ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ಲ್ಯಾಟಿಹೆಲ್ಮಿಂತೀಸ್

ವಿಕಿಸೋರ್ಸ್ದಿಂದ

ಪ್ಲ್ಯಾಟಿಹೆಲ್ಮಿಂತೀಸ್ ಪ್ರಾಣಿರಾಜ್ಯದ ವಿಭಾಗಗಳ (ಫೈಲಮ್) ಪೈಕಿ ಒಂದು. ಇದಕ್ಕೆ ಸೇರುವ ಪ್ರಾಣಿಗಳನ್ನು ಸಾಮಾನ್ಯವಾಗಿ ಚಪ್ಪಟೆಹುಳುಗಳು (ಫ್ಲ್ಯಾಟ್‍ವಮ್ರ್ಸ್) ಎಂದು ಕರೆಯಲಾಗುತ್ತದೆ. ಹೆಸರೇ ಸೂಚಿಸುವಂತೆ ಈ ವಿಭಾಗದ ಪ್ರಾಣಿಗಳ ದೇಹ ಚಪ್ಪಟೆಯಾಗಿದ್ದು ಬೆನ್ನುಭಾಗವನ್ನು ಡಾರ್ಸಲ್ ಪಾಶ್ರ್ವವೆಂದೂ ಉದರಭಾಗವನ್ನು ವೆಂಟ್ರಲ್‍ಪಾಶ್ರ್ವವೆಂದೂ ಹೆಸರಿಸಲಾಗಿದೆ.

ಇವುಗಳ ಪ್ರಧಾನ ಲಕ್ಷಣಗಳು ಇಂತಿವೆ: 1 ದೇಹ ತೆಳುವಾದುದು, ಮೆದುವಾದದು, ದ್ವಿಪಾಶ್ರ್ವ ಸಮಮಿತಿ ಉಳ್ಳದ್ದು. ದೇಹದಲ್ಲಿ ಖಂಡ ವಿಂಗಡಣೆ (ಸೆಗ್ಮೆಂಟೇಷನ್) ಇಲ್ಲ. ದೇಹದ ಭಿತ್ತಿಯಲ್ಲಿ ಮೂರು ಪದರಗಳು-ಎಕ್ಟೋಡರ್ಮ್, ಎಂಡೋಡರ್ಮ್ ಮತ್ತು ಮೀಸೋಡರ್ಮ್ (ಮೀಸೋಗ್ಲಿಯ) ಉಂಟು.

2 ಎಪಿಡರ್ಮಿಸ್ ಮೃದುವಾಗಿದ್ದು ಶಿಲಕೆಗಳಿಂದ ಅವೃತವಾಗಿದೆ, (ಟರ್ಬಲೇರಿಯ). ಇನ್ನು ಕೆಲವಲ್ಲಿ ಎಪಿಡರ್ಮಿಸಿನ ಮೇಲೆ ಕ್ಯೂಟಿಕಲ್ ಪದರ ಇದೆ. ಹಾಗೂ ಬಾಹ್ಯ ಹೀರು ತಟ್ಟಗಳೂ (ಸಕರ್ಸ್) ಕೊಕ್ಕೆಗಳೂ ಇದ್ದು ಅತಿಥೇಯಗಳಿಗೆ ಅಂಟಿಕೊಳ್ಳಲು ಇವು ನೆರವಾಗುತ್ತವೆ. ಉದಾಹರಣೆಗೆ ಟ್ರೆಮಟೋಡ ಮತ್ತು ಸೆಸ್ಟಾಯ್ಡಿಯ.

3 ಜೀರ್ಣಾಂಗಮಂಡಲ ಅಸಂಪೂರ್ಣ ರೀತಿಯದು. ಬಾಯಿ ಇದೆಯಾದರೂ ಗುದದ್ವಾರವಿಲ್ಲ. ಕೆಲವು ಗುಂಪುಗಳಲ್ಲಿ (ಏಸೀಲ ಮತ್ತು ಸೆಸ್ಟಾಯ್ಡಿಯ) ಜೀರ್ಣಾಂಗ ಮಂಡಲವೇ ಇಲ್ಲ.

4 ಸ್ನಾಯುಪದರಗಳು ಚೆನ್ನಾಗಿ ರೂಪಗೊಂಡಿವೆ. ದೇಹಾವಕಾಶ ಇಲ್ಲ. ದೇಹದ ಒಳಗಿನ ಮಧ್ಯೆ ಇರುವ ಜಾಗ ಸಡಿಲರೀತಿಯ ಪರೆಂಕಿಮ (ಮೀಸೆಂಕೈಮ್) ಅಂಗಾಂಶದಿಂದ ಭರ್ತಿಯಾಗಿದೆ.

