ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫಲವಂತಿಕೆ (ಜೀವವಿಜ್ಞಾನದಲ್ಲಿ)
ಫಲವಂತಿಕೆ (ಜೀವವಿಜ್ಞಾನದಲ್ಲಿ)
ಸಜೀವ ಸಂತಾನವನ್ನು ಪಡೆಯುವ ಸಾಮಥ್ರ್ಯ (ಫರ್ಟಿಲಿಟಿ). ಇದು ಜೀವಿಗಳ ಲಿಂಗಾಣುಗಳ ಉತ್ಪಾದನಾ ಸಾಮಥ್ರ್ಯ, ಲೈಂಗಿಕ ಸಂಪರ್ಕಸಾಮಥ್ರ್ಯ ಮತ್ತು ಸಂಪರ್ಕಗಳ ಫಲನಸಾಮಥ್ರ್ಯ ಇವನ್ನು ಅವಲಂಬಿಸಿದೆ. ಹೆಂಗಸಿನ ಜೀವಮಾನದಲ್ಲಿ ಸರಾಸರಿ 360 ಅಂಡಾಣುಗಳು (ತಿಂಗಳಿಗೊಂದರಂತೆ 15 ವರ್ಷ ವಯಸ್ಸಿನಿಂದ 45ರ ತನಕ) ಆಕೆಯ ಎರಡು ಅಂಡಾಶಯಗಳಿಂದ ಉತ್ಪನ್ನವಾಗುತ್ತವೆ. ಗಂಡಸಿನ ಜೀವಮಾನದಲ್ಲಿ ಆತನ ಎರಡು ವೃಷಣಗಳಿಂದ ಅಸಂಖ್ಯಾತ ವೀರ್ಯಾಣುಗಳು ಉತ್ಪತ್ತಿಯಾಗುತ್ತವೆ. ಆದರೆ ಈ ಅಂಡಾಣು, ವೀರ್ಯಾಣುಗಳೆಲ್ಲವೂ ಬೆರೆತು ಮಕ್ಕಳಾಗುವುದಿಲ್ಲ. ಏಕೆಂದರೆ ಜೀವಿಗಳ ನಿಜ (ಫಲಯುತ) ಸಂತಾನೋತ್ಪಾದನಾ ಸಾಮಥ್ರ್ಯ ಸಾಧ್ಯ (ಗರಿಷ್ಠ) ಸಂತಾನೋತ್ಪಾದನಾ ಅಥವಾ ಲಿಂಗಾಣೋತ್ಪಾದನಾ ಸಾಮಥ್ರ್ಯಕ್ಕಿಂತ ಕಡಿಮೆ. ಸಸ್ಯಗಳಲ್ಲೂ ಬಹು ಮಟ್ಟಿಗೆ ಪುಷ್ಪ ಪರಾಗಗಳು ಮತ್ತು ಅಂಡಕಗಳು ನಾಶವಾಗಿ ನಿಜವಾದ ಫಲಮಿತಿ ಕಡಿಮೆಯೇ ಇರುತ್ತದೆ. ಹೆಣ್ಣು ಸೊಳ್ಳೆ ಒಂದು ಸಲಕ್ಕೆ 500 ಮೊಟ್ಟೆಗಳನ್ನಿಟ್ಟರೂ ಜಯಪ್ರದವಾಗಿ ಜನಿಸುವ ಮರಿಗಳು ಕಾರಣಾಂತರಗಳಿಂದ ಹೆಚ್ಚು ಕಡಿಮೆ ಈ ಸಂಖ್ಯೆಯ ಹತ್ತನೇ ಒಂದರಷ್ಟಿರಬಹುದು; ಮೀನುಗಳು ಕೋಟಿಗಟ್ಟಲೆ ಮೊಟ್ಟೆಯಿಟ್ಟರೂ 1%ರಷ್ಟು ಮಾತ್ರ ಮರಿಗಳಾಗಿ ದೊಡ್ಡವಾಗಬಹುದು; ಈ ಮರಿಗಳಲ್ಲಿ 0.1% ರಷ್ಟು ಮಾತ್ರ ಶತ್ರು ಇತ್ಯಾದಿಗಳಿಂದ ತಪ್ಪಿಸಿಕೊಂಡು ಬೆಳೆದು ದೊಡ್ಡವಾಗಬಹುದು.
