ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫಾಕ್ಲೆಂಡ್ ದ್ವೀಪಗಳು

ವಿಕಿಸೋರ್ಸ್ದಿಂದ

ಫಾಕ್‍ಲೆಂಡ್ ದ್ವೀಪಗಳು - ದಕ್ಷಿಣ ಅಮೆರಿಕದ ಮಚೆಲನ್ ಜಲಸಂಧಿಗೆ ಸುಮಾರು 480 ಕಿಮೀ, ದೂರದಲ್ಲಿ, ಹಾರ್ನ್, ಭೂಶಿರಕ್ಕೆ ಸುಮಾರು 768 ಕಿಮೀ, ಈಶಾನ್ಯದಲ್ಲಿ, ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿರುವ ಬ್ರಿಟಿಷ್ ವಸಾಹತು ದ್ವೀಪಗಳು. ಈ ದ್ವೀಪಸ್ತೋಮದಲ್ಲಿಯ ಪ್ರಧಾನ ದ್ವೀಪಗಳು 2; ಉಳಿದ 200 ದ್ವೀಪಗಳು ಸಣ್ಣವು. ಪ್ರಧಾನ ದ್ವೀಪಗಳು ಅಂಕುಡೊಂಕಾಗಿವೆ. ಅವುಗಳ ಮಧ್ಯೆ ಫಾಕ್‍ಲೆಂಡ್ ಸೌಂಡ್ ಎಂಬ ಕಡಲ್ಗಾಲುವೆಯಿದೆ ಪ್ರಧಾನ ದ್ವೀಪಗಳಲ್ಲಿ ಅನೇಕ ಕೊಲ್ಲಿಗಳೂ ಖಾರಿಗಳೂ ಇವೆ. ಇವುಗಳ ಒಟ್ಟು ವಿಸ್ತೀರ್ಣ ಸುಮಾರು 12, 173 ಚ. ಕಿಮೀ. ಪೂರ್ವ ಫಾಕ್‍ಲೆಂಡ್ ದ್ವೀಪ 6,760 ಚ. ಕಿಮೀ. ಮತ್ತು ಪಶ್ಚಿಮ ಫಾಕ್‍ಲೆಂಡ್ ದ್ವೀಪ 5,413 ಚ. ಕಿಮೀ. ವಿಸ್ತಾರವಾಗಿದೆ. ಜನಸಂಖ್ಯೆ 1,903 (1976), ಮುಖ್ಯಪಟ್ಟಣ ಸ್ಟಾನ್ಸಿ (1,090).

ದ್ವೀಪಗಳದು ಸಮಶೀತೋಷ್ಣವಾಯುಗುಣ. ಪಶ್ಚಿಮದಿಂದ ಬೀಸುವ ಬಲವಾದ ಮಾರುತದಿಂದ ಇದು ಪ್ರಭಾವಿತವಾಗಿದೆ. ಸರಾಸರಿ ವಾರ್ಷಿಕ ಉಷ್ಣತೆ 60 ಅ . ವರ್ಷವಿಡೀ ಸಮನಾಗಿ ಮಳೆಯ ಹಂಚಿಕೆಯಾಗಿದೆ. ಸರಾಸರಿಯಲ್ಲಿ ದಿನಕ್ಕೆ ನಾಲ್ಕು ಗಂಟಿ ಬಿಸಿಲು ಇರುತ್ತದೆ.

ಕುರುಚಲು ಗಿಡಗಳೂ ಹುಲ್ಲೂ ಹೆಚ್ಚಾಗಿವೆ. ಅಲ್ಲಲ್ಲಿ ನೆಲ ಬರಡು, ಇಲ್ಲಿ ಕಾಡುಗಳಿಲ್ಲ. ನರಿ ತೋಳ ಮೊದಲಾದವು ಸ್ವಾಭಾವಿಕ ಪ್ರಾಣಿಗಳು. 60 ಬಗೆಯ ಪಕ್ಷಿಗಳಿವೆ. ಕಡಲ ತೀರದಲ್ಲಿ ಪೆಂಗ್ವಿನ್, ಡೇಗೆ, ಸೀಲ್ ಇವೆ. ತುಪ್ಪುಳು ಸೀಲ್ ಅಪರೂಪ.