5 ಆಧಾರ ರಚನೆ (ಕಂಕಾಲ), ಪರಿಚಲನೆ, ಉಸಿರಾಟಕ್ಕೆ ನಿರ್ದಿಷ್ಟವಾದ ವ್ಯವಸ್ಥೆಗಳು ಇಲ್ಲವೇ ಇಲ್ಲ. ದೇಹದ ತ್ಯಾಜ್ಯ ವಸ್ತುಗಳ ವಿಸರ್ಜನೆ ನಡೆಯುವುದು ಜ್ವಾಲಾಕೋಶಗಳಿಂದ (ಫ್ಲೇಮ್ ಸೆಲ್ಸ್) ರಚಿತವಾದ ವಿಶೇಷ ರೀತಿಯ ವಿಸರ್ಜನಾಮಂಡಲದಿಂದ.

6 ನರಮಂಡಲ ಎಂದರೆ ಒಂದು ಜೊತೆ ನರಮುಡಿಗಳು (ಗ್ಯಾಂಗ್ಲಿಯ) ಅಥವಾ ನರಾಂಗುಲೀಯ (ನರ್ವ್‍ರಿಂಗ್). ಇದರಿಂದ ದೇಹದುದ್ದಕ್ಕೂ ಚಾಚಿರುವಂತೆ ಉದ್ದನೆಯ 1-3 ಜೊತೆ ನರಹುರಿಗಳು ಹೊರಡುತ್ತವೆ.

7 ಇವು ಸಾಮಾನ್ಯವಾಗಿ ದ್ವಿಲಿಂಗಿಗಳು (ಗಂಡು ಹಾಗೂ ಪ್ರಜನನಾಂಗಗಳು ಒಂದೇ ಪ್ರಾಣಿಯಲ್ಲಿರುವುವು). ಪ್ರತಿ ಪ್ರಜನನಾಂಗದಲ್ಲಿ ಲಿಂಗಾಣುಗ್ರಂಥಿ (ಗೊನ್ಯಾಡ್) ನಾಳಗಳು, ಹಾಗೂ ಸಹಾಯಕ ಅಂಗಗಳುಂಟು. ನಿಷೇಚನ ದೇಹದ ಒಳಗೆ ನಡೆಯುತ್ತದೆ ಮೊಟ್ಟಗಳು ಸೂಕ್ಷ್ಮಗಾತ್ರದವು. ಪ್ರತಿಯೊಂದು ಮೊಟ್ಟೆಯೂ ಹಲವಾರು ಬಂಡಾರ ಕೋಶಗಳೊಂದಿಗೆ ಸೇರಿಕೊಂಡು ಚಿಪ್ಪಿನಲ್ಲಿ ಅಡಕ ಗೊಂಡಿರುತ್ತದೆ. ಮೊಟ್ಟೆಯ ಬೆಳವಣಿಗೆ ನೇರವಾಗಿ (ಉದಾಹರಣೆಗೆ ಟರ್ಬೆಲೇರಿಯ ಮತ್ತು ಕೆಲವು ತೆರನ ಟ್ರೆಮ ಟೋಡ್‍ಗಳು) ಇಲ್ಲವೆ ಒಂದು ಅಥವಾ ಹೆಚ್ಚು ಸಂಖ್ಯೆಯ ಡಿಂಬಾವಸ್ಥೆಗಳ ಮೂಲಕ (ಹಲವು ಬಗೆಯ ಟ್ರೆಮಟೋಡ್‍ಗಳು ಮತ್ತು ಸೆಸ್ಟಾಯ್ಡಿಯ) ನಡೆಯುತ್ತದೆ. ಕೆಲವು ಬಗೆಯ ಚಪ್ಪಟೆಹುಳುಗಳಲ್ಲಿ ಅಲೈಂಗಿಕ ಪ್ರಜನನವೂ ಕಾಣಬರುತ್ತದೆ.

ಪ್ಲ್ಯಾಟಿಹೆಲ್ಮಿಂತೀಸ್ ವಿಭಾಗದಲ್ಲಿ ಮೂರು ವರ್ಗಗಳುಂಟು: ಟರ್ಬೆಲೇರಿಯ, ಟ್ರೆಮಟೋಡ ಮತ್ತು ಸೆಸ್ಟಾಯ್ಡಿಯ.