ಜೀವನ ಸೌಕರ್ಯಗಳು ಕಡಿಮೆಯಿದ್ದಷ್ಟೂ ಪ್ರಾಣಿಗಳ ಸಂತಾನೋತ್ಪಾದನಾ ಸಾಮಥ್ರ್ಯ ಹೆಚ್ಚುವಂತೆ ಪ್ರಕೃತಿಯಲ್ಲಿ ವ್ಯವಸ್ಧೆಯಿದೆ. ಸ್ತನಿಗಳಲ್ಲಿ ಮರಿಗಳು ತಾಯಿಯ ಗರ್ಭಕೋಶದ ರಕ್ಷಣೆ ಮತ್ತು ಆಹಾರ ಸೌಲಭ್ಯ ಪಡೆದು ಬೆಳೆದು ಪ್ರಸವದ ಅನಂತರ ಮೊಲೆ ಹಾಲು ಸಿಗುವ ಏರ್ಪಾಡಿರುವುದರಿಂದ ಸ್ತನಿಗಳ ಸಂತಾನೋತ್ಪಾದನಾ ಸಾಮಥ್ರ್ಯ ಕಡಿಮೆ. ಮಾನವನ ಜೀವನ ಸೌಕರ್ಯಗಳು ಅತ್ಯುತ್ತಮವಾಗಿರುವುದರಿಂದ ಆತನ ಸಂತಾನಪ್ರಾಪ್ತಿ ಇತರ ಪ್ರಾಣಿಗಳಿಗೆ ಹೋಲಿಸಿದರೆ ತೀರ ಕಡಿಮೆ. ಹೀಗಿದ್ದರೂ ಆಹಾರೋತ್ಪಾದನೆ ಮತ್ತು ಆರೋಗ್ಯ ಸಂರಕ್ಷಣೆಗಳ ವ್ಯವಸ್ಧೆಯಿಂದ ಸಾವುಗಳು ಕಡಿಮೆಯಾಗಿ ಆಯಸ್ಸು ಹೆಚ್ಚಿ ಪ್ರಕೃತಿಯ ಸಮತೋಲ ಆಯತಪ್ಪಿ ಮಾನವರಾಶಿ ವಿಷಮಸ್ಧಿತಿಯನ್ನು ಮುಟ್ಟಿದೆ.
ಲಿಂಗಾಣೋತ್ಪಾದನಾ ಸಾಮಥ್ರ್ಯ ಹಲವು ಪ್ರಭಾವಗಳಿಗೆ ಪಕ್ಕಾಗುತ್ತದೆ. ಪ್ರಾಣಿಗಳ ಜಾತಿ, ಗಾತ್ರ, ವಂಶ, ಪೌಷ್ಟಿಕಾಹಾರ, ಜೀವಸತ್ವಗಳ ಲಭ್ಯತೆ ಮತ್ತು ಸಂಪರ್ಕ ಶಕ್ತಗಳು ಇಂಥ ಪ್ರಭಾವಗಳಲ್ಲಿ ಮುಖ್ಯ
1 ಸ್ತನಿಗಳಲ್ಲಿ ಮರಿಗಳಿಗೆ ಹೆಚ್ಚು ರಕ್ಷಣೆಯಿರುವುದರಿಂದ ಲಿಂಗಾಣೋತ್ಪಾದನೆ ಕಡಿಮೆ. ಏಕಸಂತಾನ ಪ್ರಸವ ಸಾಮಥ್ರ್ಯವಿರುವ ಹೆಂಗಸು, ಬಾವಲಿ, ಕಪಿ ಇತ್ಯಾದಿಗಳಲ್ಲಿ ಒಂದು ಸಲಕ್ಕೆ ಒಂದೇ (ಅಪರೂಪವಾಗಿ 2-5) ಅಂಡಾಣುವಿನ ಉತ್ಪತ್ತಿಯಾಗುತ್ತದೆ. ಪಕ್ಷಿ ಮತ್ತು ಇತರ ಅಂಡಜಗಳು ಒಂದು ವರ್ಷದಲ್ಲಿ ಹೆಚ್ಚು ಮೊಟ್ಟೆಗಳನ್ನಿಟ್ಟು ಮರಿಮಾಡುತ್ತವೆ. ಆದರೆ ಈ ಮರಿಗಳಲ್ಲಿ ಹಲವು ನಾಶವಾಗಿ ಕೆಲವೇ ದೊಡ್ಡವಾಗುತ್ತವೆ. ಸಂರಕ್ಷಣೆ ಕಡಿಮೆಯಿರುವುದರಿಂದ ಹೆಚ್ಚು ಮರಿಗಳಾಗುವಂತಿರುವುದು