ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫಿಷರ್, ಎರ್ನ್ಸ್ಟ್
ಫಿಷರ್, ಎರ್ನ್‍ಸ್ಟ್
1918. ಜರ್ಮನ್ ರಸಾಯನವಿಜ್ಞಾನಿ. ಜನನ 10-11-1918. ಮ್ಯೂನಿಕ್. ವಿದ್ಯಾಭ್ಯಾಸವೂ ಅಲ್ಲೇ. ಪ್ರಾಕೃತಿಕ ವಿಜ್ಞಾನಗಳಲ್ಲಿ (ನ್ಯಾಚುರಲ್ ಸೈನ್ಸಸ್) ಮತ್ತು ರಸಾಯನವಿಜ್ಞಾನದಲ್ಲಿ ಶಿಕ್ಷ್ಞಣವಾಯಿತು. ಆದರೆ ಆಗ ಸನ್ನಿಹಿತವಾದ ಎಡನೆಯ ಮಹಾಯುದ್ಧದಲ್ಲಿ ಪಾಲ್ಗೊಂಡು ಸೆರೆಮನೆ ಸೇರಬೇಕಾಗಿ ಬಂದದ್ದರಿಂದ ವಿದ್ಯಾಭ್ಯಾಸ ನಿರಂತರವಾಗಿ ಸಾಗಲಿಲ್ಲ. ಇದರಿಂದ ಧೃತಿಗೆಡದೆ ಫಿಷರ್ ಸಂಶೋಧನೆಗಳನ್ನು ಮುಂದುವರಿಸಿ 1952ರಲ್ಲಿ ಮ್ಯೂನಿಕ್ ತಾಂತ್ರಿಕ ವಿಶ್ವ ವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಎರಡು ವರ್ಷಗಳ ತರುವಾಯ ಅದೇ ವಿಶ್ವ ವಿದ್ಯಾಲಯದಲ್ಲಿ ಉಪಪ್ರಾಧ್ಯಾಪಕರಾಗಿ ನೇಮಕ ಗೊಂಡರು. 1957ರಲ್ಲಿ ಪ್ರಾಧ್ಯಾಪಕ ಆಗಿಯೂ 1959ರಲ್ಲಿ ರಸಾಯನವಿಜ್ಞಾನ ವಿಭಾಗದ ನಿರ್ದೇಶಕ ಆಗಿಯೂ ಬಡ್ತಿ ಪಡೆದರು. ಇದೇ ಅವಧಿಯಲ್ಲಿ ಗಟಿಂಗೆನ್ನಿನ ವಿಜ್ಞಾನ ಅಕ್ಯಾಡೆಮಿ ರಸಾಯನವಿಜ್ಞಾನ ಪಾರಿತೋಷಿಕವನ್ನೂ ಜರ್ಮನ್ ರಸಾಯನವಿಜ್ಞಾನಿಗಳ ಸೊಸೈಟಿ ಆಲ್‍ಫ್ರೆಡ್ ಸ್ಟೋಕ್ ಸ್ಮಾರಕ ಬಹುಮಾನವನ್ನೂ ನೀಡಿ ಗೌರವಿಸಿದುವು. ಕ್ರೋಮಿಯಮ್ ಮತ್ತು ಬೆನ್ಸಾಲ್‍ಗಳ ಸಂಯೋಗದಿಂದ ಡೈಬೆನ್ಸೀನ್ ಕ್ರೋಮಿಯಮ್ ಎಂಬ ಸ್ಯಾಂಡ್‍ವಿಚ್ ಸಂಯುಕ್ತವನ್ನು ರೂಪಿಸಿ ಫಿಷರ್ ಖ್ಯಾತನಾಮರಾಗಿದ್ದಾರೆ.
ಸಂಕ್ರಮಣ ಧಾತುಗಳನ್ನು ಒಳಗೊಂಡಿರುವ ಆಗ್ರ್ಯಾನಿಕ್ ಸಂಯುಕ್ತಗಳನ್ನು ಕುರಿತ ಪ್ರಮುಖ ಸಂಶೋಧನೆಗಳಿಗಾಗಿ ಫಿಷರ್ 1973ರ ರಸಾಯನವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕ (ವಿಲ್ಕಿನ್‍ಸನ್ ಜೊತೆ) ಪಡೆದರು. ಫಿಷರ್-ವಿಲ್ಕಿನ್‍ಸನ್ ಶೋಧನೆಯನ್ನು ಕಳೆದ ಎರಡು ದಶಕಗಳಲ್ಲಿ ಸಂಕ್ರಮಣ ಧಾತುಗಳ ರಸಾಯನ ವಿಜ್ಞಾನದಲ್ಲಿ ನಡೆದ ಒಂದು ಕಾಂ್ರತಿ ಎಂದು ವರ್ಣಿಸಲಾಗಿದೆ.