ಟರ್ಬಲೇರಿಯ: ಇದಕ್ಕೆ ಸೇರಿದ ಚಪ್ಪಟೆಹುಳುಗಳು (ಪ್ಲೆನೇರಿಯಗಳು) ಸ್ವಾವಲಂಬಿಗಳಾಗಿ ಸಿಹಿನೀರಿನ ತಾಣಗಳಲ್ಲೊ ಸಮುದ್ರದ ಉಪ್ಪುನೀರಿನಲ್ಲೊ ತೇವಪೂರಿತ ಭೂಮಿಗಳಲ್ಲೊ ವಾಸಿಸುವುವು. ಕೆಲವು ತೆರನವು ಬೇರೆ ಸಾಗರಜೀವಿಗಳ ದೇಹದ ಮೇಲೆ ಆಶ್ರಯಕ್ಕಾಗಿ ಮಾತ್ರ ಇಲ್ಲವೆ ಮೃದ್ವಂಗಿ. ಕಂಟಕಚರ್ಮಿ ಹಾಗೂ ಕಠಿಣ ಚರ್ಮಿಗಳ ದೇಹದ ಒಳಗೆ ಪರಾವಲಂಬಿಗಳಾಗಿ ಜೀವಿಸುವುದೂ ಉಂಟು. ಈ ಗುಂಪಿನ ಸದಸ್ಯಗಳ ಸರಾಸರಿ ಉದ್ದ 50 ಮಿಮೀ ಈ ವರ್ಗದ ಉದಾಹರಣೆಗಾಗಿ ಡ್ಯೂಜೀಸಿಯವನ್ನು ಸ್ಥೂಲವಾಗಿ ವಿವರಿಸಲಾಗಿದೆ. ಇದಕ್ಕೆ ಯೂಪ್ಲನೇರಿಯ ಎಂಬ ಹೆಸರೂ ಉಂಟು. ಇದು ಸಿಹಿನೀರಿನಲ್ಲಿ ವಾಸಿಸುವ ತೆಳುವಾದ ಮೈದುದೇಹಿ. ಇದರ ಉದ್ದ ಸುಮಾರು 15 ಮಿಮೀ ದೇಹದ ಮುಂತುದಿಯೇ ತಲೆ, ಮೊಂಡಾದ ತ್ರಿಕೋಣದಂತಿದೆ. ತಲೆಯ ಬೆನ್ನುಭಾಗದಲ್ಲಿ ದ್ಯುತಿಸಂವೇದನ ಶೀಲವಾದ ಎರಡು ನೇತ್ರಬಿಂದುಗಳಿವೆ. ದೇಹದ ಉದರಭಾಗದಲ್ಲಿ ಮುಂತುದಿ ಹಾಗೂ ಹಿಂತುದಿಗಳಿಂದ ಸಮದೂರದಲ್ಲಿ ಬಾಯಿ ಉಂಟು. ಇದರ ಮೂಲಕ ಗಂಟಲು (ಫ್ಯಾರಿಂಕ್ಸ್) ಅಥವಾ ಸೊಂಡಿಲು ಹೊರಚಾಚಿ ಆಹಾರವನ್ನು ಹಿಡಿದುಕೊಳ್ಳಲು ನೆರವಾಗುತ್ತದೆ. ಬಾಯ ಹಿಂದಕ್ಕೆ ಸಣ್ಣದಾದ ಒಂದು ಪ್ರಜನನದ್ವಾರ ಇದೆ. ಬೆನ್ನಭಾಗದ ಮೇಲೆಲ್ಲ ಸಣ್ಣ ಸಣ್ಣ ವಿಸರ್ಜನಾ ರಂಧ್ರಗಳುಂಟು.

ದೇಹ ಒಂಟಪದರದ ಎಪಿಡರ್ಮಿಸಿನಿಂದ ಆವೃತವಾಗಿದೆ. ಉದರಭಾಗದ ಮೇಲೆ ಸೂಕ್ಷ್ಮಶಿಲಕೆಗಳುಂಟು. ಇವುಗಳ ತಳಭಾಗದಲ್ಲಿ ಸ್ನಾಯುತಂತುಗಳ ಪದರಗಳಿವೆ. ಶಿಲಕೆ ಹಾಗೂ ಸ್ನಾಯುತಂತುಗಳ ಸಹಾಯದಿಂದ ಪ್ರಾಣಿ ನೀರಿನ ತಳದ ಮಣ್ಣಿನ ಮೇಲೆ ತೆವಳುತ್ತ ಇಲ್ಲವೆ ಜಾರುತ್ತ ಚಲಿಸುತ್ತದೆ. ದೇಹಾವಕಾಶ ಇಲ್ಲ. ಸ್ನಾಯುಪದರ ಹಾಗೂ ಒಳಗಿನ ಅಂಗಗಳ ನಡುವಣ ಜಾಗದಲ್ಲಿ ಮೀಸೆಂಕೈಮ್ ಕೋಶಗಳು ತುಂಬಿಕೊಂಡಿವೆ.

