಮಗಳೂ ಇರುವುದಿಲ್ಲ, ಸುಮಾರು 4 ತಿಂಗಳ ಕಾಲ ತಾಯಿಪ್ರಾಣಿ ಮರಿಗಳಿಗೆ ಹಾಲೂಡಿಸಿ ಪೋಷಿಸುತ್ತದೆ.
ಪ್ಲ್ಯಾಟಿಪಸ್ಸುಗಳ ಆಯಸ್ಸು ಸುಮಾರು 10-15ವರ್ಷಗಳು ಒಂದು ಕಾಲದಲ್ಲಿ ತುಪ್ಪುಳಕ್ಕೋಸ್ಕರ ಇವನ್ನು ಬೇಟೆಯಾಡುತ್ತಿದ್ದುದರಿಂದ ಇವು ಕಣ್ಮರೆಯಾಗುವ ಭೀತಿಯಿತ್ತು, ಆದರೆ ಈಗ ಕಾನೂನಿನ ಆಶ್ರಯದಲ್ಲಿ ಇವಕ್ಕೆ ಸಂಪೂರ್ಣ ರಕ್ಷಣೆ ದೊರತಿದೆ. *