ಪ್ರಸಿದ್ಧ ಫ್ರೆಂಚ್ ರಸಾಯನವಿಜ್ಞಾನಿ ಹಾಗೂ 1912ರ ನೊಬೆಲ್ ಪ್ರಶಸ್ತಿ ವಿಜೇತ ವಿಕ್ಟರ್ ಗ್ರಿನ್‍ಯಾರ್ಡ್‍ರವರು ಮ್ಯಾಗ್ನೀಸಿಯಮ್ ಸಹಿತವಾದ ಆಗ್ರ್ಯಾನಿಕ್ ಸಂಯುಕ್ತಗಳನ್ನು ತಯಾರಿಸಿದ್ದರಷ್ಟೆ. ಅವರ ಕ್ರಮವನ್ನೇ ಅನುಸರಿಸಿ 1951ರಲ್ಲಿ ಟಿ.ಜೆ.ಕೀಲಿ ಮತ್ತು ಪಿ.ಎಲ್.ಪಾಸನ್ ಎಂಬಿಬ್ಬರು ತಲಾ ಐದು ಕಾರ್ಬನ್ ಪರಮಾಣುಗಳುಳ್ಳ ಎರಡು ಚಕ್ರೀಯ ಸಂಯುಕ್ತಗಳನ್ನು ಒಂದಕ್ಕೊಂದು ಕೂಡಿಸಿ ಫುಲ್‍ವ್ಯಾಲೀನ್ ಎಂಬ ಪದಾರ್ಥ ಸೃಷ್ಟಿಸಲು ಹವಣಿಸಿದರು. ಅದಕ್ಕಾಗಿ ಒಂದು ಮ್ಯಾಗ್ನೀಸಿಯಮ್ ಪರಮಾಣುವಿಗೆ ಒಂದು ಹ್ಯಾಲೊಜನ್ ಪರಮಾಣು (x ಎನ್ನೋಣ) ಮತ್ತು ಒಂದು ಪಂಚಕಾರ್ಬನ್ ಚಕ್ರೀಯ ಅಣುವನ್ನು (R ಆಗಿರಲಿ) ಲಗತ್ತಿಸಿದಾಗ R-Mg-X ಎಂಬ ಗ್ರಿನ್‍ಯಾರ್ಡ್ ಸಂಯುಕ್ತ ಮೈದಳೆಯಿತು. ಇದು ಫೆರಿಕ್ ಕ್ಲೋರೈಡ್ ದ್ರಾವಣದೊಡನೆ ವರ್ತಿಸುವಂತೆ ಮಾಡಲಾಯಿತು. ಆಗ ಬಂದ ಉತ್ಪನ್ನದ ಒಂದು ಅಣುವಿನಲ್ಲಿ ಎರಡು ಪಂಚಕಾರ್ಬನ್ ಉಂಗುರಗಳ ನಡುವೆ ಕಬ್ಬಿಣದ ಒಂದು ಪರಮಾಣು ಸ್ಯಾಂಡ್‍ವಿಚ್ ಆಗಿರುವುದು ಕಂಡುಬಂದಿತು. ಆದ್ದರಿಂದ ಕಬ್ಬಿಣದ ಪರಮಾಣು ಎರಡು ಉಗುರಗಳ ನಡುವೆ ಸೇತುಸಂಬಂಧ ಕಲ್ಪಿಸಿದೆ. ಅದು ಉಂಗುರಗಳಿಗೆ ಏಕಬಂಧಗಳಿಂದ ಕೂಡಿಸಲ್ಪಟಿದೆ. ಫಲಿತ ಅಣುವಿನ ಸರಳ ಸೂತ್ರ (ಎಂಪಿರಿಕಲ್ ಫಾಮ್ರ್ಯುಲ) C5H5FeC5H5 ಆಗಿರಬೇಕೆಂದು ಅವರು ತೀರ್ಮಾನಿಸಿದರು. ತಾತ್ತ್ವಿಕವಾಗಿ ಇಂಥ ಸ್ಯಾಂಡ್‍ವಿಚ್ ಸಂಯುಕ್ತ ಅಸ್ಥಿರವಾಗಿರಬೇಕು. ಆದರೆ ಅದು ಸ್ಥಿರವಾಗಿತ್ತು. ಹೀಗೆಂದು 'ನೇಚರ್ ನಿಯತಕಾಲಿಕದಲ್ಲಿ ವರದಿಯಾಗಿತ್ತು.