ಬಾಯಿ ಗಂಟಲು ಹಾಗೂ ಕರುಳುಗಳೇ ಈ ಪ್ರಾಣಿಯ ಜೀರ್ಣಾಂಗ ಮಂಡಲ. ಕರುಳು ಮೂರು ಪ್ರಧಾನ ಕವಲುಗಳನ್ನೂ ಹಲವಾರು ಸಣ್ಣ ನಾಳಗಳನ್ನೂ ಒಳಗೊಂಡಿದೆ. ಉಸಿರಾಟಮಂಡಲ ಇಲ್ಲ. ಅನಿಲಗಳ ವಿನಿಮಯ ಎಪಿಡರ್ಮಿಸಿನ ಮುಖಾಂತರ ನೇರವಾಗಿ ನಡೆಯುತ್ತದೆ. ವಿಸರ್ಜನಾಮಂಡಲದಲ್ಲಿ ಎರಡು ಮುಖ್ಯ ನಾಳಗಳುಂಟು. ಇವುಗಳಿಂದ ಹಲವಾರು ನಳಿಕೆಗಳು ಹುಟ್ಟಿ ದೇಹಾದ್ಯಂತ ಒಂದು ತೆರನ ಜಾಲವ್ಯವಸ್ಥೆಯನ್ನು ರೂಪಿಸಿದ್ದು, ಒಂದೊಂದು ನಳಿಕೆಯ ತುದಿಯಲ್ಲೂ ಹಲವಾರು ಜ್ವಾಲಕೋಶಗಳನ್ನು ರೂಪಿಸಿದ್ದು, ಒಂದೊಂದು ನಳಿಕೆಯ ತುದಿಯಲ್ಲೂ ಹಲವಾರು ಜ್ವಾಲಾಕೋಶಗಳನ್ನು ಪಡೆದಿವೆ.

ತಲೆಯ ಭಾಗದಲ್ಲಿ ಸ್ಥಿತವಾಗಿರುವ ಎರಡು ನರಮುಡಿಗಳನ್ನೇ ಮಿದುಳು ಎನ್ನಬಹುದು. ಇವರಿಂದ ದೇಹದ ಹಿಂತುದಿಯವರೆಗೂ ಚಾಚಿರುವಂತೆ ಎರಡು ನರಹುರಿಗಳಿವೆ. ಇವುಗಳಿಗೆ ಸಂಪರ್ಕ ಕಲ್ಪಿಸುವಂತೆ ಅಲ್ಲಲ್ಲಿ ಅಡ್ಡ ಸಂಪರ್ಕತಂತುಗಳುಂಟು.

ಒಂದೇ ಪ್ರಾಣಿಯಲ್ಲಿ ಗಂಡು ಮತ್ತು ಹೆಣ್ಣು ಪ್ರಜನಾಂಗಗಳಿವೆ ಗಂಡು ಪ್ರಜನನಾಂಗದಲ್ಲಿ ಸಣ್ಣಗಾತ್ರದ ಗುಂಡಾದ ನೂರಾರು ವೃಷಣಗಳು. ಸೂಕ್ಷ್ಮಗಾತ್ರದ ವಾಸ್ ಎಫರೆನ್ಸ್ ನಳಿಕೆ. ದೊಡ್ಡಗಾತ್ರದ ವಾಸ್ ಡೆಫರೆನ್ಸ್ ನಾಳ, ಕೇಂದ್ರಭಾಗದಲ್ಲಿರುವ ವೀರ್ಯಾಣು ಸಂಗ್ರಹ ಸಂಚಿ, ಸ್ನಾಯುಪುಷ್ಟ ಶಿಶ್ನ ಹಾಗೂ ಪ್ರಜನನದ್ವಾರದ ಬಳಿ ಇರುವ ಪ್ರಜನನ ಕೋಶ (ಜೆನಿಟಲ್ ಏಟ್ರಯಮ್) ಇವೆ. ಹೆಣ್ಣು ಪ್ರಜನನಾಂಗದ ಮುಖ್ಯ ಅಂಗಗಳಿವು: 1 ಎರಡು ಅಂಡಾಶಯಗಳು, 2 ನರಹುರಿಗಳಿಗೆ ಸಮಾಂತರವಾಗಿ ಚಾಚಿರುವ ಎರಡು ಅಂಡನಾಳಗಳು, 3 ಬಂಡಾರ ಗ್ರಂಥಿಗಳು. 4 ಯೋನಿ, 5 ಪ್ರಜನನಕೋಶ, 6 ಸಂಭೋಗ ಸಂಚಿ, 7 ವೀರ್ಯಾಣು ಧಾರಕಗಳು.