ಪ್ರಕೃತಿಯ ಒಂದು ಏರ್ಪಾಡು. ಪ್ರಾಣಿಗಳ ಗಾತ್ರ ಹೆಚ್ಚಿದಷ್ಟೂ ಲಿಂಗಾಣುಗಳ ಉತ್ಪತ್ತಿ ಕಡಿಮೆ ; ಉದಾಹರಣೆಗೆ ಆನೆ, ಕುದುರೆ ಮುಂತಾದ ದೊಡ್ಡಗಾತ್ರದ ಪ್ರಾಣಿಗಳಲ್ಲಿ ಒಂದು ಪ್ರಸವದಲ್ಲಿ ಒಂದೇ ಮರಿ ಹುಟ್ಟುವುದು. ಗಾತ್ರ ಕಡಿಮೆಯಾದಷ್ಟೂ ಉತ್ಪಾದನೆ ಹೆಚ್ಚು. ಉದಾಹರಣೆಗೆ ಇಲಿ, ಮೊಲ ಮುಂತಾದವು. ಇವುಗಳ ಒಂದು ಪ್ರಸವದಲ್ಲಿ 5-6 ಮರಿಗಳು ಹುಟ್ಟುವುವು. ಆದರೆ ಅಪವಾದಗಳು ಇಲ್ಲದಿಲ್ಲ. ಉದಾಹರಣೆಗೆ ಗಾತ್ರ ಹೆಚ್ಚಿದ್ದರೂ ಹಂದಿ ಹೆಚ್ಚುಮರಿಗಳನ್ನೂ ಗಾತ್ರ ಕಡಿಮೆಯಿದ್ದರೂ ಬಾವಲಿ ಒಂದೇ ಮರಿಯನ್ನೂ ಹಾಕುತ್ತವೆ. ಆಹಾರ ಮತ್ತು ವಿಪುಲತೆ ಹೆಚ್ಚಿದಷ್ಟೂ ಮರಿಗಳ ಸಂಖ್ಯೆ ಹೆಚ್ಚು. ಅನ್ನಾಂಗಗಳ ಅಭಾವದಿಂದ ಸಂತಾನಪ್ರಾಪ್ತಿ ಕಡಿಮೆಯಾಗುವುದು. ಸಂಪರ್ಕಶಕ್ತಿ (ಕಾಮುಕತೆ) ಹೆಚ್ಚಿದಷ್ಟೂ ಗರ್ಭಧಾರಣೆಯ ಸಂಭವ ಕಡಿಮೆ.
2 ವಾರ್ಷಿಕ ಸಂತಾನ ಋತುಚಕ್ರಗಳು ಹೆಚ್ಚಿದಷ್ಟೂ ಗರ್ಭಧಾರಣೆಗೆ ಅವಕಾಶ ಹೆಚ್ಚು. ಹಲವು ಕಾಡುಪ್ರಾಣಿಗಳಲ್ಲಿ ವರ್ಷಕ್ಕೆ 1-3 ಚಕ್ರ ಮಾತ್ರ ಇರುವುದರಿಂದ ಗರ್ಭಧಾರಣೆ ಈ ಋತುಗಳಲ್ಲಿ ಮಾತ್ರ ಆಗುವುದು. ಹೆಂಗಸಿನಲ್ಲಿ ವರ್ಷಕ್ಕೆ 12 ಚಕ್ರ ಇರುವುದರಿಂದ ಗರ್ಭಧಾರಣೆ ಋತುಗಳ ಮಿತಿಯಿಲ್ಲದೆ ಆಗಲು ಸಾಧ್ಯ.
3. ಪ್ರಾಣಿಯ ಆಯುಷ್ಯ ಹೆಚ್ಚಿದಷ್ಟೂ ಅದರ ಫಲವಂತಿಕೆ ಅವಧಿ ಹೆಚ್ಚುವುದು; ಉದಾಹರಣೆಗೆ ಹೆಂಗಸು ಸುಮಾರು 30 ವರ್ಷಕಾಲ ಫಲವತ್ತಾಗಿರುತ್ತಾಳೆ. ಮಾನವನಷ್ಟು ದೀರ್ಘಕಾಲ ಬದುಕದಿದ್ದರೂ ಸಾಕುಪ್ರಾಣಿಗಳು ಆಹಾರ ಪುಷ್ಟಿ ಮತ್ತು ಮನೆಗಳ ಆಸರೆಯಿಂದ ಹೆಚ್ಚು ಉತ್ಪನ್ನಶಕ್ತಿಯನ್ನು ಪಡೆದಿರುವುವು.