ಇಲ್ಲಿರುವ ಜನ ಕ್ರೈಸ್ತರು. ಮುಖ್ಯವಾಗಿ ಪ್ರಾಟೆಸ್ಟಂಟ್ ಮತ್ತು ರೋಮನ್ ಕ್ಯಾತೊಲಿಕ್ ಪಂಗಡದವರು ಇವರ ಭಾಷೆ ಇಂಗ್ಲಿಷ್, ಕುರಿ ಸಾಕುವುದು ಪ್ರಧಾನ ಕಸಬು, ದ್ವೀಪಗಳ ಆದಾಯ ಮುಖ್ಯವಾಗಿ ಉಣ್ಣೆಯ ನಿರ್ಯಾತದಿಂದ, ದ್ವೀಪಗಳ ಸುತ್ತ ತೈಲ ಸಿಕ್ಕುವ ಸಾಧ್ಯತೆಯಿದೆ. ಮತ್ಸ್ಯ ಸಂಪತ್ತು ಅಧಿಕವಾಗಿದೆ.

ಇತಿಹಾಸ ಮತ್ತು ಆಡಳಿತ: ಫಾಕ್‍ಲೆಂಡ್ ದ್ವೀಪಗಳನ್ನೂ 1592ರಲ್ಲಿ ಇಂಗ್ಲಿಷ್ ನಾವಿಕ ಜಾನ್ ಡೇವಿಸ್ ಕಂಡ, ಅನಂತರ ಸುಮಾರು 2 ಶತಮಾನಗಳವರೆಗೆ ಇಲ್ಲಿ ಜನ ನೆಲಸಲಿಲ್ಲ. 1764ರಲ್ಲಿ ಫ್ರೆಂಚರು ಸ್ವಲ್ಪ ಕಾಲ ತಂಗಿದ್ದರು. ತರುವಾಯ ಇಂಗ್ಲಿಷರು ನೆಲೆಸಿದರು. 1770ರಲ್ಲಿ ಅವರನ್ನು ಸ್ಪೇನಿನವರು ಅಲ್ಲಿಂದ ಓಡಿಸಿದರು. ಅರ್ಜೆಂಟೀನ ಈ ದ್ವೀಪಗಳ ಮೇಲೆ ಹಕ್ಕು ಸಾಧಿಸಿದರೂ ಬ್ರಿಟಿಷರು 1883ರಲ್ಲಿ ಇವನ್ನು ಆಕ್ರಮಿಸಿಕೊಂಡರು. ಈಗಲೂ ಆರ್ಜೆಂಟೀನ ಇವುಗಳ ಮೇಲೆ ತನ್ನ ಹಕ್ಕನ್ನು ಸ್ಥಾಪಿಸಲು ಯತ್ನಿಸುತ್ತದೆ.

ದ್ವೀಪಗಳ ಪ್ರಧಾನ ಆಡಳಿತಧಿಕಾರಿ ಗವರ್ನರ್. ಅವನು ಬ್ರಿಟಿಷ್ ರಾಣಿಯ ಪ್ರತಿನಿಧಿ. ಆಡಳಿತದಲ್ಲಿ ಅವನ ನೆರವಿಗೆ ಒಂದು ಆಡಳಿತ ಮಂಡಳಿ ಇರುತ್ತದೆ. ವಿಧಾನ ಪರಿಷತ್ತಿನ 11 ಜನ ಸದಸ್ಯರಿರುತ್ತಾರೆ. ಅವರ ಪೈಕಿ ನಾಲ್ವರು ಚುನಾಯಿತರು.