ಡ್ಯೂಜೀಸಿಯ ಅಲೈಂಗಿಕ ಹಾಗೂ ಲೈಂಗಿಕ ರೀತಿ ಎರಡರಿಂದಲೂ ಸಂತಾನ ವೃದ್ಧಿ ನಡೆಸುತ್ತದೆ. ಅಲೈಂಗಿಕ ಹಾಗೂ ಲೈಂಗಿಕ ರೀತಿ ಎರಡರಿಂದಲೂ ಸಂತಾನ ವೃದ್ಧಿ ನಡೆಸುತ್ತದೆ. ಅಲೈಂಗಿಕ ಪ್ರಜನನ ವಿಖಂಡನೆಯ ಮೂಲಕ ಅಂದರೆ ಒಂದು ಪ್ರಾಣಿ ಎರಡು ಭಾಗಗಳಾಗಿ ವಿಂಗಡಗೊಳ್ಳುವುದರ ಮೂಲಕ ನಡೆಯುತ್ತದೆ. ಗಂಟಲು ಭಾಗದ ಬಳಿ ಪ್ರಾಣಿ ಎರಡು ಭಾಗಗಳಾಗಿ ಕತ್ತರಿಸಿಕೊಳ್ಳುತ್ತದೆ. ಈ ಎರಡು ಭಾಗಗಳು ತಮ್ಮಲ್ಲಿಲ್ಲದ ಉಳಿದ ಭಾಗಗಳನ್ನು ಪುನರುತ್ಪತ್ತಿಮಾಡಿಕೊಳ್ಳುವುವು.

ಲೈಂಗಿಕ ಪ್ರಜನನದಲ್ಲಿ ಎರಡು ಚಪ್ಪಟೆ ಹುಳುಗಳು ಪರಸ್ಪರ ಕೂಡಿಕೊಂಡು ವೀರ್ಯಾಣುಗಳನ್ನು ವಿನಿಮಯಮಾಡಿ ಕೊಳ್ಳುವುವು. ಒಂದರ ವೀರ್ಯಾಣುಗಳು ಇನ್ನೊಂದರ ಅಂಡಾಣುಗಳೊಂದಿಗೆ ಕೂಡುವುದೇ ನಿಷೇಚನ. ಇದರಿಂದ ರೂಪುಗೊಳ್ಳುವ ಯುಗ್ಮಜ ನೇರವಾಗಿಪರಿವರ್ಧಿಸಿ ಮರಿಗಳಾಗಿ ಬೇಳೆಯುತ್ತದೆ.

ಟ್ರಿಮಟೋಡ: ಈ ವರ್ಗದ ಹುಳುಗಳೆಲ್ಲವೂ ಪರಾವಲಂಬಿಗಳು. ಪ್ರಧಾನವಾಗಿ ಕಶೇರುಕಗಳ ಬಾಹ್ಯ ಅಥವಾ ಅಂತರ ಪರವಲಂಬಿಗಳಾಗಿ ಜೀವಿಸುವುವು. ಇವುಗಳ ಜೀವನ ಕ್ರಮದ ಆಧಾರದ ಮೇಲೆ ಇವನ್ನು ಮಾನೋಜೀನಿಯ ಮತ್ತು ಡೈಜೀನಿಯ ಎಂಬ ಎರಡು ಮುಖ್ಯಗಣಗಳಾಗಿ ವಿಭಾಗಿಸಿದೆ. ಮೊದಲನೆಯ ಗಣದ ಹುಳುಗಳು ತಮ್ಮ ಜೀವನಕ್ರಮವನ್ನು ಒಂದೇ ಒಂದು ಅತಿಥೇಯ ಪ್ರಾಣಿಯಲ್ಲೂ ಎರಡನೆಯ ಗಣದವು ಎರಡು ಅಥವಾ ಹೆಚ್ಚುತೆರನ ಅತಿಥೇಯಗಳಲ್ಲೂ ಪೂರ್ಣಗೊಳಿಸುವುವು. ಎರಡು ಗಣದ ಪ್ರಾಣಿಗಳ ದೇಹವೂ ಕ್ಯೂಟಿಕಲ್ ಪದರದಿಂದ ಆವೃತವಾಗಿದೆ. ಬಾಯಿಸುತ್ತ ಒಂದು ಹೀರು ತಟ್ಟೆಯೂ ದೇಹದ ಉದರ ಭಾಗದಲ್ಲಿ ಒಂದೆರಡು ಹೀರುತಟ್ಟೆಗಳೂ ಇವೆ. ಅತಿಥೇಯಗಳಿಗೆ ಅಂಟಿಕೊಳ್ಳಲೂ ಅವುಗಳಿಂದ ಅಹಾರವನ್ನು ಪಡೆಯಲೂ ಇವು ನೆರವಾಗುವುವು.