4. ಮ್ಯೂಲ್ ಮುಂತಾದವುಗಳಲ್ಲಿ ಲಿಂಗಾಣೋತ್ಪಾದನಾ ಶಕ್ತಿಯಿಲ್ಲದಿರುವುದರಿಂದ ಅವು ಬರಡಾಗಿರುತ್ತವೆ. ಗದ್ದಬಾವು ಮುಂತಾದ ರೋಗಗಳು, ಕೆಲವು ವಿಷಪದಾರ್ಥಗಳು, ಎಕ್ಸ್‍ಕಿರಣ ಇತ್ಯಾದಿಗಳಿಂದ ಅಂಡಗಳು ಕ್ಷೀಣಿಸಿ ಮಾನವ ಮತ್ತು ಇತರ ಪ್ರಾಣಿಗಳು ಬರಡಾಗಬಹುದು. ದೇಶಾಂತರ, ಹವೆಯ ಬದಲಾವಣೆ, ಮನೋರೋಗ ಸತಿಪತಿಗಳ ನಡುವೆ ವೈಷಮ್ಯ ಇತ್ಯಾದಿಗಳಿಂದ ಸಂತಾನವೃದ್ಧಿ ಸಾಮಥ್ರ್ಯ ಕುಗ್ಗಬಹುದು.
5 ಅಸ್ವಾಭಾವಿಕ ಸಂಪರ್ಕ ಅಥವಾ ಸಂಭೋಗಾಂಗಗಳ ವಿಕಲತೆಯಿಂದ ಉತ್ಪಾದನಾ ಸಾಮಥ್ರ್ಯ ಕುಗ್ಗುವುದು.
6 ಸಂಪರ್ಕ ಸರಿಯಿದ್ದರೂ ಸ್ತ್ರೀ ಮತ್ತು ಪುರುಷ ಲಿಂಗಾಣುಗಳ ವಿಕಲತೆ ಅಥವಾ ಪರಸ್ಪರ ಲೀನವಾಗುವ ಸಾಮಥ್ರ್ಯವಿಲ್ಲದಿರುವುದರಿಂದ ಸಂತಾನೋತ್ಪತ್ತಿ ಕಡಿಮೆಯಾಗುವುದು. ಗಂಡು ಮತ್ತು ಹೆಣ್ಣುಗಳ ದೇಹಗುಣಗಳಲ್ಲಿ ಹೊಂದಾಣಿಕೆ ಇಲ್ಲದಿರುವುದರಿಂದಲೂ ಸಂತಾನಫಲ ಕಡಿಮೆಯಾಗುವುದುಂಟು. ಸಾಮಾಜಿಕ ಮತ್ತು ವಿದ್ಯಾಮಟ್ಟಗಳು ಹೆಚ್ಚಿದಷ್ಟೂ ಮಾನವನಲ್ಲಿ ಉತ್ಪಾದನಾ ಸಾಮಥ್ರ್ಯ ತಿಳಿದ ತರ್ಕಗಳಿಗೆ ಒಳಪಡದೆ ಕುಗ್ಗುವುದು.
7 ಗರ್ಭಾವಸ್ಥೆಯಲ್ಲಿರಬಹುದಾದ ಕುಂದುಗಳಿಂದ ಭ್ರೂಣಮೃತ್ಯುವಿನ ಸಂಭವವಿದೆ. ಬಹುಸಂತಾನ ಗರ್ಭದಲ್ಲಿ ಹೆಚ್ಚು ಪಿಂಡಗಳ ಪೋಷಣೆ ಸಮರ್ಪಕವಾಗಿಲ್ಲದೆ ಗರ್ಭನಾಶವಾಗಬಹುದು. ಪಾರಂಪರ್ಯ ರೋಗಗಳು ವಂಶದಲ್ಲಿದ್ದರೂ ಗರ್ಭಪಾತಕ್ಕೆ ಹೆಚ್ಚು ಅವಕಾಶವಿದೆ. ಇದರಲ್ಲಿ ಸಾಮಾನ್ಯವಾಗಿ ಹೆಣ್ಣು ಸಂತಾನಕ್ಕಿಂತ ಗಂಡು ಸಂತಾನದ ನಾಶ ಹೆಚ್ಚು.
8 ಪ್ರಸವಾನಂತರದ ಮೃತ್ಯು ಗಂಡುಸಂತಾನವನ್ನು ಹೆಚ್ಚು ಕಾಡುತ್ತದೆ. 10-15 ವರ್ಷ ವಯಸ್ಸಿನಲ್ಲಿ ಋತುಸಂಬಂಧ ದೌರ್ಬಲ್ಯದಿಂದ ಹೆಚ್ಚು ಹೆಣ್ಣು ಮಕ್ಕಳು ಸಾಯುತ್ತಾರೆ. ಈ ಅಪಮೃತ್ಯುಗಳಿಂದ ಸಂತಾನ ಸಾಮಥ್ರ್ಯ ಕುಗ್ಗುತ್ತದೆ.
(ಎಂ.ಡಿ.) (ಪರಿಷ್ಕರಣೆ : ನಾ. ಸೋಮೆಶ್ವರ)