ಇದು ಫಿಷರ್ ಮತ್ತು ವಿಲ್ಕಿನ್‍ಸನ್ ಇವರ ಕಣ್ಣಿಗೆ ಬಿತ್ತು. ಇಂಥ ಸಂಯುಕ್ತ ಸ್ಥಿರವಾಗಿರಬೇಕಾದರೆ ಇದರ ಅಣುವಿನಲ್ಲಿ ಕಾರ್ಬನ್-ಕಬ್ಬಿಣ-ಕಾರ್ಬನ್ ಮಾದರಿಯ ಸರಳ ಬಂಧವಿರಲು ಸಾಧ್ಯವಿಲ್ಲ. ಕಬ್ಬಿಣದ ಪರಮಾಣು ಇತರ ಹತ್ತು ಕಾರ್ಬನ್ ಪರಮಾಣುಗಳಿಗೆ ಅಸಾಧಾರಣ ರೀತಿಯಲ್ಲಿ ಸಮವಾಗಿ ಬಂಧಿತವಾಗಿರಬೇಕಂದು ಇವರು ತರ್ಕಿಸಿದರು. ಇದನ್ನು ಫೆರೊಸೀನ್ ಎಂದು ಹೆಸರಿಸಲಾಯಿತು. ಎಕ್ಸ್‍ಕಿರಣ ವಿವರ್ತನ ಪರೀಕ್ಷೆ ಮತ್ತು ಅತಿರಕ್ತ (ಇನ್‍ಫ್ರಾರೆಡ್) ರೋಹಿತ ದರ್ಶನದಿಂದ ಈ ಊಹೆ ಸರಿಯೆಂದು ಗೊತ್ತಾಯಿತು. ಕಬ್ಬಿಣವಲ್ಲದೆ ನಿಕ್ಕಲ್, ಕೋಬಾಲ್ಟ್ ಮೊದಲಾದ ಸಂಕ್ರಮಣ ಧಾತುಗಳನ್ನು ಒಳಗೊಂಡ ಆಗ್ರ್ಯಾನಿಕ್ ಸಂಯುಕ್ತಗಳ ಸಂಶ್ಲೇಷಣೆಗೆ ಫಿಷರ್ ಅವರ ಪ್ರಯೋಗಗಳು ಪ್ರೇರಕವಾದುವು. ಪರಿಣಾಮವಾಗಿ ಆಗ್ರ್ಯಾನಿಕ್ ಲೋಹ ಸಂಯುಕ್ತಗಳ ಕ್ಷೇತ್ರ ವಿಸ್ತøತವಾಯಿತು.
ಪಾಲಿಮರುಗಳ ರೂಪಣೆ ಮತ್ತು ಔಷಧಗಳ ಸಂಶ್ಲೇಷಣೆಯಲ್ಲಿ ಇಂಥ ಸಂಯುಕ್ತಗಳು ಪರಿಣಾಮಕಾರಿ ಕ್ರಿಯಾವರ್ಧಕಗಳು ಎನಿಸಿಕೊಂಡಿವೆ. ಮೋಟರ್ ಕಾರಿನ ಎಂಜಿನ್ನಿನಲ್ಲಿ ಪೆಟ್ರೋಲ್ ಸರಾಗವಾಗಿ ಉರಿದು ಕಾರ್ಯನಿರ್ವಹಿಸುವಂತೆ ಮಾಡಲು ಪೆಟ್ರೋಲಿಗೆ ಟೆಟ್ರ ಈಥೈಲ್‍ಲೆಡ್ ಎಂಬ ಆಗ್ರ್ಯಾನಿಕ್ ಸೀಸ ಪದಾರ್ಥವನ್ನು ಸೇರಿಸುವುದು ವಾಡಿಕೆ. ಆಗ ವಾಹನ ವಿಸರ್ಜಿಸುವ ಹೊಗೆಯಲ್ಲಿ ವಿಷಪೂರಿತವಾದ ಸೀಸದ ಸಂಯುಕ್ತಗಳಿರುವುವು. ಇದರಿಂದ ನಗರಗಳ ವಾತಾವರಣ ಕಲುಷಿತವಾಗುವುದು ಅನಿವಾರ್ಯ. ಅದೇ ಮೇಲೆ ಹೇಳಿದಂಥ ಸಂಕ್ರಮಣ ಧಾತುಯುಕ್ತ ಆಗ್ರ್ಯಾನಿಕ್ ಸಂಯುಕ್ತಗಳನ್ನು ಪೆಟ್ರೋಲಿಗೆ ಬೆರೆಸಿ ದಹಿಸಿದರೆ ವಿಸರ್ಜಿತ ಹೊಗೆಯಲ್ಲಿ ವಿಷಾನಿಲಗಳ ಪ್ರಮಾಣ ಅತ್ಯಲ್ಪವಾಗಿರುವುದೆಂದು ಕಂಡುಬಂದಿದೆ. ಇದರಿಂದ ಪರಿಸರಮಾಲಿನ್ಯ ಕಡಿಮೆ. (ಎಚ್.ಜಿ.ಎಸ್.)