ಈ ಗುಂಪಿನ ಬಹುಮುಖ್ಯ ಉದಾಹರಣೆ ಕಾರಲು ಹುಳು (ಲಿವರ್ ಪ್ಲೂಕ್). ಇದು ಕುರಿ. ದನಗಳಲ್ಲೂ ಅಪರೂಪಕ್ಕೆ ಮನುಷ್ಯರಲ್ಲೂ ಯಕೃತ್‍ಕೊಳೆ (ಲಿವರ್ ರಾಟ್) ರೋಗವನ್ನು ಉಂಟುಮಾಡುತ್ತದಾಗಿ ಪ್ರಸಿದ್ಧವಾಗಿದೆ. ಇದು ತನ್ನ ಜೀವನ ಚಕ್ರದ ಕೆಲವು ಹಂತಗಳನ್ನು ಕುರಿ. ದನ ಮುಂತಾದ ಅತಿಥೇಯ ಪ್ರಾಣಿಗಳಲ್ಲೂ ಇನ್ನು ಕೆಲವು ಹಂತಗಳನ್ನು ಬಸವನ ಹುಳುಗಳಲ್ಲೂ ಕಳೆಯುತ್ತದೆ.

ಕಾರಲುಹಳು (ಫ್ಯಾಸಿಯೋಲ ಹೆಪ್ಯಾಟಿಕ) ಸುಮಾರು 30 ಮಿಮೀ ಉದ್ದದ ಎಲೆಯಾಕಾರದ ಜೀವಿ. ತಲೆಭಾಗ ಗುಂಡಾಗಿದೆ. ದೇಹದ ಹಿಂತುದಿ ಕ್ರಮೇಣ ಕಿರಿದಾಗುತ್ತ ಬಂದು ಮೊಂಡಾಗಿ ಕೊನೆಗೊಳ್ಳುತ್ತದೆ. ತಲೆಯ ಮುಂತುದಿಯೇ ಬಾಯಿ, ಇದರ ಸುತ್ತ ಹೀರುತಟ್ಟೆಯುಂಟು. ಉದರಭಾಗದಲ್ಲೂ (ಬಾಯ ಸನಿಹದಲ್ಲಿ) ಒಂದು ಹೀರುತಟ್ಟೆಯಿದೆ. ದೇಹದ ಒಳಗಿನ ಅಂಗಗಳು-ಪ್ರಧಾನವಾಗಿ ಸ್ನಾಯುಪದರಗಳು, ವಿಸರ್ಜನಾಮಂಡಲ, ನರಮಂಡಲ-ಟರ್ಬೆಲೇರಿಯ ಗುಂಪಿನ ಪ್ಲನೇರಿಯಗಳಲ್ಲಿರುವಂತೆಯೇ ಇವೆ.

ಗಂಡು ಪ್ರಜನನಾಂಗ ವಿಪುಲವಾಗಿ ಕವಲೊಡೆದ ಎರಡು ವೃಷಣಗಳನ್ನೂ ವಾಸ್ ಡೆಫರೆನ್ಸ್ ನಾಳಗಳನ್ನೂ ಒಂಟಿ ವೀರ್ಯಾಣು ಸಂಚಿಯನ್ನೂ ಒಂದು ಶಿಶ್ನವನ್ನೂ ಒಳಗೊಂಡಿದೆ. ಹೆಣ್ಣು ಪ್ರಜನನಾಂಗದಲ್ಲಿ ದೇಹದ ಬಲಗಡೆ ಸ್ಥಿತವಾಗಿರುವ ಕವಲೊಡೆದ ಒಂದೇ ಅಂಡಾಶಯ, ಮಧ್ಯದ ಊವೊಟೆಪ್, ಮಹ್ಲಿಗ್ರಂಥಿ, ಗರ್ಭಾಶಯ ಹಾಗೂ ವೀರ್ಯಾಣುಧಾರಕ ಉಂಟು. ಸಂತಾನವೃದ್ಧಿಯ ವಿವರಗಳಿಗೆ (ನೋಡಿ- ಕಾರಲು-ರೋಗ).