ಫಾಕ್‍ಲೆಂಡ್ ದ್ವೀಪ ಪ್ರದೇಶ ಮತ್ತು ಅದರ ಅಧೀನ ದ್ವೀಪಗಳ ನ್ಯಾಯಾಡಳಿತಕ್ಕೆ ಒಂದು ಸರ್ವೋನ್ನತ ನ್ಯಾಯಾಲಯ ಒಂದು ದಂಡಾಧೀಶರ ನ್ಯಾಯಾಲಯ ಹಾಗೂ ಒಂದು ಕ್ಷಿಪ್ರ ವಿಚಾರಣಾಧಿಕಾರದ ನ್ಯಾಯಾಲಯದ ಇವೆ. ಫಾಕ್‍ಲೆಂಡ್ ದ್ವೀಪಗಳಿಗೆ ಸಂಬಂಧಿಸಿದಂತೆ ಇಂಗ್ಲೆಂಡಿನಲ್ಲಿ ಒಂದು ಮೇಲ್ಮನೆಯ ನ್ಯಾಯಾಲಯ ಸ್ಥಾಪಿತವಾಗಿದೆ.

ಫಾಕ್‍ಲೆಂಡ್ ದ್ವೀಪಗಳಲ್ಲಿ ಶಿಕ್ಷಣ ಕಡ್ಡಾಯ ಮತ್ತು ಉಚಿತ. ಸ್ಟಾನ್ನಿ ನಗರದಲ್ಲಿ 2 ಸರ್ಕಾರಿ ಶಾಲೆಗಳಿವೆ. ಸ್ಥಳದಿಂದ ಸ್ಥಳಕ್ಕೆ ಸಂಚರಿಸಿ ಬೋಧಿಸುವ ಶಿಕ್ಷಕರನ್ನು ಸರ್ಕಾರ ನೇಮಿಸಿದೆ. ಪೂರ್ವ ಫಾಕ್‍ಲೆಂಡ್ ದ್ವೀಪದ ಡಾರ್ವಿನ್‍ನಲ್ಲಿ ವಸತಿ ಶಾಲೆ ಇದೆ.

ಅರ್ಜೆಂಟೀನ ರಾಜ್ಯದ ವಿಮಾನಗಳು ಈ ದ್ವೀಪಗಳಿಗೆ ವಾರಕ್ಕೊಂದು ಸಲ ಬರುತ್ತವೆ; ದಕ್ಷಿಣ ಆರ್ಜೆಂಟೀನದ ಕಾಮಡೋರೋ ರೀವಡಾವಿಯದಿಂದ ಸ್ಟಾನ್ಲಿ ನಗರದವರೆಗೆ ಸಂಚರಿಸುತ್ತವೆ. ಫಾಕ್‍ಲೆಂಡ್ ದ್ವೀಪವಾಸಿಗಳ ಅಂಚೆ, ಸರಕು ಸಾರಿಗೆ ಹಾಗೂ ಪ್ರಯಾಣಕ್ಕಾಗಿ ಒಂದು ಹಡಗು ವರ್ಷಕ್ಕೆ 4 ಬಾರಿ ಬಂದು ಹೋಗುತ್ತದೆ. 1977ರಲ್ಲಿ ಬ್ರಿಟಷ್ ಸರ್ಕಾರ ಇಲ್ಲಿ ವಿಮಾನ ನಿಲ್ದಾಣವನ್ನು ಸ್ಥಾಪಿಸಿತು.

ಕಾಡುಪ್ರಾಣಿಗಳು ಹಾಗೂ ಟ್ರೌಟ್ ಮೀನು ಹಿಡಿಯುವಿಕೆ ಇವು ಪ್ರವಾಸಿಗಳಿಗೆ ಇಲ್ಲಿಯ ಪ್ರಧಾನ ಆಷರ್ಕಣೆಗಳು. 1976ರಲ್ಲಿ ಇಲ್ಲಿಗೆ 117 ಪ್ರವಾಸಿಗಳು ವಿಮಾನಗಳಲ್ಲೂ 1,370 ಮಂದಿ ಹಡಗುಗಳಲ್ಲೂ ಬಂದಿದ್ದರು. (ವಿ.ಜಿ.ಕೆ.)