ಕಾರಲುಹುಳುವಿನ ಮೊಟ್ಟೆಯ ಬೆಳವಣಿಗೆಯಲ್ಲಿ ಮಿರಾಸಿಡಿಯಮ್, ರೀಡಿಯ, ಸರ್ಕೇರಿಯ ಮತ್ತು ಮೆಟಸರ್ಕೇರಿಯ ಎಂಬ ನಾಲ್ಕು ಬಗೆಯ ಡಿಂಬಗಳನ್ನು ಕಾಣಬಹುದು. ಇದೇ ಗುಂಪಿಗೆ ಸೇರಿದ ಇನ್ನಿತರ ಕಾರಲು ಹುಳುಗಳು: 1 ಚೀನ, ಭಾರತ ಮತ್ತಿತರ ಕಡೆಗಳಲ್ಲಿ ಹಂದಿ, ನಾಯಿ ಮುಂತಾದುವುಗಳ ಪರಾವಲಂಬಿಯಾಗಿ ಬದುಕುವ ಕರುಳಿನ ಕಾರಲು ಹುಳು (ಫ್ಯಾಸಿಯೋಲಾಪ್ಸಿಸ್ ಬಸ್ಕಿಯೈ) 2 ನಾಯಿ, ಬೆಕ್ಕು, ಮೀನು ಮುಂತಾದವುಗಳ ಯಕೃತ್ತಿಗೆ ಬರುವ ಕಾರಲುಹುಳು (ಕ್ಲೋರಾರ್ಕಿಸ್ ಸೈನೆಸ್ಸಿಸ್). ಜಪಾನ್, ಚೀನ, ವಿಯಟ್ನಾಮ್‍ಗಳಲ್ಲಿ ಇದರ ಹಾವಳಿ ಹೆಚ್ಚು 3 ಮಾನವನನ್ನು ಒಳಗೊಂಡಂತೆ ಬೆಕ್ಕು, ನಾಯಿ, ಹಂದಿ, ಮೇಕೆ, ಇಲ್ಲಿ ಮುಂತಾದವುಗಳ ಪುಪ್ಫುಸಕ್ಕೆ ತಗಲುವ ಪುಪ್ಫುಸಕಾರಲು ಹುಳು (ಪ್ಯಾರ ಗೋನಿಮಸ್ ವೆಸ್ಟರ್‍ಮ್ಯಾನಿಯೈ). ಜಪಾನ್, ಚೀನ, ಫಿಲಿಫೀನ್ಸ್, ಭಾರತ, ನ್ಯೂಗಿನಿ, ಆಫ್ರಿಕ, ಪೆರು ಮುಂತಾದೆಡೆಗಳಲ್ಲಿ ಕಾಣಬರುತ್ತದೆ. 4 ಮೆಡಿಟರೇನಿಯನ್ ಪ್ರದೇಶ, ಆಫ್ರಿಕ, ಮಡಗಾಸ್ಕರ್, ಈಜಿಪ್ಟ್, ದಕ್ಷಿಣ ಅಮೇರಿಕ, ವೆಸ್ಟ್ ಇಂಡೀಸ್, ಜಪಾನ್, ಫಿಲಿಪೀನ್ಸ್, ಸೆಲೆಬಸ್ ಮುಂತಾದೆಡೆಗಳಲ್ಲಿ ಕಾಣಬರುವ ರಕ್ತ ಹುಳುಗಳ ಹಲವಾರು ಪ್ರಭೇದಗಳು (ಸ್ಕಿಸ್ಟೊಸೋಮ ಹೀಮಟೋ ಬಿಯಮ್, ಸ್ಕಿಸ್ಟೋಸೋಮ ಮ್ಯಾನ್‍ಸೋನಿಯೈ ಸ್ಕಿಸ್ಟೋಸೋಮ ಜಪಾನಿಕಮ್).

ಸೆಸ್ಟಾಯ್ಡಿಯ: ಇದಕ್ಕೆ ಸೇರಿದ ಹುಳುಗಳೇ ಲಾಡಿಹುಳುಗಳು (ಟೇಪ್‍ವಮ್ರ್ಸ್.) ಇವು ಉದ್ದನೆಯ ಪಟ್ಟೆಯಂಥ ಚಪ್ಪಟೆಹುಳುಗಳು. ಇವುಗಳ ಪ್ರೌಢಜೀವಿಗಳು ಕಶೇರುಕಗಳ ಕರುಳಿನಲ್ಲೂ ಡಿಂಬಗಳು ಬೇರೆ ಬಗೆಯ ಪ್ರಾಣಿಗಳಲ್ಲೂ ಪರಾವಲಂಬಿ ಜೀವನ ನಡೆಸುವುವು.

ಈ ಗುಂಪಿನ ಅತ್ಯಂತ ಮುಖ್ಯ ಉದಾಹರಣೆಯಿಂದ ಹಂದಿಗಳನ್ನೂ ಮನುಷ್ಯರನ್ನೂ ಪೀಡಿಸುವ ಲಾಡಿಹುಳು (ಪಿಗ್‍ಟೇಪ್‍ವರ್ಮ್-ಟೀನಿಯ ಸೋಲಿಯಮ್). ಇದರ ದೇಹ ಬಲು ಉದ್ಧ: ಸಾಮಾನ್ಯವಾಗಿ 2-8ಕಿಮೀ ಉದ್ದವಿರುತ್ತದೆ. ತಲೆ ತುಂಬ ಚಿಕ್ಕಗಾತ್ರದ ಗುಬುಟಿನಂತಿದೆ; ಇದಕ್ಕೆ ಸ್ಕೋಲೆಕ್ಸ್ ಎಂದು ಹೆಸರು. ಇದರ ನಾಲ್ಕು ಪಾಶ್ರ್ವಗಳಲ್ಲಿ ನಾಲ್ಕು ಹೀರುತಟ್ಟೆಗಳಿರುತ್ತವೆ. ತುದಿಯಲ್ಲಿ ಹಲವಾರು ಕೊಕ್ಕೆಗಳ ವಲಯವೂ ಇವೆ. ತುದಿಗೆ ರಾಸ್ಟೆಲಮ್ ಎಂದು ಹೆಸರು. ದೇಹದ ಉಳಿದ ಭಾಗ ಉದ್ದನೆಯ ರಿಬನ್ (ಪಟ್ಟೆ) ರೀತಿಯಲ್ಲಿದ್ದು ಸಡಿಲವಾಗಿ ಜೋಡಣೆಗೊಂಡ ಸಹಸ್ರಾರು ಭಾಗಗಳಿಂದ ರೂಪಿತವಾಗಿದೆ. ಈ ಭಾಗಗಳಿಗೆ ಪ್ರೋಗ್ಲಾಟಿಡುಗಳೆಂದು ಹೆಸರು. ಈ ದೇಹಭಾಗಕ್ಕೂ ತಲೆಗೂ ನಡುವೆ ಚಿಕ್ಕ ಕತ್ತು ಉಂಟು, ವರ್ಧನ ಸಾಮಥ್ರ್ಯವನ್ನು ಪಡೆದಿರುವ ಈ ಕತ್ತು ಅಗಿಂದಾಗ್ಗೆ ವಿಭಜನೆಗೆ ಒಳಗಾಗಿ ಹೆಚ್ಚು ಹೆಚ್ಚು ಪ್ರೋಗ್ಲಾಟಿಡುಗಳನ್ನು ಉತ್ಪಾದಿಸುತ್ತದೆ. ಹೆಚ್ಚಿನ ವಿವರಗಳಿಗೆ (ನೋಡಿ- ಲಾಡಿಹುಳು)

ಪ್ಯಾಟಿಹಲ್ಮಿಂತೀಸ್ ವಿಭಾಗ ತನ್ನ ಹಲವಾರು ಗುಣಲಕ್ಷಣಗಳಲ್ಲಿ ಹಿಂದಿನ ವಿಭಾಗಗಳಾದ ಪೋರಿಫರ್ ಮತ್ತು ಸೀಲೆಂಟೆರೇಟುಗಳಿಂದ ವಿಭಿನ್ನವೆನಿಸಿದೆ. ಇಂಥ ವಿಶಿಷ್ಟ ಗುಣಲಕ್ಷಣಗಳು ಇಂತಿವೆ: 1 ದ್ವಿಪಾಶ್ರ್ವ ಸಮಮಿತಿ, ಮೇಲ್ಕೆಳಮುಖ ಚಪ್ಪಟೆತನ. 2 ನರಮುಡಿಗಳಿಂದ ಕೂಡಿದ ನರಮಂಡಲ. 3 ದೇಹದಲ್ಲಿ ಮೀಸೋಡರ್ಮ್ ಎಂಬ ಮೂರನೆಯ ಪದರ. 4 ಶಾಶ್ವತ ಪ್ರಜನನ ನಾಳಗಳನ್ನು ಸಂಭೋಗ ಅಂಗಗಳನ್ನೂ ಒಳಗೊಂಡಿರುವ ಹಾಗೂ ದೇಹದ ಒಳಗೇ ಇರುವ ಲಿಂಗಾಣುಜನಕ ಗ್ರಂಥಿಗಳು. (ಬಿ.ಆರ್.ಸಿ.ಆರ್; ಕೆ.ಎಸ್.ಕೆ.ಪಿ.)